Search This Blog

Saturday 30 June 2018

ಚಾರ್ವಾಕ - ಚಾರು ವಾಕ್ -ಮಾತೇ ಬಂಡವಾಳ


ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಕಥೆ ಬರುತ್ತದೆ. ಹಿಂದೆ ಕೃತಯುಗದಲ್ಲಿ ಚಾರ್ವಾಕನೆಂಬ ಹೆಸರಿನ ರಾಕ್ಷಸನು ಬದರಿಕಾಶ್ರಮದಲ್ಲಿ ಅನೇಕ ವರ್ಷಗಳ ಕಾಲ ತಪಸ್ಸುಮಾಡುತ್ತಿದ್ದನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ವರವನ್ನು ಕೇಳಿಕೊಳ್ಳುವಂತೆ ಹೇಳಿದನು. ಆ ಸಮಯದಲ್ಲಿ ಚಾರ್ವಾಕನು ಪ್ರಪಂಚದಲ್ಲಿರುವ ಯಾವ ಪ್ರಾಣಿಗಳಿಂದಲೂ ತನಗೆ ಭಯವುಂಟಾಗದಂತೆ ವರವನ್ನು ದಯಪಾಲಿಸಬೇಕೆಂದು ಬ್ರಹ್ಮನನ್ನು ಕೇಳಿಕೊಂಡನು. ಬ್ರಹ್ಮನು
ದ್ವಿಜಾವಮಾನಾದನ್ಯತ್ರ ಪ್ರಾದಾದ್ವರಮನುತ್ತಮಮ್ | ಅಭಯಂ ಸರ್ವಭೂತೇಭ್ಯೋ ದದೌ ತಸ್ಮೈ ಜಗತ್ಪತಿಃ || ಒಂದು ನಿಬಂದನೆಯನ್ನು ಹಾಕಿದನು. ಚಾರ್ವಾಕನಿಗೆ ಎಲ್ಲ ಪ್ರಾಣಿಗಳಿಂದಲೂ ಸಾವು ಬಾರದಂತೆ ಅಭಯವನ್ನು ನೀಡಿದನು. ಆದರೆ–‘ಬ್ರಾಹ್ಮಣರಿಗೇನಾದರೂ ಅವಮಾನ ವಾಗುವಂತೆ ವರ್ತಿಸಿದರೆ ಮಾತ್ರ ಚಾರ್ವಾಕನಿಗೆ ಪ್ರಾಣಭಯವಿದೆ.ಈ ಒಂದು ನಿಬಂಧನೆಯೊಡನೆ ಬ್ರಹ್ಮನು ವರವನ್ನು ಕೊಟ್ಟನು. ಅಂತಹ ವರವನ್ನು ಪಡೆದುಕೊಂಡನಂತರ ಪಾಪಿಷ್ಠನಾದ, ಪರಾಕ್ರಮಿಯಾದ, ಮಹಾಬಲಿಷ್ಠನಾದ ಚಾರ್ವಾಕನು ದೇವತೆಗಳಿಗೂ ತೊಂದರೆ ಕೊಡಲು ಆರಂಭಿಸಿದ. ಆ ರಾಕ್ಷಸನ ಬಲದಿಂದ ತಿರಸ್ಕೃತರಾದ ದೇವತೆಗಳು ಬ್ರಹ್ಮನ ಬಳಿಗೆ ಹೋಗಿ ರಾಕ್ಷಸನ ಸಂಹಾರ ಹೇಗೆಂದು ಕೇಳಿದರು. ಬ್ರಹ್ಮನು ಆಗ ಚಾರ್ವಾಕನ ವಧೆಯು ಯಾವ ರೀತಿಯಲ್ಲಾಗ ಬೇಕೆಂಬುದನ್ನು ನಾನಾಗಲೇ ನಿಶ್ಚಯಿಸಿದ್ದೇನೆ. ಬಹಳ ಬೇಗ ಅವನಿಗೆ ಮೃತ್ಯುವು ಸನ್ನಿಹಿತವಾಗುವುದು. ಮನುಷ್ಯರಲ್ಲಿ ದುರ್ಯೋಧನನೆಂಬ ರಾಜನಿದ್ದಾನೆ. ಆ ದುರ್ಯೋಧನರಾಜನಿಗೆ ಚಾರ್ವಾಕನು ಮಿತ್ರನಾಗುವನು. ದುರ್ಯೋಧನನ ಸ್ನೇಹದಿಂದ ಪರವಶನಾದ ಚಾರ್ವಾಕನು ಬ್ರಾಹ್ಮಣರನ್ನು ಅಪಮಾನಗೊಳಿಸುವನು. ಅವನ ವ್ಯತಿರಿಕ್ತವಾದ ಆಚರಣೆಯಿಂದ ಅವಮಾನಹೊಂದುವ ಬ್ರಾಹ್ಮಣರು ಕೋಪಗೊಂಡು "ಹುಂ"ಕಾರದಿಂದಲೇ ಅವನನ್ನು ಸುಟ್ಟುಬಿಡುವರು. ಹೀಗೆ ಅವನು ವಿನಾಶಹೊಂದುವನು.
ಇದೇ ಕಥೆ ಮುಂದಕ್ಕೆ ನೋಡೋಣ, ಮಹಾಭಾರತ ಯುದ್ಧ ಮುಗಿದ ನಂತರ ಹಸ್ತಿನಾವತಿಯ ನಾಗರಿಕರೆಲ್ಲರೂ ರಾಜಭವನದ ಮಹಾದ್ವಾರದಲ್ಲಿ ಯುಧಿಷ್ಠಿರನನ್ನು ಮಂಗಳದ್ರವ್ಯ ಗಳಿಂದ ಸ್ವಾಗತಿಸಿ ಯಥೋಚಿತವಾಗಿ ಸತ್ಕರಿಸುತ್ತಾರೆ. ನಂತರ ಬ್ರಾಹ್ಮಣರು ಮಾಡಿದ ಆಶೀರ್ವಾದಗಳನ್ನು ಯುಧಿಷ್ಠಿರನು ತಲೆಬಾಗಿ ಪ್ರತಿಗ್ರಹಿಸಿದನು. ಮಂಗಲದ್ರವ್ಯಗಳನ್ನು ಹಿಡಿದು ನಿಂತಿದ್ದ ಅನೇಕಬ್ರಾಹ್ಮಣರನ್ನು ಸಂದರ್ಶಿಸಿದನು. ಆಶೀರ್ವಾದಮಾಡುವ ಇಚ್ಛೆಯಿಂದ ಅಲ್ಲಿಗೆ ಆಗಮಿಸಿದ್ದರು. ಗುರುಗಳಾದ ಧೌಮ್ಯರನ್ನೂ ಮತ್ತು ದೊಡ್ಡಪ್ಪನಾದ ಧೃತರಾಷ್ಟ್ರನನ್ನೂ ಮುಂದೆ ಮಾಡಿಕೊಂಡು ಆಶೀರ್ವಾದಮಾಡಲು ಆಗಮಿಸಿದ್ದ ಎಲ್ಲ ಬ್ರಾಹ್ಮಣರನ್ನೂ ವಿಧಿವತ್ತಾಗಿ ಸತ್ಕರಿಸಿದನು. ಸ್ವಸ್ತಿವಾಚನಮಾಡಿದನಂತರ ಬ್ರಾಹ್ಮಣರೆಲ್ಲರೂ ನಿಃಶಬ್ದವಾಗಿದ್ದಾಗ, ಬ್ರಾಹ್ಮಣವೇಷವನ್ನು ಧರಿಸಿದ್ದ ಚಾರ್ವಾಕನೆಂಬ ರಾಕ್ಷಸನು ಯುಧಿಷ್ಠಿರನೊಡನೆ ಮಾತನಾಡಬೇಕೆಂದು ಮುಂದೆ ಬಂದನು. ಆ ಚಾರ್ವಾಕನು ದುರ್ಯೋ ಧನನ ಮಿತ್ರನಾಗಿದ್ದನು. ಅವನು ಬ್ರಾಹ್ಮಣಸಂನ್ಯಾಸಿಯ ವೇಷವನ್ನು ಧರಿಸಿದ್ದನು. ಅಕ್ಷಮಾಲೆಯನ್ನು ಹಿಡಿದುಕೊಂಡಿದ್ದನು. ಶಿಖೆಯನ್ನು ಬಿಟ್ಟುಕೊಂಡಿದ್ದನು. ತ್ರಿದಂಡವನ್ನು ಹಿಡಿದಿದ್ದನು. ಧೈರ್ಯಶಾಲಿಯಾಗಿಯೂ ಭಯಶೂನ್ಯನಾಗಿಯೂ ಇದ್ದನು. ಸಾವಿರಾರು ಜನ ಬ್ರಾಹ್ಮಣಸಮೂಹದಿಂದ ಮುಂದೆ ಬಂದು ಬ್ರಾಹ್ಮಣರ ಅನುಮತಿಯನ್ನು ಕೇಳದೆಯೇ ಧರ್ಮರಾಜನನ್ನು ಕುರಿತು ಹೇಳತೊಡಗಿದನು ಎಲ್ಲ ಬ್ರಾಹ್ಮಣರೂ ನಿನ್ನೊಡನೆ ಅವರೆಲ್ಲರ ಪರವಾಗಿ ಮಾತನಾಡುವ ಭಾರವನ್ನು ನನ್ನ ಮೇಲೆಯೇ ಹಾಕಿದ್ದಾರೆ. ಬ್ರಾಹ್ಮಣರೆಲ್ಲರ ಪರವಾಗಿ ಮಾತುಗಳನ್ನು ನಿನಗೆ ಹೇಳುತ್ತಿದ್ದೇನೆ.
ಧಿಗ್ಭವನ್ತಂ ಕುನೃಪತಿಂ ಜ್ಞಾತಿಘಾತಿನಮಸ್ತು ವೈ | ಕಿಂ ತೇನ ಸ್ಯಾದ್ಧಿ ಕೌನ್ತೇಯ ಕೃತ್ವೇಮಂ ಜ್ಞಾತಿಸಂಕ್ಷಯಮ್ | ಘಾತಯಿತ್ವಾ ಗುರೂಂಶ್ಚೈವ ಮೃತಂ ಶ್ರೇಯೋ ಜೀವಿತಮ್ || “ಜ್ಞಾತಿ-ಬಾಂಧವರೆಲ್ಲರನ್ನೂ ಸಂಪೂರ್ಣವಾಗಿ ವಿನಾಶ ಮಾಡಿರುವ ದುಷ್ಟರಾಜನಾದ ನಿನಗೆ ಧಿಕ್ಕಾರವಿರಲಿ! ಹೀಗೆ ಸರ್ವನಾಶವನ್ನು ಮಾಡಿರುವುದರಿಂದ ನಿನಗೆ ಯಾವ ಪ್ರಯೋಜನವಾಯಿತು? ಜ್ಞಾತಿ- ಬಾಂಧವರ ವಿನಾಶವನ್ನು ಮಾಡಿ ಗುರುಜನರನ್ನು ಸಂಹರಿಸಿ ಬದುಕಿರುವುದಕ್ಕಿಂತಲೂ ನಿನಗೆ ಮರಣವೇ ಶ್ರೇಯಸ್ಕರವಾದುದು.” ಸಂನ್ಯಾಸಿಯ ವೇಷದಲ್ಲಿದ್ದ ದುಷ್ಟರಾಕ್ಷಸನ ಮಾತನ್ನು ಕೇಳಿ ಅಲ್ಲಿ ನೆರೆದಿದ್ದ ಸಾವಿರಾರು ಬ್ರಾಹ್ಮಣರು ಅವನ ಮಾತಿನಿಂದ ಅವಮಾನಿತರಾದರು ಮತ್ತು ದುಃಖಿತರಾದರು, ಅವನ ಮಾತನ್ನು ಖಂಡಿಸುತ್ತಾ ಗಟ್ಟಿಯಾಗಿ ಕೂಗಿದರು. ಬಳಿಕ ಎಲ್ಲ ಬ್ರಾಹ್ಮಣರೂ ಮತ್ತು ಯುಧಿಷ್ಠಿರ ರಾಜನೂ ರಾಕ್ಷಸನ ಮಾತಿನಿಂದ ಉದ್ವಿಗ್ನರೂ ಮತ್ತು ಲಜ್ಜಿತರೂ ಆದರು. ಸ್ವಲ್ಪಕಾಲ ಯಾರೂ ಯಾವ ಮಾತನ್ನೂ ಆಡದೇ ಮೌನಧರಿಸಿ ಕುಳಿತಿದ್ದರು. ಆಗ ಯುಧಿಷ್ಠಿರನು
ಬ್ರಾಹ್ಮಣೋತ್ತಮರೇ! ನಾನು ನಿಮಗೆ ಸಾಷ್ಟಾಂಗನಮಸ್ಕಾರಮಾಡಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ವಿಷಯದಲ್ಲಿ ನೀವೆಲ್ಲರೂ ಪ್ರಸನ್ನರಾಗಿರಿ. ಸಮಯದಲ್ಲಿ ಎಲ್ಲ ಕಡೆಗಳಿಂದಲೂ ನನಗೆ ದೊಡ್ಡ ವ್ಯಸನವೇ ಸನ್ನಿಹಿತವಾಗಿದೆ. ಇಂತಹ ಸಮಯದಲ್ಲಿ ನೀವು ನನ್ನನ್ನು ಧಿಕ್ಕರಿಸುವುದು ಸರಿ ಕಾಣುವುದಿಲ್ಲ. ಹೀಗೆ ಹೇಳಿದ ಯುಧಿಷ್ಠಿರನ ಮಾತನ್ನು ಕೇಳಿದ ಎಲ್ಲ ಬ್ರಾಹ್ಮಣರೂ ಏಕಕಂಠದಿಂದ ಯುಧಿಷ್ಠಿರನಿಗೆ ಹೇಳಿದರುಮಹಾರಾಜ ಅವನು ಹೇಳಿದುದು ನಮ್ಮ ಅಭಿಪ್ರಾಯವಲ್ಲ. ಅವನು ನಮ್ಮ ಪ್ರತಿನಿಧಿಯೂ ಅಲ್ಲ. ನಾವು ನಿನಗೆ ಈಗಲೂ ಆಶೀರ್ವಾದಗಳನ್ನು ಮಾಡುತ್ತೇವೆ. ತಪಸ್ಸಿನಿಂದ ಪರಿಶುದ್ಧರಾಗಿದ್ದ, ವೇದವಿದ್ವಾಂಸರಾದ ಬ್ರಾಹ್ಮಣರೆಲ್ಲರೂ ಜ್ಞಾನದೃಷ್ಟಿಗಳಿಂದ ತಮ್ಮ ಅನುಮತಿಯೇ ಇಲ್ಲದೇ ತಮ್ಮ ಅಭಿಪ್ರಾಯಕ್ಕೆ ವಿರೋಧವಾಗಿ ಮಾತನಾಡಿದವನು ಯಾರೆಂಬುದನ್ನು ತಿಳಿದುಕೊಂಡರು. ತಾವು ಅಂತರ್ದೃಷ್ಟಿಯಿಂದ ಕಂಡುಕೊಂಡುದನ್ನೇ ಯುಧಿಷ್ಠಿರನಿಗೂ ಹೇಳಿದರು :
ಏಷ ದುರ್ಯೋಧನಸಖಾ ಚಾರ್ವಾಕೋ ನಾಮ ರಾಕ್ಷಸಃ | ಪರಿವ್ರಾಜಕರೂಪೇಣ ಹಿತಂ ತಸ್ಯ ಚಕೀರ್ಷತಿ || “ಮಹಾರಾಜ! ಚಾರ್ವಾಕನೆಂಬ ಹೆಸರಿನ ರಾಕ್ಷಸನು ದುರ್ಯೋಧನನ ಸ್ನೇಹಿತನು. ಪರಿವ್ರಾಜಕವೇಷವನ್ನು ಧರಿಸಿ ಸತ್ತುಹೋದ ತನ್ನ ಮಿತ್ರನಿಗೆ ಹಿತವನ್ನುಂಟುಮಾಡುವ ಅಪೇಕ್ಷೆಯಿಂದಿರುತ್ತಾನೆ. ಆದುದರಿಂದಲೇ ಅವನು ಹೀಗೆ ಮಾತನಾಡಿದ್ದಾನೆ. ಧರ್ಮಾತ್ಮನೇ! ನಾವು ಯಾರೂ ಇಂತಹ ಮಾತುಗಳನ್ನು ಹೇಳಲಾರೆವು. ಎಲ್ಲಾ ಬ್ರಾಹ್ಮಣರೂ ಹೀಗೆ ಹೇಳುತ್ತಿದ್ದಾರೆಂಬ ನೀನು ಭಾವಿಸಬೇಡ. ಎಲ್ಲ ಬ್ರಾಹ್ಮಣರೂ ಯುಧಿಷ್ಠಿರನನ್ನು ಸಮಾಧಾನಗೊಳಿಸಿ, ಕೋಪ ಹೊಂದಿದವರಾಗಿ ಪಾಪಿಷ್ಠನಾದ ರಾಕ್ಷಸನನ್ನು "ಹುಂಕಾರ"ಗಳಿಂದ ಭಯಪಡಿಸುತ್ತಾ ಕ್ಷಣಮಾತ್ರದಲ್ಲಿ ಸಂಹರಿಸಿದರು. ಇಂದ್ರನ ವಜ್ರಾಯುಧದಿಂದ (ಸಿಡಿಲಿನಿಂದ) ಭಸ್ಮೀಭೂತವಾದ ಚಿಗುರುಗಳಿಂದ ಕೂಡಿರುವ ವೃಕ್ಷದೋಪಾದಿಯಲ್ಲಿರಾಕ್ಷಸನು ಬ್ರಹ್ಮವಾದಿಗಳ ತೇಜಸ್ಸಿನಿಂದ ಭಸ್ಮೀಭೂತನಾಗಿ ಕೆಳಗೆಬಿದ್ದನು.
ಭೀಷ್ಮಪರ್ವದಲ್ಲಿ ನ ಸತ್ಯಂ ತೇಷು ವಿದ್ಯತೇಎನ್ನುವ ಶ್ಲೋಕದಲ್ಲಿ ಚಾರ್ವಾಕರಲ್ಲಿ ಸತ್ಯವೆಂಬುದೇ ಇಲ್ಲ ಎಂಬುದಾಗಿ ಶ್ರೀಕೃಷ್ಣನು ಹೇಳಿರುವನು. ಈ ಶ್ಲೋಕದಲ್ಲಿ ಅಸತ್ಯಂ, ಅಪ್ರತಿಷ್ಠಂ, ಅನೀಶ್ವರಂ, ಅಪರಸ್ಪರಸಮ್ಭೂತಂ ಜಗತ್‍ ತೇ ಆಹುಃ ಎಂದು ಅವರ ಸಿದ್ಧಾಂತವನ್ನು ಹೇಳಿದ್ದಾನೆ. ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ | ತಸ್ಮಾತ್ಸರ್ವಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ || ದೇಹವು ಭಸ್ಮವಾಗಿ ಹೋದನಂತರ ಈ ಶರೀರದಲ್ಲಿರುವ ಪಂಚ ಭೂತಗಳೂ ಪಂಚಭೂತಗಳಲ್ಲಿ ಸೇರಿಕೊಂಡನಂತರ ಪುನರಾಗಮನವೆಂಬು ದೆಲ್ಲಿಯದು? ಆದುದರಿಂದ ಸರ್ವಪ್ರಯತ್ನದಿಂದಲೂ ಸಾಲಮಾಡಿ ಯಾದರೂ ತುಪ್ಪವನ್ನು ಚೆನ್ನಾಗಿ ತಿನ್ನಬೇಕು ಎನ್ನುವವರೂ, ಸುಖಪಡಲು ಅವಕಾಶವು ಸಿಕ್ಕಿರುವಾಗ ಕಣ್ಣಿಗೆ ಕಾಣದ ಪಾಪ ಪುಣ್ಯಗಳಿಗೆ ಹೆದರಿ ಕೈಗೆ ಬಂದ ಸುಖವನ್ನು ದೂರೀಕರಿಸಬಾರದು ಎಂಬ ಸಿದ್ಧಾಂತವುಳ್ಳವರೂ ಚಾರ್ವಾಕರು ಅಥವಾ ಆಸುರಜನರು.
ನಾಳೆಯವರೆಗೆ ಜಗತ್ತು ಹೀಗೆಯೇ ಇರುತ್ತದೆ ಎಂದು ನಂಬುವುದಕ್ಕಾಗುವುದಿಲ್ಲ. ಜಗತ್ತು ಅಸತ್ಯ ಸ್ವರೂಪವಾದುದರಿಂದ ಎಂದಾದರೂ ನಾಶವಾಗಿಬಿಡಬಹುದು. ಎಲ್ಲ ಭಾಗವೂ ನಾಶವಾಗದಿದ್ದರೂ ನಾವಿರುವ ಭಾಗವಾದರೂ ನಾಶವಾಗಬಹುದು. ಇದು ಯಾವುದರ ಮೇಲೂ ನಿಂತಿಲ್ಲ. ಯಾವುದೋ ಪ್ರಾಕೃತಿಕವಾದ ಆಕರ್ಷಣೆಯು ಇದನ್ನು ನಿಲ್ಲಿಸಿದೆ. ಭೂಮಿಗೆ ಮತ್ತಾವ ಆಧಾರವೂ ಇಲ್ಲ. ಆದುದರಿಂದ ಇದು ಯಾವಾಗಲಾದರೂ ಕುಸಿಯಬಹುದು. ಎಲ್ಲವನ್ನೂ ನೋಡಿಕೊಳ್ಳಲು ಈಶ್ವರನೊಬ್ಬನು ಇದ್ದಿದ್ದರೆ ಭೂಕಂಗಳಾಗಲೀ ಬಿರುಗಾಳಿಗಳಾಗಲೀ ಉಂಟಾಗುತ್ತಿರಲಿಲ್ಲ. ಅವನು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದು ಜಗತ್ತನ್ನು ರಕ್ಷಿಸಬೇಕಾಗಿದ್ದಿತು. ಅದು ಅವನ ಕರ್ತವ್ಯವೂ ಆಗಿದ್ದಿತು. ಹಾಗೆ ಆಗದೇ ಪ್ರಕೃತಿಯ ನಿಯಮದಂತೆ ಇಂದಿನ ಆಗು ಹೋಗುಗಳೆಲ್ಲವೂ ನಡೆಯುತ್ತಿರುವುದರಿಂದಈಶ್ವರನೆಂಬುವನಿಲ್ಲ. ಇದು ಕಟ್ಟುಕಥೆಎನ್ನುತ್ತಾರೆ, ಚಾರ್ವಾಕರಂತೆ ಪರಸ್ಪರಸಂಭೂತವೆಂದರೆ ಆಕಾಶಾದ್ವಾಯುಃ = ಆಕಾಶದಿಂದ ವಾಯುವು ಹುಟ್ಟಿತು ; ವಾಯೋರಗ್ನಿಃ = ವಾಯುವಿನಿಂದ ಅಗ್ನಿಯು ಹುಟ್ಟಿತು; ಅಗ್ನೇರಾಪಃ = ಅಗ್ನಿಯಿಂದ ನೀರು ಹುಟ್ಟಿತು. ಅಥವಾ ಯಜ್ಞಾದ್ಭವತಿ ಪರ್ಜನ್ಯಃ ಪರ್ಜನ್ಯಾದನ್ನಸಮ್ಭವಃ = ಯಜ್ಞದಿಂದ ಮಳೆಯು ಬಂದಿತು ; ಮಳೆಯಿಂದ ಅನ್ನಕೊಡುವ ಪೈರು = ಪಚ್ಚೆಗಳು ಬೆಳೆದುವುಈ ರೀತಿ ಕಾರ್ಯ ಕಾರಣಪರಂಪರೆಯಲ್ಲಿ ಒಂದು ಮತ್ತೊಂದರಿಂದ ಹುಟ್ಟಿತುಎಂದು ವೈದಿಕರು ಹೇಳುವ ಅಭಿಪ್ರಾಯ. ಈ ವಿಧವಾದ ಪರಸ್ಪರ ಸಂಭೂತತೆಯನ್ನು ಚಾರ್ವಾಕರು ಒಪ್ಪುವುದಿಲ್ಲ. ಯಜ್ಞವೇ ಇಲ್ಲದಿದ್ದರೂ ಪ್ರಕೃತಿನಿಯಮದಂತೆಮಳೆಯು ಆಗಿಯೇ ಆಗುತ್ತದೆ. ಯಜ್ಞಕ್ಕೂ ಮಳೆಗೂ ಯಾವ ಸಂಬಂಧವೂ ಇಲ್ಲ. ಮಳೆಯಾದರೆ ಬೆಳೆಯಾಗುತ್ತದೆ. ಇದು ಪ್ರಾಕೃತಿಕವಾಗಿ ನಿಜ. ಆದುದರಿಂದ ಯಜ್ಞದಿಂದ ಮಳೆ-ಬೆಳೆಗಳಾಗುವುವೆಂಬುದು ಸುಳ್ಳು. ಇದು ಆಸುರಭಾವದ ಮನುಷ್ಯರು ಚಾರ್ವಾಕರು ಹೇಳುವ ಮಾತು.
ಚಾರು ಮತ್ತು ವಾಕ್ ಸೇರಿ ಚಾರ್ವಾಕ ಎಂದರೆ ಮನಸ್ಸಿಗೆ ಹಿಡಿಸುವ ಮಾತನ್ನಾಡುವುದು ಎಂದರ್ಥ. ಲೋಕಾಯತ, ಲೋಕಾಯತಕ, ಲೌಕಾಯ ಇತ್ಯಾದಿ ಹೆಸರುಗಳಿಂದ ಮತವನ್ನು ಕರೆಯಲಾಗಿದೆ. ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲವಾದ ಕಾರಣ ಇದು ನಾಸ್ತಿಕ ಮತ ಎಂದು ಪರಿಗಣಿತವಾಗಿದೆ. ಉಳಿದೆಲ್ಲ ದರ್ಶನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆತ್ಮನೆಂಬ ವಸ್ತುವನ್ನು ಒಪ್ಪುವ ಕಾರಣ ಅವರೆಲ್ಲ ಆಸ್ತಿಕರು. ಚಾರ್ವಾಕರು ದೇಹಕ್ಕಿಂತಲೂ ಬೇರೆಯಾದ ಆತ್ಮನನ್ನೂ ಪಾಪಪುಣ್ಯಗಳನ್ನೂ ಪರಲೋಕಗಳನ್ನೂ ಒಪ್ಪುವುದಿಲ್ಲ. ಶುದ್ಧ ಭೌತಿಕವಾದ. ಸಿದ್ಧಾಂತದಲ್ಲಿ ಪ್ರತ್ಯಕ್ಷದಿಂದ ತಿಳಿಯುವ ವಸ್ತುಗಳೇ ವಸ್ತುಗಳು. ಅವು ನಾಲ್ಕು. ಪೃಥಿವಿ, ನೀರು, ಅಗ್ನಿ, ಗಾಳಿ. ಇಂದ್ರಿಯಗಳಿಗೆ ಕಾಣಿಸದ ವಸ್ತುಗಳನ್ನು ನಂಬಬೇಕಾಗಿಲ್ಲ. ಸುಖದುಃಖಗಳಿಗೆ ವಸ್ತುಸ್ವಭಾವವೇ ಕಾರಣ. ನಾಲ್ಕು ಭೂತಗಳ ಸಂಯೋಗವೇ ದೇಹರೂಪವಾಗಿ ಬರುತ್ತದೆ. ಸಂಯೋಗವಿಶೇಷದಲ್ಲಿಯೇ ಬುದ್ಧಿ, ಜ್ಞಾನ ಎಂಬ ಜೈತನ್ಯಶಕ್ತಿ ಹೊರಬೀಳುತ್ತದೆ. ಚೈತನ್ಯಶಕ್ತಿ ಭೌತ ಶಕ್ತಿಯೇ ಹೊರತು ಬೇರೆಯಲ್ಲ. ಆದಕಾರಣ ಶರೀರವಿರುವವರೆಗೆ ಆತ್ಮಶಕ್ತಿಯಿದ್ದು ಶರೀರದೊಂದಿಗೆ ಅದೂ ನಷ್ಟವಾಗುತ್ತದೆ.
ಮುಖ್ಯವಾಗಿ ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಅನುಮಾನಗಳಿಂದ ಸಿದ್ಧವಾಗುವ ಅನುಭವಗಳು ಕೇವಲ ಸಂದೇಹ ಮತ್ತು ಸಂಭಾವ್ಯತೆಯ ಟ್ಟಕ್ಕೆ ತಲುಪಿಸುವ ಕಾರಣ ಖಚಿತಜ್ಞಾನಕ್ಕೆ ಅನುಮಾನ ಪ್ರಮಾಣವಾಗಲಾರದೆಂದು ಇವರ ಅಭಿಮತ. ವಸ್ತುಸ್ವಭಾವವೇ ಕಾರಣಶಕ್ತಿ. ಆದ್ದರಿಂದಲೇ ಪರಿಣಾಮ ಪ್ರತ್ಯಕ್ಷವಾಗುವುದಾದ ಕಾರಣ ಇವರು ಸ್ವಭಾವವಾದಿಗಳು. ಇದಕ್ಕೆ ಯಾದೃಚ್ಛಿಕವಾದವೆಂದೂ ಹೇಳುತ್ತಾರೆ. ಏಕೆಂದರೆ ಒಬ್ಬನ ಇಚ್ಛಾಶಕ್ತಿಯ ನಿಮಿತ್ತ ಕಾರಣದಿಂದ ಪರಿಣಾಮ ಪರಂಪರೆ ಉಂಟಾಗುವಂತೆ ಕಂಡು ಬರುವುದಿಲ್ಲ. ನಮ್ಮ ಬಯಕೆಯಿಲ್ಲದೆ ನಮಗೆ ತಿಳಿಯದೆಯೇ ಸುಖದುಃಖಗಳ ಅನುಭವ ಬರುವ ಕಾರಣ ಇದಕ್ಕೆ ಪ್ರಾಸಂಗಿಕವಾದವೆಂದೂ ಹೇಳುತ್ತಾರೆ.
ಚಾರ್ವಾಕರಲ್ಲಿ ಕೆಲವು ಪಂಗಡದವರು ನೇತಿವಾದಿಗಳು ಅಂದರೆ ಪ್ರಪಂಚ ಎನ್ನುವುದು ನಿತ್ಯವಲ್ಲ, ಸತ್ಯವಲ್ಲ ಎಂಬುದು ಇವರ ಮತ. ಭಾರತೀಯ ತತ್ತ್ವಜ್ಞಾನಗಳಲ್ಲಿ ಆಸ್ತಿಕರು, ನಾಸ್ತಿಕರು, ಅದ್ವಯವಾದಿಗಳು ಹೀಗೆ ಮೂರು ವಿಧ ವಿಭಾಗಿಸಿರುವುದನ್ನು ನೋಡಿದರೆ ನಾಸ್ತಿಕರಿಗೆ ಇರುವ ಪ್ರಾಧಾನ್ಯ ತಿಳಿಯುತ್ತದೆ. ಆಸ್ತಿ, ನಾಸ್ತಿ ಮತಗಳಲ್ಲಿ ಯಾವುದು ಮೊದಲೆಂದು ಹೇಳುವುದು ಸುಲಭವಲ್ಲ. ಆಸ್ತಿಕ ಮತದಲ್ಲಿ ನಾಸ್ತಿಕ ಮತದ ಖಂಡನೆಯೂ ನಾಸ್ತಿಕ ಮತದಲ್ಲಿ ಆಸ್ತಿಕ ಮತದ ಖಂಡನೆಯೂ ಕಾಣುವುದರಿಂದ ಅನಾದಿಕಾಲದಿಂದ ಎರಡೂ ಬಗೆಯ ಅಭಿಪ್ರಾಯಗಳು ಇದ್ದುವೆಂದು ಕಾಣುತ್ತದೆ. ಪ್ರತ್ಯಕ್ಷವೊಂದೇ ಇಂದ್ರಿಯ ಪ್ರತ್ಯಕ್ಷ ಪ್ರಮಾಣ; ಅನುಮಾನವೆಂದರೆ ಸಂದೇಹ; ಆಗಮವೆಂಬುದು ಕೇಳಿದುದು, ನೋಡಿದುದಲ್ಲ ಎಂಬ ಚಾರ್ವಾಕವಾದವನ್ನು ಎಲ್ಲ ಮತಾಚಾರ್ಯರೂ ಖಂಡಿಸುತ್ತಾರೆ. ಪ್ರತ್ಯಕ್ಷವೇ ಕೆಲವು ವೇಳೆ ಆಭಾಸವಾಗುವುದು, ಅನುಮಾನವಿಲ್ಲದೆ ವ್ಯವಹಾರವೇ ಸಾಗಲಾರದು ಎಂದು ವೇದಾಂತಿಗಳವಾದ. ಸುಶಿಕ್ಷಿತ ಚಾರ್ವಾಕರೆಂಬ ಕೆಲವರು ಅನುಮಾನ ಆಗಮಗಳನ್ನು ಆಂಶಿಕವಾಗಿ ಒಪ್ಪುತ್ತಾರೆ. ಪ್ರತ್ಯಕ್ಷಕ್ಕೆ ಗೋಚರವಾಗತಕ್ಕ ವಿಷಯಗಳಲ್ಲಿ ಅನುಮಾನ ಆಗಮಗಳಿಗೆ ಅವಕಾಶವುಂಟೆನ್ನುತ್ತಾರೆ. ತಾರ್ಕಿಕರು ಯುಕ್ತಿಯಿಂದಲೇ ಅತ್ಯಂತ ಪರೋಕ್ಷವನ್ನು ನಂಬಿದರೆ ವೈದಿಕರು ಶಾಸ್ತ್ರದಿಂದ ಅಂಥ ವಿಷಯಗಳನ್ನು ನಂಬುತ್ತಾರೆ.
ಸಿದ್ಧಾಂತವನ್ನು ಪ್ರತಿಪಾದಿಸುವ ಗ್ರಂಥಗಳು ಲುಪ್ತವಾಗಿ ಹೋಗಿವೆಯಾದ ಕಾರಣ ಇದರ ವಿರೋಧಿಗಳು ಇದನ್ನು ಖಂಡಿಸುವಾಗ ಉದಾಹರಿಸುವ ಮಾತುಗಳಲ್ಲಿ ತೋರಿಸುವ ಉದ್ವೇಗ ಮತ್ತು ಕಾಳಜಿಗಳಿಂದಲೇ ದರ್ಶನದ ಮಹತ್ತ್ವ ಮತ್ತು ಜನಪ್ರಿಯತೆಯನ್ನು ತಿಳಿಯಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಅಲ್ಪಸ್ವಲ್ಪ ವಿಷಯಗಳು ಜಾಬಾಲಿ, ಪರಾಶರ ಮೊದಲಾದ ಉಪನಿಷದ್ ಋಷಿಗಳ ಮಾತುಗಳಲ್ಲಿಯೂ ರಾಮಾಯಣ, ವಿಷ್ಣುಪುರಾಣ, ಮಹಾಭಾರತಾದಿಗಳಲ್ಲಿಯೂ ಮಾಧವಾಚಾರ್ಯರ ಸರ್ವದರ್ಶನಸಂಗ್ರಹ ಮೊದಲಾದ ಇತ್ತೀಚಿನ ದರ್ಶನಗ್ರಂಥಗಳಲ್ಲಿಯೂ ಕಂಡುಬರುತ್ತವೆ. ಬೃಹಸ್ಪತ್ಯಾಚಾರ್ಯರೇ ಸೂತ್ರಕಾರರಾಗಿದ್ದ ತತ್ತ್ವದರ್ಶನ ಚಾರ್ವಾಕರೆಂಬುವರ ಭಾಷ್ಯದಿಂದ ಬುದ್ಧ ಪೂರ್ವಕಾಲದಲ್ಲಿಯೇ ಪ್ರಚಾರದಲ್ಲಿದ್ದಂತೆ ತಿಳಿದುಬರುತ್ತದೆ. ತತ್ತ್ವಸಂಗ್ರಹವೆಂಬ ಬೌದ್ಧಗ್ರಂಥದ ಮೂಲಕ ಕಂಬಲಾಶ್ವತರ ಎಂಬ ಚಾರ್ವಾಕ ಮತಾಚಾರ್ಯರನ್ನು ಖಂಡಿಸಿದುದು ಕಾಣುವುದಲ್ಲದೆ ಬೌದ್ಧಗ್ರಂಥಗಳಲ್ಲಿಯೇ ಇನ್ನೂ ಅನೇಕ ಚಾರ್ವಾಕ ಮತಪ್ರವರ್ತಕರ ಹೆಸರುಗಳು ಸಿಕ್ಕುತ್ತವೆ. ಶಬರ, ಪ್ರಭಾಕರ, ಪತಂಜಲಿ, ಭಾಸ್ಕರಾಚಾರ್ಯ ಮುಂತಾದವರ ಗ್ರಂಥಗಳಲ್ಲಿನ ಅಭಿಪ್ರಾಯಗಳನ್ನು ನೋಡಿದರೆ ಚಾರ್ವಾಕದರ್ಶನ ಪೂರ್ವಕಾಲದಲ್ಲಿ ಬಹಳ ಪ್ರಚಾರದಲ್ಲಿದ್ದಂತೆ ತೋರುತ್ತದೆ. ಸರ್ವದರ್ಶ ಸಂಗ್ರಹದ ಮೊದಲನೆಯ ಅಧ್ಯಾಯವೇ ಪ್ರಬಲವಾದ ಚಾರ್ವಾಕಮತದ ಖಂಡನೆಯಿಂದ ಪ್ರಾರಂಭವಾಗುತ್ತದೆ. ಅಲ್ಲಿಗೆ ಚಾರ್ವಾಕ ಎನ್ನುವ ಒಬ್ಬ ವ್ಯಕ್ತಿಗೆ ಇದ್ದಿದ್ದರೂ ಅದು ಕೊನೆಗೆ ಆ ಮತವನ್ನು ಅನುಸರಿಸುವವರೆಲ್ಲರನ್ನೂ ಚಾರ್ವಾಕರೆಂದು ಕರೆಯುವ ಹಂತಕ್ಕೆ ಬಂದಿತು. ತುಂಬಾ ನಾಜೂಕಿನಿಂದ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಚಾರು ಎನ್ನುವುದು ಚತುರತೆಗೆ ಸಂಬಂಧಿಸಿರುವುದು ವಾಕ್ ಎಂದರೆ ಮಾತಲ್ಲವೇ. ಹಾಗಾಗಿ ಮಾತಿನಲ್ಲಿಯೇ ಮಂಟಪ ಕಟ್ಟುತ್ತಾರೆ.
ಚಾರ್ವಾಕ ಎನ್ನುವ ವ್ಯಕ್ತಿಯೊಬ್ಬ ನಿದ್ದನೆನ್ನುವುದು ಮಹಾಭಾರತದಲ್ಲಿ ಒಂದೆರಡುಕಡೆ ಕಾಣಿಸಿಕೊಳ್ಳುತ್ತದೆಯೇ ವಿನಃ ಮತ್ತೆಲ್ಲೂ ಸಿಗುವುದಿಲ್ಲ. ಆದರೆ ನಾಸ್ತಿಕವಾದಿಗಳು ಈ ಭೂಮಿಯ ಆವಿರ್ಭಾವದಿಂದ ಕೊನೆಯ ತನಕ ಎಲ್ಲಾ ಮತಗಳಲ್ಲೂ ಎಲ್ಲಾ ಕಡೆಗಳಲ್ಲೂ ಇರುತ್ತಾರೆ ಇದ್ದಾರೆ.


No comments:

Post a Comment