Search This Blog

Tuesday 5 June 2018

ನಾಗಾರ್ಜುನಕೊಂಡದ ಭಾಷಾ ಕ್ರಾಂತಿ


ಅಶೋಕನ ಕಾಲದ ಬೌದ್ಧ ಧರ್ಮ ತನ್ನ ನೆಲೆಯನ್ನು ಕಳಚಿಕೊಳ್ಳುತ್ತಾ ಕರಮೇಣ ಜನರಿಂದ ದೂರವಾಗುತ್ತ ಸಾಗಿತು. ಧರ್ಮಾಧಾರಿತ ವಿಷಯಗಳ ಶಾಸನಗಳು ಅರ್ಥಕಳೆದುಕೊಂಡವು. ಪ್ರಾಕೃತ ಭಾಷೆ ವ್ಯವಹಾರದಿಂದ ದೂರವಾಗುತ್ತ ಸಂಸ್ಕೃತ ಸ್ಥಾನವನ್ನು ತುಂಬಿಕೊಂಡಿತು. ಬೌದ್ಧಧರ್ಮದ ಮತ್ತು ಅದು ಅನುಸರಿಸಿಕೊಂಡು ಬಂದ ಪ್ರಾಕೃತಭಾಷೆಯ ಅಧಿಪತ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕೊನೆಗೊಳಿಸಿದವರಲ್ಲಿ ಮೊದಲಿಗರು ನಾಗಾರ್ಜುನಕೊಂಡದ ಇಕ್ಷ್ವಾಕರು. ಸುಮಾರು ಮೂರನೇ ಶತಮಾನದಲ್ಲಿ ಮುಕ್ಕಾಲು ಪಾಲು ಕಾಲದಲ್ಲಿ ಬೌದ್ಧಧರ್ಮಕ್ಕೆ ಬದ್ಧರಾಗಿದ್ದ ಇವರು  ವಾಸಿಷ್ಠೀಪುತ್ರ ಬಹುವಲಶಾಂತಮೂಲನ (ಕ್ರಿ.. ಸು. 274-297) ಕಾಲದಲ್ಲಿ ಒಮ್ಮೆಲೇ ಹಿಂದೂ ಧರ್ಮ ಕಡೆಗೆ ಆಕರ್ಷಿತರಾಗಿ, ನಂತರದ ಮೂರು ದಶಕಗಳಲ್ಲಿ ನಾಲ್ಕು ದೇವಾಲಯಗಳನ್ನು ಅಥವಾ ದೇವಕುಳಗಳನ್ನು ನಿರ್ಮಿಸಿ, ಮೊದಲ ಬಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದರು.
  ನಾಗಾರ್ಜುನ ಕೊಂಡದಲ್ಲಿ ನಾಗಾರ್ಜುನ ಎನ್ನುವುದು ಬೌದ್ಧ ಸನ್ಯಾಸಿಯೊಬ್ಬನ ಹೆಸರನ್ನು ಸೂಚಿಸುತ್ತದೆ. ನಾಗಾರ್ಜುನಕೊಂಡ ಪ್ರದೇಶವನ್ನು ಮಗಧ ಸಾಮ್ರಾಜ್ಯದ ನಂದರು ಮೊದಲಿಗೆ ವಶಪಡಿಸಿಕೊಂಡರು ಎಂದು ತಿಳಿದುಬರುತ್ತದೆ. ನಂತರದಲ್ಲಿ ಇದು ಮೌರ್ಯ ಸಾಮ್ರಾಜ್ಯದಲ್ಲಿ ಸೇರಿಹೋಯಿತು. ಮೌರ್ಯರು ಆಳುತ್ತಿದ್ದ ಕಾಲದಲ್ಲ್ಲಿ ಪ್ರದೇಶದಲ್ಲಿ ಆಂಧ್ರ, ಪುಳಿಂದ ಮುಂತಾದ ಹಲವಾರು ಚಿಕ್ಕ ಪುಟ್ಟ ಪಂಗಡಗಳ ಜನರು ವಾಸಮಾಡುತ್ತಿದ್ದರು. ಅಶೋಕನ ಮರಣಾನಂತರ, ಮೌರ್ಯರ ಸಾಮಂತರಾಗಿದ್ದ ಸಾತವಾಹನರು ಮಧ್ಯಭಾರತದಲ್ಲಿ ಕ್ರಮೇಣ ಅಧಿಕಾರ ಹಿಡಿದರು. ನಾಗಾರ್ಜುನ ಕೊಂಡ ಪ್ರದೇಶ ಸಾತವಾಹನರ ಆಳ್ವಿಕೆಯ ಆರಂಭದ ಕಾಲದಿಂದ ಅವರ ವಶದಲ್ಲಿತ್ತೋ ಅಥವಾ ಇಲ್ಲವೋ ಎಮದು ನಿಶ್ಚಿತವಾಗಿ ಹೇಳಲಿಕ್ಕಾಗದಿದ್ದರೂ ಸುಮಾರು ಕ್ರಿ.. 1 ನೆಯ ಶತಮಾನದಲ್ಲಿ ಗೌತಮೀಪುತ್ರ ಶಾತಕರ್ಣಿಯ ಕಾಲದಲ್ಲಿ ಅವರ ವಶದಲ್ಲಿತ್ತು ಎಂದು ಹೇಳಬಹುದಾಗಿದೆ. ಸಾತವಾಹನರು ಬೌದ್ಧ ಧರ್ಮಕ್ಕೆ ಆಶ್ರಯ ನೀಡಿ ಹಲವಾರು ಬೌದ್ಧ ಸ್ತೂಪಗಳು, ಚೈತ್ಯಾಲಯಗಳನ್ನು ಕಟ್ಟಿಸಿದರು. ಇಕ್ಷ್ವಾಕು ವಂಶದವರು ಶಾತವಾಹನರ ಸಾಮಂತರಾಗಿ (ಮಹಾತಳವಾರರಾಗಿ) ಪ್ರದೇಶವನ್ನು ಆಳುತ್ತಿದ್ದರು. ಅವರ ರಾಜಧಾನಿ ವಿಜಯಪುರಿ ನಾಗಾರ್ಜುನ ಕೊಂಡ ಕಣಿವೆಯಲ್ಲಿದೆ. ಭಾರತದ ಪಶ್ಚಿಮದಲ್ಲಿ ಪ್ರಬಲರಾಗಿದ್ದ ಕ್ಷತ್ರಪರ ಪ್ರಭಾವಕ್ಕೆ ಶಾತವಾಹನರು ಸಿಕ್ಕಿ ಸುಮಾರು ೨೧೮ರ ವೇಳೆಗೆ ಅವನತಿ ಹೊಂದಿದಾಗ ಇಕ್ಷ್ವಾಕು ದೊರೆಗಳು ಪ್ರದೇಶದಲ್ಲಿ ಸ್ವತಂತ್ರರಾದರು. ಇಕ್ಷ್ವಾಕು ದೊರೆಗಳಲ್ಲಿ ಮೊದಲಿಗನಾದ ವಾಸಿಷ್ಠೀಪುತ್ರ ಶ್ರೀಶಾಂತಮೂಲನು ಸಾತವಾಹನರ ಕೊನೆಯ ದೊರೆ ೪ನೆಯ ಪುಳುಮಾವಿಯನ್ನು ಸೋಲಿಸಿ ರಾಜಧಾನಿ ಅಮರಾವತಿಯನ್ನು ವಶಪಡಿಸಿಕೊಂಡು ಸ್ವತಂತ್ರನಾದ ಎಮದು ತಿಳಿದು ಬರುತ್ತದೆ. ವಾಸಿಷ್ಠೀಪುತ್ರ ತನ್ನ ಅಧಿಕಾರದ ಕುರುಹಾಗಿ ಅಗ್ನಿಹೋತ್ರ, ಅಗ್ನಿಷ್ಟೋಮ, ವಾಜಪೇಯ ಮತ್ತು ಅಶ್ವಮೇಧ ಯಾಗಗಳನ್ನು ಮಾಡಿಸಿದನೆಂದು ಶಾಸನಗಳು ತಿಳಿಸುತ್ತವೆ. ಅವನ ಅನಂತರ ಅನುಕ್ರಮವಾಗಿ ಮಠಾರೀಪುತ್ರ ಶ್ರೀ ವೀರಪುರುಷದತ್ತ, ವಾಸಿಷ್ಠೀಪುತ್ರ ಶ್ರೀಬಹುವಲ ಶಾಂತಮೂಲ ಮತ್ತು ಶ್ರೀರುದ್ರ ಪುರುಷದತ್ತ ಅಧಿಕಾರಕ್ಕೆ ಬಂದುದಾಗಿ ತಿಳಿದುಬರುತ್ತದೆ. ಇವರೆಲ್ಲರೂ ವೈದಿಕ ಪರಂಪರೆಯ ಬ್ರಾಹ್ಮಣ ಸಂಪ್ರದಾಯಸ್ಥರು. ಶ್ರೀವೀರಪುರುಷದತ್ತ ತನ್ನ ಪುತ್ರಿ ಕೊಡಬಲಿಶ್ರೀಯನ್ನು ಬನವಾಸಿಯ ಚುಟುವಂಶದ ಅರಸನಿಗೆ ಮದುವೆ ಮಾಡಿಕೊಟ್ಟಿದ್ದ ಎಂದು ತಿಳಿದು ಬರುತ್ತದೆ ಆದರೆ ಇದು ಇನ್ನೂ ಖಚಿತವಾಗಿಲ್ಲ.
ಮಹಾರಾಜ ವಾಸಿಷ್ಠೀಪುತ್ರ ಬಹುವಲಶಾಂತಮೂಲನ ಕಾಲದಲ್ಲಿ ಸಹ ರಾಜ್ಯಶ್ರೀ ವೃದ್ಧಿದಿಶೆಯಲ್ಲಿದ್ದರೂ ವಂಶದ ಕೊನೆಯ ದೊರೆ ಶ್ರೀರುದ್ರಪುರುಷ ದತ್ತನ ಕಾಲದಲ್ಲಿ ಬೃಹತ್ಫಲಾಯನ ಮತ್ತು ಪಲ್ಲವ ದೊರೆಗಳ ಪ್ರಾಬಲ್ಯದಿಂದ ಜರ್ಜರಿತಗೊಂಡ ಇಕ್ಷ್ವಾಕು ವಂಶ ಇಳಿಮುಖವಾಯಿತು. ರಾಜಧಾನಿಯನ್ನು ವಿಜಯಪುರಿಯಿಂದ ಬೆಟ್ಟಗುಡ್ಡಗಳ ಮಧ್ಯದಲ್ಲಿ ನಿರ್ಮಿಸಲಾದ ಹಾಲಪುರಕ್ಕೆ ವರ್ಗಾಯಿಸಲಾಯಿತು. ಬೌದ್ಧಮತವೂ ಅವನತಿ ಹೊಂದಿತು. ಘಟನೆಗಳ ಅನಂತರ ನಾಗಾರ್ಜುನ ಕೊಂಡ ಕಣಿವೆಯ ರಾಜಕೀಯ ಮಹತ್ತ್ವ ಕ್ಷೀಣಿಸಿತು. ಸಮಯದಲ್ಲಿ ಪ್ರಾಯಶಃ ಪಲ್ಲವರು ಪ್ರದೇಶವನ್ನು ಗೆದ್ದುಕೊಂಡು ಇಕ್ಷ್ವಾಕುವಂಶವನ್ನು ಮೂಲೆಗುಂಪಾಗಿಸಿದರು.
ನಾಗಾರ್ಜುನ ಕೊಂಡ ದಕ್ಷಿಣ ಭಾರತದ ಇತಿಹಾಸದಲ್ಲಿ, ಅದರಲ್ಲೂ ಆರಂಭಕಾಲದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಒಂದು ಮೈಲಿಗಲು. ಧರ್ಮದ ದೃಷ್ಟಿಯಿಂದ ಗಮನಿಸಿದರೆ ಆಗ ಬೌದ್ಧ ಧರ್ಮ ತನ್ನ ನೆಲೆಯನ್ನು ಕಳೆದುಕೊಂಡು ವೈದಿಕ ಧರ್ಮಕ್ಕೆ ಪರಿವರ್ತನೆಗೊಂಡಿತು. ಹಾಗೆಯೇ ಭಾಷಾ ಮಾಧ್ಯಮವನ್ನೂ ಸಂಸ್ಕೃತವನ್ನಾಗಿ ಬಳಸಿಕೊಂಡಿತು. ಆದರೆ ಇವರು ಲಿಪಿ ಮಾಧ್ಯಮವನ್ನಾಗಿ ಆಯ್ದು ಕೊಂಡದ್ದು ಕೊನೆಯ ಹಂತದ ಬ್ರಾಹ್ಮಿಯನ್ನು.  
ಆರಂಭಿಕ ಹಂತ ಅಂದರೆ ಮೂರು-ನಾಲ್ಕನೇ ಶತಮಾನದಲ್ಲಿ ಇವರೆಲ್ಲರೂ ಬೌದ್ಧಧರ್ಮಕ್ಕೆ ಬದ್ಧರಾಗಿ, ಬ್ರಾಹ್ಮೀಲಿಪಿಯನ್ನು ಬಳಸಿ, ಪ್ರಾಕೃತದಲ್ಲಿ ಶಿಲಾಶಾಸನಗಳನ್ನು ಹಾಕಿಸಿದರು. ಆದರೆ ಕೆಲವು ದಶಕಗಳು ಕಳೆಯುವುದರೊಳಗೆ ಧರ್ಮದಿಂದ ದೂರ ಸರಿದು, ವೈದಿಕಧರ್ಮವನ್ನು ಪೋಷಿಸತೊಡಗಿ, ವ್ಯವಹಾರ ಮಾಧ್ಯಮವನ್ನೂ ಸಂಸ್ಕೃತಕ್ಕೆ ಬದಲಿಸಿಕೊಂಡರು. ಪ್ರಾಕೃತದ ಮಾಧ್ಯಮವಾದ ಬ್ರಾಹ್ಮೀಲಿಪಿಯನ್ನು ಸರಿಸುಮಾರು ಒಂದು ಶತಮಾನಕಾಲ ಮುಂದುವರಿಸಿದರು ಆದರೆ ನಾಲ್ಕನೇ ಶತಮಾನದಲ್ಲಿ ಅದನ್ನು ಸಹ ಕೈಬಿಟ್ಟು, ಬ್ರಾಹ್ಮೀಯಿಂದ ಸ್ವತಂತ್ರವಾಗುತ್ತಿದ್ದ ಸ್ಥಳೀಯ ಲಿಪಿಯನ್ನು ಇವರು ಬಳಸತೊಡಗಿದರು. ಇಂತಹ ಸಂದಿಗ್ಧ ಕಾಲದಲ್ಲಾದ ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ, ಅಶೋಕನ ಕಾಲದಿಂದ ಮುಂದುವರಿದು ಬಂದಿದ್ದ ಶಿಲಾಶಾಸನಗಳ ಅಧಿಪತ್ಯ ಅಂತ್ಯ.
ಸಂಸ್ಕೃತ ಭಾಷೆಯನ್ನು ಇವರು ಆಯ್ದುಕೊಂಡರೂ ಸಹ ಲಿಪಿ ಮಾಧ್ಯಮವಾಗಿ ಬಳಸಿದ್ದು ಬ್ರಾಹ್ಮೀಲಿಪಿಯನ್ನು. ಸಂಸ್ಕೃತದಿಂದ ಪ್ರೇರಿತರಾದ ಸಮ್ಯಕ್ ಸಂಬುದ್ಧಸ್ಯ ಪಾದಾನುದ್ಯಾತಾನಾಂ ಎಂದು ಕರೆದುಕೊಂಡ ಆನಂದವಂಶದ ಮೊದಲ ರಾಜನುಗೋಸಹಸಮತ್ತುಹಿರಣ್ಯಗರ್ಭದಾನಗಳನ್ನಾಚರಿಸಿ ಹದಿನಾಲ್ಕು ಬ್ರಾಹ್ಮಣರಿಗೆ ಒಂದು ಗ್ರಾಮವನ್ನು ದತ್ತಿ ಕೊಟ್ಟು, ಪ್ರಾಕೃತ ಮಿಶ್ರಿತ ಸಂಸ್ಕೃತದಲ್ಲಿ ಬ್ರಾಹ್ಮೀಲಿಪಿ ಬಳಸಿ, ತಾಮ್ರಪಟ ಬರೆಸಿದನು. ಇದೇ ಕಾಲದಲ್ಲಿ ಬೃಹತ್ಫಲಾಯನರುಬ್ರಹ್ಮದೇಯವನ್ನು ನಿರ್ಮಿಸಿ, ಕೆಲವು ಬ್ರಾಹ್ಮಣ ಕುಟುಂಬಗಳನ್ನು ಪಂತೂರಿನಲ್ಲಿ ನೆಲೆಗೊಳಿಸಿದರು.
ವಿಷ್ಣುಕುಂಡಿಗಳು ಸು. ಐದನೇ ಶತಮಾನದಲ್ಲಿ ಆಳಲಾರಂಭಿಸಿದರು ಇವರು ಆರಂಭದಲ್ಲಿ ಬೌದ್ಧಧರ್ಮದ ಮತ್ತು ಬುದ್ಧನ ನಿಷ್ಠಾವಂತ ಅನುಯಾಯಿಗಳಾಗಿ ದೊಡ್ಡ ಪ್ರಮಾಣದ ವಿಹಾರಗಳನ್ನೂ ಚೈತ್ಯಾಲಯಗಳನ್ನು ನಿರ್ಮಿಸಿದರು. ಸುಮಾರಷ್ಟು ದತ್ತಿ ಕೊಟ್ಟರು, 5ನೇ ಶತಮಾನದ ಉತ್ತರಾರ್ಧದಲ್ಲಿ ಹಿಂದೂಧರ್ಮಕ್ಕೆ ಬದ್ಧರಾದರು. ಬ್ರಹ್ಮದೇಯ ಮತ್ತು ದೇವಾಲಯಗಳನ್ನು ಸ್ಥಾಪಿಸಿದರು. ಇವರು ಬೌದ್ಧಧರ್ಮದ ತಾಮ್ರಪಟಗಳನ್ನು ಬರೆಸಿದ್ದು ಸಂಸ್ಕೃತದಲ್ಲಿ. ಬ್ರಾಹ್ಮೀಲಿಪಿಯಿಂದ  ಸ್ಥಳೀಯ ಲಿಪಿಯನ್ನು ಸ್ವೀಕರಿಸಿದರು ಅದನ್ನೇ ಬಳಕೆಗೆ ತಂದರು. ಕರ್ನಾಟಕದ ಮೊದಲು ಕಾಣಿಸಿಕೊಳ್ಳುವ ಸ್ಥಳೀಯ ಲಿಪಿಯು ಕೆಲವೇ ಸಮಯದಲ್ಲ್ಲಿ ದಕ್ಷಿಣದಲ್ಲಿ ಎಲ್ಲಾ ಕಡೆ ವ್ಯಾಪಿಸಿತು.
ಕರ್ನಾಟಕದಲ್ಲಿಯೂ ಇದೇ ಬಗೆಯಲ್ಲಾದ ಬದಲಾವಣೆಗಳನ್ನು ಕಾಣುತ್ತೇವೆ. ಕದಂಬರು ತಮ್ಮ ಆಳ್ವಿಕೆಯ ಆರಂಭದಲ್ಲಿ ಪ್ರಾಕೃತಭಾಷೆ ಮತ್ತು ಬ್ರಾಹ್ಮೀಲಿಪಿಯನ್ನು ಮಳವಳ್ಳಿಯಲ್ಲಿ ಬಳಸಿದರು, ಪ್ರಾಕೃತಮಿಶ್ರಿತ ಸಂಸ್ಕೃತವನ್ನು ಚಂದ್ರವಳ್ಳಿಯಲ್ಲಿ ಕಾಣಬಹುದಾಗಿದೆ. ಅಲ್ಲಿಗೆ ಬೌದ್ಧ ಧರ್ಮದ ಏಕಸ್ವಾಮ್ಯ ಕೊನೆಗೊಂಡದ್ದಲ್ಲದೇ ಪ್ರಾಕೃತ ಮತ್ತು ಬ್ರಾಹ್ಮಿಯೂ ಕೊನೆಗೊಂಡು ಪ್ರಾದೇಶಿಕ ಭಾಷೆ ಮತ್ತು ಲಿಪಿಯೂ ಕ್ರಮೇಣ ಬಳಕೆಗೆ ಬಂತು. ಕದಂಬರ ಕಾಲದಲ್ಲಂತೂ ಸಂಸ್ಕೃತ ಮಹೋನ್ನತ ಸ್ಥಾನ ಪಡೆಯಿತು.

No comments:

Post a Comment