Search This Blog

Wednesday 20 June 2018

ಬಾಣ - ಬೃಹದ್ಬಾಣ - ಪೆರ್ಬ್ಬಾಣ


ಮಹಾಭಾರತದ ಆದಿಪರ್ವದ ೬೫ನೇ ಅಧ್ಯಾಯದಲ್ಲಿ - ಕಶ್ಯಪನಿಗೆ ತನ್ನ ಮಡದಿಯರಲ್ಲಿ ಎರಡನೆಯವಳಾದ ದಿತಿಗೆ ಒಬ್ಬನೇ ಒಬ್ಬ ಮಗನು ಹುಟ್ಟಿದನು. ಅವನ ಹೆಸರು ಹಿರಣ್ಯಕಶಿಪು. ಹಿರಣ್ಯಕಶಿಪುವಿಗೆ ಐವರು ಮಕ್ಕಳಿದ್ದರು. ಅವರಲ್ಲಿ ಪ್ರಹ್ರಾದನೇ ಮೊದಲನೆಯವನು. ಅವನ ತಮ್ಮಂದಿರು ಸಂಹ್ರಾದ, ಅನುಹ್ರಾದ, ಶಿಬಿ, ಬಾಷ್ಕಲ ಹುಟ್ಟಿದರು. ಪ್ರಹ್ರಾದನಿಗೆ ವಿರೋಚನ, ಕುಂಭ, ನಿಕುಂಭ ಎಂಬ ಮೂವರು ಮಕ್ಕಳಿದ್ದರು. ಅವರೆಲ್ಲರೂ ಮಹಾಪರಾಕ್ರಮಿಗಳಾಗಿದ್ದರು. ವಿರೋಚನನ ಏಕಮಾತ್ರ ಪುತ್ರ ಪ್ರತಾಪಶಾಲಿಯಾದ ಬಲಿ. ಇದೇ ಬಲಿ ಮಹಾಬಲಿ ಅಥವಾ ಮಹಾವಲಿಯಾದ ಈತನ ವಂಶಸ್ಥರೇ ನಾನೀಗ ಹೇಳ ಹೊರಟಿರುವ ಬಾಣವಂಶಸ್ಥರದ್ದು. ಇವರು ಮಹಾವಲಿ ಬಾಣರು. ತಮ್ಮ ವಂಶ ಬಲಿ ಚಕ್ರವರ್ತಿಯದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರನ್ನು ಬೃಹದ್ಬಾಣರು, ಪೆರ್ಬ್ಬಾಣರು ಮುಂತಾಗಿ ಕರೆಯುತ್ತಾರೆ.
“ಆದದೇ ಕರಾನ್ ಬೃಹದ್ ಬಾಣ ಪ್ರಮುಖಾದ್ವಹೂನ್ರಾಜ ಮಂಡಲಾತ್ |
ಏವಮೇಭಿಃ ಪಲ್ಲವೇಂದ್ರಾಣಾಂ ಭೃಕುಟೀ ಸಮುತ್ಪತ್ತಿ ಕಾರಣೈಃ || “ಎನ್ನುವುದು ತಾಳಗುಂದದ ಸ್ತಂಭ ಶಾಸನದಲ್ಲಿ. ಕಂಚಿಯ ಪಲ್ಲವರಿಂದ ಅಪಮಾನಗೊಂಡ ಮಯೂರ ತನ್ನೂರಿಗೆ ಬಂದು ಒಂದು ಸೈನ್ಯದ ಪಡೆಯನ್ನೇ ಕಟ್ಟಿಕೊಳ್ಳುತ್ತಾನೆ. ಹೀಗೆ ಕಟ್ಟಿಕೊಂಡ ಪಡೆಯೊಂದಿಗೆ ಅಂಧ್ರಭೃತ್ಯರನ್ನು ಮತ್ತು ಬೃಹದ್ಬಾಣರನ್ನು ಸೋಲಿಸಿ ಅವರಿಂದ ಕಪ್ಪ ತೆಗೆದುಕೊಳ್ಳುತ್ತಾನೆ. ಅದೇ ಉಲ್ಲೇಖವನ್ನು ಶಾಸನ ತಿಳಿಸುತ್ತದೆ.
ಬಾಣರ ನಂಟು ನಮ್ಮ ನಾಡಿಗೆ ಇತ್ತೀಚಿನದ್ದಲ್ಲ. ಆರಂಭಕಾಲೀನ ಅಂದರೆ ಮೊದಲ ಸಹಸ್ರಮಾನದ ಆರಂಭದಲ್ಲಿ ತಮ್ಮ ನೆಲೆಯನ್ನು ಕಂಡು ಕೊಂಡಿದ್ದ ಬಾಣರು ನಮ್ಮ ನಾಡಿನ ಇತಿಹಾಸಕ್ಕೆ ಕೊಡುಗೆ ಕೊಟ್ಟವರಲ್ಲಿ ಪ್ರಮುಖರು. ಅತ್ಯಂತ್ಯ ದೀರ್ಘ ಅವಧಿಯಲ್ಲಿ ಕಿರುವಂಶೀಯರಾಗಿ ರಾಜ್ಯಭಾರ ಮಾಡಿದ ಹೆಗ್ಗಳಿಕೆ ಬಾಣರಿಗೆ ಸಲ್ಲುತ್ತದೆ. ಮೈಸೂರಿನಿಂದ ಪೂರ್ವ ಮತ್ತು ಆಂಧ್ರ ಪ್ರಾಂತ್ಯದಿಂದ ಪಶ್ಚಿಮಕ್ಕೆ ಮಧ್ಯ ಆಂಧ್ರ ಮಂಡಲದಲ್ಲಿ ಏಳೂವರೆ ಲಕ್ಷ ಪ್ರಾಂತವನ್ನು ಒಳಗೊಂಡ ಮಹಾವಲಿ ಎಂದು ಕರೆಸಿಕೊಂಡಿದ್ದ ಬಾಣರು ಆಳುತ್ತಿದ್ದರು.
ಬನವಾಸಿ ಕದಂಬರಿಗೆ ಇವರು ಅಧೀನರಾಗಿದ್ದರು ಎನ್ನುವುದು ತಾಳಗುಂದದ ಸ್ತಂಭ ಶಾಸನದಿಂದ ತಿಳಿದು ಬರುತ್ತದೆ. ಬಾದಾಮಿಯ ಚಾಳುಕ್ಯರಿಗೆ ಮತ್ತು ಮಾನ್ಯಖೇಟದ ರಾಷ್ಟ್ರಕೂಟರಿಗೆ, ಕಂಚಿಯ ಪಲ್ಲವರಿಗೆ ಹೀಗೆ ಒಬ್ಬರ ಮೇಲೊಬ್ಬರಿಗೆ ಅಧೀನರಾಗುತ್ತಾ ಬಂದರು. ಬಾಣರು ದೀರ್ಘಕಾಲದ ಇತಿಹಾಸವನ್ನು ಹೊಂದಿದ್ದರೂ ಕರ್ನಾಟಕದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡು ಸಾಮ್ರಾಜ್ಯ ಸ್ಥಾಪಿಸಲೇ ಇಲ್ಲ.
ಆರಂಭ ಕಾಲದ ಬಾಣರು ಅಶೋಕನ ಲಿಪಿಯ ಕೊಡುಗೆಯ ನಂತರದ ಸಂಕ್ರಮಣ ಕಾಲದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಬಾಣರು ಲಿಪಿಯ ಸಮ್ವಹನದಲ್ಲಿ ಬಹಳ ಕೆಲಸ ಮಾಡಿದ್ದಾರೆ ಇವರ ಕಾಲದ ಅಂದರೆ ಕ್ರಿ ಶ ೩೩೯ರಲ್ಲಿಯೇ ಮುಳಬಾಗಿಲಿನ ಮುದನೂರು ಎನ್ನುವಲ್ಲಿ ಶಾಸನ ಬರೆಸುತ್ತಾರೆ. ಪೆರುಂಬನಪ್ಪಾಡಿ ಅಥವಾ ವಾನಪುರಂ - ಬಾಣಪುರಂ ಎನ್ನುವ ಸ್ಥಳದ ವಿವರ ಕೋಲಾರದಲ್ಲಿ ದೊರೆತಿರುವ ಶಾಸನಗಳಲ್ಲಿ ಕಂಡು ಬರುತ್ತದೆ. ಗಂಗರ ಮೊದಲ ದೊರೆ ಬಾಣರ ರಾಜ್ಯವನ್ನು ಗೆದ್ದದ್ದು ಉಲ್ಲೀಖಿಸಲಾಗಿದೆ. ಬಾದಾಮಿ ಚಳುಕ್ಯರ ಮೊದಲನೇ ವಿಕ್ರಮಾದಿತ್ಯನು ಮಹಾವಲಿ ಬಾಣವಂಶದ ರಾಜಮಲ್ಲನನ್ನು ಸೋಲಿಸಿದ್ದ. ಚೋಳದೊರೆ ವೀರ ನಾರಾಯಣ ಎನ್ನುವವನು 9ನೇ ಶತಮಾನದಲ್ಲಿ ಇವರನ್ನು ನಿರ್ಮೂಲನಮಾಡಿ ಓಡಿಸಿದ್ದ ಆದರೆ ಗಂಗ ಹಸ್ತಿಮಲ್ಲ ಎನ್ನುವವನು ರಾಜ್ಯವನ್ನು ಹಿಂದಿರುಗಿಸಿದ್ದು ಶಾಸನಗಳಿಂದ ತಿಳಿದು ಬರುತ್ತದೆ.
ಬಾಣರು ಅವರ ಸಮಕಾಲೀನ ರಾಜರುಗಳೊಡನೆ ಸಂಬಂಧ ಬಳಸಿದ್ದು ಅಂದರೆ ದ ದಖ್ಖನ್ನಿನ ದಕ್ಷಿಣದ ತುದಿಯ ಚಿಕ್ಕ ಭಾಗದಲ್ಲಿ ಒಂದು ಸಣ್ನಗುಂಪಾಗಿ ವಾಸಿಸುತ್ತಿದ್ದರು. ಅವರ ವಸತಿಯನ್ನು ಪುದಲಿ ಅಥವಾ ಪುದಲ್ ನಾಡು ಎಂದು ಕರೆಯಲಾಗುತ್ತಿತ್ತು. ಇದು ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಕೋಲಾರ ಮರುಕರ ವಿಷಯ ಗುಬ್ಬಿ ತಾಲೂಕು, ಕೈವಾರವಿಷಯ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕನ್ನು ಒಳಗೊಂಡಿತ್ತು. ದಟ್ತವಾದ ಕಾಡುಗಳಿಂದ ಈ ಪ್ರದೇಶವೆಲ್ಲಾ ಇದ್ದುದರಿಂದ ಅಶೋಕನದ್ದೆನ್ನುವ ಯಾವ ಶಾಸನಗಳೂ ಈ ಪ್ರದೇಶದಲ್ಲಿ ಕಾಣಸಿಗುತ್ತಿಲ್ಲ. ಮತ್ತು ಅಶೋಕನ ಶಾಸನಗಳಲ್ಲಿಯೂ ಈ ರಾಜ್ಯದ ಉಲ್ಲೇಖ ಸಿಗುವುದಿಲ್ಲ. ತಮಿಳಿನ ಶಾಸನದಲ್ಲಿ ಪೆರುಂಬನಪ್ಪಾಡಿ ಎಂಬ ಪದ ಕಾಣಿಸಿಕೊಳ್ಳುತ್ತದೆ. ಈ ಪೆರುಂಬನಪ್ಪಾಡಿ ಎನ್ನುವ ಪದ ಕದಂಬರ ತಾಳಗುಂದದ ಸ್ತಂಬ ಶಾಸನದಲ್ಲಿ ಉಲ್ಲೇಖಿತವಾಗಿರುವ ಬೃಹದ್ಬಾಣದ ಎಂಬುದರ ತಮಿಳು ಸ್ವರೂಪ.
ಬಾಣರು ಮೊದಲು ಶಾತವಾಹನ ಮತ್ತು ಪಲ್ಲವರ ಸಾಮಂತರಾಗಿದ್ದರು . ಆದರೆ ಬಾದಾಮಿ ಚಲುಕ್ಯರ ಪ್ರಾಬಲ್ಯ ಹೆಚ್ಚಿದಂತೆಲ್ಲಾ ದಕ್ಷಿಣಕ್ಕೆ ತಳ್ಳಲ್ಪಟ್ಟರು. ಮಯೂರವರ್ಮ ಬೃಹದ್ಬಾಣರಿಂದ ಕಪ್ಪಗಳನ್ನು ಪಡೆಯುತ್ತಿದ್ದ ಸಮಯದಲ್ಲಿಯೇ ಗಂಗರು ಮತ್ತು ಪಲ್ಲವರ ಸಾಮಂತರಾಗಿದ್ದರೆನ್ನುವುದು ತಿಳಿದು ಬರುತ್ತದೆ.
ಕೂಡಲೂರು, ದೇವನಹಳ್ಳಿ ಮತ್ತು ಮಳವಳ್ಳಿ ಶಾಸನದ ಉಲ್ಲೇಖದಂತೆ ಕೊಂಗುಣಿ ವರ್ಮನು ಬಾಣರ ರಾಜ್ಯವನ್ನು ಮುತ್ತಿ ಅವರನ್ನು ಕೋಲಾರದಿಂದ ಓಡಿಸಿ ವಶಪಡಿಸಿಕೊಂಡ ಎನ್ನುವುದಾಗಿ ತಿಳಿದು ಬರುತ್ತದೆ. ಆದರೆ ಬಾದಾಮಿ ಚಳುಕ್ಯ ಎರಡನೇ ಪೊಲೆಕೇಶಿಯು ವೆಂಗಿ ಮತ್ತು ಪಲ್ಲವರ ಕಂಚಿಯನ್ನು ಗೆದ್ದು ಈ ಬಾಣರೊಂದಿಗೆ ವ್ಯವಹರಿಸುವುದರಿಂದ ಮುಂದೆ ಕರ್ನಾಟಕದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳುತ್ತಾರೆ. ಚಾಲುಕ್ಯರಿಗೆ ಸಾಮಂತರಾಗಿ ಪೆರ್ಬಾಣವಂಶದವರಾಗಿ ಅನೇಕ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ.
ಕಟವಪ್ರ ಬೆಟ್ಟ ಅಥವಾ ಶ್ರವಣಬೆಳಗೊಳದಲ್ಲಿ ಜೈನ ಗುರುವೊಬ್ಬನ ಅವಸಾನ ಕಾಲದಲ್ಲಿ ಬಾಣರ ದಿಂಡಿಗನೆನ್ನುವವನೊಬ್ಬ ಹಾಜರಿದ್ದನೆಂದು ಶಾಸನದಿಂದ ತಿಳಿದು ಬರುತ್ತದೆ. ಅಲ್ಲಿಗೆ ಗಂಗದೊರೆಗಳಿಗೂ ಇವರು ಸಾಮಂತರಾಗಿದ್ದರು ಎನ್ನುವುದು ಖಚಿತವಾಗುತ್ತದೆ. ಬಾಣರ ಚರಿತ್ರೆಯಲ್ಲಿ ನಮ್ಮನಾಳಿದ ಮೂರನೆಯ ವಿಕ್ರಮಾದಿತ್ಯನೇ ಕೊನೆಯವನೆಂದು ತಿಲಿದು ಬರುತ್ತದೆ. ವೈದ್ಯನಾಥ ತನ್ನ ಪ್ರತಾಪರುದ್ರೀಯದಲ್ಲಿ ಹನ್ನೆರಡನೇ ಶತಮಾನದ ದಕ್ಷಿಣ ಭಾರತವನ್ನು ಉಲ್ಲೇಖಿಸುವಾಗ ಅಲ್ಲಿ ಈ ಬಾಣರ ರಾಜ್ಯವನ್ನು ಹೆಸರಿಸುವುದು ಕಂಡು ಬರುತ್ತದೆ. ಪ್ರಾಕೃತ ಭಾಷೆಯ ತ್ರಿವಿಕ್ರಮ ವಿಟ್ಟ ಎನ್ನುವ ವ್ಯಾಕರಣ ಶಾಸ್ತ್ರದ ಕರ್ತೃ ತ್ರಿವಿಕ್ರಮ ದೇವನು ಇದೇ ಬಾಣ ವಂಶಸ್ಥನು.

No comments:

Post a Comment