Search This Blog

Thursday 14 June 2018

ರಂತಿದೇವನ "ಮಹಾನಸ" ಮಾಂಸಾಹಾರವೇ ?


ಇಂದು ಹೇಗೆ ಪುರಾಣಗಳನ್ನು ತಮ್ಮದೇ ಆದ ತಪ್ಪು ಕಲ್ಪನೆಗಳಿಂದ ಅರ್ಥೈಸುವಿಕೆಯಲ್ಲಿ ಎಡವಿ ನಾವು ಅಪಹಾಸ್ಯ ಮಾಡುತ್ತಿದ್ದೆವೋ ಇವೆಲ್ಲವೂ ನಮಗೆ ಇಂದಿನ ಕೊಡುಗೆಯಲ್ಲ. ಪ್ರಾಚೀನ ಭಾರತದ ರಾಜರುಗಳು ತಮ್ಮ ಸ್ವಪ್ರತಿಷ್ಠೆಗೋ ತಾವು ಯಾವುದೋ ಧರ್ಮವೊಂದನ್ನು ಅಪ್ಪಿ ಮುದ್ದಾಡಿ ಸ್ವೀಕರಿಸಿ. ಹಿಂದಿನ ಧರ್ಮವನ್ನು ಹೀಯಾಳಿಸುವ ಪರಿಪಾಟ ಇಟ್ಟುಕೊಂಡಂತೆ ಭಾಸವಾಗುತ್ತದೆ.
ರಾಜಾ ರಂತಿದೇವ ಚಂದ್ರವಂಶದ ಸಂಕೃತಿ ಎನ್ನುವವನ ಮಗ. ವೇದ ವೇದಾಂಗಗಳನ್ನು ಅಭ್ಯಸಿಸಿದ್ದ. ಧಾರ್ಮಿಕನಾಗಿದ್ದ. ಅವನ ಕುರಿತು ಮಹಾಭಾರತದಲ್ಲಿ ಅನೇಕ ಕಥೆಗಳು ಬರುತ್ತವೆ ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನಾನು ಹೇಳುತ್ತೇನೆ.
ನಾರದರು ಸೃಂಜಯನನ್ನು ಸಮಾಧಾನಗೊಳಿಸಲು ರಂತಿದೇವನ ಕಥೆಯನ್ನು ಹೀಗೆ ಹೇಳುತ್ತಾರೆ "ಸೃಂಜಯ, ರಂತಿದೇವನ ಪಾಕಶಾಲೆಯಲ್ಲಿ ಎರಡು ಲಕ್ಷ ಮಂದಿ ಅಡಿಗೆಯವರಿದ್ದರು. ರಾಜನ ಅರಮನೆಗೆ ಅತಿಥಿಗಳಾಗಿ ಬಂದ ಬ್ರಾಹ್ಮಣರಿಗೆ ಅಮೃತಕ್ಕೆ ಸಮಾನವಾದ, ಪಕ್ವಮಾಡಿದ್ದ ಮತ್ತು ಪಕ್ವಮಾಡದೇ ಇದ್ದ ರುಚಿಕರವಾದ ಶ್ರೇಷ್ಠ ಭೋಜನವನ್ನು ಹಗಲೂ-ರಾತ್ರಿಗಳೆಂಬ ಯಾವುದೇ ಅಡೆತಡೆಗಳಿಲ್ಲದೇ ಪರಿಚಾರಕರು ಬಡಿಸುತ್ತಿದ್ದರು. ಅಂತಹ ರಂತಿದೇವನೂ ಕಾಲವಶನಾದ ನೆಂದು ನಾವು ಕೇಳಿದ್ದೇವೆ. ರಂತಿದೇವನು ನ್ಯಾಯರೀತಿಯಲ್ಲಿ ಸಂಪಾದಿಸಿದ ಧನವನ್ನು ಬ್ರಾಹ್ಮಣರಿಗೆ ದಾನಮಾಡುತ್ತಿದ್ದನು. ವೇದಗಳನ್ನು ಅಧ್ಯಯನ ಮಾಡಿದ ರಂತಿದೇವನು ಧರ್ಮಮಾರ್ಗದ ಮೂಲಕವಾಗಿಯೇ ಶತ್ರುಗಳೆಲ್ಲರನ್ನೂ ಜಯಿಸಿದ್ದನು. ಸುವರ್ಣಮಯವಾದ ಮತ್ತು ಬಂಗಾರದ ನಾಣ್ಯಗಳನ್ನು ಬ್ರಾಹ್ಮಣರಿಗೆ ದಾನಮಾಡುತ್ತಿದ್ದಾಗ, ಪ್ರತಿಯೊಬ್ಬ ಬ್ರಾಹ್ಮಣರಿಗೂ ಸುವರ್ಣ ನಾಣ್ಯವನ್ನು ಕೊಡುತ್ತಿದ್ದನು. ರಂತಿದೇವನು ಪ್ರತಿದಿನ ಸಾವಿರ, ಕೋಟಿ ನಿಷ್ಕಗಳನ್ನು ದಾನಮಾಡುತ್ತಿದ್ದರೂ–“ಇಂದು ನಾನು ಬಹಳ ಕಡಿಮೆಯಾಗಿ ದಾನಮಾಡಿದೆನು ಎಂಬ ಬೇಸರದಿಂದ ಪುನಃ ಪುನಃ ದಾನಮಾಡುತ್ತಿದ್ದನು. *ನಿಷ್ಕ ಎಂದರೆ ಒಂದು ಸಾವಿರ ಚಿನ್ನದ  ಹೋರಿಗಳು, ಅವುಗಳ ಜೊತೆಗೆ ನೂರು ಹಸುಗಳು ಮತ್ತು ಒಂದು ನೂರ ಎಂಟು ಸುವರ್ಣಮುದ್ರೆಗಳು ಇವಿಷ್ಟಕ್ಕೆ ನಿಷ್ಕ ಅಥವಾ ಧನ ಎಂದು ಹೇಳುತ್ತಿದ್ದರು. ನೂರು ವರ್ಷಗಳ ತನಕ ಪ್ರತಿಯೊಂದು ಪಕ್ಷದಲ್ಲಿಯೂ ರಂತಿದೇವನು ಬ್ರಾಹ್ಮಣರಿಗೆ ಅಗ್ನಿಹೋತ್ರೋಪಕರಣಗಳನ್ನೂ, ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನೂ ದಾನಮಾಡುತ್ತಿದ್ದನು. ಋಷಿಗಳಿಗೆ ಕಮಂಡಲುಗಳನ್ನೂ, ಕುಂಭಗಳನ್ನೂ, ಸ್ಥಾಲಿಗಳನ್ನೂ, ಮಣ್ಣಿನ ಪಾತ್ರೆಗಳನ್ನೂ ಶಯನಾಸನ, ಯಾನಗಳನ್ನೂ, ಪ್ರಾಸಾದಗಳನ್ನೂ, ಮನೆಗಳನ್ನೂ, ವಿವಿಧ ವೃಕ್ಷಗಳನ್ನೂ, ಅನ್ನವನ್ನೂ ಮತ್ತು ಧನವನ್ನೂ ದಾನವಾಗಿ ಕೊಡುತ್ತಿದ್ದನು.
ರಂತಿದೇವನ ಎಲ್ಲ ಕೊಡುಗೆಗಳೂ ಸುವರ್ಣಮಯವಾಗಿಯೇ ಇರುತ್ತಿದ್ದುವು. ರಂತಿದೇವನ ಕುರಿತಾದ ಶ್ಲೋಕವೊಂದು.
ನೈತಾದೃಶಂ ದೃಷ್ಟಪೂರ್ವಂ ಕುಬೇರಸದನೇಷ್ವಪಿ  | ಧನಂ ಪೂರ್ಯಮಾಣಂ ನಃ ಕಿಂ ಪುನರ್ಮನುಜೇಷ್ವಿತಿ  | |
ರಂತಿದೇವನಲ್ಲಿರುವಂತಹ ಧನದ ರಾಶಿಯನ್ನು ನಾವು ಕುಬೇರನ ಮನೆಯಲ್ಲಿಯೂ ಕಾಣಲಿಲ್ಲ. ಹೀಗಿರುವಾಗ ಮಾನವರ ಮನೆಗಳಲ್ಲಿ ಇಂತಹ ಧನರಾಶಿಯನ್ನು ನೋಡಲು ಹೇಗೆ ತಾನೇ ಸಾಧ್ಯವಾದೀತು? ವಾಸ್ತವವಾಗಿ ರಂತಿದೇವನ ಸಮೃದ್ಧಿಯ ಸಾರವು ಅವನ ಸುವರ್ಣಮಯವಾದ ರಾಜಭವನ ಮತ್ತು ಸುವರ್ಣಮುದ್ರೆಗಳ ರಾಶಿಯೇ ಆಗಿದೆಎಂಬುದಾಗಿ ಹೇಳಿಕೊಂಡು ಆಶ್ಚರ್ಯಪಡುತ್ತಿದ್ದರು.
ಅನ್ನಂ ನೋ ಬಹು ಭವೇದತಿಥೀಂಶ್ಚ ಲಭೇಮಹಿ | ಶ್ರದ್ಧಾ ನೋ ಮಾ ವ್ಯಗಮನ್ಮಾ ಯಾಚಿಷ್ಮ ಕಂಚನ ||
ನಮ್ಮ ಬಳಿಯಲ್ಲಿ ಅನ್ನವು ಯಾವಾಗಲೂ ಯಥೇಚ್ಛವಾಗಿರಲಿ. ಸೇವೆಮಾಡಲು ಅತಿಥಿಗಳು ಯಾವಾಗಲೂ ನಮಗೆ ಲಭಿಸಲಿ. ಧರ್ಮ ಶ್ರದ್ಧೆಯು ಯಾವಾಗಲೂ ನಮ್ಮಿಂದ ದೂರಸರಿಯದಿರಲಿ. ನಾವು ಯಾವಾಗಲೂ ಯಾರನ್ನೂ ಯಾಚನೆಮಾಡದಿರುವಂತಾಗಲಿ.
ಉಪಾತಿಷ್ಠನ್ತ ಪಶವಃ ಸ್ವಯಂ ತಂ ಸಂಶಿತವ್ರತಮ್ | ಗ್ರಾಮ್ಯಾರಣ್ಯಾ ಮಹಾತ್ಮಾನಂ ರನ್ತಿದೇವಂ ಯಶಸ್ವಿನಮ್ || ಕಠೋರವ್ರತನಿಷ್ಠನಾದ, ಮಹಾತ್ಮನಾದ, ಯಶೋವಂತನಾದ, ರಂತಿ ದೇವನ ಬಳಿಗೆ ಗ್ರಾಮ್ಯಪಶುಗಳಾದ ಹಸು-ಕುರಿ-ಆಡು ಮುಂತಾದುವು, ಅರಣ್ಯಪಶುಗಳಾದ ಜಿಂಕೆ ಮುಂತಾದುವು ತಾವಾಗಿಯೇ ಬರುತ್ತಿದ್ದವಂತೆ.
ಮಹಾನದೀ ಚರ್ಮರಾಶೇರುತ್ಕ್ಲೇದಾತ್ಸಸೃಜೇ ಯತಃ | ತತಶ್ಚರ್ಮಣ್ವತೀತ್ಯೇವಂ ವಿಖ್ಯಾತಾ ಸಾ ಮಹಾನದೀ || ಚರ್ಮರಾಶಿ ಎಂದರೆ ಇಲ್ಲಿ ಪ್ರಾಣಿಗಳಲ್ಲಿ ಒಸರುತ್ತಿದ್ದ ಬೆವರನ್ನು ತೊಳೆದ ನೀರಿನಿಂದಲೇ ಮಹಾನದಿಯು ಹುಟ್ಟಿತಾದ್ದರಿಂದ ಚರ್ಮಣ್ವತೀ (ಚಂಬಲ್) ಎಂಬ ಹೆಸರಿನಿಂದಲೇ ನದಿಯು ಖ್ಯಾತಿಯನ್ನು ಹೊಂದಿತಂತೆ.
ಇಂತಹ ಧರ್ಮಾತ್ಮನಾದ ರಂತಿದೇವ ಯಾಗಗಳನ್ನು ಮಾಡಿದ್ದ. ಆ ಕಥೆಯನ್ನೇ ತಿರುಚಿ ಸಾವಿರಾರು ಪಶುಗಳನ್ನು ಕಡಿದು ಅದರ ರಕ್ತದಿಂದ ಹರಿದ ನೀರೇ ಚರ್ಮಣ್ವತಿ ನದಿ ಎನ್ನುವ ಸಾಹಸ ಮಾಡಿದ್ದು ಕ್ರಿಸ್ತ ಪೂರ್ವದ ೨೩೪ ರ ಸುಮಾರಿಗೆ.
ಈ ರಂತಿದೇವನ ಪಾಕಶಾಲೆ “ಮಹಾನಸ” ಎನ್ನಿಸಿಕೊಂಡಿತ್ತು. ಅತ್ಯಂತ ಬೃಹತ್ತಾದ ಅಡುಗೆ ಮನೆಯನ್ನು ಮತ್ತು ಸಾವಿರಕ್ಕೂ ಮಿಕ್ಕಿ ಇರುತ್ತಿದ್ದ ಬಾಣಸಿಗರ ಪಾಕಶಾಲೆಯನ್ನು ಮಹಾನಸ ವೆನ್ನಲಾಗುತ್ತಿತ್ತೇ ವಿನಃ ಅದು ಮಾಂಸಾಹಾರೀ ಭೋಜನ ಗೃಹವೆಂದು ಹೇಳಿದ್ದು ನನ್ನ ಗಮನಕ್ಕೆ ಬಂದಿಲ್ಲ. ಇಂತಹ ಮಹಾನಸವನ್ನು ರಂತಿದೇವ ಹೊಂದಿದ್ದ. ಆ ಮಾತ್ರಕ್ಕೆ ರಂತಿದೇವ ಪ್ರತಿ ದಿನವೂ 2 ಸಾವಿರ ಪಶುಗಳನ್ನು ಕೊಂದು ಅಡುಗೆ ಮಾಡಿಸುತ್ತಿದ್ದ ಅನ್ನುವ ಕಪೋಲಕಲ್ಪಿತ ಉಲ್ಲೇಖಗಳು ಸೇರ್ಪಡೆಗೊಂಡದ್ದು ಆಶ್ಚರ್ಯವೆನ್ನಿಸುತ್ತದೆ.
ರಂತಿದೇವನ ಕುರಿತಾದ ಇನ್ನೊಂದು ಕಥೆ ಹೀಗಿದೆ. ರಂತಿದೇವ ತಾನ್ನ ಮಗ ಮತ್ತು ತನ್ನ ಮಡದಿ ಮತ್ತು ಪರಿವಾರದೊಂದಿಗೆ ಅರಣ್ಯದಲ್ಲಿ ತಪಸ್ಸು ಮಾಡುತ್ತಾ ಕಾಲಕಳೆಯುತ್ತಿರುತ್ತಾನೆ. ಆತ 48 ದಿನಗಳ ಉಪವಾಸ ವ್ರತದೊಂದಿಗೆ ತಪಸ್ಸು ಮಾಡುತ್ತಿರಬೇಕಿದ್ದರೆ 49ನೇ ದಿನ ಆತನಿಗೆ ದಿವ್ಯವಾದ ಭೋಜನ ದೇವಲೋಕದಿಂದ ಬರುತ್ತದೆ. ರಂತಿದೇವ ಅದನ್ನು ತನ್ನ ಪತ್ನಿ ಮತ್ತು ಮಗನಿಗೆ ಕೊಟ್ಟು ಪರಿವಾರಕ್ಕೆ ಹಂಚಿ ಉಳಿದಿದ್ದದ್ದನ್ನು ತಾನು ತಿನ್ನ ಬೇಕು ಅನ್ನುವಷ್ಟರಲ್ಲಿ ಒಬ್ಬ ಬ್ರಾಹ್ಮಣ ಬರುತ್ತಾನೆ. ಆ ಬ್ರಾಹ್ಮಣನಿಗೆ ಊಟವನ್ನು ಕೊಟ್ಟು ತೃಪ್ತಿಪಡಿಸುತ್ತಾನೆ. ಇನ್ನೇನು ಉಳಿದದ್ದು ತಿನ್ನ ಬೇಕೆನ್ನುವಾಗ ಒಬ್ಬ ಶೂದ್ರ ಬಂದು ಆಹಾರವನ್ನು ಯಾಚಿಸುತ್ತಾನೆ. ಅವನಿಗೂ ಕೊಡುತ್ತಾನೆ. ಶೂದ್ರನೂ ತೃಪ್ತನಾಗಿ ಹೋಗುತ್ತಾನೆ. ಆಮೇಲೆ ಒಬ್ಬ ಬೇಡ ಕೆಲವು ನಾಯಿಗಳೊಂದಿಗೆ ಬಂದು ಆಹಾರ ಕೊಡೆಂದು ಬೇಡುತ್ತಾನೆ. ರಂತಿದೇವ ಅವನಿಗೂ ಆಹಾರಕೊಟ್ಟು ನಾಯಿಗಳಿಗೂ ನೀಡು ನಮಸ್ಕರಿಸಿ ನಿಂತುಕೊಳ್ಳುತ್ತಾನೆ. ಬೇಡರವನೂ ತೃಪ್ತನಾಗಿ ಹೋಗುತ್ತಾನೆ. ಈಗ ಉಳಿದಿರುವುದು ನೀರು ಮಾತ್ರ, ರಂತಿದೇವ ಅದನ್ನೇ ಕುಡಿಯ ಬೇಕೆನ್ನುವಾಗ ಬಾಯಾರಿಕೆಯಿಂದ ಬಳಲಿದವನೊಬ್ಬ ನೀರು ಕೊಡು ಎಂದು ಬೇಡುತ್ತಾನೆ. ಇವೆಲ್ಲವನ್ನು ಕೊಟ್ಟ ಮೇಲೂ ರಂತಿದೇವ ಎಲ್ಲವೂ ಭಗವಂತನಿಗೆ ಸಮರ್ಪಿಸುತ್ತಿದ್ದೇನೆನ್ನುವ ಭಾವದಿಂದ ಇದ್ದ ಆಗ ಬ್ರಹ್ಮನೇ ಮೊದಲಾದ ದೇವತೆಗಳು ಪ್ರತ್ಯಕ್ಷರಾಗುತ್ತಾರೆ. ರಂತಿದೇವ ಅವರನ್ನು ಕಂಡೊಡನೆ ಭಕ್ತಿಯಿಂದ ಅವರಿಗೆ ನಮಸ್ಕರಿಸಿ ಉಅಪಚರಿಸುತ್ತಾನೆ. ಆದರೆ ಯಾವೊಂದು ವರವನ್ನೂ ಯಾಚಿಸುವುದಿಲ್ಲ. ಆಗ ಬ್ರಹ್ಮನೇ ವರ ಕೇಳು ಎಂದರೂ ನಿರ್ವಿಕಾರನಾಗಿದ್ದದ್ದನ್ನು ಕಂಡು ಅವನಿಗೆ ಅವನ ಮಾಯಾ ಕವಚದ ಪಾಶವನ್ನು ಕಳಚಿ ಅವನಿಗೆ ಪರಮ ಪದವನ್ನು ಕರುಣಿಸುತ್ತಾರೆ ಜೊತೆಗೆ ಅವನ ಪರಿವಾರಕ್ಕೂ ಹರಸುತ್ತಾರೆ. ಇದು ಒಂದು ಕಥೆ. ಎಲ್ಲಾ ಕಡೆಗಳಲ್ಲಿಯೂ ರಂತಿದೇವನನ್ನು ಹಿಂಸಾವಾದಿ ಅಥವಾ ಅವನು ಅಂತಹ ಪಶುಗಳ ಹಿಂಸಕನೆನ್ನುವ ಯಾವುದೇ ಅಂಶ ಸಿಗುವುದಿಲ್ಲ.
ಕ್ರಿಸ್ತ. ಪೂರ್ವ 272 ರಿಂದ 232 ರ ತನಕ ಬರೆಸಿದ ಹೆಬ್ಬಂಡೆ ಶಾಸನ ಒಂದರಲ್ಲಿ ಇದು ಕಂಡು ಬರುತ್ತದೆ. ಅಲ್ಲಿ ಮಹಾನಸ ಎನ್ನುವ ಪದದ ಜೊತೆಗೆ ರಂತಿದೇವನ ಉಲ್ಲೇಖವೂ ಸಿಗುತ್ತದೆ. ರಂತಿದೇವನಂತೆ ಮಹಾನಸ ಹೊಂದಬೇಡಿ. ಅವನಂತೆ ಹಿಂಸಕರಾಗದಿರಿ. ಪ್ರತಿದಿನವೂ ಮಾಂಸಾಹಾರ ಮಾಡಬೇಡಿ ಶಾಸನದ ಕೊನೆಗೆ 2 ನವಿಲುಗಳನ್ನು ಮತ್ತು ಒಂದು ಜಿಂಕೆಯನ್ನಾದರೂ ಕೊಲ್ಲದೇ ರಕ್ಷಿಸಿ ಎನ್ನಲಾಗಿದೆ. ಈ ಮೂರು ಪ್ರಾಣಿಗಳ ವಧೆ ಮಾಡಬೇಡಿ ಎನ್ನಲಾಗಿದೆ. ರಂತಿದೇವನ ಧರ್ಮಸಂರಕ್ಷಣೆ ಕಣ್ಣಿಗೆ ಕಾಣದೇ ಅದನ್ನು ಹಿಂಸೆಗೆ ತಿರುಗಿಸಿದ್ದು ನನಗಂತೂ ಬೇಸರತರಿಸುತ್ತದೆ.



No comments:

Post a Comment