Search This Blog

Saturday 16 June 2018

“ದಸ್ಯು”ಗಳು ಯಾರು ???



ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಕಥೆ ಬರುತ್ತದೆ. ಇಂದ್ರ ವೃತ್ರಾಸುರನನ್ನು ಸಂಹರಿಸಿದ ಬಳಿಕ ಬರುವ ಕಥೆ ಇದು. ನಮುಚಿ ಎನ್ನುವ ಅಸುರನೊಬ್ಬ ಪ್ರಬಲನಾಗಿದ್ದ ಈತ ಸದಾಕಾಲ ಇಂದ್ರನಿಗೆ ಉಪಟಳ ಕೊಡುವುದು ಯುದ್ಧಕ್ಕೆ ಬರುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ. "ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚಿಃ" ಅಂದರೆ ಇಂದ್ರನೊಡನೆ ಈತನ ಯುದ್ಧ ಕೊನೆಯಾಗುತ್ತಲೇ ಇರಲಿಲ್ಲವಂತೆ. ಇಂದ್ರನ ಯಾವ ವಿಧವಾದ ಆಯುಧಗಳಿಗೂ ಈತ ಜಗ್ಗುತ್ತಿರಲಿಲ್ಲ. ಇಂದ್ರ ಆಲೋಚಿಸಿದ, ಈತ ನನ್ನ ಯಾವುದೇ ಅಸ್ತ್ರಕ್ಕೂ ಮನಿಯುವವನಲ್ಲ ಈತನನ್ನ ನನ್ನ ಶರೀರ ಬಲದಿಂದಲೇ ಬಗ್ಗಿಸ ಬೇಕೆಂದು ಮಲ್ಲ ಯುದ್ಧವನ್ನು ಆರಂಭಿಸಿದ. ಈಗ ನಮುಚಿಯ ಹಿಡಿತವೇ ಬಲವಾಗುತ್ತಾ ಸಾಗಿತು ನಮುಚಿಯಿಂದ ಬಿಡಿಸಿಕೊಳ್ಲಲು ಅಸಾಧ್ಯವಾಗುತ್ತಾ ಬಂತು. ಆಗ ನಮುಚಿಯು ಇಂದ್ರನನ್ನು ಕುರಿತು ತಾನು ಹೇಳಿದಂತೆ ಕೇಳುವುದಾದರೆ ಮಾತ್ರ ಬಿಡುವೆನು ಎಂದು ಹೇಳುತ್ತಾನೆ. ಅದಕ್ಕೆ ಇಂದ್ರನು ಒಪ್ಪಿಕೊಂಡು ಅವನ ಹಿಡಿತದಿಂದ ಬಿಡುವಂತೆ ಹೇಳುತ್ತಾನೆ. ಆಗ ಇಬ್ಬರಲ್ಲೂ ಒಂದು ಒಪ್ಪಂದವಾಗುತ್ತದೆ. ಇಂದ್ರ ! ನೀನು ಪುನಃ ನನ್ನೊಂದಿಗೆ ಯಾವುದಾದರೂ ಉಪಾಯ ಹೂಡಿ ನನ್ನನ್ನು ಕೊಲ್ಲಬೇಕೆಂದು ಬರಬಹುದು ಆದರೆ ನನ್ನನ್ನು ಕೊಲ್ಲಬೇಕೆನ್ನುವ ಉದ್ದೇಶ ಈಡೇರಬೇಕಿದ್ದರೆ ನಿನ್ನ ಆಯುಧ ಹಸಿಯಾಗಿರಕೂಡದು ಒಣಗಿರಕೂಡದು. ಹಗಲಿನಲ್ಲಿಯೂ ಹಾಗೂ ರಾತ್ರಿಯಲ್ಲಿಯೂ ನನ್ನನ್ನು ಕೊಲ್ಲಕೂಡದು. ಈ ನಿಯಮಗಳಿಗೆ ನೀನು ಒಪ್ಪುವೆಯಾದರೆ ಬಿಡುತ್ತೇನೆ ಎನ್ನುತ್ತಾನೆ. ಕೂಡಲೇ ಇಂದ್ರ ಒಪ್ಪಿಕೊಳ್ಳುತ್ತಾನೆ. ತಕ್ಷಣ ನಮುಚಿ ಇಂದ್ರನನ್ನು ಬಿಡುತ್ತಾನೆ. ಹೀಗೇ ಕೆಲವು ಸಮಯ ಕಳೆಯುತ್ತದೆ. ಇಂದ್ರನಿಗೆ ಅವನನ್ನು ಹೇಗೆ ಮುಗಿಸ ಬೇಕು ಎನ್ನುವ ಚಿಂತೆಯಾಗುತ್ತದೆ. ಹೀಗೇ ಆಲೋಚಿಸುತ್ತಿರುವಾಗ ಇಂದ್ರನಿಗೆ ತನ್ನೆದುರಿಗೆ ಇದ್ದ ಸಮುದ್ರದ ಅಲೆ ಕಾಣಿಸುತ್ತದೆ. ತಟ್ಟನೆ ಆಲೋಚಿಸುತ್ತನೆ. ಇದೇ ಸೂಕ್ತ. ಸಮುದ್ರದ ನೊರೆ ಹಸಿಯೂ ಅಲ್ಲ ಒಣಗಿಯೂ ಇಲ್ಲ ಎಂದು ನಿರ್ಧರಿಸಿ ಅದನ್ನೇ ಆಯುಧವನ್ನಾಗಿ ಪರಿವರ್ತಿಸಿಕೊಂಡು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಉಷಃಕಾಲ ಹೇಗೂ ಸೂರ್ಯೋದಯವೂ ಆಗುವುದಿಲ್ಲ. ರಾತ್ರಿಯಂತೂ ಅಲ್ಲ. ಆದುದರಿಂದ ಅಂತಹ ಕಾಲದಲ್ಲಿ ನಮುಚಿಯನ್ನು ಕೊಲ್ಲಲು ಹೋಗುತ್ತಾನೆ. ನಮುಚಿಯನ್ನು ಆಯುಧದಿಂದ ಕತ್ತರಿಸುತ್ತಾನೆ. ಆಗ ನಮುಚಿ ಸಾಯದೇ ಇಂದ್ರನಿಗೆ ಮಿತ್ರದ್ರೋಹೀ ಎಂದು ಅಟ್ಟಿಸಿಕೊಂಡು ಬರುತ್ತಾನೆ. ಇಂದ್ರ ಭಯಗ್ರಸ್ತನಾಗುತ್ತಾನೆ. ಇಂದ್ರ ಆಗ ಅಪಾಮಾರ್ಗವೆನ್ನುವ ಸಸ್ಯವನ್ನು ಸೃಷ್ಟಿಸಿ ಅದರ ಸಮಿತ್ತಿನಿಂದಲೇ ತನ್ನ ವೀರ್ಯವೃದ್ಧಿಗಾಗಿ ಹೋಮಮಾಡಿ ಬಲ ಹೆಚ್ಚಿಸಿಕೊಂಡು ನಮುಚಿಯನ್ನು ಸಂಹರಿಸುತ್ತಾನೆ. ಇಂದಿಗೂ ವಿರೋಧಿಗಳ ಉಪಟಳದಿಂದ ಪಾರಾಗುವ ಸಲುವಾಗಿ ಅಪಾಮಾರ್ಗದಿಂದ ಸಮಿತ್ತುಗಳನ್ನು ತಯಾರಿಸಿ ಹೋಮಮಾಡುತ್ತಾರೆ. ಈ ನಮುಚಿ ದಸ್ಯುವಾಗಿದ್ದ. ದಸ್ಯುಗಳ ಕುರಿತಾಗಿ ಇನ್ನೊಂದು ಚಿಕ್ಕ ಕಥೆ.
ಗೃತ್ಸಮದ ಋಷಿಯು ಪೂರ್ವದಲ್ಲಿ ಅಂಗಿರಾ ಋಷಿಯ ಗೋತ್ರೋದ್ಭವನಾದ ಶುನಹೋತ್ರ ಎನ್ನುವ ಋಷಿಯ ಮಗನಾಗಿದ್ದನು. ಹಿಂದೊಮ್ಮೆ ಈತ ಯಜ್ಞ ಮಾಡುತ್ತಿದ್ದಾಗ ಅಸುರರ ಬಂದು ಈತನನ್ನ ಎತ್ತಿಕೊಂಡು ಹೋಗುತ್ತಾರೆ. ಆಗ ಇಂದ್ರನನ್ನು ಸ್ತುತಿಸಿ ಇಂದ್ರ ಈತನನ್ನು ಬಿಡಿಸಿ ತರುತ್ತಾನೆ. ಇಂದ್ರನ ಅಪ್ಪಣೆಯಿಂದಲೇ ಈತನಿಗೆ ಗೃತ್ಸಮದ ಎನ್ನುವ ಹೆಸರಾಯಿತಂತೆ. ಗೃತ್ಸಮದ ಎನ್ನುವುದು ಗೃತ್ಸಮದನ ಎಂದು, ಗೃತ್ಸ ಶಬ್ದಕ್ಕೆ ಮೇಧಾವಿ ಎನ್ನುವ ಅರ್ಥ ಇದ್ದರೂ ಸ್ತುತಿಕರ್ತ ಎನ್ನುವುದು ಮುಖ್ಯವಾಗುತ್ತದೆ. ಮದನ ಎಂದರೆ ಹರ್ಷದಿಂದ ಇರುವವನಿಗೆ ಹೇಲಲಾಗಿದೆ. ಭೃಗುಕುಲದ ಶುನಕ ಅಥವಾ ಶೌನಕನ ಪುತ್ರನೆನ್ನುವುದೂ ಇವನಿಗೆ ಪ್ರಸಿದ್ಧಿತಂದುಕೊಟ್ಟ ಹೆಸರು. ಕಾತ್ಯಾಯನ ಮಹರ್ಷಿಯ ಋಷ್ಯನುಕ್ರಮಣಿಕೆಯಲ್ಲಿ
ತ್ವಮಗ್ನ ಇತಿ ಗೃತ್ಸಮದಃ ಶೌನಕೋ ಭೃಗುತಾಂಗತಃ |
ಶೌನಹೋತೃಃ ಪ್ರಕೃತ್ಯಾ ತು ಯ ಆಂಗಿರಸ ಉಚ್ಚತ ಇತಿ ||
ತ್ವಮಗ್ನೇ ದ್ಯುಭಿಃ ಎನ್ನುವ ಸೂಕ್ತಕರ್ತಾರನಾದ ಗೃತ್ಸಮದನು ಆಂಗೀರಸ ವಂಶಸ್ಥನಾದ ಶುನಹೋತ್ರನ ಮಗನಾಗಿ ಜನಿಸಿದ್ದರೂ ಕಾರಣಾಂತರದಿಂದ ಭೃಗುಕುಲೋತ್ಪನ್ನವಾದ ಶುನಕನ ಪುತ್ರನೆಂದು ಪ್ರಸಿದ್ಧಿ ಪಡೆದಿರುವನು ಎನ್ನುವುದು ಇದರ ಅರ್ಥ. "ಶುನಹೋತ್ರೆಷು ಮತ್ಸ್ವಪ್ರಜಾಂ ದೇವೀ" ಎಂದು ಋಗ್ವೇದದ ಎರಡನೇ ಮಂಡಲದಲ್ಲಿ ಬರುತ್ತದೆ, ಶುನಹೋತ್ರ ಮತ್ತು ಅವನ ಮಕ್ಕಳು ಮೊಮ್ಮಕ್ಕಳನ್ನು ಹೇಳುತ್ತದೆ
ಗೃತ್ಸಮದನ ಕುರಿತಾಗಿ ಒಂದು ಕಥೆ ಪ್ರಸಿದ್ಧವಾಗಿದೆ. ಒಮ್ಮೆ ವೈನ ಎನ್ನುವವನ ಯಜ್ಞ ನಡೆಯುತ್ತಿತ್ತು. ಆ ಯಜ್ಞದಲ್ಲಿನ ಹವಿಸ್ಸನ್ನು ಸ್ವೀಕರಿಸಲು ಇಂದ್ರ ಮಿಕ್ಕೆಲ್ಲಾ ದೇವತೆಗಳೊಂದಿಗೆ ಅಲ್ಲಿ ಉಪಸ್ಥಿತನಿದ್ದ. ಅಸುರರು ಇದೇ ಸಮಯವನ್ನು ಕಾಯುತ್ತಿದ್ದರು ಹೇಗಾದರೂ ಮಾಡಿ ಇಂದ್ರನನ್ನು ಹತ್ಯೆಮಾಡಬೇಕು ಎಂದು. ತನ್ನ ತಪಸ್ಸಿನ ಪ್ರಭಾವದಿಂದ ಗೃತ್ಸಮದ ಈ ವಿಚಾರ ತಿಳಿದುಬಿಡುತ್ತಾನೆ. ಗೃತ್ಸಮದ ಯೋಚಿಸಿ ತನ್ನ ರೂಪವನ್ನು ಬದಲಿಸಿಕೊಂಡು ಇಂದ್ರನಂತೆ ರೂಪ ಧರಿಸಿ ಯಾಗ ಶಾಲೆಯಿಂದ ಓಡ ತೊಡಗುತ್ತಾನೆ. ಅಸುರರು ಅಂದರೆ ನಮುಚಿ ಮತ್ತು ಧುನಿ ಎನ್ನುವವರು. ಎಲ್ಲಾ ಕಡೆ ಓಡಿ ಎಲ್ಲಿಯೂ ಅವರ ಕೈಗೆ ಸಿಕ್ಕಿ ಬೀಳುವುದಿಲ್ಲ. ಕೊನೆಗೆ ಹೇಗೋ ಗೃತ್ಸಮದ ಅವರ ಕೈಗೆ ಸಿಕ್ಕಿಬಿದ್ದ. ಇನ್ನೇನು ಕೊಲ್ಲಬೇಕು ಅನ್ನುವಾಗ
ಯೋ ಜಾತ ಏವ ಪ್ರಥಮೋ ಮನಸ್ವಾನ್ ದೇವೋ ದೇವಾನ್ ಕ್ರತುನಾ ಪರ್ಯಭೂಷತ್ ಎನ್ನುವ ಇಂದ್ರನ ಸಾಹಸ ಕಾರ್ಯಗಳನ್ನೊಳಗೊಂಡ ಸೂಕ್ತವನ್ನು ಹೇಳುತ್ತಾನೆ. ಆಗ ಇಂದ್ರನ ಸಾಹಸದ ವಿಷಯಗಳನ್ನು ಕೇಳುತ್ತಾ ಅಸುರರು ಭೀತರಾಗುತ್ತಾರೆ. ಇದೇ ಸಮಯವೆಂದು ಭಾವಿಸಿದ ಇಂದ್ರನು ಧುನಿ ಮತ್ತು ಚುಮುರಿ ಎನ್ನುವ ಅಸುರರನ್ನು ಕೊಲ್ಲುತ್ತಾನೆ. (ವೇದದಲ್ಲಿ ಅಸುರ ಎನ್ನುವ ಪದವೇ ಉಪಯೋಗಿಸಲ್ಪಡುತ್ತದೆ). ಈ ಕಥೆಯ ಮೂಲ ಉದ್ದೇಶವನ್ನು ವಿವರಿಸಬೇಕಾಗಿದೆ.
ಯೇನೇಮಾ ವಿಶ್ವಾ ಚ್ಯವನಾ ಕೃತಾನಿ ಯೋ ದಾಸಂ ವರ್ಣ ಮಧರಂ ಗುಹಾಕಃ |
ಶ್ವಘ್ನೀವ ಯೋ ಜಿಗೀವಾಂ ಲಕ್ಷಮಾದದರ್ಯಃ ಪುಷ್ಟಾನಿ ಸ ಜನಾಸ ಇಂದ್ರಃ ||
"ಯಾವ ಇಂದ್ರನಿಂದ ನಶ್ವರವಾದ ಈ ಲೋಕವೆಲ್ಲಾ ಸ್ಥಿರವಾಗುಳಿಯುಂತೆ ನಿರ್ಮಿತವಾದವೋ, ನಾಶಕರಾದ ಮತ್ತು ನಿಕೃಷ್ಟವಾದ ಆಚಾರಗಳನ್ನು ಹೊಂದಿರುವ ಅಸುರರನ್ನು ಗುಹಾದಿಗಳಲ್ಲಿ ಸೇರುವಂತೆ ಮಾಡಿದನೋ ಹೀಗೆ ಗುರಿ ಇಟ್ಟದ್ದನ್ನು ತನ್ನ ಕಡೆ ಸೆಳೆದುಕೊಳ್ಳುವಂತೆ ಮಾಡಿಕೊಂಡನೋ ಮತ್ತು ಶತ್ರುತ್ವವನ್ನು ನಾಡಿ ಸಮೃದ್ಧಿಯನ್ನು ಹೊಂದುವಂತೆ ಮಾಡಿದನೋ ಅವನೇ ಇಂದ್ರನು. ಋಗ್ವೇದ  ಇಲ್ಲಿನ ದಾಸ ಎನ್ನುವ ಪದ ನಾಶಕ, ವಿನಾಶ ಎಂದೇ ಅರ್ಥೈಸುತ್ತದೆ ವಿನಃ ಅದು ದಾಸ್ಯವನ್ನಲ್ಲ.
ಯಃ ದಾಸ ವರ್ಣಂ ಅಧರಂ ಗುಹಾ ಅಕಃ ಆಚಾರವಂತರಾದ, ನೈಷ್ಟಿಕ ಕರ್ಮಗಳನ್ನು ನಡೆಸುತ್ತಿರುವ ಯಜ್ಞ ಯಾಗಾದಿಗಳಲ್ಲಿ ನಿರತರಾದ ಸಂಸ್ಕಾರವಂತ ಜನರನ್ನು ನಿಕೃಷ್ಟರಾದ ಗುಹಾದಿಗಳಲ್ಲಿ ವಾಸಿಸುತ್ತಿದ್ದ, ಪರ್ವತದ ದುರ್ಗಮ ಪ್ರದೇಶದಲ್ಲಿ ಇರುತ್ತಿದ್ದ ಆಸುರೀ ಭಾವದ ಜನರನ್ನು ಕುರಿತಾಗಿ ದಾಸ ಮತ್ತು ದಸ್ಯು ಪದವನ್ನು ಬಳಸಲಾಗಿದೆ. ಈ ಮಂತ್ರದಲ್ಲಿ ದಸ್ಯುಗಳನ್ನು ಇಂದ್ರನು ಶಾಶ್ವತವಾದು ನರಕಾದಿಗಳಲ್ಲಿ ವಾಸಿಸುವಂತೆ ಮಾಡಿದ ಎನ್ನುವ ಅರ್ಥ ಗ್ರಹಿಸಿಕೊಳ್ಳಬಹುದು. ನರಕ ಎನ್ನುವುದೇ ಗುಹೆಗಳು. ಆದರೆ ಇದಕ್ಕೆ ವಿಪರೀತ ಅರ್ಥವನ್ನು ನೀಡಿದವರು ವಿದೇಶೀಯರು. ಅವರು ದಸ್ಯುಗಳನ್ನು ಇಲ್ಲಿನ ಮೂಲ ನಿವಾಸಿಗಳು. ಅವರನ್ನು ಬಡಿದೋಡಿಸಿ "ಆರ್ಯಜನಾಂಗ ಸುಸಂಸ್ಕೃತ ಜನಾಂಗ ಬೇರೆಡೆಯಿಂದ ಬಂದು ಇಲ್ಲಿ ನೆಲೆ ನಿಂತಿತು" ಎನ್ನುವ ಒಡೆದಾಳುವ ನೀತಿಯನ್ನು ಅನೂಚಾನವಾಗಿ ಪ್ರತಿಪಾದಿಸಿಕೊಂಡು ಬಂದರು. ಇಲ್ಲಿ ಒಂದನ್ನು ನಾನು ಗಮನಿಸಿದಂತೆ ಯಜ್ಞ ಯಾಗಾದಿಗಳನ್ನು ತಾವೂ ಮಾಡದೇ ಯಜ್ಞಗಳನ್ನು ಮಾಡುತ್ತಿದ್ದ ಅದಕ್ಕಾಗಿ ಗೋ ಸಂಪತ್ತನ್ನು ಹೊಂದಿದ್ದ. ಸಂಪತ್ತಿನಿಂದ ಕೂಡಿದ್ದ ಸುಸಂಸ್ಕೃತ ಜನರಿಗೆ ಸಂಸ್ಕಾರ ವಂಚಿತರಾದ ಹೀನರು ಮತ್ತು ಕಳ್ಳರು, ಗೋ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಜನರು ಪ್ರಮುಖವಾಗಿ ದೇವ ನಿಂದಕ ನಿರೀಶ್ವರವಾದಿಗಳು ಸದಾ ಪ್ರಜಾಪೀಡಕರಾದವರು ದಸ್ಯುಗಳಾಗಿದ್ದರು.
"ಯೋ ದಸ್ಯೋರ್ಹಂತಾ ಸ ಜನಾಸ ಇಂದ್ರಃ" ಇಂದ್ರ ಸಂಪದ್ಭರಿತನಾಗಿದ್ದ. ಅದನ್ನು ಇನ್ನೊಂದು ಪ್ರಮುಖ ಪದದೊಂದಿಗೆ ಗುರುತಿಸಲಾಗುತ್ತದೆ. ಅದು ಇಲ್ಲಿ ಪ್ರಸ್ತುತಗೊಳಿಸುತ್ತಿಲ್ಲ ಆದರೆ ಇಂದ್ರನನ್ನು ಹಾಡಿಹೊಗಳುವಾಗೆಲ್ಲಾ "ಜನರೇ ಯಾವ ದಸ್ಯುಗಳನ್ನು ಸಂಹರಿಸಿದನೋ ಅವನೇ ಇಂದ್ರ" ಎನ್ನುವ ಎನ್ನುವ ಪದ ಕಾಣಸಿಗುತ್ತದೆ.
ನಿರುಕ್ತ ಕಾರ ಯಾಸ್ಕರು “ದಸ್ಯುರ್ದಸ್ಯತೇಃ ಕ್ಷಯಾರ್ಥಾದುಪದಸ್ಯಂತ್ಯಸ್ಮಿನ್ ರಸಾಃ ಉಪದಾಸಯತಿ ಕರ್ಮಾಣಿ.” ಎನ್ನುವಲ್ಲಿ ಹಿಂಸೆ ಮಾಡು ಅಥವಾ ನಾಶಗೊಳಿಸು ಎನ್ನುವ ಅರ್ಥವನ್ನು ಯಾಸ್ಕರು ನೀಡಿದ್ದಾರೆ, ದಸು ಎನ್ನುವ ಧಾತುವಿನಿಂದ ಹುಟ್ಟಿದ ಶಬ್ದ ಇದಾಗಿದ್ದು ನೀರು ಅಥವಾ ಉದಕಗಳು ಶೋಷಿತವಾಗುವುವು ಮತ್ತು ಕರ್ಮಗಳು ನಾಶವಾಗುವುವು ಎನ್ನುವ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ ಆದರೆ ಸಾಯಣರು ನಾಶಮಾಡುವವರು ಎನ್ನುವ ಅರ್ಥವನ್ನು ಮಾತ್ರವೇ ನೀಡಿದ್ದಾರೆ. "ದಸ್ಯುಂ" ಎನ್ನುವ ಪದವು ಅನುಷ್ಠಾನವನ್ನು ಮಾಡದೇ ಇರುವವರ ನ್ನು ಕುರಿತಾದ ಪರ್ಯಾಯಪದ ಎನ್ನುವಂತೆ ಬಿಂಬಿಸಲಾಗಿದೆ. ದಸ್ಯುಗಳನ್ನು ಅವ್ರತರೆನ್ನುವರು ಅಂದರೆ ಯಾಗರೂಪವಾದ ಕರ್ಮಾದಿಗಳನ್ನು ಆಚರಿಸದೇ ಇರುವವರು ಎನ್ನುವ ಅರ್ಥ. "ದೇವ" ಶಬ್ದವು ವಿಕಾಸವನ್ನು ಧ್ವನಿಸುತ್ತದೆ. ಇಲ್ಲಿ ದ್ಯೋತನ ಮತ್ತು ದಾನಗಳೆರಡೂ ಕಂಡು ಬರುತ್ತವೆ ಆದರೆ ಇದಕ್ಕೆ ವಿರುದ್ಧವಾಗಿ ಕ್ಷಯ, ಮತ್ತು ಹಿಂಸಾತ್ಮಕ ಮತ್ತು ಅಂಧಕಾರವನ್ನು ಧ್ವನಿಸುವ ಶಬ್ದವೇ ದಸ್ಯು ಎನ್ನಿಸುತ್ತದೆ. ವ್ರತೃನೇ ಮೊದಲಾದ ಆಸುರೀಭಾವದ ಜನರೆಲ್ಲರೂ ದಸ್ಯುಗಳೆಂದು ಪರಿಗಣಿತರಾಗಿದ್ದಾರೆ. ಇಂತಹ ದಸ್ಯುಗಳನ್ನು ಪ್ರತಿಭಟಿಸಿ ಅವರನ್ನು ಸಂಹರಿಸಿದ್ದರಿಂದ ದಸ್ಯುಹಾ ಎನ್ನುವ ಹೆಸರನ್ನು ಇಂದ್ರನಿಗೂ ಹೇಳಲಾಗುತ್ತಿತ್ತು.
ತ್ವಂ ಪಿಪ್ರುಂ ಮೃಗಯಂ ಶೂಶುವಾಂಸಮೃಜಿಶ್ವನೇ ವೈದಥಿನಾಯ ರಂಧೀಃ |
ಪಂಚಾಶತ್ಕೃಷ್ಣಾನಿ ವಪಃ ಸಹಸ್ರಾತ್ಕಂ ನ ಪುರೋ ಜರಿಮಾ ವಿ ದರ್ದಃ || ಎನ್ನುವಲ್ಲಿ ದಸ್ಯುಗಳು ಕಪ್ಪನೆಯ ವರ್ಣದವರೆನ್ನುವ ವಿಷಯವನ್ನು ಹೇಳಲಾಗಿದೆ. ಆದರೆ ಈ ವರ್ಣದಿಂದಲೇ ಅವರನ್ನು ಅಳೆಯಲು ಅಸಾಧ್ಯ ಯಾಕೆಂದರೆ ವ್ರತ್ರನ ಕುರಿತಾಗಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಅದು ವೇದ್ಯವಾಗುತ್ತದೆ.
ಶುಷ್ಣ ಎನ್ನುವವ ಒಬ್ಬ "ದಸ್ಯು" ಈ ದಸ್ಯುವಿನ ಕುರಿತಾಗಿ ಹೇಳುವಾಗ ಈತ ಬುಸುಗುಟ್ಟುವವನು, ಈತನು ಅತಿವೇಗವಾಗಿ ಚಲಿಸಬಲ್ಲವನು, ಕೊಂಬುಗಳನ್ನು ಮತ್ತು ಮೊಟ್ಟೆಗಳನ್ನೂ ಹೊಂದಿರುವದನ್ನು ಉಲ್ಲೇಖಿಸಲಾಗಿದೆ ಇವುಗಳ ಆಕರಗಳನ್ನೆಲ್ಲಾ ಇಲ್ಲಿ ಕೊಡಲು ನನಗೆ ಆಗುತ್ತಿಲ್ಲ. ಶುಷ್ಣ ಎನ್ನುವುದು ಒಣಗಿದ್ದನ್ನು ಸಹ ಸೂಚಿಸುತ್ತದೆ. ಅದೇನೇ ಇರಲಿ ಇದೊಂದು ಸರ್ಪದ ಜಾತಿಗೆ ಸೇರಿದ ಹಾವಿರಲೂಬಹುದು.
ಶಂಬರನ ಕುರಿತಾಗಿ ನಾನು ಈಗಾಗಲೇ ದಿವೋದಾಸನ ಸಂದರ್ಭದಲ್ಲಿ ಬರೆದಿರುವೆನು. ಋಜಿಶ್ವ ನೆನ್ನುವ ಇಂದ್ರನ ಮಿತ್ರನೊಬ್ಬನ ವೈರಿ ಪಿಪ್ರು. ಈತ ಅನೇಕ ಕೋಟೆಗಳನ್ನು ಹೊಂದಿದ್ದನಂತೆ ಅವುಗಳನ್ನೆಲ್ಲಾ ಇಂದ್ರನು ಹೊಡೆದುರುಳಿಸಿದನಂತೆ. ಈತನು ಕಾಡು ಮೃಗವೊಂದರ ರೂಪವನ್ನು ಹೊಂದಿದ್ದ ಎನ್ನಲಾಗುತ್ತದೆ. ಹಾಗಾದರೆ ದಸ್ಯುಗಳು ಕೇವಲ ಮನುಷ್ಯರೇ ಅಲ್ಲದೇ ಮಾನವರ ವಿರೋಧಿಗಳೂ ಆಗಿದ್ದರು ಎಂದು ತಿಳಿಯಬಹುದು, ನಮುಚಿ ಎನ್ನುಇವನ ಕಥೆಯಲ್ಲಿಯೂ ಹಾಗೆಯೇ. ನಮುಚಿ ಎನ್ನುವವನನ್ನೂ ಇಂದ್ರನು ವಧಿಸುತ್ತಾನೆ. ನ ಅಂದರೆ ನಕಾರಾತ್ಮಕವಾಗಿ ಮುಚಿ ಎಂದರೆ ಬಿಟ್ಟುಕೊಡುವವನಲ್ಲ ಅಂದರೆ ನೀರನ್ನು ತಡೆಹಿಡಿಯುವವನು ಎನ್ನುವುದು ಪಾಣಿನಿಯ ಅಭಿಮತ. ಹೀಗೇ ದಸ್ಯುಗಳನ್ನು ವಲ, ಧುನಿ, ಮತ್ತು ಚಮುರಿ, ಶುಷ್ಣ ಹೀಗೇ ಇವರನ್ನೆಲ್ಲಾ ದಸ್ಯುಗಳೆಂದಿರುವುದಲ್ಲದೇ ಪಿಶಾಚಗಳನ್ನೂ ಭೂತಗಳನ್ನೂ ದಸ್ಯುಗಳೆನ್ನಲಾಗುತ್ತದೆ.
ಅಧ್ವರ್ಯವೋ ಯೋ ಧೃಭೀಕಂ ಜಘಾನ ಯೋ ಗಾ ಉದಾ ಜದಪ ಹಿ ವಲಂ ವಃ |
ತಸ್ಮಾ ಏತಮಂತರಿಕ್ಷೇ ನ ವಾತಮಿಂದ್ರಂ ಸೋಮೈರೋರ್ಣುತ ಜೂರ್ನ ವಸ್ತ್ರೈಃ ||
ದೃಭೀಕ, ರುಧಿಕೃ, ಅನರ್ಶನಿ, ಸೃಬಿಂದ ಇವರೆಲ್ಲಾ ಪಿಶಾಚ ಮತ್ತು ಭೂತಗಳು. ಹೀಗೆ ಇವರೆಲ್ಲರೂ ಸಹ ದಸ್ಯುಗಳೆಂದೇ ಭಾವಿಸಲ್ಪಡುತ್ತಾರಾದುದರಿಂದ ಇವರು ಲೋಕಕಂಟಕರಾಗಿದ್ದಂತೂ ನಿಜ ಎನ್ನಿಸುತ್ತದೆ. ಈ ದಸ್ಯುಗಳ ಕುರಿತು ಬರೆಯುತ್ತಾ ಹೋದರೆ ಇನ್ನೂ ಅನೇಕ ವಿವರಗಳು ಲಭ್ಯವಾಗುತ್ತವೆ.
ವಾಲ್ಮೀಕಿ ರಾಮಾಯಣದ ಅಯೋಧ್ಯಾ ಕಾಂಡದ 57ನೇ ಸರ್ಗದಲ್ಲಿ ರಾಮನ ವನವಾಸಕ್ಕೆ ಬಯಸಿದ ಕೈಕೇಯಿಯ ಕುರಿತಾಗಿ ಮತ್ತು ಆಕೆಯ ಅನುಮೋದಕರ ಕುರಿತಾಗಿ ಹೇಳುವ ಸಂದರ್ಭದಲ್ಲಿ
ಸಂಚಿತಾನ್ಯಸ್ಯ ವಿತ್ತಾನಿ ವಿವಿಧಾನಿ ಸಹಸ್ರಶಃ |
ದಸ್ಯುಭಿರ್ವಿಪ್ರಲುಪ್ಯನ್ತಾಂ ಯಸ್ಯಾರ್ಯೋಽನುಮತೇ ಗತಃ || ೪೩ || ಶ್ರೀರಾಮನು ಅರಣ್ಯಕ್ಕೆ ಹೋಗುವುದನ್ನು ಅನುಮತಿಸಿದವನು ಸಂಪಾದಿಸಿದ ಸಹಸ್ರಪರಿಮಿತವಾದ ಅನೇಕಪ್ರಕಾರವಾದ ಐಶ್ವರ್ಯಗಳನ್ನು ಕಳ್ಳ-ಕಾಕರು ಅಪಹರಿಸಲಿ. ಎನ್ನಲಾಗಿದೆ. ಇಲ್ಲಿ ದಸ್ಯುಗಳು ಕಳ್ಲರು ಎನ್ನುವ ಅರ್ಥ ಧ್ವನಿಸುತ್ತದೆ.  
ಯುದ್ಧಕಾಂಡ 128ನೇ ಸರ್ಗದಲ್ಲಿ
ನಿರ್ದಸ್ಯುರಭವಲ್ಲೋಕೋ ನಾನರ್ಥಂ ಕಂಚಿದಸ್ಪೃಶತ್ |
ಸ್ಮ ವೃದ್ಧಾ ಬಾಲಾನಾಂ ಪ್ರೇತಕಾರ್ಯಾಣಿ ಕುರ್ವತೇ || 99 ||
ಲೋಕದಲ್ಲಿ ಕಳ್ಳಕಾಕರರಾಗಲೀ ದರೋಡೆಕೋರರಾಗಲೀ ಇರಲಿಲ್ಲ. ಯಾವ ವಿಧವಾದ ಅನರ್ಥಗಳೂ ಯಾರಿಗೂ ಉಂಟಾಗುತ್ತಿರಲಿಲ್ಲ. ವೃದ್ಧರು ಬಾಲಕರಿಗೆ ಪ್ರೇತಕಾರ್ಯಗಳನ್ನು ಮಾಡುವ ಪರಿಸ್ಥಿತಿಯು ಉಂಟಾಗುತ್ತಿರಲಿಲ್ಲ. ಎಂದು ಕಳ್ಲಕಾರರು ಇರಲಿಲ್ಲ ಎನ್ನುವ ಅರ್ಥ ಕೊಡಲಾಗಿದೆ.
ಉತ್ತರಕಾಂಡ 9ನೇ ಸರ್ಗದಲ್ಲಿ ಶ್ರೀರಾಮಾ ನೀನೇ ಪ್ರಾಣಿಗಳ ಸೃಷ್ಟಿಕರ್ತನೂ ಶರಣಾಗತವತ್ಸಲನೂ ಆಗಿ ರುವೆ. ಧರ್ಮದ ವ್ಯವಸ್ಥೆಯನ್ನು ನಷ್ಟಗೊಳಿಸುವ ದಸ್ಯುಗಳು ಹುಟ್ಟಿದಾಗ ಸಮಯಗಳಲ್ಲಿ ನೀನು ಅವರ ಸಂಹಾರಕ್ಕಾಗಿ ಜನ್ಮ ತಾಳುವೆ. ಎಂದು ರಾಮಾಯಣದಲ್ಲಿ ಅಲ್ಲಲ್ಲಿ ಕಂಡುಬರುತ್ತದೆ.
ಮಹಾಭಾರತದ ಆದಿಪರ್ವದ 75 ನೇ ಅಧ್ಯಾಯದಲ್ಲಿ
ನಹುಷನು ರಾಜ್ಯವನ್ನು ಧರ್ಮದಿಂದ ಪರಿಪಾಲನೆಮಾಡುತ್ತಿದ್ದನು. ದಸ್ಯುಗಳೆಂಬ ದರೋಡೆಕಾರರನ್ನು ಸಂಪೂರ್ಣವಾಗಿ ನಿರ್ಮೂಲಮಾಡಿದ್ದನು. ಋಷಿಗಳಿಗೆ ತೊಂದರೆಕೊಡುತ್ತಿದ್ದ ದಸ್ಯುಗಳನ್ನು ನಿರ್ಮೂಲಮಾಡಿದ್ದಕ್ಕಾಗಿ ಋಷಿಗಳು ಪ್ರಾಣಿಗಳೋಪಾದಿಯಲ್ಲಿ ನಹುಷನ ಪಲ್ಲಕ್ಕಿಯನ್ನು ಅವನು ಹೇಳಿದೆಡೆಗೆ ಹೊತ್ತುಕೊಂಡು ತಿರುಗಬೇಕಾಯಿತು. ತನ್ನ ತೇಜಸ್ಸಿನಿಂದಲೂ, ಪರಾಕ್ರಮದಿಂದಲೂ, ತಪಸ್ಸಿನಿಂದಲೂ ದೇವತೆಗಳನ್ನೂ ಪರಾಜಯಗೊಳಿಸಿ ಸ್ವಲ್ಪಕಾಲ ಇಂದ್ರಪದವಿಯನ್ನೂ ಪಡೆದಿದ್ದನು. ಪುರಾಣಗಳಲ್ಲಿ ದಸ್ಯುಗಳು ಪ್ರಜಾಕಂಟಕರಾಗಿ ಕಳ್ಳರಾಗಿ ದರೋಡೆಕೋರರಾಗಿದ್ದದ್ದು ಕಂಡು ಬರುತ್ತದೆ.
ಹಾಗಾದರೆ ದಸ್ಯುಗಳು ವೇದದಲ್ಲಿ ಉಕ್ತವಾಗಿದ್ದ ದಸ್ಯುಗಳು ಪ್ರಜಾಕಂಟಕರಾದ ಜನರು. ಎಂದಾಯಿತು
ಶಬ್ದಕಲ್ಪದ್ರುಮದಲ್ಲಿ ದಸ್ಯುಃ - ದಸ್ಯತಿ ಪರಸ್ವಾನ್ ನಾಶಯತಿ ಎಂದೂ "ಮಹಾ ಸಾಹಸಿಕಃ" "ಅಸುರಃ"ಎಂದು ಶಬ್ದರತ್ನಾವಲಿಯಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ವಾಚಸ್ಪತ್ಯದಲ್ಲಿ ಮಾಹಾಸಾಹಸಿಕೇ, 'ಕರ್ಮವರ್ಜಿತಃ' ಎನ್ನುವ ಉಲ್ಲೇಖ ಪ್ರಾಯಶಃ ಎಲ್ಲಾ ಕಡೆಯೂ ಕಂಡು ಬರುತ್ತದೆ. ಎಂದು ಹೇಳಲಾಗಿದೆ. ಹೌದು ಹಾಗಾದರೆ. ಇಲ್ಲಿ ಜಾತಿ ಧರ್ಮ ಮತಗಳನ್ನೂ ಮೀರಿದ ಒಂದು ಗುಂಪು ದಸ್ಯುಗಳಾಗಿದ್ದಿರ ಬಹುದಲ್ಲವೇ?

No comments:

Post a Comment