Search This Blog

Saturday 30 June 2018

ಕಪ್ಪೆಯ ಸಂಗೀತವೂ ಮತ್ತು ಜಗತ್ತು.............

ಆಗ ಅಂದರೆ ನನ್ನ ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ ವಿದ್ಯುತ್ ಬರದೇ ಇದ್ದ ಕಾಲ. ಸಂಜೆ ಸಮಯದಲ್ಲಿ ಎಲ್ಲರ ಮನೆಯಲ್ಲೂ ದೇವರೆದುರು ದೀಪಬೆಳಗಿಸಿ ಭಜನೆ ಮಾಡುತ್ತಿದ್ದಕಾಲ. ಹಣತೆಗಳ ದೀಪ, ಸೀಮೆ ಎಣ್ಣೆ ಲಾಟೀನುಗಳ ಯುಗ ಅದು. ಬೇಸಿಗೆಯಲ್ಲಿ ರಾತ್ರಿಯಲ್ಲಿ ನೀರವ ಮೌನ ಆವರಿಸಿ ಬಿಡುತ್ತಿತ್ತು. ಜೂನ್ ತಿಂಗಳ ಆರಂಭ ಬಿರು ಬಿಸಿಲಿನಿಂದ ಮಳೆಯ ಸೂಚನೆ ಕೊಡುತ್ತಿದ್ದ ಕಾಲ. ಬೇಸಿಗೆಯಲ್ಲಿ ರಾತ್ರಿಯಲ್ಲಿ ಕಗ್ಗತ್ತಲಿನ ನೀರವ ಮೌನವನ್ನು ಸಹಿಸಿದ ನಮಗೆ ಮಳೆಗಾಲದಲ್ಲಿ ಹಂಚಿನಿಂದ ನೀರು ಕೆಳಕ್ಕೆ ಬಿದ್ದ ಶಬ್ದ ಒಂದಾದರೆ ಮಳೆನಿಂತ ತಕ್ಷಣ ಕಪ್ಪೆಗಳ ಗಾಯನ ಕೇಳುತ್ತಿತ್ತು ಜೊತೆಗೆ ನೀರು ಕೋಳಿಗಳೂ ದನಿಗೂಡಿಸುತ್ತಿದ್ದವು. ಕಪ್ಪೆಗಳಲ್ಲೂ ಬೇರೆ ಬೇರೆ ಧಾಟಿ ಮತ್ತು ಸ್ವರವಿದೆ. ಚಿಕ್ಕ ಚಿಕ್ಕ ಕಪ್ಪೆಗಳ ಸ್ವರವೇ ಕೇಳುತ್ತಿರಲಿಲ್ಲ. ಅದೊಂದು ಅದ್ಭುತ ರೋಚಕ ಮತ್ತು ಖುಷಿಕೊಡುವ ಪ್ರಪಂಚ. ಕಪ್ಪೆ ಮತ್ತು ನೀರುಕೋಳಿಗಳಲ್ಲದೇ ಜೀರುಂಡೆಗಳ ಕೂಗಾಟವೂ ಇರುತ್ತಿತ್ತು. ಈಗ ಊರಿಗೆ ಹೋದರೆ ಇದ್ಯಾವುದೂ ಸಿಗುತ್ತಿಲ್ಲ. ಆದರೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡದ್ದು ಜಾವದ ಹಕ್ಕಿ. ಈ ಹಕ್ಕಿ ಪ್ರತಿ ಗಂಟೆಗೊಮ್ಮೆ ಕೂಗುತ್ತಾ ಹೋಗುತ್ತದೆ. ರಾತ್ರಿ ಇಡಿ ಈ ಹಕ್ಕಿ ಕೂಗುವುದು ಕೇಳಿಸುತ್ತದೆ ರಾತ್ರಿ 9.15ಕ್ಕೆ ಒಮ್ಮೆ ಕೂಗಿದರೆ ಪುನಃ 10.15ಕ್ಕೆ ಕೂಗುತ್ತದೆ. ಆಶ್ಚರ್ಯವೆಂದರೆ ಜನನಿಬಿಡ ಬೆಂಗಳೂರಿನಲ್ಲಿಯೂ ಈ ಹಕ್ಕಿ ಕೂಗುತ್ತದೆ. ಆದರೆ ಇಲ್ಲಿ ನನ್ನ ಗಮನಕ್ಕೆ ಬಂದದ್ದು ಬೆಳಗ್ಗೆ ಅದರ ಕೂಗು ಮಾತ್ರ. ಬೆಳಗ್ಗೆ ನಾಲ್ಕು ಗಂಟೆಗೇ ಏಳುವುದರಿಂದ ೪.೧೫ಕ್ಕೆ ದಿನಾ ಕೂಗುತ್ತದೆ ೫.೧೫ಕ್ಕೆ ಪುನಃ ಕೂಗುತ್ತದೆ ಹೀಗೆ ಅದರ ಆ ದಿನದ ಕೊನೆಯ ಕೂಗು ಕೇಳಿಸುತ್ತದೆ. ಕಪ್ಪೆಗಳ ಕೂಗು ಇಲ್ಲವೇ ಇಲ್ಲ. ಇವೆಲ್ಲ ಬದಿಗಿಟ್ಟು ಮುಖ್ಯ ವಿಷಯಕ್ಕೆ ಬರುತ್ತೇನೆ.
ಒಂದಾನೊಂದು ಕಾಲದಲ್ಲಿ ವಶಿಷ್ಟ ಮಹರ್ಷಿ ಮಳೆ ಬರಬೇಕು ಎನ್ನುವ ಬಯಕೆಯಿಂದ ಪರ್ಜನ್ಯ ದೇವತೆಯನ್ನು ಪ್ರಾರ್ಥಿಸುತ್ತಾನೆ. ಈ ಋಷಿಯು ಪ್ರಾರ್ಥಿಸುವುದನ್ನು ಮಂಡೂಕಗಳು (ಕಪ್ಪೆ) ಅನುಮೋದಿಸುತ್ತವೆ. ಆಗ ತನ್ನ ಪ್ರಾರ್ಥನೆಯನ್ನು ಅನುಮೋದಿಸುತ್ತಿದ್ದ ಕಪ್ಪೆಗಳನ್ನು ಋಷಿಯು ಗಮನಿಸಿ ಆ ಮಂಡೂಕಗಳನ್ನು ಪ್ರಾರ್ಥಿಸುತ್ತಾನೆ.
ಸಂವತ್ಸರಂ ಶಶಯಾನಾ ಬ್ರಾಹ್ಮಣಾ ವ್ರತಚಾರಿಣಃ |
ವಾತಂ ಪರ್ಜನ್ಯ ಜಿನ್ವಿತಾಂ ಪ್ರ ಮಂಡೂಕಾ ಅವಾದಿಷುಃ ||
ಒಂದು ಸಂವತ್ಸರದ ಸತ್ರವನ್ನಾಚರಿಸುವ ಬ್ರಾಹ್ಮಣರಂತೆ ಒಂದು ಸಂವತ್ಸರದ ಪರ್ಯಂತ ಅಂದರೆ ಶರತ್ಕಾಲದಿಂದ ವರ್ಷಕಾಲದವರೆಗೆ ಮೌನದಿಂದ ತಪಸ್ಸನಾಚರಿಸುತ್ತಿದ್ದವೋ ಎನ್ನುವಂತೆ ಮಾನದಿಂದ ಇದ್ದ ಕಪ್ಪೆಗಳು ಪರ್ಜನ್ಯನಿಗೆ ತೃಪ್ತಿಯನ್ನು ಕೊಡುವಂತಹ ಮಾತನ್ನು (ವಾಕ್) ಉಚ್ಚರಿಸುತ್ತವೆ ಎಂದು ಋಗ್ವೇದದ ಏಳನೇ ಮಂಡಲದಲ್ಲಿ ಬರುತ್ತದೆ.
ನಿರುಕ್ತಕಾರರು ಪರ್ಜನ್ಯಂ ವರ್ಷಕಾಮಃ ಪರ್ಜನ್ಯಂ ತುಷ್ಟಾವ | ತಂ ಮಂಡೂಕಾ ಅನ್ವ ಮೋದಂತ | ವಶಿಷ್ಟನ ಪರ್ಜನ್ಯ ಪ್ರಾರ್ಥನೆಯನ್ನು ಮಂಡೂಕಗಳು ಅನುಮೋಡಿಸಿದವು ಎಂದಿದ್ದಾರೆ.
ಕಪ್ಪೆಗಳು ಯಾವಾಗಲೂ ನೀರಿನಲ್ಲಿ ಮುಳುಗಿರುವುದರಿಂದ ಅಥವಾ ಮುಳುಗಿ ಏಳುತ್ತಿರುವುದರಿಂದ ಅವುಗಳಿಗೆ ಮಂಡೂಕ ಅಥವಾ ಮಜ್ಜೂಕ ಎನ್ನಲಾಗಿದೆ. ಅಂದರೆ "ಮಜ್ಜನಾತ್" ಮುಳುಗಿ ಏಳುವುದರಿಂದ. ಮಜ್ಜೂಕ ಎನ್ನಲಾಗುತ್ತದೆ. ಸಂತೋಷ ದಿಂದಿರುವುವು ಎನ್ನುವ ಅರ್ಥವನ್ನು ಮಂದ್ ಎನ್ನುವ ಧಾತುವು ಕೊಡುವ ಕಾರಣದಿಂದಲೂ ಆರೀತಿ ಕರೆಯಲಾಗುತ್ತದೆ. ವ್ಯಾಕರಣ ಶಾಸ್ತ್ರಜ್ಞರು ಅಭಿಪ್ರಾಯಿಸುವಂತೆ ಮಂಡ್ ಎನ್ನುವುದು ಅಲಂಕರಿಸು ಎನ್ನುವ ಅರ್ಥ ಬರುತ್ತದೆ ಆದುದರಿಂದ ಮಂಡೂಕವು ಮಂಡ್ ಎನ್ನುವ ಧಾತುವಿನಿಂದ ಬಂದಿದೆ ಎನ್ನುತ್ತಾರೆ. ಕಪ್ಪೆಗಳು ಬೇರೆ ಬೇರೆ ಬಣ್ಣಗಳಿಂದಲೂ ಅಲಂಕಾರ ಗೊಂಡಿರುವುದರಿಂದ (ಹುಟ್ಟಿರುವುದರಿಂದ) ಅವುಗಳನ್ನು ಮಂಡೂಕ ಎನ್ನುತ್ತಾರೆ ಎನ್ನುವುದು ಅವರ ಅಭಿಮತ. ಮಂಡ್ ಎಂದರೆ ನೀರಿ ಎನ್ನುವ ಇನ್ನೊಂದು ಅರ್ಥವಿದೆ ಮಂಡೇ ಅಂದರೆ ನೀರಿನಲ್ಲಿ - ಓಕಃ ಅಂದರೆ ವಾಸಿಸು. ಮಂಡೂಕಃ ಅಂದರೆ ನೀರಿನಲ್ಲಿ ವಾಸಿಸುವುದು ಎನ್ನುವ ಅರ್ಥವನ್ನು ಧ್ವನಿಸುತ್ತದೆ. ಅದೇನೇ ಇರಲಿ ಮಂಡ್ ಎನ್ನುವುದು ಮದ್(ಮುದ್) ಎನ್ನುವುದರ ರೂಪಾಂತರವಾಗಿದ್ದಲ್ಲಿ ನೀರಿನಲ್ಲಿ ಹರ್ಷದಿಂದ ವಾಸಿಸುವಂತಹದ್ದು ಎನ್ನುವುದಾಗುತ್ತದೆ. ಅಂದರೆ ಒಟ್ಟಭಿಪ್ರಾಯವು ನೀರಿನಲ್ಲಿ ಅವುಗಳು ಅತ್ಯಂತ ಹೆಚ್ಚು ಸಂತೋಷದಲ್ಲಿರುತ್ತವೆ.
ಒಂದು ವರ್ಷ ಮಾಡಲ್ಪಟ್ಟ ಸತ್ರಾದಿ ಯಾಗಗಳಲ್ಲಿ ಬ್ರಾಹ್ಮಣರು ಕೆಲವು ವ್ರತವನ್ನಾಚರಿಸುತ್ತಾರೆ ಅದರಲ್ಲಿ ಶರತ್ಕಾಲದಿಂದ ವರ್ಷಾಕಾಲದ ತನಕ ಮೌನದಿಂದ ಇದ್ದು ವರ್ಷಾಕಾಲದಲ್ಲಿ ಯಾಗ ಸಮಾಪ್ತಿಗೊಂಡು ಪರ್ಜನ್ಯ ನ ಕುರಿತಾದ ಸ್ತೋತ್ರಗಳಿಂದ ಉಚ್ಚ ಕಂಠದಲ್ಲಿ ಮಂತ್ರೋಚ್ಚಾರಣೆ ಮಾಡುವರು ಇಂತಹ ಸಮಯದಲ್ಲಿ ಬ್ರಾಹ್ಮಣರು ಸಂತೋಷದಿಂದ ಇರುವರು. ಇದನ್ನೇ ಮಂಡೂಕಕ್ಕೆ ಹೇಳಲಾಗಿದ್ದರೆ ಇನ್ನೊಂದು ರೀತಿಯಲ್ಲಿ ಶರತ್ಕಾಲದಿಂದ ವರ್ಷಾಕಾಲದ ತನಕ ಮೌನ ವ್ರತದಿಂದಿದ್ದು ಕೊನೆಗೆ ಪರ್ಜನ್ಯನನ್ನು ಕುರಿತು ಉಚ್ಚ ಸ್ವಾರದಲ್ಲಿ ಮಂತ್ರ ಹೇಳುವುದು ಹೇಗೆ ಕೇಳಿಸ ಬಲ್ಲುದೋ ಅದೇ ರೀತಿ ಶರತ್ಕಾಲದಲ್ಲಿ ಭೂಮಿ ಒಣಗಿ ಹೋಗಿ ನೀರಿನ ಆಸರೆಯೂ ಇಲ್ಲದ ಸ್ಥಿಯಲ್ಲಿ ಎಲ್ಲಿಯೋ ಅಡಗಿರುವ ಕಪ್ಪೆಗಳು ವರ್ಷಾಕಾಲ ಬಂದೊಡನೆ ಸಂತೋಷದಿಂದ ಹೊರಗೆ ಬಂದು ಕೂಗುತ್ತವೆ. ಎನ್ನುವುದು ಯಾಸ್ಕರ ನಿರುಕ್ತದ ಅರ್ಥ.
ಗೋಮಾಯುರೇಕೋ ಅಜಮಾಯುರೇಕಃ ಪೃಶ್ನಿರೇಕೋ ಹರಿತ ಏಕ ಏಷಾಂ |
ಸಮಾನಂ ನಾಮ ಬಿಭ್ರತೋ ವಿರೂಪಾಃ ಪುರುತ್ರಾ ವಾಚಂ ಪಿಪಿಶುರ್ವದಂತಃ ||
ಈ ಮಂಡೂಕ(ಕಪ್ಪೆ)ಗಳ ಮಧ್ಯದಲ್ಲಿ ಒಂದು ಗೋವಿನಂತೆ ಶಬ್ದ ಮಾಡುತ್ತದಂತೆ, ಇನ್ನೊಂದು ಆಡಿನಂತೆ ಶಬ್ದಮಾಡುತ್ತದಂತೆ, ಒಂದು ಕಪ್ಪೆ ಅನೇಕ ಬಣ್ಣಗಳನ್ನು ಹೊಂದಿದೆಯಂತೆ . ಇನ್ನೊಂದು ಹಸಿರು ಬಣ್ಣ ಮಾತ್ರ ಹೊಂದಿದೆಯಂತೆ ಈ ರೀತಿ ಬೇರೆ ಬೇರೆ ಶಬ್ದ ಮತ್ತು ರೂಪವನ್ನು ಹೊಂದಿದ್ದರೂ ಸಹ ಕಪ್ಪೆ ಅಥವಾ ಮಂಡೂಕ ಎನ್ನುವ ಒಂದೇ ಹೆಸರನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಪ್ರದೇಶಗಳಲ್ಲು ಕಾಣಿಸಿಕೊಳ್ಳುತ್ತದೆ.
ಗೋಮಾಯುರದಾದ ಜಮಾಯುರದಾತ್ಪೃಶ್ನಿರದಾದ್ಧರಿತೋ ನೋ ವಸೂನಿ |
ಗವಾಂ ಮಂಡೂಕಾ ದದತಃ ಶತಾನಿ ಸಹಸ್ರಸಾವೇ ಪ್ರ ತಿರಂತ ಆಯುಃ
ಗೋವಿನ ಶಬ್ದದಂತೆ ಮಾಡತಕ್ಕ ಮಂಡೂಕವೂ ಆಡಿನಂತೆ ಶಬ್ದ ಮಾಡತಕ್ಕ ಮಂಡೂಕವೂ ನಮಗೆ ಸಂಪತ್ತನ್ನು ಒದಗಿಸಲಿ ಬೇರೆ ಬೇರೆ ಬಣ್ಣಗಳನ್ನು ಹೊಂದಿರುವ ಮಂಡೂಕವೂ ಹಸಿರು ಬಣ್ಣ್ದ ಮಂಡೂಕವೂ ನಮಗೆ ಧನವನ್ನು ಒದಗಿಸಿ ಕೊಡಲಿ ಸಹಸ್ರಾರು ಔಷಧೀಯ ಸಸ್ಯಗಳು ಬೆಳೆಯುವ ಮಳೆಗಾಲದಲ್ಲಿ ನೂರಾರು ಸಂಖ್ಯೆಯ ಗೋ ಸಂಪತ್ತನ್ನು ಕೊಟ್ಟು ನಮ್ಮ ಆಯುಷ್ಯವನ್ನು ಹೆಚ್ಚಿಸ್ಸಲಿ ಎನ್ನುತ್ತಾ ಈ ಸೂಕ್ತ ಕೊನೆಗೊಳ್ಳುತ್ತದೆ.
ಈ ಸೂಕ್ತಗಳನ್ನೆಲ್ಲಾ ಗಮನಿಸುತ್ತಿರುವ ನನಗೆ ನಮ್ಮಲ್ಲಿ ಎಲ್ಲದರಲ್ಲಿಯೂ ನಾವು ದೇವರನ್ನು ದೈವತ್ವವನ್ನು ಕಂಡು ಅವುಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ಅವುಗಳ ನಾಶವನ್ನು ತಡೆಯುತ್ತಿದ್ದೆವು. ಇಲ್ಲಿ ಕಪ್ಪೆ ಒಂದು ನಿರುಪದ್ರವಿ ಜೀವಿ. ಅದನ್ನು ಅತ್ಯಂತ ಗೌರವದ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲಾಗಿದೆ.
ಭಾರತವೇ ಹಾಗೆ ಇಲ್ಲಿ ನಾನು ಬದುಕುತ್ತೇನೆ ಉಳಿದವರನ್ನು ಬದುಕಲು ಬಿಡುತ್ತೇನೆ ಎನ್ನುವುದು ತತ್ವ. ವೇದವೂ ಅದನ್ನೇ ಸೂಕ್ಷ್ಮವಾಗಿ ಹೇಳುತ್ತದೆ, ನೀನು ಬದುಕು ಉಳಿದವರನ್ನೂ ಬದುಕಲು ಬಿಡು. ಇದೇ ಅಲ್ಲವೇ ಜಗತ್ತಿಗೆ ಬೇಕಾಗಿದ್ದು.
ಕಪ್ಪೆಯ ಕುರಿತು ಬರೆಯುತ್ತಾ ಸಾಗಿದರೆ ಇನ್ನೂ ಬರೆಯ ಬಹುದು. ಆದರೆ ಅದೆಲ್ಲಾ ವಿಷಯಾಂತರವಾದೀತು.

No comments:

Post a Comment