Search This Blog

Wednesday 6 June 2018

ಕೋಲಿವಾಲದ ಭೋಜಕ “ಭಟ್ಟ ಶರ್ಮ”


ದೂರದ ಗಾಂಧಾರದಿಂದ ಬಂದ ಚಪಡ ಕನ್ನಡದ ಜನರಿಗೆ ಭಾಷೆ ಮತ್ತು ಲಿಪಿಯ ಹುಚ್ಚು ಹಿಡಿಸಿದ ಅನ್ನಬಹುದು. ಆತ ಬರೆದ ವಿಷಯ ಇಲ್ಲಿ ನೆಲೆ ಊರದಿರಬಹುದು. ಆತ ಸಸ್ರಾರು ವರ್ಷ ಅಜ್ಞಾತನಾಗಿಯೇ ಉಳಿದಿರಬಹುದು ಆದರೆ ಆತ ಕೊಟ್ಟ ಕೊಡುಗೆ ಇಂದಿಗೂ ಸ್ಮರಿಸಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಆಮೇಲೆ ದಕ್ಷಿಣದ ರಾಜರುಗಳು ಲಿಪಿಯ ಮಾಧ್ಯಮವನ್ನು ಬ್ರಾಹ್ಮಿಯನ್ನಾಗಿಸಿಕೊಂಡರೂ ಭಾಷೆಯನ್ನು ಸಂಸ್ಕೃತಕ್ಕೆ ಬದಲಾಯಿಸಿಕೊಂಡರು. ನಿನ್ನೆಯಷ್ಟೆ ಅದಕ್ಕೆ ಪೂರಕವಾದ ನಾಗಾರ್ಜುನ ಕೊಂಡದಲ್ಲಿನ ವಶಿಷ್ಠೀಪುತ್ರನ ಕುರಿತಾಗಿ ಬರೆದಿದ್ದೆ.
ಆಗಿನ್ನೂ ಲಿಪಿ ನೆಲೆಗೊಳ್ಳಲು ತವಕಿಸುತ್ತಿದ್ದ ಸಮಯ ಅನ್ನ ಬಹುದು. ಅಂದರೆ ನಾಗಾರ್ಜುನಕೊಂಡದ ಶಾಸನ ಬರುವ ಆಸುಪಾಸು ಅನ್ನಬಹುದು. ಪಲ್ಲವದೊರೆ ಶಿವಸ್ಕಂದ ವರ್ಮ ಮಾಧ್ಯಮವನ್ನು ಬದಲಿಸಿ ಬಿಡುತ್ತಾನೆ. ಅಷ್ಟರ ತನಕ ಕಲ್ಲಿನಲ್ಲಿ ಬಿರು ಬಿಸಿನಲ್ಲಿ ಕುಳಿತು ಬರೆಯುವುದು ಮತ್ತು ಸೂಕ್ತವಾದ ಕಲ್ಲು ಸಿಗುವುದು ಎಲ್ಲವೂ ದುಸ್ತರವಾಗಿತ್ತು ಅನ್ನಿಸುತ್ತದೆ. ಶಿವಸ್ಕಂಧವರ್ಮ ಶಿಲೆಯಿಂದ ನೇರವಾಗಿ ತಾಮ್ರಪಟಕ್ಕೆ ಬದಲಾಯಿಸಿಕೊಳ್ಳುತ್ತಾನೆ. ಸುಮಾರಾಗಿ ೨-೩ನೇ ಶತಮಾನ ಚಪಡನ ನಂತರ ಲಿಪಿ ಬಲ್ಲವರ ಕೊರತೆ ಎದುರಾಗುತ್ತದೆ. ಶಾಸನವನ್ನೇನೋ ಬರೆಸಬೇಕೆನ್ನುವ ತುಡಿತ ಆದರೆ ಇಲ್ಲಿ ಲಿಪಿ ಬಲ್ಲವರ ಕೊರತೆ ಕಾಣಿಸಿಕೊಳ್ಳುತ್ತದೆ. ಆಗ ಪುನಃ ಶಿವಸ್ಕಂಧವರ್ಮ ಉತ್ತರದ ಕಡೆ ಲಿಪಿಕಾರರನ್ನು ಅನ್ವೇಶಿಸುತ್ತಾನೆ. ಆಗ ಕೋಲಿವಾಲ ಎನ್ನುವ ಪ್ರದೇಶದಲ್ಲಿ ಲಿಪಿಕಾರರು ಸಿಗುತ್ತಾರೆ. ಆ ಲಿಪಿಕಾರರನ್ನೇ ನಮ್ಮ ನಾಡಿಗೆ ಕರೆತರುತ್ತಾನೆ. ಹಾಗೆ ಕರೆತಂದವರಲ್ಲಿಬಂದ ಲಿಪಿಕಾರರಲ್ಲಿ ಮೊದಲಿಗನೇ ಭಟ್ಟಶಮ್ಮ ಅಥವಾ ಭಟ್ಟಶರ್ಮ.
ಕೋಲಿವಾಲದ ಭೋಜಕನಾಗಿದ್ದ ಈ ಭಟ್ಟ ಶರ್ಮ ಈ ನಾಡಿಗೆ ಹೊಸಬನಾಗಿದ್ದ, ಇಲ್ಲಿನ ಭಾಷೆ ಅವನಿಗೆ ತಿಳಿಯುತ್ತಿರಲಿಲ್ಲ. ಲಿಪಿಯಂತೂ ಕೇಳುವುದೇ ಬೇಡ. ಅಂತಹ ಸಂದರ್ಭದಲ್ಲಿ ಈತ ಆಯ್ದು ಕೊಂಡದ್ದು ಬ್ರಾಹ್ಮಿಯಿಂದಲೂ ಕ್ರಮೇಣ ಬೇರ್ಪಟ್ಟು ಸ್ಥಳೀಯ ಭಾಷೆಗೆ ಹತ್ತಿರವಾಗುತ್ತಿದ್ದ ಅಂದರೆ ಅವನತಿಯತ್ತ ಸಾಗಿದ್ದ ಬ್ರಾಹ್ಮಿಯನ್ನು. ಭಾಷೆ ಸಹಜವಾಗಿ ಆತನ ವಿದ್ವತ್ತನ್ನು ಪ್ರತಿನಿಧಿಸುತ್ತಿದ್ದ ಸಂಸ್ಕೃತ. ಆದರೆ ಇಲ್ಲಿ ಭಾಷೆಯನ್ನು ಆತ ಪ್ರಾಕೃತದೊಂದಿಗೆ ಸಂಸ್ಕೃತವನ್ನು ಸೇರಿಸಿಕೊಂಡು ಬರೆದ.
ಸುಮಾರು ೫೨ ಸಾಲುಗಳ ಸುದೀರ್ಘ ಶಾಸನವನ್ನು ಬರೆದದ್ದು ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ.
ಇದೊಂದು ಪಲ್ಲವ ಶಿವಸ್ಕಂಧವರ್ಮನ ಪ್ರಮುಖವಾದ ಭಾಷಾ ಮೈಲುಗಲ್ಲು ಎನ್ನಬಹುದು. ಕೊನೆಯ ಹಂತದ ಪ್ರಾಕೃತಭಾಷೆ ಹಾಗೂ ಬ್ರಾಹ್ಮೀಲಿಪಿಯ ಈ ತಾಮ್ರಪಟವನ್ನು ತನ್ನ ಕಯ್ಯಿಂದಲೇ ಬರೆದವನು ’ಸಹತ್ತ ಲಿಖಿತೇಣ ಪಟ್ಟಿಕಾ’ ಮತ್ತು ’ರಹಸ್ಯಾಧಿಕನೂ’ ಕೋಲಿವಾಲದ ’ಭೋಜಕನೂ’ ಆಗಿದ್ದ ಭಟ್ಟಶಮ್ಮ. ಅಹಿಚ್ಛತ್ರ ಮುಂತಾದೆಡೆಯಿಂದ ವಲಸೆ ಬಂದು, ಬ್ರಹ್ಮದೇಯಗಳನ್ನು ಇಲ್ಲಿ ನಿರ್ಮಿಸಿಕೊಂಡು, ಕರ್ನಾಟಕದಲ್ಲಿ ನೆಲೆನಿಂತ ಲಿಪಿಕಾರರು ಮೊದಮೊದಲು ಆರಂಭೀನ ಕಾಲದ ಸಹಸ್ರಮಾನದ ಪ್ರಚಲಿತದಲ್ಲಿದ್ದ ವ್ಯವಹಾರ ಮಾಧ್ಯಮಗಳಿಗೆ ಹೊಂದಿಕೊಂಡಿರುವುದನ್ನು ಕಾಣಬಹುದು. ಈ ಶಾಸನ ಮಾತ್ರವಲ್ಲ, ಮಹಾರಾಷ್ಟ್ರದ ನಾನಾಘಾಟ್ ಶಿಲಾಶಾಸನ ಮುಂತಾದ ಇನ್ನೂ ಹಲವು ಉದಾಹರಣೆಗಳು ದೊರೆಯುತ್ತಾ ಸಾಗುತ್ತವೆ. ಹೀಗೆ ಸ್ಥಳೀಯ ಲಿಪಿಪ್ರಯೋಗವನ್ನು ಮೈಗೂಡಿಸಿಕೊಳ್ಳತೊಡಗಿದ ಲಿಪಿಕಾರರು ಕ್ರಮೇಣ ಸಂಸ್ಕೃತ ಪಾಠಗಳನ್ನು ಸ್ಥಳೀಯ ಕನ್ನಡ ಲಿಪಿಯಲ್ಲಿ ಬರೆಯುವುದನ್ನು ಸಾಧಿಸಿಕೊಳ್ಳತೊಡಗಿದರು. ಬ್ರಾಹ್ಮೀ, ಅರಮೈಕ್, ಮತ್ತು ಖರೋಷ್ಠೀ ಹಿನ್ನಲೆಯ ಚಪಡನು ಬ್ರಾಹ್ಮೀ-ಪ್ರಾಕೃತ ಮಾಧ್ಯಮ ಬಳಸಿ ಶಾಸನವನ್ನು ಬರೆದಂತೆ, ಸಂಸ್ಕೃತ ಹಿನ್ನಲೆಯ ಭಟ್ಟಶರ್ಮನು ಬ್ರಾಹ್ಮೀ ಪ್ರಾಕೃತ ಮಾಧ್ಯಮವನ್ನು ಬಳಸಿ ಶಾಸನ ಬರೆಯತೊಡಗಿದಾಗ ತನ್ನಭಾಷಾ ಗುಣಧರ್ಮಕ್ಕನುಗುಣವಾಗಿ ಕೆಲವು ಪ್ರಾಕೃತ ಪದಗಳನ್ನು ಸಂಸ್ಕೃತಕ್ಕೆ ಸನಿಹ ತಂದಂತೆ ಕಾಣಿಸುತ್ತದೆ. ಇದಕ್ಕೆ ಈ ತಾಮ್ರಪಟದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಪ್ರಾಕೃತದಲ್ಲಿ ’ವಛ್ಛಸಗೋತ್ತಸ್ಸ’ ಎನ್ನುವುದನ್ನು ’ವತ್ಸಸಗೋತಸ’ ಎಂದು ಬದಲಿಸಿಕೊಂಡನು ಅದು ಸಂಸ್ಕೃತದಲ್ಲಾದರೆ ’ವಾತ್ಸಸಗೋತ್ರಸ್ಯ’ಎಂದಾಗುತ್ತಿತ್ತು. ಹೀಗೇ ಮೂಲದಲ್ಲಿ ಒಂದು ಭಾಷಾ ಪರಿವಾರಕ್ಕೆ ಸೇರಿದವನು ಮತ್ತೊಂದು ಭಾಷೆಯಲ್ಲಿ ವ್ಯವಹರಿಸಬೇಕಾದಾಗ ಈ ಬಗೆಯ ಹೊಂದಾಣಿಕೆಗಳು ಆಗುವುದು ಸಹಜ. ಭಟ್ಟ ಶರ್ಮ ಈ ಶಾಸನದ ಅಂತ್ಯದಲ್ಲಿ ಕುತೂಹಲಕರವಾದ ಮತ್ತು ಕನ್ನದದ ನೆಲದಲ್ಲಿ ಮೊತ್ತ ಮೊದಲಿಗೆ ಗೋ, ಬ್ರಾಹ್ಮಣರ ಜೊತೆಗೆ, ಲೇಖಕ, ಓದುಗ ಮತ್ತು ಕೇಳುಗನಿಗೂ ವೇದಪಾರಂಗತ ಶ್ರೋತ್ರೀಯರಿಗೆ - ’ಗೋಬ್ರಾಹ್ಮಣ ಲೇಖಕವಾಚಕ ಶ್ರೋತ್ರಭ್ಯ’ ಇಲ್ಲಿ ಶ್ರೇಯಸ್ಸನ್ನು ಕೋರುತ್ತಾನೆ.
ಇದು ಕನ್ನಡ ನಾಡಿನಲ್ಲಿ ಗೋವನ್ನು ಬ್ರಾಹ್ಮಣರನ್ನೂ ಮತ್ತು ಶ್ರೋತ್ರೀಯರನ್ನೂ ಸ್ಮರಿಸಿದ ಮೊದಲ ಉಲ್ಲೇಖ ಎನ್ನಿಸುತ್ತದೆ. ಈ ಶಾಸನ ದೊರೆತದ್ದು ಬಳ್ಳಾರಿ ಜಿಲ್ಲೆಯ ಈಗಿನ ಹಿರೇ ಹಡಗಲಿಯಲ್ಲಿ. ಅದು ಮೇಲೆ ಕನ್ನಡದ ಪ್ರಾಬಲ್ಯ ಹೊಂದಿದಮೇಲೆ "ಪೊಸವಡಂಗಿಲೆ" ಎನ್ನುವುದಾಗಿ ಕರೆಸಿಕೊಳ್ಳುತ್ತಿತ್ತು
ತೀಡುವ ತಂಬೆಲರ್ಬ್ಬಳಸಿ ತದ್ವನ ಲಕ್ಷ್ಮಿಯ ಮುಂದೆ ಮಂಗಳಂ
ಬಾಡುವ ತುಂಬಿ ಕೋಡುವ ಪುಳಿಲ್ಮದೆ ಪಾಡುವ ಹಂಸರಾಗದಿಂ
ದಾಡುವ ಸೋಗೆ ಬಾದಿನೊಳವೋದಿನೊಳಂ ವಿಬುಧಾಳಿಯಂ ತೊದ 
ಲ್ಮಾಡುವ ಕೀರವೀ ಪೊಸವಡಂಗಿಲೆಯೊಪ್ಪುವ ನಂದನಂಗಳೊಳ್ ||
ಇವುಗಳಲ್ಲಿರುವ ನಂದನದ ಸೊಬಗು, ದುಂಬಿಗಳ ಝೇಂಕಾರ, ವಿದ್ವಜ್ಜನರ ವಿದ್ವತ್ ಘೋಷ್ಟಿ ಮತ್ತು ಶೈಶವದಲ್ಲಿರುವ ಮಕ್ಕಳ ತೊದಲುನುಡಿಗಳು. ಇವುಗಳು ಪೊಸವಡಂಗಿಲೆಯ ಸೊಬಗನ್ನು ಪ್ರತಿಧ್ವನಿಸುತ್ತವೆ
ಪುರಿಲಲನಾದುಕೂಲಮಗಳೊಳ್ಪರಿರಂಜಿಪ ನಿರ್ಮ್ಮಳಾಂಬು ಭಾ
ಸುರನವಫೇನರಾಜಿ ಕಳಕಾಂಚಿವೊಲೊಪ್ಪಿರೆ ಕೋಟಿ ಪೀನಪೀ 
ವರ ಕುಚ ಚಾರುಚೀನಚಳದಂಶುಕದಂತಿರೆ ಕೇತುಮಾಳೆ ವಿ 
ಸ್ತರತರ ದಾನಧರ್ಮ್ಮದ ತವರ್ಮನೆಗಳ್ಮನೆಗಳ್ಮನೋಹರ ||
ದಾನ ಧರ್ಮಗಳಿಗೆ ಇದು ತವರು ಮನೆ ಎನ್ನುತ್ತಾ ಮನೋಹರವಾದ ಪ್ರದೇಶ ಎನ್ನುವುದಾಗಿ ಈ ಸಾಲುಗಳು ಸಾರುತ್ತವೆ.  ಮನೆಮನೆ ಶಂಕರಾಚ್ಯುತಬುಧಾತಿಥಿಪೂಜೆಯಿನಗ್ನಿಹೋತ್ರದಿಂದನುಪಮ ವೇದನಾದ ಮಠಸತ್ರಸಭಾವಿಷ್ಣುವಾಗ್ನಿ ಕೇತನತತಿ ಕೇರಿಕೇರಿ ಜನರಿಂ ಸಲೆ ತಿಂತಿಣಿ ಬೀದಿ ಬೀದಿ ತಾನೆನಿಸುವುದಾಗಳುಂ ಪೊಸವಡಂಗಿಲೆ ವಿಶ್ವಮಹೀತಳಾಗ್ರದೊಳ್ || ಪ್ರತಿ ಮನೆಯಲ್ಲಿಯೂ ದೇವರ ನಾಮಸ್ಮರಣೆ. ವೇದಾದಿಗಳ ನಾದ, ಅಗ್ನಿಹೋತ್ರದ ಹೋಮಧೂಮ, ಕೇರಿಯಜನರ ನೂಪುರಗಳ ನಾದ ಪೊಸವಡಂಗಿಲೆಯು ವಿಶ್ವದಲ್ಲಿ ಅಗ್ರಸ್ಥಾನ ಪಡೆದಂತೆ ಕಂಗೊಳಿಸುತ್ತದೆ. ಇಡೀ ಊರು ಹೊಸತನದ ಬೀಡುಪೊಸಕಾವ್ಯಂ ಪೊಸಗೇಯಂ  ಪೊಸವಾದ್ಯಂ ಪೊಸ ವಿನೂತರಸಂ ವೃತ್ತಂ  ಪೊಸವಸ್ತುಂ ಪೊಸವಿಳಾಸಂ  ಪೊಸದೇಸೆ ಸಮಂತು ಪೊಸವಡಂಗಿಲೆಗೆಲ್ಲಾ ||  ಎಲ್ಲವೂ ಹೊಸತು ಅದೇ ಪೊಸವಡಂಗಿಲೆ- ಹಿರೇ ಹಡಗಲಿ.

No comments:

Post a Comment