Search This Blog

Monday 4 June 2018

ದಾಯಭಾಗ ದ ಮೂಲ ವೈವಸ್ವತನೇ ?

ಮನುವಿನ ಕುರಿತು ಋಗ್ವೇದದಲ್ಲಿಯಂತೂ ಅನೇಕ ಕಡೆ ಉಲ್ಲೇಖಗೊಂಡಿದ್ದರೆ ಆತನು ಯಾರು ಎನ್ನುವ ಕುರಿತು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಕೆಲವೆಡೆ ಮಾನವರು ಎನ್ನುವುದು ಇನ್ನು ಕೆಲವೆಡೆ ರಾಜನ ಉಲ್ಲೇಖ ಕೊಡಲಾಗಿದ್ದರೂ ಹೆಚ್ಚಿನೆಡೆ "ಮನುಸ್ವತ್" ಎಂದು ಕಾಣಿಸಿಕೊಳ್ಳುತ್ತದೆ. ಈತನನ್ನು ಮಾನವ ಕುಲಕ್ಕೆ ಮೂಲ ಪುರುಷನೆಂದೂ ಯಜ್ಞ ಯಾಗಾದಿಗಳನ್ನು ನಡೆಸುವ ಕ್ರಮವನ್ನು ತಿಳಿಸಿದಾತನೆಂದು ಒಂದು ನಿರ್ಣಯಕ್ಕೆ ಬರಬಹುದೇನೋ. ಈತನ ಕುರಿತಾಗಿನ ಒಂದು ಕಥೆಯಲ್ಲಿ ಮನುವು ತನ್ನ ಸಮಸ್ತ ಆಸ್ತಿಯನ್ನು ತನ್ನ ಮಕ್ಕಳಿಗೆ ಹಂಚಿಕೊಡುವ ಸಂದರ್ಭದಲ್ಲಿ ಈತನ ಕಿರಯಮಗನಾದ ನಾಭಾನೇದಿಷ್ಟ ಎನ್ನುವವನು ಗುರುಕುಲದಲ್ಲಿ ಬ್ರಹ್ಮಚರ್ಯದಿಂದ ವಿದ್ಯಾಭ್ಯಾಸ ಮಾಡುತ್ತಿದ್ದುದರಿಂದ ಈತನ ಬಳಿ ಇರಲಿಲ್ಲ. ಮನು ತನ್ನ ಜೊತೆಯಲ್ಲಿದ್ದ ಎಲ್ಲಾ ಮಕ್ಕಳಿಗೂ ಆಸ್ತಿಯನ್ನು ಸಮಪಾಲು ಮಾಡಿ ಕೊಟ್ಟನು. ಮುಂದೆ ನಾಭಾನೇದಿಷ್ಠನು ಸ್ನಾತಕನಾಗಿ ತಂದೆಯಬಳಿ ಬಂದಾಗ ಆಸ್ತಿಯೆಲ್ಲವೂ ಪಾಲಾಗಿತ್ತು. ಆಗ ತನ್ನ ಪಾಲನ್ನು ಕೇಳಿದಾಗ ತಂದೆ ಎಲ್ಲವನ್ನೂ ವಿವರಿಸಿ ನೀನು ಅಂಗಿರಾ ಋಷಿಗಳ ಯಾಗ ಶಾಲೆಗೆ ಹೋಗಿ ಮಂತ್ರೋಪದೇಶ ಮಾಡು ಅಲ್ಲಿ ಅವರು ಯಥೇಚ್ಚ ಧನವನ್ನು ಕೊಡುತ್ತಾರೆ ಎನ್ನುತ್ತಾನೆ. ಆತ ಹಾಗೆಯೇ ಮಾಡುತ್ತಾನೆ. ಆದರೆ ಅಂದು ಮನು ಹೇಳುವ ಒಂದು ಮಾತು ಇಂದಿಗೂ ಚಾಲ್ತಿಯಲ್ಲಿದೆ ಆಸ್ತಿಯಲ್ಲಿ ಮಹಿಳೆಗೆ ಸಮಾನ ಪಾಲು ಕೊಡಲಾಗದು ಎನ್ನುತ್ತಾನೆ ಯಾಕೆಂದರೆ ಆಕೆ ತಂದೆಯ ಮನೆಯಿಂದ ಗಂಡನ ಮನೆಗೆ ಸಾಗುತ್ತಾಳೆ ಆದುದರಿಂದ ಅಲ್ಲಿನ ಪಾಲಿಗೆ ಒಡತಿ ಆಗಬಹುದು. ತನ್ನ ಬಳಿ ಇರುವವರಿಗೆ ಮಾತ್ರವೇ ಸಮಾನ ಅಧಿಕಾರ ಎನ್ನುವುದು ಅಂದಿನ ನಿಯಮ. ಪ್ರಾಯಶಃ ಇಂದಿಗೂ ಅದೇ ಇದೆ. ದಾಯಭಾಗದ ಕೊಡುಗೆ ಅಂದಿನಿಂದಲೇ ನಮಗೆ ಬಂದಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಇದು ವಿಸ್ತಾರವಾಗಿ ಕಾಣಿಸಿಕೊಳ್ಳುತ್ತದೆ. ಋಗೇದದಲ್ಲಂತೂ ಮನುವು ಯಜ್ಞಮಾಡಿದ ಕುರಿತಾಗಿ ಹೆಚ್ಚಿನೆಡೆ ಮನುಸ್ವತ್ ಎಂದು ಬರುತ್ತದೆ ಅಥರ್ವ ವೇದದಲ್ಲಿಯೂ ಆ ಕುರಿತು ಪ್ರಸ್ತಾಪ ಬರುತ್ತದೆ. ಮನುವಿನ ವಂಶದಲ್ಲಿ ಅಗ್ನಿಯು ವಾಸಿಸುತ್ತಾನೆಂದು ಋಗ್ವೇದ ಹೇಳುತ್ತದೆ. ಅಗ್ನಿಯನ್ನು ಉದ್ದೀಪನ ಗೊಳಿಸಿ ಯಾಗವನ್ನು ಮೊತ್ತಮೊದಲಿಗೆ ಮಾಡಿ ದೇವತೆಗಳಿಗೆ ಸಪ್ತರ್ಷಿಗಳ ಸಹಿತನಾಗಿ ಆಹುತಿ ಕೊಟ್ಟವನೇ ಮನು ಎನ್ನಲಾಗುತ್ತದೆ. ಮನುಸ್ವತ್ ಎನ್ನುವ ಪದ ಇಂದಿಗೂ ಯಾಗಗಳಲ್ಲಿ ಹೇಳಲ್ಪಡುತ್ತದೆ ಅಂದಿನಿಂದ ಇಂದಿನ ತನಕವೂ ಯಾಗಗಳನ್ನು ಹೇಗೆ ಮಾಡಬೇಕೆನ್ನುವ ನಿರ್ದೇಶನ ಹಾಕಿಕೊಟ್ಟವನು ಮನುವೇ
ಇಂದ್ರನು ವಿವಸ್ವಂತನ ಮಗನಾದ ಮನುವಿನ ಅಥವಾ ಮನು ಸಾಂವರಣಿಯ ಜೊತೆಯಲ್ಲಿ ಸೋಮಪಾನ ಮಾಡಿದ್ದನಂತೆ. ವಿವಸ್ವಂತನ ಮಕ್ಕಳಲ್ಲಿ ಯಮನೂ ಒಬ್ಬನು ಆದುದರಿಂದಲೇ ಮನುಷ್ಯರಲ್ಲಿ ಇವರಿಬ್ಬರೇ ಮೊದಲಿಗರು ಎನ್ನಲಾಗುತ್ತದೆ. ಶತಪಥ ಬ್ರಾಹ್ಮಣದಲ್ಲಿ ಜೀವದಿಂದಿರುವವರಲ್ಲಿ ವೈವಸ್ವತ ಮನುವು ಮೊದಲಿಗನಾದರೆ ಯಮ ಮೃತರಾದವರಲ್ಲಿ ಮೊದಲನೆಯವನು ಮೃತರಿಗೆ ಒಡೆಯ ಎನ್ನಲಾಗಿದೆ. ಹೀಗೇ ಮನುವಿನ ಕುರಿತಾಗಿ ಬರೆಯುತ್ತಾ ಹೋದರೆ ಅದು ದೀರ್ಘವಾಗಿ ಹೋಗುತ್ತದೆ ಆದರೂ ಇನ್ನೊಂದಿಷ್ಟು....
ತ್ವಂ ವೃಥಾ ನದ್ಯ ಇಂದ್ರ ಸರ್ತವೇಚ್ಚಾ ಸಮುದ್ರಮಸೃಜೋ ರಥಾ ಇವ ವಾಜಯತೋ ರಥಾ ಇವ |
ಇತ ಊತೀರಯುಂಜತ ಸಮಾನ ಮರ್ಥಮಕ್ಷಿತಂ ಧೇನೂರಿವ ಮನವೇ ವಿಶ್ವದೋಹಸೋ ಜನಾಯ ವಿಶ್ವದೋಹಸಃ || ಋಗ್ವೇದದ ಮೊದಲನೇ ಮಂಡಲದ 130ನೇ ಸೂಕ್ತದಲ್ಲಿ ಈ ಋಕ್ ಬರುತ್ತದೆ.
ಇಂದ್ರನು ಯಾವ ಪ್ರಯತ್ನವನ್ನೂ ಮಾಡದೇ ನದಿಗಳು ತಮ್ಮ ನೀರನ್ನು ಸಮುದ್ರಕ್ಕೆ ಸೇರುವಂತೆ ಮೋಡಗಳನ್ನು ಬೇಧಿಸಿ ನದಿಗಳಲ್ಲಿ ನೀರು ಹೆಚ್ಚಾಗುವಂತೆ ಮಾಡಿದ ಎನ್ನುತ್ತದೆ ಈ ಋಕ್ಕು. ಎರಡನೇ ವಾಕ್ಯದಲ್ಲಿ ರಾಜರೇ ಮೊದಲಾದವರು ಯುದ್ಧ ಮಾಡಲು ಇಚ್ಚೆಯಿಂದಲಾಗಲೀ ಬೀಜಗಳನ್ನು ಶೇಖರಿಸುವುದಕ್ಕಾಗಲೀ ರಥಗಳನ್ನು ಸಿದ್ಧಮಾಡಿ ಅವುಗಳಿಂದ ವೇಗವಾಗಿ ಆಯಾಯ ಪ್ರದೇಶಗಳಲ್ಲಿ ತಮ್ಮ ರಥವನ್ನು ಸಂಚರಿಸುವಂತೆ ಮಾಡುವರು ಎನ್ನುವ ಅರ್ಥ ಬರುತ್ತದೆ. “ಧೇನೂರಿವ ಮನವೇ ವಿಶ್ವದೋಹಸೋ ಜನಾಯ ವಿಶ್ವದೋಹಸಃ” ಇಲ್ಲಿನ ಅರ್ಥವನ್ನೊಮ್ಮೆ ಗಮನಿಸಿದರೆ ಇಲ್ಲಿ ಮನು ಎನ್ನುವ ಶಬ್ದವನ್ನು ರಾಜನಾದ ಮನು ಎನ್ನುವುದಾಗಿ ಗೃಹಿಸಿಕೊಳ್ಳಬೇಕು ಯಾಕೆಂದರೆ ಮುಂದೆ ಜನಾಯ ಎನ್ನುವ ಪದವೂ ಬಂದಿದೆ. ಅಲ್ಲಿಯೆ ಮುಂದಿನ ಎಂಟನೇ ಋಕ್ಕಿನಲ್ಲಿ "ಮನವೇ ಶಸ್ಸದವ್ರತಾನ್ತ್ವಚಂ" ಎಂದು ಬರುವಲ್ಲಿ ಮಾನವ ಸಮೂಹವನ್ನು ಎಂದು ಅರ್ಥೈಸಲಾಗಿದೆ.
ಮೂರನೇ ಮಂಡಲದ ಅರವತ್ತನೆಯ ಸೂಕ್ತದಲ್ಲಿ “ಶಮಾನಶುರ್ಮನೋರ್ನಪಾತೋ” ಎನ್ನುವಲ್ಲಿ ಅಂಗೀರಸ್ಸಿನ ಪುತ್ರರಾದ ಋಭುಗಳು ಮಾನವರು ಎನ್ನುವ ಅಂಶವನ್ನು ಹೇಳಲಾಗುತ್ತದೆ.
ಐತರೇಯ ಬ್ರಾಹ್ಮಣ ಮತ್ತು ಇತರ ವೇದಗಳಲ್ಲೂ ಮನುವನ್ನು ಕುರಿತಾಗಿ ಹೇಳಿದ್ದರೂ ಒಮ್ಮೆ ಬೃಹಸ್ಪತಿಯನ್ನು ಮನುವೆನ್ನುತ್ತಾರೆ, ಇನ್ನೊಮ್ಮೆ ಸೂರ್ಯನನ್ನು ಮನುವೆನ್ನುತ್ತಾರೆ ಮಾನವರೆಲ್ಲಾ ಮನುವಿನಿಂದಾದರೂ ಎನ್ನುವುದೂ ಬರುತ್ತದೆ. ಆತನೊಬ್ಬ ರಾಜ ಎನ್ನುವಂತೆಯೂ ಹೇಳಲಾಗಿದೆ. ಋಗ್ವೇದದ ಎಂಟನೇ ಮಂಡಲದಲ್ಲಿ ಒಂದು ಕಡೆ ಸೂರ್ಯನನ್ನೇ ಮನು ಎಂದು ಕರೆಯಲಾಗಿದೆ.
ಇನ್ನು ಪುರಾಣಗಳಿಗೆ ಬಂದರೆ ವೈವಸ್ವತನೇ ರಾಮಾಯಣದ ಮೂಲ ಪುರುಷನಾಗುತ್ತಾನೆ.
ರಾಮಯಣದ ಬಾಲಕಾಂಡದ 70ನೇ ಸರ್ಗದಲ್ಲಿ
ತಸ್ಮಾನ್ಮರೀಚಿಃ ಸಂಜಜ್ಞೇ ಮರೀಚೇಃ ಕಶ್ಯಪಃ ಸುತಃ |
ವಿವಸ್ವಾನ್ಕಶ್ಯಪಾಜ್ಜಜ್ಞೇ ಮನುರ್ವೈವಸ್ವತಃ ಸ್ಮೃತಃ || 20 ||
ಮನುಃ ಪ್ರಜಾಪತಿಃ ಪೂರ್ವಮಿಕ್ಷ್ವಾಕುಸ್ತು ಮನೋಃ ಸುತಃ |
ತಮಿಕ್ಷ್ವಾಕುಮಯೋಧ್ಯಾಯಾಂ ರಾಜಾನಂ ವಿದ್ಧಿ ಪೂರ್ವಕಮ್ || 21 ||
ಮರೀಚಿಯ ಮಗ ಕಶ್ಯಪ, ಕರ್ದಮನ ಮಗಳಾದ ಕಲೆ ಎನ್ನುವವಳಿಗೆ ಹುಟ್ಟಿದವನು ಈತ. ಕಶ್ಯಪನನ್ನು ಪ್ರಜಾಪತಿ ಅಥವಾ ಬ್ರಹ್ಮ ಎನ್ನಲಾಗುತ್ತದೆ. ಈತನ ಮಗ ವೈವಸ್ವತ. ಈ ವೈವಸ್ವತನನ್ನು ಮನು ಎನ್ನಲಾಗುತ್ತದೆ. ಈತನೇ ಅಯೋಧ್ಯೆಯ ರಾಜರಿಗೆಲ್ಲಾ ಮೊದಲಿಗನು. ಎಂದು ಶ್ಲೋಕಗಳಲ್ಲಿ ಹೇಳಲಾಗಿದೆ.
ಬಾಲಕಾಂಡದ ಆರನೇ ಸರ್ಗದಲ್ಲೊಂದು ಕಡೆ "ಹಿಂದೆ ವೈವಸ್ವತಮನುವು ಮಹಾತೇಜಸ್ಸಿನಿಂದ ಕೂಡಿದವನಾಗಿ ಲೋಕವನ್ನು ಹೇಗೆ ರಕ್ಷಣೆಮಾಡುತ್ತಿದ್ದನೋ–ಅದೇ ರೀತಿಯಲ್ಲಿ ಮಾನವ ಕುಲಾವತಂಸನಾದ ದಶರಥನೂ ಅಯೋಧ್ಯೆಯಲ್ಲಿ ವಾಸಿಸುತ್ತಾ ಭೂಲೋಕ ವನ್ನು ಪಾಲನೆಮಾಡುತ್ತಿದ್ದನು. ಎಂದು ಉಲ್ಲೇಖಿಸಲಾಗಿದೆ.
ಅಯೋಧ್ಯಾಕಾಂಡದ 110ನೇ ಸರ್ಗದಲ್ಲಿ "ಜಾಬಾಲಿಗಳ ನಾಸ್ತಿಕವಾದವನ್ನು ಕೇಳಿ ರಾಮನು ಕೋಪಗೊಂಡಿರುವನೆಂಬುದನ್ನು ತಿಳಿದ ವಸಿಷ್ಠರು ಶ್ರೀರಾಮನಿಗೆ ಹೀಗೆ ಹೇಳುತ್ತಾರೆ “ರಾಮ! ಜಾಬಾಲಿಗಳು ಕೂಡ ಜನರ ಹುಟ್ಟು-ಸಾವುಗಳ ರಹಸ್ಯವನ್ನು ಚೆನ್ನಾಗಿ ತಿಳಿದಿರುವರು. ನಿನ್ನನ್ನು ಅಯೋಧ್ಯೆಗೆ ಹಿಂದಿರುಗಿಸಬೇಕೆನ್ನುವ ಆಶಯದಿಂದ ನಾಸ್ತಿಕವಾದವನ್ನು ಆಶ್ರಯಿಸಿ ಹೀಗೆ ಮಾತನಾಡಿದರು. ಈ ಜಗದ ಸೃಷ್ಟಿಗೆ ಮೊದಲು ಎಲ್ಲೆಲ್ಲೂ ನೀರೇ ವ್ಯಾಪಿಸಿದ್ದಿತು. ಕೆಲಕಾಲಾನಂತರ ನೀರಿನಲ್ಲಿಯೇ ಭೂಮಿಯು ಹುಟ್ಟಿತು. ಅನಂತರ ದೇವತೆಗಳೊಡನೆ ಬ್ರಹ್ಮನು ಹುಟ್ಟಿದನು. ಅನಂತರ ಅವನೇ ವರಾಹರೂಪವನ್ನು ಧರಿಸಿ ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ಮೇಲಕ್ಕೆತ್ತಿದನು. ಬಳಿಕ ಚತುರ್ಮುಖನು ಪ್ರಯತ್ನಶೀಲರಾದ ದಕ್ಷನೇ ಮೊದಲಾದ ತನ್ನ ಮಕ್ಕಳೊಡನೆ ಈ ಜಗತ್ತನ್ನು ಸೃಷ್ಟಿಸಿದನು. ಬ್ರಹ್ಮನಿಂದ ಮರೀಚಿಯು ಹುಟ್ಟಿದನು. ಮರೀಚಿಯ ಮಗನು ಕಾಶ್ಯಪನು. ಕಾಶ್ಯಪನಿಂದ ವಿವಸ್ವಂತನು (ಸೂರ್ಯನು) ಹುಟ್ಟಿದನು. ಅವನ ಮಗನೇ ವೈವಸ್ವತಮನುವು. ಅವನೇ ಮೊದಲನೆಯ ಪ್ರಜಾಪತಿಯು. ಮನುವಿನ ಮಗ ಇಕ್ಷ್ವಾಕು ಎಂಬುವನು. ಸಂಪತ್ಸಮೃದ್ಧವಾದ ಈ ಸಾಮ್ರಾಜ್ಯವನ್ನು ಮನುವು ಇಕ್ಷ್ವಾಕುವಿಗೆ ಕೊಟ್ಟನು. ಇಕ್ಷ್ವಾಕುವೇ ಅಯೋಧ್ಯೆಗೆ ಮೊದಲನೆಯ ರಾಜನು. ಅಂದರೆ ಇಲ್ಲಿ ಮನು ಒಬ್ಬ ಸೂರ್ಯ ಎಂದು ಹೇಳಲಾಗಿದೆ.
ಮಹಾಭಾರತದಲ್ಲಿ "ಯಮೋ ವೈವಸ್ವತಸ್ತಸ್ಯ ನಿರ್ಯಾತಯತಿ ದುಷ್ಕೃತಮ್ " ಎಂದು ಯಮನೆಂದು ಮನುವನ್ನು ಹೇಳಲಾಗಿದೆ.
ಇಂದು ಚರ್ಚಿತವಾಗುತ್ತಿರುವ ಆಗಾಗ ದೌರ್ಜನ್ಯಕ್ಕೊಳಗಾಗುತ್ತಿರುವ ಮನು ಯಾರು ಎನ್ನುವುದು ನನಗಂತೂ ತಿಳಿಯುತ್ತಿಲ್ಲ. ಆದರೆ ಮನುಷ್ಯರಿಂದಲೇ ದೌರ್ಜನ್ಯವಾಗುತ್ತಿದೆ.

No comments:

Post a Comment