Search This Blog

Saturday 30 June 2018

ವಾರಾಣಸೀ -ವಾರಣಾಸೀ - ವರಣಸೀ


ಕಾಶಿಯಲ್ಲಿ ಹರ್ಯಶ್ವನೆಂಬ ರಾಜನು ರಾಜ್ಯವನ್ನಾಳುತ್ತಿದ್ದನು. ಆತ ಪರಾಕ್ರಮಿಯಾಗಿದ್ದ. ಮತ್ತು ಅಷ್ಟೇ ಖ್ಯಾತಿಯನ್ನು ಪಡೆದಿದ್ದ. ಒಮ್ಮೆ ವೀತಹವ್ಯನ ಸಾವಿರ ಮಕ್ಕಳೆಲ್ಲಾ ಸೇರಿ ಹರ್ಯಶ್ವನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಗಂಗಾ-ಯಮುನೆಯರ ಮಧ್ಯದಲ್ಲಿ ನಡೆದ ಮಹಾಯುದ್ಧದಲ್ಲಿ ಹರ್ಯಶ್ವ ಮರಣ ಹೊಂದುತ್ತಾನೆ. ಮಹಾರಥರಾದ ಹೈಹಯನ ಮಕ್ಕಳು ಹರ್ಯಶ್ವರಾಜನನ್ನು ಸಂಹರಿಸಿ ತಮ್ಮ ರಾಜಧಾನಿಗೆ ಹಿಂದಿರುಗುತ್ತಾರೆ. ಹರ್ಯಶ್ವನು ಸತ್ತ ನಂತರ ಅವನ ಮಗನಾದಸುದೇವನೆಂಬವನು (ಈತನಿಗೆ ಧನ್ವನೆನ್ನುವ ಹೆಸರೂ ಇದೆ) ಕಾಶೀರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗುತ್ತಾನೆ. ಧರ್ಮಿಷ್ಟ. ಪುನಃ ವೀತಹವ್ಯನ ಸಾವಿರ ಮಕ್ಕಳು ಸುದೇವನ ಮೇಲೂ ದಂಡೆತ್ತಿ ಬಂದು ಅವನನ್ನು ಯುದ್ಧದಲ್ಲಿ ಸಂಹರಿಸಿ ತಮ್ಮ ರಾಜಧಾನಿಗೆ ಹೊರಟು ಹೋಗುತ್ತಾರೆ. ಬಳಿಕ ಅಮಾತ್ಯರು ಸುದೇವನ ಮಗನಾದ ದಿವೋದಸನನ್ನು ಕಾಶೀರಾಜ್ಯದ ಸಿಂಹಾಸನದಲ್ಲಿ ಪಟ್ಟಾಭೀಷೇಕಮಾಡುತ್ತಾರೆ. ಮಹಾತೇಜಸ್ವಿಯಾಗಿದ್ದ ದಿವೋದಸನು ಜಿತೇಂದ್ರಿಯರಾದ ಹೈಹಯ ಸುತರ ಪರಾಕ್ರಮವನ್ನು ಮನಗಂಡು ಇಂದ್ರನನ್ನು ಆರಾಧಿಸಿ ಅವನ ಆಜ್ಞಾನುಸಾರವಾಗಿ ಅಭೇದ್ಯವಾದ "ವಾರಾಣಸೀ" ಎಂಬ ನಗರವನ್ನು ನಿರ್ಮಿಸುತ್ತಾನೆ. ನೂತನವಾದ ಪಟ್ಟಣವು ಸುಸಜ್ಜಿತವಾದ ವ್ಯವಸ್ಥೆಗಳನ್ನು ಒಳಗೊಂಡಿತ್ತು. ಅದು ಸಂಪದ್ಭರಿತ ನಾಡಾಗಿತ್ತು. "ವಾರಾಣಸೀ" ನಗರದ ಒಂದು ಭಾಗವು ಗಂಗಾನದಿಯ ಉತ್ತರದಿಕ್ಕಿನ ತೀರಪ್ರದೇಶದವರೆಗೂಮತ್ತೊಂದು ಭಾಗವು ಗೋಮತೀ ನದಿಯ ದಕ್ಷಿಣತೀರಪ್ರದೇಶದವರೆಗೂವ್ಯಾಪಿಸಿತ್ತಲ್ಲದೇ ಪಟ್ಟಣವು ಅತ್ಯಂತಸುಂದರವಾಗಿದ್ದು ಇಂದ್ರನ ಅಮರಾವತಿಗೆ ಕಡಿಮೆ ಇರಲಿಲ್ಲ. ಧರ್ಮದಿಂದ ರಾಜ್ಯವನ್ನು ಪಾಲಿಸಿಕೊಂಡು ವಾರಾಣಾಸಿಯಲ್ಲಿ ವಾಸಮಾಡುತ್ತಿದ್ದ ದಿವೋದಸನ ಪಟ್ಟಣಕ್ಕೆ ಹೈಹಯಕುಮಾರರು ಪುನಃ ಮುತ್ತಿಗೆಹಾಕಿದರು. ಈಗ ದಿವೋದಸನು ಪಟ್ಟಣದಿಂದ ಹೊರಬಂದು ಹೈಹಯಕುಮಾರರನ್ನು ಎದುರಿಸಿ ಅವರೊಡನೆ ಘೋರ ಯುದ್ಧ ಮಾಡಿದನು. ಒಂದು ನೂರು ದಿವಸಗಳವರೆಗೆ ಯುದ್ಧಮಾಡುತ್ತಿದ್ದ ದಿವೋದಸನು ಯುದ್ಧದಲ್ಲಿ ತನ್ನ ಅನೇಕ ರಥಿಕರನ್ನೂಅಶ್ವ ಸೈನಿಕರನ್ನೂಗಜಸೈನಿಕರನ್ನೂಕಾಲಾಳುಗಳನ್ನೂ ಕಳೆದುಕೊಂಡನು. ಅವನ ಭಂಡಾರವೂ ಬರಿದಾಯಿತು. ಅಂತಹ ದಯನೀಯವಾದ ಅವಸ್ಥೆಯನ್ನು ಹೊಂದಿದ ರಾಜನು ಅಜೇಯಶತ್ರುಗಳನ್ನು ಎದುರಿಸಿ ಯುದ್ಧಮಾಡಲು ಸಾಧ್ಯವಾಗದೇ ಪಟ್ಟಣವನ್ನೇ ತ್ಯಜಿಸಿ ಪಲಾಯನ ಮಾಡಿದನು. ಬಳಿಕ ದಿವೋದಾಸನು ಭರದ್ವಾಜಮುನಿಯ ಆಶ್ರಮಕ್ಕೆ ಹೋಗಿ ಮಹರ್ಷಿಯ ಮುಂದೆ ಕೈಜೋಡಿಸಿ ಅವನಿಗೆ ಶರಣಾಗತನಾದನು. ಬೃಹಸ್ಪತಿಯ ಜ್ಯೇಷ್ಠಪುತ್ರನಾದಭರದ್ವಾಜನು ದಿವೋದಸನಿಗೆ ಹೀಗೆ ಕೇಳುತ್ತಾನೆ.
ಕಿಮಾಗಮನಕೃತ್ಯಂ ತೇ ಸರ್ವಂ ಪ್ರಬ್ರೂಹಿ ಮೇ ನೃಪ |
ಯತ್ತೇ ಪ್ರಿಯಂ ತತ್ಕರಿಷ್ಯೇ ಮೇಽತ್ರಾಸ್ತಿ ವಿಚಾರಣಾ || ೨೫ ||
ರಾಜನೇ! ಯಾತಕ್ಕಾಗಿ ಬಂದಿರುವೆಎಲ್ಲವನ್ನೂ ನನಗೆ ಹೇಳು. ನಿನಗೆ ಪ್ರಿಯವಾದ ಕಾರ್ಯವನ್ನು ನಾನು ಮಾಡಿಕೊಡುವೆನು. ಆಗ ದಿವೋದಸನು ಹೇಳುತ್ತಾನೆ ಯುದ್ಧದಲ್ಲಿ ವೀತಹವ್ಯನ ಮಕ್ಕಳು ನನ್ನ ವಂಶವನ್ನೇ ನಾಶಮಾಡಿಬಿಟ್ಟರು. ಯುದ್ಧದಲ್ಲಿ ಪರಾಜಯವನ್ನು ಹೊಂದಿ ಎಲ್ಲವನ್ನೂ ಕಳೆದುಕೊಂಡಿರುವ ನಾನೊಬ್ಬನೇ ಈಗ ಉಳಿದುಕೊಂಡಿದ್ದೇನೆ. ರಕ್ಷಣೆಗಾಗಿ ನಿನ್ನಲ್ಲಿ ಬಂದಿರುವೆ ಎನ್ನುತ್ತಾನೆ. ಪಾಪಕರ್ಮಿಗಳಾದ ವೀತಹವ್ಯನ ಮಕ್ಕಳು ನಮ್ಮ ವಂಶದಲ್ಲಿ ನನ್ನೊಬ್ಬನನ್ನು ಮಾತ್ರವೇ ಜೀವಂತ ಉಳಿಸಿದ್ದಾರೆ ಎನ್ನುತ್ತಾನೆ. ಆಗ ಭರಧ್ವಾಜನು ಭಯಪಡಬೇಡ. ನಿನಗೆ ಪುತ್ರಪ್ರಾಪ್ತಿಗಾಗಿ ನಾನೊಂದು ಇಷ್ಟಿಯನ್ನು ಮಾಡುತ್ತೇನೆ. ಇಷ್ಟಿಯ ಫಲವಾಗಿ ಹುಟ್ಟುವ ಪುತ್ರನ ಮೂಲಕವಾಗಿ ನೀನು ವೀತಹವ್ಯನ ಸಾವಿರಮಕ್ಕಳನ್ನೂ ಸಂಹರಿಸುವೆ.” ಭರದ್ವಾಜನು ಹೀಗೆ ಹೇಳಿ ಒಡನೆಯೇ ರಾಜನಿಂದ ಪುತ್ರಕಾಮೇಷ್ಟಿಯನ್ನು ವಿಧಿವತ್ತಾಗಿ ಮಾಡಿಸುತ್ತಾನೆ. ಈ ಯಾಗದ ಫಲವಾಗಿ ದಿವೋದಾಸನಿಗೆ "ಪ್ರತರ್ದನ"ನೆಂಬ ಮಗನು ಹುಟ್ಟುತ್ತಾನೆ. ಪ್ರತರ್ದನನು ಹುಟ್ಟಿದೊಡನೆಯೇ ಹದಿಮೂರು ವರ್ಷದ ಪ್ರಾಯದವನಾಗಿ ಬೆಳೆದುಬಿಟ್ಟನು. ಆಗಲೇ ಅವನು ಸಂಪೂರ್ಣ ವೇದಗಳನ್ನೂ ಅಧ್ಯಯನಮಾಡಿದ್ದನು. ಧನುರ್ವೇದದಲ್ಲಿಯೂ ಪಾರಂಗತನಾಗಿದ್ದನು. ದಿವೋದಾಸನು ಸುದೇವ ಅಥವಾ ಧನ್ವನ ಮಗನಾಗಿದ್ದರಿಂದ ಈತನಿಗೆ ಧನ್ವಂತರಿ ಎನ್ನುವ ಹೆಸರೂ ಇತ್ತು. ಈತನೇ ಇಂದು ನಾವು ಆರಾಧಿಸಿಕೊಂಡು ಬರುವ ಧನ್ವಂತರಿ. ಆಯುರ್ವೇದದ ಜನಕ. ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರ ಪ್ರವರ್ತಕನೆಂದು ಖ್ಯಾತ. ಈತನ ಅಂದರೆ ದಿವೋದಾಸನ ಹೆಸರು ಋಗ್ವೇದದಲ್ಲಿ ಸಿಗುತ್ತದೆ ಆದರೆ ಧನ್ವಂತರಿಯ ಹೆಸರು ಸಿಗುವುದಿಲ್ಲ. ಕೌಶಿಕ ಸೂತ್ರದಲ್ಲಿ ಧನ್ವಂತರಿಯ ಹೆಸರು ಪ್ರಾಯಶಃ ಮೊತ್ತಮೊದಲು ಸೂಚಿತವಾಗಿದೆ ಎನ್ನಬಹುದು. ಮಹಾಭಾರತಕ್ಕೆ ಸೇರಿದ ಹರಿವಂಶದಲ್ಲಿ ಅಷ್ಟಾಂಗ ಆಯುರ್ವೇದ ಶಾಸ್ತ್ರ ಪ್ರವರ್ತಕನಾದ ಕಾಶಿರಾಜನ ವಂಶದಲ್ಲಿ ಈತ ಜನ್ಮ ತಾಳಿದನೆಂದೂ ಕಾಶಿರಾಜ ಅಥವಾ ಧನ್ವರಾಜನ ಮಗನಾದ್ದರಿಂದ ಈತನನ್ನು ಧನ್ವಂತರಿ ಎಂದು ಕರೆಯಲಾಯಿತೆಂದೂ ಸೂಚಿತವಾಗಿದೆ. ಕಾಶಿರಾಜರ ವಂಶವೃಕ್ಷ ಹರಿವಂಶದಲ್ಲಿ ರೀತಿ ಸೂಚಿತವಾಗಿದೆ : ಕಾಶೇಯ,ದೀರ್ಘತಪಸ್ಸುಧನ್ವಧನ್ವಂತರಿಕೇತುಕಾಮಭೀಮರಥ (ಭೀಮಸೇನ)ದಿವೋದಾಸಪ್ರತರ್ದನವತ್ಸಅಲರ್ಕ. ಕಾಶೇಯನ ಪೌತ್ರನಾದ ಧನ್ವ ಹಾಲಿನ ಸಮುದ್ರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರನಾದ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಧನ್ವಂತರಿ ಭರದ್ವಾಜರಿಂದ ಆಯುರ್ವೇದದ ಉಪದೇಶಗಳನ್ನು ಪಡೆದು ವಿಜ್ಞಾನವನ್ನು ಶಲ್ಯಶಾಕಲ್ಯಕಾಯಚಿಕಿತ್ಸಾಭೂತವಿದ್ಯಾಕೌಮಾರಭೃತ್ಯಅಗದತಂತ್ರರಸಾಯನಶಾಸ್ತ್ರ ಮತ್ತು ವಾಜೀಕರಣ ತಂತ್ರಗಳೆಂದು ಎಂಟು ಭಾಗಗಳಾಗಿ ಶಿಷ್ಯರಿಗೆ ಉಪದೇಶಿಸಿದನಂತೆ.
ಸುಶ್ರುತ ಸಂಹಿತೆಯಲ್ಲಿ ಕಾಶಿಯ ರಾಜನಾದ ದಿವೋದಾಸನೇ ಧನ್ವಂತರಿ ಎಂದು ಹೇಳಿದೆ. ಈತ ಆಯುರ್ವೇದದಲ್ಲಿ ಪಾರಂಗತನಾಗಿದ್ದುದರಿಂದ ಈತನನ್ನು ಧನ್ವಂತರಿ ದಿವೋದಾಸನೆಂದು ಕರೆಯುತ್ತಾರೆ. ಅಗ್ನಿಪುರಾಣ ಮತ್ತು ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವನೇ ದಿವೋದಾಸನೆಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಮನುಷ್ಯಕುದುರೆಹಸುಗಳಿಗೆ ಸಂಬಂಧಿಸಿದ ಆಯುರ್ವೇದ ಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು ಶಿಷ್ಯ ಸಂಭಾಷಣೆಯ ರೂಪದಲ್ಲಿ ವರ್ಣಿತವಾಗಿದೆ. ಧನ್ವಂತರಿದಿವೋದಾಸ ಸುಶ್ರುತನಿಗೆ ಆಯುರ್ವೇದವನ್ನು ಉಪದೇಶಿಸಿದನೆಂದು ಹೇಳಿದೆ.
ಶಲ್ಯ ಶಾಸ್ತ್ರದಲ್ಲಿ ಪಾರಂಗತರಾದವರನ್ನು ಧನ್ವಂತರಿ ಎಂದೂ ಕರೆಯುತ್ತಾರೆ. ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಪ್ರಧಾನವಾದುದರಿಂದ ಶಲ್ಯ ಅಂಗದಲ್ಲಿ ನಿಪುಣನಾದ ವೈದ್ಯನನ್ನು ಪ್ರಾರಂಭದಲ್ಲಿ ಧನ್ವಂತರಿ ಎಂದೇ ಕರೆಯುತ್ತಿದ್ದರು. ವೈದ್ಯರನ್ನು ಮೂರು ವಿಧವಾಗಿ ವಿಂಗಡಿಸಿ ಒಂದೇ ರೋಗಕ್ಕೆ ನೂರು ಔಷಧಿಗಳನ್ನು ಬಲ್ಲವನನ್ನು ವೈದ್ಯನೆಂದೂ ಇನ್ನೂರು ಔಷಧಿಗಳನ್ನು ಬಲ್ಲವನನ್ನು ಭಿಷಕ್ ಎಂದೂ ಮೂನ್ನೂರು ಔಷಧಿಗಳನ್ನು ಬಲ್ಲವನನ್ನು ಧನ್ವಂತರಿ ಎಂದು ಕರೆಯುತ್ತಿದ್ದರು. ವೈದ್ಯ ಚಿಕಿತ್ಸೆಯಲ್ಲಿ ನಿಪುಣನಾದವನನ್ನು ಅನಂತರ ಧನ್ವಂತರಿ ಎಂದು ಕರೆಯಲಾಯಿತು.
 ಸ್ಕಾಂದಪುರಾಣ ಗರುಡಪುರಾಣ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿರುವ ಕಥೆಯ ಪ್ರಕಾರ ಗಾವಲನೆಂಬ ಋಷಿ ಸಂಚರಿಸುತ್ತಿರುವಾಗ ಬಹಳ ಬಾಯಾರಿದವನಾಗಿ ದಾರಿಯಲ್ಲಿ ನೀರನ್ನು ಹೊತ್ತು ಬರುತ್ತಿದ್ದ ವೈಶ್ಯಕನ್ಯೆಯಾದ ವೀರಭದ್ರಾ ಎಂಬಾಕೆಯಿಂದ ನೀರು ಪಡೆದು ತೃಪ್ತನಾಗಿ ಆಕೆಗೆ ಉತ್ತಮವಾದ ಮಗನಾಗಲೆಂದು ಆಶೀರ್ವದಿಸಿದನೆಂದೂ ಕಾಲಕ್ರಮೇಣ ಆಕೆಯಲ್ಲಿ ಜನಿಸಿದ ಗಂಡು ಮಗು ಬಾಲ್ಯದಲ್ಲಿಯೇ ಸಕಲಶಾಸ್ತ್ರಗಳಲ್ಲಿ ಪಾರಂಗತನಾಗಿ ಅಶ್ವಿನೀಕುಮಾರರಿಂದ ಆಯುರ್ವೇದವನ್ನು ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದೂ ವರ್ಣಿತವಾಗಿದೆ.
ಧರ್ಮಾತ್ಮನಾದ ದಿವೋದಾಸನು ವಾರಾಣಸೀಪುರಿಗೆ ರಾಜನಾಗಿದ್ದನು. ಅದೇ ಸಮಯದಲ್ಲಿ ಭಗವಾನ್ ಶಂಕರನು ಪಾರ್ವತಿಯನ್ನು ವಿವಾಹಮಾಡಿಕೊಂಡು ಅವಳಿಗೆ ಪ್ರಿಯವನ್ನುಂಟು ಮಾಡುವ ಅಪೇಕ್ಷೆಯಿಂದ ಮಾವನಾದ ಹಿಮವಂತನ ಮನೆಯಲ್ಲೇ ಇದ್ದುಬಿಟ್ಟನು. ಸಮಯದಲ್ಲಿ ಮಹಾದೇವನ ಆಜ್ಞೆಯಂತೆ ದೇವೀಮಂತ್ರಗಳ ಪಾರ್ಷದರು ಮಹೇಶ್ವರನ ಪುನಶ್ಚರಣೆಯಿಂದ ಪಾರ್ವತಿಯನ್ನು ತುಷ್ಟಿಗೊಳಿಸುತ್ತಿದ್ದರು. ಇದರಿಂದ ಪಾರ್ವತಿಯು ಸಂತುಷ್ಟಳಾದಳು. ಆದರೆ ಅವಳ ತಾಯಿಯಾದ ಮೇನೆಗೆ ಇದು ಸಹ್ಯವಾಗಲಿಲ್ಲ. ಅವಳು ಮಗಳ ಎದುರಿನಲ್ಲಿಯೇ ಮಹೇಶನನ್ನೂ ಅವನ ಪಾರ್ಷದರನ್ನೂ ಅನಾಚಾರಿಗಳೆಂದು ನಿಂದಿಸುತ್ತಿದ್ದಳು. ಇದರಿಂದ ಕುಪಿತಳಾದ ಉಮೆಯು ಮಹೇಶನ ಬಳಿಗೆ ಹೋಗಿ ದೇವ! ಇನ್ನು ಮುಂದೆ ನಾನಿಲ್ಲಿ ವಾಸಮಾಡುವುದಿಲ್ಲ. ನಿನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗು.” ಎಂದು ಹೇಳಿದಳು. ಪಾರ್ವತಿಯು ಹೇಳಿದಂತೆ ಮಾಡಲು ತಾನು ವಾಸವಾಗಿರಲು ಯೋಗ್ಯಸ್ಥಳವು ಯಾವುದೆಂದು ನಿರ್ಧರಿಸಲು ಮಹಾದೇವನು ಎಲ್ಲ ಲೋಕಗಳನ್ನೂ ಅವಲೋಕಿಸಿದನು. ಮಹೇಶ್ವರನು ಪಾರ್ವತಿಯೊಡನೆ ವಾಸಮಾಡಿಕೊಂಡಿರಲು ಭೂಲೋಕವನ್ನೇ ಆರಿಸಿಕೊಂಡನು. ಅದರಲ್ಲಿಯೂ ಸಿದ್ಧಿಕ್ಷೇತ್ರವಾದ ವಾರಾಣಸಿಯೇ ಅವನಿಗೆ ಬಹಳ ಮೆಚ್ಚುಗೆಯಾಯಿತು. ದಿವೋದಾಸನು ವಾರಾಣಸಿಯನ್ನು ಆಳುತ್ತಿರುವನೆಂದು ತಿಳಿದು ಮಹೇಶನು ತನ್ನ ಪಾರ್ಷದನಾದ ನಿಕುಂಭನಿಗೆ ವಾರಾಣಸೀ ಕ್ಷೇತ್ರವನ್ನು ಮನುಷ್ಯ ರಹಿತವನ್ನಾಗಿ ಮಾಡುವಂತೆ ಹೇಳಿದನು. ಶಂಕರನ ಆಜ್ಞೆಯಂತೆ ನಿಕುಂಭನು ವಾರಾಣಸಿಗೆ ಹೋಗಿ ಕಂಡುಕನೆಂಬವನ ಕನಸಿನಲ್ಲಿ ಕಾಣಿಸಿಕೊಂಡು ಪಟ್ಟಣದ ಗಡಿಯಲ್ಲಿ ಅವನದೊಂದು ಪ್ರತಿಮೆಯನ್ನು ಸ್ಥಾಪಿಸುವಂತೆಯೂ ಮೂಲಕ ಅವನಿಗೆ ಅಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆಯೂ ತಿಳಿಸಿದನು. ಕಂಡುಕನು ರಾಜನಿಗೆ ತಿಳಿಸಿ ನಗರದ ಗಡಿಯಲ್ಲಿ ನಿಕುಂಭನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪ್ರತಿಮೆಗೆ ಮಹಾಪೂಜೆಯನ್ನೂ ಮಾಡತೊಡಗಿದನು. ಕಂಡುಕನು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿಮೆಯೊಂದನ್ನು ಪೂಜಿಸುತ್ತಿದ್ದಾನೆಂಬ ವಿಷಯವನ್ನು ತಿಳಿದ ವಾರಾಣಸಿಯ ನಾಗರಿಕರು ಸಾಲು-ಸಾಲಾಗಿ ನಿಕುಂಭನನ್ನು ಪೂಜಿಸಲು ಬರತೊಡಗಿದರು. ಹಾಗೆ ಪೂಜಿಸಿದವರೆಲ್ಲರಿಗೂ ನಿಕುಂಭನು ಬೇಡಿದ ವರಗಳನ್ನು ದಯಪಾಲಿಸುತ್ತಿದ್ದನು. ದಿವೋದಸನ ಪತ್ನಿಯಾದ ಸುಯಶಾ ಎಂಬುವಳು ಕೂಡ ಸಂತಾನವನ್ನು ಪಡೆಯುವ ಸಲುವಾಗಿ ನಿಕುಂಭನ ಪ್ರತಿಮೆಯಿದ್ದೆಡೆಗೆ ಬಂದು ಮಹಾಪೂಜೆಯನ್ನು ಮಾಡತೊಡಗಿದಳು. ಆದರೆ ಎಷ್ಟು ಪ್ರಾರ್ಥಿಸಿದರೂ ನಿಕುಂಭನು ರಾಣಿಗೆ ಸಂತಾನದ ವರವನ್ನು ಕೊಡಲಿಲ್ಲರಾಜನು ಯಾವುದಾದರೂ ಕಾರಣದಿಂದ ನಮ್ಮ ಮೇಲೆ ಕೋಪಿಸಿಕೊಂಡರೆ ಒಡನೆಯೇ ನಮ್ಮ ಕಾರ್ಯಸಿದ್ಧಿಯಾಗುತ್ತದೆಎಂಬುದು ನಿಕುಂಭನ ಅಭಿಪ್ರಾಯವಾಗಿದ್ದಿತು. ತನ್ನ ಪತ್ನಿಯು ಎಷ್ಟು ಪೂಜಿಸಿದರೂ ಎಷ್ಟು ಬೇಡಿಕೊಂಡರೂ ಸಂತಾನಪ್ರಾಪ್ತಿಯಾಗದಿರಲು ದಿವೋದಾಸನು ಕುಪಿತನಾಗಿ ನಿಕುಂಭನ ಪ್ರತಿಮೆಯಿದ್ದ ಸ್ಥಾನವನ್ನು ವಿನಾಶಗೊಳಿಸಿದನು. ತನ್ನ ಆಲಯವು ಭಗ್ನವಾದುದನ್ನು ಕಂಡು ನಿಕುಂಭನು ರಾಜನಿಗೆ ನನ್ನ ಆಲಯವನ್ನು ವಿನಾಶಗೊಳಿಸಿದ ಕಾರಣ ನಿನ್ನ ಪಟ್ಟಣವು ಅನಿರೀಕ್ಷಿತವಾಗಿ ಜನಶೂನ್ಯವಾಗುತ್ತದೆಎಂದು ಶಪಿಸಿದನು. (ಇಂದಿಗೂ ವಾರಣಾಸಿಯಲ್ಲಿ ಅಲ್ಲಿನ ಮೂಲ ನಿವಾಸಿಗಳೆಂದು ಯಾರೂ ಇಲ್ಲ ಎಲ್ಲರೂ ಬೇರೆಡೆಯಿಂದ ಅಲ್ಲಿ ಹೋಗಿ ನೆಲೆನಿಂತು ನೆಲೆ ಕಂಡುಕೊಂಡವರೇ ಇರುವುದು) ವಾರಾಣಸಿಯಲ್ಲಿ ಅದರಂತೆ ವಾಸಮಾಡುತ್ತಿದ್ದ ವಾರಾಣಸಿ ಜನಶೂನ್ಯವಾಯಿತು. ದಿಕ್ಕಾಪಾಲಾಗಿ ಓಡಿಹೋದರು. ಅನಂತರ ಮಹಾದೇವನು ಪಟ್ಟಣದಲ್ಲಿ ತನ್ನ ನಿವಾಸವನ್ನು ಕಲ್ಪಿಸಿಕೊಂಡನು. ಹೀಗೆ ದಿವೋದಾಸನ ಕುರಿತಾಗಿ ಹಾಗೂ ವಾರಾಣಸಿಯ ಕುರಿತಾಗಿ ಪುರಾಣಗಳಲ್ಲಿ ವಿಧವಿಧದ ಕಥೆಗಳು ದೊರಕುತ್ತವೆ. ಬ್ರಹ್ಮ ವೈವರ್ತಪುರಾಣದಲ್ಲಿ ಈತ ಸರ್ವವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಈತನ ಭಾವಚಿತ್ರ ರೀತಿಯ ಪ್ರತಿಮೆಯ ವಿಚಾರವಾಗಿ ಭಾಗವತಪುರಾಣ ಮಾರ್ಕಂಡೇಯ ಪುರಾಣ ವಿಷ್ಣುಧರ್ಮೋತ್ತರ ಪುರಾಣ ವಿಷ್ಣು ಪುರಾಣಗಳಲ್ಲೂ ಶಿಲ್ಪರತ್ನ 'ಸಮರಾಂಗಣಸೂತ್ರಧಾರ' ಎಂಬ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿಯೂ ವಿವರಣೆಗಳಿವೆ. ಆದರೆ ಗ್ರಂಥಗಳಲ್ಲಿ ವರ್ಣಿತವಾಗಿರುವಂತೆ ಇರುವ ಧನ್ವಂತರಿಯ ವಿಗ್ರಹ ಇದುವರೆಗೂ ದೊರೆತಿರುವಂತೆ ತೋರುವುದಿಲ್ಲ.
ಈಗ ವಾರಾಣಸಿಯ ಅಥವಾ ವಾರಣಾಸಿಯ ಎಂದು ಅವಲೋಕಿಸಿದರೆ ವಾರಣಾಸಿ ಎಂದು ಬಂದಿರುವುದು ಈಗ ಅಲ್ಲ ಪ್ರಾಚೀನ ಭಾರತದಲ್ಲಿಯೂ ವಾರಣಾಸಿ ಎಂದು ಕರೆದದ್ದು ನಮ್ಮ ಶಾಸನಗಳಲ್ಲಿ ಕಂಡುಬರುತ್ತದೆ. ವಾರಣಸೀ ಮತ್ತು ವರಣಸೀ ಎಂತಲೂ ಕರೆದಿರುವುದಿದೆ. ವರಣಾ ಮತ್ತು ಅಸೀ ಎನ್ನುವ ಎರಡು ನದಿಗಳ ಮಧ್ಯದಲ್ಲಿ ಈ ನಗರದ ನಿರ್ಮಾಣ ವಾಗಿದ್ದಕ್ಕೆ ವಾರಾಣಸೀ ಆಗಿದೆ ಎಂದು ಹೇಳಲಾಗುತ್ತದೆ.
ವರಣಾಸೀ ಚ ನದ್ಯೌ ದ್ವೇ ಪುಣ್ಯೇ ಪಾಪ ಹರೇ ಉಭೇ |
ತಯೋರಂತರ್ಗತಾ ಯಾ ತು ಸೈ ವಾ ವಾರಾಣಸೀ ಸ್ಮೃತಾ || ಎಂದು ನಿರುಕ್ತಕಾರರು ಹೇಳಿದ್ದಾರೆ.
ರಾಮಾಯಣದ ಉತ್ತರ ಕಾಂಡದಲ್ಲಿ
ತದ್ಭವಾನದ್ಯ ಕಾಶೇಯ ಪುರೀಂ ವಾರಾಣಸೀಂ ವ್ರಜ | ರಮಣೀಯಾಂ ತ್ವಯಾ ಗುಪ್ತಾಂ ಸುಪ್ರಾಕಾರಾಂ ಸುತೋರಣಾಮ್ ||
ರಾಘವೇಣ ಕೃತಾನುಜ್ಞಃ ಕಾಶೇಯೋ ಹ್ಯಕುತೋಭಯಃ | ವಾರಾಣಸೀಂ ಯಯೌ ತೂರ್ಣಂ ರಾಘವೇಣ ವಿಸರ್ಜಿತಃ || ಇಲ್ಲಿಯೂ ಕಾಶಿಯನ್ನು ವಾರಾಣಸೀ ಎಂದೇ ಕರೆಯಲಾಗಿದೆ.
ವನಪರ್ವದ ೮೪ನೇ ಅಧ್ಯಾಯದಲ್ಲಿ
ತತೋ ವಾರಾಣಸೀಂ ಗತ್ವಾ ಅರ್ಚಯಿತ್ವಾ ವೃಷಧ್ವಜಮ್ | ಕಪಿಲಾಹ್ರದೇ ನರಃ ಸ್ನಾತ್ವಾ ರಾಜಸೂಯಮವಾಪ್ನುಯಾತ್ || ೭೮ || ಕೋಟಿತೀರ್ಥಕ್ಷೇತ್ರದ ಪ್ರವಾಸವನ್ನು ಮುಗಿಸಿಕೊಂಡು ಮುಂದೆ ಯಾತ್ರಿಕನು ಸುಪ್ರಸಿದ್ಧವಾದ ವಾರಾಣಸೀತೀರ್ಥಕ್ಷೇತ್ರಕ್ಕೆ (ಕಾಶಿಗೆ) ಪ್ರಯಾಣಮಾಡಬೇಕು. ಪುಣ್ಯಕ್ಷೇತ್ರದಲ್ಲಿರುವ ಕಪಿಲಾಹ್ರದತೀರ್ಥದಲ್ಲಿ ಸ್ನಾನಮಾಡಿ ವಾರಾಣಸಿಯ ಅಧಿದೇವತೆಯಾದ ವೃಷಭಧ್ವಜನಾದ ಪರಶಿವ ನನ್ನು ಭಕ್ತಿಯಿಂದ ಅರ್ಚಿಸುವುದರಿಂದ ರಾಜಸೂಯಯಾಗವನ್ನು ಮಾಡಿದ ಫಲವು ಲಭ್ಯವಾಗುತ್ತದೆ. ಎಂದು ಬರುತ್ತದೆ.
ಭಾಗವತದ ಸಪ್ತಮಸ್ಕಂಧದಲ್ಲಿ ಹದಿನಾಲ್ಕನೇ ಅಧ್ಯಾಯದಲ್ಲಿ
ನೈಮಿಷಂ ಫಾಲ್ಗುನಂ ಸೇತುಃ ಪ್ರಭಾಸೋಽಥ ಕುಶಸ್ಥಲೀ | ವಾರಾಣಸೀ ಮಧುಪುರೀ ಪಮ್ಪಾ ಬಿನ್ದುಸರಸ್ತಥಾ || ೩೧ || ಪ್ರಭಾಸ, ಕುಶಸ್ಥಲೀ, ವಾರಾಣಸೀ ಮತ್ತು ಮಧುಪುರಿಯ ಉಲ್ಲೇಖ ಇದೆ.

ಹತ್ತನೇ ಸ್ಕಂಧದಲ್ಲಿ ಚಕ್ರಂ ವಿಷ್ಣೋಸ್ತದನುಪ್ರವಿಷ್ಟಂ ವಾರಾಣಸೀಂ ಸಾಟ್ಟಸಭಾಲಯಾಪಣಾಮ್ | ಸಗೋಪುರಾಟ್ಟಾಲಕಕೋಷ್ಠಸಙ್ಕುಲಾಂ ಸಕೋಶಹಸ್ತ್ಯಶ್ವರಥಾನ್ನಶಾಲಾಮ್ || ೪೧ || ದಗ್ಧ್ವಾ ವಾರಾಣಸೀಂ ಸರ್ವಾಂ ವಿಷ್ಣೋಶ್ಚಕ್ರಂ ಸುದರ್ಶನಮ್ | ಭೂಯಃ ಪಾರ್ಶ್ವಮುಪಾತಿಷ್ಠತ್ ಕೃಷ್ಣಸ್ಯಾಕ್ಲಿಷ್ಟಕರ್ಮಣಃ || ೪೨ || ಎನ್ನುವುದಾಗಿ ಎಲ್ಲಾ ಕಡೆಯೂ ವಾರಾಣಸೀ ಎನ್ನುವ ಪದ ಉಲ್ಲೇಖಿಸಲ್ಪಟ್ಟಿದೆಯೇ ವಿನಃ ವಾರಣಾಸೀ ಅಲ್ಲ.


No comments:

Post a Comment