Search This Blog

Monday 18 June 2018

“ಕಾಕುತ್ಸ್ಥ” ಈ ಹೆಸರು ಪುನರಾವರ್ತಿತವಾಗಲೇ ಇಲ್ಲ


ಅಗ್ನಿರ್ಮೂರ್ಧಾ ದಿವಃ ಕಕುತ್ಪತಿಃ ಪೃಥಿವ್ಯಾ ಅಯಂ |
ಅಪಾಂ ರೇತಾಂಸಿ ಜಿನ್ವತಿ || ಇದು ಋಗ್ವೇದದ ಎಂಟನೇ ಮಂಡಲದಲ್ಲಿ ಬರುವ ಋಕ್ಕು. ದೇವತೆಗಳಲ್ಲೆಲ್ಲಾ ಶ್ರೇಷ್ಠನೂ, ದ್ಯುಲ್ಲೋಕದಲ್ಲಿ ಉನ್ನತವಾದ ಸ್ಥಿತಿಯಲ್ಲಿರುವವನೂ ಭೂಮಿಗೆ ಒಡೆಯನೂ ಆದ ಅಗ್ನಿಯು ನೀರಿನ ಬೀಜರೂಪವಾದ ಸಕಲ ಭೂತಗಳನ್ನೂ ತೃಪ್ತಿ ಪಡಿಸುತ್ತಾನೆ. ಕಕುತ್ ಎಂದರೆ ಉನ್ನತವಾದ ಸ್ಥಿತಿಯಲ್ಲಿರುವವನು ಎನ್ನುವ ಅರ್ಥ ಕೊಡುತ್ತದೆ. ಕಕುತ್ ಪತಿ ಎನ್ನುವ ಪದ ಇಲ್ಲಿ ಕಾಣಿಸಿಕೊಳ್ಳುತ್ತದೆ. ಭೂಲೋಕಕ್ಕೆ ಒಡೆಯ ಎನ್ನುವ ಅರ್ಥವನ್ನು ಧ್ವನಿಸುತ್ತದೆ.
ಕಕುತ್ಸ್ಥ ಇಕ್ಷ್ವಾಕುವಿನ ಮೊಮ್ಮಗ, ಶಶಾದ ಎನ್ನುವನ ಮಗ. ಈತನಿಗೆ ಇಂದ್ರವಾಹ ಎನ್ನುವ ಇನ್ನೊಂದು ಹೆಸರೂ ಇದೆ. ದೇವತೆಗಳು ಒಮ್ಮೆ ಅಸುರರೊಂದಿಗೆ ಯುದ್ಧವನ್ನು ಮಾಡುತ್ತಿದ್ದಾಗ ಈತನಲ್ಲಿ ಸಹಾಯವನ್ನು ಯಾಚಿಸುತ್ತಾರೆ ಆಗ ಆತ ಇಂದ್ರನೇ ನನಗೆ ವಾಹನವಾಗುವುದಾದರೆ ಯುದ್ಧ ಮಾಡುವೆನೆನ್ನುತ್ತಾನೆ. ಇಂದ್ರ ಆಗ ವೃಷಭರೂಪದಿಂದ ವಾಹನನಾಗುತ್ತಾನೆ ವೃಷಭದ ಹಿಣಿಲನ್ನು ಹಿಡಿದು ಯುದ್ಧ ಮಾಡಿದ್ದರಿಂದ ಹಿಣಿಲಿಗೆ "ಕಕುತ್" ಎನ್ನುವ ಹೆಸರಿರುವುದರಿಂದ ಈತನಿಗೂ ಅದೇ ಹೆಸರು ಕಕುತ್ಸ್ಥ ಎನ್ನುವ ಹೆಸರು ಬಂದಿದೆ ಎನ್ನುವುದು ಪುರಾಣಗಳಿಂದ ತಿಳಿದು ಬರುತ್ತದೆ. ಪುರಂಜಯ ಎನ್ನುವ ಇನ್ನೊಂದು ಹೆಸರೂ ಇವನಿಗಿದೆ.
ಶ್ರೀಮದ್ಭಾಗವತದ ನವಮಸ್ಕಂಧದ 6ನೇ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ.
ವಿಕುಕ್ಷಿಯು ಹಲವಾರು ಯಜ್ಞಗಳಿಂದ ಶ್ರೀಹರಿಯನ್ನು ಆರಾಧಿಸಿದನು. ಹಸಿವನ್ನು ತಡೆಯಲಾರದೆ ಮೊಲದ ಮಾಂಸವನ್ನು ತಿಂದ ನಾದ ಕಾರಣ ವಿಕುಕ್ಷಿಯು ಶಶಾದನೆಂಬ ಹೆಸರಿನಿಂದಲೂ ಪ್ರಸಿದ್ಧನಾದನು. ವಿಕುಕ್ಷಿಗೆ ಪುರಂಜಯನೆಂಬ ಮಗನಿದ್ದನು. ಪುರಂಜಯನನ್ನು ಕೆಲವರು ಇಂದ್ರವಾಹನೆಂದೂ, ಕೆಲವರು ಕಕುತ್ಸ್ಥನೆಂದೂ ಕರೆಯುತ್ತಿದ್ದರು. ಯಾವ ಕಾರ್ಯವನ್ನು ಮಾಡಿದುದರಿಂದ ಪುರಂಜಯನಿಗೆ ಹೆಸರು ಬಂತು ಅಂದರೆ ಸತ್ಯಯುಗದ ಕೊನೆಯಲ್ಲಿ ದೇವತೆಗಳಿಗೂ ಮತ್ತು ದಾನವರಿಗೂ ಘೋರವಾದ ಯುದ್ಧ ನಡೆಯುತ್ತದೆ. ಮಹಾಸಂಗ್ರಾಮದಲ್ಲಿ ದೇವತೆ ಗಳೆಲ್ಲರೂ ದಾನವರಿಂದ ಸೋತು ಹೋಗುತ್ತಾರೆ. ಆಗ ದೇವತೆಗಳು ತಮ್ಮ ಸಹಾಯಕ್ಕಾಗಿ ಪುರಂಜಯನನ್ನು ತಮ್ಮ ಮಿತ್ರನನ್ನಾಗಿ ಮಾಡಿಕೊಂಡರು. ದೇವರಾಜನು ತನಗೆ ವಾಹನವಾಗುವುದಾದರೆ ತಾನು ದಾನವರೊಡನೆ ಯುದ್ಧಮಾಡುವೆನೆಂದು ಪುರಂಜಯನು ಹೇಳಿದನು. ಇದಕ್ಕೆ ಇಂದ್ರನು ಒಪ್ಪುದಿಲ್ಲ. ಆದರೆ ದೇವತೆಗಳಿಗೂ ಆರಾಧ್ಯದೇವನಾದ, ಮಹಾವಿಷ್ಣುವಿನ ಮಾತನ್ನು ಗೌರವಿಸುತ್ತಾ ಇಂದ್ರನು ಪುರಂಜಯನಿಗೆ ವಾಹನವಾಗಲು ಒಪ್ಪಿ, ದೊಡ್ಡ ಎತ್ತಾಗಿ ಪರಿವರ್ತನೆ ಹೊಂದಿದನು. ಸರ್ವಾಂತರ್ಯಾಮಿಯಾದ ಮಹಾವಿಷ್ಣುವು ಪುರಂಜಯನಲ್ಲಿ ತನ್ನ ಶಕ್ತಿಯೆಲ್ಲವನ್ನೂ ತುಂಬಿದನು. ವಿಷ್ಣುವಿನ ದಿವ್ಯತೇಜಸ್ಸಿನಿಂದಲೂ ಸಂಪನ್ನನಾಗಿದ್ದ ಪುರಂಜಯನು ಕವಚವನ್ನು ಧರಿಸಿ, ದಿವ್ಯವಾದ ಧನುಸ್ಸನ್ನೂ ತೀಕ್ಷ್ಣವಾದ ಬಾಣಗಳನ್ನೂ ಹಿಡಿದು, ಹೋರಿಯ ಮೇಲೇರಿ ಅದರ ಹಿಳಿಲಿನ ಹತ್ತಿರ ಕುಳಿತನು. ಹೀಗೆ ಪುರಂಜಯನು ದಾನವರೊಡನೆ ಯುದ್ಧಕ್ಕೆ ಸಿದ್ಧನಾಗಿ ನಿಂತೊಡನೆಯೇ ದೇವತೆಗಳು ಅವನನ್ನು ನಾನಾಪ್ರಕಾರವಾಗಿ ಸ್ತೋತ್ರಮಾಡಿದರು. ದೇವತೆಗಳನ್ನೂ ಜೊತೆಯಲ್ಲಿ ಕರೆದುಕೊಂಡು ಪುರಂಜಯನು ಪಶ್ಚಿಮದ ಕಡೆಯಿಂದ ದಾನವರ ಪಟ್ಟಣಕ್ಕೆ ಮುತ್ತಿಗೆ ಹಾಕುತ್ತಾನೆ. ಪುರಂಜಯನಿಗೂ ದಾನವರಿಗೂ ಘೋರವಾದ ಯುದ್ಧವು ಪ್ರಾರಂಭವಾಯಿತು. ಯುದ್ಧದಲ್ಲಿ ಯಾವ ಯಾವ ಪ್ರಮುಖರು ಯುದ್ಧಮಾಡಲು ಪುರಂಜಯನಿಗೆ ಎದುರಾಗಿ ಬರುತ್ತಿದ್ದರೋ ಅವರೆಲ್ಲರನ್ನೂ ವೀರನಾದ ಪುರಂಜಯನು ನಿಶಿತವಾದ ಬಾಣಗಳ ಮೂಲಕವಾಗಿ ಸಂಹರಿಸುತ್ತಿದ್ದನು. ಅವನ ಬಾಣದ ಮಳೆಯು ಪ್ರಳಯಕಾಲದಲ್ಲಾಗುವ ಭಯಂಕರವಾದ ಅಗ್ನಿವರ್ಷವೇ ಆಗಿದ್ದಿತು. ಪುರಂಜಯನನ್ನು ಎದುರಿಸಿ ಯುದ್ಧಮಾಡಲು ಹೋದ ದಾನವರೆಲ್ಲರೂ ಛಿದ್ರವಾಗಿ ಹೋದರು. ಹೀಗೆ ನಿರಂತರವಾಗಿ ಪುರಂಜಯನಿಂದ ಸಂಹರಿಸಲ್ಪಡುತ್ತಿದ್ದ ದೈತ್ಯರಲ್ಲಿ ಅಳಿದುಳಿದವರು ಭಯಭೀತರಾಗಿ ಯುದ್ಧವನ್ನು ಪರಿತ್ಯಜಿಸಿ ತಮ್ಮ-ತಮ್ಮ ಮನೆಗಳಿಗೆ ಓಡಿಹೋದರು. ಹೀಗೆ ಪುರಂಜಯನು ದಾನವರನ್ನು ಪರಾಜಯಗೊಳಿಸಿ ಅವರ ಪಟ್ಟಣವನ್ನೂ ಅಪಾರವಾದ ಧನವನ್ನೂ, ಐಶ್ವರ್ಯವನ್ನೂ ಅವರಲ್ಲಿದ್ದ ಸಮಸ್ತವಸ್ತುಗಳನ್ನೂ ಇಂದ್ರನಿಗೆ ಸಮರ್ಪಿಸಿದನು. ದೈತ್ಯರ ಪುರವನ್ನು ಇಂದ್ರನಿಗೆ ಜಯಿಸಿಕೊಟ್ಟ ಕಾರಣದಿಂದ ರಾಜರ್ಷಿಗೆ ಪುರಂಜಯನೆಂಬ ಹೆಸರು ಬಂತು. ಯುದ್ಧದಲ್ಲಿ ಇಂದ್ರನನ್ನು ವಾಹನವನ್ನಾಗಿ ಮಾಡಿಕೊಂಡಿದ್ದ ಕಾರಣ ಇಂದ್ರವಾಹ ಎಂಬ ಹೆಸರನ್ನೂ ಪುರಂಜಯನು ಪಡೆದುಕೊಂಡನು. ಹೋರಿಯ ಹಿಳಿಲಿನ ಮೇಲೆ ಕುಳಿತು ಯುದ್ಧಮಾಡುತ್ತಿದ್ದುದರಿಂದಕಕುತ್ಸ್ಥ’–ಎಂಬ ಹೆಸರನ್ನೂ ಪುರಂಜಯನು ಪಡೆದುಕೊಂಡನು. ಹೀಗೆ ಪುರಂಜಯನು ಇಂದ್ರವಾಹ ಮತ್ತು ಕಕುತ್ಸ್ಥ ಎಂಬ ಅನ್ವರ್ಥನಾಮಗಳಿಂದಲೂ ಪ್ರಸಿದ್ಧನಾದನು. ಇದು ಪುರಾಣದ ಕಥೆ.
ರಾಮಾಯಣದ ಬಾಲಕಾಂಡದ 19ನೇ ಸರ್ಗದಲ್ಲಿ
ಯದಿ ಹ್ಯನುಜ್ಞಾಂ ಕಾಕುತ್ಸ್ಥ ದದತೇ ತವ ಮನ್ತ್ರಿಣಃ | ವಸಿಷ್ಠಪ್ರಮುಖಾಃ ಸರ್ವೇ ತತೋ ರಾಮಂ ವಿಸರ್ಜಯ || 16 || ಕಕುತ್ಸ್ಥಕುಲದಲ್ಲಿ ಜನಿಸಿದವನೇ ನಿನ್ನ ಮಂತ್ರಿಗಳನ್ನೂ ಮತ್ತು ವಸಿಷ್ಠಾದಿ ಪುರೋಹಿತರನ್ನೂ ಏಕಾಂತದಲ್ಲಿ ಕರೆದು ರಾಮನನ್ನು ಕಳುಹಿಸುವ ವಿಷಯವಾಗಿ ಸಮಾಲೋಚಿಸು. ಎಂದು ದಶರಥನಲ್ಲಿ ಹೇಳುವ ಮಾತು ಇಲ್ಲಿ ದಶರಥನನ್ನು ಕಕುತ್ಸ್ಥ ಕುಲದವನು ಎನ್ನಲಾಗುತ್ತದೆ. 
ಬಾಲಕಾಂಡದ 70ನೇ ಸರ್ಗದಲ್ಲಿ ಆದರೆ ಚ್ಯವನರ ಅನುಗ್ರಹದಿಂದಾಗಿ ಕಾಲಿಂದಿಯ ಹೊಟ್ಟೆಯೊಳಗಿದ್ದ ಶಿಶುವು ವಿಷದಿಂದ ಸತ್ತುಹೋಗದೇ ಗರದ (ವಿಷದ) ಜೊತೆಯಲ್ಲಿಯೇ ಹುಟ್ಟಿದುದರಿಂದ ಶಿಶುವಿಗೆ ಸಗರನೆಂದೇ ನಾಮಕರಣಮಾಡಿದರು. ಸಗರನಿಗೆ ಅಸಮಂಜನೆಂಬ ಮಗನು ಹುಟ್ಟಿದನು. ಅಸಮಂಜನ ಮಗನ ಹೆಸರು ಅಂಶುಮಂತ. ಅಂಶುಮಂತನ ಮಗ ದಿಲೀಪ. ದಿಲೀಪನ ಮಗ ಭಗೀರಥ. ಭಗೀರಥನಿಗೆ ಕಕುತ್ಸ್ಥನೆಂಬ ಮಗನು ಹುಟ್ಟಿದನು. ಕಕುತ್ಸ್ಥನ ಮಗ ರಘು. ರಘುವಿಗೆ ಮಹಾ ತೇಜಸ್ವಿಯಾದ ಪ್ರವೃದ್ಧನೆಂಬ ಮಗನು ಹುಟ್ಟಿದನು. ಇಲ್ಲಿ ದಿಲೀಪ ಇವನ ಅಜ್ಜ. ಭಗೀರಥ ಇವನ ಅಪ್ಪ.
ಅಯೋಧ್ಯಾಕಾಂಡ 50ನೇ ಸರ್ಗದಲ್ಲಿ ಆಪೃಚ್ಫೇ ತ್ವಾಂ ಪುರಿಶ್ರೇಷ್ಠೇ ಕಾಕುತ್ಸ್ಥ ಪರಿಪಾಲಿತೇ | ದೈವತಾನಿ ಯಾನಿ ತ್ವಾಂ ಪಾಲಯನ್ತ್ಯಾವಸನ್ತಿ || 2 || “ಕಕುತ್ಸ್ಥವಂಶದ ರಾಜರಿಂದ ಪರಿಪಾಲಿತಳಾದ, ಜಗತ್ತಿನಲ್ಲಿರುವ ಎಲ್ಲಾ ನಗರಗಳಿಗೂ ಶ್ರೇಷ್ಠಳಾದ ಅಯೋಧ್ಯಾನಗರದ ಅಧಿದೇವತೆಯೇ! ಅರಣ್ಯವಾಸಕ್ಕೆ ನಿನ್ನ ಅನುಮತಿಯನ್ನು ಪ್ರಾರ್ಥಿಸುತ್ತಿದ್ದೇನೆ. ಹೀಗೇ ರಾಮಾಯಣದಲ್ಲಿ ಅಲ್ಲಲ್ಲಿ ಕಕುತ್ಸ್ಥನ ಹೆಸರು ಬರುತ್ತದೆ.
ಮಹಾಭಾರತದ ವನಪರ್ವದ 202ನೇ ಅಧ್ಯಾಯದಲ್ಲಿ ಇಕ್ಷ್ವಾಕುವಂಶದಲ್ಲಿ ಮಹಾಪರಾಕ್ರಮಿಯಾದ ಬೃಹದಶ್ವನೆಂಬ ರಾಜನು ಜನಿಸುತ್ತಾನೆ. ಅವನಿಗೆ ಶುಭವ್ರತನೂ, ಜಿತೇಂದ್ರಿಯನೂ ಆದ ಕುವಲಾಶ್ವನೆಂಬ ಮಗನು ಹುಟ್ಟುತ್ತಾನೆ. ಅವನು ಮಹಾ ವಿಷ್ಣುವಿನಿಂದ ಯೋಗಬಲವನ್ನು ಪಡೆದು ಧುಂಧುರಾಕ್ಷಸನನ್ನು ಸಂಹರಿಸಿ ಧುಂಧುಮಾರನೆಂದೇ ಪ್ರಸಿದ್ಧನಾಗುತ್ತಾನೆ. ಇಕ್ಷ್ವಾಕುವು ನಿಧನವಾದ ನಂತರ ಅವನ ಮಗನಾದ ಶಶಾದನು ಅಯೋಧ್ಯೆಯ ರಾಜ್ಯಸಿಂಹಾಸನವನ್ನೇರಿ ಆಳತೊಡಗಿದನು. ಶಶಾದನ ಮಗನೇ ಮಹಾಪರಾ ಕ್ರಮಿಯಾದ ಕಕುತ್ಸ್ಥ. ಕಕುತ್ಸ್ಥನಿಗೆ ಅನೇನಸನೆಂಬ ಮಗನು ಹುಟ್ಟಿ ಅಯೋಧ್ಯೆಯ ರಾಜನಾಗಿ ಅನೇಕವರ್ಷಗಳ ಪರ್ಯಂತವಾಗಿ ಧರ್ಮದಿಂದ ರಾಜ್ಯಪಾಲನೆಯನ್ನು ಮಾಡಿದನು ಎನ್ನುವುದಾಗಿ ಬರುತ್ತದೆ.
ಇಲ್ಲಿ ಮೇಲೆ ಹೆಳಿದವೆಲ್ಲವೂ ಪುರಾಣಗಳ ಉಲ್ಲೇಖ. ಆದರೆ ನಾನು ನಮ್ಮ ಕನ್ನಡನಾಡಿನ ಇತಿಹಾಸಕ್ಕೆ ಮರಳಿದರೆ ಇಲ್ಲಿ ಕದಂಬರ ಕಾಲದ ಕದಂಬ ವಂಶದವನೊಬ್ಬ ಕಾಕುತ್ಸ್ಥವರ್ಮ ಎನ್ನುವವನು ಕಾಣಸಿಗುತ್ತಾನೆ. ಕ್ರಿ ಶ 365 ರಲ್ಲಿ ಭಗೀರಥ ಎನ್ನುವವನು ಆಳ್ವಿಕೆ ನಡೆಸುತ್ತಾನೆ. ಆ ಭಗೀರಥನ ಮಗನೇ ರಘು ಈತ ೩೮೫ಕ್ಕೆ ಆಡಳಿತದ ಚುಕ್ಕಾಣಿ ಹಿಡಿಯುತ್ತಾನೆ. ಈ ರಘುವಿನ ಸಹೋದರನೇ ಕಾಕುತ್ಸ್ಥ. ಈತ 405 ರಿಂದ 430 ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ. ಗುಪ್ತ, ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡಿ ರಾಜ್ಯದ ಸುಭದ್ರತೆ ಖ್ಯಾತಿಗಳನ್ನು ಬೆಳೆಸಿದ. ಈತನ ಕಾಲದಲ್ಲಿ ರಾಜ್ಯ ಸುರಕ್ಷಿತವಾಗಿತ್ತು. ರಾಜ್ಯವನ್ನು ತನ್ನ ಮಕ್ಕಳಾದ ಶಾಂತಿವರ್ಮ ಮತ್ತು ಮೊದಲನೆಯ ಕೃಷ್ಣವರ್ಮನಿಗೆ ವಿಭಾಗ ಮಾಡಿ ಕೊಟ್ಟಿದ್ದನೆಂದೂ ಶಾಂತಿವರ್ಮ ಬನವಾಸಿಯಿಂದಲೂ ಕೃಷ್ಣವರ್ಮ ತ್ರಿಪರ್ವತದಿಂದಲೂ ಸ್ವತಂತ್ರರಾಗಿ ಆಳಿದರೆಂದೂ ತಿಳಿದುಬರುತ್ತದೆ. ಕದಂಬರು ತಮ್ಮ ರಾಜ್ಯ ವಿಸ್ತಾರದತ್ತ ಹೆಚ್ಚು ಗಮನಹರಿಸದೇ ಇದ್ದರೂ ಸಹ ತಮ್ಮ ರಾಜ ತಾಂತ್ರಿಕ ಮತ್ತು ವೈವಾಹಿಕ ಸಂಬಂಧವನ್ನು ತುಂಬಾ ದೂರಕ್ಕೆ ವಿಸ್ತರಿಸಿರುವುದು ಇತಿಹಾಸದಲ್ಲಿ ಕಂಡು ಬರುತ್ತದೆ. ಕಾಕುಸ್ಥವರ್ಮನ ಎರಡನೆಯ ಮಗಳು ಅಜಿತ ಭಟ್ಟಾರಕೆ ಎನ್ನುವವಳು. ಅವಳನ್ನು ವಾಕಾಟಕ ವಂಶದ ನರೇಂದ್ರಸೇನ ಎನ್ನುವ ರಾಜನಿಗೆ ವಿವಾಹಮಾಡಿಕೊಟ್ಟು ಕರ್ನಾಟಕವನ್ನೂ ಮೀರಿ ಬಹುದೂರಕ್ಕೆ ತನ್ನ ಎಲ್ಲೆಯನ್ನು ಸ್ಥಾಪಿಸಿರುವುದು ಕಂಡು ಬರುತ್ತದೆ. ಕಾಕುಸ್ಥವರ್ಮ ಕದಂಬರ ಮೊದಲ ದೊರೆ ಮಯೂರನ ಮರಿಮಗ. ಈತ ಸೊರಬದಲ್ಲಿರುವ ತಾಳಗುಂದದ ಪ್ರಣವೇಶ್ವರ ದೇವಾಲಯಕ್ಕಾಗಿ ಕೆರೆಯೊಂದನ್ನು ನಿರ್ಮಿಸಿರುವುದು ತಿಳಿದು ಬರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನಡದ ಕರಾವಳಿ ಪ್ರದೇಶವನ್ನು ಬಹುಪ್ರಾಚೀನ ಕಾಲದಿಂದಲೂ ಅಳುಪ ಎನ್ನುವ ರಾಜವಂಶ ಆಳಿಕೊಂಡು ಬರುತ್ತಿತ್ತು. ಹೊಂಬುಜ ಕ್ಷೇತ್ರವು ಸುಮಾರು ಕ್ರಿ ೭ನೇ ಶತಮಾನದ ತನಕವೂ ಇವರ ವಶದಲ್ಲಿದ್ದುದರಿಂದ ಶಿವಮೊಗ್ಗದ ಪರದೇಶದಲ್ಲೂ ಇವರ ಆಳ್ವಿಕೆ ಕಂಡುಬರುತ್ತದೆ. ಅಳುಪ ದೊರೆ ಪಶುಪತಿ ಎನ್ನುವವನಿಗೆ ಕಾಕುಸ್ಥವರ್ಮ ತನ್ನ ಮೂರನೆಯ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಹೀಗೆ ಕಾಕುಸ್ಥವರ್ಮ ಕದಂಬ ವಂಶದಲ್ಲಿಯೇ ಅತಿ ಹೆಚ್ಚು ಪ್ರಖ್ಯಾತಿ ಗಳಿಸುತ್ತಾನೆ. ಒಂದು ದೃಷ್ಟಿಯಿಂದ ಈತನ ಮುತ್ಸದ್ದಿತನ ಮೆಚ್ಚಲೇ ಬೇಕು. ದೊಡ್ಡ ದೊಡ್ಡ ಮನೆತನಗಳ ಸಂಬಂಧ ಬೆಳೆಸಿ ಇಡೀ ಕದಂಬ ವಂಶದ ರಕ್ಷಕನಾಗಿ ಗೋಚರಿಸುತ್ತಾನೆ.
ಆದರೆ ಈ ಕಾಕುತ್ಸ್ಥ ಎನ್ನುವ ಹೆಸರು ಮುಂದೆ ಯಾವ ರಾಜರೂ ಇಟ್ಟು ಕೊಂಡದ್ದು ಕಂಡು ಬರುವುದಿಲ್ಲ. ಕದಂಬರಲ್ಲಿ ಮಾತ್ರವೇ ಇವನ ಹೆಸರಿದ್ದು ಬೇರಾರೂ ಆ ಹೆಸರನ್ನು ಅನುಕರಿಸದಿರುವುದು ಉಚ್ಚಾರಣೆಯ ದೃಷ್ಟಿಯಿಂದ ಕಾಷ್ಟ ಎನ್ನುವುದು ಇದ್ದರೂ ಇರಬಹುದು.
ಮಳವಳ್ಳಿಯ ಪ್ರಾಕೃತ ಸಂಸ್ಕೃತ ಮಿಶ್ರ ಬ್ರಾಹ್ಮೀ ಲಿಪಿಯ ಶಾಸನದಲ್ಲಿ ಋಧಮಾತೇ ಎನ್ನುವ ಪದ ಬಂದಿದ್ದು ಅದರಲ್ಲಿ ಸ್ವರಾಕ್ಷರ ಋ ಕಾರ ಪ್ರಯೋಗವಾಗಿದೆ. ಇಲ್ಲಿಯೂ ಶಾಸನದ ಕೊನೆಗೆ ಋಷಭಾಯ ನಮಃ ಅನ್ನುವಲ್ಲಿ ಋ ಕಾರ ಕಾಣಿಸಿಕೊಂಡಿದೆ ಪ್ರಾಯಶಃ ಕದಂಬರ ಶಾಸನಗಳಲ್ಲಿ ಇದೆರಡೇ ಇರಬೇಕು ಋ ಕಾರ ಹೊಂದಿರುವುದು


No comments:

Post a Comment