Search This Blog

Thursday 31 May 2018

ಅಜ್ಞಾತ ವಿದ್ವಾಂಸನ ಪುಟಿದೆದ್ದ ಸ್ವಾಭಿಮಾನ


ಗಾಂಧಾರ, ಈ ಹೆಸರನ್ನು ಕೇಳುವಾಗಲೇ ಏನೋ ಆನಂದವಾಗುತ್ತದೆ. ಹೌದು ಗಾಂಧಾರ ಗಾಂಧಾರಿಯ ನಾಡು ಎನ್ನುವುದನ್ನು ಮಾತ್ರ ನಾನು ಹೆಚ್ಚಾಗಿ ಹೇಳಿಬಿಡುತ್ತೇವೆ. ಆದರೆ ಗಾಂಧಾರ ಶಿಲ್ಪಕಲೆಯ ತವರೂರಾಗಿತ್ತು. ಗಾಂಧಾರ ಶೈಲಿಯೊಂದು ರೂಪುಗೊಂಡಿತ್ತು. ಗಾಂಧಾರದ ಯುವತಿಯರಂತೂ ಅತ್ಯಂತ ಸ್ಪುರದ್ರೂಪ ಉಳ್ಳವರಾಗಿದ್ದರು ಅಂತ ಪ್ರಾಚೀನ ಸಾಹಿತ್ಯಗಳಲ್ಲಿ ವರ್ಣನೆ ಬರುತ್ತದೆ. ಗಾಂಧಾರ ಆಧುನಿಕ ಉತ್ತರ ಪಾಕಿಸ್ಥಾನ ಮತ್ತು ಈಶಾನ್ಯ ಅಪಘಾನಿಸ್ಥಾನ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬೂಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಪ್ರಾಚೀನ ರಾಜ್ಯವಾಗಿತ್ತು ಎಂದು ಹಲವು ಉಲ್ಲೇಖಗಳಿಂದ ತಿಳಿದು ಬರುತ್ತದೆ. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಒಂದು ಕಾಲದಲ್ಲಿ ಸಂಸ್ಕೃತ ಸಾಹಿತ್ಯದ ದಿಗ್ಗಜರೆಲ್ಲಾ ಹುಟ್ಟಿಬಂದದ್ದೇ ಗಾಂಧಾರದ ನೆಲದಿಂದ.
ನಮ್ಮ ನೆಲದಲ್ಲಿ ಅಂದರೆ ಅಂದಿನ ಭಾರತದ ನೆಲದಲ್ಲಿ ವಿದ್ಯಾನೆಲೆಗಳಿದ್ದುದು ಪ್ರಮುಖವಾಗಿ ಎರಡು. ಒಂದು ತಕ್ಷಶಿಲಾ ಇನ್ನೊಂದು ನಾಲಂದಾ. ತಕ್ಷಶಿಲಾ ಅಂದು ಗಾಂಧಾರದ ರಾಜಧಾನಿಯಾಗಿತ್ತು. ಸುಲಲಿತ ಸಂಸ್ಕೃತದ ಕಾರಣೀಕರ್ತ ವಯ್ಯಾಕರಣಿ ಪಾಣಿನಿ ಇದೇ ನೆಲದವನಾಗಿದ್ದನಂತೆ. ಕಾಉಟಿಲ್ಯ ತನ್ನ ಜೀವಿತದ ಬಹುಭಾಗ ಈ ಪ್ರದೇಶದಲ್ಲಿಯೇ ಕಳೆದಿದ್ದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಂದರೆ ಬಿಂದುಸಾರನ ಮೊಮ್ಮಗ ಅಶೋಕನ ಅವಧಿಯಲ್ಲಿ ಗಾಂಧಾರವು ಬೌದ್ಧ ಧರ್ಮದ ಮಹಾ ನೆಲೆಯಾಗಿ ಪರಿವರ್ತನೆಗೊಂಡಿತ್ತು.
ಅಂದು ತಕ್ಷಶಿಲೆಯಲ್ಲಿ ಮತ್ತು ನಾಲಂದಾದಲ್ಲಿ ಇಲ್ಲದ ವಿದ್ಯೆಗಳೇ ಇಲ್ಲವಾಗಿತ್ತು. ಅಂತಹ ತಕ್ಷಶಿಲೆಯಲ್ಲಿ ಉತ್ತೀರ್ಣನಾಗುವುದೆಂದರೆ ಅದು ಸಾಮಾನ್ಯದ ಮಾತಾಗಿರಲಿಲ್ಲ. ಅದು ಸುಮಾರಾಗಿ ಬಿಂದುಸಾರನ ಕೊನೆಯ ದಿನಗಳ ಹಾಗೂ ಅಶೋಕನೆನ್ನುವವನ ಆರಂಭಿಕ ಕಾಲ ಇದ್ದಿರಬಹುದು ಅಂದರೆ ಬೌದ್ಧ ಧರ್ಮ ಉಚ್ಚ್ರಾಯ ಅಸ್ತಿತ್ವ ಪಡೆದಿದ್ದ ಕಾಲ. ಯುವಕನೊಬ್ಬ ಅರಮೈಕಾ, ಮತ್ತು ಖರೋಷ್ಠಿಗಳ ಜೊತೆಗೆ ಸಂಸ್ಕೃತ ಮತ್ತು ಪ್ರಾಕೃತಗಳಲ್ಲೂ ಪಾಂಡಿತ್ಯ ಹೊಂದಿ ಶಿಲ್ಪಕಲೆಯಲ್ಲಿ ಗಾಂಧಾರದ ಶಿಲ್ಪವನ್ನು ಅಧ್ಯಯನಮಾಡಿ ಉದ್ಧಾಮ ಪಾಂಡಿತ್ಯವನ್ನು ಹೊಂದಿ ಜ್ಞಾನದ ಆಕಾಂಕ್ಷೆಯಿಂದ ವಿಶ್ವವಿದ್ಯಾಲಯದಿಂದ ಹೊರಬರುತ್ತಾನೆ.
ಹೊರಬಂದ ಆತನಿಗೆ ದಾಹ. ಜ್ಞಾನದ ದಾಹ ಗಾಂಧಾರದಲ್ಲಿ ಸಿಗದೇ ಇರುವುದು ಬೇರೆಲ್ಲಿ ಸಿಗಬಹುದು ಎನ್ನುವುದಾಗಿ ಅರಸುತ್ತಾ ನೇರವಾಗಿ ನಾಲಂದಾಕ್ಕೆ ಬರುತ್ತಾನೆ. ನಾಲಂದಾ ಎಲ್ಲಾ ವಿದ್ಯೆಗಳ ಆಗರವಾಗಿತ್ತು. ಆದರೆ ಬೌದ್ಧ ಧರ್ಮ ಉಚ್ಚ್ರಾಯದ ಕಾಲ ಅಂತ ಮೊದಲೇ ತಿಳಿಸಿದ್ದೆನಲ್ಲಾ. ಇಲ್ಲಿ ಆಗ ಅಶೋಕನೆನ್ನುವ ರಾಜನ ಆಡಳಿತದ ಕಾಲ. ಅಶೋಕನಾದರೂ ಅತ್ಯಂತ ಕಠಿಣ ಆಜ್ಞೆಗಳನ್ನು ಹೊರಡಿಸುತ್ತಿದ್ದ ಕಾಲವದು. ಅಂತಹ ಕಾಲದಲ್ಲಿ ನಾಲಂದಾದಲ್ಲಿ ಕಲೆಗೆ ಆಸ್ಪದ ವಿದ್ದೀತೇ? ಇರಲಿಲ್ಲ. ಧರ್ಮದ ಮುಂದೆ ಎಲ್ಲವೂ ಮಸುಕಾಗಿತ್ತು ಬೌದ್ಧಧರ್ಮ ಪ್ರಚಾರದ ಮುಂದೆ ಸಾಹಿತ್ಯ ಮತ್ತು ಕಲೆ ಕುಂಠಿತಗೊಂಡಿತ್ತು ಎಂದರೆ ತಪ್ಪಾಗಲಾರದು. ಆಸೆಯಿಂದ ಬಂದ ಯುವಕನಿಗೆ ನಿರಾಸೆಕಾದಿತ್ತು. ಅದೇ ಸಮಯದಲ್ಲಿ ಈತನ ಪಾಂಡಿತ್ಯ ಮತ್ತು ಈತ ಅನೇಕ ಭಾಷೆ ಮತ್ತು ಲಿಪಿ ಬಲ್ಲವ ಎನ್ನುವ ವಿಷಯ ಅದು ಹೇಗೋ ಅಶೋಕನಿಗೆ ತಿಳಿಯುತ್ತದೆ. ಅಶೋಕ ತನ್ನ ಅನಿಸಿಕೆಗಳನ್ನು ಜನರಿಗೆ ತಲುಪಿಸ ಬೇಕಿತ್ತು. ಶಿಲೆಯಮೂಲಕ ಜನರನ್ನು೮ ಸಮೀಪಿಸಲು ಹಾತೊರೆಯುತ್ತಿದ್ದ ಅಶೋಕನಿಗೆ ಅನಾಮತ್ತಾಗಿ ಈ ಯುವಕ ಸಿಗುತ್ತಾನೆ. ತನ್ನ ಮಹತ್ವಾಕಾಂಕ್ಷೆಯ ಧರ್ಮ ಬೋಧನೆಗೆ ಯುವಕನನ್ನು ಸಿದ್ಧ ಗೊಳಿಸುತ್ತಾನೆ. ಭಾಷಾ ಮಾಧ್ಯಮವಾಗಿ ಪ್ರಾಕೃತವನ್ನೂ ಬ್ರಾಹ್ಮಿಯನ್ನು ಲಿಪಿಯಾಗಿ ಬಳಸಿಕೊಂಡು ಭಾರತದಾದ್ಯಂತ ಕಿರು ಬಂಡೆ ಮತ್ತು ಹೆಬ್ಬಂಡೆ ಶಾಸನಗಳನ್ನು ಬರೆಸುತ್ತಾನೆ.
ಈ ಯುವಕನ ಕುರಿತಾಗಿ ಯಾವುದೇ ಮಾಹಿತಿ ಸಿಗುವುದಿಲ್ಲ. ಅಜ್ಞಾತವಾಗಿಯೇ ಸಾಗುತ್ತಾನೆ. ಅಷ್ಟು ವಿದ್ವತ್ತನ್ನು ಹೊಂದಿದ್ದ ಯುವಕನೊಬ್ಬ ತನ್ನ ಜೀವಿತವನ್ನು ಅಜ್ಞಾತವಾಗಿ ಕಳೆಯುವುದನ್ನು ನೋಡಿದಾಗ ಇಂದಿನ ಗುಪ್ತ ಬರಹಗಾರರು ಅಥವಾ ‘GHOSTWRITER’ ಗಳನ್ನು ನಾನು ಸದಾ ನೆನೆಸಿಕೊಳ್ಳುತ್ತೇನೆ. ಅಂದು ಅಶೋಕನ ಕಟ್ಟಾಜ್ಞೆ ಇತ್ತು. ಆತ ತನ್ನ ಯಾವುದೇ ಶಾಸನದಲ್ಲಿಯಾಗಲೀ ಎಲ್ಲೇ ಆಗಲಿ ತನ್ನ ಹೆಸರಾದ ದೇವಾನಾಂಪಿಯಸಿ ಮತ್ತು ತನ್ನ ಮಕ್ಕಳಿಬ್ಬರ ಹೆಸರನ್ನು ಹೊರತು ಪಡಿಸಿ ಮಿಕ್ಕ ಯಾರ ಹೆಸರೂ ಎಲ್ಲಿಯೂ ಹೊರ ಬರದಂತೆ ಮುತುವರ್ಜಿ ವಹಿಸಿ ಬಿಟ್ಟ. ನಮ್ಮ ಪ್ರಾಚೀನ ರಾಜರೆಲ್ಲಾ ಇದೇ ರೀತಿ ಮಾಡಿ ಬಿಟ್ಟಿದ್ದರೆ ಕಂಡಿತವಾಗಿಯೂ ನಮ್ಮ ಭಾರತ ಯಾವ ಕಾಳಿದಾಸನನ್ನೂ ಪಡೆಯುತ್ತಿರಲಿಲ್ಲ ಯಾವ ಭಾರವಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ತಾನು ಕಟ್ಟಿದ ಸಾಮ್ರಾಜ್ಯ ಅನತಿ ಸಮಯದಲ್ಲೇ ಹೇಳ ಹೆಸರಿಲ್ಲದಂತಾಗಿ ಮುಂದೆ ಕಲೆ ಸಂಸ್ಕೃತಿ ಸಾಹಿತ್ಯ ಹೇರಳವಾಗಿ ನಮಗೆ ದೊರಕಿತು.
ಅಶೋಕನಿಂದ ಕಳಿಸಲ್ಪಟ್ಟ ಲಿಪಿಕಾರ ದೂರದ ಗಾಂಧಾರದಿಂದ ಬಂದು ಅಶೋಕನಲ್ಲಿ ಸೇರಿಕೊಂಡು ಅವನ ಕಟ್ಟಾಜ್ಞೆಗಳನ್ನು ಪಾಲಿಸುತ್ತಾ ಬರುತ್ತಾ ಬರುತ್ತಾ ಯಾವಾಗ ಕರ್ನಾಟಕದ ಮೊಳಕಾಲ್ಮೂರು ಪ್ರದೇಶದ ಬ್ರಹ್ಮಗಿರಿಗೆ ಬಂದನೋ ಆತನಿಗೆ ಅಶೋಕನ ಶಕ್ತಿಯ ಅರಿವಾಗಿತ್ತು. ಇನ್ನು ಇಳಿವಯಸ್ಸಿನಲ್ಲಿ ಅಶೋಕ ಅಷ್ಟು ದೂರದಿಂದ ಇಲ್ಲಿಗೆ ಬರಲಿಕ್ಕಿಲ್ಲ ಎನ್ನುವುದನ್ನು ಮನಗಾಣುತ್ತಾನೆ. ಅಜ್ಞಾತವಾಗಿ ಇಷ್ಟು ದಿನ ತಡೆದಿದ್ದ ಅವನ ಆತ್ಮಗೌರವ ಪುಟಿದೇಳುತ್ತದೆ. ಬ್ರಹ್ಮಗಿರಿಯ ಶಾಸನದಲ್ಲಿ ಅದನ್ನು ಹೊರಗೆಡಹುತ್ತಾನೆ. ಇಲ್ಲಿ ಆತ ಇಡೀ ಶಾಸನವನ್ನು ಬರೆದ ಕೊನೆಗೆ ತನಗೆ ಗೊತ್ತಿದ್ದ ಖರೋಷ್ಠಿಯಲ್ಲಿ ಬಲದಿಂದ ಎಡಕ್ಕೆ “ಲಿಪಿಕರೇಣ” ಎನ್ನುವ ಪದ ಬರೆದು ಮಿಕ್ಕವನ್ನು ಬ್ರಾಹ್ಮಿಯಲ್ಲಿ “ಚಪಡೇನ ಲಿಖಿತೇಲಿಪಿಕರೇಣ” ಎಂದು ಮುಗಿಸುತ್ತಾನೆ. ಅಖಂಡ ಭಾರತದಲ್ಲಿ ಲಿಪಿಕಾರನೊಬ್ಬನ ಹೆಸರು ಅಜ್ಞಾತವಾಗುಳಿದು ನಮ್ಮ ಹೆಮ್ಮೆಯ ಕನ್ನಡ ನಾಡಿನ ಜನತೆಗೆ ಈತ ಲಿಪಿಯ ಪಿತಾಮಹನೆನ್ನಿಸಿಕೊಳ್ಳುತ್ತಾನೆ.
ಚಪಡನಿಗೆ ಇನ್ನೊಂದು ಅಭಿಲಾಶೆ ಇತ್ತು. ಆತ ಎಲ್ಲಾ ಕಡೆ ಬ್ರಾಹ್ಮಿಯಲ್ಲಿ ಅಶೋಕನಿಂದ ಬರೆಸಲ್ಪಟ್ಟದ್ದನ್ನೇ ಬರೆದು ತನ್ನ ಸ್ವಂತಿಕೆ ಹಾಳಾಗುತ್ತಿದ್ದುದು ಅರಿವಿಗೆ ಬಂದಿತ್ತು. ಇಲ್ಲಿ ಆತ ಖರೋಷ್ಠಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ್ದು ತನಗೆ ಬ್ರಾಹ್ಮಿಯ ಜೊತೆಗೆ ಖರೋಷ್ಠಿಯೂ ಗೊತ್ತು ಎನ್ನುವುದನ್ನು ಜನರಿಗೆ ತಿಳಿಸ ಬೇಕಿತ್ತು ಅಂತ ಕಾಣಿಸುತ್ತದೆ. ಅದೇನೇ ಇರಲಿ ಆತ ತನ್ನ ಹೆಸರನ್ನು ನಮೂದಿಸಿದ್ದು ಲಿಪಿಯ ಇತಿಹಾಸದಲ್ಲಿ ಅತ್ಯಂತ್ಯ ಮಹತ್ವ ಪಡೆಯುತ್ತದೆ.
ಭಾರತದ ಅಕ್ಷರದ ಇತಿಹಾಸದ ಮೊದಲ ಸಾದೃಶ್ಯ ಇದಾಗಿರುವುದರಿಂದ, ಇದನ್ನು ಲಿಖಿಸಿದವನು ಮತ್ತು ಲಿಖಿಸಿದ ಸ್ಥಳಗಳು ಲಿಪಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿದುಬಿಡುತ್ತದೆ. ಹಾಗೆ ನೋಡಿದರೆ ನಮ್ಮ ಭಾರತದ ಲಿಪಿಕಾರರ ಇತಿಹಾಸ ಪ್ರಾರಂಭವಾಗುವುದೇ ಇಲ್ಲಿಂದ. ಈ ಚಪಡ ಬೇರಾರೂ ಅಲ್ಲ ಆಯುರ್ವೇದದಲ್ಲಿ ಸಂಹಿತೆಗಳನ್ನು ರಚಿಸಿದ ಚರಕನ ಅಜ್ಜ ಎನ್ನುವುದು ವಿಶೇಷ. ಈ ಚಪಡ ತನ್ನ ಜೀವಿತವನ್ನು ಅಜ್ಞಾತವಾಗಿ ಕಳೆದು ಕೇವಲ ಧರ್ಮಪ್ರಸಾರಕ್ಕಾಗಿ ಕಳೆದುದು ಒಂದು ರೀತಿಯಲ್ಲಿ ನಮಗೆ ದೌರ್ಭಾಗ್ಯವಾದರೂ ಇನ್ನೊಂದು ರೀತಿಯಲ್ಲಿ ಆತ ಲಿಪಿಯನ್ನು ಕೊಟ್ಟು ನಮಗೆಲ್ಲಾ ತಂದೆಯ ಸ್ಥಾನದಲ್ಲಿ ನಿಂತು ಬಿಟ್ಟ.

No comments:

Post a Comment