Search This Blog

Tuesday 30 January 2018

ಕ್ಷಮಯಾ ಪೃಥಿವೀಸಮಃ - ಮಂಗಲೇಶ

ಇದನ್ನು ಮಾಗಡ ಎಂದು ಕರೆಯುತ್ತಿದ್ದರು, ಕಾಲಕ್ರಮೇಣ ಅದು ಮಾಕುಟ ಎಂದು ಕರೆಸಿಕೊಂಡಿತು, ಭಾಷೆಯ ಮೇಲೆ ಅನ್ಯಭಾಷೆಯ ಪ್ರಭಾವ ಹೆಚ್ಚಿದಂತೆಲ್ಲಾ ಇನ್ನೂ ಹೊಸರೂಪ ತಾಳುತ್ತಾ ಮಕುಟ ಎಂದು ಕರೆಸಿಕೊಂಡು ಆಮೇಲೆ ಇಂದಿನ ತನಕವೂ ಮಹಾಕೂಟ ಎಂದೇ ಕರೆಯಲ್ಪಟ್ಟಿತು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕೆಲವೇ ಕಿಲೋಮೀಟರುಗಳ ಅಂತರದಲ್ಲಿ ಪೂರ್ವದಿಕ್ಕಿನಲ್ಲಿ ಸಿಗುವುದೇ ಮಹಾಕೂಟ.
ಬಾದಾಮಿ ಚಾಳುಕ್ಯರ ವಂಶಾವಳಿಯಂತೆ ರಣರಾಗ ಮೊದಲಿಗ, ಅವನ ಮಗ ಮೊದಲನೇ ಪೊಲೆಕೇಶಿ ಕ್ರಿ.ಶ. ೫೪೦ ರಿಂದ ೫೬೬ತನಕ ರಾಜ್ಯಭಾರ ಮಾಡಿದ. ಈತನೇ ಚಾಲುಕ್ಯವಂಶದ ಸ್ಥಾಪಕ. ವಲ್ಲಭ ಅಥವಾ ಪೃಥ್ವೀವಲ್ಲಭ ಎನ್ನುವ ಬಿರುದನ್ನು ಮೊತ್ತಮೊದಲು ಪಡೆವನು ಈತನೇ ಈತನ ತರುವಾಯದ ಎಲ್ಲಾ ರಾಜರೂ ಆ ಬಿರುದನ್ನು ಮುಂದುವರೆಸಿಕೊಂಡು ಬಂದರು. ಈತನಿಗೆ ಪೂಗವರ್ಮ ಮತ್ತು ಕೀರ್ತಿವರ್ಮ ಮತ್ತು ಮಂಗಲೇಶ ಹೀಗೇ ಮೂರು ಜನ ಮಕ್ಕಳು. ಆದರೆ ಪೂಗವರ್ಮನೆನ್ನುವವನ ಬಗ್ಗೆ ಹಲವಾರು ಸಂದೇಹಗಳಿದ್ದು ಆತ ಹೆಚ್ಚು ಸಮಯ ಬಾಳಿದಂತೆ ಕಾಣುತ್ತಿಲ್ಲ. ಮೊದಲನೇ ಕೀರ್ತಿವರ್ಮನ ಮಗನೇ ಚಳುಕ್ಯ ದೊರೆಗಳಲ್ಲೆಲ್ಲಾ ಪ್ರಸಿದ್ಧನಾದ ಎರಡನೇ ಪೊಲೆಕೇಶಿ.
ಮೊದಲನೇ ಕೀರ್ತಿವರ್ಮ ಸಾಯುವ ಸಮಯ ಎರಡನೇ ಪೊಲೆಕೇಶಿ ಇನ್ನು ಚಿಕ್ಕವನಾಗಿದ್ದ. ಆಗ ಅವನ ಪರವಾಗಿ ಮಂಗಲೇಶನೇ ಅಧಿಕಾರ ನಡೆಸುತ್ತಾನೆ. ಮಂಗಲೇಶ ತನ್ನ ಕೊನೆಯ ಕಾಲದಲ್ಲಿ ಎರಡನೆ ಪೊಲೆಕೇಶಿಯನ್ನು ದೂರವಿಟ್ಟು ಆತನ ಹಕ್ಕನ್ನು ತನ್ನ ಮಗನಿಗೆ ಕೊಡಲು ಉದ್ಯುಕ್ತನಾಗುತ್ತಾನೆ. ಈ ಸಂಚನ್ನು ತಿಳಿದ ಪೊಲೆಕೇಶಿ ಬಂಡೆದ್ದು ತನ್ನ ಅಧಿಕಾರ ಸ್ವೀಕರಿಸುತ್ತಾನೆ. ಆಗ ಮಂಗಲೇಶ ಮರಣ ಹೊಂದುತ್ತಾನೆ. ಆಂತರಿಕ ಬಂಡಾಯದ ವಿಷಯ ಎಲ್ಲಿಯೂ ನಮಗೆ ಸಿಗುವುದಿಲ್ಲ.
ಮಂಗಲೇಶನ ಆಸ್ಥಾನದಲ್ಲಿ ಎಂತೆಂತಹ ಕವಿಗಳು ಸಾಹಿತಿಗಳು ಕಲಾವಿದರು ಇದ್ದರೋ ತಿಳಿಯುತ್ತಿಲ್ಲ. ಆದರೆ ೫ -೬ ನೇ ಶತಮಾನಕ್ಕಾಗಲೇ ಪುರಾಣಗಳಿಂದ ಹಾಗೂ ಕಾಳಿದಾಸನಂತಹ ಸಂಸ್ಕೃತದ ಮೇರು ಕವಿಗಳ ಕಾವ್ಯಗಳಿಂದ ಸ್ಪೂರ್ತಿಪಡೆದ ಕವಿಯೊಬ್ಬನಿದ್ದ ಅನ್ನುವುದು ಕನ್ನಡನಾಡಿನವರಾದ ನಮಗೆ ಹೆಮ್ಮೆ.
ಮಂಗಲೇಶ ಒಂದು ಶಸನವನ್ನು ಮಹಾಕೂಟದಲ್ಲಿ ಬರೆಸುತ್ತಾನೆ. ಈ ಶಾಸನದ ಆರಂಭದಲ್ಲಿಯೇ ಶಾಸನಕವಿ 'ದಾಟ' ಕಾಳಿದಾಸನ ರಘುವಂಶದ ರಘುವಂಶ ಕಾವ್ಯದ ಒಂದನೇ ಸರ್ಗದ 
"ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಮ್ | ಎನ್ನುವ ಸಾಲನ್ನು ತೆಗೆದುಕೊಂಡು ಬೆರಗು ಗೊಳಿಸುತ್ತಾನೆ. ಹಾಗಂತ ಕವಿಗೆ ಅದು ರಘುವಂಶದ ಶ್ಲೋಕವೆಂತಲೋ ಅಥವಾ ಅದು ಕಾಳಿದಾಸನ ಕೃತಿ ಎಂತಲೋ ತಿಳಿದ ಬಗ್ಗೆ ಗೊತ್ತಾಗುತ್ತಿಲ್ಲ. ಮತ್ತು ಕಾಳಿದಾಸನನ್ನು ಕುರಿತು ಸಹ ಉಲ್ಲೇಖಿಸುತ್ತಿಲ್ಲ. ಅದೇ ರೀತಿಯಾಗಿ. ಈ ಕವಿ ಅಸಾಮಾನ್ಯ ಎನ್ನುವಲ್ಲಿ ಎರಡು ಮಾತಿಲ್ಲ.
ಈ ಶಾಸನದ ೬ನೇ ಸಾಲಿನಲ್ಲಿ ಈತ "ಸಮುದ್ರ ಇವ ಗಂಭೀರಃ ಕ್ಷಮಯಾ ಪೃಥಿವೀ ಸಮಃ" ಎಂದು ಬರೆಯುತ್ತಾನೆ. ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಶ್ಲೋಕದ ಇನ್ನೊಂದು ರೂಪ. ಅಲ್ಲಿ ೧೭ನೆಯ ಶ್ಲೋಕದಲ್ಲಿ
ಸಮುದ್ರ ಇವ ಗಾಮ್ಭೀರ್ಯೇ ಧೈರ್ಯೇಣ ಹಿಮವಾನಿವ |
ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ಪ್ರಿಯದರ್ಶನಃ |
ಕಾಲಾಗ್ನಿಸದೃಶಃ ಕ್ರೋಧೇ ಕ್ಷಮಯಾ ಪೃಥಿವೀಸಮಃ || ೧೭ ||
ಗಾಂಭೀರ್ಯದಲ್ಲಿ ಸಮುದ್ರದಂತೆ ಗಂಭೀರ, ಧೈರ್ಯದಲ್ಲಿ ಎತಿ ಎತ್ತರದ ಹಿಮಾಲಯದಂತೆ, ಪರಾಕ್ರಮದಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುವ ವಿಷ್ಣುವಿನಂತೆ. ದರ್ಶನಾಕಾಂಕ್ಷಿಗಳಿಗೆ ಪ್ರಿಯನಾದ ಶಿವನಂತೆ. ಕೋಪದಲ್ಲಿ ಕಾಲಾಗ್ನಿಯಂತೆಯೂ , ಕ್ಷಮಾಗುಣದಲ್ಲಿ ಭೂಮಿಗೆ ಸಮಾನನು ಎಂದು ವಾಲ್ಮೀಕಿ ರಾಮನನ್ನು ಬಣ್ಣಿಸಿದ್ದಾನೆ. ಶಾಸನ ಕವಿ ಇಲ್ಲಿ ರಾಮಾಯಣದಲ್ಲಿ ಉಕ್ತವಾಗಿರುವ ಶ್ಲೋಕದ ಮೊದಲ ಚರಣದ ಪೂರ್ವಾರ್ಧವನ್ನು ಉಳಿಸಿಕೊಂಡು ಶ್ಲೋಕದ ಅಂತ್ಯವನ್ನು ಸೇರಿಸಿದ್ದಾನೆ. ಗಾಂಭೀರ್ಯದಲ್ಲಿ ಸಮುದ್ರರಾಜನಂತೆಯೂ ಕ್ಷಮಾಗುಣದಲ್ಲಿ ಭೂಮಿಯಂತೆಯೂ ಎಂದು ಹೇಳಿದ್ದಾನೆ.
ಇದೇ ಶಾಸನದ ೭ನೇ ಸಾಲಿನಲ್ಲಿ "ಜ್ಯೇಷ್ಟ ಶ್ರೇಷ್ಟ ಗುಣ ಸಮುದಯೋದಿತ ಪುರುರಣ ಪರಾಕ್ರಮಾಂಕ ಪ್ರಿಯಃ" ಎಂದು ಬರೆಯುತ್ತಾನೆ. ಇದು ರಾಮಾಯಣದ ಬಾಲಕಾಂಡದ ೧೯ನೇ ಶ್ಲೋಕದಲ್ಲಿ
ತಮೇವಂಗುಣಸಂಪನ್ನಂ ರಾಮಂ ಸತ್ಯಪರಾಕ್ರಮಮ್ |
 ಜ್ಯೇಷ್ಠಂ ಶ್ರೇಷ್ಠಗುಣೈರ್ಯುಕ್ತಂ ಪ್ರಿಯಂ ದಶರಥಃ ಸುತಮ್ || ೧೯ ||
ಇಲ್ಲಿಯೂ ಸಹ ಶ್ಲೋಕದ ಎರಡನೇ ಚರಣದ ಸಾಲನ್ನು ಸ್ವಲ್ಪ ಪರಿವರ್ತಿಸಿಕೊಂಡಿರುವುದು ಕಂಡು ಬರುತ್ತದೆ.
ಅಂದರೆ ಶಾಸನ ಕವಿ ಪುರಾಣವನ್ನು ಸಮಗ್ರವಾಗಿ ಅಧ್ಯಯನ ಮಾಡಿ ರಾಮಾಯಣದಂತಹ ಕೃತಿಯಲ್ಲಿನ ಶ್ಲೋಕವೊಂದನ್ನು ಉದಾಹರಿಸಲು ಸಮರ್ಥನಿದ್ದ. ಹಾಗೆಯೇ ಕಾಳಿದಾಸಾದಿಗಳ ಕಾವ್ಯವನ್ನು ಬಲ್ಲವನಾಗಿದ್ದ. ಈತನ ನಂತರ ಬಂದ ಇವನಿಗಿಂತಲೂ ಸಶಕ್ತ ಪ್ರಕಾಂಡ ವಿದ್ವಾಂಸ ರವಿಕೀರ್ತಿ.
ಆದರೆ ಈ ಶಾಸನ ಕವಿಯು ಸಂಸ್ಕೃತದಲ್ಲಿ ಸಾಮ್ರ್ಥ್ಯ ತೋರಿಸಿದ್ದರು ಶಾಸನಾಂತ್ಯದಲ್ಲಿ ಕನ್ನಡದಲ್ಲಿ ಕನ್ನಡಪ್ರೇಮ ಮೆರೆದು ತಾನು ಕನ್ನಡಿಗನೆನ್ನುವುದನ್ನು ತೋರಿಸಲು ತನ್ನ ಹೆಸರನ್ನು ಕನ್ನಡದಲ್ಲಿಯೇ ಬರೆದಿದ್ದಾನೆ. “ದಾಟ ಆನ ಕುಟ್ಟಿದ ಪೂ ಕಮ್ಬ” ಎಂದು ಬರೆದಿದ್ದಾನೆ.


No comments:

Post a Comment