Search This Blog

Saturday 27 January 2018

ಅಗ್ರಹಾರವೆಂದರೆ ವಿದ್ಯಾಕೇಂದ್ರ, ವಿಶ್ವವಿದ್ಯಾಲಯ, ಜನವಸತಿಯ ಕೇಂದ್ರ.



ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿದುದು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರು. ಇವರೆಲ್ಲರೂ ಅಗ್ರಹಾರದ ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಸಾಮಾನ್ಯವಾಗಿ ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ, ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಬಳ್ಳಿಗಾವೆ, ತಿಳಿವಳ್ಳಿ, ಸಾಲೋತ್ತಗಿ, ಕಲಶ ಮುಂತಾದ ನೂರಾರು ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿ ವಿಶ್ವವಿದ್ಯಾನಿಲಯಗಳ ಸ್ಥಾನಗಳಾಗಿದ್ದುವು. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.
‘ಅಗ್ರಹಾರ’ವೆಂದರೆ ತೆರಿಗೆಯಿಂದ ಮುಕ್ತಗೊಳಿಸಿದ ಬ್ರಾಹ್ಮಣರ ವಸತಿ ಸ್ಥಾನ. ಬ್ರಹ್ಮಪುರಿ ಮತ್ತು ಚತುರ್ವೇದಿಮಂಗಳ ಎಂಬವು ಇದರ ಪರ್ಯಾಯ ಪದಗಳು. ವೇದ, ಶಾಸ್ತ್ರ, ಪುರಾಣ, ಪೌರೋಹಿತ್ಯ, ಯಜ್ಞ, ಯಾಗ, ಆಗಮ, ಜ್ಯೋತಿಷ್ಯ ಅಲ್ಲದೆ ಇನ್ನೂ ಹಲವಾರು ವಿದ್ಯೆಗಳಲ್ಲಿ ಪರಿಣತಿ ಪಡೆದ ಬ್ರಾಹ್ಮಣರನ್ನು ಇಲ್ಲಿ ನೆಲೆನಿಲ್ಲಿಸಿ, ಅವರವರ ಅರ್ಹತೆಗೆ ತಕ್ಕಂತೆ ಅನುಕೂಲತೆಗಳನ್ನು (ಅಂದರೆ ನಿವೇಶನ, ಮನೆ, ಭೂಮಿ, ಆದಾಯ, ಸಂಬಳ) ಒದಗಿಸಿ, ಅವರಿಗೆ ಹಲವು ಕರ್ತವ್ಯಗಳನ್ನು ವಹಿಸಿಕೊಡಲಾಗುತ್ತಿತ್ತು. ಇಂಥವರು ತಮ್ಮ ಕುಟುಂಬದೊಡನೆ ಇಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಹಿರಿಯರೂ ಜ್ಞಾನಿಗಳೂ ಆದವರನ್ನು ‘ಹಿರಿಯ ಮಹಾಜನರು’ ಎಂದು, ಎರಡನೆಯ ಹಂತದಲ್ಲಿದ್ದವರನ್ನು ಮಹಾಜನರೆಂದು ಗುರುತಿಸಲಾಗುತ್ತಿತ್ತು. ಆದರೆ ಬ್ರಾಹ್ಮಣರೆಲ್ಲರೂ ‘ಮಹಾಜನ’ರಾಗಿರುತ್ತಿರಲಿಲ್ಲ. ಅಲ್ಲದೆ ಅಗ್ರಹಾರದಲ್ಲಿ ಬ್ರಾಹ್ಮಣರು ಮಾತ್ರ ವಾಸಿಸುತ್ತಿರಲಿಲ್ಲ.
ಅಗ್ರಹಾರವು ಪ್ರಮುಖವಾಗಿ ಬ್ರಾಹ್ಮಣರ ವಸತಿ ಸ್ಥಾನವಾಗಿದ್ದರೂ ಅನೇಕ ಬಗೆಯ ಆಡಳಿತ ಮತ್ತು ಪರಿಚಾರ ವರ್ಗಗಳಿಗೆ ಇಲ್ಲಿ ಅನುವು ಇರುತ್ತಿತ್ತು. ಬ್ರಾಹ್ಮಣರಲ್ಲಿ ಮಹಾಜನರಲ್ಲದೆ, ಆಚಾರ್ಯರು, ಪುರಾಣಿಕರು, ಆಗಮಿಕರು, ಮಾಂತ್ರಿಕರು, ಸ್ತಾನಿಕರು, ಮೀಮಾಂಸಕಾರರು, ತಾರ್ಕಿಕರು, ವ್ಯಾಕರಣಕಾರರು ಮತ್ತು ನಂಬಿಗಳ ಎಂಬ ವರ್ಗಗಳಿದ್ದವು.
ಗುಪ್ತರ ಕಾಲದ ನಂದಪುರ ತಾಮ್ರ ಶಾಸನದ ಮೊದಲ ಸಾಲಿನ ಆರಂಭವೇ ಸ್ವಸ್ತ್ಯಂಬಿಲ ಗ್ರಾಮಾಗ್ರಹಾರಾತ್ ಸ ವಿಶ್ವಾಸಮಧಿಕರಣಾಂ ಎಂದು ಬರುತ್ತದೆ. ಅಲ್ಲಿನ ಗ್ರಾಮವೊಂದನ್ನು ಬ್ರಾಹ್ಮಣರಿಗೆ ಮತ್ತು ಉಳಿದ ಜನರಿಗೆ ಅಗ್ರಹಾರವಾಗಿ ಕೊಟ್ಟದ್ದು ಉಲ್ಲೇಖಿತವಾಗಿದೆ.
ಬುಧಗುಪ್ತನ ಬಿಹಾರದ ಸ್ತಂಬಶಾಸನದ ೨೮ನೇ ಸಾಲಿನಿಂದ ಆರಂಭವಾಗುವ ವಣಿಜಕ ಪಾಡಿತಾರಿಕ ಆಗ್ರಹಾರಿಕ ಶೌಲ್ಕಿಕ ಗೌಲ್ಮಿಕ ಎಂದು ಅಗ್ರಹಾರವನ್ನು ಕುರಿತು ಹೇಳಲಾಗಿದೆ. ಆ ಅಗ್ರಹಾರದಲ್ಲಿ ವ್ಯಾಪಾರಿಗಳು, ಶುಲ್ಕವನ್ನು ವಸೂಲು ಮಾಡುವ ಆಸ್ಥಾನಿಗರು, ಮರದ ವ್ಯವಹಾರ ನೋಡಿಕೊಳ್ಳುವ ಜನ. ಎಲ್ಲರ ವಸತಿಗಾಗಿ ಅಗ್ರಹಾರವನ್ನು ನಿರ್ಮಿಸಿದ ಮಾಹಿತಿ ದೊರಕುತ್ತದೆ.
ಕಳಿಂಗದ ದೊರೆ ಅನಂತವರ್ಮನ ಸಿರಿಪುರಂ ತಾಮ್ರ ಶಾಸನದ ೯ನೇ ಸಾಲಿನಲ್ಲಿ ಪೂರ್ವಮೇವಾಗ್ರಹಾರಃ ಎಂದು ಬರುತ್ತದೆ. ಆ ಶಾಸನದಲ್ಲಿ ಮುಂದುವರೆದು ಇದಾನೀಂ ಅಸ್ಮಾಭಿಃ ಪುಣ್ಯ ಆಯುರ್ಯಶಸಾಂ ಅಭಿವೃದ್ಧಯೇ ಯಜನ ಯಾಜನ ಯಾಜನಾಧ್ಯಯನಾಧ್ಯಾಪನಃ ಎಂದು ಬರುತ್ತದೆ. ಅಂದರೆ ಅಗ್ರಹಾರವನ್ನು ಯಾತಕ್ಕಾಗಿ ನಿರ್ಮಿಸುತ್ತಿದ್ದರು ಮತ್ತು ಅಲ್ಲಿನ ವಸತಿ ಯಾವರೀತಿ ಎನ್ನುವುದು ತಿಳಿಯುತ್ತದೆ.
ಸುಮಾರು ೬ - ೭ ನೇ ಶತಮಾನದ ಇಂದ್ರವರ್ಮನ ಅಂಧವರಂ ಶಾಸನದಲ್ಲಿ ತೋಟವಾಟಕ ಗ್ರಾಮವನ್ನು ಎಲ್ಲಾ ಕುಟುಂಬದವರಿಗಾಗಿ ಪುಣ್ಯ ಆಯುರ್ ಐಶ್ವರ್ಯಾಭಿವೃದ್ಧಯೇ ಆಂದೋರಕಾಗ್ರಹಾರ ವಸ್ತವ್ಯೇಭ್ಯೋ ನಾನಾ ಗೋತ್ರ ಬಹೃಚ ಚರಣ ಬ್ರಹ್ಮಚಾರಿಭ್ಯಃ ಎಂದು ಬರುತ್ತದೆ. ಅಂದರೆ ತನ್ನ ಸೇವಕ ವರ್ಗದವರಿಗೂ ಮತ್ತು ಬೇರೆ ಬೇರೆ ಗೋತ್ರದ ಬ್ರಾಹ್ಮಣರಿಗೆ ಮತ್ತು ಬ್ರಹ್ಮ ಚಾರಿಗಳ ವಸತಿಗೆ ಅಗ್ರಹಾರವನ್ನು ನಿರ್ಮಿಸಿದ ಎಂದು ತಿಳಿದು ಬರುತ್ತದೆ.
ಕನ್ನಡನಾಡಿನಲ್ಲಿಯೂ ಸಹ ಅಗ್ರಹಾರಗಳನ್ನು ನಿರ್ಮಿಸಲಾಗಿತ್ತು. ಶಿಖಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಬಾದಾಮಿ ಚಲುಕ್ಯ ಪೊಲೆಕೇಶಿಯು ಸುಮಾರು ೬೪೦ನೇ ಇಸವಿಯಲ್ಲಿ ಅಗ್ರಹಾರ ನಿರ್ಮಿಸಿದ ದಾಖಲೆ ಮೊತ್ತಮೊದಲು ಸಿಗುತ್ತದೆ. ಸ್ವಸ್ತಿಶ್ರೀಅನಾದಿತೊ . . . . . ಅಗ್ರಹಾರ ಎಂದು ಶಾಸನ ಆರಂಭವಾಗುತ್ತದೆ. ಆಮೇಲೆ ಅಂದರೆ ಬಾದಾಮಿ ಚಲುಕ್ಯ - ಎರಡನೆ ಪೊಲಕೇಸಿ ಸುಮಾರು.೭ನೇ ಶತಮಾನದ ೬ನೇ ಸಾಲಿನಲ್ಲಿ ಆ ಮಾರ್ಗ್ಗಮೆ ಕೊಟ್ಟಾರ್ ಅನ್ತೊಸಲೆ ಬಾಣರಾಜರ ವಿಷಯದ ಅಗ್ರಹಾರಂಗಳನ್ತೆ ಎಂದು ಬರುತ್ತದೆ. ನೊಳಂಬರ ಕಾಲದಲ್ಲಿ ಪಲ್ಲವ ವೀರ ಮಹೇಂದ್ರ ನೊಳಂಬಾಧಿರಾಜ ಸುಮಾರು ೮೯೦ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲಿನ ಆವನಿ ರಾಮೇಶ್ವರ ದೇವಾಲಯದ ದಕ್ಷಿಣದ ಮಹಾದ್ವಾರದ ಬಳಿಯಲ್ಲಿರುವ ಶಿಲೆಯಲ್ಲಿ
೧. ಶ್ರೀವಧುಧರೆಪೇಳಲ್ಚೇರಾವನಿಪಂ
೨. ಗಗ್ರಮಹಿಷಿಭುವನಾಂಬಿಕೆವಾಗ್ದೇವಿ
೩. ಯರದೊರೆಯರೆನಿಸಿದದೀವಬ್ಬರಸಿ
೪. ಯರದೊರೆಗೆೞ್ದರ್‌ಪೆಱರೊಳರೇ ಅತಿ
೫. ಶಯಮಾಗೆತಮ್ಮಪೆಸರೊಳ್ನೆಱೆತತ್ಪ
೬. ತಿನಾಮದಿಂಯಶೋರ್ಜ್ಜಿತಮೆನಿಪಗ್ರ
೭. ಹಾರಮವಿನಾಶಿನಮಸ್ಯಮೆಮಾಡಿರಾ
೮. ಜ್ಯದೊಳು
ಎಂದು ಅಗ್ರಹಾರವನ್ನು ದಾನಕೊಟ್ಟ ಬಗ್ಗೆ ಉಲ್ಲೇಖಿಸಲಾಗಿದೆ. ಕನ್ನಡನಾಡಿನಲ್ಲಂತೂ ಅದೆಷ್ಟು ಅಗ್ರಹಾರ ನಿರ್ಮಿಸಲಾಗಿತ್ತೋ ಅದು ಲೆಕ್ಕ ಸಿಗದಷ್ಟು. ಅಗ್ರಹಾರವೆನ್ನುವುದು ಕೇವಲ ಬ್ರಾಹ್ಮಣರ ವಸತಿ ಮಾತ್ರವಾಗಿರದೇ ಅದು ವಿದ್ಯಾಕೇಂದ್ರವೆನಿಸಿ ರಾಜಪರಿವಾರದ ಎಲ್ಲರೂ ನೆಲೆಗೊಳ್ಳಲು ಅನುಕೂಲವಾಗುವಂತಹ ನೆಲೆ.

No comments:

Post a Comment