Search This Blog

Tuesday 23 January 2018

ವಿಶ್ವಕೋಶದಂತಿದ್ದ ನಾಟ್ಯಶಾಸ್ತ್ರದ ಅಭಿನವಗುಪ್ತ.

ಕನೋಜಿನ ರಾಜ ಯಶೋವರ್ಮನ ಆಶ್ರಿತನಾಗಿದ್ದ ಅಗಸ್ತ್ಯಗೋತ್ರದ ಅತ್ರಿಗುಪ್ತನು ತನ್ನ ಪೂರ್ವಜ ಎಂದು ಅಭಿನವಗುಪ್ತ ತಂತ್ರಲೋಕ ಮತ್ತು ಪರಾತ್ರಿಂಶಿಕಾ ವಿವರಣದಲ್ಲಿ ಹೇಳಿಕೊಳ್ಳುತ್ತಾನೆ. ತೀರಾ ಕಾಳಿದಾಸನಷ್ಟು ತನ್ನ ಜೀವಿತವನ್ನು ಗುಟ್ಟಾಗಿಡದಿದ್ದರೂ ತನ್ನ ಜಿವಿತದ ಕೆಲವಂಶವನ್ನು ತೆರೆದಿಡುತ್ತಾನೆ.

ನಿಶ್ಶೇಷ ಶಾಸ್ತ್ರ ಸದನಂ ಕಿಲ ಮಧ್ಯದೇಶಃ ತಸ್ಮಿನ್ನಜಾಯತ ಗುಣಾಭ್ಯಧಿಕೋ ದ್ವಿಜನ್ಮಾ |
ಕೋಪ್ಯತ್ರಿಗುಪ್ತ ನಾಮನಿರುಕ್ತಗೋತ್ರಃ ಶಾಸ್ತ್ರಾಬ್ಧಿಚರ್ವನಕಲೋದ್ಯದಗಸ್ತ್ಯ ಗೋತ್ರಃ

ಅತ್ರಿಗುಪ್ತ ಬಹುದೊಡ್ದವಿದ್ವಾಂಸ. ಶೈವಶಾಸ್ತ್ರದಲ್ಲಿ ಅಪಾರ ಪಂಡಿತ್ಯಗಳಿಸಿದ್ದ. ಈತನ ಪಾಂಡಿತ್ಯಕ್ಕೆ ಮಾರುಹೋದ ಕಾಶ್ಮೀರದ ದೊರೆ ಲಲಿತಾದಿತ್ಯನು ತನ್ನೊಡನೆ ಕಾಶ್ಮೀರಕ್ಕೆ ಬರುವಂತೆ ಕೋರಿದನಂತೆ. ಲಲಿತಾದಿತ್ಯನು ಯಶೋವರ್ಮನ ಮೇಲೆ ದಂಡೆತ್ತಿಹೋಗಿದ್ದು ಕ್ರಿ ಶ ೭೪೦ ರಲ್ಲಿ ಆದ್ದರಿಂದ ಆ ಕಾಲದಲ್ಲಿಯೇ ಅತ್ರಿಗುಪ್ತನು ಕಾಶ್ಮೀರಕ್ಕೆ ವಲಸೆ ಹೋಗಿದ್ದರಿಂದ ಅಭಿನವಗುಪ್ತನೂ ಕಾಶ್ಮೀರದಲ್ಲಿ ನೆಲೆಸಿದ್ದು ತಿಳಿದು ಬರುತ್ತದೆ.
ನರಸಿಂಹಗುಪ್ತ ಮತ್ತು ವಿಮಲಕಲಾ ದಂಪತಿಯ ಮಗನಾಗಿ ಜನಿಸಿದ ಅಭಿನವಗುಪ್ತ ಕ್ರಿ. ಶ ೯೫೦ ರಿಂದ ೯೬೦ರ ಕಾಲ ಅವನ ಜನನಕಾಲವೆನ್ನುವುದು ತಿಳಿದು ಬರುತ್ತದೆ.
ಭಾರತದಲ್ಲಿ ಹತ್ತನೇ ಶತಮಾನಕ್ಕೂ ಕೊಂಚ ಮೊದಲು ಮತ್ತು ೮ನೇ ಶತಮಾನದ ತರುವಾಯದ ತತ್ತ್ವಜ್ಞಾನಿಗಳ ಪಟ್ಟಿಯಲ್ಲಿ ಅಭಿನವಗುಪ್ತನ ಹೆಸರು ಶಾಶ್ವತ ಕೀರ್ತಿಗೆ ಪಾತ್ರವಾಗಿದೆ. ಇವನ ಅಪಾರ ವಿದ್ವತ್ ಪ್ರಾವೀಣ್ಯತೆ, ಬಹುಮುಖ ಪ್ರತಿಭೆ, ವಿಸ್ತೃತಗ್ರಂಥರಚನೆ, ಆಧ್ಯಾತ್ಮದ ಸಾಕ್ಷಾತ್ಕಾರ, ಎಲ್ಲವೂ ಅಪೂರ್ವವಾಗಿದೆ. ಇವನಿಗೆ ಶಾಸ್ತ್ರಗಳಲ್ಲಿ ಪ್ರಭುತ್ವವಿದ್ದಂತೆಯೇ ಕಾವ್ಯದಲ್ಲಿ ಸಹ ಕೌಶಲ್ಯವಿತ್ತು. ದರ್ಶನಗಳಲ್ಲಿ ಪ್ರಬೋಧವಿದ್ದಂತೆಯೇ ಗೀತನಾಟ್ಯಾದಿ ಲಲಿತಕಲೆಗಳಲ್ಲೂ ಪಾಂಡಿತ್ಯವಿತ್ತು. ಈತ ಹೆಚ್ಚಾಗಿ ವ್ಯಾಖ್ಯಾನಗಳನ್ನೇ ಬರೆದರೂ ಇವನ ಕೃತಿಗಳಲ್ಲಿ ಹೊಸತನದ ವಿಷ್ಕರಣದ ಪ್ರತಿಭೆ ಕೋರೈಸುತ್ತದೆ; ಸ್ವತಂತ್ರ ವಿಚಾರಸರಣಿ ಎದ್ದು ಕಾಣುತ್ತದೆ. ಇತ್ತ ತತ್ತ್ವಜ್ಞಾನದಲ್ಲಿ ಕಾಶ್ಮೀರ ಶೈವಪಂಥದ ಪ್ರತ್ಯಭಿಜ್ಞಾದರ್ಶನವನ್ನು ಮೂಲ ಶೈವಾಗಮಗಳ ಪುನರನುಸಂಧಾನದಿಂದ ಶಾಸ್ತ್ರಾವ್ಯಾಖ್ಯಾನ ಕೌಶಲದಿಂದ ಗಟ್ಟಿಯಾದ ತಳಹದಿಯ ಮೇಲೆ ನಿಲ್ಲಿಸಿದಂತೆಯೇ ಭರತನ ನಾಟ್ಯಶಾಸ್ತ್ರವನ್ನು ಆಮೂಲಾಗ್ರವಾಗಿ ವಿವರಿಸಿ ರಸಸಿದ್ಧಾಂತವನ್ನು ಪ್ರಮಾಣಪುರಸ್ಸರವಾಗಿ ಪ್ರತಿಷ್ಠಾಪಿಸಿದ ಯಶಸ್ಸು ಇವನದು. ಅದೂ ಅಲ್ಲದೆ, ಸಂಸ್ಕೃತ ಕಾವ್ಯಲಕ್ಷಣಕಾರರಲ್ಲಿ ರಸ, ರೀತಿ, ಗುಣಾಲಂಕಾರ ವಾದಗಳು ಪರಸ್ಪರ ಸ್ಪರ್ಧೆಯಿಂದ ಅನನ್ವಿತವಾಗುವುದನ್ನು ತಪ್ಪಿಸಲು ಧ್ವನಿತತ್ತ್ವವನ್ನು ಸಾರಿದ ಆನಂದವರ್ಧನನ ಧ್ವನ್ಯಾಲೋಕ ಗ್ರಂಥಕ್ಕೆ "ಲೋಚನ"ವೆಂಬ ಸಾರ್ಥಕ ವಿವರಣೆಯನ್ನು ಬರೆದು ಎಲ್ಲರ ಕಣ್ಣನ್ನೂ ತೆರೆಯಿಸಿ "ಧ್ವನಿಪ್ರತಿಷ್ಠಾಪನ ಪರಮಾಚಾರ್ಯ"ನೆಂಬ ಪ್ರಶಸ್ತಿಯನ್ನು ಗಳಿಸಿದ್ದನಲ್ಲದೆ ಇವನ ವ್ಯಾಖ್ಯಾಗ್ರಂಥಗಳು ಆಯಾಯ ಶಾಸ್ತ್ರಗಳಲ್ಲಿ ಸೂತ್ರಭಾಷ್ಯಗಳಷ್ಟೇ ಪ್ರಾಮಾಣ್ಯ ಹೊಂದಿವೆ; ಇವನ ಸ್ವತಂತ್ರ ಸ್ತೋತ್ರಕಾವ್ಯಗಳು ಇಂದಿಗೂ ಪ್ರತಿಭಾಸ್ಪೂರ್ತಿಯನ್ನು ಒದಗಿಸುವಂತಿವೆ. ಕಾಶ್ಮೀರಿಗಳಂತೂ ಇವನನ್ನು ಪರಶಿವನೆ.
ಕಾಶ್ಮೀರದಲ್ಲಿ ವಿತಸ್ತಾ (ಝೀಲಮ್) ನದಿಯ ದಂಡೆಯ ಮೇಲೆ ಇರುವ ಶಿವಾಲಯದ ಎದುರಿಗೆ ಅಭಿನವ ಗುಪ್ತನ ವಂಶೀಯರ ಮನೆಯಿತ್ತು. ಈತನು ತನ್ನ ವಿದ್ಯಾಭ್ಯಾಸಕ್ಕಾಗಿ ಆಶ್ರಯಿಸಿದ ಗುರುಗಳ ಸಂಖ್ಯೆ ಇಪ್ಪತ್ತನ್ನು ಮೀರಿದೆ. ಒಂದೊಂದು ಶಾಸ್ತ್ರದಲ್ಲೂ ಪರಿಣತರನ್ನು ಹುಡುಕಿಕೊಂಡು ಕಾಶ್ಮೀರದ ಹೊರಗೆ ಜಾಲಂಧರ ಮುಂತಾದ ಕಡೆಗಳಿಗೂ ಹೋಗಿದ್ದನಂತೆ. ನಾಟ್ಯಶಾಸ್ತ್ರದ ಗುರು ಭಟ್ಟತೌತ; ಧ್ವನಿತತ್ತ್ವದ ಗುರು ಭಟ್ಟ ಇಂದುರಾಜ; ಬ್ರಹ್ಮವಿದ್ಯೆಗೆ ಭೂತಿರಾಜ, ವ್ಯಾಕರಣ, ತಂತ್ರ, ಶೈವಾಗಮ, ತರ್ಕ, ಮೀಮಾಂಸ, ಜೈನ-ಬೌದ್ಧದರ್ಶನ ಮುಂತಾದವು ಆತ ಕಲಿತ ಇತರ ವಿಷಯಗಳು. ಯೌವನದಲ್ಲೇ ಗ್ರಂಥರಚನೆ ಆರಂಭಮಾಡಿದ. 70 ವರ್ಷಗಳವರೆಗಾದರೂ ಬದುಕಿದ್ದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಕ್ರಿ.. 980-1020ರವರೆಗೆ ಇವನ ಸಾಹಿತ್ಯ ನಿರ್ಮಾಣದ ಅವಧಿಯೆನ್ನಿಬಹುದು. ಅಭಿನವಗುಪ್ತ ತನ್ನ 1200 ಶಿಷ್ಯರ ಸಂಗಡ ಭೈರವಸ್ತೋತ್ರವನ್ನು ಪಠಿಸುತ್ತ ಶ್ರೀನಗರದ ಬಳಿ ಬಿರೂ ಎಂಬಲ್ಲಿರುವ ಪರ್ವತಗುಹೆಯನ್ನು ಪ್ರವೇಶಿಸಿ ಕೈಲಾಸಕ್ಕೆ ನಡೆದನೆಂಬ ಐತಿಹ್ಯವಿದೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದು ಬಂದಿಲ್ಲ. ಈತ ಸಂಸ್ಯಾಸಿಯಾಗಿಯೇ ತನ್ನ ಜೀವನವನ್ನು ಕಳೆದ ಎಂದು ಒಂದು ಅಭಿಪ್ರಾಯ.
ಅಭಿನವಗುಪ್ತನ ಪ್ರಮುಖ ಕೃತಿಗಳು ತಂತ್ರಶಾಸ್ತ್ರ: ಮಾಲಿನೀ ವಿಜಯವಾರ್ತಿಕ, ಪರಾತ್ರಿಂಶಿಕಾವಿವೃತಿ, ತಂತ್ರಾಲೋಕ (ಬೃಹದ್ಗ್ರಂಥ), ಅನುತ್ತರ ತತ್ತ್ವವಿಮರ್ಶಿನೀವೃತ್ತಿ. ಪ್ರತ್ಯಭಿಜ್ಞಾದರ್ಶನ: ಈಶ್ವರಪ್ರತ್ಯಭಿಜ್ಞಾವಿಮರ್ಶಿನೀ, ಶಿವದೃಷ್ಟ್ಯಾ ಲೋಚನ, ಪರಮಾರ್ಥಸಾರ,ಇತ್ಯಾದಿ. ನಾಟ್ಯ ಶಸ್ತ್ರಕ್ಕೆ ಸಂಬಂಧಿಸಿದಂತೆ ನಾಟ್ಯ ಮತ್ತು ಕಾವ್ಯಶಾಸ್ತ್ರ: ಅಭಿನವಭಾರತೀ, ಧ್ವನ್ಯಾಲೋಕಲೋಚನ. ಸ್ತೋತ್ರಗಳ ಸಾಲಿನಲ್ಲಿ ಕ್ರಮಸ್ತೋತ್ರ, ದೇಹಸ್ಥದೇವತಾಚಕ್ರಸ್ತೋತ್ರ, ಭೈರವ ಸ್ತೋತ್ರ, ಶಿವಶಕ್ತ್ಯ ವಿನಾಭಾವಸೋತ್ರ, ಅನುಭವನಿವೇಧನಮ್ ಇತ್ಯಾದಿ.
ಅಭಿನವಗುಪ್ತನ ಕಾಲಕ್ಕಾಗಲೇ ಸೋಮನಂದನ ಶಿವದೃಷ್ಟಿ ಹಾಗೂ ಉತ್ಪಲ ದೇವನ ಪ್ರತ್ಯಭಿಜ್ಞಾನಸೂತ್ರ ಮತ್ತು ವೃತ್ತಿ, ವಿವೃತ್ತಿಗಳು, ವಸುಗುಪ್ತನ ಶಿವಸೂತ್ರ, ಸ್ಫಂದಕಾರಿಕಾ ಮುಂತಾದ ಕೃತಿಗಳು ರಚಿತವಾಗಿದ್ದು ಪ್ರತ್ಯಭಿಜ್ಞಾ ಎಂಬ ಆಧ್ಯಾತ್ಮದರ್ಶನ ಅಸ್ತಿತ್ವಕ್ಕೆ ಬಂದಿತ್ತು. ಶೈವಾಗಮಮೂಲವಾದ ಲಕುಲೀಶ, ಪಾಶುಪತ, ಕಾಲಾಮುಖ, ಶೈವಸಿದ್ಧಾಂತ ಮುಂತಾದ ಶೈವದರ್ಶನಗಳೂ ಪ್ರಚಾರದಲ್ಲಿದ್ದುವು. ಇವುಗಳೆಲ್ಲ ಬೇರೆ ಬೇರೆ ಆಚಾರಗಳಿಗೆ ಪ್ರಾಶಸ್ತ್ಯವಿದ್ದವು. ಅಧ್ಯಾತ್ಮಾನುಭವದ ಮೂಲಸ್ತೋತ್ರವನ್ನು ಶಾಸ್ತ್ರಸರಣಿಯಿಂದ ಪೂರ್ವಪಕ್ಷ ಸಿದ್ಧಾಂತ ರೀತಿಯಿಂದ ನಿರ್ಣಯಿಸಲಾರದೆ ಹಲವಾಗಿ ಹರಡಿಹೋಗಿದ್ದುವು. ಅದ್ವೈತಕ್ಕೆ ಶಂಕರಾಚಾರ್ಯರು ಭಾಷ್ಯ ಬರೆದಂತೆ ಪ್ರತ್ಯಭಿಜ್ಞಾದರ್ಶನಕ್ಕೆ ಭಾಷ್ಯರಚನೆ ಮಾಡಿದ ಯಶಸ್ಸು ಅಭಿನವಗುಪ್ತನಿಗೆ ಸಲ್ಲುತ್ತದೆ.

ಶಂಕರಾಚಾರ್ಯ, ಪುಷ್ಪದಂತ, ಮುಂತಾದವರ ಸ್ತೋತ್ರಗಳಂತೆ ಅಭಿನವಗುಪ್ತ ರಚಿತಸ್ತೋತ್ರಗಳು ಕೂಡ ಭಾಷೆಯ ಸೌಭಾಗ್ಯ, ಭಾವದ ಲಾಲಿತ್ಯ, ಆಧ್ಯಾತ್ಮಿಕ ರಹಸ್ಯಗಳ ಪ್ರಕಟನೆಗಳ ಮೂಲಕ ಸಂಸ್ಕೃತಸ್ತೋತ್ರಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿವೆ. ಇಂದು ಅನುಪಲಭ್ಯವಾದ ನೂರಾರು ಶಾಸ್ತ್ರ, ತಂತ್ರ, ಕಾವ್ಯ, ನಾಟಕಗಳನ್ನು ಅಭಿನವಗುಪ್ತ ಯಥೋಚಿತವಾಗಿ ಉದಾಹರಿಸುವುದನ್ನು ನೋಡಿದಾಗ ಅವನೇ ಒಬ್ಬ ವಿಶ್ವಕೋಶವಾಗಿದ್ದನೆಂಬ ಭಾವನೆ ಬಾರದಿರಲಾರದು. ಮಿಕ್ಕ ಕೆಲವು ವ್ಯಾಖ್ಯಾಕಾರರಂತೆ ಒಮ್ಮೆಯೂ ಆತ ಕಣ್ಣಾರೆ ನೋಡದ ಗ್ರಂಥದಿಂದ ಅವತರಣಿಕೆಯನ್ನು ಎತ್ತುವುದಿಲ್ಲ. ಸಂಸ್ಕೃತ ಕವಿ ಕಾವ್ಯ ಪರಿಚಯಕ್ಕೂ ಅಭಿನವಗುಪ್ತನ ಗ್ರಂಥಾಧ್ಯಯನದಿಂದ ಎಷ್ಟೋ ನೆರವಾಗುತ್ತದೆ.

No comments:

Post a Comment