Search This Blog

Monday 1 January 2018

ಬುದ್ಧಘೋಷನ ಪದ್ಯ ಚೂಡಾಮಣೀ

ಬೌದ್ಧ ಧರ್ಮ ತನ್ನ ಪ್ರಭವವಿನ್ನೂ ಉಳಿಸಿಕೊಂಡ ಕಾಲವದು. ಕ್ರಿಸ್ತ ಶಕ ೫ನೇ ಶತಮಾನ, ಮಗಧರಾಜ್ಯವನ್ನು ಸಂಗ್ರಾಮನೆನ್ನುವ ರಾಜ ಆಳುತ್ತಿದ್ದ. ಆತನ ಆಸ್ಥಾನದಲ್ಲಿ ಕೇಶಿ ಎನ್ನುವ ಬ್ರಾಹ್ಮಣ ರಾಜ ಪುರೋಹಿತನೊಬ್ಬನಿದ್ದ. ಇವನ ಮಡದಿಯ ಹೆಸರು ಕೇಶಿನಿ ಎಂದು. ವೇದಗಳಿಗೆ ಸಾಯಣಾಚಾರ್ಯರು ಭಾಷ್ಯ ಬರೆದಂತೆ ಬುದ್ಧಘೋಷನೆನ್ನುವವನು ಪಾಲಿ ಭಾಷೆಯಲ್ಲಿ ಬೌದ್ಧ ಗ್ರಂಥಗಳೆಲ್ಲವಕ್ಕೂ ಭಾಷ್ಯ ಬರೆದಿದ್ದಾನೆ. ಈತನೇ ಕೇಶಿ ಮತ್ತು ಕೇಶಿನಿಯರ ಮಗ. ಬ್ರಾಹ್ಮಣದಂಪತಿಗಳ ಮಗನಾಗಿ ಬ್ರಾಹ್ಮಣನಾಗಿದ್ದ ಘೋಷನು ಬೌದ್ಧ ಮತ ದೀಕ್ಷೆ ಸ್ವೀಕರಿಸಿ ಬುದ್ಧಘೋಷನಾಗುತ್ತಾನೆ.
ಅಶೋಕನ ಮಗನಾದ ಮಹಿಂದನಿಂದ ಸಿಂಹಳೀಯ ಭಾಷೆಯಲ್ಲಿ ಬರೆಯಲ್ಪಟ್ಟ "ಬುದ್ಧಬೋಧೆ" ಎನ್ನುವ ಗ್ರಂಥವು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅದನ್ನು ಗಮನಿಸಿದ "ತೀರ"(ಬೌದ್ಧ ಕಾಲಜ್ಞಾನಿ)ಯೊಬ್ಬ ಅದನ್ನು ಮಾಗಧೀ ಭಾಷೆಗೆ ಭಾಷಾಂತರಿಸುವ ಸಮರ್ಥನನ್ನು ತನ್ನ ಕಾಲಜ್ಞಾನದಿಂದ ತಿಳಿಯಲೆತ್ನಿಸುತ್ತಾನೆ. ಇಂತಹ ಕಾರ್ಯಮಾಡಬಲ್ಲ ಸಮರ್ಥನೊಬ್ಬ "ತಾವತಿಂಸ ಸ್ವರ್ಗ"ದಲ್ಲಿರುವುದು ತಿಳಿಯುತ್ತದೆ. ಆ ಸ್ವರ್ಗದ ಪ್ರಮುಖನಾದ ಸಕ್ಕನನ್ನು ಭೇಟಿಯಾಗಿ ತನ್ನ ಕೋರಿಕೆಯನ್ನು ವಿನಂತಿಸುತ್ತಾನೆ. ಸಕ್ಕನು ಸ್ವಲ್ಪ ಸಮಯ ಕೇಳಿ, ಘೋಷನನ್ನು ಕರೆದು ನೀನು ಮಾನವ ಪ್ರಪಂಚದಲ್ಲಿ ಜನಿಸಲು ಇಷ್ಟಪಡುವೆಯಾ ಎಂದಾಗ ಘೋಷನು ದುಃಖಮಯವಾದ ಮಾನವಲೋಕಕ್ಕಿಂತ ಹೆಚ್ಚಿನದ್ಧಾದ ಮುಕ್ತಿಯನ್ನು ಕೇಳುತ್ತಾನೆ. ಆಗ ಸಕ್ಕನು ಮನುಷ್ಯನಾಗಿ ಬುದ್ಧನ ಬೋಧನೆಗಳನ್ನು ಜಗತ್ಕಲ್ಯಾಣಕ್ಕಾಗಿ ಪ್ರಚುರಪಡಿಸುವ ಕೆಲಸ ನಿನ್ನಿಂದ ಆಗ ಬೇಕು ಎಂದು ಕೇಳಿಕೊಂಡಾಗ ಘೋಷನು ಒಪ್ಪಿಕೊಳ್ಳುತ್ತಾನೆ.
ಘೋಷನು ಒಪ್ಪಿಕೊಂಡಿರುವುದನ್ನು ಸಕ್ಕನು "ತೀರ"ನಿಗೆ ತಿಳಿಸುತ್ತಾನೆ ತೀರನು ತನ್ನ ಮಿತ್ರನಾದ ಸಂಗ್ರಾಮರಾಜನ ಆಸ್ಥಾನ ಪುರೋಹಿತ ಕೇಶಿಗೆ ತಿಳಿಸುತ್ತಾನೆ. ಕೇಶಿಯು ತನ್ನ ಮಡದಿ ಕೇಶಿನಿಗೆ ತಿಳಿಸುತ್ತಾನೆ. ಕೇಶಿನಿಯೂ ಒಪ್ಪಿಕೊಳ್ಳುತ್ತಾಳೆ. ಹೀಗೆ ಕೇಶಿ ಮತ್ತು ಕೇಶಿನಿಗೆ ಮಗನಾಗಿ ಹುಟ್ಟಿ ಘೋಷನೆನ್ನುವ ಹೆಸರಿನಿಂದ ಗುರುತಿಸಿಕೊಳ್ಳುತ್ತಾನೆ. ಜನ್ಮದಿಂದ ಏಳು ವರ್ಷಗಳಲ್ಲಿ ವೇದಾದಿಗಳನ್ನೇ ಅಲ್ಲದೇ ಉಳಿದೆಲ್ಲಾ ವಿದ್ಯೆಗಳನ್ನೂ ಕಂಠಸ್ಥ ಮಾಡಿಕೊಳ್ಳುತ್ತಾನೆ. ಈತನು ಪ್ರತಿದಿನ ಆರು ಸಾವಿರ ಪದಗಳನ್ನು ಕಂಥಸ್ಥಮಾಡಿಕೊಳ್ಳುತ್ತಿದ್ದನಂತೆ. ಹೀಗೆ ಕಾಲ ಸಾಗುತ್ತಾ ಇರಲು ಒಂದು ದಿನ ಕೇಶಿಯ ಮಿತ್ರ ಮಹಾತೀರನೊಬ್ಬ ಅತಿಥಿಯಾಗಿ ಬರುತ್ತಾನೆ. ಅತಿಥಿಯು ಊಟಕ್ಕೆ ಕುಳಿತುಕೊಳ್ಳಲು ಘೋಷನ ಪೀಠವನ್ನು ಕೊಡುತ್ತಾನೆ. ಘೋಷನಿಗೆ ಅಸಹ್ಯವಾಗುತ್ತದೆ ಬೋಳುತಲೆಯ ಈ ಅತಿಥಿಯ ಅರ್ಹತೆಯನ್ನು ನೋಡದೇ ನನ್ನನ್ನು ಕಡೆಗಣಿಸಿ ಕೂರಿಸಿದನಲ್ಲಾ ಎಂದು ಕೋಪಗೊಳ್ಳುತ್ತಾನೆ. ಊಟವಾದ ನಂತರ ಘೋಷನು ಆ ಮಹಾತೀರನಲ್ಲಿ ನಿನಗೆ ವೇದ ಗೊತ್ತಾ ಎಂದು ಕೇಳುತ್ತಾನೆ. ಅದಕ್ಕೆ ಬಂದ ಶ್ರಮಣ ಮಹಾತೀರನು ವೇದ ವೇದಾಂಗಳೆಲ್ಲವೂ ಗೊತ್ತು ಎಂದು ಉತ್ತರಿಸುತ್ತಾನೆ. ವೇದಗಳಿಲ್ಲನ ಎಲ್ಲಾ ವಿಷಯಗಳನ್ನು ಅತಿ ಸರಳವಾಗಿ ವಿವರಿಸಿ ಕುಶಲಧರ್ಮ, ಅಕುಶಲಧರ್ಮ, ಅಭ್ಯಾಗತಧರ್ಮವೆಂಬ ವಿಚಾರಗಳನ್ನೊಳಗೊಂಡ "ಅಭಿಧಮ್ಮಸೂತ್ರ"ಗಳನ್ನು ತಿಳಿಸಿ ಹೇಳಿದನು. ಇದನ್ನು ಕೇಳಿಸಿಕೊಂಡ ಘೋಷನು ಮುಂದೆ ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಆಮೇಲೆ ಈತನಿಗೆ ಬುದ್ಧಘೋಷ ಎಂದು ಹೆಸರಾಯಿತು. ಬುದ್ಧಘೋಷನ ತಂದೆ ಕೇಶಿಯೊಡನೆ ರಾಜ ಸಂಗ್ರಾಮನು ವೇದಗಳ ಕುರಿತಾಗಿ ಚರ್ಚಿಸುತ್ತಿದ್ದಾಗ ಒಮ್ಮೆ ಕ್ಲಿಷ್ಟವಾದ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಕೇಶಿಯೂ ಚಿಂತಿಸುತ್ತಿದ್ದಾಗ, ಘೋಷನು ಅದಕ್ಕೆ ಉತ್ತರ ಬರೆದು ತಂದೆಯಲ್ಲಿ ಕಳಿಸಿಕೊಡುತಾನೆ ಇದನ್ನು ನೋಡಿದ ರಾಜನುಮ್ ಒಂದು ಗ್ರಾಮವನ್ನೇ ಕೊಡುತ್ತಾನೆ. ಬುದ್ಧನು ಜ್ಞಾನೋದಯಹೊಂದಿದ ಬೋಧಿಮರದ ಪ್ರದೇಶಕ್ಕೆ ಸಮೀಪದ ಒಂದು ಗ್ರಾಮವನ್ನೇ ಕೇಶಿಗೆ ದಾನ ಕೊಡುತ್ತಾನೆ ಅದು ಘೋಷಗಾಂ ಎಂದೇ ಹೆಸರಾಗಿತ್ತು. ಈಗ ಆ ಗ್ರಾಮ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲ. (ಇದು ಯಾವುದೇ ಐತಿಹಾಸಿಕ ದಾಖಲೆಗಳಿಂದ ನನಗೆ ಸಿಕ್ಕಿಲ್ಲ).
ಇದೇ ಸಮಯದಲ್ಲಿ ಮಹಾನಾಮನು ಶ್ರೀಲಂಕಾವನ್ನು ಆಳುತ್ತಿದ್ದ. ಅದೇ ಸಮಯದಲ್ಲಿ ಬುದ್ಧಘೋಷನು ಶ್ರೀಲಂಕಕ್ಕೆ ಗ್ರಂಥ ಸಂಗ್ರಹಕ್ಕಾಗಿ ಬಂದಿದ್ದಾಗಿ ಅಲ್ಲಿನ ಕೆಲವು ಗ್ರಂಥಗಳಿಂದ ತಿಳಿದು ಬರುತ್ತದೆ. ಕ್ರಿ ಶ ೧೩ನೇ ಶತಮಾನದಲ್ಲಿ ಶ್ರೀಲಂಕದ ಶ್ರಮಣ ಧರ್ಮಕೀರ್ತಿಯು ತನ್ನ "ಮಹಾವಂಶ" ಎನ್ನುವ ಗ್ರಂಥದಲ್ಲಿ ಬುದ್ಧಘೋಷನು ೫ನೇ ಶತಮಾನದಲ್ಲಿದ್ದುದಾಗಿ ಬರೆಯುತ್ತಾನೆ. ವಿಶುದ್ಧಿ ಮಾರ್ಗವು ಕ್ರಿ ಶ ೪೧೦ ರಲ್ಲಿ ಬರೆಯಲ್ಪಟ್ಟಿದೆ ಎಂದು ಬರ್ಲಿಂಗ್ ಹ್ಯಾಂ ಸಹ ಹೇಳುತ್ತಾನೆ. ಇದನ್ನವಲೋಕಿಸಿದರೆ ಬುದ್ಧಘೋಷನ ಕಾಲ ೫ನೇ ಶತಮಾನವೆನ್ನುವುದು ಸರಿ ಎನ್ನಿಸುತ್ತದೆ.
ಬುದ್ಧಘೋಷನ ಭಾಷಾಂತರ ಕಾರ್ಯವು ಮೂರುತಿಂಗಳಲ್ಲಿ ಮುಗಿಸುತ್ತಾನೆ. ಆಮೇಲೆ ತನ್ನ ತಂದೆ ತಾಯಿಯರನ್ನು ನೋಡಲು ಹೊರಡುತ್ತಾನೆ. ಆಗ ಶ್ರೀಲಂಕಾದ ಬೌದ್ಧ ಶ್ರಮಣರು ಇವನ ಭಾಷಾ ಜ್ಞಾನದ ಕುರಿತಾಗಿ ಇವನಿಗೆ ಪಾಳಿ ಮಾಗಧಿ ಬರುತ್ತದೆಯೇ ವಿನಃ ಸಂಸ್ಕೃತಜ್ಞಾನವಿಲ್ಲ ಎಂದು ಹೀಗಳೆಯುತ್ತಾರೆ ಆದರೆ ಅದನ್ನು ನಿರಾಕರಿಸಿ ಸಂಸ್ಕೃತದಲ್ಲಿಯೇ ಉಪನ್ಯಾಸ ಕೊಟ್ಟು ಬರುತ್ತಾನೆ.
ಮಾಗಧೀ ಮತ್ತು ಪಾಲೀ ಭಾಷೆಗಳಲ್ಲಿ ಬುದ್ಧಘೋಷನ ಕೃತಿಗಳು ಲಭ್ಯವಿದ್ದರೂ ಸಂಸ್ಕೃತದಲ್ಲಿ ವಿರಳಾತಿವಿರಳ. ಈಗ ಸಿಕ್ಕಿರುವ ಪದ್ಯಚೂಡಾಮಣಿ ಎನ್ನುವ ಕಾವ್ಯ ಹೊರತು ಪಡಿಸಿದರೆ ಬೇರೆ ಸಿಕ್ಕಿಲ್ಲ. ಇದು ಬುದ್ಧನ ಜೀವನ ಚರಿತ್ರೆಯನ್ನು ಬಿಂಬಿಸುವ ಹತ್ತು ಸರ್ಗಗಳ ಕಾವ್ಯ. ಪ್ರತಿ ಸರ್ಗದ ಕೊನೆಯಲ್ಲಿ "ಬುದ್ಧಘೋಷಾಚಾರ್ಯವಿರಚಿತೇ ಪದ್ಯಚೂಡಾಮಣಿ" ಎಂದು ಹೇಳಿದ್ದಾನೆ. ಇದನ್ನು ಮಹಾಕಾವ್ಯವೆಂದು ಹೇಳಲಾಗಿದ್ದರೂ ಸಹ
ನಗರಾರ್ಣವ ಶೈಲರ್ತುಚಂದ್ರಾರ್ಕೋದಯ ವರ್ಣನೈಃ |
ಉದ್ಯಾನ ಸಲಿಲ ಕ್ರೀಡಾ ಮಧುಪಾನ ರತೋತ್ಸವೈಃ ||
ವಿಪ್ರಲಂಬ ವಿವಾಹೈಶ್ಚ ಕುಮಾರೋದಯ ವರ್ಣನೈಃ |
ಮಂತ್ರದೂತ ಪ್ರಯಾಣಾ ಜಿನಾಯಕಾಭ್ಯುದಯೈರಪಿ || ಎನ್ನುವುದಾಗಿ ದಂಡಿಯು ಮಹಾಕಾವ್ಯ ಲಕ್ಷಣಗಳನ್ನು ಹೇಳುತ್ತಾ ಇದರಲ್ಲಿ ಅರ್ಣವವರ್ಣನ, ಮಧುಪಾನವರ್ಣನ, ಮದುಪಾನ ರತೋತ್ಸವ ವರ್ಣನ, ಮಂತ್ರವರ್ಣನ, ದೂತವರ್ಣನ ಇಲ್ಲದೇ ಇರುವುದರಿಂದ ಇದು ಮಹಾಕಾವ್ಯಗಳ ಸಾಲಿಗೆ ಸೇರುವುದಿಲ್ಲ ಎಂದಿದ್ದಾನೆ.
ಪದ್ಯಚೂಡಾಮಣಿಯ ೯ನೇ ಸರ್ಗದಲ್ಲಿ ಬುದ್ಧನು ಬಿಂಬಸಾರನ ರಾಜಧಾನಿಗೆ ಹೋಗಿರುವುದಾಗಿ ಹೇಲಲ್ಪಟ್ಟಿದೆಯೇ ಹೊರತಿ ಬಿಂಬಸಾರನನ್ನು ಭೇಟಿಯಾದ ಬಗ್ಗೆ ವಿವರಗಳಿಲ್ಲ. ೫೪ನೇ ಶ್ಲೋಕದಲ್ಲಿ ತಪವನ್ನು ಮಾಡಿದ ಕುರಿತು ಹೇಳಲ್ಪಟ್ಟಿದೆ. ಆಲಾರಕಾಲಾಮ ಮತ್ತು ಉದ್ದಕರಾಮಪುತ್ರರೊಡನೆ ಇದ್ದದ್ದು ಇದರಲ್ಲಿ ಬರಲೇ ಇಲ್ಲ ಹೀಗೇ ಪದ್ಯ ಚೂಡಾಮಣಿಯು ಅನೇಕ ವಿರೋಧಾಭಾಸಗಳಿಂದ ಕೂಡಿರುವುದರಿಂದ ಇದು ಬುದ್ಧಘೋಷನ ಹೆಸರಿನಿಂದ ಬೇರೆಯವರಾರೋ ಬರೆದ ಕೃತಿ ಎಂದು ಕೆಲವರು ಹೇಳುತ್ತಾರೆ.
ಕಾಳಿದಾಸ ಮತ್ತು ಅಶ್ವಘೋಷನ ಅನುಕರಣೆಯನ್ನು ತನ್ನ ಕೃತಿಯಲ್ಲಿ ಮಾಡಿಕೊಂಡ ಬುದ್ಧಘೋಷ ರಘುವಂಶ ಕುಮಾರ ಸಂಭವಗಳಲ್ಲದೇ ಅಶ್ವಘೋಷನ ಬುದ್ಧಚರಿತದ ಅನುಸರಣೆ ಎದ್ದು ಕಾಣುತ್ತದೆ. ರಾಜಕುಮಾರನ ವರ್ಣನೆ ಮಾಡುವಾಗ
ಸುಧಾನಿಧಾನಂ ತುಹಿನಾಂಶು ಬಿಂಬಂ ಲಕ್ಷ್ಮೀ ವಿಮಾನಾನಿಚ ಪಂಕಜಾನಿ |
ಆತನ್ವತಾ ಪೂರ್ವಮಮುಷ್ಯ ವಕ್ತ್ರ ನಿರ್ಮಾಣ ಯೋಗ್ಯೇವ ಕೃತಾ ವಿಧಾತ್ರಾ || ಎನ್ನುವುದನ್ನು ಮಾಘನ ಶಿಶುಪಾಲವಧೆಯನ್ನು ಅನುಸರಿಸಿದ್ದಾನೆ.
(ಬ್ರಹ್ಮನು ಈ ಯುವರಾಜನನ್ನು ಸೃಷ್ಟಿಸುವುದಕ್ಕೂ ಮೊದಲು ಪೂರ್ವಭಾವಿಯಾಗಿ ಅಮೃತನಿಧಿ ಮತ್ತು ಹಿಮಾಂಶುವಾದ ಚಂದ್ರನನೂ ಲಕ್ಷ್ಮೀನಿವಾಸ ಸ್ಥಾನಗಳಾದ ಕಮಲಗಳನ್ನೂ ಸೃಷ್ಟಿಸಿದ ನಂತರ ಈ ಯುವರಾಜನ ಮುಖವನ್ನು ನಿರ್ಮಿಸುವ್ವುದಕ್ಕೆ ಅಭ್ಯಾಸ ಮಾಡಲ್ಪಟ್ಟಿರಬೇಕು)

ಪಾಲೀ ಮಾಗಧೀ ಮತ್ತು ಸಂಸ್ಕೃತದಲ್ಲಿ ಸಮಾನ ಪಾಂಡಿತ್ಯಹೊಂದಿದ್ದ ಬುದ್ಧಗುಪ್ತನ ಸಂಸ್ಕೃತಕೃತಿಗಳು ಲಭಿಸದೇ ಇರುವುದು ಬೇಸರ.

No comments:

Post a Comment