Search This Blog

Friday 26 January 2018

ಸುಂದರಕಾಂಡವನ್ನು ನೆನಪಿಸುವ - ಮಹಾಕ್ಷತ್ರಪ ರುದ್ರದಾಮನ ಜುನಾಗಡ್ ಶಾಸನ

ಸುಂದರಕಾಂಡವನ್ನು ನೆನಪಿಸುವ - ಮಹಾಕ್ಷತ್ರಪ ರುದ್ರದಾಮನ ಜುನಾಗಡ್ ಶಾಸನ
ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್‍ ||
ಕ್ರುದ್ಧನಾದ ಇವನಿಗೆ ಜಗತ್ತನ್ನೆಲ್ಲಾ ಒಂದೇ ಸಮುದ್ರವನ್ನಾಗಿ ಪರಿವರ್ತಿಸಲೂ (ಮುಳುಗಿಸಿಬಿಡಲೂ) ಶಕ್ತಿಯಿದೆ. ಇದು ರಾಮಾಯಣದ ಸುಂದರಕಾಂಡದ ೪೯ನೇ ಸರ್ಗದಲ್ಲಿ ಬರುವ ಶ್ಲೋಕ. ಹನುಮಂತ ರಾವಣನ ಆಸ್ಥಾನಕ್ಕೆ ಹೋದಾಗ ಅಲ್ಲಿ ರಾವಣ ಹೇಗಿದ್ದ ಎಂದು ವರ್ಣಿಸುತ್ತಾನೆ. ರಾವಣನ ಆಸ್ಥಾನದ ಒಡ್ಡೋಲಗದಲ್ಲಿ ಅತಿಶಯವಾಗಿ ಅಲಂಕರಿಸಿಕೊಂಡಿದ್ದ ಪ್ರಮದೆಯರು ಚಾಮರಗಳನ್ನು ಹಿಡಿದು ರಾವಣನ ಸಮೀಪದಲ್ಲಿ ನಿಂತು ಬೀಸುತ್ತಿದ್ದರು. ಅವನ ಸುತ್ತಲೂ ರಾಜತತ್ತ್ವವನ್ನು ತಿಳಿದಿದ್ದ ದುರ್ಧರ, ಪ್ರಹಸ್ತ, ಮಹಾಪಾರ್ಶ್ವ, ನಿಕುಂಭ ಎಂಬ ನಾಲ್ವರು ಮಂತ್ರಿಗಳು ಕುಳಿತಿದ್ದರು. ಸಮಸ್ತಲೋಕವೂ ನಾಲ್ಕು ಸಮುದ್ರಗಳಿಂದ ಪರಿವೃತವಾಗಿರುವಂತೆ ನಾಲ್ವರು ಮಂತ್ರಿಗಳಿಂದ ಪರಿವೃತನಾಗಿ ಕುಳಿತಿದ್ದ ಬಲದರ್ಪಿತನಾಗಿದ್ದ ರಾವಣನು ಸಿಂಹಾಸನದಲ್ಲಿ ಕುಳಿತಿರುವುದನ್ನು ಹನುಮಂತನು ನೋಡಿದನು. ಇಂದ್ರನನ್ನನುಸರಿಸಿ ದೇವತೆಗಳಿರುವಂತೆ ರಾವಣನನ್ನನುಸರಿಸಿ ಮಂತ್ರತತ್ತ್ವಜ್ಞರಾದ ಒಳ್ಳೆಯ ಮನಸ್ಸಿನಿಂದ ಕೂಡಿರುವ ಮಂತ್ರಿಗಳು ಕುಳಿತಿದ್ದರು. ಮೇರುಪರ್ವತದ ಶಿಖರದಲ್ಲಿ ದಟ್ಟವಾಗಿ ಕವಿದಿರುವ, ನೀರಿನಿಂದ ಪೂರ್ಣವಾದ ಕಾರ್ಮುಗಿಲಿನಂತೆ ಕಾಣುತ್ತಿದ್ದ ಮಹಾತೇಜಸ್ವಿಯಾದ ರಾಕ್ಷಸೇಶ್ವರನನ್ನು ಹನುಮಂತನು ನೋಡಿದನು. ಆ ಸಮಯದಲ್ಲಿ ಭಯಂಕರಪರಾಕ್ರಮಿಗಳಾದ ರಾಕ್ಷಸರು ಎಡೆಬಿಡದೇ ಬಹಳವಾಗಿ ಪೀಡಿಸುತ್ತಿದ್ದರೂ ಹನುಮಂತನು ರಾವಣೇಶ್ವರನನ್ನು ಎವೆಯಿಕ್ಕದೇ ನೋಡುತ್ತಲೇ ಇದ್ದನು. ಜಾಜ್ವಲ್ಯಮಾನನಾಗಿ ಪ್ರಕಾಶಿಸುತ್ತಿದ್ದ ರಾಕ್ಷಸೇಶ್ವರನನ್ನು ನೋಡುತ್ತಾ ಅವನ ತೇಜಸ್ಸಿನಿಂದ ವಿಮೋಹಿತನಾಗಿ ಮನಸ್ಸಿನಲ್ಲಿಯೇ ಚಿಂತಿಸಿದನು. ಎಂದು ಬರುತ್ತದೆ
ಅಹೋ ರೂಪಮಹೋ ಧೈರ್ಯಮಹೋ ಸತ್ತ್ವಮಹೋ ದ್ಯುತಿಃ |
ಅಹೋ ರಾಕ್ಷಸರಾಜಸ್ಯ ಸರ್ವಲಕ್ಷಣಯುಕ್ತತಾ || ೧೭ ||
ಆಶ್ಚರ್ಯ! ಎಂತಹ ರೂಪವಿದು! ಎಂತಹ ಧೈರ್ಯ! ಎಂತಹ ಸತ್ತ್ವ! ಎಂತಹ ಕಾಂತಿ! ನಿಶ್ಚಯವಾಗಿಯೂ ಈ ರಾಕ್ಷಸನು ಸರ್ವಲಕ್ಷಣ ಸಂಪನ್ನನಾಗಿರುವನು ಎನ್ನುತ್ತಾನೆ ಹನುಮಂತ.
ಯದ್ಯಧರ್ಮೋ ನ ಬಲವಾನ್ಸ್ಯಾದಯಂ ರಾಕ್ಷಸೇಶ್ವರಃ |
ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ || ೧೮ ||
ಈ ರಾಕ್ಷಸೇಶ್ವರನಲ್ಲಿ ಅಧರ್ಮಾಚರಣೆಯು ಪ್ರಬಲವಾಗಿರದಿದ್ದರೆ ಇವನು ನಿಶ್ಚಯವಾಗಿಯೂ ದೇವೇಂದ್ರಸಹಿತವಾದ ದೇವಲೋಕವನ್ನೂ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದನು ಎನ್ನುತ್ತಾನೆ.
ಅಸ್ಯ ಕ್ರೂರೈರ್ನೃಶಂಸೈಶ್ಚ ಕರ್ಮಭಿರ್ಲೋಕಕುತ್ಸಿತೈಃ |
ತೇನ ಬಿಭ್ಯತಿ ಖಲ್ವಸ್ಮಾಲ್ಲೋಕಾಃ ಸಾಮರದಾನವಾಃ |
ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್‍ ||
ಆದರೆ ಕ್ರೂರವಾದ, ಕುತ್ಸಿತವಾದ ಮತ್ತು ನಿರ್ದಯೆಯಿಂದ ಕೂಡಿ ರುವ ಇವನ ಕರ್ಮಗಳಿಂದ ಇವನಿಗೆ ದೇವ-ದಾನವರಾದಿಯಾಗಿ ಸರ್ವರೂ ಭಯಪಡುತ್ತಾರೆ. ಕ್ರುದ್ಧನಾದ ಇವನಿಗೆ ಜಗತ್ತನ್ನೆಲ್ಲಾ ಒಂದೇ ಸಮುದ್ರವನ್ನಾಗಿ ಪರಿವರ್ತಿಸಲೂ (ಮುಳುಗಿಸಿಬಿಡಲೂ) ಶಕ್ತಿಯಿದೆ. ಮಹಾತೇಜಸ್ವಿಯಾದ ರಾಕ್ಷಸರಾಜನ ಪ್ರಭಾವವನ್ನು ನೋಡಿ ಬುದ್ಧಿ ಶಾಲಿಯಾದ ಹನುಮಂತನು ಹೀಗೆ ಚಿಂತಿಸಿದನು.

ಇದೇ ವಾಕ್ಯ ಮಹಾ ಕ್ಷತ್ರಪ ರುದ್ರದಾಮನ ಜುನಾಗಡ್ ಶಾಸನದಲ್ಲಿಯೂ ಕಾಣಿಸಿಕೊಂಡಿದೆ. ಈ ಶಾಸನದ ೫ನೇ ಸಾಲಿನ ಉತ್ತರಾರ್ಧದಲ್ಲಿ "ಪರ್ಜನ್ಯೇನ ಏಕಾರ್ಣವಭೂತಾಯಾಮಿವ ಪೃಥಿವ್ಯಾಂ ಕೃತಾಯಾಂ" ಎಂದು ರಾಮಾಯಣದ ಸುಂದರಕಾಂಡದ ಅಯಂ ಹೃತ್ಸಹತೇ ಕ್ರುದ್ಧಃ "ಕರ್ತುಮೇಕಾರ್ಣವಂ ಜಗತ್" ಎಂದು ಬಂದಲ್ಲಿ ಇಲ್ಲಿ ಜಗತ್ ಅನ್ನುವುದನ್ನು ಪೃಥಿವ್ಯಾಂ ಎಂದು ಬರೆಯಲಾಗಿದೆ. ಗತ್ತನ್ನೆಲ್ಲಾ ಒಂದೇ ಸಮುದ್ರವನ್ನಾಗಿ ಪರಿವರ್ತಿಸಲೂ (ಮುಳುಗಿಸಿಬಿಡಲೂ) ಶಕ್ತಿಯಿದೆ ಎನ್ನುವ ಸುಂದರ ಕಾಂದಡ ಮಾತನ್ನೇ ನೆನಪಿಸುತ್ತದೆ. ಮೊದಲ ಸಹಸ್ರಮಾನದ ಮೊದಲ ಶತಮಾನದಲ್ಲಿನ ಈ ಶಾಸನದ ಆರಂಭದಲ್ಲಿ ಸುದರ್ಶನ ತಟಾಕವನ್ನು ನೆನಪಿಸಿದೆ. ರಾಮಾಯಣದ ಪ್ರಭಾವವಿರುವ ಶಾಸನಕವಿ ನೇರವಾಗಿ ರಾಮಾಯಣ ನೆನಪಿಸಿಕೊಡುತ್ತಾನೆ.

No comments:

Post a Comment