Search This Blog

Sunday 14 January 2018

ನಮಗೇಕೆ ಪರಕೀಯವೇ ಆಪ್ಯಾಯಮಾನ ?

ಕ್ರಿಸ್ತಶಕದ 78 ವರ್ಷಗಳ ನಂತರ ಆರಂಭವಾಗುವ ಶಾಲಿವಾಹನ ಶಕವೇ ನಮಗಿಂದು ಪ್ರಾಚೀನವೆನ್ನಿಸುತ್ತದೆ. ಆದರೆ ಅದಕ್ಕೂ ಮೊದಲೇ ಶಕವರ್ಷ ಮಹಾಭಾರತ ಯುದ್ಧದ ನಂತರ ಆರಂಭವಾಗುವ ಕಲಿಯುಗಾಬ್ದವೇ ಅಲ್ಲವೇ ?? ನಮ್ಮ ಪ್ರಾಚೀನತೆಯನ್ನು ಹೀಗಳೆದು ನಮ್ಮ ಬೌದ್ಧಿಕತೆಯನ್ನು ದಿವಾಳಿತನಕ್ಕೆ ಒಡ್ಡುವ ವ್ಯವಸ್ಥಿತ ಹುನ್ನಾರ ಅನ್ನಿಸಿ ಬಿಡುತ್ತದೆ. ಬಾದಾಮಿ ಚಳುಕ್ಯರ ಎರಡನೇ ಪೊಲೆಕೇಶಿಯ ಕಾಲದ ರವಿಕೀರ್ತಿಯು ಐಹೊಳೆಯ ಮೇಗುಟಿಯ ಜಿನದೇವಾಲಯದ ಶಾಸನ ಕಲಿಯುಗಾಬ್ದವನ್ನು ಮಹಾಭಾರತ ಯುದ್ಧವನ್ನು ನಮ್ಮೆದುರಿಗೆ ತಂದಿಡುತ್ತದೆ.

ತ್ರಿಂಶತ್ಸು ತ್ರಿಸಹಸ್ರೇಷು ಭಾರತಾದಾಹವಾದಿತಃ |
ಸಪ್ತಾಬ್ದ ಶತಯುಕ್ತೇಷು ಶ(ಗ)ತೇಷ್ವಬ್ದೇಷು ಪಂಚಸು ||
ಪಂಚಾಶತ್ಸು ಕಲೌ ಕಾಲೇ ಷಟ್ಸು ಪಂಚಶತಾಸು ಚ |
ಸಮಾಸು ಸಮತೀತಾಸು ಶಕಾನಾಮಪಿ ಭೂಭುಜಾಮ್ ||
ರವಿಕೀರ್ತಿ ಬಾದಾಮಿ ಚಲುಕ್ಯರ ಕಾಲದಲ್ಲಿದ್ದ ಅಪ್ರತಿಮ ಸಾಹಿತ್ಯ ಸಾಹಸಿಗ, ಪ್ರತಿಯೊಂದು ಸಾಲುಗಳನ್ನು ಅತ್ಯಂತ ಮುತುವರ್ಜಿಯಿಂದ ಕವಿತಾ ಜಾಣ್ಮೆಯಿಂದ ಬರೆದ ಕವಿ ಈತ. ಈತನ ಕೆಲವು ಆಯ್ದ ಸಾಲುಗಳನ್ನು ನಾನಿನ್ಲ್ಲಿ ಬರೆದಿದ್ದೆ. ಈತನ ಶಾಸನದ 16ನೇ ಸಾಲಿನಲ್ಲಿನ ಈ ಶ್ಲೋಕ ಬಹಳ ಮಹತ್ವವನ್ನು ಪಡೆಯುತ್ತದೆ. ಶಕೆಯಕಾಲವನ್ನು ಸ್ಪಷ್ಟವಾಗಿ ನಮೂದಿಸುತ್ತಾ ಮಹಾಭಾರತ ಯುದ್ಧ ನಡೆದ ನಂತರ ಕಲಿಯುಗದ ಆದಿಯನ್ನು ಒತ್ತಿ ಹೇಳಲಾಗಿದೆ. ಮಹಾಭಾರತದ ಯುದ್ಧವರ್ಷವನ್ನು 3735 ಎಂದು ಹೇಳಲಾಗಿದೆ.
"ತ್ರಿಂಶತ್ಸು ತ್ರಿಸಹಸ್ರೇಷು ಭಾರತಾದಾಹವಾದಿತಃ" ಭಾರತ ಯುದ್ಧದ ನಂತರ 3130 (ಗ)ತೇಷ್ವಬ್ದೇಷು ಪಂಚಸು ಅದರಲ್ಲಿ ಐದು, ಅಂದರೆ 3135. ಕಲಿಯುಗದಲ್ಲಿ ಕಳೆದಿದೆ. "ಪಂಚಾಶತ್ಸು ಕಲೌ ಕಾಲೇ ಷಟ್ಸು ಪಂಚಶತಾಸು ಚ | ಸಮಾಸು ಸಮತೀತಾಸು ಶಕಾನಾಮಪಿ ಭೂಭುಜಾಮ್ ||" 556ನೇ ಶಕಕಾಲವು ನಡೆಯುತ್ತಿದ್ದುದನ್ನು ಜ್ಞಾಪಿಸುತ್ತಿದೆ. ರವಿಕೀರ್ತಿಯು ಅತ್ಯಂತ ಸ್ಪಷ್ಟವಾಗಿ ಕಲಿಯುಗದ 3135 ವರ್ಷಗಳು ಗತಿಸಿರುವುದರ ಜೊತೆಗೆ ಮಹಾಭಾರತ ಯುದ್ಧದ ಕಾಲವನ್ನು ನಿರ್ಣಯಿಸುತ್ತಾನೆ. ಈ ದೇವಾಲಯ ನಿರ್ಮಾಣ 6ನೇ ಶತಮಾನದಲ್ಲಾಗಿದ್ದು ಇದಕ್ಕೂ ಮೊದಲೇ ಕಾಳಿದಾಸನ ರಘುವಂಶದ ಶ್ಲೋಕಗಳ ಉಲ್ಲೇಖವೂ ದೊರಕುವುದು ಹಾಗೂ ಕಾಳಿದಾಸ ಭಾರವಿಯ ಉಲ್ಲೇಖವೂ ಇದೇ ಶಾಸನದಲ್ಲಿ ಸಿಗುವುದರ ಜೊತೆಗೆ ಶಕವರ್ಷವನ್ನು ಮಹಾಭಾರತ ಯುದ್ಧದಿಂದ ಆರಂಭಿಸಿ ಕಲಿಯುಗವನ್ನು ಗಣಿಸಿದ್ದು ಅತ್ಯಂತ ಮಹತ್ವದ್ದೆನ್ನಿಸುತ್ತದೆ.
ಇತಿಹಾಸದ ಕ್ರಮಬದ್ಧ ಅಧ್ಯಯನಕ್ಕೆ ಕಾಲಗಣನೆ ಅತ್ಯವಶ್ಯ. ವ್ಯವಸ್ಥಿತವಾದ ಸಾರ್ವತ್ರಿಕ ಕಾಲಗಣನೆಯ ಪದ್ಧತಿ ಪ್ರಾಚೀನ ಭಾರತದಲ್ಲಿ ಇದ್ದ ಬಗ್ಗೆ ಸಾಕಷ್ಟು ಆಧಾರಗಳು ಲಭಿಸುವುದಿಲ್ಲ.
ಆದರೆ ಕೆಲವು ಕಾಲಗಣನೆಗಳು ಪರಿಮಿತ ಪ್ರದೇಶಗಳಲ್ಲಿ, ಮತ್ತು ವಲಯಗಳಲ್ಲಿ ಪ್ರಚಾರಕ್ಕೆ ಬಂದರೂ ಸಾರ್ವತ್ರಿಕವಾಗದೆ ಕೆಲಕಾಲಾನಂತರ ಮೂಲೆಗುಂಪಾದವು. ಅವುಗಳಿಂದ ಐತಿಹಾಸಿಕ ಕಾಲ ನಿರ್ಧಾರಕ್ಕೆ ಸ್ವಲ್ಪ ಮಾತ್ರ ಸಹಾಯ ದೊರಕಿದೆ. ಇವುಗಳನ್ನು ಶಕೆಯ ಮೂಲಕವೇ ಸೂಚಿಸಲಾಗುತ್ತಿತ್ತು.
'ಶಕ'ಎನ್ನುವ ಪದವನ್ನುಮಧ್ಯಏಷ್ಯಾದಿಂದವಲಸೆಬಂದುಸೋಗ್ದಾ,ಬ್ಯಾಕ್ಟ್ರಿಯಾ,ಅರಕೋಸಿಯಾ, ಗಾಂಧಾರ, ಸಿಂಧ್, ಕಾಶ್ಮೀರ, ಪಂಜಾಬ್, ಹರ್ಯಾಣಾ, ರಾಜಸ್ಥಾನ, ಗುಜರಾತ್, ಮತ್ತು ಮಹಾರಾಷ್ಟ್ರಗಳಲ್ಲಿ ನೆಲೆಸಿದ ಪ್ರಾಚೀನ ಬುಡಕಟ್ಟುಗಳನ್ನು ಸೂಚಿಸಲು ಬಳಸಲಾಗುತ್ತದೆ. ಇವರು ಕ್ರಿ.ಪೂ. 2ನೇ ಶತಮಾನದ ಮಧ್ಯಭಾಗದಿಂದ ಕ್ರಿ.ಶ. 4ನೇ ಶತಮಾನದಲ್ಲಿ ನೆಲೆಸಿದ್ದರು ಎಂದು ತಿಳಿದು ಬರುತ್ತದೆ.
ಆಗ್ನೇಯದಲ್ಲಿ, ಶಕರು ಉಜ್ಜೈನಿ ಪ್ರದೇಶವನ್ನು ಆಕ್ರಮಣ ಮಾಡಿದರು, ಆದರೆ ತರುವಾಯ ಕ್ರಿ.ಪೂ. 57ರಲ್ಲಿ ಮಾಲ್ಡಾದ ರಾಜ ವಿಕ್ರಮಾದಿತ್ಯನು ಅವರನ್ನು ಹಿಮ್ಮೆಟ್ಟಿಸಿದನು. ಈ ಘಟನೆಯ ಸ್ಮರಣಾರ್ಥ ವಿಕ್ರಮಾದಿತ್ಯನು ವಿಕ್ರಮಶಕೆಯನ್ನು ಊರ್ಜಿತಗೊಳಿಸಿದನು. ವಿಕ್ರಮ ಶಕೆಯು ಕ್ರಿ.ಪೂ. 57ರಲ್ಲಿ ಆರಂಭವಾಗುತ್ತಿದ್ದ ನಿರ್ದಿಷ್ಟ ದಿನ ಭಾರತೀಯ ಪಂಚಾಂಗವಾಗಿತ್ತು. ಒಂದು ಶತಮಾನಕ್ಕಿಂತ ಹೆಚ್ಚು ಕಾಲದ ನಂತರ, ಶಕರು ಉಜ್ಜೈನಿಯನ್ನು ಮತ್ತೊಮ್ಮೆ ಆಕ್ರಮಣ ಮಾಡಿ ಶಕ ಶಕೆಯನ್ನು ಪುನಃ ಸ್ಥಾಪಿಸಿದರು. ಇದು ಬಹುಕಾಲವಿದ್ದ ಪಶ್ಚಿಮಕ್ಷತ್ರಪ ರಾಜ್ಯದ ಆರಂಭವನ್ನು ಗುರುತಿಸಿತು.
ಸೂರ್ಯನ ಉದಯಾಸ್ತಗಳ ಆವರ್ತನ, ಚಂದ್ರ ಬಿಂಬದ ವೈರೂಪ್ಯಗಳ ಅವರ್ತನ, ಹಾಗೇ ಋತುಗಳ ಮತ್ತು ಆಕಾಶದಲ್ಲಿನ ನಕ್ಷತ್ರಗಳ ಆವರ್ತನ; ಇವುಗಳು ಕ್ರಮವಾಗಿ ದಿನ, ತಿಂಗಳು ಹಾಗೂ ವರ್ಷಗಳೆಂಬ ಕಾಲಾವಧಿಯ ಗಣನೆಗೆ ನಾಂದಿಯಾಯಿತು. ಹೀಗೆ ರೂಪುಗೊಂಡಿದ್ದ ಕಾಲಗಣನೆ ಬಹು ಪ್ರಾಚೀನ ಕಾಲದಿಂದಲೇ ವಿಶ್ವದಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ರೀತಿ ಮತ್ತು ಹೆಸರುಗಳಲ್ಲಿ ಬಳಕೆಗೆ ಬಂದಿದೆ.
ಸುಮಾರು ಕ್ರಿಸ್ತಶಕದ ಆರಂಭದ ಕಾಲಕ್ಕಾಗಲೇ ರಾಜನ ಆಡಳಿತ ವರ್ಷವನ್ನು ಗಣಿಸುವ ಪದ್ದತಿ ಬಳಕೆಯಲ್ಲಿದ್ದ ಕುರಿತು ಅಶೋಕನ ಶಾಸನಗಳಿಂದ ತಿಳಿದು ಬರುತ್ತದೆ.ನನ್ನ ಪಟ್ಟಾಭಿಷೇಕವಾದ 12 ವರ್ಷಗಳು ಆಗಿರುವಾಗ ಈ ಆಜ್ಞೆಯನ್ನು ಹೊರಡಿಸುತ್ತಿದ್ದೇನೆ ದುವಾದಸ ವಸಾಭಿಸಿತೇನ ಮೇ ಇಯಂ ಆನಾಪಯಿತೆಎನ್ನುವುದಾಗಿ ಉಕ್ತವಾಗಿದೆ. ಅದೇ ರೀತಿ ರಾಜರು ತಮ್ಮ ಆಡಳಿತ ವರ್ಷವನ್ನು ಉಲ್ಲೇಖಿಸುವ ಪ್ರವೃತ್ತಿ ದಕ್ಷಿಣದ ಸಾತವಾಹನ, ಬಂಗಾಳದ ಪಾಲರು, ಚಂದ್ರರು; ಅಸ್ಸಾಮಿನ ಬ್ರಹ್ಮಪಾಲ ದೊರೆಗಳು; ದಕ್ಷಿಣ ಭಾರತದ ಪಲ್ಲವ, ಚೋಳ, ಪಾಂಡ್ಯ, ಹಾಗೇ ಕ್ರಿ.ಶ. 6ನೆಯ ಶತಮಾನಕ್ಕಿಂತ ಹಿಂದಿನ ಕರ್ನಾಟಕದ ಪ್ರಸಿದ್ಧ ಅರಸು ಮನೆತನಗಳವರಾದ ತಲಕಾಡಿನ ಗಂಗ, ಬನವಾಸಿಯ ಕದಂಬ ಹಾಗೂ ಬಾದಾಮಿಯ ಚಲುಕ್ಯರ ಆಳ್ವಿಕೆಯ ಕಾಲದ ಶಾಸನಗಳಲ್ಲೂ ಕಂಡುಬರುತ್ತದೆ.
ಸಾತವಾಹನರ ಅಧೀನರಾಗಿದ್ದ ಚುಟುಸಾತಕರ್ಣಿಗಳ ಬನವಾಸಿಯ ನಾಗಶಿಲ್ಪದ ಶಾಸನದಲ್ಲಿ ಸಂವತ್ಸರ 10-2 ಹೇಮಂತಾನ ಪಖೋ 2 ದಿವಸ 1 ಎಂಬ ಉಲ್ಲೇಖಸಿಗುತ್ತದೆ. ಇಲ್ಲಿ ತಿಳಿದು ಬರುವಂತೆ ಒಂದು ವರ್ಷಕ್ಕೆ ಮೂರು ಋತುಗಳು; ಅಂದರೆ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ವನ್ನು ಗ್ರೀಷ್ಮ, ವರ್ಷ ಮತ್ತು ಹೇಮಂತ ಎಂದು, ಒಂದು ಋತುವಿಗೆ ಎಂಟು ಪಕ್ಷಗಳು, ಒಂದು ಪಕ್ಷಕ್ಕೆ ಹದಿನೈದು ದಿನಗಳು - ಎಂಬ ಗಣನೆ ಬಳಕೆಯಲ್ಲಿದ್ದುದು ತಿಳಿದು ಬರುತ್ತದೆ. ಸಾತವಾಹನರ ಅನಂತರ ದಕ್ಷ್ಷಿಣ ಭಾರತ ಎಲ್ಲಾ ಪ್ರದೇಶಗಳು ಪಲ್ಲವ, ಗಂಗ, ಕದಂಬ, ಚೋಳ, ಚೇರ ಪಾಂಡ್ಯರೇ ಮೊದಲಾದವರ ಆಳ್ವಿಕೆಗೆ ಒಳಪಟ್ಟಿದ್ದಿತು. ಅವರ ಪ್ರಾಚೀನ ಶಾಸನಗಳಲ್ಲಿ ರಾಜನ ಆಡಳಿತ ವರ್ಷ ಗಣನೆಯೇ ವಿಶೇಷವಾಗಿ ಬಳಕೆಯಾಗಿರುವುದು ಕಂಡು ಬರುತ್ತದೆ. ಋತು, ಪಕ್ಷ ಮತ್ತು ದಿನಗಳ ಗಣನೆಯ ಜೊತೆಗೆ ಹಲವು ಸಂದರ್ಭಗಳಲ್ಲಿ ನಕ್ಷತ್ರ, ಮೂಹೂರ್ತಗಳ ಉಲ್ಲೇಖಗಳೂ ಬಂದಿವೆ.
ಕದಂಬ ಮೃಗೇಶವರ್ಮನ ಎರಡನೆಯ ವರ್ಷದ ತಾಮ್ರ ಶಾಸನದಲ್ಲಿ ಶ್ರೀ ವಿಜಯ ಶಿವಮೃಗೇಶವರ್ಮ್ಮಣಃ ವಿಜಯವೈಜಯಿಕಃ ಸಂವತ್ಸರಃ ದ್ವಿತೀಯಃ ಹೇಮಂತ ಪಕ್ಷಃ ಚತುರ್ತ್ಥ ತಿಥಿರ್ದ್ದಶಮೀಎನ್ನುವುದಾಗಿ ಬರೆಯಲ್ಪಟ್ಟಿದೆ.
ಗಂಗರ ಕಾಲದ ಹಿಂದೂಪುರ ತಾಲೂಕಿನ ಶಾಸನಕೋಟೆ ಗ್ರಾಮದ ತಾಮ್ರ ಶಾಸನದಲ್ಲಿ ಪ್ರಥಮೇ ಸಂವತ್ಸರೇ ಫಾಲ್ಗುನ ಮಾಸೆ ಶುಕ್ಲಪಕ್ಷೇ ತಿಥೌದಶಮ್ಯಾಂಎಂದು ಉಕ್ತವಾಗಿದೆ. ಗಂಗ ದುರ್ವಿನೀತನ ಉತ್ತನೂರು ತಾಮ್ರ ಶಾಸನದಲ್ಲಿ ‘....ವರ್ತಮಾನೇ ವಿಂಶತ್ತಮೇ ವಿಜಯ ಸಂವತ್ಸರೇ ಕಾರ್ತಿಕ ಮಾಸೆ ಪೌರ್ಣಮಾಸ್ಯಾಂ ತಿಥೌ ಕೃತ್ತಿಕ ನಕ್ಷತ್ರೇ ಅಭಿಜಿತ್ ಮೂಹೂರ್ತೆಎಂದು ಮೂಹೂರ್ತದ ಉಲ್ಲೇಖ ಕೂಡ ಬಂದಿದೆ. ಹಾಗೇ ಪಲ್ಲವರ ತಾಮ್ರಪಟ ಶಾಸನದಲ್ಲಿ ಧರ್ಮ್ಮಮಹಾರಾಜಃ ಶ್ರೀಕಂದವರ್ಮ್ಮಣಃ ಪ್ರವರ್ದ್ಧಮಾನ ವಿಜಯರಾಜ್ಯ ದ್ವಿತೀಯ ಸಂವತ್ಸರೇ......’ (ಪಲ್ಲವ ಶ್ರೀಕಂದವರ್ಮನ ತಾಮ್ರಶಾಸನಗಳು; ಇತಿಹಾಸ ದರ್ಶನ, ಸಂಪುಟ 25, ಪುಟ 26-28) ಎಂದು ಉಲ್ಲೇಖವಾಗಿದೆ.
ಆರನೆಯ ಶತಮಾನದ ನಂತರದ ದಕ್ಷಿಣ ಭಾರತದ, ಅಂದರೆ; ಕರ್ನಾಟಕದ ಬಾದಾಮಿ ಚಲುಕ್ಯರೇ ಮೊದಲಾದವರ ಶಾಸನಗಳಲ್ಲಿ ಈ ಶಕ ವರ್ಷಗಳ ಉಲ್ಲೇಖಗಳು ವಿಶೇಷವಾಗಿ ಕಾಣಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಬಾದಾಮಿ ಚಲುಕ್ಯರ ಮೊದಲನೇ ಪೊಲೆಕೇಶಿಯ ಶಾಸನದಲ್ಲಿ ಶಕ ವರ್ಷ್ಷೇಷು ಚತುಶ್ಶತೇಷು ಪಞ ಷಷ್ಟಿಯುತೇಷು’ (465=ಕ್ರಿ.ಶ.543) ಎಂಬ ಉಲ್ಲೇಖಮೊದಲಿಗೆ ಸಿಗುತ್ತದೆ. ಇದು ಕರ್ನಾಟಕದಲ್ಲಿ ದೊರೆತಿರುವ ಪ್ರಾಚೀನವಾದ ಶಕವರ್ಷದ ಉಲ್ಲೇಖವಿರುವ ಶಾಸನವಾಗಿದೆ. ಈ ಶಕವರ್ಷ ಇದು ಕ್ರಿ.ಶ. 78 ರಿಂದ ಆರಂಭವಾಗುತ್ತದೆ.
ಚಲುಕ್ಯ ದೊರೆ ಮಂಗಲೀಶನ ಶಾಸನವೊಂದರಲ್ಲಿ ಶ್ರೀಮಂಗಲೀಶ್ವರ ರಣವಿಕ್ರಾನ್ತಃ ಪ್ರವರ್ದ್ಧಮಾನ ರಾಜ್ಯ ಸಂವತ್ಸರೇ ದ್ವಾದಶೇ ಶಕನೃಪ ರಾಜ್ಯಾಭಿಷೇಕ ಸಂವತ್ಸರೇಷ್ಟೆತಿಕ್ರಾನ್ತೇಷು ಪಂಚತೇಷುಎಂದು ತನ್ನ ಆಡಳಿತದ 12ನೆಯ ವರ್ಷ ಹಾಗೂ ಶಕನೃಪತಿ ರಾಜ್ಯಾಭಿಷೇಕದ 500ನೆಯ ವರ್ಷವನ್ನು ಉಲ್ಲೇಖಿಸಲಾಗಿದೆ. ಇದೇ ವಂಶದ ವಿನಯಾದಿತ್ಯ, ಕೀರ್ತಿವರ್ಮರ ಶಾಸನಗಳಲ್ಲೂ ಶಕವರ್ಷವನ್ನು ಬಳಸಿರುವುದು ಕಂಡುಬರುತ್ತದೆ, ‘ಶಾಲಿವಾಹನ ಶಕ 1110ರ ಉಲ್ಲೇಖ ಪಂಡರಾಪುರದ ಮರಾಠಿ ಶಾಸನವೊಂದರಲ್ಲಿ ಬಂದಿದ್ದು, ಇದೇ ಪ್ರಾಯಶಃ ಶಾಲಿವಾಹನ ಶಕೆಎಂಬುದರ ಪ್ರಾಚೀನತಮ ಉಲ್ಲೇಖವಿದ್ದಂತೆ ತೋರುತ್ತದೆ.
ಶಕವರ್ಷವನ್ನು ಕರ್ನಾಟಕದ ಇನ್ನಿತರ ಪ್ರಸಿದ್ಧ ರಾಜಮನೆತನಗಳಾದ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯ, ಮತ್ತು ಅವರ ಮಾಂಡಲಿಕರಾಗಿದ್ದ ಕಳಚೂರ್ಯು, ಸೇಉಣ ಹಾಗೂ ಹೊಯ್ಸಳರು ವ್ಯಾಪಕವಾಗಿ ಬಳಸಿರುವುದು ಕಂಡುಬರುತ್ತದೆ. ಇಂದಿಗೂ ಭಾರತದಾದ್ಯಂತ ತಮ್ಮ ಪಾರಂಪರಿಕ ದೃಕ ಮತ್ತು ಸೂರ್ಯ ಸಿದ್ಧಾಂತ ಪಂಚಾಂಗಗಳಲ್ಲಿ ವಿಶೇಷವಾಗಿ ಬಳಕೆಗೊಳ್ಳುತ್ತಿರುವ ಶಕೆಯೆಂದರೆ, ‘ಶಾಲಿವಾಹನ ಶಕೆಯೇ.
ದಕ್ಷಿಣ ಭಾರತದ ಶಾಸನಗಳಲ್ಲಿ ಈ ಶಾಲಿವಾಹನಶಕೆಯನ್ನು ಮಾತ್ರವಲ್ಲದೆ ಕಲಿಯುಗ ಸಂವತ್ಸರ’, ‘ಕೊಲ್ಲಂ ಸಂವತ್ಸರ’, ‘ಚಾಳುಕ್ಯ ವಿಕ್ರಮ ವರ್ಷ’,‘ಪುದುವೈಪ್ಪು ಸಂವತ್ಸರ’, ‘ಹಿಜಿ’, ‘ಫಸ್ಲಿ’, ‘ಶೂಹೂರ್’, ‘ಮೌಲಾದಿ ಸಂವತ್ಸರಗಳೂ ಶಾಸನಗಳಲ್ಲಿ ಕಂಡುಬರುತ್ತವೆ. ಈ ಸಂವತ್ಸರಗಳಲ್ಲಿ ಕೆಲವು ಚಾಂದ್ರಸೌರಮಾನ, ಸೌರಮಾನ ಹಾಗೂ ಚಾಂದ್ರಮಾನ ಪದ್ಧತಿಗಳಲ್ಲಿ ಗಣನೆ ಮಾಡುತ್ತಿರುವುದು ಕಂಡುಬರುತ್ತದೆ. ಈ ಪದ್ಧತಿಗಳ ಜೊತೆ ಜೊತೆಗೇ, ಬಾರ್ಹಸ್ಪತ್ಯ ಮಾನದ ಅರವತ್ತು ವರ್ಷ ಚಕ್ರದ ಸಂವತ್ಸರದ ಗಣನೆಯನ್ನು ನಿಯತವಾಗಿ ಬಳಸಿರುವುದು ಕೂಡ ಕಂಡುಬರುತ್ತದೆ.
ತಿಂಗಳ ಗಣನೆಗೆ ಚಂದ್ರನ ಚಲನೆಯನ್ನೂ, ವರ್ಷದ ಗಣನೆಗೆ ಸೂರ್ಯನ ಚಲನೆಯನ್ನು ಸಮೀಕಣಗೊಳಿಸಿ ಬೇಸಿಗೆ, ಮಳೆ, ಚಳಿಗಾಲಗಳು ಎಂಬ ಋತುಮಾನಗಳಿಗೆ ಹೊಂದಾಣಿಕೆ ಯಾಗುವಂತೆ ರೂಪಿಸಿಕೊಂಡ ಪಂಚಾಂಗವೇ ಚಾಂದ್ರಸೌರಮಾನ ಪಂಚಾಂಗ.
ಬಾದಾಮಿ ಚಲುಕ್ಯರ ಕಾಲದಲ್ಲೇ ಕಲಿಯುಗ ಸಂವತ್ಸರದ ಉಲ್ಲೇಖ ಬಂದಿದೆ. ಮಹಾಭಾರತದ ಯುದ್ಧವು ಕ್ರಿ.ಪೂ. ೩೧೦೨ ರಲ್ಲಿ ನಡೆಯಿತು. ಆ ಯುದ್ಧದ ನಂತರ ಕಲಿಯುಗ ಪ್ರಾರಂಭವಾಯಿತು. ಅಂದರೆ ಮಹಾಭಾರತದ ಧರ್ಮರಾಯ (ಯುಧಿಷ್ಠಿರ)ನು ಪಟ್ಟಕ್ಕೆ ಬಂದ ಕಾಲ ಎಂಬ ಹೇಳಿಕೆಗಳ ಆಧಾರದ ಮೇಲೆ ಈ ಸಂವತ್ಸರದ ಗಣನೆ ನಿಂತಿದೆ. ಇದು ದಕ್ಷಿಣ ಭಾರತದ ಅನೇಕ ಶಾಸನಗಳಲ್ಲಿ ಕಾಣಿಸಿಕೊಂಡಿದೆ. ಬಹುತೇಕ ಸಂದರ್ಭಗಳಲ್ಲಿ ಶಕ(ಶಾಲಿವಾಹನ ಶಕ) ಇಲ್ಲವೆ ಇತರ ಸಂವತ್ಸರಗಳೊಂದಿಗೆ ಇದು ಬಳಕೆಯಾಗಿದೆ. ಇಂದಿಗೂ ಭಾರತದ ಪಾರಂಪರಿಕ ಪಂಚಾಂಗಗಳಲ್ಲಿ ಇದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕ್ರಿ.ಶ. 634ರ ಐಹೊಳೆಯ ರವಿಕೀರ್ತಿಯ ಶಾಸನದಲ್ಲಿ ಈ ಸಂವತ್ಸರದ ಉಲ್ಲೇಖವಿದ್ದು ಶಕ 556, ಭಾರತ ಯುದ್ಧದಿಂದ 3735 ವರ್ಷಗಳು ಸಂಧಿಸಿದ ಕಲಿಕಾಲದಲ್ಲಿ ಅಂದರೆ ಕಲಿಯುಗ ಸಂವತ್ಸರ 3735 ನೆಯ ವರ್ಷದಂದು ಶಾಸನ ಹಾಕಿಸಿದ ವಿವರ ಬಂದಿದೆ. ಅದೇ ರೀತಿ ಕೋಲಾರ ಜಿಲ್ಲೆಯಲ್ಲಿನ ಶಾಸನವೊಂದರಲ್ಲಿ ಸ್ವಸ್ತಿ ಕಲಿವರುಷ 4518 ಶಕಾಬ್ದ 1339ನೆಯ ಮೇಲೆ ಸಲ್ಲುವ ಹೇವಿಳಂಬಿ ಸಂವತ್ಸರದ ಆಷಾಢ ಶು ಸೋ.......ಎಂಬ ಉಲ್ಲೇಖ ಬಂದಿದೆ. ಇಲ್ಲಿ ಪಕ್ಷ ಮತ್ತು ವಾರಗಳನ್ನು ಸೂಚಿಸಲು ಶು. ಸೋ. ಎಂಬ ಸಂಕ್ಷೇಪಗಳನ್ನು ಕಾಣಬಹುದಾಗಿದೆ. ಈ ರೀತಿಯ ಸಂಕ್ಷೇಪಗಳ ಬಳಕೆ ಶಾಸನಗಳ ಕಾಲಗಣನಾ ಭಾಗದಲ್ಲಿ ಬಹು ಪ್ರಾಚೀನ ಕಾಲದಿಂದಲೇ ಬಳಕೆಗೊಂಡಿರುವುದನ್ನು ಕಾಣಬಹುದಾಗಿದೆ.

ಅದೇನೇ ಇರಲಿ ಎಲ್ಲದರಲ್ಲಿಯೂ ಪರಕೀಯವೇ ನಮಗೆ ಆಪ್ಯಾಯಮಾನವಾಗಿರುವಾಗ ಶಲಿವಾಹನ ಶಕೆಯೆನ್ನುವ ಕ್ರಿಸ್ತ ಶಕೆಗಿಂತಲೂ ಈಚಿನದ್ದು ಆಚರಿಸಿ ಗಣನೆಗೆ ತೆಗೆದುಕೊಂಡು ಕಲಿಯುಗಾಬ್ದವನ್ನು ಕಡೆಗಣಿಸುವುದು ಬಹಳ ಬೇಸರ ತರುತ್ತದೆ.

No comments:

Post a Comment