Search This Blog

Wednesday 24 January 2018

ಹುವಿಷ್ಕನು ಅನಾಥಾಲಯಕ್ಕೆ ಕೊಟ್ಟ "ಹರಿತ-ಕಲಾಪಕ"

ಕುಷಾಣರ ರಾಜವಂಶದಲ್ಲಿ ಅತ್ಯುನ್ನತ ಕೀರ್ತಿ ಗಳಿಸಿದ ಪ್ರಭಾವಶಾಲಿ ಚಕ್ರವರ್ತಿ ಕನಿಷ್ಕ. ಇವನು 78 ರಿಂದ 120 ರವರೆಗೆ ಆಳಿದ. ಇವನ ಕಾಲದಲ್ಲಿ ಸಾಮ್ರಾಜ್ಯ ವಿಸ್ತಾರವೂ ಬಲಾಢ್ಯವೂ ಆಗಿತ್ತು; ಉತ್ತರದಲ್ಲಿ ಖೋಟಾನ್ ಹಾಗೂ ದಕ್ಷಿಣದಲ್ಲಿ ಕೊಂಕಣ, ಪೂರ್ವದಲ್ಲಿ ಬಿಹಾರ ಹಾಗೂ ಪಶ್ಚಿಮದಲ್ಲಿ ಖೋರಾಸಾನ್ವರೆಗೆ ಹರಡಿತ್ತೆಂದು ಇವನ ಶಾಸನಗಳಿಂದ ತಿಳಿದುಬರುತ್ತ್ತದೆ. ಎರಡನೆಯ ಕಡ್ಫೀಸಿಸ್ ಹಾಗೂ ಅನಂತರ ಪಟ್ಟಕ್ಕೆ ಬಂದ ಕನಿಷ್ಕರ ಮಧ್ಯೆ ಸ್ವಲ್ಪ ಕಾಲಾಂತರವಿದ್ದರೂ ಕನಿಷ್ಕನೇ ಎರಡನೆಯ ಕಡ್ಫೀಸಿಸನ ತರುವಾಯದ ಕುಷಾಣ ದೊರೆಯೆಂಬುದು ಖಚಿತವಾಗಿದೆ. ಈತ ಕಾಶ್ಮೀರವನ್ನು ಗೆದ್ದು ಅಲ್ಲಿ ಕನಿಷ್ಕಪುರವನ್ನು ಕಟ್ಟಿಸಿದ ಬುದ್ಧಗಯೆ ಹಾಗೂ ಪಾಟಲೀಪುತ್ರವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡ. ಬೌದ್ಧಪಂಡಿತ ಅಶ್ವಘೋಷವನ್ನು ಕನಿಷ್ಕ ಪಾಟಲೀಪುತ್ರದಿಂದ ತನ್ನಲ್ಲಿಗೆ ಆಹ್ವಾನಿಸಿದ. ಪರುಷಪುರ ಅಥವಾ ಪೆಷಾವರ್ ಇವನ ರಾಜಧಾನಿ. ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ರಾಜಕೀಯ ಅನುಕೂಲತೆಗಾಗಿ ಹಲವು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ರಾಜಪ್ರತಿನಿಧಿಗಳ ಸಹಾಯದಿಂದ ರಾಜ್ಯಭಾರ ಸಾಗಿಸಿದ. ಕ್ಷತ್ರಪರ ರಾಜ್ಯಪದ್ಧತಿಯನ್ನೂ ಮುಂದುವರಿಸಿಕೊಂಡು ಬಂದ. ಕ್ಷತ್ರಪರು ಮತ್ತು ಮಹಾಕ್ಷತ್ರಪರೇ ಪ್ರಾಂತ್ಯಾಧಿಪತಿಗಳು. ಎರಡನೆಯ ಕಡ್ಫೀಸಿಸ್ ಧರಿಸಿದ ದೇವಪುತ್ರನೆಂಬ ಬಿರುದನ್ನು ಕನಿಷ್ಕನೂ ಧರಿಸುತ್ತಿದ್ದ. ಚೀನಾದ ದಳಪತಿ ಪಾನ್ಚಾವನೊಂದಿಗೆ ನಡೆದ ಕದನದಲ್ಲಿ ಕನಿಷ್ಕ ಸೋಲನ್ನನುಭವಿಸಿದರೂ ಅವನ ಮಗ ಪಾನಯಾಂಗನನ್ನು ಸೋಲಿಸಿ ಸೇಡು ತೀರಿಸಿಕೊಂಡು, ಕ್ಯಾಷ್ಘರ್, ಯಾರ್ಕಂಡ್ ಮತ್ತು ಖೋಟಾನುಗಳನ್ನು ವಶಪಡಿಸಿಕೊಂಡ. ಅನಂತರ ಪಾರ್ಥಿಯನರನ್ನೂ ಸೋಲಿಸಿದ. ಹಲವಾರು ವಿಜಯಗಳ ಸ್ಮಾರಕವಾಗಿ ಒಂದು ಹೊಸ ಶಕವನ್ನು ಕ್ರಿ.. 78ರಲ್ಲಿ ಪ್ರಾರಂಭಿಸಿದ. ರಾಜಧಾನಿಯಾದ ಪುರುಷಪುರದಲ್ಲಿ ಭವ್ಯವಾದ ಸಾರ್ವಜನಿಕ ಕಟ್ಟಡಗಳನ್ನೂ ಬೌದ್ಧವಿಹಾರಗಳನ್ನೂ ಬುದ್ಧನ ಅವಶೇಷಗಳನ್ನೊಳಗೊಂಡಿದ್ದ ಸ್ತೂಪವನ್ನೂ ಈತ ಕಟ್ಟಿಸಿದನೆಂದು ಹೇಳಲಾಗಿದೆ.
ಪೆಷಾವರ್, ಮಥುರಾ, ತಕ್ಷಶಿಲೆ ಹಾಗೂ ಕನಿಷ್ಕಪುರಗಳಲ್ಲಿರುವ ಹಲವಾರು ಭೌದ್ಧ ವಿಹಾರಗಳು ಮತ್ತು ಶಿಲ್ಪಗಳು ಕಾಲದ ಕಲಾಪ್ರೌಢಿಮೆಯ ಪ್ರತೀಕಗಳಾಗಿವೆ.
ಕನಿಷ್ಕನ ಅನಂತರ ಬಂದ ದೊರೆ ವಸಿಷ್ಕ. ಆದರೆ ದೊರೆ ಅಷ್ಟು ಪ್ರಬಲ ನಲ್ಲದ ಕಾರಣ ಇವನ ರಾಜ್ಯ ಕೇವಲ ಮಥುರಾ ಹಾಗೂ ಅದರ ಸುತ್ತಮುತ್ತಣ ಪ್ರದೇಶಗಳಿಗೇ ಸೀಮಿತವಾಗಿತ್ತು.
ಅನಂತರ ದೊರೆಯಾದ ಹುವಿಷ್ಕ ಕುಷಾಣರ ರಾಜ್ಯವನ್ನು ಸುಸ್ಥಿತಿಗೆ ಒಯ್ದ. ಬೌದ್ಧಧರ್ಮಕ್ಕೆ ಆಶ್ರಯ ನೀಡಿದ ಹುವಿಷ್ಕ 120-138ರಲ್ಲಿ ರಾಜ್ಯವಾಳಿದ. ಕನಿಷ್ಕ ಕಟ್ಟಿಸಿದ ವಿಪುಲವಾದ ಸ್ಮಾರಕಗಳಿಂದಾಗಿ ಪೆಷಾವರ್ ಅಲಂಕೃತವಾದರೆ ಹುವಿಷ್ಕ ಕಟ್ಟಸಿದ ವಿಪುಲವಾದ ಸ್ಮಾರಕಗಳಿಂದ ಮಥರಾ ಕಂಗೊಳಿಸಿತು.
ಹುವಿಷ್ಕನು ಮಥುರಾದಲ್ಲಿ ತನ್ನ ೨೮ನೇ ವರ್ಷದ ನೆನಪಿಗೆ ಬ್ರಾಹ್ಮಿ ಲಿಪಿಯಲ್ಲಿ ಒಂದು ಶಾಸನವನ್ನು ಬರೆಸುತ್ತಾನೆ. ಅದರಲ್ಲಿನ ಒಂದು ಕುತೂಹಲಕರವಾದ "ಹರೀತ ಕಲಾಪಕ ಎನ್ನುವ ಉಲ್ಲೇಖ ಕಂಡು ಬರುತ್ತದೆ. ಈ ಶಾಸನವು ಅನಾಥಾಶ್ರಮದ ಬಾಗಿಲಿನಲ್ಲಿದ್ದು ಇಲ್ಲಿ ಇರತಕ್ಕ ಸಾಮಾನುಗಳ ಪಟ್ಟಿಯನ್ನು ನೀಡಲಾಗಿದೆ.
ಶಾಸನದಲ್ಲಿ ಉಲ್ಲೇಖಿಸಲಾದ ಸಾಲುಗಳನ್ನು ಇಲ್ಲಿ ಕೊಡುತ್ತೇನೆ.
. . . . . . . . . .ದಿವಸೇ ದಿವಸೇ
ಚ ಪುಣ್ಯ ಶಾಲಾಯೇ ದ್ವಾರಮೂಲೇ ಧಾರಿಯೇ ಸಾದ್ಯಂ ಸಕ್ತೂನಾಂ ಆಢಕಾ ೩
ಲವಣ ಪ್ರಸ್ಥೋ ೧ ಶಕು ಪ್ರಸ್ಥೋ ೧ ಹರಿತ ಕಲಾಪಕ ಘಟಕಾ ೩ ಮಲ್ಲಕಾ ೫ ಏತಂ ಅನಾಥಾನಾಂ ಕೃತೇನ
ದಾತವ್ಯ ಬುಭುಕ್ಷಿತಾನ ಪಿಬಸಿತಾನಮ್
ಪ್ರತಿದಿನವೂ ಈ ಪುಣ್ಯ ಶಾಲಾದಲ್ಲಿನ ಅನಾಥರಿಗಾಗಿ ಈ ಅನಾಥಾಲಯದ ಪ್ರವೇಶದ್ವಾರದಲ್ಲಿ ತರಕಾರಿಯ ಮೂರು ಗೊಂಚಲುಗಳು(ಸೊಪ್ಪು), ಉಪ್ಪು 1 ಪ್ರಸ್ಥ, ಶಕು 1 ಪ್ರಸ್ಥ, ಹರಿತ ಕಲಾಪಕ 3 ಘಟಕಮತ್ತು ಮಲ್ಲಕ 5 ಇವುಗಳನ್ನು ಹಸಿದವರಿಗಾಗಿ ಮತ್ತು ಬಾಯಾರಿಕೆಯಿಂದ ಬಳಲಿದವರಿಗಾಗಿ ಕಾಯ್ದಿಡಬೇಕು. ಇಲ್ಲಿ ಹರೀತ ಕಲಾಪಕ ಘಟಕಎನ್ನುವುದನ್ನು ಗುಣವಾಚಕ ಶಬ್ದವಾಗಿ ಬಳಸಿದಾಗ ಇದು ಒಂದೋ ತರಕಾರಿಗಳ ಮೂಟೆ ಅಥವಾ ಗೊಂಚಲು ಎನ್ನಬಹುದು ಅಥವಾ ಹಸಿರು ತರಕಾರಿಗಳು ಅಂತಾನೂ ಕರೆಯಬಹುದಾಗಿದೆ. ಇಲ್ಲಿ ಘಟಕ ಎನ್ನುವ ಶಬ್ದವನ್ನು ಒಂದು ನೀರು ತುಂಬಿಡುವ ಹೂಜಿಯಂತ ಪಾತ್ರೆಗೆ ನಿರ್ದೇಶಿಸಿದ್ದು, ಮಲ್ಲಕಾ ಎನ್ನುವುದನ್ನು ಪಾತ್ರೆಗೆ ಹೇಳಲಾಗಿದೆ ಆಂಗ್ಲ ಭಾಷೆಯ Bowl ಹೇಳಲಾಗಿದೆ. ಅಂದರೆ ತರಕಾರಿಗಳನ್ನು ಮಲ್ಲಕದಲ್ಲಿಟ್ಟು ನೀರನ್ನು ಹೂಜಿಯಂತ ಪಾತ್ರದಲ್ಲಿಡಬೇಕಾಗಿತ್ತು. Sten Konow ಅನ್ನುವವರು ಇದನ್ನು ಹಸಿವೆ ಮತ್ತು ಬಾಯಾರಿಕೆಯ ಕುರಿತಾಗಿ ಜನರಿಗೆ ತಿಳಿಯಲಿ ಎಂದು ಘಟಕ ಮತ್ತು ಮಲ್ಲಕವನ್ನು ಬಳಸಲಾಗಿದೆ ಎಂದು ಅಭಿಪ್ರಾಯಿಸಿದ್ದಾರೆ ಆದರೆ ಸಿರ್ಕಾರ್ ಅವರು ಹರಿತ ಕಲಾಪಕ ತ್ರಯಃ ಮಲ್ಲಕಾಃ(ಪಾನ ಪಾತ್ರಾಣಿ) ಎಂದು ತಮ್ಮ Select Inscription – 1  Page. 152 -53 ರಲ್ಲಿ ಉಲ್ಲೇಖಿಸಿದ್ದಾರೆ. ಅವರು ಹೇಳುವಂತೆ "ವಿವಿಧ ಬಗೆಯ ಹಸಿರು ತರಕಾರಿಗಳಿಂದ ತಯಾರಿಸುವ ಸಲುವಾಗಿನ ಪಾತ್ರೆ." ಹರಿತ ಅನ್ನುವುದು ಹಸಿರು ತರಕಾರಿಯನ್ನು ಉದ್ದೇಶಿಸಿದ್ದರೆ ಕಲಾಪಕ ಅನ್ನುವುದು  ತಯಾರಿಸುವ ಕುರಿತ್ಯಾಗಿ ಎನ್ನುವುದು ಸಿರ್ಕಾರ್ ಅವರ ವಾದ ಇಲ್ಲಿ ನಮಗೆ ಸಿರ್ಕಾರ್ ಅವರ ಅಭಿಪ್ರಾಯವೇ ಹೆಚ್ಚು ಸೂಕ್ತವಾಗಿ ಕಾಣಿಸಿಕೊಳ್ಳುತ್ತದೆ. ಶುಕ ಪ್ರಸ್ಥ ಅನ್ನುವುದನ್ನು ಶುಕ್ತ ಪ್ರಸ್ಥ ಅಂದರೆ ಆಮ್ಲ ರಸ ಎಂದು ಅರ್ಥೈಸಿದ್ದಾರೆ.
ಕಲಾಪಕ ಎನ್ನುವುದನ್ನು ಇಲ್ಲಿ ತಯಾರಿಸುವ ಅಥವಾ ಸಿದ್ಧಪಡಿಸುವ ಅರ್ಥದಲ್ಲಿ ಅರ್ಥೈಸಿದ್ದಾರೆ. ಅದು ಅಮರಕೋಶದಲ್ಲಿ "ಕಲಾಪ ಭೂಷಣೇ ಬರ್ಹೇ ತೂಣೀರೇ ಸನ್ಹತಾವಪಿ" ಎಂದು ಅರ್ಥ ಕೊಡಲಾಗಿದೆ. ಇನ್ನು ಕಲಾ ಎನ್ನುವುದನ್ನು ಮಾತ್ರ ತೆಗೆದುಕೊಂಡಲ್ಲಿ ಅದು ಕಲಾ ಪ್ರಕಾರಕ್ಕೆ ಹೇಳಿದಂತಾಗುತ್ತದೆ. ಕಲಾವಾ ಎನ್ನುವ ಕಲಾ ಪ್ರಕಾರವೊಂದು ಮಥುರಾದಲ್ಲಿ ಮೊದಲಿತ್ತು ಅದು ಜಾನಪದ ಕಲೆಯಾಗಿತ್ತು. ಬಾಣಭಟ್ಟನ ಕಾದಂಬರಿಯಲ್ಲಿಯೂ ಕಲಾಪ ಎಂದು ಬರುತ್ತದೆ. "ಪಂಚ ರಾಗ ವಿಚಿತ್ರ ಚೇಲ ಚಿತ್ರ ಕಲಾಪ....." ಹೀಗೆ ಅರ್ಥೈಸುತ್ತಾ ಹೋದರೆ ಬೆಳೆಯುತ್ತಾ ಸಾಗುತ್ತದೆ.

No comments:

Post a Comment