Search This Blog

Tuesday 9 January 2018

ಕಾಳಿದಾಸನ ಸುದರ್ಶನನೂ ವಾಕಾಟಕರ ಪ್ರವರಸೇನನು - ಪದ್ಮಾವತೀ ಗುಪ್ತ.

ಕಾಳಿದಾಸನಿಂದ ಬರೆಯಲ್ಪಟ್ಟ ರಘುವಂಶ ಕಾವ್ಯದ 18ನೇ ಸರ್ಗದಲ್ಲಿ ತನ್ನ ಆರನೇ ವರ್ಷಕ್ಕೆ ಸುದರ್ಶನ ಎನ್ನುವ ರಾಜ ಪಟ್ಟಕ್ಕೇರುತ್ತಾನೆ. ಈ ಬಾಲಕನ ಕುರಿತಾಗಿಯ ವರ್ಣನೆಯನ್ನು ಹದಿನೈದು ಪದ್ಯಗಳಲ್ಲಿ ಹಿಡಿದಿಡುತ್ತಾನೆ. ರಘುವಂಶದ ಕೊನೆಯ ಅರಸರ ವಂಶಾವಳಿಯು ವಿಷ್ಣುಪುರಾಣದಲ್ಲಿನ ವಂಶಾವಳಿಗೆ ಸರಿಹೊಂದುತ್ತದೆ. ಆದರೆ ರಘುವಂಶವನ್ನು ಹೊರತು ಪಡಿಸಿದರೆ ಬೇರೆಲ್ಲೂ ಸುದರ್ಶನ ಚಿಕ್ಕವಯಸ್ಸಿಗೆ ಪಟ್ಟವೇರಿದ ಉದಾಹರಣೆ ಸಿಗುವುದಿಲ್ಲ. ಆದುದರಿಂದಲೇ ನಾನಿಲ್ಲಿ ಕಾಳಿದಾಸನ ರಘುವಂಶವನ್ನು ಹಾಗೂ ಸುದರ್ಶನನ್ನು ನೆನಪಿಸಿದ್ದು. ವಾಕಾಟಕರ ವಂಶದಲ್ಲಿನ ಎರಡನೇ ರುದ್ರಸೇನ ಅಕಾಲದಲ್ಲಿ ತೀರಿಕೊಂಡಾಗ ರಾಜನಾಗಿ ಚಿಕ್ಕವಯಸ್ಸಿನ ದಿವಾಕರಸೇನ ಪಟ್ಟವೇರುತ್ತಾನೆ. ಆಗ ಎರಡನೇ ಚಂದ್ರಗುಪ್ತನು ತನ್ನ ಮಗಳಾದ ಪ್ರಭಾವತಿ ಗುಪ್ತಳಿಗೆ ಸಹಾಯಮಾಡಲಿಕ್ಕೆ ತನ್ನ ನಂಬಿಕಸ್ತ ಅಧಿಕಾರಿಗಳನ್ನೂ ಅಲ್ಲಿಗೆ ಕಳುಹಿಸುತ್ತಾನೆ. ಅದರಲ್ಲಿ ಕಾಳಿದಾಸನೂ ಒಬ್ಬನಿದ್ದ ಎನ್ನುವುದು ಒಂದು ಊಹೆ. ಕಾಳಿದಾಸನ ರಘುವಂಶದ ಸುದರ್ಶನನಿಗೆ ದಿವಾಕರಸೇನನೇ ಪ್ರೇರಣೆ ಎನ್ನಲಾಗುತ್ತದೆ. ಆದರೆ ದಿವಾಕರಸೇನನೂ ಅಕಾಲದಲ್ಲಿಯೇ ಮರಣ ಹೊಂದಿದ್ದು ಕೂಡಲೇ ಪ್ರವರಸೇನ ಪಟ್ಟಕ್ಕೆ ಬಂದ. ಈತನೇ ಸೇತುಬಂಧದ ಕವಿ ಎನ್ನಲಾಗುತ್ತದೆ. ಅದೇನೇ ಇರಲಿ ಕಾಳಿದಾಸನ ಕಾಲದ ಬಗ್ಗೆ ನಿಖರತೆ ಇನ್ನೂ ಇಲ್ಲ. ಆತ ಕ್ರಿಸ್ತಪೂರ್ವದಲ್ಲಿಯೇ ಇದ್ದ ಎನ್ನುವುದಕ್ಕೂ ಹಲವು ಉದಾಹರಣೆ ಸಿಗುವುದರಿಂದ ಕಾಳಿದಾಸನ ರಘುವಂಶಕ್ಕೂ ಪ್ರವರಸೇನನಿಗೂ ಹೋಲಿಕೆ ಒಂದು ಕಾಕತಾಳಿಯ. ಇದಲ್ಲದೇ ಸೇತುಬಂಧವನ್ನು ಪ್ರವರಸೇನನ ಹೆಸರಲ್ಲಿ ಕಾಳಿದಾಸನೇ ಬರೆದ ಎನ್ನುವ ಒಂದು ವಾದವೂ ಇದೆ.
ವಾಕಾಟಕ ಪದ್ಮಾವತೀ ಗುಪ್ತ:
ವಾಕಾಟ ರಾಜವಂಶದವರಾದ ಪ್ರವರಪುರ-ನಂದೀವರ್ಧನ ಶಾಖೆಯ ರಾಜ ಎರಡನೇ ರುದ್ರಸೇನ. ಈತ ಸು. ಕ್ರಿ.ಶ. 380 ರಿಂದ 385 ರಾಜನಾಗಿ ಆಡಳಿತ ನಡೆಸಿದ ಎನ್ನುವುದಾಗಿ ತಿಳಿದು ಬರುತ್ತದೆ. ಈತ ಕೇವಲ ಐದು ವರ್ಷಗಳಷ್ಟು ಆಳ್ವಿಕೆ ನಡೆಸಿದರೂ ಪ್ರಭಾವಿಯಾಗಿದ್ದ. ಗುಪ್ತವಂಶದ ಎರಡನೇ ಚಂದ್ರಗುಪ್ತನ ಮಗಳಾದ ಪ್ರಭಾವತಿ ಗುಪ್ತಳನ್ನು ವಿವಾಹವಾದನು. ಅಲ್ಪಾಯುವಾದ ರುದ್ರಸೇನನ ಸಾವಿನಿಂದಾಗಿ ಪ್ರಭಾವತಿಗುಪ್ತಳು ರಾಜ್ಯ ನಡೆಸುವ ಹೊಣೆ ಹೊರಬೇಕಾಯಿತು ಎಂದು ಪೂನಾದ ತಾಮ್ರಪಟ ಶಾಸನಗಳಿಂದ ತಿಳಿದು ಬರುತ್ತದೆ. ಪ್ರಭಾವತಿಗುಪ್ತಳು ಬಹುದೀರ್ಘ ಕಾಲದ ತನಕ ರಾಜಮಾತೆಯಾಗಿ ಆಳುವುದಕ್ಕೆ ಕಾರಣವಾದದ್ದು ಆಕೆಯ ಪುತ್ರರಾದ ದಿವಾಕರಸೇನ ಮತ್ತು ದಾಮೋದರಸೇನ ಮತ್ತು ಪ್ರವರಸೇನರು ಪ್ರಾಪ್ತವಯಸ್ಕರಾಗಿರಲಿಲ್ಲವಾದುದರಿಂದ ಈಕೆಯೇ ಅವರ ಹೆಸರಿನಲ್ಲಿ ಆಡಳಿತ ನಡೆಸಿದಳು.

ಪ್ರಭಾವತಿಗುಪ್ತ 385 ರಿಂದ 405 ರ ವರೆಗೆ ರಾಜಮಾತೆಯಾಗಿ ರಾಜ್ಯಭಾರ ಮಾಡಿದಳು. ನಾಗ ಜನಾಂಗದ ಕುಬೇರನಾಗ ಎನ್ನುವವಳು ಈಕೆಯ ತಾಯಿ. ಈಕೆಯ ರಾಜ್ಯಾಡಳಿತದ ಸಮಯದಲ್ಲಿ ಚಂದ್ರಗುಪ್ತನೇ ಬೆನ್ನೆಲುಬಾಗಿ ನಿಂತು ಆಡಳಿತ ಸೂತ್ರಗಳನ್ನು ಹೇಳಿಕೊಟ್ಟಿದ್ದರಿಂದ ಆಗ ವಾಕಾಟಕರು ಬಹುಮಟ್ಟಿಗೆ ಗುಪ್ತ ಸಾಮ್ರಾಜ್ಯದ ಭಾಗವಾಗಿದ್ದರು. ಈ ಅವಧಿಯನ್ನು ಕೆಲವೆಡೆ ವಾಕಾಟಕ-ಗುಪ್ತ ಕಾಲ ಎಂದು ಕರೆಯಲಾಗುತ್ತದೆ. ಈಕೆಯ ಮಗ ಪ್ರವರಸೇನ ಮಹಾರಾಷ್ಟ್ರೀ ಪ್ರಾಕೃತದಲ್ಲಿ ಸೇತುಬಂಧ ಎನ್ನುವ ಕಾವ್ಯ ಬರೆದಾತ ಎಂದು ಹೇಳಲಾಗುತ್ತದೆ. ಆದರೆ ಈ ಪ್ರವರಸೇನ ಯಾರು ಎಂಬ ವಿಷಯದಲ್ಲಿ ನಾನಾ ವಿವಾದಗಳು ತಲೆದೋರಿವೆ. ಇತಿಹಾಸ ನಾಲ್ವರನ್ನು ಗುರುತಿಸಿದೆ. ಇವರಲ್ಲಿ ಇಬ್ಬರು ಕಾಶ್ಮೀರದವರಾದರೆ, ಇನ್ನಿಬ್ಬರು ಕುಂತಲದೇಶದವರು, ಕುರು ಪಾಂಡವವಂಶದವನಾದ ತೋರಮಾನನ ಮಗನಾದ ಎರಡನೆ ಪ್ರವರಸೇನನೇ ಸೇತುಬಂಧದ ಕರ್ತೃವೆಂದು ಅನೇಕ ವಿದ್ವಾಂಸರ ಅಭಿಪ್ರಾಯ. ಈತನನ್ನು ಕುರಿತು ಅನೇಕ ವಿವರಗಳು ಕಲ್ಹಣನ ರಾಜತರಂಗಿಣಿಯಲ್ಲಿ ದೊರೆಯುತ್ತವೆ. ಆದರೆ ಬ್ಯೂಲ್ಹರ್ ವಾಕಾಟಕ ವಂದ ರುದ್ರಸೇನನ ಮಗನಾದ ಎರಡನೆಯ ಪ್ರವರಸೇನನೇ ಕೃತಿಯ ಕರ್ತೃವೆಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈತನ ಕಾಲದ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ಕ್ರಿ.ಶ. ಒಂದನೆಯ ಶತಮಾನದಿಂದ ಕ್ರಿ.ಶ. ಆರನೆಯ ಶತಮಾನದವರೆಗೂ ಈತನ ಕಾಲವನ್ನು ಹೇಳಲಾಗುತ್ತದೆ. ಬಾಣ ಈತನನ್ನು ಪ್ರಶಂಸೆ ಮಾಡಿರುವುದರಿಂದ ಈತ ಐದನೆಯ ಶತಮಾನದ ಕವಿ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸಮ್ಮತವಲ್ಲ. ವಿತಸ್ತಾ ಅಥವಾ ಇಂದಿನ ಝೀಲಮ್ ನದಿಗೆ ಪ್ರವರಸೇನ ಕಟ್ಟಿಸಿದ ಸೇತುವೆಯ ಸ್ಮಾರಕವಾಗಿ ಈ ಕೃತಿಯನ್ನು ರಚಿಸಲಾಗಿದೆಯೆಂದು ಭಾವಿಸಲಾಗಿದೆ. ಕಾಳಿದಾಸನೇ ಈ ಕೃತಿಯನ್ನು ರಚಿಸಿದನೆಂದೂ ವ್ಯಾಖ್ಯಾನಕಾರ ರಾಮದಾಸನ ಕಲ್ಪನೆ. ಸೇತುಬಂಧಕ್ಕೆ ಸೇತುಕಾವ್ಯ, ದಶಮುಖವಧೆ, ರಾವಣವಧ ಎಂಬ ಹೆಸರುಗಳೂ ಇವೆ. ರಾಮ ಲಂಕೆಯತ್ತ ಹೊರಟಿದ್ದರಿಂದ ಮೊದಲುಗೊಂಡು ಅಯೋಧ್ಯೆಯಲ್ಲಿ ಪಟ್ಟಾಭಿಷಕ್ತನಾಗುವವರೆಗಿನ ಶ್ರೀಮದ್ರಾಮಾಯಣದ ಕಥೆಯು 15 ಆಶ್ವಾಸಗಳಲ್ಲಿ ಈ ಕೃತಿ ವರ್ಣಿಸುತ್ತದೆ. ಈ ಕೃತಿಯ 7 ಹಾಗೂ 8ನೆಯ ಆಶ್ವಾಸಗಳಲ್ಲಿ ಕಪಿಗಳು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿದುದರ ವಿವರವಿದೆ. ಕವಿ ಯಮಕಾಲಂಕಾರದಲ್ಲಿ ತನಗಿರುವ ನೈಪುಣ್ಯವನ್ನು ಮೆರೆದಿದ್ದಾನೆ.

No comments:

Post a Comment