Search This Blog

Wednesday 17 January 2018

ಕಾದಂಬರಿಯ ಬಾಣಭಟ್ಟ ಎಂದೆಂದಿಗೂ ಚಿರಾಯು.....

ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ |
ತ್ರೈಲೋಕ್ಯ ನಗರಾರಂಭ ಮೂಲಸ್ತಂಬಾಯ ಶಂಭವೇ ||
ಪೂರ್ವದಲ್ಲಿ ಹರಿಯುತ್ತಿರುವ ನದಿ ನದಿಯ ದಡದಲ್ಲಿ ನಿಂತು ಆಲಿಸಿದರೆ ಅಲ್ಲಿ ವೇದಘೋಷಗಳ ಧ್ವನಿ, ತರ್ಕವ್ಯಾಕರಣಾದಿಗಳ ಪಾಠಗಳು ಅದು ಶೋಣಾನದಿಯ ದಡದಲ್ಲಿರುವ ಪ್ರೀತಿಕೂಟವೆನ್ನುವ ಅಗ್ರಹಾರವೊಂದರ ಚಿತ್ರಣ. ಚಿತ್ರಭಾನು ಮತ್ತು ರಾಜದೇವಿ ಎನ್ನುವ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದವನೇ ಬಾಣಭಟ್ಟ. ಅದೇ ನದಿಯ ಇನ್ನೊಂದು ದಡದಲ್ಲಿ ಯಷ್ಟಿಗೃಹ ಎನ್ನುವ ಊರಿನ ಸಮೀಪವೇ ರಾಜಾ ಶ್ರೀಹರ್ಷನ ರಾಜ್ಯ ಈತನಿಗೆ ಎರಡನೇ ಶೀಲಾದಿತ್ಯ ಎಂದೂ ಕರೆಯುತ್ತಾರೆ. ಬಾಣ ಶಿಶುವಾಗಿದ್ದಾಗಲೇ ತಾಯಿ ಮರಣಹೊಂದುತ್ತಾಳೆ. ಬಾಣನ ಸಂಸ್ಕಾರಗಳಲ್ಲಿ ಉಪನಯನಾದಿಗಳಾಗಿ ಸ್ನಾತಕತ್ವ ಪಡೆದ ಸ್ವಲ್ಪದರಲ್ಲಿಯೇ ತಂದೆ ಚಿತ್ರಭಾನುವೂ ಮರಣಹೊಂದುತ್ತಾನೆ.
ಬಾಣ ಬೆಳೆದ ವಾತಾವರಣವೇ ಹಾಗಿತ್ತು ಆತನ ಆಪ್ತವಲಯದಲ್ಲಿ, ಆಕಾಲದ ಭಾಷಾ ತಜ್ಞ ವಾರಸೇಣ ಮತ್ತು ಈಶಾನ, ವೀಸಬಾಣ ವೇಣೀಭಾರತನೆಂಬ ವರ್ಣಕವಿಯೂ ಈತನ ಮಿತ್ರರಾಗಿದ್ದರು. ಈತ ಇವರನ್ನೆಲ್ಲಾ ತೊರೆದು ಜುಗುಪ್ಸಿಒತನಾಗಿ ಊರೂರು ಅಲೆದು ಪುನಃ ಊರಿಗೆ ಬಂದಾಗ ಈತನ ವಿದ್ವತ್ತಿನ ಕುರುಹ ರಾಜ ಹರ್ಷನಿಗೆ ತಲುಪುತ್ತದೆ.
ಕ್ರಿಸ್ತಶಕ 606 ರಿಂದ 646ರ ತನಕ ರಾಜ್ಯವಾಳುತ್ತಿದ್ದುದು ಹರ್ಷವರ್ಧನ ಅಥವಾ ಎರಡನೆ ಶಿಲಾದಿತ್ಯ. ಬಾಣನ ಪಾಂದಿತ್ಯಕ್ಕೆ ಮಾರುಹೋದ ಹರ್ಷ ಬಾಣನನ್ನು ತನ್ನ ಆಸ್ಥಾನ ಕವಿಯನ್ನಾಗಿಸಿಕೊಳ್ಳುತ್ತಾನೆ. ಬಾಣ ಅತ್ಯಲ್ಪ ಕಾಲದಲ್ಲಿಯೇ ರಾಜನ ಅತ್ಯಾಪ್ತನಾಗುತ್ತಾನೆ. ಅದೇ ಹರ್ಷಚರಿತ ಎನ್ನುವ ಗದ್ಯಕ್ಕೆ ನಾಂದಿ ಆಗುತ್ತದೆ. ಬಾಣ ಕಾದಂಬರೀ, ಚಂಡೀಶತಕ ಮುಂತಾದವನ್ನು ಬರೆದರೂ ಮುಂದೆ ಜೀವಂತವಾಗಿ ಅವನ ಶ್ಲೋಕ ನಮ್ಮನ್ನಾಳುವುದು ಹರ್ಷಚರಿತದಿಂದ.
ಬಾಣಭಟ್ತನ ಶ್ಲೋಕಗಳಷ್ಟು ಬೇರಾರ ಶ್ಲೋಕವೂ ನಮ್ಮ ಶಸನ ಇತಿಹಾಸದಲ್ಲಿ ಕಂಡುಬರುತ್ತಿಲ್ಲ. ಒಂದು ದೃಷ್ಟಿಯಿಂದ ಬಾಣಭಟ್ಟ ಎಂದೆಂದಿಗೂ ಜೀವಂತ!!. ಹೌದು ಗೋರಖಪುರದ ತಾಮ್ರಪಟ ಶಾಸನದಲ್ಲಿ
ನಮೋಸ್ತು ನಿರ್ಜಿತಾಶೇಷ ಮಹಿಷಾಸುರಘಾತಿನೇ |
ಪಾರ್ವತೀ ಪಾದಪದ್ಮಾಯ ಜಗದಾನಂದ ದಾಯಿನೇ || ಎನ್ನುವುದಾಗಿ ಉಲ್ಲೇಖಗೊಂಡಿದೆ ಇದು ಚಂಡೀ ಶತಕದ ಶ್ಲೋಕ,
ಇನ್ನೊಂದು ಗಯಾದಲ್ಲಿರುವ ನಾಗಾರ್ಜುನಗಿರಿ ಗುಹೆ ಎನ್ನುವಲ್ಲಿ ಗುಹೆಯ ಬಾಗಿಲಿನ ಶಿಲೆಯಲ್ಲಿ
ಉನ್ನಿದ್ರಸ್ಯ ಸರೋರುಹಸ್ಯ ಸಕಲಾಮಾಕ್ಷಿಪ್ಯ ಶೋಭಾಂ ರುಚಾ |
ಸಾವಜ್ಞಂ ಮಹಿಷಾಸುರಸ್ಯ ಶಿರಸಿನ್ಯಸ್ತಃ ಕ್ವಣಂ ನೂಪುರಃ ||
ದೇವ್ಯಾವಸ್ಥಿರ ಭಕ್ತಿ ವಾದ ಸದೃಶೀ ಮುಂಜನ್ಫಲೇ ನಾರ್ಥಿತಾಮ್ |
ದಿಶ್ಯಾದಚ್ಚ ನಖಾಂಶು ಜಾಲ ಜಟಿಲಃ ಪಾದಃ ಪದಂ ಸಂಪದಾಮ್ || ಎನ್ನುವುದಾಗಿ ಬರೆಯಲ್ಪಟ್ಟಿದೆ.
ಹೀಗೆ ಬಾಣ ತನ್ನ ವಿದ್ವತ್ತನ್ನು ಶಾಶ್ವತವಾಗಿ ಜೀವಂತ ಇಟ್ಟದ್ದು ತಿಳಿದು ಬರುತ್ತದೆ. ಆದರೆ ಕ್ರಿ ಶ ೮ನೇ ಶತಮಾನದ ನಂತರ ಬಾಣನ ಹರ್ಷಚರಿತದ ಮಂಗಲಾಚರಣೆಯ ಶ್ಲೋಕವೊಂದು ನಮ್ಮ ಕರ್ನಾಟಕವನ್ನು ಆವರಿಸಿಕೊಂಡಿತು ಅಂದರೆ ತಪ್ಪಾಗಲಾರದು. ಹತ್ತನೇ ಶತಮಾನದ ನಂತರವಂತೂ ಹೆಚ್ಚಿನ ಎಲ್ಲಾ ಶಾಸನಗಳ ಆರಂಭಿಕ ಶ್ಲೋಕ ನಮಸ್ತುಂಗದಿಂದಲೇ ಆರಂಭಗೊಳ್ಳುತ್ತದೆ ಇದು ಸುಮಾರಾಗಿ ೧೮ನೇ ಶತಮಾನದ ತನಕವೂ ಬಳಕೆಯಾಗಿ ಆಮೇಲೆ ಅಲ್ಲಲ್ಲಿ ಕಾಗದ ಪತ್ರಗಳಲ್ಲಿ ಉಳಿದು ಕೊಂಡಿದೆ.
ಆರಂಭ ಕಾಲೀನ ಸಹಸ್ರಮಾನದಲ್ಲಿ ಅಂದರೆ ಹತ್ತನೆ ಶತಮಾನಕ್ಕೂ ಮೊದಲು ಕಾಳಿದಾಸನಿಗೆ ಅನೇಕ ಅಭಿಮಾನಿ ಕವಿಗಳಿದ್ದದ್ದು ಅಲ್ಲಲ್ಲಿ ಕಂಡು ಬರುತ್ತವೆ. ಅನೇಕ ಶಿಲ್ಪಿಗಳು, ಅನೇಕ ಕಲಾಕಾರರು ಮತ್ತು ಕವಿಗಳು ಕಾಳಿದಾಸನನ್ನು ಒಂದಲ್ಲ ಒಂದು ರೀತಿಯಿಂದ ಹೊಗಳಿದ್ದಾರೆ ಮತ್ತು ಅಭಿಮಾನದಿಂದ ತಮ್ಮನ್ನೂ ಸಹ ಕಾಳಿದಾಸ ಎಂದೇ ಹೆಸರಿಸಿಕೊಂಡಿದ್ದಾರೆ. ಇನ್ನು ಕೆಲವರು ತಾವು ಕಾಳಿದಾಸನಿಗೆ ಸಮನಾದ ಕವಿಗಳು ಎಂದಿದ್ದರೆ ಮತ್ತೆ ಕೆಲವರು ಕಾಳಿದಾಸಕಿಂತಲೂ ತಾವು ಕಡಿಮೆಯವರಲ್ಲ ಅವನಿಗಿಂತ ಶ್ರೇಷ್ಠರು ಎಂದವರೂ ಇದ್ದಾರೆ. ಕೆಲವೇ ಕೆಲವು ರಾಜರುಗಳು ತಮ್ಮ ಶಾಸನಗಳಲ್ಲಿ ರಘುವಂಶದ ಮಂಗಲಾಚರಣೆಯನ್ನು ತಾವು ಅಳವಡಿಸಿಕೊಂಡದ್ದು ಕಂಡು ಬರುತ್ತದೆ. ಹೀಗೆ ಕಾಳಿದಾಸ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜನಮಾನಸದಲ್ಲಿದ್ದ. ಸಾಮಾನ್ಯ ೮ನೇ ಶತಮಾನದ ನಂತರದ ಅನೇಕ ಶಾಸನ ಸಾಹಿತ್ಯದಲ್ಲಿ ಹರ್ಷ ಚರಿತದ ಸಾಲುಗಳು ಬಂದಿದ್ದರೂ ಸಹ ಕವಿ ಗೌಣವಾಗಿಯೇ ಉಳಿದ. ಬಾಣಭಟ್ಟನ ಹೆಸರನ್ನು ಯಾವುದೇ ಶಾಸನ ಕವಿ ಉಲ್ಲೇಖಿಸಿದ್ದು ಕಾಣಿಸುತ್ತಿಲ್ಲ. ಕಾಳಿದಾಸನ ಕಾಲಕ್ಕೆ ಮತ್ತು ಅವನ ನಂತರದ ಸಂಸ್ಕೃತ ಸಾಹಿತ್ಯ ಒಂದು ರೀತಿಯಲ್ಲಿ ಶ್ರೀಮಂತಗೊಳ್ಳುತ್ತಾ ಹೋಯಿತು. ಪಾಣಿನೀ ಮಹರ್ಷಿಯ ಶಿಕ್ಷಾದಲ್ಲಿನ ವಿಧಿಗಳನ್ನು ಅಳವಡಿಸಿಕೊಂಡು ಸುಸಂಬದ್ಧವಾಗುತ್ತಾ ಸಾಗಿತು ಅನ್ನಬಹುದು. ಸುಂದರ ಪದರಚನೆ ಆಲಂಕಾರಿಕ ಲಕ್ಷಣಗಳನ್ನು ಹೊತ್ತು ತಂದಿತು ಅಂದರೆ ತಪ್ಪಾಗುವುದಿಲ್ಲ. ಮುಂದೆ ಹತ್ತನೇ ಶತಮಾನದ ತರುವಾಯ ಬಂದ ಪರಮಾರ ವಂಶದ ಭೋಜ ಸ್ವತಃ ಸಂಸ್ಕೃತದ ಪ್ರಕಾಂಡ ಪಂಡಿತನಾಗಿದ್ದ ಆತನ ಆಸ್ಥಾನದಲ್ಲಿಯೂ ಪರಿಣತ ಮತ್ತು ಅತ್ಯಂತ ಶ್ರೇಷ್ಠ ಕವಿಗಳಿದ್ದರು. ಆತನ ಶಾಸನಗಳನ್ನು ಗಮನಿಸುತ್ತಾ ಸಾಗಿದರೆ ವಿದ್ವಜ್ಜನ ಸಮೂಹವೇ ಇದ್ದಿರ ಬಹುದು. ಪದಗಳ ರಚನೆ, ಪದಲಾಲಿತ್ಯ, ಮತ್ತು ಶಾಸನಗಳಲ್ಲಿ ಬಳಕೆಗೊಂಡ ಶ್ಲೋಕಗಳಂತೂ ಅದೊಂದು ಅತ್ಯದ್ಭುತ ಆಸ್ಥಾನವಾಗಿರಲೇ ಬೇಕು ಅನ್ನಿಸುತ್ತದೆ. ಬಹುಭಾಷಾ ಪಾಂಡಿತ್ಯ ಹೊಂದಿದ ಭೋಜ ಎಲ್ಲಿಯೂ ಕಾಳಿದಾಸನನ್ನು ಅಥವಾ ಉಳಿದ ಸಂಸ್ಕೃತ ಕವಿಗಳನ್ನು ಉಲ್ಲೇಖಿಸಿದ್ದು ಕಾಣಸಿಗುವುದಿಲ್ಲ. ಆದರೂ ಇಲ್ಲಿ ಉಜ್ಜಯಿನಿಯ ಶಾಸನದಲ್ಲಿ ತನ್ನ ಹಸ್ತಗಳಿಂದಲೇ ರಚಿಸಿದ ಶಾಸನವಿದು ಎಂದು ಎರಡೆರಡು ಬಾರಿ ಪ್ರಕಟಿಸಿದ್ದಾನೆ.


No comments:

Post a Comment