Search This Blog

Thursday 17 May 2018

ಸ್ಮಶಾನದಲ್ಲರಳಿದ ಹೂವಿನಂತೆ . . . . . . . . . . ಸ್ಮಶಾನ ಸುಮನಾ ಇವ ವರ್ಜನೀಯಾಃ


ಬ್ರಾಹ್ಮಣನೊಬ್ಬನು ಉಜ್ಜಯಿನಿಯನ್ನಾಳುತ್ತಿದ್ದ ರಾಜನ ಬಳಿ ಬಂದು ರಾಜನನ್ನು ಆಶೀರ್ವದಿಸಿ ದೇವರ ವರದಿಂದ ಸಿಕ್ಕಿದ ಫಲ ಇದು ಎಂದು ರಾಜನಿಗೆ ಕೊಡುತ್ತಾ. ರಾಜನೇ ಈ ಹಣ್ನನ್ನು ಯಾರು ಸೇವಿಸುತ್ತಾರೋ ಅವರಿಗೆ ಹುಟ್ಟು ಸಾವುಗಳ ಭಯವಿಲ್ಲದೇ ಸುಖದಿಂದ ರಾಜ್ಯವನ್ನು ಆಳುತ್ತಾರೆ ಆದುದರಿಂದ ಈ ಹಣ್ಣನ್ನು ನೀನೇ ತಿಂದು ಈ ಭೂಮಿಯನ್ನು ಆಳುತ್ತಿರಬೇಕು ಇಲ್ಲಿ ಧರ್ಮ ಸಂಸ್ಥಾಪನೆಯಾಗಬೇಕು ಎಂದು ಹೇಳಿ ಹೊರಟುಹೋಗುತ್ತಾನೆ. ನಾನು ಈ ಹಣ್ಣನ್ನು ತಿಂದು ಚಿರಕಾಲ ಈ ಭೂಮಿಯನ್ನು ಆಳುವುದಾದರೆ ತನ್ನ ಪತ್ನಿ ಅನಂಗಸೇನೆಯು ಬೇಗನೇ ಮರಣ ಹೊಂದುವುದರಿಂದ ಅವಳ ಅಗಲುವಿಕೆಯನ್ನು ನನಗೆ ಸಹಿಸಲು ಸಾಧ್ಯವಾಗದು ಎಂದು ಯೋಚಿಸಿ. ಆಕೆಯೇ ಬದುಕಿರಲಿ ಎಂದು ಅವಳಿಗೆ ತಿನ್ನಲು ಕೊಡುತ್ತಾನೆ. ಆಕೆ ತನ್ನ ಪ್ರೀತಿ ಪಾತ್ರನಾದ ಮಂದರಿಕ ಎನ್ನುವ ಕುದುರೆಯನ್ನು ನೋಡಿಕೊಳ್ಳುವವನಿಗೆ ಕೊಡುತ್ತಾಳೆ. ಆ ಮಂದರಿಕನಿಗೆ ಒಬ್ಬಳು ದಾಸಿ ಪ್ರೇಯಸಿ ಇದ್ದಳು ಆತ ಆ ಹಣ್ಣನ್ನು ಆಕೆ ತಿನ್ನಲಿ ಎಂದು ದಾಸಿಗೆ ಕೊಡುತ್ತಾನೆ. ಆಕೆಗೆ ಇನ್ನೊಬ್ಬ ಪ್ರಿಯಕರನಿರುತ್ತಾನೆ ಆತ ಗೋವುಗಳನ್ನು ಪಾಲಿಸುವ ಗೋಪಾಲಕ. ಆ ಗೋಪಾಲಕನಿಗೆ ಹಣ್ಣನ್ನು ಕೊಡುತ್ತಾಳೆ. ಆ ಗೋಪಾಲಕನಿಗಾದರೂ ಇನ್ನೊಬ್ಬ ಪ್ರೇಯಸಿ ಇರುತ್ತಾಳೆ ಅವಳು ಸಗನಿಯನ್ನು ಹೊತ್ತು ತಿರುಗುವವಳು ಅವಳಿಗೆ ಆ ಹಣ್ಣನ್ನು ಕೊಡುತ್ತಾನೆ. ಆಕೆ ಆ ಹಣ್ಣನ್ನು ತಾನು ಸಂಗ್ರಹಿಸುತ್ತಿದ್ದ ಸಗಣಿಯನ್ನೆಲ್ಲಾ ಬುಟ್ಟಿಯಲ್ಲಿ ಹಾಕಿ ಅದರ ಮೇಲೆ ಈ ಹಣ್ಣನ್ನು ಇಟ್ಟುಕೊಂಡು ಹೋಗುತ್ತಿದ್ದಳು. ಅದೇ ಸಮಯಕ್ಕೆ ರಾಜ ಆ ಮಾರ್ಗದಲ್ಲಿ ಬರುತ್ತಿರುವಾಗ ಆ ಹಣ್ಣನ್ನು ಗಮನಿಸಿದ ಆತನಿಗೆ ಆಶ್ಚರ್ಯವಾಗುತ್ತದೆ. ಆತ ಕೂಡಲೇ ತನಗೆ ಮೊದಲು ಹಣ್ಣನ್ನು ಕೊಟ್ಟ ಬ್ರಾಹ್ಮಣನನ್ನು ಕರೆಯಿಸಿ ಆ ಹಣ್ಣು ಬೇರೆಲ್ಲಿಯಾದರೂ ಸಿಗುತ್ತದೆಯೇ ಎಂದು ಕೇಳುತ್ತಾನೆ. ಅದಕ್ಕೆ ಬ್ರಾಹ್ಮಣ ಹೇಳುತ್ತಾನೆ. ಆ ಹಣ್ಣು ಈ ಲೋಕದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಅದು ದೇವರ ವರ ಪ್ರಸಾದದಿಂದ ಸಿಕ್ಕಿದ್ದು ಎನ್ನುತ್ತಾನೆ. ಆಗ ರಾಜ ಹೇಳುತ್ತಾನೆ. ಆ ಹಣ್ನನ್ನು ಈಗಷ್ಟೇ ರಾಜ ಬೀದಿಯಲ್ಲಿ ಸಗಣಿ ಸಂಗ್ರಹಿಸುವವಳ ಬುಟ್ಟಿಯಲ್ಲಿ ನೋಡಿದೆ ಅನ್ನುವಾಗ ಬ್ರಾಹ್ಮಣ ರಾಜ ಆ ಹಣ್ಣು ನೀನು ತಿಂದಿಲ್ಲವೇ ಎನ್ನುತ್ತಾನೆ. ರಾಜ ತಾನು ತಿನ್ನದೇ ತನ್ನ ಮಡದಿಗೆ ಕೊಟ್ಟುದಾಗಿ ಹೇಳುತ್ತಾನೆ. ಹಾಗಾದರೆ ಮಡದಿಯನ್ನು ವಿಚಾರಿಸು ಎಂದು ಬ್ರಾಹ್ಮಣ ಹೇಳುತ್ತಾನೆ. ರಾಜನು ಮಡದಿಯನ್ನು ಕರೆದು ವಿಚಾರಿಸುತ್ತಾನೆ ಆಗ ನಿಜ ವಿಷಯ ತಿಳಿಯುತ್ತದೆ.
ಏತಾ ಹಸಂತಿ ಚ ರುದಂತಿ ಚ ವಿತ್ತಹೇತೋಃ ವಿಶ್ವಾಸಯಂತಿ ಚ ನರಂ ನ ತು ವಿಶ್ವಸಂತಿ |
ತಸ್ಮಾನ್ನರೇಣ ಕುಲ ಶೀಲವತಾ ಸದೈವ ನಾರ್ಯಃ ಸ್ಮಶಾನ ಸುಮನಾ ಇವ ವರ್ಜನೀಯಾಃ || ವಿಕ್ರಮಾರ್ಕ ಚರಿತಮ್
ಈ ಜನರು ಹಣದ ಆಸೆಗೋಸ್ಕರ ನಗುತ್ತಾರೆ ಅಳುತ್ತಾರೆ, ವಿಶಾಸವನ್ನು ವ್ಯಕ್ತ ಪಡಿಸುತ್ತಾರೆಯೇ ವಿನಃ ವಿಶ್ವಾಸಿಗರಲ್ಲ. ಆದ ಕಾರಣವೇ .................ಹೆಂಗಸರು ಎಂದರೆ ಸ್ಮಶಾನದಲ್ಲಿ ಅರಳಿದ ಹೂವಿನಂತೆ ವರ್ಜನೀಯರು. ಎಂದು ಹೇಳುತ್ತಾ ರಾಜನು
ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ ಸಾಪ್ಯನ್ಯ ಮಿಚ್ಛತಿ ಜನಂ ಸಜನೋನ್ಯ ಸಕ್ತಃ |
ಅಸ್ಮತ್ಕೃತೇಚ ಪರಿ ತುಷ್ಯತಿ ಕಾಚಿದನ್ಯಾ ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ || ನೀತಿ ಶತಕ ೨
ಯಾರನ್ನು ನಾನು ಅತಿಯಾಗಿ ಮನಸ್ಸಿನಲ್ಲಿ ಚಿಂತಿಸಿ ಪ್ರೀತಿಸುತ್ತೇನೆಯೋ ಅವರು ನನ್ನಲ್ಲಿ ವಿರಕ್ತರಾಗಿ ಬೇರೆಯವರಲ್ಲಿ ಆಸಕ್ತರಾದ ಇಂತಹ ವಿಲಾಸೀ ಜೀವನದ ಸ್ತ್ರೀಯರ ಬಾಹ್ಯ ಸೌಂದರ್ಯಕ್ಕೆ ಮನಸೋತು ಮರೌಳಾಗಬೇಡಿ ಅವರಿಗೆ ನನ್ನ ಧಿಕ್ಕಾರ ಎನ್ನುತ್ತಾ ರಾಜ ಭರ್ತೃಹರಿ ರಾಜ್ಯವನ್ನು ಬಿಟ್ಟು ಭೋಗ ಭಾಗ್ಯಕ್ಕಿಂತ ವಾಇರಾಗ್ಯ ಭಾಗ್ಯವೇ ಹೆಚ್ಚಿನದು ಎನ್ನುವುದಾಗಿ ತನ್ನ ತಮ್ಮ ವಿಕ್ರಮನಿಗೆ ರಾಜ್ಯಭಾರವನ್ನು ವಹಿಸಿ ಹೊರಟು ವಾನಪ್ರಸ್ಥವನ್ನು ಕೈಗೊಳ್ಳುತ್ತಾನೆ ಎನ್ನುವುದಾಗಿ ವಿಕ್ರಮಾರ್ಕ ಚರಿತೆಯಲ್ಲಿ ಹೇಳಲ್ಪಟ್ಟಿದೆ.
ಭರ್ತೃಹರಿಯ ಕುರಿತಾಗಿ ಅನೇಕ ದಂತಕಥೆಗಳು ಕೇಳಿ ಬರುತ್ತವೆ. ಈ ಮೇಲಿನ ವಿಚಾರದಲ್ಲಿ ಸಂದೇಹಗಳು ಕಾಡುತ್ತವೆ.
ಒಂದು ಸ್ತ್ರೀಯಿಂದಾಗಿ ವೈರಾಗ್ಯ ಹೊಂದಿದ ಕುರಿತು ಸಂದೇಹ ವ್ಯ್ಕ್ತ ಪಡಿಸುತ್ತಾ ಲೋಕಾಪವಾದಕ್ಕೆ ಅಂಜಿದ ರಾಮ ತನ್ನ ಹೆಂಡತಿಯನ್ನೇ ಕಾಡಿಗೆ ಕಳುಹಿಸಿದನೇ ಹೊರತು ತನ್ನ ರಾಜಧರ್ಮದಿಂದ ವಿಮುಖನಾಗಿ ತಾನೇ ತೆರಳಲಿಲ್ಲ. ಅಂತಹ ರಾಮನಿಗಿಂತ ಈತ ಮಿಗಿಲಾದನೇ ಎನ್ನುವ ಅಪವಾದದ ಮಾತನ್ನೂ ಆಡುವವರ ಸಂಖ್ಯೆ ಹೇರಳವಾಗಿದೆ.. ಅದೇನೇ ಇರಲಿ ಭರ್ತೃಹರಿ ರಾಜನಾಗಿ ಕೊಟ್ಟದ್ದಕ್ಕಿಂತಲೂ ಆತ ದಾರ್ಶನಿಕನಾಗಿ ಕೊಟ್ಟದ್ದೇ ಬಹಳ ಮಹತ್ವ ಪಡೆಯುತ್ತದೆ. ರಾಜಾ ಬಹುಪತ್ನೀ ವಲ್ಲಭ ಎನ್ನುವ ಮಾತನ್ನು ನಿದರ್ಶನ ಕೊಟ್ಟು ಹೇಳುವುದು ಸುಲಭ ರಾಜನಿಗೆ ಭೋಗಲಾಲಸೆಗಳಿಗೂ ಕುಂದಿರಲಿಲ್ಲ, ಎಂದು ಆದರೆ ವೈರಾಗ್ಯಕ್ಕೆ ಅವೇ ಮುಳುವಾಗಬಹುದೆನ್ನುವುದೂ ಅಷ್ಟೇ ಸತ್ಯ. ಅದೇನೇ ಇರಲಿ ಅದರ ವಿಮರ್ಶೆ ನನಗೆ ಅವಶ್ಯ ಎನ್ನಿಸುವುದಿಲ್ಲ.
ಒಂದು ಕಡೆ ಒಂದು ಶ್ಲೋಕದಲ್ಲಿ
ವಿಕ್ರಮವಿರಾಗ್ತದ್ಯುತಿಭಿಃ ಸ್ತುತಿಪಾತ್ರಮೇವ ಭರ್ತೃಹರಿಃ |
ಏಕೋಪಿಚ ಯಶ್ಚತುರಶ್ಚತುರೋಪಿ ಹರಿಂ ಸ್ವಯಂ ಸಮತಿಶೇತೆ ||
ಭರ್ತೃಹರಿ ಎನ್ನುವವನು ನಾಲ್ಕು ಹರಿಗಳನ್ನು ಮೀರಿಸಿದವನಂತೆ, ಪರಾಕ್ರಮದಲ್ಲಿ ವಿಷ್ಣುವನ್ನೂ, ಸನ್ಯಾಸದಲ್ಲಿ ಋಷಭಕುಮಾರನನ್ನೂ, ಐಶ್ವರ್ಯದಲ್ಲಿ ಇಂದ್ರನನ್ನೂ, ತೇಜಸ್ಸಿನಲ್ಲಿ ಸೂರ್ಯನನ್ನೇ ಮೀರಿಸಿದ್ದನಂತೆ. ಈತ ಶತಕ ತ್ರಯಗಳನ್ನಲ್ಲದೇ ಪತಂಜಲಿಯ ಭಾಷ್ಯಕ್ಕೆ ಕಾರಿಕೆಗಳನ್ನು ಬರೆದಿದ್ದಾನೆ.
ಅರ್ವಾಚೀನ ಕೋಶದಲ್ಲಿ ಭರ್ತೃಹರಿಯ ತಂದೆ ವೀರಸೇನ ಎಂತಲೂ, ಈತನು ಗಂಧರ್ವನೆಂತಲೂ ವರ್ಣಿಸಲ್ಪಟ್ಟಿದೆ. ಈತನಿಗೆ ಭರ್ತೃಹರಿ, ವಿಕ್ರಮಾದಿತ್ಯ, ಸುಭಟವೀರ್ಯ, ಮೈನಾವತಿ ಎನ್ನುವ ನಾಲ್ವರು ಮಕ್ಕಳಿದ್ದರಂತೆ. ಜಂಭೂದ್ವೀಪದ ರಾಜ ನ ಒಬ್ಬಳೇ ಮಗಲಾದ ಸುಶೀಲಾ ಎನ್ನುವವಳೇ ಈತನ ತಾಯಿ ಎನ್ನಲಾಗುತ್ತದೆ. ಜಂಭೂದ್ವೀಪದ ರಾಜನಿಗೆ ಗಂದು ಮಕ್ಕಳಿಲ್ಲದ್ದರಿಂದ ಮೊಮ್ಮಗನಾದ ಭರ್ತೃಹರಿಗೆ ರಾಜ್ಯವನ್ನೊಪ್ಪಿಸಿದಾಗ ಆತ ಉಜ್ಜಯಿನಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿ ಆಮೇಲೆ ವಿಕ್ರಮಾದಿತ್ಯನಿಗೆ ರಾಜ್ಯ ಒಪ್ಪಿಸಿ ತಾನು ರಾಜ್ಯ ತೊರೆದು ಹೋದ ಎಂತ ತಿಳಿದು ಬರುತ್ತದೆ. ಆದರೆ ಇನ್ನೊಂದು ಕಡೆ ಹೇಳುವಂತೆ ಈತನ ತಂದೆಯ ಹೆಸರು ಗಂಧರ್ವಸೇನ, ಗಂಧರ್ವ ಸೇನನಿಗೆ ನಾಲರು ಮಡದಿಯರು ಇವರಲ್ಲಿ ಮೊದಲು ಹುಟ್ಟಿವನೇ ಭರ್ತೃಹರಿ ಕೊನೆಯವನೇ ವಿಕ್ರಮಾದಿತ್ಯ ಎನ್ನಲಾಗುತ್ತದೆ.
ಈತನ ಗ್ರಂಥಗಳು ವಾಕ್ಯಪದೀಯ ಮತ್ತು ಸುಭಾಷಿತ ತ್ರಿಶತೀ. ವಾಕ್ಯಪದೀಯವು ವ್ಯಾಕರಣಶಾಸ್ತ್ರದ ದಾರ್ಶನಿಕ ತತ್ತ್ವಗಳನ್ನು ವಿವರಿಸುತ್ತದೆ. ಗ್ರಂಥದಲ್ಲಿ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದ ಸುಮಾರು 2,000 ಶ್ಲೋಕಗಳಿವೆ. ಗ್ರಂಥದಲ್ಲಿ ಬ್ರಹ್ಮಕಾಂಡ, ಆಗಮಕಾಂಡವೆಂದೂ ಪದಕಾಂಡವೆಂದು ಮೂರು ವಿಭಾಗಗಳಿವೆ. ಬ್ರಹ್ಮಕಾಂಡಕ್ಕೆ ಆಗಮಕಾಂಡವೆಂದೂ ಪದಕಾಂಡಕ್ಕೆ ಪ್ರಕೀರ್ಣಕಾಂಡವೆಂದೂ ಹೇಳುತ್ತಾರೆ. ಇದು ವಾಕ್ಯ ಮತ್ತು ಪದವನ್ನು ಪ್ರಧಾನವನ್ನಾಗಿಸಿ ಬರೆದ ಗ್ರಂಥ ಆದುದರಿಂದ ವಾಕ್ಯಪದೀಯ ಎನ್ನಲಾಗಿದೆ.
ವಾಕ್ಯಪದೀಯದಲ್ಲಿ ಪಾಣಿನಿಯ ಅಷ್ಟಾಧ್ಯಾಯಿ, ಕಾತ್ಯಾಯನನ ವಾರ್ತಿಕ ಮತ್ತು ಪತಂಜಲಿಯ ಮಹಾಭಾಷ್ಯಗಳಲ್ಲಿ ಕಂಡುಬರುವ ದಾರ್ಶನಿಕ ತತ್ತ್ವಗಳನ್ನು ಒಂದೆಡೆ ಕ್ರೋಢೀಕರಿಸಿ ಬೇರೆ ಬೇರೆ ದೃಷ್ಟಾಂತ, ಯುಕ್ತಿಗಳಿಂದ ವಿಸ್ತಾರವಾಗಿ ನಿರೂಪಿಸಲಾಗಿದೆ. ಪತಂಜಲಿಗಿಂತ ಪ್ರಾಚೀನನಾದ ವ್ಯಾಡಿ ಬರೆದಿದ್ದ 'ಸಂಗ್ರಹ' ಎಂಬ ಗ್ರಂಥದಿಂದ ಅನೇಕ ಕಾರಿಕೆಗಳನ್ನು ಇದರಲ್ಲಿ ಉದಾಹರಿಸಿದ್ದಾನೆ. ವಾಕ್ಯ ಪದೀಯದಲ್ಲಿರುವ ವಿಷಯ ಗಂಭೀರವಾದದ್ದು. ಬರೆದ ಶೈಲಿ ಕಠಿಣವೆಂದೇ ಹೇಳಬೇಕು. ಕೈಯ್ಯಟ, ಭಟ್ಟೋಜೀದೀಕ್ಷಿತ, ನಾಗೇಶಭಟ್ಟ ಮುಂತಾದ ವೈಯಾಕರಣಿಗಳು ವಾಕ್ಯಪದೀಯವನ್ನು ಅತ್ಯಂತ ಪ್ರಾಮಾಣಿಕವೆಂದು ಗೌರವಿಸಿ ತಮ್ಮ ಗ್ರಂಥಗಳಲ್ಲಿ ಇದರಿಂದ ವಾಕ್ಯಗಳನ್ನು ತೆಗೆದುಕೊಂಡಿದ್ದಾರೆ. ಶಬ್ದದ ಮಾಹಾತ್ಮ್ಯ; ಶಬ್ದ ನಿಷ್ಪತ್ತಿಯಲ್ಲಿರುವ ಮತಭೇದ, ಅಸಾಧುಶಬ್ದಗಳ ಸ್ವರೂಪ; ಸರ್ವಶಾಸ್ತ್ರಗಳಿಗೂ ಶಬ್ದಶಾಸ್ತ್ರ ಆಧಾರ ಮುಂತಾದ ವಿಷಯಗಳು ಬ್ರಹ್ಮಕಾಂಡದಲ್ಲಿ ನಿರೂಪಿಸಲ್ಟಟ್ಟಿದೆ.
ವಾಕ್ಯಕಾಂಡದಲ್ಲಿ ವಾಕ್ಯವೆಂದರೇನೆಂದು ವಿಚಾರಮಾಡಿ ಅರ್ಥಜ್ಞಾನ ವಾಕ್ಯದಿಂದ ಆಗುತ್ತದೆಯೇ ಎಂದು ವಿಮರ್ಶಿಸಿ ವಾಕ್ಯದಿಂದಲೇ ಅರ್ಥಜ್ಞಾನವಾಗುತ್ತದೆ ಎಂದು ನಿರ್ಣಯಿಸಲಾಗಿದೆ. ಶಬ್ದವನ್ನು ಪ್ರಕೃತಿಪ್ರತ್ಯಯಗಳಾಗಿ ವಿಂಗಡಿಸುವುದು ಅಸಾಧ್ಯ; ಪದಗಳಿಗೂ ವಾಕ್ಯಕ್ಕೂ ಇರುವ ದ್ಯೋತಕಗಳೂ ಹೌದು, ವಾಚಕಗಳೂ ಹೌದು; ಪದಗಳಿಗೂ ವಾಕ್ಯಕ್ಕೂ ಇರುವ ಸಂಬಂಧ ಮುಂತಾದ ವಿಚಾರಗಳನ್ನು ಚೆನ್ನಾಗಿ ವಿವೇಚನೆ ಮಾಡಲಾಗಿದೆ.
ಪದಕಾಂಡದಲ್ಲಿ 14 ಸಮುದ್ದೇಶಗಳಿವೆ. ಮೊದಲನೆಯದು ಜಾತಿಸಮುದ್ದೇಶ. 14ನೆಯದು ವೃತ್ತಿಸಮುದ್ದೇಶ. ಶಬ್ದದ ಶಕ್ಯಾರ್ಥ ಜಾತಿಯೇ ವ್ಯಕ್ತಿಯೆ? ಶಕ್ತಿ ಸ್ವರೂಪ, ಕ್ರಿಯಾಸ್ವರೂಪ , ಕಾಲದ ಲಕ್ಷಣ, ಸಂಖ್ಯಾವಿಚಾರ, ಆತ್ಮನೇಪದ ಪರಸ್ಮೈಪದಗಳ ಅರ್ಥಭೇದ ಲಿಂಗ ಕಾರಕ-ಸಮಾಸಾದಿ ವೃತ್ತಿಗಳ ವಿಮರ್ಶೆಗಳು ಕಾಂಡದಲ್ಲಿ ನಿರೂಪಿಸಲ್ಪಟ್ಟಿವೆ. ವ್ಯಾಕರಣಶಾಸ್ತ್ರದ ನಾನಾಸ್ಥಳಗಳಲ್ಲಿ ಹರಡಿರುವ ಪ್ರಕೀರ್ಣ ವಿಷಯಗಳನ್ನು ಚರ್ಚಿಸಿರುವುದರಿಂದ ಪದಕಾಂಡಕ್ಕೆ ಪ್ರಕೀರ್ಣಕಾಂಡವೆಂದೂ ಹೆಸರಿದೆ.
ವ್ಯಾಖ್ಯಾನಗಳು ವಾಕ್ಯಪದೀಯಕ್ಕೆ ಭರ್ತೃಹರಿಯೇ ಸ್ವತಃ ವೃತ್ತಿಯನ್ನು ಬರೆದಿದ್ದಾನೆ. ಈಗ ಬ್ರಹ್ಮಕಾಂಡಕ್ಕೆ ಆತ ಬರೆದ ವೃತ್ತಿ ಮಾತ್ರ ದೊರಕುತ್ತದೆ. ವಾಕ್ಯಪದೀಯದ 2 ಕಾಂಡಗಳಿಗೆ ವ್ಯಾಖ್ಯಾನ ಬರೆದಿದ್ದಾನೆ. ಭರ್ತೃಹರಿ ವೃತ್ತಿಸಹಿತವಾದ ಪ್ರಥಮಕಾಂಡವನ್ನು ವೃಷಭದೇವ ವ್ಯಾಖ್ಯಾನ ಬರೆದಿದ್ದಾನೆ. ಈತ ಎಲ್ಲ ಕಾಂಡಗಳಿಗೂ ಪ್ರಕಾಶ ಎಂಬ ವ್ಯಾಖ್ಯಾನ ಬರೆದಿದ್ದಾನೆ.
ಆದರೆ ವಾಕ್ಯಪದೀಯದ ಕೆಲವು ಭಾಗ ದೊರೆಯುವುದಿಲ್ಲ. ಲಕ್ಷಣ ಸಮುದ್ದೇಶದಲ್ಲಿ ಲಕ್ಷಣಗಳ ಸ್ವರೂಪ ವಿಸ್ತಾರವಾಗಿ ಸಮಾಲೋಚಿಸಲ್ಪಡುತ್ತದೆಯೆಂದು ಭರ್ತೃಹರಿಯೇ ಹೇಳಿದ್ದಾನೆ. ಲಕ್ಷಣ ಸಮುದ್ದೇಶ ಈಗ ದೊರೆಯುವುದಿಲ್ಲ. ಇದು ಪುಣ್ಯರಾಜನಿಗೂ ದೊರಕಿರಲಿಲ್ಲ. ಹಾಗೆಯೇ ಬಾಧಾಸಮುದ್ದೇಶ ಎಂಬ ಭಾಗವೂ ಉಪಲಬ್ಧವಿಲ್ಲ. ಇದು ಪುಣ್ಯರಾಜನಿಗೆ ಉಪಲಬ್ಧವಿತ್ತು. ಗ್ರಂಥದ ಸಮಾಪ್ತಿಯಲ್ಲಿ "ಇತಿ ಶ್ರಿಹರಿವೃಷಭಮಹಾವೈಯಾಕರಣವಿರಚಿತೇ ವಾಕ್ಯಪದೀಯೇ" ಎಂದು ಉಲ್ಲೇಖವಿರುತ್ತದೆ. ವೃಷಭಶಬ್ದ: ಶ್ರೇಷ್ಠವಾಚೀ. ಸುಭಾಷಿತ ತ್ರಿಶತೀ : ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳೆಂಬ ಮೂರು ಶತಕಗಳಿವೆ. ಒಂದೊಂದು ಶತಕದಲ್ಲಿ 100 ಶ್ಲೋಕಗಳಂತೆ ಒಟ್ಟು 300 ಶ್ಲೋಕಗಳಿವೆ.
ಗುಣವದಗುಣವದ್ವಾ ಕುರ್ವತಾ ಕಾರ್ಯಜಾತಂ ಪರಿಣತಿರವಧಾರ್ಯಾ ಯತ್ನತಃ ಪಂಡಿತೇನ |
ಅತಿ ರಭಸ ಕೃತಾನಾಂ ಕರ್ಮಣಾಮಾವಿಪತ್ತೇರ್ಭವತಿ ಹೃದಯದಾಹೀ ಶಲ್ಯತುಲ್ಯೋ ವಿಪಾಕಃ || ನೀತಿ ಶತಕ ೬೯
ವಿವೇಕಿಯಾದವನು ತಾನು ಮಾಡಬೇಕೆನ್ನುವ ಕಾರ್ಯದ ಪರಿಣಾಮವು ಹೇಗಾಗುವುದೆಂಬುದನ್ನು ಸಾವಧಾನವಾಗಿ ಯೋಚಿಸಿ ಆರಂಭಿಸಬೇಕು. ಹಾಗೆ ವಿವೇಕ ಶೂನ್ಯನಾಗಿ ಆರಂಭಿಸಿದ ಕಾರ್ಯದ ಪರಿಣಾಮ ಹೃದಯವನ್ನೇ ಸುಟ್ಟು ಸಂಕಟಗೊಳಿಸುವಂತಹ ಶೂಲದಂತಾಗುವುದು. ನೀತಿ ಶತಕದ ಒಂದು ಶ್ಲೋಕ.


No comments:

Post a Comment