Search This Blog

Friday 25 May 2018

ಪೈಶಾಚದ "ಗುಣಾಢ್ಯ" ಮತ್ತು ಕನ್ನಡದ "ದುರ್ವಿನೀತ" ಮಹಾರಾಜ.


ಒಂದು ದಿನ ಕಪಾಲಿ(ಶಿವ)ಯು ತನ್ನ ಪತ್ನಿ ಪಾರ್ವತಿಯೊಂದಿಗೆ ವಿನೋದದಿಂದ ವಿಹರಿಸುತ್ತಿರುವಾಗ ಪಾರ್ವತಿಯು ಶಿವನಲ್ಲಿ ಕೇಳಲು ಸೊಗಸಾದ ರಂಜನೀಯವಾದ ಒಂದು ಕಥೆಯನ್ನು ಹೇಳು ಎಂದು ಕೇಳುತ್ತಾಳೆ. ಶಿವನು ಅದಕ್ಕೊಪ್ಪಿ ಅತ್ಯಂತ ಗುಟ್ಟಾದ "ಸಪ್ತ ವಿದ್ಯಾಧರಚರಿತೆ" ಎನ್ನುವ ಕಥೆಯನ್ನು ಹೇಳುತ್ತಾನೆ. ಶಿವನ ಗಣದಲ್ಲೊಬ್ಬನಾದ ಪುಷ್ಪದಂತ ಎನ್ನುವವನು ಕಥೆಯನ್ನು ಮರೆಯಲ್ಲಿ ನಿಂತು ಕೇಳಿಕೊಳ್ಳುತ್ತಾನೆ. ಕಥೆಯನ್ನು ತನ್ನ ಮಡದಿ ಜಯೆ ಎನ್ನುವವಳಿಗೆ ಹೇಳುತ್ತಾನೆ. ಜಯೆ ಎನ್ನುವವಳು ಇದು ತುಂಬಾ ರಹಸ್ಯವಾದ ಕಥೆ ಇದನ್ನು ಯಾರಿಗೂ ಹೇಳಕೂಡದು ಎಂದು ನೇರವಾಗಿ ಪಾರ್ವತಿಯಲ್ಲಿ ಹೇಳುತ್ತಾಳೆ. ಪಾರ್ವತಿಗೆ ಇದನ್ನು ಕೇಳಿ ಕೋಪ ಬರುತ್ತದೆ ಆಕೆ ಪುಷ್ಪದಂತನನ್ನು ಕರೆದು ನನ್ನ ಅಂತರಂಗದಲ್ಲಿ ಹೇಳಿದ ಕಥೆಯನ್ನು ಕದ್ದು ಆಲಿಸಿ ಅದನ್ನು ಬಹಿರಂಗ ಪಡಿಸಿದ್ದಕ್ಕಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟು ಎಂದು ಶಪಿಸುತ್ತಾಳೆ. ಅದನ್ನು ಕೇಳಿಸಿಕೊಂಡು ಪುಷ್ಪದಂತನು ದುಖಿಸುತ್ತಿರುವಾಗ ಮಾಲ್ಯವಂತ ಎನ್ನುವ ಇನ್ನೊಬ್ಬ ಗಣ ಪುಷ್ಪದಂತನ ಮಿತ್ರ ಪಾರ್ವತಿಯಲ್ಲಿ ತನ್ನ ಮಿತ್ರನ ತಪ್ಪನ್ನು ಮನ್ನಿಸು ನಿನ್ನದೇ ಮಕ್ಕಳಲ್ಲವೇ ನಾವು ಎನ್ನುವುದಾಗಿ ಅಂಗಲಾಚುತ್ತಾನೆ. ಪಾರ್ವತಿಯ ಕೋಪ ಇಮ್ಮಡಿಯಾಗಿ ಆತನನ್ನೂ ಶಪಿಸುತ್ತಾಳೆ ಆತನೂ ಭೂಮಿಯಲ್ಲಿ ಮನುಷ್ಯಜನ್ಮ ಪಡೆಯುವಂತೆ. ಪುಷ್ಪದಂತನ ಮಡದಿ ಜಯಾ ಎನ್ನುವವಳಿಗೆ ವಿಷಯ ತಿಳಿದು ಆಕೆ ದುಖಿತಳಾಗುತ್ತಾಳೆ. ಜಯೆಯು ಪುಷ್ಪದಂತ ಮತ್ತು ಮಾಲ್ಯವಂತರನ್ನು ಕರೆದುಕೊಂಡು ಬಂದು ಪಾರ್ವತಿಯಲ್ಲಿ ಶಾಪವಿಮೋಚನೆಯ ದಾರಿಯನ್ನು ಕೇಳುತ್ತಾಳೆ. ಆಗ ಕೋಪಗೊಂಡಿದ್ದ ಪಾರ್ವತಿ ಪ್ರಸನ್ನಳಾಗಿ ಶಾಪವಿಮೋಚನೆಯನ್ನು ಹೇಳುತ್ತಾಳೆ. "ಸುಪ್ರತೀಕ" ಎನ್ನುವ ಯಕ್ಷನೊಬ್ಬ ಕುಬೇರನ ಶಾಪದಿಂದ ಪಿಶಾಚ ಜನ್ಮದಿಂದ ಕಾಣಭೂತಿ ಎನ್ನುವ ಹೆಸರಿನಿಂದ ವಿಂದ್ಯಾಟವಿಯಲ್ಲಿ ವಾಸಮಾಡುತ್ತಿದ್ದಾನೆ. ಪುಷ್ಪದಂತನು ಅವನನ್ನು ನೋಡಿದ ಕೂಡಲೇ ಪೂರ್ವ ಜನ್ಮದ ಸ್ಮರಣೆ ಉಂಟಾಗಿ "ಸಪ್ತವಿದ್ಯಾಧರ ಚರಿತೆ"ಯನ್ನು ಅವನಿಗೆ ಹೇಳಿದಾಗ ಶಾಪ ವಿಮೋಚನೆಯಾಗುವುದು ಎನ್ನುತ್ತಾಳೆ. ಈ ಕಥೆಯನ್ನು ಕೇಳಿಸಿಕೊಂಡ ಕಾಣಭೂತಿಯು ಮಾಲ್ಯವಂತನಿಗೆ ಹೇಳಿ ಅದನ್ನು ಮಾಲ್ಯವಂತನು ಲೋಕ ಪ್ರಸಿದ್ಧಿ ಗೊಳಿಸಿದ ಕೂಡಲೇ ಅವನ ಶಾಪವೂ ವಿಮೋಚನೆಯಾಗುವುದು ಎಂದು ಶಾಪವಿಮೋಚನೆಯ ದಾರಿ ತಿಳಿಸಿದಳು.
ದೇವಿಯ ಶಾಪದಂತೆ ಪುಷ್ಪದಂತನು 'ವರರುಚಿ' ಅಥವಾ 'ಕಾತ್ಯಾಯನ' ಎನ್ನುವ ಹೆಸರಿನಿಂದ ಭೂಲೋಕದಲ್ಲಿ ಹುಟ್ಟಿ ಸಕಲವಿದ್ಯೆಗಳನ್ನು ಕಲಿತು ಅವುಗಳಲ್ಲಿ ಪಾರಂಗತನಾಗಿ ನಂದರಾಜರಲ್ಲಿ ಸೇರಿಕೊಳ್ಳುತ್ತಾನೆ. ಆದರೆ ಕೆಲವೇ ಸಮಯದಲ್ಲಿ ಆತನಿಗೆ ಸಾಂಸಾರಿಕ ಸುಖದಲ್ಲಿ ಜುಗುಪ್ಸೆ ಬರುತ್ತದೆ. ಆತ ವಿಂದ್ಯಾಟವಿಯನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ವಿಂಧ್ಯವಾಸಿನೀ ದೇವಿಯನ್ನು ಪೂಜಿಸಿ ಅರ್ಚಿಸಿ ದಿನವನ್ನು ಕಳೆಯುತ್ತಿರುವಾಗ ಒಂದು ದಿನ ವಿಂಧ್ಯವಾಸಿನಿಯು ಕನಸ್ಸಿನಲ್ಲಿ ಬಂದು "ವರರುಚಿ ನೀನು ಇಲ್ಲಿಯೇ ವಾಸಿಸುತ್ತಿರುವ ಕಾಣಭೂತಿ ಎನ್ನುವ ಪಿಶಾಚವನ್ನು ಕಾಣು" ಎಂದು ಹೇಳುತ್ತಾಳೆ. ಮರುದಿನವೇ ವರರುಚಿ ಕಾಡಿನಲ್ಲಿ ಕಾಣಭೂತಿಯನ್ನು ಹುಡುಕುತ್ತಿರುವಾಗ ಒಂದು ಮರದ ಕೆಳಗೆ ಪಿಶಾಚಗಳ ದೊಡ್ದ ಗುಂಪನ್ನೇ ಕಾಣುತ್ತಾನೆ. ಆಗ ಅಲ್ಲಿ ಕಣಭೂತಿಯನ್ನು ಕಂಡು ಕಾಣಭೂತಿಗೆ "ಸಪ್ತವಿಧ್ಯಾಧರ ಚರಿತೆ"ಯನ್ನು ಹೇಳಲು ಅವನ ಶಪ ವಿಮೋಚನೆಯಾಗುತ್ತದೆ. ಆಗ ಪಿಶಾಚವು ವರರುಚಿಯ ಹಿಂದಿನ ವೃತ್ತಾಂತವನ್ನೆಲ್ಲಾ ತಿಳಿದುಕೊಳ್ಳುತ್ತದೆ. ತಾನು ಪುಷ್ಪದಂತ ಎನ್ನುವ ಗಣನೆಂದು ಹೇಳುತ್ತಾನೆ ಮತ್ತು ಇನ್ನು ಮುಂದೆ ನನ್ನಂತೆಯೇ ಶಾಪಗ್ರಸ್ತನಾದ ಮಾಲ್ಯವಂತ ನೆನ್ನುವವನು 'ಗುಣಾಡ್ಯ'ನೆನ್ನುವ ಬ್ರಾಹ್ಮಣನಾಗಿ ಹುಟ್ಟಿ ಸಾತವಾಹನರ ಮಂತ್ರಿಯಾಗಿದ್ದಾನೆ. ಆತ ಶರ್ವವರ್ಮ ಎನ್ನುವವನ ವಾದದಲ್ಲಿ ಬೇಸರಗೊಂಡು ಇನ್ನು ಮುಂದೆ ಸಂಸ್ಕೃತ ಪ್ರಾಕೃತ ಮತ್ತು ದೇಶಭಾಷೆಗಳಲ್ಲಿ ಯಾವುದೇ ಕೃತಿಯನ್ನು ಬರೆಯುವುದಿಲ್ಲವೆಂದು ಶಪಥ ಮಾಡಿ ವಿಂಧ್ಯಾರಣ್ಯಕ್ಕೆ ಬರುತ್ತಾನೆ ಆತ ನಿನ್ನನ್ನು ಭೇಟಿಯಾದಾಗ ಈ "ಸಪ್ತವಿದ್ಯಾಧರ ಚರಿತ"ವನ್ನು ಅವನಿಗೆ ಹೇಳಿದಾಗ ಅವನ ಶಪವಿಮೋಚನೆಯೂ ಆಗುತ್ತದೆ ನೀನೂ ಪಿಶಾಚ ಜನ್ಮದಿಂದ ಮುಕ್ತನಾಗುವೆ ಎಂದು ಬದರಿಕಾಶ್ರಮಕ್ಕೆ ತೆರಳುತ್ತಾನೆ. ಸ್ವಲ್ಪ ಸಮಯದಲ್ಲಿಯೇ ಮಾಲ್ಯವಂತನು ಶರ್ವವರ್ಮನೆನ್ನುವವನಲ್ಲಿ ಪಂಥಾಹ್ವಾನ ಮಾಡಿ ವಿಂಧ್ಯಾಟವಿಗೆ ಬರುತ್ತಾನೆ ಅಲ್ಲಿ ತಿರುಗುತ್ತಿರುವಾಗ ಕಾಣಭೂತಿ ಎದುರಾಗುತ್ತನೆ. ಆಗ ಮಾಲ್ಯವಂತನಿಗೆ ಪೂರ್ವಜನ್ಮ ಸ್ಮರಣೆ ಬಂದು. ಹಿಂದೆ ಪುಷ್ಪದಂತನು ನಿನಗೆ ಹೇಳಿದ ಕಥೆಯನ್ನು ತನಗೆ ಹೇಳುವಂತೆ ಕೇಳಿಕೊಂಡಾಗ ಪಿಶಾಚವು ಗುಣಾಢ್ಯನಲ್ಲಿ ನಿನ್ನ ವೃತ್ತಾಂತವನ್ನು ತಿಳಿಸು ಎಂದಾಗ ಗುಣಾಡ್ಯನು ಅವನ ಕಥೆ ಹೇಳುತ್ತಾನೆ.
ಪ್ರತಿಷ್ಟಾನಗರದಲ್ಲಿ ಸೋಮಶರ್ಮ ಎನ್ನುವವನಿಗೆ ವತ್ಸ ಮತ್ತು ಗುಲ್ಮ ಎನ್ನುವ ಇಬ್ಬರು ಗಂದು ಮಕ್ಕಳೂ ಶ್ರುತಾರ್ಥೆ ಎನ್ನುವ ಹೆಣ್ಣು ಇದ್ದರು. ಆ ಶ್ರುತಾರ್ತೆಯ ಮಗನೇ ನಾನು. ನನ್ನ ತಾಯಿಗೆ ಬಾಲ್ಯದಲ್ಲಿಯೇ ಮಾತಾ ಪಿತೃ ವಿಯೋಗ ಉಂಟಾಗಿ ಆಕೆ ಸಹೋದರರ ಜೊತೆ ಬೆಳೆದವಳು. ವಾಸುಕೀ ಎನ್ನುವವನ ಅಣ್ನನ ಮಗ ಕೀರ್ತಿಸೇನನನ್ನು ಮದುವೆಯಾಗಿ ನನ್ನನ್ನು ಪಡೆದಳು. ನನ್ನ ಜನ್ಮವಾದೊಡನೆಯೇ ಗುಣಾಢ್ಯ ಎನ್ನುವ ಹೆಸರಿನಿಂದ ಕವಿಯಾಗಿ ಪ್ರಸಿದ್ಧನಾಗುತ್ತಾನೆ ಎಂದು ಅಶರೀರವಾಣಿಯಾಯಿತಂತೆ. ನಾನು ಗುಣ್ಢ್ಯನೆಂದು ನಾಮಕರಣ ಹೊಂದಿ ವಿದ್ಯಾರ್ಜನೆ ಮಾಡಿ ಪ್ರಸಿದ್ಧನಾಗುತ್ತಿರುವಾಗ ಸಾತವಾಹನ ದೊರೆಗೆ ನನ್ನ ವಿಷಯ ತಿಳಿದು ತನ್ನ ಮಂತ್ರಿಯನ್ನಾಗಿ ನೇಮಿಸಿಕೊಂಡ. ಹೀಗೆ ತನ್ನ ಕಥೆಯನ್ನು ಹೇಳಿದಾಗ ಕಾಣಭೂತಿಯು ಪೈಶಾಚ ಭಾಷೆಯಲ್ಲಿಯೇ ಸಪ್ತವಿದ್ಯಾಧರಚರಿತೆಯನ್ನು ಹೇಳಿ ಇದನ್ನು ಪ್ರಸಿದ್ಧಿಗೊಳಿಸು ಎಂದು ಹೇಳಿ ತನ್ನ ಜನ್ಮದಿಂದಲೂ ಮೋಕ್ಷ ಪಡೆಯಿತು. ಮುಂದೆ ಗುಣಾಢ್ಯನು ಪೈಶಾಚ ಭಾಷೆಯಲ್ಲಿಯೇ "ಸಪ್ತವಿದ್ಯಾಧರಚರಿತೆ"ಯನ್ನು ಕಾಡಿನಲ್ಲಿ ಮಶಿ ದೊರೆಯದೇ ತನ್ನ ರಕ್ತದಲ್ಲಿಯೇ ಏಳು ಲಕ್ಷ ಶ್ಲೋಕಗಳಲ್ಲಿ ಏಳುವರ್ಷ ಬರೆಯುತ್ತಾನೆ. ಹೀಗೆ ಬರೆದಿರುವುದನ್ನು ಲೋಕ ಪ್ರಸಿದ್ಧಿ ಗೊಳಿಸುವುದು ಹೇಗೆಂದು ಯೋಚಿಸುತ್ತಿರುವಾಗ ಈತನ ಶಿಷ್ಯರಾದ ಗುಣದೇವ ಮತ್ತು ನಂದಿ ಎನ್ನುವವರು ಸಾತವಾಹನನೇ ಇದಕ್ಕೆ ಸಮರ್ಥನೆಂದಾಗ ಗುಣಾಢ್ಯನಿಗೂ ಅದೇ ಸಮಂಜಸ ಎಂದು ತೋರುತ್ತದೆ. ಆಗ ಗುಣಾಢ್ಯನು ತನ್ನ ಶಿಷ್ಯರ ಮೂಲಕ ಗ್ರಂಥವನ್ನು ಕಳುಹಿಸುತ್ತಾನೆ. ಸಾತವಾಹನ ರಾಜ ಗ್ರಂಥವನ್ನು ನೋಡಿ ಇದು ಬರೆದಿರುವುದು ಪೈಶಾಚಭಾಷೆಯಲ್ಲಿ, ರಕ್ತದಿಂದ ಬರೆದ ಇದು ಏಳುಲಕ್ಷದಷ್ಟಿದೆ ಎಂದು ತಿರಸ್ಕರಿಸುತ್ತಾನೆ. ಇದನ್ನು ತಿಳಿದ ಗುಣಾಢ್ಯನು ಸಾತವಾಹನನ ನಗರದಿಂದ ಸ್ವಲ್ಪವೇ ದೂರದಲ್ಲಿ ಹೋಮಕುಂಡ ನಿರ್ಮಿಸಿ. ಪಶು ಪಕ್ಷಿಗಳೆಲ್ಲಾ ಅದನ್ನು ಕೇಳುವಂತೆ ಓದಿ . ಓದಿ ಮುಗಿದದ್ದನ್ನೆಲ್ಲಾ ಹೋಮದಲ್ಲಿ ಹಾಕುತ್ತಾನೆ. ಹೀಗೇ ಗ್ರಂಥದ ಆರುಲಕ್ಷದಷ್ಟು ಆಹುತಿಯಾಗಿ ಸುಟ್ಟುಹೋದವು. ಸಾತವಾಹನ ರಾಜನಿಗೆ ಕುಕ್ಷೀಬಾಧೆಯುಂಟಾಗಿ ರೋಗಿಯಾಗುತ್ತಾನೆ. ಆಗ ಅದರ ಕಾರಣ ತಿಳಿಯುವಾಗ ನವರಸ ಭರಿತವಾದ ಪದ್ಯಗಲ ಸವಿಯನ್ನು ಬಾಯಾರಿಕೆಯನ್ನು ಸಹ ಗಮನಿಸದೇ ಪಶು ಪಕ್ಷಿಗಳು ಕೇವಲ ತಮ್ಮ ಗೋಣನ್ನು ಮೇಲಕ್ಕೆತ್ತಿ ಕೇಳುತ್ತಿದ್ದುದರಿಂದ ಅವುಗಳ ಮಾಂಸಗಳು ಗಟ್ಟಿಯಾಗಿರದೇ ಮೃದುವಾಗಿ ಹಾಳಾಗಿದ್ದವು ಅವುಗಳನ್ನು ತಂದು ಆ ಮಾಂಸ ಬೇಯಿಸಿದುದರಿಂದ ಈತನಿಗೆ ರೋಗ ಬಂದಿದೆ ಎಂದು ರಾಜವೈದ್ಯರು ಹೇಳಿದಾಗ ರಾಜನಿಗೆ ಆಶ್ಚರ್ಯವಾಗಿ ತನ್ನ ಪರಿವಾರದೊಡನೆ ಗುಣಾಢ್ಯನ ಹೋಮಕುಂಡದ ಸಮೀಪಕ್ಕೆ ಬಂದು ಗುಣಾಢ್ಯನಲ್ಲಿ ಪರಿಪರಿಯಾಗಿ ಕ್ಷಮೆ ಕೇಳಿಕೊಳ್ಳುತ್ತಾನೆ. ಕೊನೆಗೆ ಒಂದು ಲಕ್ಷದಷ್ಟಿದ್ದ ನರದತ್ತವಾಹನ ಚರಿತೆ ಉಳಿದುಕೊಳ್ಳುತ್ತದೆ. ಇಂತಹ ಬೃಹತ್ಕಥೆ ಇಂದು ಲಭ್ಯವಿಲ್ಲ. ಗುಣಾಢ್ಯನೊಂದಿಗೆ ಹೊರಟು ಹೋಗುತ್ತದೆ ಆದರೆ ನರದತ್ತವಾಹನ ಚರಿತೆಯನ್ನು ಪ್ರಸಿದ್ಧಿಗೊಳಿಸುತ್ತಾನೆ ಸಾತವಾಹನ ರಾಜ. ಅದೇ ಬೃಹತ್ಕಥೆಯಾಗಿ ಉಳಿದುಕೊಳ್ಳುತ್ತದೆ.
ಗುಣಾಢ್ಯನ ಬೃಹತ್ಕಥೆಯೇ ವಡ್ದಕಥೆ ಎನ್ನುವುದಾಗುತ್ತದೆ ಈ ಕಥೆಗೂ ಅಂದರೆ ಗುಣಾಢ್ಯನಿಗೂ ಕರ್ನಾಟಕಕ್ಕೂ ಕನ್ನಡದ ನೆಲಕ್ಕೂ ನಂಟೊಂದು ಬೆಳೆದು ಬಿಡುತ್ತದೆ. ಹಾಗೆ ನೋಡಿದರೆ ಕನ್ನಡದ ನೆಲದಲ್ಲಿ ಸಂಸ್ಕೃತದ ಕವಿಗಳನ್ನು ನೆನೆಸಿಕೊಂಡದ್ದು ಬಹಳವೇ ಇದೆ. ಆದರೆ ರಾಜನೊಬ್ಬ ಕವಿಯಾಗಿ ಎಲ್ಲಿಯೋ ಬರೆದ ಬೃಹತ್ಕಥೆಗೆ ಇಲ್ಲಿ ಭಾಷ್ಯ ಬರೆದದ್ದು ನಿಜಕ್ಕೂ ಶ್ಲಾಘನೀಯ ಮತ್ತು ನಾವು ಕನ್ನದದ ಜನ ಅಷ್ಟೇ ಪುಣ್ಯವಂತರು. ಗಂಗದೊರೆ ದುರ್ವಿನೀತ ಸಾಮನ್ಯನಾಗಿರಲಿಲ್ಲ. ಭಾರವಿಯ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ಬರೆದನಂತೆ, ಶಬ್ದಾವತಾರವನ್ನು ಬರೆದ ದೇವಭಾರತಿಯ ವಡ್ದಕಥೆಗೂ ಟಿಕೆಯನ್ನು ಬರೆಯುತ್ತಾನೆ. ಇಲ್ಲಿ ವಡ್ದಕಥೆ ಎನ್ನುವುದೇ ಗುಣಾಢ್ಯನ ಬೃಹತ್ಕಥೆ ಎನ್ನುವುದು ಹಲವರ ಅಂಬೋಣ. ಅದೇನೇ ಇರಲಿ ಇಲ್ಲಿ ನನಗಂತೂ ಈ ದುರ್ವಿನೀತ ರಾಜನಿಗಿಂತ ದೊಡ್ಡ ಸಾಹಿತಿಯಾಗಿ ಕಾಣಿಸಿಕೊಳ್ಳುತ್ತಾನೆ. ಹೌದು ಕನ್ನಡನಾಡಲೆ ಅದೆಷ್ಟು ದೊಡ್ಡ ದೊಡ್ದ ಕವಿಗಳು ಆಗಿಹೋಗಿದ್ದರು ನಾವೇ ಧನ್ಯರು ಕಣ್ರಿ !
ಇದು ಉತ್ತನೂರಿನ ತಾಮ್ರಪಟದ ಸಾಲುಗಳು :
“ಸಮರಮುಖ ಮಖಾಹೂತ ಪ್ರಹತಶೂರ ಪುರುಷ ಪಶೂಪಹಾರ ವಿಘಸವಿಹಸ್ತೀಕೃತ ಕೃತಾನ್ತಾಗ್ನಿಮುಖೇನ
ಶಬ್ದಾವತಾರಕಾರೇಣ ದೇವಭಾರತೀ ನಿಬದ್ಧ ವಡ್ಡಕಥೇನ ಕಿರಾತಾರ್ಜುನೀಯ ಪಞ್ಚದಶ  ಸರ್ಗ್ಗ ಟೀಕಾಕಾರೇಣ ದುರ್ವ್ವಿನೀತನಾಮಧೇಯೇನ”



No comments:

Post a Comment