Search This Blog

Wednesday 23 May 2018

"ಅರ್ಜುನೇಯ"ನೆಂದರೆ . . . . . . "ಕುತ್ಸ" (ಪುರುಕುತ್ಸ)


ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ಮೂವತ್ತರಿಂದ ನಲವತ್ತು ಗ್ರಾಮಗಳಿಗೆ ಅಧಿಪತಿಯಾಗಿ ರಾಜ್ಯಭಾರ ಮಾಡುತ್ತಿದ್ದ ಶ್ರೀಪುರುಕುತ್ಸ ಮಹಾರಜನ ರಾಜಧಾನಿಯಗಿತ್ತು.ಪುರುಕುತ್ಸನು ಸುಖ ಲೋಲುಪನು. ಇವನ ರಾಣಿ ನರ್ಮದಾ ಪುರುಕುತ್ಸಾನಿ. ಆದರೆ ಹೆಂಡತಿ ಜೊತೆಗೆ ಅವನಿಗೆ ಏನೂ ಸಂಬಂಧವಿರಲಿಲ್ಲ. ಏಕೆಂದರೆ ಪುರುಕುತ್ಸಾನಿ ಎನ್ನುವವಳು ಪುರುಕುತ್ಸ ಮಹಾರಾಜನ ತಂಗಿಯೂ ಹೌದು. ಸೂರ್ಯವಂಶದ ಪದ್ಧತಿಯಂತೆ ಚಿಕ್ಕಂದಿನಲ್ಲೇ ಅವರ ವಿವಾಹವು ಜರುಗಿಹೋಗಿತ್ತು. ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಸಹೋದರ ಸಂಬಂಧ ವಿವಾಹ ಮಾಡುವ ವ್ಯವಸ್ಥೆ ಇದು. ಪುರುಕುತ್ಸ ಮಹಾರಾಜನು ಪುರುಕುತ್ಸಾನಿ ತನ್ನ ತಂಗಿಯೆಂಬುವುದನ್ನು ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮಕ್ಕಳೂ ಆಗಲಿಲ್ಲ. ರಾಜಮನೆತನದ ಸಮಾನ ಅಧಿಕಾರಿಣಿಯಾಗಿದ್ದ ಪುರುಕುತ್ಸಾನಿ ತನ್ನ ವರ್ಚಸ್ಸಿನಿಂದ ಅಣ್ಣ ಹಾಗೂ ಗಂಡನ ರಾಜ್ಯ ಸೂತ್ರಗಳನ್ನು ಭದ್ರವಾಗಿ ಕೈಯಲ್ಲಿ ಇರಿಸಿಕೊಂಡು ನಿಜವಾದ ರಾಜ್ಞಿಯಂತೆ ಆಳುತ್ತಿದ್ದಳು. ಆದರೆ ಸಂಸಾರಸುಖವೊಂದು ಅವಳಿಗೆ ನಿಲುಕದ ವಿಷಯವಾಗಿತ್ತು. ರಾಜಮನೆತನದ ಈ ವಿಶಿಷ್ಟವಿವಾಹ ಪದ್ದತಿ ಹೇಗೆ ಮಾಯವಾಯಿತೆಂಬುದನ್ನು ಶಂಕರ ಮೊಕಾಶಿ ಪುಣೇಕರರು ತಮ್ಮ ಅವಧೇಶ್ವರಿ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.ಋಗ್ವೇದದ ಕಥೆಗಳನ್ನು ಆಧರಿಸಿ ಮತ್ತು ಮೊಹೆಂಜೋದಾರೋದಲ್ಲಿನ ಮುದ್ರೆಗಳನ್ನು ಮುಖ್ಯವಾದ ಆಕರಗಳನ್ನಿಟ್ಟುಕೊಂಡು ರಚಿಸಿದ 'ಅವಧೇಶ್ವರಿ'ಯಲ್ಲಿನ 'ಪುರುಕುತ್ಸ' ಯಾರೆಂದು ನಾನು ನೋಡೋಣವೆಂದರೆ ದೊರಕಿದವನೇ "ಕುತ್ಸ" ಎನ್ನುವವನು. ಇದೇ ಕುತ್ಸನೇ ಪುರುಕುತ್ಸನಾಗಿ ಕಾಣಿಸಿಕೊಳ್ಳುತ್ತಾನೆ.
ನೋಡೋಣ ಈ “ಕುತ್ಸ”ನೆನ್ನುವವನನ್ನು.
ತ್ವಮಾವಿಥ ಸುಶ್ರವಸಂ ತವೋತಿಭಿಸ್ತವ ತ್ರಾಮಭಿರಿಂದ್ರ ತೂರ್ವಯಾಣಂ |
ತ್ವಮಸ್ಮೈ ಕುತ್ಸಮತಿಥಿಗ್ವಮಾಯುಂ ಮಹೇ ರಾಜ್ಞೋ ಯೂನೇ ಅರಂ ಧನಾಯಃ ||
ಇದು ಋಗ್ವೇದ ಒಂದನೇ ಮಂಡಲದಲ್ಲಿನ ಸೂಕ್ತದಲ್ಲಿ ಬರುವುದು. ಇಲ್ಲಿ ಸುಶ್ರವಸಾ ಎನ್ನುವ ರಾಜನ ಕುರಿತಾಗಿ ಬರುತ್ತದೆ. ಸುಶ್ರವಸಾ ಎನ್ನುವ ರಾಜನ ಕುರಿತಾಗಿ ಎಲ್ಲಿಯೂ ವಿವರ ಸಿಗುವುದಿಲ್ಲ. ಈತ ಇಂದ್ರನಿಗೆ ನೆಚ್ಚಿನ ರಾಜನಾಗಿದ್ದ. ಪಂಚವಿಂಶ ಬ್ರಾಹ್ಮಣದಲ್ಲಿ ಉಪಗು ಎನ್ನುವವನು ಸುಶ್ರವಸ ಎನ್ನುವವನ ತಂದೆ ಎನ್ನುವುದಾಗಿ ತಿಳಿಯುತ್ತದೆ. "ಸುಶ್ರವಾಃ ಕೌಸ್ಯಃ" ಎಂಬವನು ಒಬ್ಬ ಆಚಾರ್ಯನೆಂದೂ, "ಸುಶ್ರವಾಃ ವರ್ಷಗಣ್ಯಃ" ಸುಶ್ರವಸ ಎಂಬವನು ವೃಷಗಣನ ವಂಶದವನು. ಶತಪಥ ಮತ್ತು ವಂಶ ಬ್ರಾಹ್ಮಣದಲ್ಲಿ ಹೇಳಿದೆ. ಆದರೆ ಪ್ರಸ್ತುತ ಸುಶ್ರವಸನು ಯಾರೆನ್ನುವುದು ಸರಿಯಾಗಿ ತಿಳಿಯದಿದ್ದರೂ ಸಹ "ರಾಜ್ಞೋ ದ್ವಿರ್ದಶಾ ಬಂಧುನಾ ಸುಶ್ರವಸೋ" ಎನ್ನುವ ಮಂತ್ರದಿಂದ ಈತನೊಬ್ಬ ರಾಜ ಎನ್ನುವುದು ಕಂಡು ಬರುತ್ತದೆ.
ಇಲ್ಲಿ ಕುತ್ಸ ಮತ್ತು ಅತಿಥಿಗ್ವ, ಆಯು ಎನ್ನುವ ಮೂರು ರಾಜರನ್ನು ಕುರಿತಾಗಿ ಈ ಋಕ್ಕು ಹೇಳುತ್ತಿದೆ. ಇಂದ್ರನೇ ನೀನು ಯುವಕನಾದ ಸುಶ್ರವಸನೊಡನೆ ಸೇರಿಕೊಂಡು ಕುತ್ಸ ಆಯು ಮತ್ತು ಅತಿಥಿಗ್ವರನ್ನು ಸುಶ್ರವಸನ ಅಧೀನರಾಗುವಂತೆ ಮಾಡಿದೆ ಎಂದು ಉಲ್ಲೇಖಿಸಿರುವುದರಿಂದ ಕುತ್ಸ ಎನ್ನುವವನು ರಾಜ ಎನ್ನುವುದಾಗಿಯೂ ತಿಳಿದು ಬರುತ್ತದೆ.
ಋಗ್ವೇದದ ಇನ್ನೊಂದು ಕಡೆಯಲ್ಲಿ ಕುತ್ಸನ ಕುರಿತಾಗಿ ಹೇಳುವಾಗ
ತ್ವಂ ಕುತ್ಸಂ ಶುಷ್ಣಹತ್ಯೇಷ್ವಾ ವಿಥಾರಂಧಯೋ ಅತಿಥಿಗ್ವಾಯ ಶಂಬರಂ |
ಮಹಾಂತಂ ಚಿದರ್ಬುದಂ ನಿ ಕ್ರಮೀಃ ಪದಾ ಸನಾದೇವ ದಸ್ಯು ಹತ್ಯಾಯ ಜಜ್ಞಿಷೇ ||
ಎಲೈ ಇಂದ್ರನೇ ಶುಷ್ಣನೆಂಬ ಅಸುರನನ್ನು ನಾಶಮಾಡಲಿಕ್ಕಾಗಿ ನಡೆದ ಯುದ್ಧದಲ್ಲಿ "ಕುತ್ಸನೆನ್ನುವ ಋಷಿಯನ್ನು" ಕಾಪಾಡಿದೆ. ಅತಿಥಿ ಸತ್ಕಾರದಲ್ಲಿ ನಿರತಾಗಿರುತ್ತಿದ್ದ ದಿವೋದಾಸನಿಗಾಗಿ ಶಂಬರನನ್ನು ಹಿಂಸಿಸಿ ಕೊಂದೆ, ಅತ್ಯಂತ ಪ್ರಬಲನಾದ ಅರ್ಬುದನೆನ್ನುವ ಅಸುರನನ್ನು ಕಾಲಿನಿಂದ ಮೆಟ್ಟಿ ಕೊಂದೆ ಎನ್ನುವುದಾಗಿ ಬರುತ್ತದೆ. ಇಲ್ಲಿ ಕುತ್ಸನೆನ್ನುವವನನ್ನು ಋಷಿ ಎನ್ನಲಾಗಿದೆ.
ಈತನು ಪ್ರಾಚೀನನಾದುದರಿಂದ ಅನೇಕ ಕಡೆ ಈತನ ಕುರಿತಾಗಿ ಬರುತ್ತದೆ. ಈತನನ್ನೇ ಕೆಲವು ಋಕ್ಕುಗಳಲ್ಲಿ ಅರ್ಜುನೇಯ ಎನ್ನುವುದಾಗಿಯೂ ಕರೆಯಲಾಗಿದೆ. ಅಂದರೆ ಅರ್ಜುನನ ಮಗ ಎನ್ನುವ ಅರ್ಥ ಬರುವಂತೆ ಹೇಳಲಾಗಿದೆ. ಶುಷ್ಣಾಸುರನೊಂದಿಗಿನ ಇಂದ್ರನ ಯುದ್ಧದಲ್ಲಿ ಅಲ್ಲಲ್ಲಿ ಈತನ ಹೆಸರು ಕಂಡು ಬರುತ್ತದೆ. ಋಗ್ವೇದದ ಹತ್ತನೇ ಮಂಡಲದಲ್ಲಿ ೯೪ನೇ ಋಕ್ಕಿನಲ್ಲಿ ಕುತ್ಸನು ಸ್ಮದಿಭ, ತುಗ್ರ ಮತ್ತು ವೇತಸುವನ್ನು ಯುದ್ಧವೊಂದರಲ್ಲಿ ಜಯಿಸಿದನಂತೆ. ತೂರ್ವಯಾಣ ಎನ್ನುವವನಿಂದ ಈತ ಸೋತಿದ್ದನಂತೆ. ಈತ ಇಂದ್ರನ ಸ್ನೇಹತನಾಗಿದ್ದ. ಈತನು ಬ್ರಾಹ್ಮಣಗಳಲ್ಲಿ ಅಲ್ಲಲ್ಲಿ ಪಠಿತನಾಗಿದ್ದಾನೆ.
ಈತನ ಹೆಸರು ಋಗ್ವೇದ ಒಂದರಲ್ಲೇ ಸುಮಾರು ಅರವತ್ತು ಸಲ ಕಂಡು ಬರುತ್ತದೆ. ಏಳನೇ ಮಂಡಲದಲ್ಲಿ ಒಮ್ಮೆ ಮಾತ್ರವೇ ಈತನ ಹೆಸರನ್ನು ಬಹುವಚನದಲ್ಲಿ ಪ್ರಯೋಗಿಸಲಾಗಿದೆ. ಅದೂ ಸಹ ಇಂದ್ರನನ್ನು ಸ್ತುತಿ ಮಾಡಲ್ಪಡುವ ಗಾಯಕರು ಎಂದು ಪರಿಗಣಿಸಲಾಗಿದೆ. ಋಗ್ವೇದದ ಒಂದನೇ ಮಂಡಲದಲ್ಲಿ ಹೇಳುವಂತೆ "ಯಾಭಿಃ ಕುತ್ಸಮಾರ್ಜುನೇಯಂ ಶತಕ್ರತೂ" ದಸ್ಯುವಿನ ಹೋರಾಟದ ಸಂದರ್ಭದಲ್ಲಿ ಅರ್ಜುನನ ಮಗನಾದ ಕುತ್ಸನು ಸಹಾಯ ಮಾಡಿದನಂತೆ. ಇಲ್ಲಿ ಅರ್ಜುನ ಎನ್ನುವ ಹೆಸರು ಇಂದ್ರನನ್ನು ಕುರಿತಾಗಿರುವುದರಿಂದ ಕುತ್ಸನು ಇಂದ್ರನ ಮಗ ಎಂದು ತಿಳಿದು ಬರುತ್ತದೆ. ಇನ್ನೊಂದೆಡೆ ಈತ ಯುವಕನೂ ಮತ್ತು ತೇಜಸ್ವಿಯೂ ಆಗಿದ್ದನಂತೆ. "ಇಂದ್ರಂ ಕುತ್ಸಂ ವೃತ್ರಹಣಂ ಶಚೀಪತಿಂ ಕಾಟೇ ನಿಬಾಳ್ಹ ಋಷಿರಹ್ವದೂತಯೇ" ಎನ್ನುವುದಾಗಿ ಒಂದನೇ ಮಂದಲದಲ್ಲಿ ಉಕ್ತವಾಗಿದೆ. ಅಂದರೆ ಕುತ್ಸನೆನ್ನುವ ಋಷಿಯನ್ನು ಬಾವಿಯಲ್ಲಿ ತಳ್ಲಲ್ಪಟ್ಟಾಗ ಇಂದ್ರನು ಸಹಾಯಕ್ಕೆ ಬರಲೆಂದು ಋಷಿಯು ಪ್ರಾರ್ಥಿಸುತ್ತಾನೆ. ಕುತ್ಸನನ್ನು ಋಷಿ ಎನ್ನುವುದಾಗಿಯೇ ಹೇಳಲಾಗಿದೆ. ಕುತ್ಸ ಮತ್ತು ಇಂದ್ರ ಒಂದೇ ರಥದಲ್ಲಿ ಸಂಚರಿಸುತ್ತಿದ್ದುದನ್ನು ನಾನು ಈ ಮೊದಲೊಮ್ಮೆ ನನ್ನ ಬರಹದಲ್ಲಿ ಬರೆದಿದ್ದೆ. ಶುಷ್ಣ ಎನ್ನುವ ಅಸುರನ ವಧೆಗಾಗಿ ಇಂದ್ರ ಮತ್ತು ಕುತ್ಸ ಜೊತೆಯಾಗುತ್ತಾರೆ. ಇದೇ ಕುತ್ಸನಿಗೋಸ್ಕರ ಗಂಧರ್ವರ ಮೇಲೂ ಸಹ ಯುದ್ಧ ಮಾಡಿದ್ದ ಎಂದು ಎಂಟನೇ ಮಂಡಲದಿಂದ ತಿಳಿಯುತ್ತದೆ. ಸೂರ್ಯನ ರಥವನ್ನು ಕದ್ದು ಅದರ ಒಂದು ಚಕ್ರವನ್ನು ಕುತ್ಸನಿಗೆ ಕೊಟ್ಟನಂತೆ. ಕುತ್ಸನು ಶುಷ್ಣನನ್ನು ಎದುರಿಸಲಿಕ್ಕಾಗಿ ಎಂದು ನಾಲ್ಕನೇ ಮಂಡಲದಲ್ಲಿ ಹೇಳಲಾಗಿದೆ.
ಆದರೆ ಕೆಲವೊಮ್ಮೆ ಕುತ್ಸ ಇಂದ್ರನ ವೈರಿಯಾಗಿಯೂ ಕಾಣಿಸಿಕೊಳ್ಳುತ್ತಾನೆ. ಇಂದ್ರನು ಆಯು ಮತ್ತು ಅತಿಥಿಗ್ವರನ್ನು ಎದುರಿಸುವಾಗ ಕುತ್ಸನನ್ನು ಎದುರಿಸಿದ್ದಾನೆ ಎಂದು ತಿಳಿದು ಬರುತ್ತದೆ. ತೂರ್ಯವಣನ ಪ್ರಸಂಗದಲ್ಲಿ ಈ ಂಉವರನ್ನು ಹೊಡೆದುರುಳಿಸಿದುದಾಗಿ ಬರುತ್ತದೆ. ಕುತ್ಸ ಎನ್ನುವ ಪದ ಕೆಲವೆಡೆ ಇಂದ್ರನ ಆಯುಧವನ್ನು ಸೂಚಿಸಿದ್ದೂ ಇದೆ. ಕುತ್ಸಂ ವಧಂ ವಹಃ ಇಲ್ಲಿ ಅದು ಆಯುಧವಾಗಿ ಬಂದಿದ್ದರೂ ಸಹ ಕುತ್ಸನನ್ನ ಮಹರ್ಷಿ ಎನ್ನುವುದಾಗಿಯೇ ಹೇಳಿದೆ.
ಈ ಮೊದಲೇ ಕುತ್ಸನು ಇಂದ್ರನ ಮಗನಾದುದರಿಂದ ಅರ್ಜುನೇಯ ಎನ್ನುವುದಾಗಿಯೂ ಕರೆಯಲಾಗಿದೆ ಎಂದು ಹೇಳಿದ್ದೆ. ಶತಪಥ ಬ್ರಾಹ್ಮಣದಲ್ಲಿ "ಫಲ್ಗುನೀಷ್ವಗ್ನೀ ಆದಧೀತ ಏತಾ ವಾ ಇಂದ್ರ ನಕ್ಷತ್ರಂ ....." ಎಂದು ಬರುತ್ತದೆ. ಫಲ್ಗುಣಿಗಳು ಇಂದ್ರ ನಕ್ಷತ್ರಗಳು. ಇಂದ್ರನಿಗೂ ಅರ್ಜುನ ಎನ್ನುವ ಹೆಸರಿದೆ. ಫಲ್ಗುನಿಗಳಿಗೂ ಅರ್ಜುನ ಎನ್ನುವ ಹೆಸರಿದೆ ಎನ್ನುವುದಾಗಿ ಬ್ರಾಹ್ಮಣಗಳಲ್ಲಿ ಹೇಳಿರುವುದರಿಂದ ಕುತ್ಸನಿಗೂ ಅರ್ಜುನೇಯ ಎನ್ನುವ ಹೆಸರು.
ಅಹಂ ಮನುರಭವಂ ಸೂರ್ಯಶ್ಚಾಹಂ ಕಕ್ಷೀವಾನ್ ರಶಿರಸ್ಮಿ ವಿಪ್ರಃ |
ಅಹಂ ಕುತ್ಸಮಾರ್ಜುನೇಯಂ ನ್ಯೃಂಜೇಹಂ ಕವಿರುಶನಾ ಪಶ್ಯತಾ ಮಾ ||
ವಾಮದೇವನೆಂಬ ಹೆಸರಿನಿಂದ ಪ್ರಸಿದ್ಧನಾದ ನಾನು ಎಲ್ಲವನ್ನು ಬಲ್ಲ ಪ್ರಜಾಪತಿ ಎನ್ನಿಸಿಕೊಂಡಿದ್ದೇನೆ. ಜಗತ್ತಿಗೆ ಚೇತನವನ್ನು ಕೊಡುವ ಸೂರ್ಯನೂ ನಾನಾಗಿದ್ದೇನೆ. ಕಕ್ಷೀವಾನ್ ಎನ್ನುವ ಹೆಸರುಳ್ಳ ಋಷಿಯೂ ನಾನೇ ಅರ್ಜುನಿಯ ಪುತ್ರನಾದ ಕುತ್ಸನನ್ನು ಅನುಗ್ರಹಿಸಿದವನೂ ನಾನೇ ಕ್ರಾಂತ ದರ್ಶಿಯಾದ ಉಸನಸ್ ಎನ್ನುವ ಋಷಿಯೂ ನಾನೇ ಎಂದು ಕುತ್ಸನನ್ನು ಅರ್ಜುನೇಯ ಎನ್ನುವಲ್ಲಿ ಕಾಣಿಸಿಕೊಂಡಿದ್ದಾನೆ.
ಹೀಗೆ ಕುತ್ಸನು ರಾಜನಾಗಿ, ಋಷಿಯಾಗಿ, ಮಂತ್ರ ದೃಷ್ಟಾರನಾಗಿ, ಸೂಕ್ತಕರ್ತನಾಗಿ, ಮಹರ್ಷಿಯಾಗಿ, ಇಂದ್ರನಿಗೆ ಬಿಡಲಾರದ ಮಿತ್ರನಾಗಿ, ಅಲ್ಲಲ್ಲಿ ಶತ್ರುವಾಗಿ ಕಾಣಿಸಿಕೊಳ್ಳುತ್ತಾನೆ.

No comments:

Post a Comment