Search This Blog

Sunday 6 May 2018

ಅವಧೇಶ್ವರಿಯ "ಶಂಬರ" ಋಗ್ವೇದದಲ್ಲಿ.


ವೇದದಲ್ಲಿ ಕಾಣಿಸಿಕೊಳ್ಳುವ ದಾಶರಾಜ್ಞ ಕದನದ ಕುರಿತಾಗಿ ಈ ಮೊದಲೇ ಒಮ್ಮೆ ಬರೆದಿದ್ದೆ. ಅದರಲ್ಲಿ ದಸ್ಯುಗಳೇ ಮೊದಲಾದವರ ಕುರಿತಾಗಿ ಹತ್ತು ವಿವಿಧ ರಾಜರನ್ನು ಎದುರಿಸಿದ ಕಥೆಯನ್ನು ಉಲ್ಲೇಖಿಸಿದ್ದೆ.
ವೇದಕಾಲೀನ ವಿಷಯವನ್ನು ಅವಲಂಬಿಸಿ ರಚಿತವಾದ ಶಂಕರಮೊಕಾಶಿ ಪುಣೇಕರರ ಕಾದಂಬರಿ ಅವಧೇಶ್ವರಿಯಲ್ಲಿ ಶಂಬರನ ಕಥೆಯೂ ಬರುತ್ತದೆ. ಶಂಬರನ ಕಥೆಯನ್ನು ಅವರು ಅವರ ದೃಷ್ಟಿಯಲ್ಲಿ ರಂಜನೀಯವಾಗಿ ಅವರದೇ ಶೈಲಿಯಲ್ಲಿ ನಿರೂಪಿಸಿದ್ದರೂ ಸಹ ಅದು ಋಗ್ವೇದದಲ್ಲಿಯೂ ಸಹ ಅವನು ವರ್ಣಿತನಾಗಿದ್ದಾನೆ. ಅವಧೇಶ್ವರಿ ಕಾದಂಬರಿಯನ್ನು ಓದುತ್ತಿದ್ದಂತೆ ನಾವು ಆ ಕಾಲಕ್ಕೆ ಸರಿದಂತೆ ಅನ್ನಿಸಿ ಬಿಡುತ್ತದೆ. ಒಂದೊಂದು ಅಕ್ಷರವನ್ನೂ ಬಿಡದೇ ಓದಲೇ ಬೇಕಾದ ಕದಂಬರಿ ಅನ್ನಿಸಿ ಬಿಡುತ್ತದೆ. ಅಲ್ಲಿನ ಪುರುಕುತ್ಸ ಮತ್ತು ನರ್ಮದಾ ಪುರುಕುತ್ಸಾನಿ, ಅಮರುದ ವನ, ಸಿಂಭ(ಸಿಂಹಭಟ್ಟ) ತಾರ್ಕ್ಷ . ಕಾಶೀರಾಜನ ನ್ಯಾಯನಿರ್ಣಯ ಎಲ್ಲವೂ ಅತ್ಯಂತ ತರ್ಕಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಪುಣೇಕರರು ಆ ಕಾದಂಬರಿ ಬರೆಯುವುದಕ್ಕೂ ಮೊದಲು ಪೂರ್ವತಯಾರಿಯನ್ನು ಅವಲೋಕಿಸಿದರೆ ಆ ಕಾದಂಬರಿಗೆ ನಾವು ಕೊಡುವ ಮೌಲ್ಯ ಅತ್ಯಂತ ಕಡಿಮೆ ಅನ್ನಿಸಿ ಬಿಡುತ್ತದೆ.
ಅದೇ ಕಾದಂಬರಿಯಲ್ಲಿ ಶಂಬರಾಸುರನ ಕುರಿತು ಗಮನಿಸೋಣ
ಋಗ್ವೇದ ೨ನೇ ಮಂಡಲದ ೧೨ನೇ ಸೂಕ್ತದ ಪ್ರತಿಯೊಂದು ಋಕ್ಕಿನಲ್ಲಿಯೂ ಸಹ ಇಂದ್ರನ ಸಾಹಸದ ಗುಣಗಳನ್ನು ಹೇಳಲಾಗಿದೆ. "ಜನಾಸಃ ಜನಾಃ ಹೇ ಅಸುರಾಃ" ಎಂದು ಹೇಳಲಾಗುತ್ತದೆ. ಅಸುರ ಜನರನ್ನು ಸಂಬೋಧಿಸುತ್ತಾ. ಈ ಎಲ್ಲಾ ಸಾಹ್ಸ ಕಾರ್ಯಗಳನ್ನು ಮಾಡಿದವ್ನೇ ಇಂದ್ರನು ಎಂದು ಸೂಕ್ತ ಕರ್ತಾರ ಋಷಿಯು ಹೇಳುತ್ತಾನೆ.
ಯಃ ಶಂಬರಂ ಪರ್ವತೇಷು ಕ್ಷಿಯಂತಂ ಚತ್ವಾರಿಂಶ್ಯಾಂ ಶರದ್ಯನ್ವವಿಂದತ್ |
ಓಜಾಯಮಾನಂ ಯೋ ಅಹಿಂ ಜಘಾನ ದಾನುಂ ಶಯಾನಂ ಸ ಜನಾಸ ಇಂದ್ರಃ || ೨ : ೨: ೧೧ ||
ಪರ್ವತಗಳಲ್ಲಿ ದುರ್ಗಮವಾದ ಕೋಟೆಗಳಲ್ಲಿ ನಲವತ್ತು ವರ್ಷಗಳಷ್ಟು ತಲೆ ಮರೆಸಿಕೊಂಡು ವಾಸಿಸುತ್ತಿದ್ದ ಶಂಬರನೆನ್ನುವ ರಾಕ್ಷಸನನ್ನು ಹುಡುಕಿ ಕೊಂದವನು ಯಾರೆಂದರೆ ಇದೇ ಇಂದ್ರನು, ಈ ರಾಕ್ಷಸ ಬಲಶಾಲಿಯಾಗಿ, ನರಹಿಂಸಕನಾಗಿ ಪ್ರಜಾ ಕಂಟಕನಾಗಿದ್ದ ಎಂದು ವರ್ಣಿಸುತ್ತಾನೆ.
ಈತ ಕುಲಿಕಾರ ಮಗ ದಾಸ ಎನ್ನುವ ಉಲ್ಲೇಖವೂ ಸಹ ಋಗ್ವೇದದಲ್ಲಿ ಕಾಣ ಸಿಗುತ್ತದೆ. ಶಂಬರ ಎನ್ನುವ ಪದ ಮೋಡಗಳನ್ನು ಕುರಿತು(ಘನವಾದ ನೀರನ್ನು ) ಕುರಿತಾಗಿಯೂ ಆನೇಕ ಕಡೆಗಳಲ್ಲಿ ಹೇಳಲಾಗಿದೆ. ಆದರೆ,
ಭಿನತ್ಪುರೋ ನವತಿಮಿಂದ್ರ ಪೂರವೇ ದಿವೋದಾಸಾಯ ಮಹಿದಾಶುಷೇ . . . . . . . . . ಅತಿಥಿಗ್ವಾಯ ಶಂಬರಂ ಗಿರೇರುಗ್ರೋ ಅವಾಭರತ್ || ೧ : ೧೩೦ : ೧೯ ||
ಇಂದ್ರನೇ ಯುದ್ಧರಂಗದಲ್ಲಿನರ್ತಿಸುವ ನಿನಗೆ ಪೂರು ಮತ್ತು ದಿವೋದಾಸ ಎನ್ನುವ ಇಬ್ಬರು ನಿನಗೆ ಹವಿಸ್ಸುಗಳನ್ನು ಅರ್ಪಿಸಿದ್ದು ನೀನು ಮಾಡಿದ ಸಾಹಸಕ್ಕೆ. ಪರ್ವತದ ಮೇಲಿನಿಂದ ದರ್ದರನೆ ಎಳೆದು ತಂದ ಶಂಬರಾಸುರನನ್ನು ಧ್ವಂಸಗೊಳಿಸಿದ್ದಲ್ಲದೇ ಆತನ ೯೦ ಕೋಟೆಗಳನ್ನು ನಾಶ ಮಾಡಿದ್ದಕ್ಕಾಗಿ. ನೀನು ನಮಗೆ ಗೋವುಗಳೆನ್ನುವ ವಿಶಿಷ್ಟ ಸಂಪತ್ತನ್ನು ದೊರಕಿಸಿಕೊಟ್ಟೆ ಎಂದು ಈ ಋಕ್ಕು ಹೇಳುತ್ತದೆ . ಅಂದರೆ ಶಂಬರ ಎಷ್ಟು ಬಲಿಷ್ಠನಾಗಿದ್ದ ಎಂದರೆ ೯೦ ನಗರಗಳನ್ನೋ ಅಥವಾ ಕೋಟೆಗಳನ್ನೋ ಕಟ್ಟಿಕೊಂಡಿದ್ದ ಎಂದು ಇಲ್ಲಿ ಹೇಳಿದರೆ, ೯೯ ಮತ್ತು ನೂರು ಇದ್ದವೆಂದು ಬೇರೆ ಕಡೆ ಉಲ್ಲೇಖ ಸಿಗುತ್ತವೆ. ಅವನಿಗೆ ಅನೇಕ ಅನುಯಾಯಿಗಳೂ ಇದ್ದರೆನ್ನುವುದು ತಿಳಿದು ಬರುತ್ತದೆ.
(ಶಂಬರಂ ಯಃ ಅಹನ್ ಪಿಪ್ರುಂ ಅವ್ರತಂ ಇಂದ್ರಃ ಯಃ ಶುಷ್ಣಾಂ ಅಶುಷಂ) ಶಂಬರನ ಹೆಸರು ಸಾಧಾರಣವಾಗಿ ಶುಷ್ಣ, ಪಿಪ್ರು ಮತ್ತು ವರ್ಚಿನ್ ಎನ್ನುವ ಹೆಸರುಗಳೊಂದಿಗೆ ಕೇಳಿಬರುತ್ತದೆ. ಶಂಬರನು ಅತಿಥಿಗ್ವಾಯ ದಿವೋದಾಸನ ಪ್ರಮುಖ ಶತ್ರುವಾಗಿದ್ದನೆಂದು ತಿಳಿಯುತ್ತದೆ. ಇಲ್ಲಿ ಅತಿಥಿಗಳನ್ನು ದೆವರಂತೆ ಆಧರಿಸಿ ಪೂಜಿಸುತ್ತಿದ್ದ ದಿವೋದಾಸನನ್ನು ಅತಿಥಿಗ್ವಾಯ ಎನ್ನುವುದಾಗಿ ಹೇಳಲಾಗಿದೆ. ಈ ಅತಿಥಿಗ್ವನು ಇಂದ್ರನ ಸಹಾಯದಿಂದ ಶಂಬರನನ್ನು ಗೆದ್ದ ಎಂದು ಬೇರೆ ಬೇರೆ ಋಕ್ಕುಗಳಿಂದ ಗ್ರಹಿಸಿಕೊಳ್ಳಬೇಕು.
ಇದನ್ನೇ ಈ ಎಲ್ಲಾ ಋಕ್ಕುಗಳಿಂದ ಪುಣೇಕರರು ತುಂಬಾ ಸೊಗಸಾಗಿ ತಮ್ಮ ಕಾದಂಬರಿಯಲ್ಲಿ ವರ್ಣಿಸಿದ್ದಾರೆ.
ಶಂಬರನ ಕುರಿತು ಬರೆಯಲು ಬೇಕಾದಷ್ಟಿವೆ ಇಲ್ಲಿಗೆ ಸಾಕು.

No comments:

Post a Comment