Search This Blog

Saturday 19 May 2018

ಮಿಥಿಲೆಯ ಮಾಮರಗಳಲ್ಲಿ ವಿದ್ಯಾಪತಿ ಎನ್ನುವ ಕೋಗಿಲೆಯ ನಿನಾದ............

ಜಯದೇವ ಕವಿ ಸಂಸ್ಕೃತದಲ್ಲಿ ರಾಧಾ ಮತ್ತು ಕೃಷ್ಣ ಪ್ರೇಮವನ್ನು ತನ್ನ ಕಾವ್ಯಗಳಲ್ಲಿ ಪ್ರವಾಹದಂತೆ ಹರಿಸುತ್ತಾನೆ. ಅದೇ ರೀತಿ ಸಂಸ್ಕೃತ ಮಾತ್ರವಲ್ಲ ಅಪಭ್ರಂಶ ಮತ್ತು ಮೈಥಿಲೀ ಭಾಷೆಯಲ್ಲಿ ಕೃಷ್ಣನ ಪ್ರೇಮದ ಕೊಳಲಿನ ನಿನಾದವನ್ನು ಮಿಥಿಲೆಯ ಮಾಮರಗಳಲ್ಲಿ ಮೊಳಗಿಸಿದ ಇನ್ನೊಬ್ಬ ಕವಿ ವಿದ್ಯಾಪತಿ. ಶಿವಸಿಂಹ ನೆನ್ನುವ ರಾಜ ಈತನನ್ನು ಅಭಿನವ ಜಯದೇವ ಎಂದು ಕರೆದು ಕೊಂಡಾಡಿದ್ದಾನೆ. ಜೊತೆಗೆ "ಮೈಥಿಲೀಕೋಕಿಲಾ" ಎಂಬ ಬಿರುದೂ ಇವನಿಗೆ ಇದೆ.
ವಿದ್ಯಾಪತಿ ಸುಮಾರು 1360ರಿಂದ1450ರ ವರೆಗೆ ಜೀವಿಸಿದ್ದ ಎಂದು ತಿಳಿದು ಬರುತ್ತದೆ. ಪ್ರಕಾಂಡ ಪಂಡಿತ. ಸಂಸ್ಕೃತ, ಅಪಭ್ರಂಶ ಹಾಗೂ ಮೈಥಿಲೀ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದವ. ಮೈಥಿಲೀ ಭಾಷೆ ಮಾಗಧಿ ಹಾಗೂ ಪ್ರಾಕೃತದ ಮಿಶ್ರಣ. ಒಂದು ರೀತಿಯಲ್ಲಿ ಬಂಗಾಲಿ ಹಾಗೂ ಹಿಂದಿಗಳ ಮಧ್ಯದ ಭಾಷೆ ಎನ್ನಬಹುದು. ಎರಡೂ ಭಾಷೆಗಳ ಲಕ್ಷಣಗಳೂ ಇದರಲ್ಲಿ ಇವೆ. ಹೀಗಾಗಿ ಎರಡೂ ಭಾಷೆಗಳ ಜನರು ವಿದ್ಯಾಪತಿಯನ್ನು ತಮ್ಮವನೆಂದು ಹೇಳಿಕೊಳ್ಳುತ್ತಾರೆ. ಇದು ಕವಿಯ ಶ್ರೇಷ್ಠತೆಯ ಕುರುಹು.
ವಿದ್ಯಾಪತಿಯ ಕಾಲ ವಿವಾದಾಸ್ಪದವಾದುದು. ಈತ ಬೇರೆ ಬೇರೆ ರಾಜರ ಆಸ್ಥಾನದಲ್ಲಿದ್ದ ಎಂದು ತಿಳಿದು ಬರುತ್ತದೆ. ಆ ರಾಜರ ಕಾಲವನ್ನು ಗಮನಿಸಿದರೆ ಈತ ಸುಮಾರು 1360ರಲ್ಲಿ ಜನಿಸಿರಬೇಕು ಎನ್ನಲಾಗಿದೆ. ಮಿಥಿಲೆಯ ದರ್ಭಾಂಗ ಜಿಲ್ಲೆಯ ವಿಸಪಿ ಅಥವಾ ಗಡವಿಸಪಿ ಈತನ ಜನ್ಮ ಸ್ಥಳ. ತಂದೆ ಗಣಪತಿ ಠಾಕೂರ. ಈತ ಸಂಸ್ಕೃತದ ದೊಡ್ದ ಪಂಡಿತ. ತಾಯಿ ಹಂಸಿನೀದೇವಿ. ತಂದೆ ತಾಯಿಯರಿಗೆ ಬಹುಕಾಲ ಮಕ್ಕಳಿಲ್ಲದೆ "ಕಪಿಲೇಶ್ವರ"ನ ಸೇವೆಮಾಡಿ ಇವನನ್ನು (ವಿದ್ಯಾಪತಿ)ಪಡೆದಳು. ವಿದ್ಯಾಪತಿಯು ತನ್ನ ತಂದೆ ಮತ್ತು ಹರಿಮಿಶ್ರ ಎಂಬವರ ಬಳಿ ಸಂಸ್ಕೃತ ಕಲಿತ ಎಂದು ತಿಳಿದು ಬರುತ್ತದೆ. ಇವರದು ಶ್ರೀಮಂತ ಮನೆತನ. ಮಗ ಹರಪತಿ. ಮಗಳು ದುಲಹೀ, ಸೊಸೆ ಚಂದ್ರಕಲಾ. ಈಕೆ ದೊಡ್ಡ ಕವಯಿತ್ರಿ. ಇವಳ ಕವಿತೆಗಳನ್ನು ದರ್ಭಾಂಗದ ರಾಜಕವಿ ಲೋಚನ ಸಂಗ್ರಹಿಸಿದನಂತೆ.
ವಿದ್ಯಾಪತಿಯ ಕೊನೆಗಾಲವನ್ನು ಕುರಿತಂತೆ ಎರಡು ದಂತಕಥೆಗಳು ಸಿಗುತ್ತವೆ. ಇವನ ಕಾವ್ಯಮಾಧುರ್ಯಕ್ಕೆ ಮಾರುಹೋಗಿ ಸಾಕ್ಷಾತ್ ಶಿವನೇ ಈತನ ಮನೆಯಲ್ಲಿ "ಉಗನಾ" ಎಂಬ ಹೆಸರಿನ ಆಳಾಗಿ ದುಡಿಯುತ್ತಿದ್ದನಂತೆ. ಒಂದು ದಿನ ವಿದ್ಯಾಪತಿಗೆ ಬಾಯಾರಿಕೆಯಾದಾಗ ಆಳು ಗಂಗಾ ಜಲವನ್ನು ತಂದುಕೊಡುತ್ತಾನೆ. ಆಗ "ಉಗನಾ" ಸಾಕ್ಷಾತ ಪರಮೇಶ್ವರನೆಂದು ಇವನಿಗೆ ತಿಳಿಯಿತು. ವಿದ್ಯಾಪತಿಯು ಶಿವನೆಂಬ ರಿವಿಲ್ಲದೇ ಒಂದು ದಿನ ಇವನ ಹೆಂಡತಿ ಉಗನಾನನ್ನು ಹೊಡೆದಾಗ ಈತ ಸಾಕ್ಷಾತ್ ಶಿವನನ್ನು ಹೊಡೆಯುತ್ತಿದ್ದೀಯ ಎಂದು ಕೂಗಿಕೊಂಡ. ಆಗ ಶಿವ ಅಲ್ಲೇ ಮಾಯವಾದ. ಈತ ಶಿವನ ವಿರಹದಲ್ಲಿ ಹುಚ್ಚನಾದ. ಉಗನಾ, ಮರಳಿ ಬಾ ಎಂದು ಪರಿಪರಿಯಾಗಿ ಪ್ರಲಾಪಿಸಿದ ಎಂದು ಒಂದು ಕಥೆ ಕೇಳಿ ಬರುತ್ತದೆ. ಮತ್ತೊಂದು ದಂತಕತೆಯ ಪ್ರಕಾರ ಇವನಿಗೆ ಗಂಗಾತೀರದ ಬಳಿ ತನ್ನ ಕೊನೆಯುಸಿರು ಎಳೆಯಬೇಕೆಂಬ ಆಸೆ ಇತ್ತು. ಪಲ್ಲಕ್ಕಿಯಲ್ಲಿ ಕುಳಿತು ವಿಸಪಿಯಿಂದ ಹೊರಟು ಮೂರನೆಯ ದಿನ ಮವೂ ಬಾಜಿತಪುರ ತಲುಪಿದ. ಕವಿ ಅಲ್ಲಿಗೆ ತನ್ನ ಯಾತ್ರೆ ನಿಲ್ಲಿಸಿ ನಾನು ತಾಯಿ ಗಂಗೆಯ ದರ್ಶನಕ್ಕಾಗಿ ಇಷ್ಟು ದೂರ ಬಂದೆ, ಆ ತಾಯಿ ತನ್ನ ಮಗನಿಗಾಗಿ ಎರಡು ಹರದಾರಿ ಬರಲಾರಳೇ ಎಂದು ರಾತ್ರಿ ಅಲ್ಲಿಯೇ ತಂಗಿದನಂತೆ. ರಾತ್ರಿ ಕಳೆದು ಬೆಳಗಾದಾಗ ಗಂಗೆ ತನ್ನ ದಿಕ್ಕನ್ನೇ ಬದಲಾಯಿಸಿ ಎರಡು ಹರದಾರಿ ಮುಂದಕ್ಕೆ ಬಂದಿತ್ತು. ಜನರಿಗಂತೂ ಅಚ್ಚರಿ. ಅಲ್ಲಿ ಗಂಗೆಯ ಪವಿತ್ರ ಸಾನ್ನಿಧ್ಯದಲ್ಲಿ ಈತ ದೇಹತ್ಯಾಗಮಾಡಿದ ಎಂದು ಇನ್ನೊಂದು ಕಥೆ. ಗಂಗಾನದಿ ಇಂದಿಗೂ ಅಲ್ಲಿ ಡೊಂಕಾಗಿ ಹರಿಯುತ್ತಿದೆ. ಈತನ ದೇಹ ತ್ಯಾಗ ಸ್ಥಳದಲ್ಲಿ ಒಂದು ಶಿವಾಲಯವನ್ನು ನಿರ್ಮಿಸಲಾಗಿದೆ. ಇದು ಇಂದಿಗೂ ಈತನ ಸ್ಮಾರಕವಾಗಿ ಭಾವುಕರನ್ನು ಆಕರ್ಷಿಸುತ್ತಿದೆ.
ಈತನ ಮತ್ತು ಮಹಾರಾಜ ಶಿವಸಿಂಹರ ಸಂಬಂಧವನ್ನು ನಮ್ಮ ಕನ್ನಡದ ಪಂಪ ಮತ್ತು ಅರಿಕೇಸರಿಯ ಸಂಬಂಧವನ್ನು ನಮಗೆ ಕಟ್ಟಿಕೊಡುತ್ತದೆ. ಕೀರ್ತಿಸಿಂಹನ ಕಾಲಕ್ಕೆ ಈತ ಖೇಲನಕವಿ ಯಾಗಿದ್ದರೆ ಶಿವಸಿಂಹನ ಕಾಲಕ್ಕೆ ಅವನ ಪ್ರಿಯ ಸಖನಾಗಿದ್ದನಂತೆ. ಶಿವಸಿಂಹ ಮತ್ತು ಅವನ ರಾಣಿಯರೆದುರಿಗೆ ಅವರ ಅಂತಃಪುರದಲ್ಲಿ ಪ್ರೇಮಗೀತೆ ರಚಿಸಿ ಈತ ಹಾಡುತ್ತಿದ್ದನಂತೆ.
ಇವನ ಕೃತಿಗಳು ಸಂಸ್ಕೃತ, ಅಪಭ್ರಂಶ ಮತ್ತು ಮೈಥಿಲೀ ಭಾಷೆಗಳಲ್ಲಿವೆ. ಭಾಷೆಯ ದೃಷ್ಟಿಯಿಂದ ಈತನ ಕೃತಿಗಳನ್ನು ಮೂರುವಿಧಗಳಾಗಿ ವಿಂಗಡಿಸಬಹುದು.
1. ಸಂಸ್ಕೃತದಲ್ಲಿ : "ಭೂಪರಿಕ್ರಮಣ" ಎನ್ನುವುದು ಚೊಚ್ಚಲ ಕೃತಿ. ಬಲರಾಮ ಒಮ್ಮೆ ಶಾಪಕ್ಕೆ ಗುರಿಯಾಗಿ ತೀರ್ಥಯಾತ್ರೆಗೆ ಹೊರಟ ಕಥೆಯನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ. "ಪುರುಷ ಪರೀಕ್ಷಾ" ಎನ್ನುವುದು ನೀತಿಗ್ರಂಥ. ಇದರಲ್ಲಿ ಕಥೆಗಳ ಮೂಲಕ ಧರ್ಮ, ರಾಜನೀತಿಗಳನ್ನು ಹೇಳಿದೆ. ಮೂರನೆಯದ್ದು "ಲೇಖನಾವಲಿ" ಇದನ್ನು ಬನೌಲಿಯ ರಾಜ ಪರಾದಿತ್ಯನ ಕೋರಿಕೆಯ ಮೇರೆಗೆ ಬರೆದುದಂತೆ. "ಶೈವಸರ್ವಸ್ವಸಾರ" ಇದನ್ನು ಮಹಾರಾಜ ಪದ್ಮಸಿಂಹನ ಪತ್ನಿ ವಿಶ್ವಾಸದೇವಿಯ ವಿನಂತಿಯಯ ಮೇರೆಗೆ ಬರೆದುದು. ಇದೊಂದು ಪ್ರಮಾಣಭೂತ ಪುರಾಣಸಂಗ್ರಹ. "ಗಂಗಾವಾಕ್ಯಾವಳಿ" ಇದು ವಿಶ್ವಾಸದೇವಿಗಾಗಿ ರಚಿಸಿದ ಗ್ರಂಥ. "ವಿಭಾಗಸಾರ" ಇದು ನರಸಿಂಹದೇವನಿಗಾಗಿ ರಚಿತವಾದ ಗ್ರಂಥ. ಇದರಲ್ಲಿ ದಾಯಭಾಗದ ವರ್ಣನೆಯಿದೆ. "ದಾನವಾಕ್ಯಾವಲಿ" ಇದು ನರಸಿಂಹದೇವನ ಪತ್ನಿ ಧೀರಮತಿಗಾಗಿ ರಚಿಸಿದ ಗ್ರಂಥ ಎಂದು ತಿಳಿದು ಬರುತ್ತದೆ. ಇದರಲ್ಲಿ ಎಲ್ಲ ಬಗೆಯ ದಾನಗಳನ್ನು ಹೇಳಿದೆ. "ದುರ್ಗಾಭಕ್ತಿ ತರಂಗಿಣಿ" ಇದು ಮಹಾರಾಜ ಭೈರವಸಿಂಹನಿಗಾಗಿ ಬರೆದ ಗ್ರಂಥ. ಇವುಗಳಲ್ಲದೇ ಗಯಾಪತ್ತಲಕ, ವರ್ಷಕೃತ್ಯ ಹಾಗೂ ಮಣಿಮಂಜರೀ ಎನ್ನುವ ನಾಟಕವನ್ನೂ ಬರೆದಿದ್ದನಂತೆ.
2. ಅಪಭ್ರಂಶ ಭಾಷೆಯಲ್ಲಿ : "ಕೀರ್ತಿಲತಾ" ಮಹಾರಾಜ ಕೀರ್ತಿಸಿಂಹನ ಯಶೋಗಾನ ಮಾಡುವ ಈ ಚಂಪೂಕಾವ್ಯ ಇದು. ಭೃಂಗ-ಭೃಂಗೀಸಂವಾದ ಶೈಲಿಯಲ್ಲಿ ಇದು ರಚಿಸಲ್ಪಟ್ಟಿದೆ. ಇನ್ನೊಂದು ಗ್ರಂಥ "ಕೀರ್ತಿಪತಾಕಾ" ಎನ್ನುವುದು. ಇದು ಮಹಾರಾಜ ಶಿವಸಿಂಹನ ಕೀರ್ತಿಯ ವರ್ಣನಾಗ್ರಂಥ.
3. ಮೈಥಿಲೀ ಭಾಷೆಯಲ್ಲಿ : "ಗೋರಕ್ಷವಿಜಯ" ಇದು ನಾಲ್ಕು ಅಂಕಗಳ ನಾಟಕ. ಇದರಲ್ಲಿರುವ ಗದ್ಯ ಸಂಸ್ಜ್ಕೃತ ಮತ್ತು ಪ್ರಾಕೃತದಲ್ಲಿದೆ. ಗೀತೆಗಳು ಮೈಥಿಲಿಯಲ್ಲಿವೆ. ಇದು ಗೋರಕ್ಷನಾಥ ಮತ್ತು ಮತ್ಸ್ಯೇಂದ್ರನಾಥರ ಕಥೆ. "ಪದಾವಳಿ" ವಿದ್ಯಾಪತಿ ತನ್ನ ಬಾಲ್ಯದಿಂದ ಹಿಡಿದು ತನ್ನ ವೃದ್ಧಾಪ್ಯದ ನತನಕ ವಿವಿಧ ಪ್ರಸಂಗಗಳಲ್ಲಿ ಬರೆದ ಗೇಯ ಪದಗಳ ಸಂಗ್ರಹ. ಈ ಗೇಯ ಪದಗಳು ಇವನ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಿವೆ. ಇವು ದಾಸರ ಪದಗಳಂತೆ ರಾಗತಾಳಬದ್ಧವಾಗಿವೆ. ವಿದ್ಯಾಪತಿಯ ಪದಗಳನ್ನು ಶೃಂಗಾರ ಗೀತೆಗಳು, ಭಕ್ತಿಪದಗಳು ಮತ್ತು ಇತರ ವಿವಿಧ ಪದಗಳು ಎನ್ನುವುದಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು.
ಈತ ಪ್ರಕೃತಿ ಉಪಾಸಕನಾಗಿದ್ದ. ಸೌಂದರ್ಯಾರಾಧಕನೂ ಆಗಿದ್ದ, ವಸಂತ ಋತುವಿನ ಮೋಹಕತೆ, ಮಳೆಗಾಲದ ಭೀಕರತೆಗಳಾನ್ನು ಮನಮುಟ್ಟುವಂತೆ ಬಣ್ಣಿಸಿದ್ದಾನೆ. ಇವನ ಸಾಹಿತ್ಯಿಕ ಭಾಷೆ ಜಯದೇವನಂತೆ ಎಂದರೆ ತಪ್ಪಾಗಲಾರದು. ಪದಗಳನ್ನು ಪೋಣಿಸುವುದರಲ್ಲಿ ಪರಿಣತ. ಕನಿಷ್ಠ ಶಬ್ದಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಈತ ನಿಷ್ಣಾತ.
ಈತ ಭಕ್ತಿ ಹಾಗೂ ಶೃಂಗಾರ ಕವಿ. ರಾಧಾಕೃಷ್ಣರ ಪ್ರೇಮ, ಭಕ್ತಿ ನಿರೂಪಣೆ ಇವನ ಗೀತೆಗಳ ಪ್ರಧಾನ ಅಂಶ. ಜಯದೇವನ ಗೀತಗೋವಿಂದವನ್ನು ಈತ ಹೆಚ್ಚಾಗಿ ಅನುಸರಿಸಿದ್ದಾನೆ. ಭಕ್ತಿಯ ಜೊತೆಜೊತೆಗೇ ಶೃಂಗಾರವನ್ನೂ ತಂದಿದ್ದಾನೆ.

ಈತ ಚಿತ್ರಿಸಿದ ರಾಧೆ ಇತರ ಕಡೆಗಳಲ್ಲಿರುವಂತೆ ಕೃಷ್ಣನಿಗಿಂತ ದೊಡ್ಡವಳಲ್ಲ ಚಿಕ್ಕವಳು. ಕೃಷ್ಣನ ಪ್ರೇಮಧಾರೆಯಲ್ಲಿ ಮಿಂದ ರಾಧೆಗೆ ಕೃಷ್ಣಥುರೆಗೆ ಹೋದಾಗ ವಿರಹತಾಪ ತಡೆಯುವುದು ಕಷ್ಟವಾಗುತ್ತದೆ. ಈ ಕಡೆ ಕೃಷ್ಣನೂ ರಾಧೆಯನ್ನು ಅಗಲಿರಲಾರ. ಈ ಚಿತ್ರ ವಾಸ್ತವವಾಗಿ, ಸುಂದರವಾಗಿ, ಮನೋಜ್ಞವಾಗಿ ಮೂಡಿಬಂದಿದೆ. ಈತನ ಭಕ್ತಿ ಹಾಗೂ ಶೃಂಗಾರದ ಪರಿ ಬಂಗಾಲಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

No comments:

Post a Comment