Search This Blog

Thursday 3 May 2018

ಗಾಯತ್ರೀ ಛಂದಸ್ಸುಗಳಲ್ಲೆಲ್ಲಾ ಶ್ರೇಷ್ಟ ..................


ಸೋಮೋ ವೈ ರಾಜಮುಷ್ಮಿಂಲೋಕ ಆಸೀತ್ತಂ ದೇವಾಶ್ಚ ಋಷಯಶ್ಚಾಭ್ಯಧ್ಯಾಯನ್ | ಕಥಮಯಮಸ್ಮಾತ್ಸೋಮೋ ರಾಜಾ ಗಚ್ಛೇದಿತಿ ತೇ ಬ್ರುವಂಶ್ಛಂದಾಂಸಿ ಯೂಯಂ ನ ಇಮಂ ಸೋಮಂ ರಾಜಾನಮಾಹರತೇತಿ ತಥೇತಿ ತೇ ಸುಪರ್ಣಾ ಭೂತ್ವೋದಪತನ್ || ಐತರೇಯ ಬ್ರಾಹ್ಮಣ ೧೩ : ೨೫ ||
ಹಿಂದೆ ಸೋಮಲತೆಯು ಸ್ವರ್ಗಲೋಕದಲ್ಲಿತ್ತು. ಇದನ್ನು ತಿಳಿದ ದೇವತೆಗಳು ಆ ಲತೆಯನ್ನು ತರುವ ಬಗೆ ಹೇಗೆ ಎಂದು ತುಂಬಾ ಚಿಂತಿಸಿದರು. ಅವರಿಗೆ ಆಗ ಹೊಳೆಯಿತು ಸೋಮವನ್ನು ತರುವ ಶಕ್ತಿ ಇರುವುದು ಛಂದಸ್ಸುಗಳಿಗೆ ಮಾತ್ರ ಎನ್ನುವುದು ತಿಳಿಯುತ್ತದೆ. ಅವರೆಲ್ಲಾ ಸೇರಿ ಛಂದಸ್ಸುಗಳ ಬಳಿ ತೆರಳಿ ಪ್ರಾರ್ಥಿಸಿಕೊಳ್ಳುತ್ತಾರೆ. ನಮಗೋಸ್ಕರ. ಅಂದರೆ ಭೂಮಿಯಲ್ಲಿ ಯಜ್ಞ ಯಾಗಾದಿಗಳನ್ನು ಮಾಡಲಿಕ್ಕಾಗಿ ಸೋಮಲತೆ ಅತ್ಯವಶ್ಯವಾಗಿದೆ. ಅದನ್ನು ತರುವ ಶಕ್ತಿ ನಿಮಗೆ ಮಾತ್ರ ಇರುವುದರಿಂದ ತಂದುಕೊಡಿ ಎಂದು ಪ್ರಾರ್ಥಿಸುತ್ತಾರೆ. ದೇವತೆಗಳ ಪ್ರಾರ್ಥನೆಯನ್ನು ಅಂಗೀಕರಿಸಿ ಚಂದಸ್ಸುಗಳಲ್ಲೇ ಸ್ವಲ್ಪ ಹೆಚ್ಚು ಶಕ್ತಿಯನ್ನು ಹೊಂದಿದ ಛಂದಸ್ಸುಗಲು ಪಕ್ಷಿಯ ರೂಪ ಧರಿಸಿ ಸ್ವರ್ಗಕ್ಕೆ ಹಾರಿ ಹೋದವು. ಮೊದಲು ಜಗತೀ ಛಂದಸ್ಸು ಹಾರಿತು. ಆದರೆ ಅದಕ್ಕೆ ಮಧ್ಯದಲ್ಲೇ ಆಯಾಸವಾಗಿ ಸ್ವರ್ಗ ತಲುಪಲಾರದೇ ತಿರುಗಿ ಬಂದಿತು. ಅದು ಹಿಂತಿರುಗಿ ಬಂದ ಬಳಿಕ ತ್ರಿಷ್ಟುಪ್ ಛಂದಸ್ಸು ತಾನು ತರುತ್ತೇನೆಂದು ಪಕ್ಷಿ ರೂಪದಿಂದ ನೆಗೆದು ಹಾರಿತು. ಆದರೆ ಇದೂ ಸಹ ಅರ್ಧಕ್ಕೆ ಬಳಲಿ ಆಯಾಸಗೊಂಡು ಹಿಂತಿರುಗಿತು. ಜಗತೀ ಮತ್ತು ತ್ರಿಷ್ಟುಪ್ ಗಳು ತರಲಾಗದೇ ಹಿಂತಿರುಗಿದ್ದನ್ನು ಗಮನಿಸಿ ದೇವ್ಚತೆಗಳು ಗಾಯತ್ರೀ ಛಂದಸ್ಸಿನ ಬಳಿ ಪ್ರಾರ್ಥಿಸಿಕೊಂಡರು. ಗಾಯತ್ರಿಯು ಶ್ಯೇನ ಪಕ್ಷಿಯ ರೂಪವನ್ನು ಧರಿಸಿ ಸ್ವರ್ಗಕ್ಕೆ ಹೋಗಿ ಅಲ್ಲಿ ಸೋಮವನ್ನು ಕಾಯುತ್ತಿದ್ದ ಸ್ವಾನ, ಭ್ರಾಜ ಮುಂತಾದವರನ್ನೆಲ್ಲಾ ಹೆದರಿಸಿ ಸೋಮವನ್ನು ಭೂಮಿಗೆ ತಂದಿತು. ಸ್ವರ್ಗದಿಂದ ಭೂಮಿಗೆ ಸೋಮಲತೆಯನ್ನು ತಂದ ಕಾರಣವೇ ಗಾಯತ್ರಿಗೆ ಛಂದಸ್ಸುಗಳಲ್ಲೆಲ್ಲಾ ಶ್ರೇಷ್ಠ ಸ್ಥಾನ ಲಭಿಸಿತು.
ಸಾ ಯದ್ದಕ್ಷಿಣೇನ ಪದಾ ಸಮಗೃಭ್ಣಾತ್ತತ್ಪ್ರಾತಃ ಸವನಮಭವತ್ತದ್ಗಾಯತ್ರೀ ಸ್ವಮಾಯತನಮಕುರುತ ............ಐತರೇಯ ಬ್ರಾಹ್ಮಣ ೧೩ : ೨೬
ಸೋಮಲತೆಗಳನ್ನು ತನ್ನ ಕೊಕ್ಕಿನಿಂದ ಹಿಡಿದು ತರುತ್ತಿರುವಾಗ ಶ್ಯೇನ ಪಕ್ಷಿಯು ತನ್ನ ಎರಡು ಕಾಲುಗಳಿಂದ ಮತ್ತು ಕೊಕ್ಕಿನಿಂದ ಕಚ್ಚಿಕೊಂಡು ತರುತ್ತಿತ್ತು. ತನ್ನ ಬಲಗಾಲಿನಿಂದ ಹಿಡಿದುಕೊಂಡು ಬಂದ ಸೋಮವು ಪ್ರಾತಃಸವನವಾಯಿತು. ಗಾಯತ್ರಿಯು ಪ್ರಾತಃಸವನವನ್ನು ಸ್ವಕೀಯ ಸ್ಥಾನವನ್ನಾಗಿ ಮಾಡಿಕೊಂಡಿತು.
ಆದುದರಿಂದ ಪ್ರಾತಃ ಸವನವೇ ಶ್ರೇಷ್ಟ ಎಂದು ಇಂದಿಗೂ ಹೇಳುತ್ತಾರೆ. ಬೆಳಗಿನ ಮಂತ್ರಗಳೂ ವಿಶೇಷವಾಗಿರುವುದರಿಂದ ಇಂತಹ ಬೆಳಗಿನ ವಿಶೇಷವನ್ನು ಅರಿತವನು ಇಂದಿಗೂ ಎಲ್ಲರಿಗಿಂತ ಶ್ರೇಷ್ಠ ಎನ್ನಿಸುತ್ತಾನೆ. ಶ್ಯೇನವು ತನ್ನ ಎಡಗಾಲಿನಿಂದ ಹಿಡಿದು ತರುತ್ತಿರುವಾಗ ಬಲ ಗಾಲಿಗಿರುವ ಶಕ್ತಿಎದಗಾಲಿಗೆ ಇಲ್ಲದ್ದರಿಂದ ಸೋಮಲತೆ ಜಾರುತ್ತಿತ್ತು ಅದಕ್ಕಾಗಿ ಆ ಸಮಯವನ್ನು ಮಾಧ್ಯಂದಿನ ಸವನ ಎಂದು ಕರೆಯಲಾಯಿತು. ಇದು ಪ್ರಾತಃ ಸವನದಂತೆ ಶ್ರೇಷ್ಠತೆಯನ್ನು ಪಡೆಯಲಿಲ್ಲ. ಅದರಿಂದಾಗಿ ಅದಕ್ಕೆ ತ್ರಿಷ್ಟುಪ್ ಛಂದಸ್ಸನ್ನು ಬಳಸಿದ ಮಂತ್ರವನ್ನೂ ಇಂದ್ರನನ್ನು ದೇವತೆಯನ್ನಾಗಿ ಸ್ಥಾಪಿಸಿದರು ಇದರಿಂದ ಮಾಧ್ಯಂದಿನ ಸವನವೂ ಸರಿಸಮಾನ ಶ್ರೇಷ್ಠತೆಯನ್ನು ಪಡೆಯಿತು. ತನ್ನ ಕೊಕ್ಕಿನಿಂದ ಹಿಡಿದು ತಂದಿದ್ದ ಭಾಗವು ತೃತೀಯ ಸವನ ಎಂದು ಹೆಸರು ಪಡೆದುಕೊಂಡಿತು.
ತಸ್ಯ ಪತಂತೀ ರಸಮದಯತ್ತದ್ವೀತರಸಂ ನಾನ್ವಾಪ್ನೋತ್ಪೂರ್ವ್ವೇ ಸವನೇ ತೇ ದೇವಾಃ ಪ್ರಾಜಿಜ್ಞಾ ಸಂತ .........ಪಶುನಾ ಚರಂತಿ.....ರಾಧ್ನೋತಿ ಯ ಏವಂ ವೇದ || ಐತರೇಯ ಬ್ರಾಹ್ಮಣ ೧೩ : ೨೭ ||
ಗಾಯತ್ರಿಯು ಶ್ಯೇನ ರೂಪದ ಹಕ್ಕಿಯಾಗಿ ತನ್ನ ಕೊಕ್ಕಿನಿಂದ ಸೋಮಲತೆಯನ್ನು ಹಿಡಿದು ತರುತ್ತಿರುವಾಗ ಸ್ವಲ್ಪ ಸ್ವಲ್ಪವೇ ಸೋಮ ರಸ ಬಾಯಿಯೊಳಗೆ ಹೋಗುತ್ತಿತ್ತಂತೆ. ಆದುದರಿಂದ ಆ ಸಮಯದಲ್ಲಿ ಸೋಮ ಲತೆಯ ರಸ ಕಮ್ಮಿಯಾಗಿದ್ದರಿಂದ ಅದನ್ನು ತೃತೀಯ ಸವನ ವೆಂದು ಕರೆಯಲಾಯಿತು. ಶಕ್ತಿ ಸಾಮರ್ಥ್ಯಗಳಲ್ಲಿ ಪ್ರಾತಃ ಸವನ ಮತ್ತು ಮಾಧ್ಯಂದಿನ ಸವನಕ್ಕೆ ಸರಿಸಮಾಗಿರಲಿಲ್ಲ. ಇದನ್ನು ಸರಿದೂಗಿಸಲು ಹಸುವಿನಲ್ಲಿ ಕಂಡುಕೊಂಡರು. ಹಸುವಿನ ಹಾಲು ಮೊಸರು ಮತ್ತು ತುಪ್ಪಗಳನ್ನು ಹವಿರ್ದ್ರವ್ಯಗಳನ್ನಾಗಿ ಸ್ವೀಕರಿಸಿದರು. ತೃತೀಯ ಸವನದ ಸೋಮರಸವನ್ನು ಪ್ರಾತಃ ಮತ್ತು ಮಾಧ್ಯಂದಿನದಿಂದ ಮಿಕ್ಕುಳಿದ ಅದರ ಸಿಪ್ಪೆಯಿಂದ ಹಿಂಡಿ ತೆಗೆಯುವುದರಿಂದ ಋಜೀಷ ಎನ್ನುವ ಹೆಸರು ಬಂದಿತು, ಆ ರಸ ಕಡಿಮೆ ಇರುವುದರಿಂದ ಹಾಲನ್ನು ಸೇರಿಸಿ ಸರಿ ದೂಗಿಸಲಾಯಿತು. ಇದು ಯಜುರ್ವೇದದ ತೈತ್ತಿರೀಯ ಸಂಹಿತೆಯ ೬:೧ ೬ : ೪ ರಲ್ಲಿಯೂ ಇದೇ ರೀತಿ ಬರುತ್ತದೆ. ಸವನ ಎನ್ನುವುದು ಸೋಮವನ್ನು ತಯಾರಿಸುವ ಕ್ರಮ ಅಥವಾ ವಿದಿ ಎಂದು ನಾನು ಬೇರೆ ಕಡೆ ಗಮನಿಸಿದೆ. ಸೋಮರಸವನ್ನು ಸಿದ್ಧ ಪಡಿಸುವಾಗ ಸೋಮಲತೆಯನ್ನು ತಂದಮೇಲೆ ಅವುಗಳನ್ನು ಕಲ್ಲಿನಿಂದ ಜಜ್ಜಿ, ಅದನ್ನು ಹಿಂಡಿ ಬಟ್ಟೆಯಿಂದ ಸೋಸಲಾಗುತ್ತದೆ. ಈ ರೀತಿ ಮಾಡಿ ಸಿದ್ಧ ಪಡಿಸುವುದು ಪ್ರಾತಃ ಕಾಲ ಮಧ್ಯಾಹ್ನ ಕಾಲ ಮತ್ತು ಸಾಯಂಕಾಲ ನಡೆಯುವುದು ಈ ಕ್ರಮವನ್ನು ಅಭಿಷವಣ ಎನ್ನುತ್ತಾರೆ. ಅದನ್ನೇ ಸವನ ಎಂದೂ ಕರೆಯಲಾಗುತ್ತದೆ. ಇದೇ ಪ್ರಾತಃ ಸವನ, ಮಾಧ್ಯಂದಿನ ಸವನ ಮತ್ತು ತೃತೀಯ ಸವನ ಎನ್ನುವುದಾಗಿ ಕರೆಯಲಾಗಿದೆ.  
ಅದೇನೇ ಇರಲಿ ಉಳಿದ ಛಂದಸ್ಸನ್ನು ಅಥವಾ ಅದರ ಹೆಸರನ್ನು ಕೇಳುವುದು ಕಡಿಮೆಯಾದರೂ ಗಾಯತ್ರಿ ಎಲ್ಲರೂ ಎಲ್ಲಾ ಕಾಲದಲ್ಲೂ ಬಳಸುತ್ತಾರೆ. ಗಾಯತ್ರಿ ಸರ್ವ ಶ್ರೇಷ್ಠತೆಯನ್ನು ಪಡೆದಳು.

No comments:

Post a Comment