Search This Blog

Thursday 10 May 2018

"ಲಕ್ಷ್ಮೀಃ" ಭಾವಿತ ಚಾಪಲಾಪಿ


ಮಹಾವಿಷ್ಣುವು ಲೋಕವನ್ನು ಮೋಹ ಗೊಳಿಸುವುದಕ್ಕಾಗಿ ಲೋಕವನ್ನು ಇಬ್ಭಾಗಮಾಡಿದ. ಸದ್ಧರ್ಮವನ್ನಾಚರಿಸುತ್ತಿದ್ದ ಮಾನವರೂ, ವೇದಗಳೂ ಮತ್ತು ಲಕ್ಷ್ಮಿಯನ್ನೂ ಒಂದು ಭಾಗದಲ್ಲಿಟ್ಟು ಧರ್ಮ ಬಾಹಿರರೂ, ವೇದನಿಂದಕರನ್ನೂ, ಮತ್ತು ಅಲಕ್ಷ್ಮಿಯನ್ನೂ ಇನ್ನೊಂದು ಭಾಗದಲ್ಲಿಟ್ಟನು. ಹೀಗೆ ಮಾಡುವಾಗ ಅಲಕ್ಷ್ಮಿಯನ್ನು ಮೊದಲು ಸೃಷ್ಟಿಸಿದುದರಿಂದ ಆಕೆಗೆ ಜ್ಯೇಷ್ಠಾ ಎನ್ನುವ ಹೆಸರೂ ಬಂತು. ಅಮೃತ ಮಥನದ ಕಾಲದಲ್ಲಿ ಮೊದಲು ತೀವ್ರ ತರವಾದ ವಿಷವು ಬರುತ್ತದೆ. ಕೂಡಲೇ ಜ್ಯೇಷ್ಠಾದೇವಿ ಜನಿಸಿದಳು. ಆಮೇಲೆ ಲಕ್ಷ್ಮೀ ಬರುತ್ತಾಳೆ. ಹೀಗೆ ಮೊದಲು ಬಂದವಳು ಅಮಂಗಳಕಾರಿಣೀ ಆದುದರಿಂದ ಆಕೆಗೆ ಅಲಕ್ಷ್ಮೀ ಎನ್ನುವ ಹೆಸರೂ ರೂಢಿಯಾಯಿತು. ದುಸ್ಸಹ ಎನ್ನುವ ಋಷಿಯೊಬ್ಬ ಆಕೆಯನ್ನು ಮದುವೆಯಾಗಿ ಊರೂರು ಅಲೆಯತೊಡಗಿದ. ಲಕ್ಷ್ಮಿಯನ್ನು ವಿಷ್ಣು ಸ್ವೀಕರಿಸಿದ ಎನ್ನುವುದು ಸಾಮಾನ್ಯವಾಗಿ ಪ್ರಮುಖವಾದ ಎಲ್ಲಾ ಪುರಾಣಗಳಲ್ಲೂ ಕಾಣಸಿಗುತ್ತದೆ.
ರಾಮಾಯಣದ ಬಾಲಕಾಂಡದಲ್ಲಿ
ಸಮಃ ಸಮವಿಭಕ್ತಾಙ್ಗಃ ಸ್ನಿಗ್ಧವರ್ಣಃ ಪ್ರತಾಪವಾನ್ |
ಪೀನವಕ್ಷಾ ವಿಶಾಲಾಕ್ಷೋ ಲಕ್ಷ್ಮೀವಾನ್ ಶುಭಲಕ್ಷಣಃ || ೧೧ ||
ರಾಮಾಯಣದ ಮಹಿಮೆಯ ವರ್ಣನೆಯಲ್ಲಿ "ಈ ಮಹಾಕಾವ್ಯವನ್ನು ಕೇಳಿದನಂತರ ವಾಚಕನನ್ನು ಸತ್ಕರಿಸಿ ಗೌರವಿಸುವವನ ವಿಷಯದಲ್ಲಿ ಲಕ್ಷ್ಮೀಸಹಿತನಾದ ಮಹಾವಿಷ್ಣುವು ಸುಪ್ರೀತನಾಗುತ್ತಾನೆ. ವಾಚಕನೂ ಸುಪ್ರೀತನಾಗುತ್ತಾನೆ. ವಾಚಕನು ಸುಪ್ರೀತನಾದರೆ ಬ್ರಹ್ಮ-ವಿಷ್ಣು-ಮಹೇಶ್ವರರೂ ಸುಪ್ರೀತರಾಗುತ್ತಾರೆ. ಎನ್ನುವ ಮಾತು ಉಕ್ತವಾಗಿದೆ. ಸೀತೆಯು ಹೇಗೆ ಹುಟ್ಟಿದಳು ಮತ್ತು ಹೇಗೆ ವೃದ್ಧಿಹೊಂದಿದಳೆಂಬ ವಿಷಯವಾಗಿ ಪದ್ಮಪುರಾಣದಲ್ಲಿ ಹೀಗೆ ಹೇಳಿದೆ :
ಅಥ ಲೋಕೇಶ್ವರೀ ಲಕ್ಷ್ಮೀರ್ಜನಕಸ್ಯ ಪುರೇ ಸ್ವತಃ |
ಶುಭಕ್ಷೇತ್ರೇ ಹಲೊತ್ಖಾತೇ ತಾರೇ ಚೋತ್ತರಫಾಲ್ಗುನೇ ||
ಸರ್ವಲೋಕೇಶ್ವರಿಯಾದ ಮಹಾಲಕ್ಷ್ಮಿಯು ತಾನಾಗಿಯೇ ಜನಕರಾಜನ ಪಟ್ಟಣದಲ್ಲಿ ನೇಗಿಲಿನಿಂದ ಉಳುಮೆ ಮಾಡಿರುವ ಶುಭಕ್ಷೇತ್ರದಲ್ಲಿ, ಉತ್ತರಫಲ್ಗುನೀ ನಕ್ಷತ್ರದಲ್ಲಿ, ನೂರಾರು ಬಾಲಸೂರ್ಯಪ್ರಕಾಶವುಳ್ಳಳಾಗಿ, ತಾವರೆಯನ್ನು ಕೈಯಲ್ಲಿ ಹಿಡಿದವಳಾಗಿ, ಅಯೋನಿಜೆಯಾಗಿ, ನೇಗಿಲಿನಿಂದಾದ ಸಾಲಿನಲ್ಲಿ ಸುಂದರಿಯಾದ ಬಾಲಿಕೆಯಾಗಿ ಅವತರಿಸಿದಳು. ಸೀತಾಮುಖದಲ್ಲಿ ಹುಟ್ಟಿದುದರಿಂದ ಈಕೆಗೆ ಜನಕರಾಜನು ಸೀತೆಯೆಂದೇ ಹೆಸರಿಟ್ಟನು. ಎನ್ನುವ ಉಲ್ಲೇಖ ಸಿಗುತ್ತದೆ. ಇಲ್ಲಿ ಸೀತೆಯನ್ನು ಲಕ್ಷ್ಮಿಯ ಅಂಶದೊಡನೆ ಸಮೀಕರಿಸಲಾಗಿದೆ.
ಮಹಾಭಾರತದ ಆದಿಪರ್ವದ ೧೯೯ನೇ ಅಧ್ಯಾಯದಲ್ಲಿ
ಯಥಾ ವೈಶ್ರವಣೇ ಭದ್ರಾ ವಸಿಷ್ಠೇ ಚಾಪ್ಯರುನ್ಧತೀ |
ಯಥಾ ನಾರಾಯಣೇ ಲಕ್ಷ್ಮೀಸ್ತಥಾ ತ್ವಂ ಭವ ಭರ್ತೃಷು || ||
ಅರುಂಧತಿಯು ವಸಿಷ್ಠರೊಡನೆ ಇರುವಂತೆಯೂ, ಲಕ್ಷ್ಮೀದೇವಿಯು ನಾರಾಯಣನೊಡನೆ ಇರುವಂತೆಯೂ ನೀನು ನಿನ್ನ ಪತಿಗಳೊಡನೆ ಇರಬೇಕು ಎನ್ನುವ ಮಾತು ಬರುತ್ತದೆ. (ಇದು ದ್ರೌಪದಿಯನ್ನು ಕುರಿತಾಗಿರುವ ಮಾತು). ಇಲ್ಲಿ ನಾರಾಯಣನ ಜೊತೆಗೆ ಲಕ್ಷ್ಮಿಯನ್ನು ಹೇಳಲಾಗಿದೆ. ಹೀಗೆ ಪುರಾಣಗಳಲ್ಲಿ ಲಕ್ಷ್ಮಿ ಎನ್ನುವ ಹೆಸರು ಬೇಕಷ್ಟು ಸಿಗುತ್ತದೆ. ಆದರೆ ವೇದಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಸಿಗುವುದು.
ಋಗ್ವೇದದ ಹತ್ತನೇ ಮಂಡಲದಲ್ಲಿ
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕೃತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಾತಾದಿ ವಾಚಿ ||
"ಯವ" ಎನ್ನುವ ಧಾನ್ಯವನ್ನು ಸೋಸುವ ಪಾತ್ರೆಯಲ್ಲಿ ಹಾಕಿ ಶೋಧಿಸಿ ಶುದ್ಧ ಮಾಡಿದಾಗ ಪರಿಶುದ್ಧ ಧಾನ್ಯ ಲಭ್ಯವಾಗುವುದು. ಅದೇರೀತಿ ಬುದ್ಧಿವಂತರಾದ ಜನ ಮಾತನಾಡುವಾಗ ಮೊದಲು ತಮ್ಮ ಮನಸ್ಸಿನಲ್ಲಿ ಧ್ಯಾನಮಾಡಿ ಅಲೋಚಿಸಿ ಮಾತನಾಡುತ್ತಾರೆ. ಆದುದರಿಂದ ಇಂತವರ ಮಾತು ಎಲ್ಲರ ಮೇಲೂ ಪರಿಣಾಮ ಬೀರಿ ಎಲ್ಲರೂ ಪರಸ್ಪರ ಹೊಂದಿಕೊಂಡು ಸಾಗಿ ಸ್ನೇಹಭಾವವನ್ನು ವೃದ್ಧಿ ಪಡಿಸುತ್ತವೆ. ಇವರ ವಾಕ್ಯಗಳಲ್ಲಿ ಉತ್ತಮವಾದ ಮತ್ತು ಮಂಗಳಕರವಾದ ಲಕ್ಷಣಗಳು ಕಂದು ಬರುತ್ತದೆ. ಎಂದು ಈ ಋಚೆಯ ಅಭಿಪ್ರಾಯ. ಇಲ್ಲಿ ಲಕ್ಷ್ಮಿ ಎನ್ನುವುದು ಮಂಗಳಕರವಾದ ಎನ್ನುವ ಅರ್ಥವನ್ನು ದ್ವನಿಸುತ್ತದೆ. ಋಗ್ವೇದ ೫ನೇಮಂಡಲದ ಖಿಲಭಾಗದಲ್ಲಿ "ಲಕ್ಷ್ಮೀಂ ಅನಪಗಾಮಿನೀಂ" ಎನ್ನುವ ಮಂತ್ರ ಕಾಣಸಿಗುತ್ತದೆ. ಋಗ್ವೇದ ೧೦ನೇಮಂಡಲದ ಖಿಲಭಾಗದಲ್ಲಿ "ಲಕ್ಷ್ಮೀರಾಷ್ಟ್ರಸ್ಯ ಯಾ ಮುಖೇ" ಎನ್ನುವ ಋಕ್ಕು ಸಿಗುತ್ತದೆ.
ನಾನಾಹೇತಿ ಶತಾಭಿಘಾತ ಪತಿತ ಭ್ರಾನ್ತಾಶ್ವ ಪತ್ತಿ ದ್ವಿಪೇ ನೃತ್ಯದ್ಬೀಮ ಕವ(ಬ)ನ್ಧ ಖಡ್ಗ ಕಿರಣ ಜ್ವಾಲಾ ಸಹಸ್ರೇ ರಣೇ |
ಲಕ್ಷ್ಮೀರ್ಭಾವಿತಚಾಪಲಾಪಿಚಕೃತಾ ಶೌರ್ಯ್ಯೇಣ ಯೇನಾತ್ಮಸಾತ್ ರಾಜಾಸೀಜ್ಜಯ ಸಿಙ್ಘ್ಹವಲ್ಲಭ ಇತಿ ಖ್ಯಾತಶ್ಚಲುಕ್ಯಾನ್ವಯಃ ||
ಆರ್ಯಪುರ, ಅಯ್ಯಾವೊಳೆ, ಅಯ್ಯಾಹೊಳೆ ಇಂದು ನಮ್ಮ ಕಣ್ಣಿಗೆ ಐಹೊಳೆಯಾಗಿ ನಿಂತಿದೆ. ನಮಗೆ ಭವ್ಯ ಕಲಾ ಇತಿಹಾಸಕ್ಕೆ ಅತ್ಯದ್ಭುತ ಸಾಕ್ಷಿಯಾಗಿ ಸಿಗುವ ತಾಣಗಳಲ್ಲಿ ಐಹೊಳೆ ಬಹಳ ಮಹತ್ವವನ್ನು ಪಡೆಯುತ್ತದೆ. ನಾನಿಲ್ಲಿ ತೆಗೆದು ಕೊಂಡಿರುವುದು ಐಹೊಳೆಯಲ್ಲಿರುವ ರವಿಕೀರ್ತಿಯ ಶಾಸನದ ಎರಡನೇ ಸಾಲಿನ ಉತ್ತರಾರ್ಧ ಮತ್ತು ಮೂರನೇ ಸಾಲಿನ ಮೊದಲರ್ಧದ ಭಾಗ ಇಲ್ಲಿ ಲಕ್ಷ್ಮೀರ್ಭಾವಿತ ಚಾಪಲಾಪಿ ಎನ್ನುವ ಭಾಗವನ್ನು ಮಾತ್ರ. ಬಾದಾಮಿ ಚಲುಕ್ಯರಲ್ಲಿ ಅತ್ಯಂತ ಪ್ರಭಾವ ಶಾಲಿ ಮತ್ತು ಪರಾಕ್ರಮಿಯಾಗಿದ್ದ ಎರಡನೇ ಪೊಲೆಕೇಶಿಗೆ ಸಂಬಂಧಿಸಿದ ಶಾಸನವಿದು. ಈ ಶಾಸನ ಕೇವಲ ಶಾಸನವಾಗಿಯಷ್ಟೇ ಓದಿಸಿಕೊಂಡು ಹೋಗುವುದಿಲ್ಲ. ಇದು ಸಾಹಿತ್ಯಿಕವಾದ ಅಂಶಗಳನ್ನು ಮೈಗೂಡಿಸಿಕೊಂಡಿವೆ. ಈ ಶಾಸನ ಬರೆದಾತ ರವಿಕೀರ್ತಿ. ಸಂಸ್ಕೃತ ಸಾಹಿತ್ಯದ ಮೇರು ಕವಿ ಕಾಳಿದಾಸನಿಗೆ ತನ್ನನ್ನು ಸಮೀಕರಿಸಿಕೊಂಡು ತಾನೂ ಸಹ ಭಾರವಿ ಮತ್ತು ಕಾಳಿದಾಸನಷ್ಟೇ ಸಮರ್ಥನೆಂದು ಹೇಳಿಕೊಂಡಿದ್ದಾನೆ.
ಇಲ್ಲಿ ಲಕ್ಷ್ಮಿಯನ್ನು ಐಶ್ವರ್ಯಕ್ಕೆ ಹೋಲಿಸಲಾಗಿದೆ.
ಇದೇ ತರಹದ ಮಾತು ಕಾಳಿದಾಸನ ರಘುವಂಶದಲ್ಲಿ
ಪ್ರಸಾದಾಭಿ ಮುಖೇ ತಸ್ಮಿಂಶ್ಚಪಲಾಪಿ ಸ್ವಭಾವತಃ |
ನಿಕಷೇ ಹೇಮರೇಖೇವ ಶ್ರೀರಾಸೀದನಪಾಯಿನೀ || ೧೭ : ೪೬
ಈ ಶಾಸನದಲ್ಲಿ ಕಾಳಿದಾಸನ ಅನುಕರಣೆ ಹಲವೆಡೆ ಕಂಡು ಬರುತ್ತದೆ.

No comments:

Post a Comment