Search This Blog

Thursday 24 May 2018

ಅವಧೇಶ್ವರಿಯ - ವಿತ್ತಂ ಮೇ ಅಸ್ಯರೋದಸೀ


ಚಂದ್ರಮಾ ಅಪ್ಸ್ವನ್ತರಾ ಸುಪರ್ಣೋ ಧಾವತೇ ದಿವಿ |
ನವೋ ಹಿರಣ್ಯನೇಮಯಃ ಪದಂ ವಿಂದಂತಿ ವಿದ್ಯುತೋ ವಿತ್ತಂ ಮೇ ಅಸ್ಯ ರೋದಸೀ ||
ನಿನ್ನೆ ಬರೆದ ಲೇಖನದಲ್ಲಿ ಕುತ್ಸನನ್ನು ಬಾವಿಗೆ ತಳ್ಳಲ್ಪಟ್ಟ ವಿಷಯವನ್ನು ಹೇಳಿದ್ದೆ. ಅದರಲ್ಲಿ ಭಾಷ್ಯಕಾರರಲ್ಲಿಯೇ ಬೇರೆ ಬೇರೆ ಕಥೆಗಳನ್ನು ಹೇಳಲ್ಪಟ್ಟಿವೆ ಸಾಯಣಾಚಾರ್ಯರು ಹೇಳುವಂತೆ ಏಕತ ದ್ವಿತ ತ್ರಿತಾ ಎನ್ನುವ ಮೂವರು ಷಿಗಳಿದ್ದರು. ಒಮ್ಮೆ ಅರಣ್ಯ ಮತ್ತು ಮರಳುಗಾಡಿನಲ್ಲಿ ತಿರುಗುತ್ತಿರುವಾಗ ಬಾಯಾರಿಕೆ ಆಗುತ್ತದೆ. ಆಗ ತ್ರಿತನು ಉಳಿದಿಬ್ಬರಿಗೆ ನೀರನ್ನು ಬಾವಿಯಿಂದ ತಂದು ಕೊಡುತ್ತಾನೆ. ಬಾಯಾರಿಕೆ ನೀಗಿಒಸಿಕೊಂಡ ಉಳಿದಿಬ್ಬರು ತ್ರಿತನ ಬಲಿ ಇರುವ ಸಂಪತ್ತನ್ನು ತೆಗೆದುಕೊಂಡು ಅವನನ್ನು ಬಾವಿಗೆ ನೂಕಿ ಕಲ್ಲಿನ ಚಕ್ರವೊಂದನ್ನು ಅಡ್ದ ಇಟ್ಟು ಹೋಗುತ್ತಾರೆ ಆಗ ಆತ ವಿಶ್ವೇದೇವತೆಗಳನ್ನು ಪ್ರಾರ್ಥಿಸುತ್ತಾನೆ. ಆಗ ಈತ ಅವರನ್ನು ಸ್ತುತಿಸ ಬೇಕಾದ ಸೂಕ್ತದ ದರ್ಶನವನ್ನು ಪಡೆದುಕೊಳ್ಳುತ್ತಾನೆ. ಆ ಕಾಡಿನೊಳಕ್ಕೆ ಬಾವಿಯಲ್ಲಿ ಬಿದ್ದ ಚಂದ್ರಕಿರಣವನ್ನು ನೋಡಿ ತನ್ನ ವೇದನೆಯನ್ನು ಪ್ರಕಟಪಡಿಸುತ್ತಾನೆ. ಎನ್ನುತ್ತಾರೆ.
ಆದರೆ ಸ್ಕಂಧಸ್ವಾಮಿಯ ಭಾಷ್ಯದ ಪ್ರಕಾರ
ಆಪ್ತ್ಯ ಎನ್ನುವ ಋಷಿಗೆ ಏಕತ, ದ್ವಿತ ಮತ್ತು ತ್ರಿತ ಎನ್ನುವ ಮೂವರು ಪುತ್ರರಿದ್ದರು. ಅವರು ಯಜ್ಞ ಮಾಡಬೇಕೆಂಬ ಆಸೆಯಿಂದ ಯಜ್ಞ ಪಶುಗಳನ್ನು ಹೊಡೆದುಕೊಂಡು ಸರಸ್ವತೀ ನದಿಯ ತೋರಕ್ಕೆ ಬರುತ್ತಿರುವಾಗ ಸರಸ್ವತೀ ನದಿಯ ಇನ್ನೊಂದು ತೀರದಲ್ಲಿದ್ದ ತೋಳವೊಂದು ಯಜ್ಞ ಪಶಿಗಲನ್ನು ಕಾಣುತ್ತದೆ. ಅದು ನದಿಯನ್ನು ದಾಟಿಕೊಂಡು ಬಂದು ಯಜ್ಞ ಪಶುವನ್ನು ಹಿಡಿಯಲು ಉದ್ಯುಕ್ತವಾದಾಗ ಏಕತ ಮತ್ತು ದ್ವಿತರು ಹೇಗೋ ತಪ್ಪಿಸಿಕೊಂಡು ಯಜ್ಞಪಶುಗಳೊಂದಿಗೆ ಮನೆ ಸೇರಿಕೊಳ್ಳುತ್ತಾರೆ. ಆದರೆ ತ್ರಿತನು ಅಲ್ಲಿಯೆ ಬೆಳೆದಿದ್ದ ಬಳ್ಳಿಗಳು ಮತ್ತು ಗಿಡಗಳಿಂದ ಆವ್ರತವಾದ ಬಾವಿಯೊಳಕ್ಕೆ ಬೀಳುತ್ತಾನೆ. ಏಕತ ಮತ್ತು ದ್ವಿತರು ಯಜ್ಞ ಪಶುಗಳನ್ನು ಓಡಿಸಿಕೊಂಡು ಹೋಗುವಾಗಿನ ಧುಳಿನಿಂದ ತ್ರಿತನಿಗೆ ದಾರಿಕಾಣದೇ ಬಳ್ಳಿಗಳ ಮಧ್ಯದ ಬಾವಿಗೆ ಬಿದ್ದನು. ಆ ಕಗ್ಗತ್ತಲಿನಲ್ಲಿ ತ್ರಿತನು ಬಾವಿಯೊಳಕ್ಕೆ ಸಿಲುಕಿಕೊಂಡಾಗ ಆತನಿಗೆ ಮರಣ ಭೀತಿ ಆವರಿಸಿ ಸೋಮಯಾಗ ಮಾಡದೇ ಸತ್ತರೆ ಶ್ರೇಯಸ್ಸಿಲ್ಲ ಎಂದು ಚಿಂತಿಸಿ ಅಲ್ಲಿಯೇ ಬೆಳೆದಿದ್ದ ಬಳ್ಳಿಯನ್ನು ಜಜ್ಜಿ ರಸ ತೆಗೆದು ತನ್ನ ಆಂತರಿಕ ಯೋಗ ಸಂಪತ್ತಿನಿಂದ ಅಗ್ನಿಯನ್ನು ಆಹ್ವಾನಿಸಿ ಸೃಷ್ಟಿಸಿ ಅಲ್ಲಿಯೇ ಯಜ್ಞಾರ್ಥವಾಗಿ ದೇವತೆಗಳನ್ನು ಆಹ್ವಾನಿಸುತ್ತಾನೆ. ಆಗ ಬೃಹಸ್ಪತಿಯು ತ್ರಿತನ ಆಹ್ವಾನದ ಮೇರೆಗೆ ಎಲ್ಲಾ ದೇವತೆಗಳನ್ನೂ ಕೂಡಿಕೊಂಡು ಬಾವಿಯ ಸಮೀಪಕ್ಕೆ ಬಂದಾಗ ಬಾವಿಯಿಂದ ಮೇಲೆ ಬರಲಾಗದೇ ತನ್ನನ್ನು ಮೇಲೆಕ್ಕೆ ಕರೆಸಿಕೊಳ್ಳಿ ಎಂದು ದೇವತೆಗಳನ್ನು ಪ್ರಾರ್ಥಿಸುವ ಮಂತ್ರದ ಕೊನೆಗೆ ವಿತ್ತಂ ಮೇ ಅಸ್ಯ ರೋದಸೀ ಎನ್ನುತ್ತಾನೆ. ಎಂದು ಸ್ಕಂದಸ್ವಾಮಿ ಹೇಳುತ್ತಾರೆ.
ಒಮ್ಮೆ ಗೋವುಗಳನ್ನು ಮೇಯಿಸುವುದಕ್ಕಾಗಿ ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ತ್ರಿತನನ್ನು ಸಾಲಾವೃಕಿ (ಹೆಣ್ಣು ತೋಳದ)ಯ ದುಷ್ಟ ಮಕ್ಕಳು ತ್ರಿತನನ್ನು ಒಂದು ಬಾವಿಯಲ್ಲಿ ನೂಕಿ ಆತನ ಗೋವುಗಳನ್ನು ಅಪಹರಿಸಿಕೊಂಡು ಹೋಗುತ್ತಾರೆ. ಮಂತ್ರಜ್ಞನಾದ ಆ ತ್ರಿತ ಋಷಿಯು ಮೆಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಗ್ಯವಾಗದೇ ಇದ್ದಾಗ ಅಲ್ಲಿಯೇ ಇದ್ದ ಸೋಮಲತೆಗಳನ್ನು ಕಿತ್ತು ಅದರ ರಸವನ್ನು ಹಿಂಡಿ ಅದನ್ನು ಪಾನ ಮಾಡಿ ತನ್ನನ್ನು ಬಂಧಮುಕ್ತನನ್ನಾಗಿ ಮಾಡಬೇಕೆಂದು ದೇವತೆಗಳನ್ನೆಲ್ಲಾ ಪ್ರಾರ್ಥಿಸಿ ಕರೆದನು. ತನ್ನನ್ನು ಬಂಧಮುಕ್ತಗೊಳಿಸಿ ಎನ್ನುವುದಾಗಿ ಪ್ರಾರ್ಥಿಸುತ್ತಾನೆ. ಅಂತಹ ಪ್ರಾರ್ಥನೆಯನ್ನು ಕೇಳಿದ ಬೃಹಸ್ಪತಿ ದೇವತೆಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಇವನಿದ್ದ ಬಾವಿಯಯ ಬಳಿ ಬಂದು ಹುಡುಕುತ್ತಿರುವಾಗ ತ್ರಿತನು ‘ವರುಣ’ ಮತ್ತು ‘ಅರ್ಯಮಾ’ರ ಸಮಸ್ತವನ್ನು ಗ್ರಹಿಸಬಲ್ಲ ಶಕ್ತಿ ಎಲ್ಲಿ ಹೋಯಿತು ಎಂದು ವಿಷಾದಿಸುತ್ತಾನೆ.
ತಾನು ಬಾವಿಯಲ್ಲಿ ಬಿದ್ದಿರುವುದರಿಂದ ನಾನು ದೇವತೆಗಳನ್ನು ಕಾಣುತ್ತಿದ್ದರೂ ಅವರಿಗೆ ನಾನು ಕಾಣುತ್ತಿಲ್ಲ ಎಂದು ಸೋಮಲತೆಗಳಿಂದ ಯಜ್ಞವನ್ನು ಅಲ್ಲಿಯೇ ಮಾಡುತ್ತಿರಲು ಅದನ್ನು ಎಲ್ಲಾ ದೇವತೆಗಳೂ ಸ್ವೀಕರಿಸಿ ಆತನನ್ನು ಬಾವಿಯಿಂದ ಎತ್ತಿದರು ಎನ್ನುವ ಕಥೆ ಬೃಹದ್ದೇವತೆಯಲ್ಲಿ ಬಂದಿದೆ.
"ವಿತ್ತಂ ಮೇ ಅಸ್ಯ ರೋದಸೀ" ಎನ್ನುತ್ತಾ ಕೊನೆಗೊಳ್ಳುವ ಒಟ್ಟು ಹನ್ನೆರಡು ಋಕ್ಕಿನಲ್ಲಿ ಬಾವಿಯಲ್ಲಿ ಬಿದ್ದಾಗಿನ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ತನ್ನ ಮುಂದಿನ ಭವಿತವ್ಯದ ಕನಸ್ಸು ನುಚ್ಚು ನೂರಾಯಿತೆನ್ನುವುದು ತ್ರಿತನ ಅಭಿಪ್ರಾಯವಾಗಿತ್ತು. ಈ ತ್ರಿತನೇ ಕುತ್ಸ ಅಥವಾ ಪುರುಕುತ್ಸ. ಈತನ ಕುರಿತಾಗಿ ಮಹಾಭಾರತ ಮತ್ತು ಭಾಗವತದಲ್ಲಿ ತಿಳಿದು ಬರುತ್ತದೆ. ಈತ ಪುರಾಣದಲ್ಲಿ ಒಬ್ಬ ದೊಡ್ದ ರಾಜನಾಗಿ ಆಳ್ವಿಕೆ ನಡೆಸಿದ್ದು ನಮಗೆ ಗೋಚರಿಸುತ್ತದೆ. ಆದರೆ ವೇದದಲ್ಲಿ ಈತನೇ ಸೂಕ್ತ ರಚನೆಕಾರನಾಗಿ, ತ್ರಿತ ಆಪ್ತ್ಯನಾಗಿ ಕಂಗೊಳಿಸುತ್ತಾನೆ ಒಬ್ಬ ಋಷಿಯನ್ನು ಋಗ್ವೇದ ನಮಗೆ ದೊರಕಿಸಿ ಕೊಡುತ್ತದೆ. ಆದರೆ ಪುರಾಣಕ್ಕಿಂತಲೂ ಜಾಸ್ತಿ ತ್ರಿತನನ್ನು ಋಗ್ವೇದ ಹಾಡಿ ಹೊಗಳಿದೆ. ಅದನ್ನು ನಿನ್ನೆಯ ನನ್ನ ಬರಹದಲ್ಲಿ ಬರೆದಿದ್ದೆ. ಇಲ್ಲಿ “ತ್ರಿತ ಆಪ್ತ್ಯ” ಎನ್ನುವುದು ತ್ರಿತ ಅಥವಾ ಪುರುಕುತ್ಸನ ಮಗನಾದ ತ್ರಸದಸ್ಯುವನ್ನು ಕುರಿತಾದದ್ದು ಎನ್ನುವ ಅಭಿಪ್ರಾಯವೂ ಇದೆ.
ಹಾಗಾದರೆ ತ್ರಸದಸ್ಯು ? - ಋಗ್ವೇದದದ ಹತ್ತನೇ ಮಂಡಲದಲ್ಲಿ ಬರುವ ಋಕ್ಕು.
ಶತಂ ವಾ ಯದಸುರ್ಯ ಪ್ರತಿ ತ್ವಾ ಸುಮಿತ್ರ ಇತ್ಥಾಸ್ತೌದ್ಧುರ್ಮಿತ್ರ ಇತ್ಥಾಸ್ತೌತ್ |
ಆವೋ ಯದ್ದಸ್ಯುಹತ್ಯೇ ಕುತ್ಸ ಪುತ್ರಂ ಪ್ರಾವೋ ಯದ್ದಸ್ಯುಹತ್ಯೇ ಕುತ್ಸವತ್ಸಂ ||
ದಸ್ಯುಗಳನ್ನು ಸಂಹರಿಸುವ ಸಂದರ್ಭದಲ್ಲಿ ಕುತ್ಸನ ಮಗನಾದ ದುರ್ಮಿತ್ರ ಅಥವಾ ಸುಮಿತ್ರನನ್ನು ರಕ್ಷಿಸಿದಾಗಲೂ ಇಂದ್ರನೇ ಸುಮಿತ್ರನೆಂಬ ಋಷಿಯು ನಿನ್ನನ್ನು ಈ ರೀತಿಯಾಗಿ ಸ್ತುತಿಸಿದನು. ದುರ್ಮಿತ್ರನೆಂಬ ಹೆಸರಿನ ಅದೇ ಋಷಿಯು ಸುಮಿತ್ರನೆಂಬ ಹೆಸರಿನಿಂದ ಈ ರೀತಿಯಾಗಿ ಸ್ತುತಿಸಿದನು. ಇಲ್ಲಿ ಒಂದು ಆತನ ಹೆಸರಾಗಿದ್ದು ಇನ್ನೊಂದು ಆತನಿಗೆ ಅಂಟಿಕೊಂಡ ಅಡ್ದ ಹೆಸರು ಎನ್ನುವುದು ತಿಳಿಯುತ್ತದೆ. "ಯದ್ದಸ್ಯುಹತ್ಯೇ ಕುತ್ಸ ಪುತ್ರಂ ಪ್ರಾವೋ ಯದ್ದಸ್ಯುಹತ್ಯೇ ಕುತ್ಸವತ್ಸಂ " ಎನ್ನುವುದನ್ನು ನಾವು ನೋಡಿದರೆ ಇದೇ ಕುತ್ಸ ಅಥವಾ ತ್ರಿತನ ಮಗ ತ್ರಿತ ಆಪ್ತ್ಯನೇ "ಸುಮಿತ್ರ" ಎನ್ನುವುದಾಗುತ್ತದೆ. ಇದೇ ಸುಮಿತ್ರನೇ ಪುರಾಣದಲ್ಲಿ ಪ್ರಸಿದ್ಧನಾಗಿದ್ದ ತ್ರಸದಸ್ಯು ಎನ್ನುವ ಹೆಸರಿನಿಂದ ಕಾಣಸಿಗುತ್ತಾನೆ.
ಅವಧೇಶ್ವರಿಯ ಕೊನೆಯ ಉಪಸಂಹಾರದ ಭಾಗದಲ್ಲಿ
ಚಂದ್ರಮಾ ಅಪ್ಸ್ವನ್ತರಾ ಸುಪರ್ಣೋ ಧಾವತೇ ದಿವಿ |
ನವೋ ಹಿರಣ್ಯನೇಮಯಃ ಪದಂ ವಿಂದಂತಿ ವಿದ್ಯುತೋ ವಿತ್ತಂ ಮೇ ಅಸ್ಯ ರೋದಸೀ || ಕಂಡು ಬರುತ್ತದೆ. ಕಾದಂಬರಿಯ ಓದಿಗಾಗಿ ಅಲ್ಲಿ ಸ್ವಲ್ಪ ಅರ್ಥವನ್ನು ವ್ಯತ್ಯಾಸಗೊಳಿಸಿದ್ದಾರೆ ಅಲ್ಲಿ ತ್ರಸದಸ್ಯುವಿನ ತಂದೆ ಪುರುಕುತ್ಸನು ಬಾವಿಗೆ ಬೀಳುವ ಕಥೆ ಇಲ್ಲ. ಆತ ತನ್ನ ಹೆಂಡತಿಯಿಂದ ಬೇರೆ ಮಾರ್ಗದಲ್ಲಿ ಮಗನನ್ನು ಪಡೆದ ಎನ್ನುತ್ತಾ ಸಾಗುತ್ತದೆ. ಅಲ್ಲಿ ಗಂಡ ಹೆಂಡಿರ ಸಂಬಂಧವೇ ಕಾಣಿಸುವುದಿಲ್ಲ. ಅದು ಕಾದಂಬರಿ ನಾನಿಲ್ಲಿ ಹೇಳಿದ್ದು ವೇದದ ಉಲ್ಲೇಖವನ್ನು. ಅದೇನೇ ಇರಲಿ ವೇದದಿಂದ ಪುರಾಣ, ಇತಿಹಾಸ ಅಲ್ಲಿಂದ ಕಾದಂಬರಿ ಹೀಗೆ ಹಲವು ವಿಧದಲ್ಲಿ ಒಬ್ಬನೇ ವ್ಯಕ್ತಿ ಋಷಿಯಾಗಿ ಸೂಕ್ತ ಕರ್ತಾರನಾಗಿ ರಾಜನಾಗಿ ಕಂಡು ಬರುತ್ತಾನೆ.



No comments:

Post a Comment