Search This Blog

Friday 18 May 2018

ಪರಿತೋಷಿತ ಪ್ರಚಂಡ ಶಾಸನದಲ್ಲಿ ಆರ್ಯಾವರ್ತ


ಆರ್ಯಾವರ್ತ ಎನ್ನುವ ಪ್ರದೇಶವನ್ನು ಸೂಚಿಸುವ ಶಬ್ದ ವೇದದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಋಗ್ವೇದದಲ್ಲಿ ಆರ್ಯಾ ಶಬ್ದದ ಪ್ರಯೋಗವಿದ್ದರೂ ಸಹ ಆರ್ಯ ಎನ್ನುವುದು ಸಂಸ್ಕಾರ ಹೊಂದಿದ ಸಜ್ಜನ ಮುಂತಾದ ಅರ್ಥವನ್ನು ಸೂಸುತ್ತದೆ. ಆದರೆ ಆರ್ಯಾವ್ರತ ಎನ್ನುವುದನ್ನು ಋಗ್ವೇದದ ಹತ್ತನೇ ಮಂಡಲದಲ್ಲಿ ಕಾಣಬಹುದಾಗಿದೆ. ಅಲ್ಲಿಯೂ ಸಹ ಅದು ಮಂಗಳಮಯ ಎನ್ನುವ ಅರ್ಥವನ್ನು ಧ್ವನಿಸುತ್ತದೆ.
ಬ್ರಹ್ಮ ಗಾಮಶ್ವಂ ಜನಯಂತ ಓಷಧೀರ್ವನಸ್ಪತೀನ್ಪೃಥಿವೀಂ ಪರ್ವತಾ ಅಪಃ |
ಸೂರ್ಯಂ ದಿವಿ ರೋಹಯಂತಃ ಸುದಾನವ ಆರ್ಯಾ ವ್ರತಾ ವಿಸ್ರಜಂತೋ ಅಧಿ ಕ್ಷಮಿ || 10:63:11
ನಮ್ಮೆಲ್ಲರ ಪೋಷಕವಾದ ಅನ್ನವನ್ನೂ, ಅಶ್ವವನ್ನೂ ಓಷಧಿಗಳನ್ನೂ, ವೃಕ್ಷಗಳನ್ನೂ, ಪೃಥ್ವಿಯನ್ನೂ, ಪರ್ವತಗಳನ್ನೂ, ಉದಕಗಳನ್ನೂ, ಉತ್ಪನ್ನಮಾಡುತ್ತಲೂ ದ್ಯುಲ್ಲೋಕದಲ್ಲಿ ಸೂರ್ಯನನ್ನು ಉನ್ನತವಾಗಿ ಸ್ಥಾಪಿಸುತ್ತಲೂ ಇರುವ ಉದಾರವಾದ ದಾನಿಗಳಾದ ದೇವತೆಗಳು ಪೃಥ್ವಿಯ ಮೇಲೆ ಕಲ್ಯಾಣಕಾರಕಗಳಾದ ಯಾಗಾದಿ ಕರ್ಮಗಳನ್ನು ವಿಸ್ತೃತವಾಗಿ ನೆರವೇರಿಸುತ್ತಾರೆ.
ವಾಲ್ಮೀಕಿರಾಮಾಯಣದ ಬಾಲಕಾಂಡ ೩೯ನೆಯ ಸರ್ಗದಲ್ಲಿ ಸಗರನ ಅಶ್ವಮೇಧದ ಕುದುರೆಯ ಅಪಹರಣದ ಕಥೆ ಬರುತ್ತದೆ. ಆ ಕಥೆಯನ್ನು ನಾನಿಲ್ಲಿ ಹೇಳುವುದಿಲ್ಲ. ಆ ಕಥೆಯ ಕೊನೆಯಲ್ಲಿ, ವಿಂಧ್ಯಪರ್ವತಮಾಸಾದ್ಯ ಎನ್ನುವ ಶ್ಲೋಕ ಬರುತ್ತದೆ. ಅಲ್ಲಿ ವಿಂಧ್ಯ ಮತ್ತು ಹಿಮಾಲಯ ಎರಡೂ ಸಹ ಪರಸ್ಪರ ಒಂದನ್ನೊಂದು ನೋಡುತ್ತಿದ್ದವಂತೆ. ಅಂದರೆ ಆ ಭೂಭಾಗವನ್ನು ಆರ್ಯಾವರ್ತ ಎಂದು ಪರಿಗಣಿಸಲಾಗಿತ್ತು. ಈ ನೆಲದ ಮಧ್ಯದಲ್ಲಿರುವ "ಆರ್ಯಾವರ್ತವು" ಯಜ್ಞಮಾಡಲು ಬಹಳ ಪ್ರಶಸ್ತವಾದ ಭೂಮಿಯಾಗಿರುವುದಾಗಿ ಹೇಳಲಾಗಿದೆ. ಅದೇ ಸ್ಥಳದಲ್ಲಿಯೇ ಸಗರನ ಯಜ್ಞವು ಪ್ರಾರಂಭವಾಯಿತಂತೆ. ಪುಣ್ಯಭೂಮಿಯಲ್ಲಿ ಸಗರನು ಯಜ್ಞಮಾಡಲು ಪ್ರಾರಂಭಿಸಿ ಯಜ್ಞಾಶ್ವವನ್ನು ವಿಧಿಪೂರ್ವಕವಾಗಿ ದೇಶಪರ್ಯಟನಕ್ಕೆ ಕಳುಹಿಸಿದನು. ಯಜ್ಞಾಶ್ವದ ರಕ್ಷಣೆಯನ್ನು ಧನುಷ್ಪಾಣಿಯಾದ ಮಹಾರಥನಾದ, ಸಗರನಿಗೆ ಅತ್ಯಂತ ವಿಧೇಯನಾಗಿದ್ದ ಅಂಶುಮಂತನು ವಹಿಸಿಕೊಂಡಿದ್ದನಂತೆ. ಇಂದ್ರನು ಯಜ್ಞಕ್ಕೆ ತಡೆಮಾಡುವ ಇಚ್ಫೆಯಿಂದ ಸಗರನ ಯಜ್ಞದ ಅಶ್ವಾಲಂಭನದ ದಿನ ರಾಕ್ಷಸರೂಪವನ್ನು ತಾಳಿ ಕುದುರೆಯನ್ನು ಅಪಹರಿಸಿದನು. ಕುದುರೆಯು ಕಳೆದುಹೋಗಲಾಗಿ ಭ್ರಾಂತಿಗೊಂಡ ಋತ್ವಿಜರೆಲ್ಲರೂ ಯಜಮಾನನಾದ ಸಗರಚಕ್ರವರ್ತಿಯ ಬಳಿಗೆ ಬಂದು ಹೇಳಿದರು : “ಮಹಾರಾಜ, ನಮ್ಮ ಅಶ್ವಮೇಧದ ಅಶ್ವವನ್ನು ಅಶ್ವಾಲಂಭನದಿನದಲ್ಲಿ ಮಿಂಚಿನ ವೇಗದಲ್ಲಿ ಅಪಹರಿಸಿದ್ದಾರೆ. ಅಶ್ವಾಪಹಾರಿಯನ್ನು ಧ್ವಂಸಮಾಡಿ ಕುದುರೆಯು ಕೂಡಲೇ ನಮ್ಮ ಸಮೀಪಕ್ಕೆ ಬರುವಂತೆ ಮಾಡು ಎನ್ನುತ್ತಾರೆ. ಅಪಹೃತವಾಗಿರುವ ಕುದುರೆಯನ್ನು ಕರೆತರದಿದ್ದರೆ ಮಹಾಯಜ್ಞಕ್ಕೆ ವಿಘ್ನವುಂಟಾಗುತ್ತದೆ. ಇದು ಯಜಮಾನನಿಗೂ ಮತ್ತು ಋತ್ವಿಜರುಗಳಾದ ನಮಗೂ ಅಶುಭವೆಂದು ಹೇಳುತ್ತಾರೆ. ಆದುದರಿಂದ ಯಜ್ಞಕ್ಕೆ ವಿಘ್ನವಾಗದ ರೀತಿಯಲ್ಲಿ ಒಡನೆಯೇ ಕಾರ್ಯವನ್ನು ಪ್ರಾರಂಭಿಸು.” ಸಗರನು ಯಾಗಮಂಟಪದಲ್ಲಿ ಪುರೋಹಿತಪ್ರಮುಖರಾದ ಋತ್ವಿಜರು ಹೇಳಿದ ಮಾತುಗಳನ್ನು ಕೇಳಿ ತನ್ನ ಅರುವತ್ತುಸಾವಿರ ಮಕ್ಕಳನ್ನೂ ಕರೆದು ಹುಡುಕಲು ಇಡೀ ಆರ್ಯಾವರ್ತದಲ್ಲಿ ಎಲ್ಲಿದ್ದರೂ ಹುಡುಕಿ ಎನ್ನುತ್ತಾನೆ.
ಅಂತೂ ಏನೇ ಇರಲಿ ಆ ಎರಡು ಪರ್ವತಗಲ ಮಧ್ಯದ ಪ್ರದೇಶವಾದ ಆರ್ಯಾವರ್ತ ಸಮಭೂಮಿಯಾಗಿದ್ದಿರ ಬಹುದು.
ಮಹಾಭಾರತದ ಶಾಂತಿಪರ್ವ 325 ಅಧ್ಯಾಯದಲ್ಲಿ ಸರ್ಪವೇ ಮೊದಲಾದ ಅನೇಕ ವಿಷಜಂತುಗಳಿಂದಲೂ, ವನ್ಯಪ್ರಾಣಿಗಳಿಂದಲೂ ವ್ಯಾಪ್ತವಾಗಿದ್ದ ಕಾಡುಗಳನ್ನೂ ಮತ್ತು ವನಗಳನ್ನೂ ದಾಟಿ ಅನುಕ್ರಮವಾಗಿ ಮೇರುವರ್ಷವನ್ನೂ (ಇದನ್ನು ಇಲಾವೃತವರ್ಷ ಎಂದು ಕರೆಯಲಾಗುತ್ತದೆ), ಹರಿವರ್ಷವನ್ನೂ, ಹೈಮವತವರ್ಷವನ್ನೂ (ಕಿಂಪುರುಷವರ್ಷವನ್ನೂ) ಅತಿ ಕ್ರಮಿಸಿ ಭಾರತವರ್ಷಕ್ಕೆ ಆಗಮಿಸಿದನು. ಮಹಾಮುನಿಯಾದ ಶುಕನು ಚೀನ-ಹೂಣ ಮೊದಲಾದವರು ವಾಸಿಸುತ್ತಿದ್ದ ವಿವಿಧ ದೇಶಗಳನ್ನು ಸಂದರ್ಶಿಸುತ್ತಾ ಆರ್ಯಾವರ್ತ ಅಥವಾ ಭಾರತವರ್ಷಕ್ಕೆ ಆಗಮಿಸಿ ದನಂತೆ. ತಂದೆಯ ಅಪ್ಪಣೆಯಂತೆ ನಡೆದುಕೊಳ್ಳುತ್ತಾ ಮತ್ತು ಅವರ ಆದೇಶವನ್ನೇ ಪುನಃ ಪುನಃ ಸ್ಮರಿಸಿಕೊಳ್ಳುತ್ತಾ. ಪಕ್ಷಿಯು ಆಕಾಶಮಾರ್ಗದಲ್ಲಿ ಸಂಚರಿಸುವಂತೆ. ಭೂಮಿಯ ಮೇಲೆ ನಡೆದುಹೋಗುತ್ತಿದ್ದನು. ಹೋಗುತ್ತಿರುವಾಗ ಮಾರ್ಗದಲ್ಲಿ ರಮ್ಯವಾದ ಪಟ್ಟಣಗಳನ್ನೂ, ಧನ ಧಾನ್ಯಗಳಿಂದ ಸಮೃದ್ಧವಾದ ನಗರಗಳನ್ನೂ, ವಿಚಿತ್ರವಾದ ರತ್ನಗಳನ್ನೂ ನೋಡುತ್ತಿದ್ದರೂ ಅವುಗಳಾವುವೂ ಕಣ್ಣುಗಳಿಗೆ ಕಾಣಲೇ ಇಲ್ಲವೋ ಎಂಬ ರೀತಿಯಲ್ಲಿಯೇ ಅವುಗಳ ಕಡೆಗೆ ಸ್ವಲ್ಪವಾದರೂ ಗಮನವನ್ನು ಹರಿಸದೇ ಮುಂದೆ ಮುಂದೆ ಹೋಗುತ್ತಿದ್ದನು. ಪಥಿಕನಾದ ಶುಕನು ರಮ್ಯವಾದ ಉದ್ಯಾನವನಗಳನ್ನೂ, ಸುಂದರವಾದ ಸೌಧಗಳನ್ನೂ, ಅನೇಕಪುಣ್ಯತೀರ್ಥಗಳನ್ನೂ ಅತಿಕ್ರಮಿಸಿ ಮುಂದೆಹೋದನು. ಹೀಗೆಯೇ ಪ್ರಯಾಣಮಾಡುತ್ತಾ ಶುಕನು ಅತ್ಯಲ್ಪಕಾಲದಲ್ಲಿಯೇ ಮಹಾತ್ಮನಾದ, ಎಂದು ಬರುತ್ತದೆ ಈ ಪ್ರದೇಶ ಆರ್ಯಾವರ್ತವನ್ನು ಸೂಚಿಸುತ್ತದೆ ಮತ್ತು ಅಲ್ಲಿನ ಸೊಬಗನ್ನು ವರ್ಣಿಸಲಾಗಿದೆ.
ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ
ಆಸಮುದ್ರಾಚ್ಚ ಯತ್ಪೂರ್ವಾದಾಸಮುದ್ರಾಚ್ಚ ಪಶ್ಚಿಮಾತ್ |
ಹಿಮಾದ್ರಿವಿನ್ಧ್ಯಯೋರ್ಮಧ್ಯಮಾರ್ಯಾವರ್ತಂ ಪ್ರಚಕ್ಷತೇ || ||
ಪೂರ್ವಸಮುದ್ರದಿಂದ ಪಶ್ಚಿಮಸಮುದ್ರದವರೆಗೂ ಮಧ್ಯೆ ಇರುವ, ಹಿಮಾಲಯದಿಂದ ವಿಂಧ್ಯಪರ್ವತದವರೆಗೂ ಮಧ್ಯೆ ಇರುವ ಭೂಭಾಗವನ್ನು ಆರ್ಯಾವರ್ತವೆಂದು ಹೇಳುತ್ತಾರೆ.
ಸರಸ್ವತೀದೃಷದ್ವತ್ಯೋರ್ದೇವನದ್ಯೋರ್ಯದನ್ತರಮ್ |
ತದ್ದೇವನಿರ್ಮಿತಂ ದೇಶಂ ಬ್ರಹ್ಮಾವರ್ತಂ ಪ್ರಚಕ್ಷತೇ ||
ದೇವನದಿಗಳಾದ ಸರಸ್ವತೀ ಮತ್ತು ದೃಷದ್ವತೀನದಿಗಳಿಗೆ ಮಧ್ಯದಲ್ಲಿರುವ ಮತ್ತು ದೇವತೆಗಳಿಂದ ನಿರ್ಮಿತವಾಗಿರುವ ದೇಶವನ್ನು ಬ್ರಹ್ಮಾವರ್ತವೆಂದು ಹೇಳುತ್ತಾರೆ.
ಕುರುಕ್ಷೇತ್ರಂ ಮತ್ಸ್ಯಾಶ್ಚ ಪಞ್ಚಾಲಾಃ ಶೂರಸೇನಯಃ |
ಏತೇ ಬ್ರಹ್ಮರ್ಷಿದೇಶಾಸ್ತು ಬ್ರಹ್ಮಾವರ್ತಾದನನ್ತರಾಃ
ಕುರುಕ್ಷೇತ್ರ, ಮತ್ಸ್ಯದೇಶ, ಪಾಂಚಾಲದೇಶ ಮತ್ತು ಶೂರಸೇನದೇಶಗಳು ಬ್ರಹ್ಮರ್ಷಿಗಳ ದೇಶವಾಗಿದ್ದು ಇವು ಬ್ರಹ್ಮಾವರ್ತದ ಸಮೀಪದಲ್ಲಿವೆ.
ಭಾಗವತ ಪುರಾಣದಲ್ಲಿ 9ನೇ ಸ್ಕಂಧದಲ್ಲಿ
ಅನ್ಯೇಭ್ಯೋಽವಾನ್ತರದಿಶಃ ಕಶ್ಯಪಾಯ ಮಧ್ಯತಃ |
ಆರ್ಯಾವರ್ತಮುಪದ್ರಷ್ಟ್ರೇ ಸದಸ್ಯೇಭ್ಯಸ್ತತಃ ಪರಮ್ || ಎಂದು ಉಲ್ಲೇಖ ಸಿಗುತ್ತದೆ.
ನವಮಸ್ಕಂಧ ಅಧ್ಯಾಯ- ನವಮಸ್ಕಂಧ ೬ನೆಯ ಅಧ್ಯಾಯದಲ್ಲಿ ಇಕ್ಷ್ವಾಕುವಂಶದ ವರ್ಣನೆ ಹೇಳಲಾಗಿದೆ. ಅಲ್ಲಿ ಮಾಂಧಾತ ಮತ್ತು ಸೌಭರೀ ಋಷಿಗಳ ಕಥೆ ಶ್ರೀಶುಕರು ಹೇಳುತ್ತಾರೆ :
ವಿರೂಪಃ ಕೇತುಮಾಞ್ಛಮ್ಭುರಮ್ಬರೀಷಸುತಾಸ್ತ್ರಯಃ |
ವಿರೂಪಾತ್ಪೃಷದಶ್ವೋ ಽಭೂತ್ತತ್ಪುತ್ರಸ್ತು ರಥೀತರಃ || 1 || ಪರೀಕ್ಷಿತಮಹಾರಾಜ, ಅಂಬರೀಷಮಹಾರಾಜನಿಗೆ ವಿರೂಪ, ಕೇತು ಮಂತ ಮತ್ತು ಶಂಭುಎಂಬ ಮೂವರು ಮಕ್ಕಳಿದ್ದರು. ಜ್ಯೇಷ್ಠನಾದ ವಿರೂಪನಿಗೆ ಪೃಷದಶ್ವನೆಂಬ ಮಗನಿದ್ದನು. ರಥೀತರನು ಪೃಷದಶ್ವನ ಮಗ. ರಥೀತರನಿಗೆ ಮಕ್ಕಳಾಗಲಿಲ್ಲ. ವಂಶಾಭಿವೃದ್ಧಿಗಾಗಿ ರಥೀತರನು ಅಂಗಿರಸಮಹರ್ಷಿಯನ್ನು ಪ್ರಾರ್ಥಿಸಿದನು. ರಥೀತರನ ಪ್ರಾರ್ಥನೆಯಂತೆ ಅಂಗಿರಸನು ರಥೀತರನ ಕ್ಷೇತ್ರದಲ್ಲಿ ಬ್ರಹ್ಮವರ್ಚಸ್ವಿಗಳಾದ ಹಲವಾರು ಮಕ್ಕಳನ್ನು ಪಡೆದನು. ಇವರು ಯದ್ಯಪಿ ಕ್ಷತ್ರಿಯಕ್ಷೇತ್ರದಲ್ಲಿ ಹುಟ್ಟಿದವರಾದರೂ ಅಂಗಿರಸನಿಂದ ಹುಟ್ಟಿದ ಕಾರಣ ಆಂಗಿರಸರೆಂದೇ ಪ್ರಸಿದ್ಧರಾದರು. ರಥೀತರನ ಕ್ಷೇತ್ರಜರಾದುದರಿಂದ ರಥೀತರಪ್ರವರರೆಂದೂ ಪ್ರಸಿದ್ಧರಾದರು. ಇವರು ಕ್ಷತ್ರಿಯತ್ವಸಹಿತರಾದ ಬ್ರಾಹ್ಮಣರಾಗಿದ್ದರು. ಬ್ರಹ್ಮ-ಕ್ಷತ್ರರಿಬ್ಬರಲ್ಲಿಯೂ ಇವರಿಗೆ ಗೋತ್ರದ ಸಂಬಂಧವಿದ್ದಿತು. ಒಮ್ಮೆ ಮನುವು ಸೀನಿದಾಗ ಅವನ ಮೂಗಿನಿಂದ ಇಕ್ಷ್ವಾಕುವೆಂಬ ಮಗನು ಹುಟ್ಟಿದನು. ಇಕ್ಷ್ವಾಕುವಿಗೆ ನೂರು ಮಂದಿ ಮಕ್ಕಳಾದರು. ವಿಕುಕ್ಷಿ, ನಿಮಿ ಮತ್ತು ದಂಡಕರೆಂಬುವರು ಇಕ್ಷ್ವಾಕುವಿನ ನೂರು ಮಂದಿ ಮಕ್ಕಳಲ್ಲಿ ಹಿರಿಯರು. ನೂರು ಮಂದಿ ಮಕ್ಕಳಲ್ಲಿ ಇಪ್ಪತ್ತೈದು ಮಂದಿ ಆರ್ಯಾವರ್ತದ ಪೂರ್ವಭಾಗಕ್ಕೂ ಇಪ್ಪತ್ತೈದು ಮಂದಿ ಪುತ್ರರು ಆರ್ಯಾವರ್ತದ ಉತ್ತರಭಾಗಕ್ಕೂ ಅಧಿಪತಿಗಳಾಗಿದ್ದರು. ಮಧ್ಯ ಭಾಗವನ್ನು ವಿಕುಕ್ಷಿಯೇ ಮೊದಲಾದ ಮೂವರು ಆಳುತ್ತಿದ್ದರು. ದಕ್ಷಿಣೋತ್ತರದೇಶಗಳನ್ನು ಇಕ್ಷ್ವಾಕುವು ಉಳಿದ ನಲವತ್ತೇಳು ಮಂದಿ ಮಕ್ಕಳಿಗೆ ಹಂಚಿಕೊಟ್ಟಿದ್ದನು. ಎನ್ನುವುದಾಗಿ ಪುರಾಣದಲ್ಲಿ ಉಲ್ಲೇಖ ಕಾಣ ಸಿಗುತ್ತದೆ.
ಅಮರ ಸಿಂಹನ ಅಮರಕೋಶದಲ್ಲಿ
ಆರ್ಯಾವರ್ತಃ ಪುಣ್ಯಭೂಮಿರ್ಮಧ್ಯಂ ವಿಂಧ್ಯಹಿಮಾಗಯೋಃ |
ನೀವೃಜ್ಜನಪದೌ ದೇಶ ವಿಷಯೌ ತೂಪವರ್ತನಮ್ || ಅಮರಕೋಶ 2, ಭೂಮಿವರ್ಗ 316.
ಆರ್ಯಾವರ್ತ, ಪುಣ್ಯಭೂಮಿ ವಿಂದ್ಯ ಮತ್ತು ಹಿಮಾಲಯಗಳ ನಡುವೆ ಇರುವ ದೇಶ. ಎನ್ನುವುದಾಗಿಯೇ ಹೇಳಿದ್ದಾನೆ. ಆರ್ಯಾವರ್ತ ಆಮೇಲಿನ ಸಂಸ್ಕೃತ ಸಾಹಿತ್ಯದಲ್ಲಿ ಯಥೇಚ್ಚವಾಗಿ ಬಂದಿದೆ. ಕೆಲವೊಂದು ಕಡೆ ಆರ್ಯಾವರ್ತ ಇಡೀ ಭಾರತದ ಪ್ರದೇಶವನ್ನು ಹೇಳಿದ್ದರೂ ಸಹ ಹಿಂದಿನ ದಾಖಲೆಗಳೆಲ್ಲಾ ಹಿಮಾಲಯ ಮತ್ತು ವಿಂಧ್ಯದ ನಡುವನ್ನು ಸೂಚಿಸಿವೆ.
“ಬಲವರ್ಮ್ಮಾದ್ಯನೇಕಾರ್ಯ್ಯಾವರ್ತ ರಾಜಪ್ರಸಭೋದ್ಧರಣೋದ್ವೃತ್ತಪ್ರಭಾವಮಹತಃ ಪರಿಚಾರಕೀಕೃತ ಸರ್ವ್ವಾಟವೀಕ ರಾಜಸ್ಯ”
ಇದು ಸಮುದ್ರ ಗುಪ್ತನ ಅಲಹಾಬಾದ್ ನ ಸ್ತಂಭ ಶಾಸನದಲ್ಲಿರುವ ೨೧ ನೇ ಸಾಲಿನಲ್ಲಿ ಬರುವ ಶ್ಲೋಕ. ಇಲ್ಲಿ ಆರ್ಯಾವರ್ತವನ್ನು ಹೇಳುತ್ತಾನೆ. ಇದರ ಜೊತೆ ಸಮತಟ, ಡವಾಕ ನೇಪಾಲ, ಕಾಮರೂಪ ಕರ್ತ್ರೀಪುರ ಮುಂತಾದವನ್ನು ಹೇಳಲಾಗಿದೆ. ಪರಿತೋಷಿತ ಪ್ರಚಂಡ ಶಾಸನಸ್ಯ ಅನೇಕ ಭ್ರಷ್ಟ ರಾಜ್ಯೋತ್ಸನ್ನ ಎಂದು ಘರ್ಜಿಸಿದ ಈ ಶಾಸನದ ಈ ಸಾಲು ನಮ್ಮನ್ನು ನಮ್ಮ ಶಾಲಾ ದಿನಗಳಲ್ಲಿ ಅಧ್ಯಾಪಕರು ಅಷ್ಟೇ ಚೆನ್ನಾಗಿ ಘರ್ಜಿಸಿ ವಿವರಿಸುತ್ತಿದ್ದುದು ಕಣ್ಣಿಗೆ ಎದುರಾಗುತ್ತದೆ. ಈ "ಪರಿತೋಷಿತ ಪ್ರಚಂಡ ಶಾಸನಸ್ಯ" ಎಂದು ಆರಂಭ ವಾಗುವ ೨೩ನೇ ಸಾಲು ಪುನಃ ಪುನಃ ಓದಬೇಕೆನ್ನಿಸುತ್ತದೆ. ಮೈ ರೋಮಾಂಚನವಾಗುತ್ತದೆ. ಅದು ಭಾರತೀಯರ ಇತಿಹಾಸ ಕೆಚ್ಚೆದೆಯ ಕಲಿಗಳ ಆರ್ಭಟದ ನುಡಿಯಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ರಾಜ ಹೇಳಿದ್ದನೋ ಇಲ್ವೋ ಶಾಸನ ಕವಿಯಂತೂ ಹಾಗೇ ಬರೆದಿದ್ದಾನೆ.


No comments:

Post a Comment