Search This Blog

Thursday 3 May 2018

ಕಾಳಿದಾಸನ "ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ" - "ಅಸ್ತ್ಯುರ್ವ್ವೀಧ್ರಃ ಪ್ರತೀಚ್ಯಾಂ ಹಿಮಗಿರಿ ತನಯಃ"


ಕಾಳಿದಾಸ ಎನ್ನುವ ಹೆಸರು ಪ್ರಾಚೀನ ಭಾರತದಲ್ಲಿ ಜನಜನಿತವಾಗಿರಬೇಕು. ಕಾಳಿದಾಸನ ತರುವಾಯ ಬಂದ ಅನೇಕ ಶಿಲ್ಪಿಗಳು ಆ ಹೆಸರಿನಿಂದಲೇ ಶಸನಗಳನ್ನು ಬರೆಯುತ್ತಿದ್ದರು. ಹಾಗಂತ ಅವರೆಲ್ಲಾ ಕವಿಗಳಲ್ಲ, ಕಂಡರಣೆ ಕಾರರು ಮತ್ತು ರಾಜನ ಸೇವಕ ವರ್ಗದ ಜನರಾಗಿದ್ದರು ಪಶ್ಚಿಮಭಾಗದಿಂದ ಪೂರ್ವ ಭಾರತದ ತುದಿಯ ತನಕವೂ ಅಲ್ಲಲ್ಲಿ ಕಂಡು ಬರುತ್ತಾರೆ.
ಈ ಹಿಂದೆ ಹಲವು ಬಾರಿ ಕಾಳಿದಾಸನ ಕುರಿತಾಗಿ ಬರೆದಾಗಿದೆ ಆದುದರಿಂದ ಪುನಃ ಅವನ ಕುರಿತು ಬರೆಯುವುದು ಚರ್ವಿತಚರ್ವಣ ಎನ್ನಿಸಿ ಬಿಡುತ್ತದೆ. ಕಾಳಿದಾಸ ಸಂಸ್ಕೃತ ಕಾವ್ಯ ಪ್ರಪಂಚದ ಅಗ್ರಗಣ್ಯ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ರಘುವಂಶ ಒಂದಾದರೆ ಕುಮಾರಸಂಭವವೂ ಕೂಡಾ ಇನ್ನೊಂದು. ಇವೆರಡೂ ಸಹ ಮಹಾಕಾವ್ಯಗಳು. ಎರಡೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರನ್ನಗನ್ನಡಿಗಳು. ನವರಸಭಾವಗಳ ನಿರ್ವಹಣೆಯಲ್ಲಿ, ಸಮ್ದರ್ಭೋಚಿತ ಹಾಗು ಸುಲಲಿತ ಅಲಂಕಾರಗಳ ಸಂಯೋಜನೆಯಲ್ಲಿ, ಪ್ರಕೃತಿಯ ವರ್ಣನೆಯಲ್ಲಿ ಹಾಗೂ ಪಾತ್ರಗಳ ಸ್ವಭಾವ ಸುಂದರ ವರ್ತನೆಗಳ ಸಹಜ ಪ್ರತಿಪಾದನೆಯಲ್ಲಿ ಕಾಳಿದಾಸನನ್ನು ಸರಿಗಟ್ಟುವವರು ಬೇರೊಬ್ಬರಿರಲಿಕ್ಕಿಲ್ಲ.
ಕುಮಾರಸಂಭವದಲ್ಲಿ ಹದಿನೇಳು ಸರ್ಗಗಳು ಅಚ್ಚಾಗಿದ್ದರೂ ಅವೆಲ್ಲವೂ ಅವನದ್ದಲ್ಲ ಎನ್ನುವ ಮಾತಿದೆ. ಮಲ್ಲಿನಾಥನೇ ಮೊದಲಾದವರ ವ್ಯಾಖ್ಯಾನಗಳು ಸಿಕ್ಕುವುದು ಮೊದಲ ಎಂಟು ಸರ್ಗಗಳಿಗೆ ಮಾತ್ರ. ಸಂಸ್ಕೃತ ಲಾಕ್ಷಣಿಕರು ಕೂಡ 9ರಿಂದ 17 ವರೆಗಿನ ಸರ್ಗಗಳಿಂದ ಒಂದು ಉದಾಹರಣೆಯನ್ನು ಕೂಡ ಎತ್ತಿಕೊಂಡಿಲ್ಲ. ಇವನ್ನೆಲ್ಲಾ ಗಮನಿಸಿದರೆ ಕಾಳಿದಾಸ ಮೊದಲ ಎಂಟು ಸರ್ಗಗಳನ್ನು ಮಾತ್ರ ಬರೆದಿದ್ದಾನೆ. ಅದರಲ್ಲಿಯೂ ಎಂಟನೆಯ ಸರ್ಗದಲ್ಲಿ ಪಾರ್ವತೀಪರಮೇಶ್ವರರ ಸಂಭೋಗ ವರ್ಣನೆ ಮಾತ್ರ ಇರುವುದರಿಂದ ಕುಮಾರ ಅಥವಾ ಕಾರ್ತಿಕೇಯನ ಪ್ರತಾಪರ್ಣನೆಯನ್ನು ತಾರಕಾಸುರನ ವಧೆಯವರೆಗೆ ಮುಂದಿನ ಭಾಗವನ್ನು ಅಜ್ಞಾತ ಕವಿಯೊಬ್ಬ ಬರೆದು ಸೇರಿಸಿದಂತಿದೆ. ಮೊದಲ ಎಂಟು ಸರ್ಗಗಳ ಸೌಷ್ಟವ ಹಾಗು ಕಾವ್ಯಗುಣಗಳು ಮುಂದಿನ ಭಾಗದಲ್ಲಿ ಕಾಣುವುದೂ ಇಲ್ಲ.
 ಪಾರ್ವತಿಪರಮೇಶ್ವರರ  ಕಥೆ ರಾಮಾಯಣದಲ್ಲೂ ಶಿವ, ಸ್ಕಾಂದ ಮುಂತಾದ ಪುರಾಣಗಳಲ್ಲೂ ಸಂಗ್ರಹವಾಗಿ ಇಲ್ಲವೆ ವಿಸ್ತಾರವಾಗಿ ಬಂದಿದೆ. ಅಶ್ವಘೋಷನಿಗೂ ಇದರ ಪರಿಚಯವಿತ್ತು. ಕಾಳಿದಾಸ ಯಾವುದೇ ಮೂಲದಿಂದ ಕಥೆಯನ್ನು ಆಯ್ದಿರಲಿ, ತನ್ನದೇ ಆದ ಪ್ರತಿಭೆಯಿಂದ ಮಹಾಕಾವ್ಯವನ್ನು ಹೆಣೆದಿದ್ದಾನೆ. ವಟುವೇಷದ ಶಿವನಿಗೂ ಪಾರ್ವತಿಗೂ ನಡೆಯುವ ಸಂವಾದ, ಮನ್ಮಥನ ಪ್ರತಾಪ, ರತಿವಿಲಾಪ, ಶಿವಪಾರ್ವತೀವಿಲಾಸ ಇತ್ಯಾದಿ ವರ್ಣನೆಗಳೆಲ್ಲ ಕವಿಪ್ರತಿಭೆಯೇ ಕಲ್ಪಿಸಿರುವ ಕುಸುಮಗಳಾಗಿವೆ.
ಕುಮಾರ ಸಂಭವದ ಒಂದನೆಯ ಸರ್ಗದ ಪ್ರಾರಂಭದಲ್ಲಿ ಬರುವ ಹಿಮಾಲಯ ನಗಾಧಿರಾಜನ ವರ್ಣನೆ :
ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜ:|
ಪೂರ್ವಾಪರೌ ತೋಯ ನಿಧಿ ವಗಾಹ್ಯ ಸ್ಥಿತ ಪ್ರತಿವ್ಯಾ ಇವ ಮಾನದಂಡಃ ||
ಎಷ್ಟೊಂದು ಜೀವಂತವಾಗಿ ನಮ್ಮನ್ನು ಹಿಡಿದಿಡುತ್ತದೆ. ಈ ಶ್ಲೋಕವನ್ನು ಗಮನಿಸಿ. ಈ ವರ್ಣನೆಯನ್ನೇ ಆಧರಿಸಿ ಕಾಶ್ಮೀರವೇ ಕಾಳಿದಾಸನ ಜನ್ಮದೇಶವಾಗಿರಬೇಕೆಂದು ಕೆಲ ವಿದ್ವಾಂಸರು ಊಹಿಸಿದ್ದಾರೆ. ಕಾಳಿದಾಸನ ಕಣ್ಣಿಗೆ ಹಿಮಾಲಯ ಬರಿಯ ಕಲ್ಲು ರಾಶಿಯಲ್ಲ, ಹಿಮದ ಗಡ್ಡೆಯೂ ಅಲ್ಲ; ಅದು ಭಾರತದ ಭಾಗ್ಯದೇವತೆ; ಪೂರ್ವಪಶ್ಚಿಮ ಸಮುದ್ರಗಳವರೆಗೆ ಮೈಚಾಚಿರುವ ಅಳತೆಗೋಲು ಎಂದು ವರ್ಣಿಸುತ್ತಾನೆ ಮುಂದಿವರಿದು ಹಿಮಾಲಯ ಅಂದರೆ ಗಂಗೆ, ಭಾಗೀರಥಿ, ಪಾರ್ವತಿಯರ ಜನಕ. ಅವನ ಪತ್ನಿ ಮೇನಾದೇವಿ. ಪಾರ್ವತಿಯ ರೂಪಲಾವಣ್ಯಗಳ ವರ್ಣನೆಯ ಸವಿಯನ್ನು ಕಾವ್ಯವನ್ನೊದಿಯೇ ಅನುಭವಿಸಬೇಕು. ಉಮೆಯ ಮುಖದ ಮೇಲೆ ಲೀಲೆಯಿಂದಿಳಿದ ಲಾವಣ್ಯದೇವತೆಗೆ ಪದ್ಮದ ಪರಿಮಳವೂ ಚಂದ್ರನ ಕಾಂತಿಯೂ ಒಟ್ಟಿಗೇ ಲಭಿಸಿದುದಂತೆ. ನಾರದನಿಂದ ಈಕೆ ಶಿವನ ಕೈ ಹಿಡಿಯುವಳೆಂಬುದನ್ನರಿತು ಹಿಮವಂತ ಪಾರ್ವತಿಯನ್ನು ಅಲ್ಲಿಯೇ ತಪಗೈಯುತ್ತಿದ್ದ ಶಿವನ ಶುಶ್ರೂಷೆಗೆ ನೇಮಿಸುತ್ತಾನೆ. ತಾರಕಾಸುರ ಬ್ರಹ್ಮನ ವರಗಳಿಂದ ಕೊಬ್ಬಿ ಇಂದ್ರಾದಿ ದೇವತೆಗಳಿಗೆ ಕೊಡುತ್ತಿದ್ದ ಉಪಟಳದವರ್ಣನೆ ಎರಡನೆಯ ಸರ್ಗದ ವಿಷಯ ವಸ್ತು.
ಮೂರನೆಯ ಸರ್ಗದಲ್ಲಿ ಪ್ರಕೃತಿವರ್ಣನೆ ಪಾರ್ವತಿಯ ದಿವ್ಯಸೌಂದರ್ಯದ ವರ್ಣನೆಗೆ ಹಿನ್ನೆಲೆಯಾಗಿ ಬಂದಿದ್ದು ಸಂಸ್ಕø ಸಾಹಿತ್ಯದಲ್ಲಿಯೇ ಅತ್ಯಂತ ರಸಮಯವಾಗಿದೆ. ನಾಲ್ಕನೆಯ ಸರ್ಗದ ತುಂಬ ರತಿಯ ಪ್ರಲಾಪ ವರ್ಣಿತವಾಗಿದೆ. ಕರುಣರಸ ಇಲ್ಲಿ ಹೊನಲಾಗಿ ಹರಿದಿದೆ. ಶೃಂಗಾರದಂತೆ ಕರುಣ ರಸಪ್ರತಿಪಾದನೆಯಲ್ಲೂ ಕಾಳಿದಾಸನಿಗಿರುವ ನೈಪುಣ್ಯವನ್ನಿಲ್ಲಿ ಕಾಣಬಹುದು. ಐದನೆಯ ಸರ್ಗದಲ್ಲಿ ಶಿವನನ್ನು ತನ್ನ ಚೆಲುವಿನಿಂದ ಒಲಿಸಲಾಗದ ಪಾರ್ವತಿ ಉಗ್ರತಪವನ್ನು ಕೈಗೊಳ್ಳುತ್ತಾಳೆ. ಅದರ ವಿಸ್ತಾರವಾದ ವರ್ಣನೆ ಬರುತ್ತದೆ.
ಲೋಕರೀತಿಯಂತೆ ಗುರುಹಿರಿಯರ ಆಶೀರ್ವಾದ ಪಡೆದು ಶಿವಪಾರ್ವತಿಯರು ವಿವಾಹವಾಗುವ ವರ್ಣನೆ ಆರು ಮತ್ತು ಏಳನೆಯ ಸರ್ಗಗಳ ವಿಷಯ. ಶಯ್ಯಾಗೃಹದಲ್ಲಿ ಆಗತಾನೇ ಮದುವೆಯಾದ ಪ್ರಣಯಿಗಳ ಸುರತವಿಲಾಸದ ವರ್ಣನೆಗೆ ಸಂಪೂರ್ಣ ಎಂಟನೆ ಸರ್ಗ ಮೀಸಲಾಗಿದೆ. ದೇವತೆಗಳ ಶೃಂಗಾರವನ್ನೂ ಲೌಕಿಕ ಕಾಮಶಾಸ್ತ್ರಾನುಸಾರ ಇಲ್ಲಿ ವರ್ಣಿಸಲಾಗಿದ್ದು ಉಜ್ವಲ ಅಲಂಕಾರಗಳ ಪ್ರಭೆಯಿಂದ ಅವನ್ನು ಬೆಳಗಿಸಲಾಗಿದೆ. ಹಿಂದಿನ ಲಾಕ್ಷಣಿಕರಲ್ಲಿ ಕೆಲವರು ಇದನ್ನು ಅಸಭ್ಯ ದೋಷವೆಂದು ಪರಿಗಣಿಸಿದರೂ ಕಾಳಿದಾಸನ ಪ್ರತಿಭಾತಿಶಯದಿಂದ ದೋಷ ಮರೆಯಾಗಿದೆಯೆನ್ನಲು ಅಡ್ಡಿಯಿಲ್ಲ. ಶೃಂಗಾರರಸ ನಿರೂಪಣೆಯಲ್ಲಿ ಕಾಳಿದಾಸ ಎತ್ತಿದ ಕೈ. ಅವನ ವಿಖ್ಯಾತಿಗೆ ಕುಮಾರಸಂಭವ ಕೂಡ ಆಧಾರವಾಗಿದೆ.
ಇಲ್ಲಿ ನಾನಿಂದು ಹೇಳ ಹೊರಟಿರುವುದು ಪರಮಾರ ವಂಶದ ಉದೇಪುರ್ ಪ್ರಶಸ್ತಿ ಶಾಸನದ ಕುರಿತು.ಉದೇಪುರ್ ಪ್ರಶಸ್ತಿಯ ಐದನೆಯ ಸಾಲಿನಲ್ಲಿ ಬರುವ ಶ್ಲೋಕ ಕ್ಜಾಳಿದಾಸನ ಕುಮಾರ ಸಂಭವದ ಮಂಗಲಾಚರಣೆಯ ಶ್ಲೋಕದ ಮೊದಲಾರ್ಧ.
ಅಸ್ತ್ಯುರ್ವ್ವೀಧ್ರಃ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಂಪತ್ಯ ಸಿದ್ಧೇಃ ಸ್ಥಾನಂ ಜ್ಞಾನಭಾಜಾಮಭಿಮತ ಫಲದೋ ಖರ್ವಿತಃ ಸೋರ್ವ್ವುದಾಖ್ಯಃ |
ಇಲ್ಲಿ ಅಸ್ತ್ಯುರ್ವ್ವೀಧ್ರಃ ಪ್ರತೀಚ್ಯಾಂ ಹಿಮಗಿರಿ ತನಯಃ
ಇಲ್ಲಿ ಉತ್ತರಸ್ಯಾಂ ಎನ್ನುವ ಕಾಳಿದಾಸನ ಪದ್ವನ್ನು ಉದೀಚ್ಯಾಂ ಎನ್ನುವುದಾಗಿ ತೆಗೆದುಕೊಳ್ಳಲಾಗಿದೆ. ‘ಹಿಮಗಿರಿತನಯಃ’ ಅನ್ನುವುದು ಕಾಳಿದಾಸನ ಕಾವ್ಯದಲ್ಲಿ ‘ಹಿಮಾಲಯಃ’ ಎಂದು ಬಂದಿದೆ. ಈ ಶಸನದ ಕವಿ ಕಾಳಿದಾಸನ ಕುಮಾರ ಸಂಭವದಿಂದ ಪ್ರಭಾವಿತನಾಗಿರುವುದಂತೂ ನಿಜ. ಪರಮಾರ ವಂಶ ಒಂದು ದೃಷ್ಟಿಯಲ್ಲಿ ಕವಿಹೃದಯಿಗಳು, ವಾಕ್ಪತಿ ರಾಜ ಮುಂಜ ಸಂಸ್ಕೃತ ಭಾಷೆಯ ದೊಡ್ದ ಕವಿಯಾಗಿದ್ದ, ಅವನ ನಂತರ ಬಂದ ಭೋಜನಂತೂ ಇಂದಿಗೂ ಚಿರಸ್ಥಾಯಿಯಾಗಿದ್ದಾನೆ. ಇವರ ಕುರಿತೂ ಈ ಮೊದಲೇ ಬರೆದಿದ್ದೆ, ಭೋಜ ಸರ್ಪಬಂಧದ ಕುರಿತಾಗಿಯೂ ಹೇಳಿ ಆಗಿದೆ ಪುನಃ ಬೇಡ.
ಕಾಳಿದಾಸನಿಗೂ ಪೂರ್ವದಲ್ಲಿ ಹಿಮಾಲಯನ ವರ್ಣನೆ ಮಾಡಿದವರು ಇಲ್ಲವೇ ಇಲ್ಲ ಅನ್ನಬಹುದು.

No comments:

Post a Comment