Search This Blog

Sunday 31 December 2017

ಅಹಿಚ್ಛತ್ರ - ಅಹಿಕ್ಷೇತ್ರ ಕರ್ನಾಟಕವೇ ಅಥವಾ ಕರ್ನಾಟಕದಿಂದ ಹೊರಗಿತ್ತೇ ?

ಕನ್ನಡ ನಾಡನ್ನು ಮೊಟ್ಟಮೊದಲಿಗೆ ಆಳಿದ್ದು ಕದಂಬ ಮಯೂರ. ಈತನ ಬಗ್ಗೆ ಹಲವಾರು ದಂತೆಕಥೆಗಳೇ ಇದ್ದರೂ ಸಹ ಅಹಿಚ್ಛತ್ರಕ್ಕೂ ಕದಂಬರಿಗೂ ಸಂಬಂಧ ಕಲ್ಪಿಸುವುದು ಸಾಮಾನ್ಯ.ಬ್ರಾಹ್ಮಣೋತ್ಪತ್ತಿ ಮಾರ್ತಾಂಡದ ಶ್ಲೋಕ 1 ಪುಟ 577 ರಲ್ಲಿ ಮಯೂರೋ ನಾಮ ನೃಪತಿಃ ಹೇಮಾಂಗದಕುಮಾರಕಃ | ಅಹಿಕ್ಷೇತ್ರೇ ಸ್ಥಿತಾನ್ ವಿವಿಪ್ರಾಂಶ್ಚಾಗತಾನ್ ದ್ವಿಜಪುಂಗವಾನ್ || ಎನ್ನುವ ಉಲ್ಲೇಖ ಕಾಣಸಿಗುತ್ತದೆ.ಹೇಮಾಂಗದನ ಮಗನಾದ ಮಯೂರ ವರ್ಮನು ಅಹಿಕ್ಷೇತ್ರದ ಬ್ರಾಹ್ಮಣರನ್ನು ಕರೆತಂದ ಎನ್ನುವ ಉಲ್ಲೇಖ ಕಾಣಸಿಗುತ್ತದೆ. ಪ್ರಾಚೀನ ಕಾಲದ ಅಹಿಚ್ಚತ್ರ ಎನ್ನುವ ಸ್ಥಳ ಬೇರೆ ಬೇರೆ ಪ್ರದೇಶಗಳಿಗೆ ಹೇಳಲ್ಪಟ್ಟಿದೆ. ಆದರೆ ಅಹಿಚ್ಚತ್ರದಿಂದ ಬ್ರಾಹ್ಮಣರನ್ನು ದೂರದ ದಕ್ಷಿಣಕ್ಕೆ ಕರೆತಂದಿರುವ ಬಗ್ಗೆ ಅನೇಕ ವಿರೋಧಾಭಾಸಗಳಿವೆ. ಮಯೂರ ವರ್ಮನು ಸ್ವತಃ ಬ್ರಾಹ್ಮಣನಾಗಿದ್ದನೆಂದು ಹಲವು ಕಡೆಗಳಲ್ಲಿ ಉಲ್ಲೇಖವಾಗಿವೆ.ಅಥಬಭೂವ ದ್ವಿಜ ಕುಲಂ ಎಂದು ಮತ್ತು ಕದಂಬಕುಲೇ ಶ್ರೀಮಾನ್ ಬಭೂವ ದ್ವಿಜೋತ್ತಮಃ ನಾಮತೋ ಮಯೂರ ಶರ್ಮೇತಿ ಎಂದೂ ತಾಳಗುಂದದ ಶಾಸನದಲ್ಲಿಯೂ ಹಾಗೂ ಗುಡ್ನಾಪುರ ಶಾಸನದಲ್ಲಿ ವೇದ ವೇದಾಂಗ ವಿಶಾರದಃ ಎಂಬ ಉಲ್ಲೇಖ ಸಿಗುತ್ತದೆ. ಹಾಗಿರುವಾಗ ಈ ಪ್ರದೇಶದಲ್ಲಿ ಬ್ರಾಹ್ಮಣರೇ ಇರದಿದ್ದ ಸಂದರ್ಭವಿದ್ದರೆ ಬೇರೆಡೆಯಿಂದ ಬ್ರಾಹ್ಮಣರನ್ನು ಕರೆತರಬೇಕಿತ್ತು. ಕದಂಬ ಮಯೂರ ವರ್ಮ ಅಶ್ವಮೇಧವನ್ನೇ ಮಾಡಿಲ್ಲ ಎನ್ನುವ ಹಲವರ ವಾದಕ್ಕೆ "ಅಶ್ವಮೇಧಾವಭೃಥ ಪವಿತ್ರೀಕೃತಾನ್ವಯಾನಾಂ ಎನ್ನುವ ಉಲ್ಲೇಖ ದೇವಗಿರಿಯೇ ಮೊದಲಾದ ಶಾಸನಗಳಲ್ಲಿ ಸಿಗುತ್ತದೆ. ಎಪಿಗ್ರಾಫಿಯಾ ಕರ್ನಾಟಕ ಸಂಪುಟ 7ರಲ್ಲಿ ಶಾಸನಸಂಖ್ಯೆ 117 ರಲ್ಲಿ ಶಿಖಾರಿಪುರ ತಾಲೂಕಿನ ವಿರಕ್ತಮಠದಲ್ಲಿರುವ ತಾಮ್ರ ಶಾಸನದಲ್ಲಿನ ಉಲ್ಲೇಖದಂತೆ ಮಯೂರವರ್ಮನು ಅನೇಕ ಅಶ್ವಮೇಧಯಾಗಗಳನ್ನು ಮಾಡಿದನೆಂದು ಹೇಳಲ್ಪಟ್ಟಿದೆ. 111ಸಾಲುಗಳ ಈ ಶಾಸನ ಬನವಾಸಿಯನ್ನು ಆಳಿದ ಕದಂಬವೀರ ಸೋಮಭೂಪತಿಯದ್ದು. 
೧೦೫೩ರ ಕದಂಬ ತೈಲಪದೇವನ ಶಾಸನೊಂದರಲ್ಲಿ ಹದಿನೆಂಟು ಅಶ್ವಮೇಧ ಯಾಗವನ್ನು ಮಯೂರವರ್ಮನು ಮಾಡಿದ ಎಂದಿದೆ. ಇದು ಉತ್ಪ್ರೇಕ್ಷೆಯಾದರೂ ಸಹ ಇದರನ್ವಯ ನಾವು ಗಮನಿಸುವುದಾದರೆ ಈ ಶ್ರೌತಯಾಗಕ್ಕೆ ಯಾಗಕ್ಕೆ ಯಾವ ಯಾವ ಕರ್ಮಗಳಿಗೆ ಯಾವ ಬ್ರಾಹ್ಮಣರು ಅವಶ್ಯ ಎನ್ನುವುದನ್ನು ಅರಿತ ಮಯೂರ ಕರೆಸಿರಲೂ ಬಹುದೆನ್ನುವ ಅಭಿಪ್ರಾಯ ಅನೇಕ ವಿದ್ವಾಂಸರಲ್ಲಿದೆ. 
ಎಪಿಗ್ರಾಫಿಯ ಕರ್ನಾಟಕದ 3ನೇ ಸಂಪುಟದ ನಂಜನಗೂಡು ಶಾಸನ ಸಂಖ್ಯೆ 402 ರಲ್ಲಿ ಗಂಗರ ತಾಮ್ರಪಟ ಶಾಸನದಲ್ಲಿ ವೇದ ವಿದ್ಯಾ ಆವಾಸಸ್ಥಾನವಾದ ಅಹಿಚ್ಚತ್ರದಿಂದ ವೇದವಿದರಾದ ಬ್ರಾಹ್ಮಣರು ದಕ್ಷಿಣ ಪ್ರದೇಶವನ್ನು ಪಾವನ ಗೊಳಿಸಲು ಸ್ಥಾಣಗುಂದೂರಿನಲ್ಲಿ ಬಂದು ನೆಲೆಸಿದರು ಎನ್ನುತ್ತದೆ. ತಾಳಗೂಮ್ದದ ಶಿಲಾಶಾಸನದಲ್ಲಿ ಮುಕ್ಕಣ್ಣ ಅಥವಾ ತ್ರಿನೇತ್ರಕದಂಬನೆಂದು ಮಯೂರವರ್ಮನನ್ನು ಹೇಳಿರುವುದಲ್ಲದೇ, ಮುಕ್ಕಣ್ಣ ಕದಂಬನು ಅಹಿಚ್ಚತ್ರಕ್ಕೆ ಹೋಗಿ ಹನ್ನೆರಡು ಸಾವಿರ ಜನ ಬ್ರಾಹ್ಮಣರನ್ನು ಕರೆತಂದ ಎನ್ನುತ್ತದೆ. ಶಿವಮೊಗ್ಗ ಜಿಲ್ಲೆ ಕುಬಟೂರಿನ ಶಾಸನದಲ್ಲಿ "ಅಹಿಚ್ಚತ್ರಪುರೀ ಲಲನಾ ಲಲಾಟ ತಿಲಕರುಂ" ಎಂದು ಬಣ್ಣಿಸಿದೆ. ಆದರೆ ಇಷ್ಟೆಲ್ಲಾ ಆದರೂ ಸಹ ಅಹಿಚ್ಚತ್ರ ಅನ್ನುವುದು ಯಾವುದು ಎನ್ನುವುದರ ಬಗ್ಗೆ ಅನೇಕ ಗೊಂದಲಗಳಿವೆ. ಥಾಮಸ್ ಬುಕನಾನ್ ಪ್ರಕಾರ ಆಂಧ್ರದ ತೆಲಂಗಾಣ ಪ್ರದೇಶದ ಅಹಿಚ್ಚತ್ರದಿಂದ ೫೦೦೦ ಮಂದಿ ಬ್ರಾಹ್ಮಣರನ್ನು ಮಯೂರವರ್ಮ ಕರೆತಂದ ಎನ್ನುತ್ತಾರೆ. ಆದರೆ ಅದಕ್ಕೆ ಯಾವುದೇ ಪೂರಕ ದಾಖಲೆ ನಾನು ನೋಡಿದಂತೆ ಸಿಗುತ್ತಿಲ್ಲ.ಆದರೆ ಮುಲಕನಾಡು ಮುಂತಾದ ಬ್ರಾಹ್ಮಣರು ಆಂಧ್ರ ಮೂಲದಿಂದ ಇದ್ದಿರಬಹುದು ಯಾಕೆ ಅಂದರೆ ಇಂದಿಗೂ ತೆಲುಗು ಆಡು ಭಾಶೆಯನ್ನಾಗಿ ಪಡೆದುಕೊಂಡಿದ್ದಾರೆ. ಶಂಭಾಜೋಷಿಯವರು ಹೇಳುವಂತೆ (ಅಹಿಚ್ಚತ್ತ್ರ ಯಾವುದು? ಅದು ಎಲ್ಲಿದೆ? ಪುಟ 13 - 14ರಲ್ಲಿ) ಉತ್ತರದಲ್ಲಿ ಹಿಂದೆ ಛತ್ರಪುರವೆನ್ನುವ ಊರು ಇತ್ತುಅಹಿಕರು ಪ್ರಾಬಲ್ಯ ಹೊಂದಿದ್ದರಿಂದ ಅದನ್ನು ಅಹಿಚ್ಚತ್ರ ಎನ್ನುತ್ತಿದ್ದರು ಎನ್ನುತ್ತಾರೆ. ಆದರೆ ಇದಕ್ಕೂ ಸಹ ಸೂಕ್ತ ಆಧಾರ ಸಿಗುವುದಿಲ್ಲ. ಇನ್ನು ಕರಾವಳಿಯ ನಾಗರಖಂಡ ದ ಬಗ್ಗೆ ನೋಡುವುದಾದರೆ, ನಾಗ ಎನ್ನುವುದು ಹಾವಿನ ಇನ್ನೊಂದು ಹೆಸರಲ್ಲವೇ, ಅಹಿ ಎನ್ನುವುದು ನಾಗನಿಗೂ ಸಲ್ಲುತ್ತದೆ.ಅಹಿಕ್ಷೇತ್ರ ಎನ್ನುವುದೇ ಅಹಿಚ್ಚತ್ರವಾಗಿರಲೂ ಬಹುದು. ಎಪಿಗ್ರಾಫಿಯಾ ಕರ್ನಾಟಕ ೮ನೇ ಸಂಪುಟ ಸೊರಬ 228 ರ ಸಾಲು 43 - 44 ರಲ್ಲಿ ಮತ್ತು276ನೇ ಶಾಸನ ಸಂಖ್ಯೆಯಲ್ಲಿ ಹಾಗೂ ಶಾಸನ ಸಂಖ್ಯೆ 225 ರಲ್ಲಿ ನಾಗರ ಖಂಡದಉಲ್ಲೇಖ ವಿಸ್ತಾರವಾಗಿ ಬಂದಿದೆ. 
ಇವೆಲ್ಲವನ್ನೂ ಗಮನಿಸಿದರೆ ಕರ್ನಾಟಕದ ಕರಾವಳಿ ಭಾಗವನ್ನೇ ಅಹಿಚ್ಛತ್ರವೆಂದು ಕರೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇನ್ನು ವಿಸ್ತೃತವಾಗಿ ಮಾನ್ಯ ಸಚಿನ್ ಭಟ್ಟರ ಅಭಿಪ್ರಾಯದೊಂದಿಗೆ ನನ್ನ ಅಭಿಪ್ರಾಯವನ್ನು ಸೇರಿಸಿದಾಗ ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಹಾಗಾದರೆ ಈ ಗೋದಾವರಿ ತೀರವಿರುವುದು ಮಹಾರಾಷ್ಟ್ರದಲ್ಲೇ ಅಥವಾ ಆ೦ಧ್ರದಲ್ಲೇ? ಕದ೦ಬ ರಾಜರ ಕು೦ತಳ ರಾಜ್ಯದಲ್ಲಿ ತುಳುನಾಡಿನ ಆಲುಪರು ದರ್ಮಾಭಿಮಾನಿಗಳೂ, ಸತ್ಯಪುತ್ರರೂ ಆಗಿದ್ದರಿ೦ದ(ಇದು ಗಿರ್ನಾರ್ ಬಂಡೆ ಶಾಸನಗಳಲ್ಲಿ ಪ್ರಾಕೃತ ಮತ್ತು ಬ್ರಾಹ್ಮಿಯಲ್ಲಿ ಸತಿಯಪುತೋ ಎಂದು ಉಲ್ಲೇಖಗೊಂಡಿದೆ) ಅವರ ಆಶಯ ಪ್ರೋತ್ಸಾಹವೂ ಸೇರಿ ಕ್ರಿ.ಶ. ಮೂರನೇ ಶತಮಾನದ ಸುಮಾರಿಗೆ ಅಹಿಚ್ಛತ್ರದ ಬ್ರಾಹ್ಮಣರು ಬ೦ದರೇ? ಹಾಗೆ ಬಂದವರು ಬ್ರಾಹ್ಮಣರು ಮಾತ್ರವಲ್ಲ. ನಂಬೂದಿರಿಗಳು, ತಮಿಳಿನ ಗೌಂಡರ್ ಸಮುದಾಯ, ನಾಗಾ ಸಮುದಾಯಕ್ಕೆ ಸೇರಿದ ಕೇರಳದ ನಾಯರರು, ತುಳುನಾಡಿನ ಬಂಟರು, ಆಂಧ್ರದ ನಾಯ್ಡುಗಳು ಕೂಡ ಇದ್ದಾರೆ. ಇವರೆಲ್ಲರ ಇತಿಹಾಸಗಳೂ ಅಹಿಚ್ಛತ್ರವನ್ನೇ ಉಲ್ಲೇಖಿಸುತ್ತವೆ. ಹಾಗಾದರೆ ಆ ಅಹಿಚ್ಛತ್ರ ಒಂದೇ ಆಗಿತ್ತೇ ಅಥವಾ ಹಲವು ಪ್ರದೇಶಗಳಿಗೆ ಆ ಹೆಸರಿತ್ತೇ? ಒಂದೇ ಪ್ರದೇಶದಿಂದ ಬೇರೆ ಬೇರೆ ಸಮುದಾಯಗಳ ಅಷ್ಟು ದೊಡ್ಡ ಮಟ್ಟಿನ ವಲಸೆಗೆ ಕಾರಣಗಳೇನು? ಕೋಟ ಬ್ರಾಹ್ಮಣರು ಅಹಿಚ್ಛತ್ರದಿ೦ದ ಆಂಧ್ರದ ಗೋದಾವರಿ, ಗೋದಾವರಿಯಿ೦ದ ಬನವಾಸಿ, ಬನವಾಸಿಯ ಬಳಿಕ ಈ ಹಾದಿಯಲ್ಲಿ ಹಾಡುವಳ್ಳಿ, ಬೈ೦ದೂರು ಮಾರ್ಗವಾಗಿ ಸಹ್ಯಾದ್ರಿಯ ತಪ್ಪಲಿನ ಪ್ರಮುಖ ಸ೦ಪರ್ಕಪ್ರದೇಶವಾದ ಗ೦ಗನಾಡಿಗೆ ಬ೦ದು ನೆಲೆಸಿದರೆಂದು ಪಿ.ಎನ್. ನರಸಿ೦ಹಮೂರ್ತಿಯವರು ಸಂಪಾದಿಸಿದ ಕು೦ದನಾಡಿನ ಶಾಸನಗಳಲ್ಲಿ ತಿಳಿಸಲಾಗಿದೆ. ಶಾಂಕರ, ಮಾಧ್ವ ಮತಗಳ ಪ್ರಭಾವಕ್ಕೊಳಗಾಗದೇ ತಮ್ಮ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದ ಕರಾವಳಿಯ ಏಕೈಕ ಬ್ರಾಹ್ಮಣ ಸಮುದಾಯವಿದ್ದರೆ ಅದು ಕೂಟ ಬ್ರಾಹ್ಮಣರು. ಅವರ ಆರಾಧ್ಯ ದೈವ ನರಸಿಂಹ. ಆಂಧ್ರದಲ್ಲಿರುವಷ್ಟು ದೊಡ್ಡ ಮಟ್ಟಿನ ನರಸಿಂಹಾರಾಧನೆಯನ್ನು ಬೇರಾವ ರಾಜ್ಯಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದೊಂದು ವಿಶೇಷ.’ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ವಿಪ್ರರ ವಲಸೆಯನ್ನು ಪ್ರೋತ್ಸಾಹಿಸಿತು. ಕ್ರಿ.ಪೂ 50 ರಿ೦ದ ಕ್ರಿ.ಶ 200ರ ತನಕ ದಕ್ಷಿಣದಲ್ಲಿ ರಾಜ್ಯವಾಳಿದ ಶಕಪುರುಷ, ದಕ್ಷಿಣಾಪಥಪತಿ ಶಾಲಿವಾಹನ ಚಕ್ರವರ್ತಿಯ ಆಶ್ರಯ, ನಿರ೦ತರ ಯಜ್ಞಯಾಗದಿ೦ದ ಇವರ ವಲಸೆಗೆ ನೆರವು ಸಿಕ್ಕಿತು’ ಎಂದು ನಮ್ಮೂರಿನವರೇ ಆದ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳರು ತಮ್ಮ ’ಕೂಟಮಹಾಜಗತ್ತು’ ಎಂಬ ಸಂಶೋಧನಾ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಊಹೆ ಸರಿಯಾದುದಾದರೂ, ಗ್ರಹಿಕೆ ಸರಿಯಿಲ್ಲವೆನ್ನುವುದು ನನ್ನಭಿಪ್ರಾಯ. ಮೌರ್ಯರಿದ್ದುದು ಕ್ರಿ.ಪೂ ಹತ್ತನೇ ಶತಮಾನಕ್ಕೂ ಹಿಂದೆ ಎಂದು ನಾನು ಈಗಾಗಲೇ ಹೇಳಿ ಆಗಿತ್ತು. ಅಲೆಕ್ಸಾಂಡರ್ ದಾಳಿಮಾಡಿದ್ದು ಗುಪ್ತರ ಕಾಲದಲ್ಲಿ, ಮೇಲಾಗಿ ಅಸಲಿ ಶಾಲಿವಾಹನನಾಳಿದ್ದು ಉಜ್ಜೈನಿಯನ್ನೇ ಹೊರತೂ ದಕ್ಷಿಣಾಪಥವನ್ನಲ್ಲ, ಕ್ರಿ.ಶ 78ರಲ್ಲಿ ಪ್ರಾರಂಭವಾದ ಶಾಲಿವಾಹನ ಶಕೆಯ ಪ್ರಾರಂಭಕರ್ತೃ ಶಕಪುರುಷ ಶಾಲಿವಾಹನನೆಂದೇ ತಲೆಕೆಟ್ಟ ಬ್ರಿಟಿಷ್ ಇತಿಹಾಸಕಾರರಿಂದ ಗುರುತಿಸಲ್ಪಟ್ಟ ದಕ್ಷಿಣಾಪಥಪತಿ, ತ್ರಿಸಮುದ್ರತೋಯಪೀತವಾಹನನೆಂದೆಲ್ಲ ಬಿರುದಾಂಕಿತ ಗೌತಮೀಪುತ್ರಶಾತಕರ್ಣಿ ಆಳ್ವಿಕೆ ನಡೆಸಿದ ಕಾಲ ಕ್ರಿ.ಪೂ ೪ನೇ ಶತಮಾನ. ಈ ಮೂರೂ ಅಂಶಗಳಿಗೂ ತಾಳಮೇಳವಿಲ್ಲ. ಮೇಲಾಗಿ ಅಲೆಕ್ಸಾಂಡರಿನ ಆಕ್ರಮಣವಾದರೂ ಆತ ಸಿಂಧೂನದಿಯನ್ನು ದಾಟಲಾಗಲಿಲ್ಲವೆಂಬುದು ಸತ್ಯ. ಕಾರಣ, ಆಗ ಉತ್ತರ ಭಾರತವನ್ನಾಳುತ್ತಿದ್ದುದು ಯಾವುದೋ ಸಣ್ಣ ಪುಟ್ಟ ಚಿಲ್ಲರೆ ರಾಜವಂಶವಲ್ಲ. ಭಾರತದ ಸ್ವರ್ಣಯುಗದ ಸೃಷ್ಟಿಕರ್ತೃರೆನಿಸಿಕೊಂಡ ಗುಪ್ತರು ಅಲ್ಲಿ ಪಟ್ಟಕ್ಕೇರಿದ್ದರು. ವೈದಿಕ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಗುಪ್ತರ ಕೊಡುಗೆ ಕಡಿಮೆಯೇನಲ್ಲ. ಅಲೆಕ್ಸಾಂಡರಿನಂಥ ವೀರನೇ ಭಾರತದೊಳಬರಲು ಹೆದರಿದ್ದನೆಂದರೆ ಸಮಕಾಲೀನ ರಾಜನೀತಿಯಲ್ಲಿ ಗುಪ್ತರ ಪ್ರಾಬಲ್ಯವನ್ನು ಊಹಿಸಬಹುದು. ಅಂಥಹುದರಲ್ಲಿ ಉತ್ತರ ಭಾರತದಲ್ಲಿ ವಿದೇಶಿಗರ ಆಕ್ರಮಣ ತಾಳಲಾರದೇ ಬ್ರಾಹ್ಮಣರು ಅಲ್ಲಿಂದ ದಕ್ಷಿಣಕ್ಕೆ ವಲಸೆಬಂದರೆಂಬುದು ಸಾಧುವಾದವಲ್ಲ. ಸುದೀರ್ಘ 50 ವರ್ಷಗಳ ಕಾಲ ರಾಜ್ಯವಾಳಿದ ಸಮುದ್ರಗುಪ್ತ , ಸಪ್ತಸಿ೦ಧೂ ಪ್ರದೇಶಗಳನ್ನು ಆಕ್ರಮಿಸಿ ಆ ಭಾಗದ ಯೌಧೇಯರನ್ನು ತನ್ನ ಅಧೀರರನ್ನಾಗಿಸಿದ ವಿಚಾರ ಅವನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಉಲ್ಲೇಖಿತವಾಗಿದೆ. ಅದರಲ್ಲಿ ಸಮುದ್ರಗುಪ್ತನು ಸಟ್ಲೇಜ್ ನದಿ ಪ್ರದೇಶದ ಬ್ರಹ್ಮಾವರ್ತವನ್ನೂ, ದಕ್ಷಿಣಾಪಥವನ್ನೂ ಆಕ್ರಮಿಸಿ ಅಹಿಚ್ಛತ್ರದ ರಾಜನಾದ ಅಚ್ಯುತನನ್ನೂ, ಚಂಪಾವತಿಯ ನಾಗಸೇನನನ್ನೂ, ಕೋಟದ ಮುಖ್ಯಸ್ಥನನ್ನೂ ಜಯಿಸಿದನೆ೦ದು ಹೇಳಿಕೊಂಡಿದ್ದಾನೆ. ಪೊಳಲಿ ನಾರಾಯಣ ಮಯ್ಯರು ’ಕೂಟಬಂಧು’ ಮಾಸಿಕದಲ್ಲಿ ಇದನ್ನೊಮ್ಮೆ ಪ್ರಸ್ತಾವಿಸಿದ್ದರು. ಆಂಧ್ರದ ಗೋದಾವರಿಯ ದಕ್ಷಿಣಕ್ಕೆ ಚಂಪಾವತಿ ನದಿಮುಖಜ ಭೂಮಿಯ ಪ್ರದೇಶಕ್ಕೆ ಚಂಪಾವತಿಯೆಂದು ಹೆಸರು. ಅವೆರಡೂ ಒಂದೇ ಆಗಿರಬಹುದೇ? ಕೋಟ ಎಂಬ ಹೆಸರಿನ ಊರು ಕರ್ನಾಟಕದ ಉಡುಪಿ ಹಾಗೂ ಆಂಧ್ರಪ್ರದೇಶ ನೆಲ್ಲೂರು ಈ ಎರಡೂ ಕಡೆಯೂ ಇವೆ(ರಾಜಸ್ಥಾನ, ಮಲೇಷಿಯಾಗಳಲ್ಲೂ ಇವೆ). ಅಹಿಚ್ಛತ್ರವೂ ಅಲ್ಲೆಲ್ಲೋ ಹತ್ತಿರದಲ್ಲೇ ಇರಬಹುದೇ? ಇದೇ ಸಮುದ್ರಗುಪ್ತ ಪಲ್ಲವರೊಡನೆ ಕಾದಾಡಿ ಶಿವಸ್ಕಂಧವರ್ಮನನ್ನು ಸೋಲಿಸಿದ್ದ. ಈ ಸೋಲಿನಿಂದ ಪಲ್ಲವರು ಬಲಗುಂದಿದ್ದನ್ನೇ ನೋಡಿಕೊಂಡು ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಇವುಗಳೆಲ್ಲಾ ಏನೇ ಇರಲಿ ಅಹಿಛ್ಛತ್ರವೆನ್ನುವುದು ಕರ್ನಾಟಕದ ಕರಾವಳಿ ಪ್ರದೇಶ ಎನ್ನುವುದು ನನ್ನ ಅಭಿಪ್ರಾಯ. ಕರಾವಳಿಯಲ್ಲಿ ಮೊದಲೇ ಬ್ರಾಹ್ಮಣ ವಸತಿ ಇದ್ದಿತ್ತು ಎಂದಿಟ್ಟುಕೊಳ್ಳೋಣ. ಆದರೆ ಯಜ್ಞಯಾಗಾದಿಗಳನ್ನು ಋಷಿಸ೦ಪ್ರದಾಯ ಪ್ರವರ್ತಕರೂ, ಮ೦ತ್ರವೇತ್ತರೂ, ಮ೦ತ್ರದೃಷ್ಟಾರರೂ ಅಗಿರುವವರಿ೦ದಲೇ ಮಾಡಿಸಬೇಕಿತ್ತು. (ಹೆಚ್ಚಿನ ವಿವರ ವೇ.ಬ್ರ. ಬನವತಿ ರಾಮಕೃಷ್ಣ ಶಾಸ್ತ್ರಿಗಳ ’ಗೋತ್ರಪ್ರವರ ವಿಷಯ’). ಹಾಗಾಗಿದ್ದರಿಂದಲೇ ಮಯೂರ ವರ್ಮ ವೇದಪಾರಂಗತರನ್ನು ಬೇರೆಡೆಯಿಂದ ಕರೆಸಬೇಕಾಯ್ತು. ಕರ್ನಾಟಕ ಚರಿತ್ರೆ ಸ೦ಪುಟ 1 ಪುಟ 316ರಲ್ಲಿಯೂ ಉಲ್ಲೇಖಿಸಿದ೦ತೆ ನಾಸಿಕದ ಮಾಧವಪುರ ಷಟ್‌ಕೋನ ಸ್ಯೂಪಸ್ಥ೦ಭ ಶಾಸನವು ಸಾಕೇತ ಅಯೋಧ್ಯೆಯಿ೦ದ ಬ೦ದ ಕಾಶ್ಯಪ ಗೋತ್ರದ ಕಠಶಾಖೆಯ ಸೋಮಯಶಸ್ ಬ್ರಾಹ್ಮಣನು ಕ್ರಿ.ಶ 102ರಲ್ಲಿ(?) ವಾಜಪೇಯ ಯಾಗವನ್ನು ಶಾತವಾಹನ ರಾಜರ ಪರವಾಗಿ ನೇರವೇರಿಸಿದ ಎಂದಿದೆ. ಈ ಶಾತವಾಹನರ ಪ್ರಾ೦ತೀಯ ರಾಜಧಾನಿ ಬನವಾಸಿಯಾಗಿತ್ತು. ಶಾತವಾಹನರ ಬಳಿಕ ಕರಾವಳಿ ಮ೦ಡಲವನ್ನಾಳತೊಡಗಿದ ಒ೦ದನೇ ಚುಟುಕುಲಾನ೦ದ ಶಾತಕರ್ಣಿ ಮತ್ತವನ ಮಗ ಎರಡನೇ ಮಗ ವಿಣ್ಹೆ ಚುಟುಕುಲಾನ೦ದ ಶಾತಕರ್ಣಿಯರು ಅನೇಕ ಯಾಗಗಳನ್ನು ನೆರವೇರಿಸಿ ದಾನದತ್ತಿ ನೀಡಿದ ಬಗ್ಗೆ ಶಾಸನಗಳಿವೆ. ಶಾತವಾಹನರು ಹಾರೀತ ಪುತ್ರರೆ೦ದೂ, ಮಾನ್ಯ ಗೋತ್ರದವರೆ೦ದೂ ತಮ್ಮನ್ನು ಕರೆದುಕೊ೦ಡಿದ್ದರು. ಅವರ ನ೦ತರ ಆಳ್ವಿಕೆಗೆ ಬ೦ದ ಮಯೂರವರ್ಮ ತಾನು ಶಿವಸ್ಕ೦ದವರ್ಮನ ಮರಿಮೊಮ್ಮಗ, ವೀರಶರ್ಮನ ಮೊಮ್ಮಗ, ಬ೦ಧುಷೇಣನ ಮಗನೆಂದೂ ಹಾರೀತ ಪುತ್ರ, ಮಾನ್ಯ ಗೋತ್ರದವನೆ೦ದೂ ಹೇಳಿಕೊಂಡು ತನ್ನ ಮೂಲವನ್ನು ಶಾಲಿವಾಹನರ ಜೊತೆ ಗುರುತಿಸಿಕೊಂಡಿದ್ದಾನೆ. ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ, ಅಶೋಕನ ಮೊಮ್ಮಗ ಸಮ್ಪ್ರತಿಯ ಕಾಲದಲ್ಲಿ ಆ೦ಧ್ರದ ಗೋದಾವರಿ ತಟದವರೆಗೆ ಹಬ್ಬಿದ್ದ ಕಳಿ೦ಗರಾಜ್ಯದಲ್ಲಿ ಜೈನಮತಾಚರಣೆ ವ್ಯಾಪಕಗೊ೦ಡಿದ್ದು ವಿಪ್ರರ ವಲಸೆಯನ್ನು ಗೋದಾವರಿಯ ದಕ್ಷಿಣಕ್ಕೆ ಪ್ರೋತ್ಸಾಹಿಸಿತು. ಕಳಿ೦ಗ ರಾಜ್ಯದ ರಾಜಧಾನಿ ಕಳಿ೦ಗಪಟ್ಟಣವಿರುವುದು ಆ೦ಧ್ರದ ಗೋದಾವರಿ ತೀರದ ಶ್ರೀಕಾಕುಳ೦ನಲ್ಲಿ. ಖಾರವೇಲರ ಕಾಲದಲ್ಲಿ ಉತ್ತರ ಆ೦ಧ್ರದ ಬಹುಭಾಗ ಜೈನಮತ ಪ್ರವರ್ಧಮಾನಕ್ಕೆ ಬ೦ದು ವೈದಿಕ ಮತ ಅನಾದರಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೋ ಏನೋ ಕಳಿ೦ಗ ರಾಜ್ಯಕ್ಕೆ ಕಾಲಿಟ್ಟರೆ ಪ್ರಯಶ್ಚಿತ್ತ ಮಾಡಿಕೊಳ್ಳಬೇಕೆ೦ದು ಬೋಧಾಯನ ಒ೦ದು ಕಡೆ ಹೇಳುತ್ತಾನೆ. ಹಾಗೆ ನೋಡಿದರೆ ಯಜುರ್ವೇದದ ಸೂತ್ರಕಾರರಾದ ಆಪಸ್ತಂಭ ಮತ್ತು ಬೋಧಾಯನರಿಬ್ಬರೂ ಆಂಧ್ರದೇಶದವರೇ ಅಂದರೆ ಆಂಧ್ರದೇಶವು ಮೊದಲಿನಿಂದಲೂ ವೈದಿಕ ಚಟುವಟಿಕೆಗಳ ಮುಖ್ಯಕೇಂದ್ರವಾಗಿತ್ತು. ಉತ್ತರದಿಂದ ಗೋದಾವರೀ ತೀರಕ್ಕೆ ಬಂದಿರಬಹುದಾಗಿದ್ದ ವಿಪ್ರರು ಶಾತವಾಹನರ ನಂತರ ಅಲ್ಲಿಂದ ಮತ್ತೆ ದಕ್ಷಿಣದತ್ತ ಉನ್ನತ ಸ್ಥಾನಮಾನವನ್ನರಸಿ ತೆರಳಿರಬಹುದು. 
ಶಾತವಾಹನ ಸಾಮ್ರಾಜ್ಯದಲ್ಲಿ ಮೊದಲ ಮಗ ಪಟ್ಟಕ್ಕೇರುತ್ತಿದ್ದ. ಉಳಿದ ಮಕ್ಕಳು ಮತ್ತು ಅಳಿಯಂದಿರು ವಿವಿಧ ಮಂಡಳಗಳ ಅಥವಾ ಪ್ರಾಂತ್ಯಗಳ ಅಧಿಪತಿಗಳಾಗುತ್ತಿದ್ದರು. ಶಾತವಾಹನರ ಕೊನೆಯ ಅರಸು ಪುಲೋಮಶ್ರೀ ಶಾತಕರ್ಣಿಯ ಕಾಲದಲ್ಲಿ ಸಾಮ್ರಾಜ್ಯ ಶಿಥಿಲವಾಗಿತ್ತು. ಚಿಕ್ಕ ಚಿಕ್ಕ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿದ್ದ ವಂಶಸ್ಥರೆಲ್ಲ ದಾಯಾದಿ ಕಲಹದಲ್ಲಿ ತೊಡಗಿ ಹೊಡೆದಾಡತೊಡಗಿದರು. ಅವರಲ್ಲಿ ಕೆಲವರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ತಮ್ಮದೇ ರಾಜ್ಯ ಕಟ್ಟಿಕೊಂಡರು. ಮುಂದೆ ಶಾತವಾಹನ ಸಾಮ್ರಾಜ್ಯ ಹನ್ನೆರಡು ಕವಲುಗಳಾಗಿ ಒಡೆದು ಹೋಯಿತೆಂದು ಬ್ರಹ್ಮಾಂಡಪುರಾಣ(ಅಂಧ್ರಾರಾಮ್ ಸಂಸ್ಥಿತಾಃ ಪಂಚ ತೇಷಾಮ್ ವಸಶ್ಚಃ ಯೇ ಪುನ ಸಪ್ತೈವತು ಭವಿಷ್ಯಂತಿ - ಅಧ್ಯಾಯ 77, 171) ಮತ್ತು ವಾಯುಪುರಾಣಗಳು ತಿಳಿಸುತ್ತವೆ. ಪಲ್ಲವರು, ಸೇನ, ಕದಂಬ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲವೂ ಆಂಧ್ರಶಾತವಾಹನರೇ. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ಮುಂದೆ ಸ್ಕಂದವರ್ಮನ ಕಾಲದಲ್ಲಿ ಅದು ಕೃಷ್ಣಾ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ವರೆಗೂ ಪಶ್ಚಿಮದಲ್ಲಿ ಬಳ್ಳಾರಿಯವರೆಗೂ ವಿಸ್ತರಣೆಯಾಯಿತು. ಪಲ್ಲವ ಶಬ್ದಾರ್ಥವೇ ಬಳ್ಳಿ ಅಥವಾ ಎಲೆ. ಇದರಲ್ಲಿನ ಅನೇಕ ವಿಷಯಗಳು. ಎಲ್ಲಾ ಕಡೆಗಳಿಂದ ತೆಗೆದುಕೊಂಡಿದ್ದೇನೆ. 
ಅಹಿಚ್ಚತ್ರದಿಂದ ಬ್ರಾಹ್ಮಣರಾಗಿದ್ದರೆ ಉತ್ತರದ ಶಾಖ್ಹೆಯ ವೇದಗಳನ್ನು ಇಲ್ಲಿ ಸ್ವಲ್ಪವಾದರೂ ಉಳಿಸಿಕೊಳ್ಳುತ್ತಿರಲಿಲ್ಲವೇ ?? ಇಲ್ಲಿ ಬ್ರಾಹ್ಮಣರ ಕೊರತೆ ಇತ್ತೇ ??

No comments:

Post a Comment