Search This Blog

Sunday 10 December 2017

ಸಾಹಿತ್ಯಕ್ಕೆ ಬಾದಾಮಿ ಚಾಳುಕ್ಯರ ಅಪ್ರತಿಮ ಕೊಡುಗೆ "ದಾಟ - ರವಿಕೀರ್ತಿ ಮತ್ತು ವಿಜಯ ಭಟ್ಟಾರಿಕೆ"

ಬಾದಾಮಿ ಚಳುಕ್ಯರ ಕಾಲದಲ್ಲಿದ್ದ ಅನೇಕ ಸಂಸ್ಕೃತ ಕವಿಗಳಲ್ಲಿ ಮಂಗಲೇಶನ ಮಹಾಕೂಟದ ಸ್ತಂಭ ಶಾಸನದ ಕರ್ತೃ ದಾಟ ಒಬ್ಬನಾದರೆ ಆಮೇಲೆ ಐಹೊಳೆಯ ಮೇಗುಟಿ ಜಿನದೇವಾಲಯದಲ್ಲಿ ಶಾಸನ ಬರೆದ ರವಿಕೀರ್ತಿ ಅತ್ಯಂತ ಪ್ರಮುಖರು ಇವರನ್ನಲ್ಲದೇ ಸಮಕಾಲೀನ ರಾಜ ವಂಶದ ‌ವಿಜ್ಜಿಕೆ ಸು. 7ನೆಯ ಶತಮಾನದವಳು. ಹೆಸರಾಂತ ಸಂಸ್ಕೃತ ಕವಯಿತ್ರಿ. ಈಕೆ ವಿಜ್ಜಕಾ, ವಿಜ್ಜಾಕಾ, ವಿಜ್ಜಿಕಾ, ವಿಜಾ, ಬಿಜ್ಜಕ, ವಿಜಯಾಂಬಿಕಾ ಎಂಬ ಹೆಸರುಗಳಿಮ್ದ ಗುರುತಿಸಲ್ಪಟ್ಟಿದ್ದಾಳೆ. ಈಕೆ ಬಾದಾಮಿ ಚಳುಕ್ಯವಂಶದ ಚಂದ್ರಾದಿತ್ಯನ ಮಡದಿ. ವಿಜಯಭಟ್ಟಾರಿಕಾ ಈಕೆಯೇ ಇರಬಹುದೆಂಬ ಊಹೆ ಇದೆ. ಸುಮಾರು ಕ್ರಿ ಶ. 855ರಲ್ಲಿದ್ದ ಕಾಶ್ಮೀರದ ಅರಸ ವಂತಿವರ್ಮನ ಸಮಕಾಲೀನ ಭಟ್ಟಕಲ್ಲಟನ ಮಗ ಮುಕುಲಭಟ್ಟ ತಾನು ರಚಿಸಿದ "ಅಭಿಧಾವೃತ್ತಿ ಮಾತೃಕ" ಎಂಬ ವ್ಯಾಕರಣ ಗ್ರಂಥದಲ್ಲಿ ವಿಜಯ ಭಟ್ಟಾರಿಕೆಯದು ಎಂದು ಹೇಳಬಹುದಾದ ಒಂದು ಶ್ಲೋಕವನ್ನು ಉದಾಹರಣೆಗಾಗಿ ಆಯ್ದುಕೊಂಡಿದ್ದಾನೆ. ವಿಜಯ ಭಟ್ಟಾರಿಕೆಯದೇ ಎಂದು ಪ್ರಸಿದ್ಧವಾದ ಮತ್ತೊಂದು ಶ್ಲೋಕದಿಂದ ಈಕೆ ಪ್ರಸಿದ್ಧ ಸಂಸ್ಕೃತ ಆಲಂಕಾರಿಕ ಮತ್ತು ದಶಕುಮಾರ ಚರಿತೆಯ ದಂಡಿಗಿಂತ (7ನೆಯ ಶತಮಾನ) ನಂತರದವಳೆಂಬುದು ನಿರ್ವಿವಾದ. ಹತ್ತನೆಯ ಶತಮಾನದಲ್ಲಿದ್ದ ಕಾವ್ಯಮೀಮಾಂಸದ ಕರ್ತೃ ರಾಜಶೇಖರ ಈಕೆಯ ಕವಿತಾಶೈಲಿಯನ್ನು "ವೈದರ್ಭೀಶೈಲಿ"ಯೆಂದು ಹೊಗಳಿದ್ದಾನೆ.

"ಕೌಮುದೀ ಮಹೋತ್ಸವ" ಎಂಬ ಐದಂಕದ ಐತಿಹಾಸಿಕ ನಾಟಕ ಈಕೆಯದಿರಬಹುದೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಈ ನಾಟಕದಲ್ಲಿ ಎಲ್ಲ ಕಡೆಯಂತೆಯೇ ರಾಜ, ಋತು, ರಸಿಕತೆ, ರಾಸಕ್ರೀಡೆ ಮೊದಲಾದ ಎಲ್ಲ ವರ್ಣನೆಗಳೂ ಬಂದಿದ್ದು ರಸಾಸ್ವಾದನೆ ಇದರ ಬಹುಮುಖ್ಯ ಅಂಶ. ಈ ನಾಟಕದಲ್ಲಿ ಭಾಸನಂತೆ ಸ್ಥಾಪನಾ ಎಂಬುದು ಪ್ರಸ್ತಾವನೆಯ ಬದಲಾಗಿ ಬಂದಿದೆ. ಈಕೆಯವೇ ಎಂಬ ಸುಮಾರು 30 ರಿಂದ 40 ಬಿಡಿ ಪದ್ಯಗಳನ್ನು ಪ್ರಾಯಶಃ ಎಲ್ಲ ಪ್ರಸಿದ್ಧ ಆಲಂಕಾರಿಕರೂ ಉದಾಹರಿಸಿದ್ದಾರೆ. ಪದ್ಯಗಳಿಂದ ಪದ್ಯಕರ್ತೃವನ್ನು ಅಳೆಯುವುದಾದರೆ ಈಕೆ ವಿಲಾಸಪ್ರಿಯಳಂತೆ ವಿನೋದ ಪ್ರಿಯಳೂ ಪ್ರತಿಭಾನ್ವಿತಳೂ ಹೌದು. ಕವಿ ದಂಡಿ ತನ್ನನ್ನು ನೋಡಿದ್ದಲ್ಲಿ ಸರಸ್ವತಿಯನ್ನು ಸರ್ವಶುಕ್ಲಳೆನ್ನುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರಿಂದ ಈಕೆಗೆ ಮಟ್ಟಿನ ಸ್ವಾಭಿಮಾನಿಯಾಗಿದ್ದಳು. ವಿಜಯ ಭಟ್ಟಾರಿಕೆಯದು ನಿತ್ಯಜೀನವದ ಭೋಗವಿಲಾಸಗಳೇ ಕಾವ್ಯವಸ್ತುಗಳು.

No comments:

Post a Comment