Search This Blog

Friday 29 December 2017

ಪ್ರಾಚೀನ ಕನ್ನಡದ ಶಾಸನಗಳಲ್ಲಿ ಸಾಯನ - ನಿರಯನ.

ಕನ್ನಡದ ಶಾಸನಗಳಲ್ಲಿ ವರ್ಷಗಳನ್ನು ಉಲ್ಲೇಖಿಸುವಾಗ ಯಾವ ಶಕಮಾನವನ್ನು ಬಳಸುತ್ತಿದ್ದರು ಎಂದು ನೋಡುವುದಾದರೆ ನಮ್ಮ ಸಾಹಿತ್ಯದಲ್ಲಿ ಕಲಿಯುಗಾದಿಯಿಂದ ಸಂದ ವರ್ಷಗಳು, ಯುಧಿಷ್ಠಿರ ಶಕೆಯ ವರ್ಷಗಳು, ಉತ್ತರಭಾರತದಲ್ಲಿ ವಿಕ್ರಮ ಶಕೆ ಮತ್ತು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಶಾಲಿವಾಹನ ಶಕೆಯನ್ನು ಬಳಸುತ್ತಾರೆ. ಇವುಗಳು ಸರ್ವೇ ಸಾಮಾನ್ಯ, ಆದರೆ ಕನ್ನಡದ ಶಾಸನಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದ ರಾಜರು ತಮ್ಮ ಆಳ್ವಿಕೆಯ ವರ್ಷಗಳನ್ನು ಮೊದಲ ಉಲ್ಲೇಖ ಸಿಗುವುದು ಬಾದಾಮಿ ಚಲುಕ್ಯ ವಿನಯಾದಿತ್ಯನು ಹರಿಹರದಲ್ಲಿ ಬರೆಸಿದ ಸಂಸ್ಕೃತ ಮತ್ತು ಕನ್ನಡಮಿಶ್ರ ಶಾಸನದಲ್ಲಿ ಕನ್ನಡದ ಆರಂಭದ ಸಾಲು ಪೌಣ್ರ್ಣಮಾಸ್ಯಾಂ ಶ್ರೀಮದಾಳುವರಾಜವಿಜ್ಞಾಪನಯಾ ಎಂದು ಪೌರ್ಣಮಿಯನ್ನು ಸೂಚಿಸುತ್ತಾ ಆರಂಭವಾಗುತ್ತದೆ. ಇದರ ನಂತರ ಕ್ರಿ.ಶ. 726ರ ಗಂಗ ಶ್ರೀಪುರುಷನ ತಲಕಾಡಿನ ದಾನಶಾಸನದಲ್ಲಿ ಶ್ರೀಪುರುಷಮಹಾರಾಜ ಪೃಥಿವೀರಾಜ್ಯಂಗೆಯೆ ಪ್ರಥಮ ವಿಜಯಸಮ್ಬತ್ಸರಂ ಕಾರ್ತ್ತಿಗೆ ಪುಣ್ಣಮೆ ಅನ್ದು ಎನ್ನುವ ಉಲ್ಲೇಖ ಕಾಣಸಿಗುತ್ತದೆ. ಆದರೆ ಅಧಿಕೃತವಾಗಿ ಹಾಸನ ಜಿಲ್ಲೆಯ ಅರಕಲಗೂಡಿನ ಮರೂರಿನ ಕ್ರಿ.ಶ. 912ರ ಗಂಗನೀತಿಮಾರ್ಗನ ಶಾಸನದಲ್ಲಿ “ಸತ್ಯವಾಕ್ಯ ಪೆಮ್ರ್ಮನಡಿಗಳ ಪತ್ತೊಮ್ಭತ್ತನೆಯ ವರಿಸದೊಳ್ ಎಂದು ಬರೆಯಲಾಗಿದೆ ಅದಲ್ಲದೇ ಶ್ರೀರಂಗಪಟ್ಟಣದ ರಾಮಪುರದಲ್ಲಿ ಸತ್ಯವಾಕ್ಯಪೆರ್ಮಾನಡಿಯು ಬರೆಸಿದ ಜಿನ ಶಾಸನದಲ್ಲಿ ಕಾಣಸಿಗುತ್ತದೆ. ಅಲ್ಲಿ “ಶ್ರೀರಾಜ್ಯವಿಜಯಸಮ್ಬತ್ಸರ ಸತ್ಯವಾಖ್ಯಪೆರ್ಮ್ಮಾನಡಿಗಳಾಳುಮು(ವ)ತ್ತ ನಾಲ್ಕನೆಯ ವರ್ಷದ ಮಾರ್ಗ್ಘಸಿರಮಾಸದ ಪೆಱತಲೆದಿವಸವಾಗೆ” ಎಂದು ಬರೆಯಲಾಗಿದೆ. 
ಬಹಳಷ್ಟು ಕನ್ನಡ ಶಾಸನಗಳಲ್ಲಿ “ಬಾರ್ಹಸ್ಪತ್ಯಮಾನ”ದ ಅರವತ್ತು ವರ್ಷಗಳ ಸಂವತ್ಸರ ಪದ್ಧತಿಯನ್ನು ಅನುಸರಿಸಿ ಉಲ್ಲೇಖಿಸಲಾಗಿದೆ. ಬಾರ್ಹಸ್ಪತ್ಯಮಾನದಲ್ಲಿ ಒಂದು ಸಂವತ್ಸರ ಚಕ್ರವು ಪ್ರಭವದಿಂದ ಆರಂಭಗೊಂಡು ಅಕ್ಷಯ ಅಥವಾ ಕ್ಷಯ ಸಂವತ್ಸರದೊಂದಿಗೆ ಕೊನೆಗೊಳ್ಳುತ್ತದೆ. ಕನ್ನಡಶಾಸನಗಳಲ್ಲಿ ಈ ಪದ್ಧತಿ ಆರಂಭ ಯಾವಾಗ ಆಯಿತು ಅನನುವುದು ಗಮನಿಸಬೇಕು.
ಸಾಮಾನ್ಯವಾಗಿ ಶಾಲಿವಾಹನ ಶಕವರ್ಷ ಮತ್ತು ಸಂವತ್ಸರದ ಉಲ್ಲೇಖವಿರುವ ಶಾಸನಗಳಲ್ಲಿ ಚಾಂದ್ರಮಾನ ಪದ್ಧತಿಯಂತೆ ಮಾಸ, ಪಕ್ಷ, ಮತ್ತು ತಿಥಿಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲದೇ, ಬಹಳಷ್ಟು ಶಾಸನಗಳಲ್ಲಿ ವಾರ ಮತ್ತು ದಿನ ನಕ್ಷತ್ರಗಳನ್ನೂ ನೀಡಲಾಗಿದೆ. ಈ ಸಂದರ್ಭದಲ್ಲಿ ಐತಿಹಾಸಿಕವಾಗಿ ಒಂದು ಮುಖ್ಯವಾದ ಸಂಶಯವೆಂದರೆ ಸೋಮವಾರವೇ ಮೊದಲಾದ ವಾರಗಳ ಉಲಲೇಖದ ಪ್ರಾಚೀನತೆಯನ್ನು ಅವಲೋಕಿಸಬೇಕಿದೆ. ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ವಾರಗಳ ಬಳಕೆ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ನಮ್ಮ ಖಗೋಳ ಇತಿಹಾಸಜ್ಞರ ಪ್ರಕಾರ ನಮ್ಮ ಖಗೋಳ ಸಿದ್ಧಾಂತ ಕೃತಿಗಳಲ್ಲಿ ವಾರಗಳ ಬಳಕೆ ಸುಮಾರು ಕ್ರಿ.ಶ. 2ರಿಂದ3ನೇ ಶತಮಾನಗಳಲ್ಲಿ ಆರಂಭವಾಯಿತಂತೆ. ಶಾಸನಗಳಲ್ಲಿ ವಾರಗಳು ಕಾಣಿಸಿಕೊಳ್ಳಬೇಕಾದರೆ ಇನ್ನೂ ಒಂದೆರಡು ಶತಮಾನಗಳು ಮುಂದಕ್ಕೆ ಹೋಗಿರಬಹುದು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆರಣಿಯ ಗಂಗ-ಸತ್ಯವಾಕ್ಯ ಪೆರ್ಮ್ಮಾನಡಿ ಎರಡನೆಯಮಾರಸಿಂಹನ ಶಾಸನ ಒಂದರಲ್ಲಿ
15. ನಂ ಮಾಬಲಯ್ಯನೆಂದೊಗೞಿದರಾರ್ ಶ್ರೀರಾಜ್ಯವಿಜ
16. ಯಸಂವತ್ಸರ ಸತ್ಯವಾಕ್ಯ ಪೆರ್ಮ್ಮಾನಡಿಗಳ ಪಟ್ಟಂ ಗಟ್ಟಿದ
17. ಪತ್ತೆನೆಯ ಆಂಗಿರ ಸಂವತ್ಸರ ಆಶ್ವಯುಜಮಾಸ
18. ದ ಪುಣ್ನಿಮೆಯಂದು ಸೋಮಗ್ರಹಣಮುಂ ವಿಷುಸಂಕ್ರಾಂತಿ
19. ಯುಂ ದೊರೆಕೊಳೆ
ಈ ಶಾಸನದಲ್ಲಿ ಉಲ್ಲೇಖಗೊಂಡ ಆಂಗೀರಸ ಸಂವತ್ಸರವು ಕ್ರಿ.ಶ. 972-73 ಇಸವಿಗೆ ಸರಿಹೊಂದುತ್ತದೆ. ಕ್ರಾಂತಿವೃತ್ತ (ಸೂರ್ಯನ ಸುತ್ತಲೂ ಭೂಮಿಯ ಸರಾಸರಿ ಕಕ್ಷೆಯನ್ನು ಹೊಂದಿರುವ ಜ್ಯಾಮಿತೀಯ ಸಮತಳಕ್ಕೆ ಕ್ರಾಂತಿವೃತ್ತ ಸಮತಳ ಎಂದು ಹೆಸರು).ಮತ್ತು ವಿಷುವದ್ ವೃತ್ತ (ಖಗೋಳದ ಅಕ್ಷಕ್ಕೆ, ಅಂದರೆ ವೀಕ್ಷಕನನ್ನು ಧ್ರುವನಕ್ಷತ್ರಕ್ಕೆ ಜೋಡಿಸುವ ರೇಖೆಗೆ, ಲಂಬವಾಗಿ ಎಳೆದ ಮಹಾ ವೃತ್ತಕ್ಕೆ (ಇದರ ಕೇಂದ್ರವೂ ವೀಕ್ಷಕನೇ) ವಿಷುವದ್ ವೃತ್ತ ಎಂದು ಹೆಸರು.) ಇವೆರಡೂ ಸಂಧಿಸುವ ಬಿಂದುಗಳನ್ನು ವಿಷುವಗಳು ಎಂದು ಕರೆÉಯಲಾಗುತ್ತದೆ. ಭೂಮಿಯ ಸುತ್ತಲೂ ಸಾಪೇಕ್ಷ ಚಲನೆಯಿಂದಾಗಿ ಸೂರ್ಯನು ಒಂದು ಸೌರವರ್ಷದ ಅವಧಿಯಲ್ಲಿ ಒಮ್ಮೆ ಸುತ್ತುಹಾಕಿ ಬರುತ್ತಾನೆ. ಸೂರ್ಯನ ಈ ಕಾಲ್ಪನಿಕ ಪಥವನ್ನೇ ಕ್ರಾಂತಿವೃತ್ತ ಎನ್ನಲಾಗುತ್ತದೆ. ಸೂರ್ಯನು ತನ್ನ ವಾರ್ಷಿಕಚಲನೆಯಲ್ಲಿ ಸುಮಾರು ಮಾರ್ಚ್ 21-22ರಂದು ಒಂದು ವಿಷುವಕ್ಕೂ ಮತ್ತು ಆರು ತಿಂಗಳ ನಂತರ, ಸುಮಾರು ಸೆಪ್ಟೆಂಬರ್ 23ರ ಆಸುಪಾಸಿನಲ್ಲಿ ಇನ್ನೊಂದು ವಿಷುವಕ್ಕೂ ಬರುತ್ತಾನೆ. ಈ ಎರಡು ವಿಷುವ ಬಿಂದುಗಳನ್ನು ಕ್ರಮವಾಗಿ ಮಹಾವಿಷುವ ಮತ್ತು ಜಲವಿಷುವ ಎಂದು ಕರೆಯುತ್ತೇವೆ.
ಪ್ರಸ್ತುತ ಈ ಶಾಸನದ ವರ್ಷದಲ್ಲಿ ಜಲವಿಷುವ ಸಂಕ್ರಾಂತಿಯು ಸೆಪ್ಟೆಂಬರ್25ರಂದು ಉಂಟಾಯಿತು. ಆ ದಿನ ಹುಣ್ಣಿಮೆಯಾಗಿದ್ದು ಚಂದ್ರಗ್ರಹಣವೂ ಇತ್ತು ಎನ್ನುವುದು ತಿಳಿದು ಬರುತ್ತದೆ.
ಈಗ ಇನ್ನೊಂದು ಶಾಸನವನ್ನು ನೋಡಿದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಲೆಯ ಕ್ರಿ. ಶ 975ರ ಜಿನಶಾಸನವೊಂದರಲ್ಲಿ
1. ಭದ್ರಮಸ್ತು ಜಿ
2. ನಶಾಸನಾ
3. ಯ ಶ್ರೀಮತ್
4. ಸಕವರ್ಷ 8
5. 97 ಯ ಯು
6. ವಸಂವತ್ಸರ
7. ದ ಆಷಾಡ
8. ಮಾಸದ ಶು
9. ದ್ಧ ದಶಮಿಯು
10. ಸೋಮವಾರ
11. ವುಂ ಸ್ವಾತಿನ
12. ಕ್ಷತ್ರಮುಮಾ
13. ಗೆ . . . . ಎಂದು ಮುಂದೆ ಸಾಗುವ
ಈ ಶಾಸನದಲ್ಲಿ ಹೇಳಲಾದ ಯುವ ಸಂವತ್ಸರವು ಕ್ರಿ.ಶ. 975-76ನೇ ಇಸವಿಗೆ ಸರಿಹೊಂದುತ್ತದೆ. ಆಷಾಢಮಾಸದ ಶುದ್ಧ ದಶಮಿಯು ಕ್ರಿ.ಶ. 975 ಜೂನ್ 21 ಆಗಿರುತ್ತದೆ. ಆದಿನ ಸೋಮವಾರವಾಗಿದ್ದು ಸ್ವಾತಿನಕ್ಷತ್ರವು ನಡೆಯುತ್ತಿತ್ತು ಎನ್ನುವುದು ತಿಳಿದು ಬರುತ್ತದೆ.
ಕನ್ನಡ ಶಾಸನಗಳನ್ನು ಗಮನಿಸಿದಾಗ ಕಂಡುಬರುವ ಕೆಲವು ಮುಖ್ಯವಾದ ಸಂವತ್ಸರಾದಿಗಳ ಅಂಶಗಳು ಅಂದರೆ, ಶಾಲಿವಾಹನ ಶಕವನ್ನು ಉಲ್ಲೇಖಿಸುವಾಗ ಬಳಕೆಯಲ್ಲಿರುವ ಪದ್ಧತಿಯಲ್ಲಿ ಗತ ವರ್ಷಗಳ ಸಂಖ್ಯೆಯನ್ನು ನಮೂದಿಸುತ್ತೇವೆ. ಅಂದರೆ ಕ್ರಿ.ಶ. 2017ನೇ ಇಸವಿಯು ಶಾಲಿವಾಹನ ಶಕ ಗತವರ್ಷ 1940. ಆದರೆ ಕನ್ನಡ ಶಾಸನಗಳಲ್ಲಿ ಈ ನಿಯಮವನ್ನು ಮಾತ್ರ ಅನುಸರಿಸಿಲ್ಲ. ಅಲ್ಲಲ್ಲಿ ಆಗ ನಡೆಯುತ್ತಿದ್ದ ಅಥವಾ ಪ್ರಚಲಿತ ವರ್ಷದ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ಕ್ರಿ.ಶ. 2017 ನೇ ಇಸವಿಯನ್ನು ಬರೆಯುವಾಗ 1940 ಎಂದು ಬರೆದಂತೆ ಬರೆಯುತ್ತಿದ್ದರು. ಈ ರಿತಿ ಬರೆಯುತ್ತಿದ್ದುದರಿಂದ ಈಗ ಶಾಲಿವಾಹನಶಕ ವರ್ಷದಿಂದ ಕ್ರಿಸ್ತಶಕವನ್ನು ಹೇಳುವಾಗ ಅನೇಕ ಭಾರಿ ಗೊಂದಲವುಂಟಾಗುತ್ತದೆ. ಆದರೆ ಸಂವತ್ಸರದ ಹೆಸರನ್ನು ಶಾಸನದಲ್ಲಿ ಉಲ್ಲೇಖಿಸಿದ್ದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭ.
ಬೇರೆ ಬೇರೆ ಪ್ರದೇಶಗಳಲ್ಲಿ ಮತ್ತು ಬೇರೆ ಬೇರೆ ಕಾಲಾವಧಿಗಳಲ್ಲಿ ಪಂಚಾಂಗ ಗಣನೆಗೆ ನಮ್ಮ ದೇಶದಲ್ಲಿ ವಿಭಿನ್ನ ಖಗೋಳ ಸಿದ್ಧಾಂತ ಪದ್ಧತಿಗಳು ಬಳಕೆಯಲ್ಲಿದ್ದವು. ಉತ್ತರಭಾರತದಲ್ಲಿ ಬಹಳಷ್ಟು ಪ್ರದೇಶಗಳಲ್ಲಿ ಬಹಳ ಕಾಲ ಸೂರ್ಯಸಿದ್ಧಾಂತ ಮತ್ತು ಪೈತಾಮಹ ಅಥವಾ ಸಿದ್ಧಾಂತಗಳು ಬಳಕೆಯಲ್ಲಿದ್ದವು. ದಕ್ಷಿಣಭಾರತದಲ್ಲಿ ಮುಖ್ಯವಾಗಿ ಸೂರ್ಯಸಿದ್ಧಾಂತ, ಆರ್ಯಪದ್ಧತಿ ಮತ್ತು ಅದರ ಪರಿಷ್ಕøತ ಪದ್ಧತಿಯಾದ ವಾಕ್ಯಸಿದ್ಧಾಂತ ಎನ್ನುವುದು ಬಳಕೆಯಲ್ಲಿದ್ದವು. ಇಷ್ಟೇ ಅಲ್ಲದೆ ಕ್ರಿ.ಶ. 16ನೇ ಶತಮಾನದ ನಂತರ ಮುಖ್ಯವಾಗಿ ಉತ್ತರಭಾರತದಲ್ಲಿ, ಸಂಪೂರ್ಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ “ಗಣೇಶ ದೈವಜ್ಞ” ಎಂಬ ಪ್ರಸಿದ್ಧ ಖಗೋಲಜ್ಞನ “ಗ್ರಹಲಾಘವ” ಎಂಬ ಕೃತಿಯನ್ನು ಆಧರಿಸಿದ “ಗಣೇಶ ಪಕ್ಷ”ದ ಪಂಚಾಂಗಗಳು ಬಳಕೆಯಲ್ಲಿದ್ದವು. ಇಂತಹ ವಿವಿಧ ಪಂಚಾಂಗ ಪದ್ಧತಿಗಳನ್ನು ಬಳಸಿ ಶಾಸನಗಳಲ್ಲಿ ತಿಥಿ, ನಕ್ಷತ್ರ ಮುಂತಾದವುಗಳನ್ನು ಉಲ್ಲೇಖಿಸಿರುತ್ತಾರೆ. ಇದರಿಂದಾಗಿ ಶಾಸನಗಳಲ್ಲಿ ಹೇಳಿರುವ ಪಂಚಾಂಗ ವಿವರಗಳಿಗೆ ಸರಿಹೊಂದುವ ಇಂದಿನ ಪದ್ಧತಿಯ ದಿನಾಂಕಗಳನ್ನು ನಿಖರವಾಗಿ ಗುರುತಿಸುವುದು ಬಹಳ ಪ್ರಯಾಸದ ಕೆಲಸ.
ಸಾಮಾನ್ಯವಾಗಿ ಶಾಸನಗಳಲ್ಲಿ ಉಲ್ಲೇಖಿಸಿರುವ ಭಾರತೀಯ ಪಂಚಾಂಗ ವಿವರಗಳಿಗೆ ಸರಿಹೊಂದುವಂತೆ ಇಂದಿನ ಕ್ರೈಸ್ತ ದಿನಾಂಕಗಳನ್ನು ಪತ್ತೆಹಚ್ಚಲು ಶಾಸನತಜ್ಞರು ಬಳಸುವುದು ಪ್ರಸಿದ್ಧ ವಿದ್ವಾಂಸರಾದ ಸ್ವಾಮಿ ಕಣ್ಣುಪಿಳ್ಳೆ ಅವರ ಇಂಡಿಯನ್ ಎಫೆಮರಿಸ್ನ್ನು . ಆದರೆ ಪಿಳ್ಳೆ ಅವರ ಕೃತಿಯಲ್ಲಿ ಎರಡು ವಿಭಿನ್ನ ಪದ್ಧತಿಗಳಾದ ಸೂರ್ಯಸಿದ್ಧಾಂತ ಮತ್ತು ಆರ್ಯಪದ್ಧತಿಗಳನ್ನು ಮಾತ್ರ ಆಧರಿಸಿ ಕೋಷ್ಟಕಗಳನ್ನು ರಚಿಸಿದ್ದಾರೆ. ಹೀಗಾಗಿ ದೇಶದ ಎಲ್ಲಾ ಪ್ರದೇಶಗಳಲ್ಲೂ ಇವೆರಡೇ ಪದ್ಧತಿಗಳು ಬಳಕೆಯಲ್ಲಿದ್ದವು ಎಂದು ತೆಗೆದುಕೊಂಡಂತಾಗುತ್ತದೆ ಆದರೆ ಇದೇ ಸತ್ಯವಲ್ಲ. ಒಂದು ಪದ್ಧತಿಯ ಪ್ರಕಾರ ಒಂದು ಚಾಂದ್ರಮಾಸವು ಅಧಿಕಮಾಸ ಆಗಿದ್ದರೆ ಇನ್ನೊಂದು ಪದ್ಧತಿಯಂತೆ ಹಾಗಿಲ್ಲದಿರಬಹುದು. ಹಾಗೆಯೇ ತಿಥಿ ನಕ್ಷತ್ರಗಳೂ ವಿಭಿನ್ನವಾಗಿರಬಹುದು.
ಶಾಸನಗಳಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳ ಉಲ್ಲೇಖಗಳು ಬಹಳ ಜ್ಞಾನಪ್ರದವಾಗಿರುತ್ತವೆ. ಒಂದು ವೇಳೆ ಉಲ್ಲೇಖಿತ ಗ್ರಹಣಗಳು ಶಾಸನಗಳ ರಚನೆಯ ಪ್ರದೇಶಗಳಲ್ಲಿ ಗೋಚರವಾಗಿದ್ದರೆ ಆಗ ಆ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಪಂಚಾಂಗ ಪದ್ಧತಿಯ ಬಗ್ಗೆ ಇವು ಹೆಚ್ಚು ಬೆಳಕು ಚೆಲ್ಲುತ್ತವೆ.
ಇನ್ನು ಭಾರತಿಯರಲ್ಲಿ ಸಾಮಾನ್ಯವಾಗಿ ಮಕರಸಂಕ್ರಮಣ ಮತ್ತು ಉತ್ತರಾಯಣ ಪುಣ್ಯಕಾಲದ ಬಗ್ಗೆ ಗೊಂದಲವಿದೆ. ನಿಜಕ್ಕೂ ಇವೆರಡೂ ಒಂದೇ ದಿನ ಉಂಟಾಗುವುದಿಲ್ಲ. ಈತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿ ಮಕರಸಂಕ್ರಮಣವು ಜನವರಿ 14-15 ದಿನಾಂಕಗಳಂದು ಸಂಭವಿಸುತ್ತದೆ. ಅದರೆ ನಿಜವಾಗಿಯೂ ಉತ್ತರಾಯಣ ಉಂಟಾಗುವುದು ಡಿಸೆಂಬರ್ 22ರ ಆಸುಪಾಸಿನ ದಿನ. ಇವೆರಡರ ಅಂತರ ಸುಮಾರು 23-24 ದಿನಗಳಷ್ಟು. ಈ ಗೊಂದಲಕ್ಕೆ ಕಾರಣವೆಂದರೆ ಮಕರಸಂಕ್ರಮಣ ಎಂದರೆ ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸುವುದು. ಆದರೆ ಉತ್ತರಾಯಣದ ಆರಂಭವೆಂದರೆ ಸೂರ್ಯನ ಕ್ರಾಂತಿ ದಕ್ಷಿಣದ ಗರಿಷ್ಠ ಬೆಲೆಯನ್ನು ಸುಮಾರು 23.5 ಡಿಗ್ರಿ ಪಡೆದಿದ್ದು ಅಂದಿನಿಂದ ಉತ್ತರಮುಖಿಯಾಗುವುದು. ಇಲ್ಲಿ ಸೂರ್ಯನ ಕ್ರಾಂತಿಯನ್ನು ಕಂಡುಹಿಡಿಯಲು ಸಾಯನ ಪದ್ಧತಿಯನ್ನು ಬಳಸಬೇಕಾಗುತ್ತದೆ. ಆ ದಿನ ನಿಜಕ್ಕೂ ಸೂರ್ಯನು ಸಾಯನ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಾಯನ ಮತ್ತು ನಿರಯಣ ಪದ್ಧತಿಗಳ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತೇವೆ. ಇದರ ನಿಖರವಾದ ಬೆಲೆಯನ್ನು ನಿರ್ಧರಿಸುವುದು ಕಷ್ಟ.
ಆದರೆ ನಮ್ಮ ಪ್ರಾಚೀನ ಕನ್ನಡಶಾಸನಗಳಲ್ಲಿ ಕೆಲವೊಮ್ಮೆ ಉತ್ತರಾಯಣ ಮತ್ತು ದಕ್ಷಿಣಾಯನ ಸಂಕ್ರಾಂತಿಗಳನ್ನು ಸರಿಯಾಗಿಯೇ ಅರ್ಥಮಾಡಿಕೊಂಡು ಬಳಸಿರುವುದನ್ನು ಕಾಣಬಹುದು. ಈ ಪ್ರಸ್ತಾವನೆಯ ಉದ್ದೇಶವೆಂದರೆ ಪ್ರಾಚೀನ ಶಾಸನಗಳು ಬಳಸುತ್ತಿದ್ದ ಪಂಚಾಂಗ ಪದ್ಧತಿಗಳಲ್ಲಿ ನಿರಯಣರಾಶಿ ಸಂಕ್ರಮಣಕ್ಕೂ ಮತ್ತು ಸಾಯನ ಉತ್ತರಾಯಣ-ದಕ್ಷಿಣಾಯನ ಸಂಕ್ರಮಣಗಳಿಗೂ ವ್ಯತ್ಯಾಸವನ್ನು ಅರಿತುಕೊಂಡು ಉಲ್ಲೇಖಿಸುತ್ತಿದ್ದರು. ಈಗಿನ ಸಂಪ್ರದಾಯಸ್ಥರಿಗಿರುವ ಗೊಂದಲ ಆಗಿರಲಿಲ್ಲ. - ಸದ್ಯೋಜಾತ ಭಟ್ಟ

No comments:

Post a Comment