Search This Blog

Thursday 21 December 2017

ಕವಿಯೂ ಸಮರ್ಥ ರಾಜನೂ ಆಗಿದ್ದ ಮಹಾಕ್ಷತ್ರಪ ರುದ್ರದಾಮನ ರಥದ ಮೊದಲ ಉಲ್ಲೇಖ.

ರುದ್ರದಾಮ ಸಂಸ್ಕೃತ ಸಾಹಿತ್ಯದ ದೊಡ್ದ ಕವಿಯಾಗಿದ್ದ, "ಶಬ್ದಾರ್ಥ ಗಾಂಧರ್ವ ನ್ಯಾಯಾದ್ಯಾನಾಂ ವಿದ್ಯಾನಾಂ ಮಹತೀನಾಂ ಪಾರಣ ಧಾರಣ" ನಾಗಿದ್ದನೆನ್ನುವುದಾಗಿ ಆತನ ಜುನಾಗಡ್ ಶಾಸನದಿಂದ ತಿಳಿದು ಬರುತ್ತದೆ. ಮುಂದೆ .........
ಅದೇ ತಾನೇ ಕ್ರಿಸ್ತಶಕದ ಆರಂಭದ ಕಾಲ ಭಾರತ ಪಶ್ಚಿಮ ಭಾಗದಲ್ಲಿ ಶಕಮೂಲದ ರಾಜಮನೆತನಗಳು ಆಳುತ್ತಿದ್ದವು ಅವರೇ ಕ್ಷತ್ರಪರು. ಕ್ಷತ್ರಪ ಎನ್ನುವುದಕ್ಕೆ ಇರುವ ಅರ್ಥಗಳಲ್ಲಿ ರಾಜ್ಯದ ರಕ್ಷಕನೆಂದೂ ಆಗುತ್ತದೆ. ಕ್ರಿ.. ಸು. 70-80 ಕಾಲಕ್ಕೆ ಸೌರಾಷ್ಟ್ರ ಪ್ರದೇಶದಲ್ಲಿ ಮಂಬಾರಸನೆಂಬ ಶಕರಾಜ ಆಳುತ್ತಿದ್ದ. ಉತ್ತರ ಕೊಂಕಣ ಪ್ರದೇಶದಲ್ಲಿ ಮಂಬಾರಸನ ಸಾಮಂತ ಸಂಡಾರೆಸ್ ಎನ್ನುವವನು ಆಡಳಿತ ನಡೆಸುತ್ತಿದ್ದ. ಮೊದಲ ಸಹಸ್ರಮಾನದ ಮೊದಲನೇ ಶತಮಾನದಲ್ಲಿ ಅಂದರೆ ಒಂದನೇ ಶತಮಾನದ ಅಂತ್ಯದಲ್ಲಿ ಕುಷಾಣರ ದೊರೆ ಮೊದಲನೆಯ "ಕನಿಷ್ಕ" ಮಧ್ಯ-ಪಶ್ಚಿಮ ಭಾರತಗಳನ್ನು ಗೆದ್ದಾಗ ಮಂಬಾರಸ್ ಮನೆತನ ಕೊನೆಗೊಂಡಿರಬಹುದು ಎಂದು ಹೇಳಲಾಗುತ್ತದೆ. ಕುಷಾಣರ ಸಾಮಂತರಾಗಿ ಪ್ರದೇಶದಲ್ಲಿ ಆಳಿದ ಕ್ಷಹರಾತ ಕ್ಷತ್ರಪರು ವಂಶಕ್ಕೆ ಸೇರಿದವರೇ ಎಂಬ ಬಗ್ಗೆ ನಿಶ್ಚಿತವಾಗಿ ಹೇಳಲಾಗುತ್ತಿಲ್ಲ.
ಕ್ಷತ್ರಪರಲ್ಲಿ ಚಷ್ಟನ ಎನ್ನುವವನು ಕ್ರಿ.ಶ. ಸು. 125-135ರಲ್ಲಿದ್ದ 'ಕಾರ್ದಮಕ' ವಂಶದ ಸಾಮಂತ ದೊರೆ. ಕುಷಾಣ ವಂಶದ ಚಕ್ರವರ್ತಿಗಳ ಪ್ರಾಂತ್ಯಾಧಿಪತಿಯಾಗಿ ಪಶ್ಚಿಮ ಭಾರತ ಪ್ರದೇಶದಲ್ಲಿ ಆಳುತ್ತಿದ್ದ. ಕಾರ್ದಮಕ ಎಂಬ ಹೆಸರು ಹೇಗೆ ಬಂದಿತು ಎನ್ನುವುದು ತಿಳಿದು ಬರುತ್ತಿಲ್ಲ ಆದರೆ ಇದನ್ನು ಪ್ರದೇಶವಾಚಕವಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಷ್ಟನನ ತಂದೆ ಸಾಮೋತಿಕ ಎನ್ನುವವನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ. ಚಷ್ಟನ ಮೊದಲು ಮಂಡಲಾಧಿಕಾರಿಯಾಗಿ ಅದರ ದ್ಯೋತಕವಾಗಿ "ಕ್ಷತ್ರಪ" ಎಂಬ ಪದವಿಯನ್ನೂ ರಾಜ ಎಂಬ ಬಿರುದನ್ನೂ ಧರಿಸಿದ್ದ. ಮುಂದೆ ಕ್ಷತ್ರಪನೆನ್ನುವ ಪದವಿ ಪಡೆದು ಮಹಾಕ್ಷತ್ರಪ ಎಂದು ಕರೆಯಿಸಿಕೊಂಡ. ಈತನ ಕಾಲದಲ್ಲಿಯೇ ಸಾತವಾಹನ ವಂಶದ ಗೌತಮೀಪುತ್ರ ಸಾತಕರ್ಣಿಯು ಶಕ್ತಿಶಾಲಿಯಾಗಿ ಬೆಳೆದು, 'ಶಕ' ಮತ್ತು ಇತರ ಅನ್ಯ ದೇಶೀಯ ಪ್ರಾದೇಶಿಕ ರಾಜರ ಮೇಲೆ ಯುದ್ಧಮಾಡಿ, ಕ್ಷಹರಾತ ಕುಲದ ನಹಪಾ ಎಂಬ ನಾಯಕನನ್ನು ಪರಾಜಯಗೊಳಿಸಿ ಅವನನ್ನು ಕೊಂದ. ಆಮೇಲೆ ಚಷ್ಟನನಿಗೆ ನಹಪಾನ ರಾಜನ ಅಧಿಕಾರಕ್ಕೆ ಒಳಪಟ್ಟಿದ್ದ ಪ್ರದೇಶದ ಮೇಲಧಿಕಾರವನ್ನೂ ವಹಿಸಿಕೊಡಲಾಯಿತು. ಚಷ್ಟನ ಈ ಪ್ರದೇಶವನ್ನು ವಹಿಸಿಕೊಂಡ ಮೇಲೆ ಗೌತಮೀಪುತ್ರ ಸಾತಕರ್ಣಿಯನ್ನು ವಿರೋಧಿಸಿ, ಅವನು ಶಕರಿಂದ ಗೆದ್ದುಕೊಂಡಿದ್ದ ಆಕರ, ಆವಂತಿ, ಅನೂಪ, ಅಪರಾಂತ, ಸೌರಾಷ್ಟ್ರ, ಅನರ್ತ ಮೊದಲಾದ ಪ್ರದೇಶಗಳನ್ನು ಮರಳಿ ಪಡೆದುಕೊಂಡ. ಈತನ ರಾಜಧಾನಿ ಉಜ್ಜಯಿನಿ ಆಗಿತ್ತು. ರಾಜ್ಯಾಡಳಿತ ಸಮರ್ಥವಾಗಿ ನಿರ್ವಹಿಸುವಲ್ಲಿ ಈತ ತನ್ನ ಪ್ರಬುದ್ಧ ಮೊಮ್ಮಗನಾದ ಕ್ಷತ್ರಪ ರುದ್ರದಾಮನ ಸಹಕಾರ ಪಡೆದ. ಚಷ್ಟನ ತನ್ನದೇ ಆದ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತಂದ. ಅವುಗಳ ಒಂದು ಬದಿಯಲ್ಲಿ ನಕ್ಷತ್ರಗಳಿಂದ ಕೂಡಿದ ಚಂದ್ರ ಚಿತ್ರವನ್ನೂ ಹಾಕಿಸಿದ ಎಂದು ತಿಳಿಯುತ್ತದೆ.
"ಕ್ಷಹರಾತ ಕ್ಷತ್ರಪ"ರಲ್ಲಿ ಭೂಮಕ ಮೊದಲಿಗ, ಗುಜರಾತ್, ಕಾಠಿಯವಾಡ, ಮಾಲ್ವ ಮತ್ತು ಅಜ್ಮೀರ್ ಪ್ರದೇಶಗಳಲ್ಲಿ ಇವನ ನಾಣ್ಯಗಳು ದೊರಕಿವೆ. ಎಲ್ಲ ಪ್ರದೇಶಗಳೂ ಅವನ ವಶದಲ್ಲಿದ್ದಿರಬೇಕು. ಬ್ರಾಹ್ಮೀ ಮತ್ತು ಖರೋಪ್ಠೀ ಲಿಪಿಗಳನ್ನು ಅವರ ನಾಣ್ಯಗಳ ಮೇಲೆ ಬಳಸುತ್ತಿದ್ದರು. ಆಗಾಗ್ಗೆ ಗ್ರೀಕ್ ಲಿಪಿಯನ್ನೂ ಬಳಸುತ್ತಿದ್ದುದುಂಟು. 1ನೆಯ ಕನಿಷ್ಕ ಮರಣ ಹೊಂದಿದ ಅನಂತರ ಕ್ಷತ್ರಪರು ಬಹುಮಟ್ಟಿಗೆ ಸ್ವತಂತ್ರರಾದರು. ಭೂಮಕನ ತರುವಾಯ ಅದೇ ವಂಶದ ನಹಪಾನ ಕ್ಷತ್ರಪನಾಗಿ ಸ್ವಲ್ಪ ಕಾಲಾನಂತರ ಮಹಾಕ್ಷತ್ರಪನೆಂಬ ಬಿರುದು ರಿಸಿದ. ಇವನ ಹಲವಾರು ನಾಣ್ಯಗಳಲ್ಲದೆ ಕೆಲವು ಶಾಸನಗಳು ದೊರಕಿವೆ. ಇವು ನಹಪಾನನ ಬಗ್ಗೆ ಮಾಹಿತಿಯನ್ನೊದಗಿಸುತ್ತವೆ. ಇವನ ಆಳ್ವಿಕೆಯ ಕಾಲ ನಿಶ್ಚಿತವಾಗಿ ಗೊತ್ತಿಲ್ಲ. ಈತ 119-125 ಸುಮಾರಿನಲ್ಲಿ ಅಧಿಕಾರದಲ್ಲಿದ್ದುದಾಗಿ ಇವನ ಶಾಸನಗಳಿಂದ ತಿಳಿದುಬರುತ್ತದೆ. ಉತ್ತರದಲ್ಲಿ ಅಜ್ಮೀರಿನಿಂದ ದಕ್ಷಿಣದಲ್ಲಿ ನಾಸಿಕ್ ಜಿಲ್ಲೆಯವರೆಗೂ ಇವನ ಅಧಿಕಾರ ವ್ಯಾಪಿಸಿತ್ತು. ಇವನ ಮಗಳಾದ "ದಕ್ಷಮಿತ್ರಾ"ಳ ಗಂಡ ರಿಷಭದತ್ತ ಮಹಾರಾಷ್ಟ್ರ ಪ್ರದೇಶದಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ. ರಿಷಭದತ್ತ ಅನೇಕ ಹಿಂದೂ ಧರ್ಮಸಂಸ್ಥೆಗಳಿಗೂ ಬ್ರಾಹ್ಮಣರಿಗೂ ದಾನಗಳನ್ನು ನೀಡಿದುದಾಗಿ ಶಾಸನಗಳಿಂದ ತಿಳಿದು ಬರುತ್ತದೆ. ಸಾತವಾಹನ ರಾಜ್ಯಕ್ಕೆ ಸೇರಿದ್ದ ಪುಣೆ ಮತ್ತು ನಾಸಿಕ ಜಿಲ್ಲೆಗಳನ್ನು ನಹಪಾನನ ಕಾಲದಲ್ಲಿ ಕ್ಷತ್ರಪರು ವಶಪಡಿಸಿಕೊಂಡಿದ್ದಿರಬೇಕು. ಸು. 125 ಸುಮಾರಿನಲ್ಲಿ ಸಾತವಾಹನರಲ್ಲೆಲ್ಲ ಪ್ರಸಿದ್ಧನಾದ ಗೌತಮೀಪುತ್ರ ಸಾತಕರ್ಣಿ ನಹಪಾನನನ್ನು ಯುದ್ಧದಲ್ಲಿ ಸೋಲಿಸಿ ಕೊಂದುಹಾಕಿದಂತೆ ಕಾಣುತ್ತದೆ. ನಾಸಿಕ್ ಬಳಿಯ ಜೋಗಲತಂಬಿ ಎಂಬಲ್ಲಿ ದೊರಕಿದ ನಾಣ್ಯಗಳ ರಾಶಿಯಲ್ಲಿ ಗೌತಮೀಪುತ್ರ ವಿಜಯಾನಂತರ ಅದರ ಕುರುಹಾಗಿ ನಹಪಾನನ ನಾಣ್ಯಗಳ ಮೇಲೆ ತನ್ನ ಮುದ್ರೆಯನ್ನು ಅಚ್ಚು ಹಾಕಿಸಿ, ನಾಣ್ಯಗಳನ್ನು ಬಳಕೆಗೆ ತಂದುದಕ್ಕೆ ಪುರಾವೆಗಳು ದೊರಕಿದೆ. ಆದರೂ ಸ್ವಲ್ಪ ಕಾಲದವರೆಗೂ ಕ್ಷಹರಾತರು ಗುಜರಾತ್ ಪ್ರದೇಶದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿದ್ದಾರೆ.
ಚಷ್ಟನ ಮೊದಲಿಗೆ ತನ್ನ ಹಿರಿಯ ಮಗ ಜನದಾಮನನನ್ನೂ ಅವನ ಮರಣಾನಂತರ ಎರಡನೆಯ ಮಗ ರುದ್ರದಾಮನನ್ನೂ ತನಗೆ ಸಹಾಯಕ್ಕಾಗಿ ಕ್ಷತ್ರಪನಾಗಿ ಆಯ್ದುಕೊಂಡಿದ್ದ. ಚಷ್ಟನ 130-31ರಲ್ಲಿ ಮಹಾಕ್ಷತ್ರಪನೂ ರುದ್ರದಾಮ ಕ್ಷತ್ರಪನೂ ಆಗಿದ್ದುದಾಗಿ ಕೆಲವು ಶಾಸನದಿಂದ ತಿಳಿಯುತ್ತದೆ.
ಚಷ್ಟನ-ರುದ್ರದಾಮರು ಸಾತವಾಹನ ದೊರೆಯನ್ನು ಸೋಲಿಸಿ, ಸಾತವಾಹನ ರಾಜ್ಯದ ಉತ್ತರ ಭಾಗಗಳನ್ನು ವಶಪಡಿಸಿಕೊಂಡರು. ವೇಳೆಗೆ ಉಜ್ಜಯಿನಿ ಅವರ ರಾಜಧಾನಿಯಾಗಿತ್ತು. ಗೌತಮೀಪುತ್ರನ ಮಗ ವಾಶಿಷ್ಠೀಪುತ್ರನಿಗೆ ಚಷ್ಟನ ತನ್ನ ಮಗಳನ್ನು ಕೊಟ್ಟು ವಿವಾಹಮಾಡಿದ. ಚಷ್ಟನನ ತರುವಾಯ 130-131 ಸುಮಾರಿನಲ್ಲಿ ರುದ್ರದಾಮನು ಮಹಾಕ್ಷತ್ರಪನಾದ. ಕ್ಷತ್ರಪವಂಶದಲ್ಲೇ ಪ್ರಸಿದ್ಧನಾದ ಇವನ ಬಗ್ಗೆ ನಾಣ್ಯ iತ್ತು ಶಾಸನಗಳು ಹೆಚ್ಚಿನ ಮಾಹಿತಿಗಳನ್ನೊದಗಿಸುತ್ತವೆ. ಚಂದ್ರಗುಪ್ತ ಮೌರ್ಯನಿಂದ ನಿರ್ಮಿತವಾಗಿದ್ದ ಸುದರ್ಶನ ತಟಾಕ ಒಡೆದುಹೋದಾಗ, ರುದ್ರದಾಮನು ಪ್ರಜೆಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸದೆ ತನ್ನ ಬೊಕ್ಕಸದ ಹಣದಿಂದಲೇ ರಿಪೇರಿ ಮಾಡಿಸಿದುದಾಗಿ 150-151 ಗಿರ್ನಾರಿನ ಜುನಾಗಡ್ ಸಂಸ್ಕೃತದ ಶಾಸನದ ಆರಂಭದಲ್ಲಿಯೇ "ಇದಂ ತಡಾಕಂ ಸುದರ್ಶನಂ ಗಿರಿನಗರೇ" ಎಂದು ಬರುತ್ತದೆ. ಇವನು ಪಂಜಾಬಿನಿಂದ ಪುಣೆಯವರೆಗೆ ಪಶ್ಚಿಮ ಭಾರತವನ್ನೆಲ್ಲ ಗೆದ್ದುದಲ್ಲದೆ "ದಕ್ಷಿಣಾಪಥೇಶ್ವರ"ನಾದ ಎಂದು ಅದೇ ಶಾಸನದ ೧೨ ಸಾಲಿನಲ್ಲಿ

"ವೀರ ಶಬ್ದ ಜಾತೋತ್ಸೇಕಾ ವಿಧೇಯಾನಾಂ ಯೌಧೇಯಾನಾಂ ಪ್ರಸಹ್ಯೋತ್ಸಾದಕೇನ ದಕ್ಷಿಣಾಪಥೇಶ್ವರ ಸಾತಕರ್ಣೇರ್" ಎಂದು ಸಾತಕರ್ಣಿಯನ್ನು ಸಂಪೂರ್ಣವಾಗಿ ಸೋಲಿಸಿದುದಾಗಿ ಹೇಳಿಕೊಂಡಿದ್ದಾನೆ. ರಣಪರಾಕ್ರಮಿಯಾಗಿದ್ದುದಲ್ಲದೆ ಸಂಸ್ಕೃ ಸಾಹಿತ್ಯಕ್ಕೆ ಆಶ್ರಯದಾತನೂ ಆಗಿದ್ದು ಸ್ವತಃ ಗದ್ಯಪದ್ಯ ಕೃತಿಗಳನ್ನು ರಚಿಸಿದುದಾಗಿ ತಿಳಿದು ಬರುತ್ತದೆ. ಅದೇ ಸಾಲಿನಲ್ಲಿ

ಭೃಷ್ಟರಾಜ ಪ್ರತಿಷ್ಠಾಪಕೇನ ಯಥಾರ್ಥ ಹಸ್ತೋಚ್ಚ್ರಾಯಾರ್ಜಿತೋರ್ಜಿತ ಧರ್ಮಾನುರಾಗೇನ ಶಬ್ದಾರ್ಥ ಗಾಂಧರ್ವ ನ್ಯಾಯಾದ್ಯಾನಾಂ ವಿದ್ಯಾನಾಂ ಮಹತೀನಾಂ ಪಾರಣ ಧಾರಣ ವಿಜ್ಞಾನ ಪ್ರಯೋಗಾವಾಪ್ತ ವಿಪುಲ ಕೀರ್ತಿನಾ ತುರಗ ಗಜ ರಥ ಚರ್ಯ ....." ಎನ್ನುವುದಾಗಿ ರಾಜ್ಯ ಭ್ರಷ್ಟರಾದ ರಾಜರಿಗೆ ಪುನಃ ರಾಜ್ಯವನ್ನು ಮರಳಿಸಿದ, ತುರಗ ಗಜ ಮತ್ತು ಇವಲ್ಲದೇ ರಥದ ಉಲ್ಲೇಖವನ್ನು ನೀಡುತ್ತಾನೆ.
ರುದ್ರದಾಮನನ ಅನಂತರ ಕೆಲವು ದುರ್ಬಲ ಕ್ಷತ್ರಪರು ಅಧಿಕಾರಕ್ಕೆ ಬಂದರು ಇದರಿಂದ ಕ್ಷತ್ರಪರ ಪ್ರಾಬಲ್ಯ ಕ್ಷೀಣಗೊಂಡಿತು. ಇವರಲ್ಲಿ ಸು.180-197ರಲ್ಲಿ 1ನೆಯ ರುದ್ರಸಿಂಹ ಪ್ರಮುಖನಾಗಿದ್ದ. ವಂಶದ ಕೊನೆಯ ಕ್ಷತ್ರಪನಾದ ಸು. 293-305ರಲ್ಲಿ ಅಧಿಕಾರಕ್ಕೆ ಬಂದ ವಿಶ್ವಸೇನನ ಬಗ್ಗೆ ಹೆಚ್ಚಿನ ವಿವರಗಳು ದೊರಕಿಲ್ಲ. ಪರ್ಷಿಯದ ಸಸ್ಸೇನಿಯನ್ ಗಳಿಂದ ಇವರ ಆಡಳಿತ ಕೊನೆಗೊಂಡಿರಬಹುದು ಎಂದು ಊಹಿಸಲಾಗುತ್ತದೆ. 304-305ರಲ್ಲಿದ್ದ ಕ್ಷತ್ರಪ 2ನೆಯ ರುದ್ರಸಿಂಹನ ಬಗ್ಗೆ ಮಾಹಿತಿಗಳು ದೊರಕಿದರೂ ಅವನು ಚಷ್ಟನನ ವಂಶಸ್ಥನೆಂದು ಹೇಳಲು ಯಾವುದೇ ಆಧಾರಗಳಿಲ್ಲ. ಕ್ರಮೇಣ ಕ್ಷತ್ರಪರು ದುರ್ಬಲರಾಗಿ ಅವರ ಪ್ರದೇಶವೆಲ್ಲ ಗುಪ್ತ ಸಾಮ್ರಾಜ್ಯದಲ್ಲಿ ಸೇರಿಹೋಯಿತು.
ಕ್ಷತ್ರಪರು ನಮ್ಮ ಭಾರತದ ರಾಜಕೀಯದಲ್ಲಿ ಬೆರೆತು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಭಾರತೀಯರಾಗಿಯೇ ಬೆಳೆದರು.
ಇವರ ಕಾರ್ಷಪಣಗಳೆಂಬ ಬೆಳ್ಳಿ ನಾಣ್ಯಗಳು ತೂಕ, ರಚನೆ, ಆಕಾರ ಎಲ್ಲದರಲ್ಲಿಯೂ ದ್ರಮ್ಮಗಳನ್ನೇ ಹೋಲುತ್ತವೆ. ಅಲ್ಲದೆ ನಾಣ್ಯದ ಮುಂಭಾಗದಲ್ಲಿ ರಾಜನ ತಲೆಯ ಪಡಿಯಚ್ಚು ಹಾಕಿಸುವ ಪದ್ಧತಿಯನ್ನು ಕ್ಷತ್ರಪರು ರೂಢಿಸಿಕೊಂಡಿದ್ದರು. ನಾಣ್ಯದ ಹಿಂಭಾದಲ್ಲಿ ನಹಪಾ ಕಾಲದಲ್ಲಿ ಬಾಣ, ಚಕ್ರ, ವಜ್ರಾಯುಧಗಳಿದ್ದುವು. ಚಷ್ಟನನ ಕಾಲದಲ್ಲಿ ಬಾಲಚಂದ್ರ ಮತ್ತು ಸೂರ್ಯ ಅಥವಾ ನಕ್ಷತ್ರಗಳೂ ಅನಂತರ ಇವುಗಳ ನಡುವೆ ಬರುವಂತೆ ಚೈತ್ಯವೂ ಇದ್ದುವು. ರಾಜನ ಮತ್ತು ಆತನ ತಂದೆಯ ಹೆಸರುಗಳನ್ನು ತಿಳಿಸುವ ಅಂಕನ ಮೊದಲು ಬ್ರಾಹ್ಮಿ, ಖರೋಷ್ಠಿ ಮತ್ತು ಗ್ರೀಕ್-ರೋಮನ್ ಲಿಪಿಗಳಲ್ಲಿರುತ್ತಿದ್ದುವು. ಕ್ರಮೇಣ ಖರೋಷ್ಠಿ ಲಿಪಿ ಬಿಟ್ಟು ಹೋಗಿ ಬ್ರಾಹ್ಮಿಯೊಂದೇ ಉಳಿದುಕೊಂಡಿತು. ಇವರ ನಾಣ್ಯದ ಮುಂಭಾಗದಲ್ಲಿ ರಾಜನ ತಲೆಯ ಸುತ್ತಲೂ ಇರುತ್ತಿದ್ದ ಗ್ರೀಕ್-ರೋಮನ್ ಲಿಪಿ ಅರ್ಥವಿಲ್ಲದ ಬರಿಯ ಅಲಂಕಾರವಾಗಿ ಉಳಿದುಕೊಂಡಿತು. ನಾಣ್ಯಗಳಲ್ಲಿ ಕಾಲವನ್ನು ಕೊಟ್ಟಿರುವುದರಿಂದಲೂ ರಾಜನ ಮತ್ತು ಆತನ ತಂದೆಯ ಹೆಸರುಗಳು ಇರುವುದರಿಂದಲೂ ಕ್ಷತ್ರಪರಾಜರ ಪರಂಪರೆಯನ್ನೂ ಪ್ರತಿಯೊಬ್ಬ ರಾಜನ ಆಳ್ವಿಕೆಯ ಕಾಲವನ್ನೂ ನಿಖರವಾಗಿ ಗೊತ್ತುಪಡಿಸಲು ಸಾಧ್ಯವಾಗಿದೆ.
ಇವರ ಈ ಶಾಸನದಲ್ಲಿ ಅಲ್ಲಲ್ಲಿ ಜನಪದ ಮತ್ತು ಜಾನಪದದ ಉಲ್ಲೇಖಗಳಿದ್ದು ಇದು ಕ್ಷತ್ರಪರ ಆಡಳಿತದ ಘಟಕಗಳಾಗಿವೆ. ಹತ್ತನೇ ಸಾಲಿನ ಕೊನೆಯಲ್ಲಿ "ನಗರ ನಿಗಮ" ಎಂದು ಬಂದಿದ್ದು ಹನ್ನೊಂದನೇ ಸಾಲಿನ ಆದಿಭಾಗದಲ್ಲಿ "ಜನಪದಾನಾಂ ಸ್ವವೀರ್ಯಾರ್ಜಿತಾನಾಂ" ಎಂದು ಉಲ್ಲೇಖಿಸಲಾಗಿದೆ ಇವೆಲ್ಲವೂ ಒಂದು ಪ್ರದೇಶವನ್ನು ಸೂಚಿಸುತ್ತವೆ. ೧೮ನೇ ಸಾಲಿನಲ್ಲಿ "ಇಹಾಧಿಷ್ಠಾನೇ ಪೌರ ಜಾನಪದ ಜನಾನುಗ್ರಹಾರ್ಥಂ ಪಾರ್ಥಿವೇನ" ಎಂದು ಉಲ್ಲೇಖಿಸಲಾಗಿದೆ. ಸ್ವತಃ ಕವಿಯಾಗಿಯೂ ರುದ್ರದಾಮನು ಗುರುತಿಸಿಕೊಂಡಿದ್ದಲ್ಲದೇ ಪ್ರಜಾನುರಾಗಿಯಾಗಿದ್ದನೆಂದು ತಿಳಿದು ಬರುತ್ತದೆ.
ಜನಪದದ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ಮೊದಲು ಕಾಣ ಸಿಗುವುದು ನಮಗೆ ಕವಿರಾಜ ಮಾರ್ಗದಲ್ಲಿ : 
ಕಾವೇರಿಯಿಂದಮಾ ಗೋ
ದಾವರಿ ವರಮಿರ್ದ ನಾಡದು ಆ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ 1: 36 - ಕವಿರಾಜಮಾರ್ಗ

ಇದು ಕನ್ನಡದ ಅಲಂಕಾರ ಗ್ರಂಥ ಕವಿರಾಜ ಮಾರ್ಗದ್ದು ಮಾರ್ಗಕಾರನು ಕಾವೇರಿಯಿಂದ ಗೋದಾವರಿಯ ವರೆಗೆ ಇದ್ದ ಭೂ ಪ್ರದೇಶವನ್ನು ಆ ಜನಪದವನ್ನು ಕರ್ನಾಟಕ ಅಥವಾ ಕನ್ನಡದ ನಾಡು ಎಂದಿದ್ದಾನೆ. ಇಲ್ಲಿ ಜನಪದ ಮತ್ತು ಜಾನಪದದ ಬಗ್ಗೆ ಬಹಳ ವ್ಯತ್ಯಾಸಗಳಿವೆ ಜನಪದ ಮತ್ತು ಜಾನಪದ ವಿಭಿನ್ನ ರೀತಿಯಲ್ಲಿ ಈ ಒಂದೇ ಶಾಸನದಲ್ಲಿ ಬೇರೆ ಬೇರೆ ಸಾಲುಗಳಲ್ಲಿ ಬಂದಿದೆ. ಇದು ರುದ್ರ ದಾಮನ ಜುನಾಗಡದ ಶಾಸನ.















No comments:

Post a Comment