Search This Blog

Tuesday 19 December 2017

ಕವಿಗಳ್ಗಿದು ಕೆಯ್ಗನ್ನಡಿ ಕವಿತೆಗೆ ಬಾಳ್ಮೊದಲು - ನಾಗವರ್ಮನ ಕಾವ್ಯಾವಲೋಕನ.

ಆರಂಭಕಾಲೀನ ಶಾಸನಗಳಿಂದ ಹಿಡಿದು ೧೦ನೇ ಶಾತಮಾನದ ಕೊನೆಯ ತನಕದ ಅನೇಕ ಶಾಸನಗಳಲ್ಲಿ ನಾಗವರ್ಮನ ಉಲ್ಲೇಖ ಸಿಗುತ್ತದೆ. ಆದರೆ ಕ್ರಿ. ಶ. ೯೬೦ ರಿಂದ ೯೯೦ ರ ಮಧ್ಯದಲ್ಲಿ ಬದುಕಿದ್ದ ಶಾಸನ ಕವಿ ನಾಗವರ್ಮ ಕನ್ನಡದ ಮೊಟ್ಟ ಮೊದಲಿನ ಬ್ರಾಹ್ಮಣ ಕವಿ ಎನ್ನುವ ಹೆಗ್ಗಳಿಕೆಗೆ ಪಾತ್ರನಾಗುತ್ತಾನೆ. ಆದರೆ ಆ ಕವಿಯ ಕುರಿತು ಈಗ ನಾನು ಪ್ರಸ್ತಾಪಿಸುತ್ತಿಲ್ಲ. ಈತ ಇನ್ನೊಬ್ಬ ನಾಗವರ್ಮ.
"ಕವಿಗಳ್ಗಿದು ಕೆಯ್ಗನ್ನಡಿ 
ಕವಿತೆಗೆ ಬಾಳ್ಮೊದಲುದಾತ್ತ ವಾಗ್ದೇವತೆಗು
ದ್ಭವಹೇತು ಕೋಶಗೃಹಮೆನೆ
ಭುವನದೊಳಿದು ಪರೆದುನಿಲ್ವುದೊಂದಚ್ಚರಿಯೇ " ಎಂದು
ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಉದ್ಗರಿಸಿರುವುದು ಕಾವ್ಯ ರಚನೆ ಮಾಡಬೇಕಿದ್ದರೆ ಕಾವ್ಯ ಸ್ವಾರಸ್ಯದ ಜೊತೆಗೆ ಕೋಶದಂತೆ ವ್ಯಾಕರಣವೂ ಕೂಡ ಭಾಷೆಗೆ ಅಷ್ಟೆ ಅವಶ್ಯ ಎಂದಿದ್ದಾನೆ. ಈತ ತನ್ನ ಕಾವ್ಯಾವಲೋಕನದ ಸಂಧಿ ಪ್ರಕರಣದ ಹತ್ತನೆಯ ಸೂತ್ರದಲ್ಲಿನ 49ನೇ ಪದ್ಯವನ್ನು ಕ್ರಿಸ್ತ ಶಕ 974 ರಲ್ಲಿ ಬರೆದ ಗಂಗರಾಜ ಮಾರಸಿಂಹನ ಶ್ರವಣಬೆಳಗೊಳದ ಕೂಗೆ ಬ್ರಹ್ಮದೇವರ ಕಂಬದ ಮೇಲಿರುವ 113 ಸಾಲುಗಳುಳ್ಳ ಶಾಸನದಿಂದ ಆಯ್ದುಕೊಂಡಿದ್ದಾನೆ. ಆ ಶಾಸನದ 83 ನೇ ಸಾಲಿನಿಂದ ಕನ್ನಡ ಆರಂಭವಾಗುತ್ತದೆ ಅಲ್ಲಿನ 97 ಮತ್ತು 98 ನೇ ಸಾಲನ್ನು ಶಾಸನದಿಂದ ಆಯ್ದುಕೊಂಡಿರುವನು. ಈ ಸಾಲುಗಳು ಶಾಸನದಲ್ಲಿನ ಕಾವ್ಯಾತ್ಮಕ ಗುಣವನ್ನು ಎತ್ತಿ ತೋರಿಸುತ್ತದೆ.
"ನುಡಿದನೆ ಕಾವುದನೇ ಎ(ನೆ)ರ್ದೆ
ಗೆಡದಿರು ಜವನಿಟ್ಟುರಕ್ಕೆ ನಿನಗೀವುದನೇಂ
ನುಡಿದನೆ ಏ! ಅದು ಕೆಯ್ಯದು(ಮೇಣ್)
ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ" ಎನ್ನುವುದನ್ನು ನಾಗವರ್ಮ ತನ್ನ ಕಾವ್ಯಾವಲೋಕನಕ್ಕೆ ಆಯ್ದುಕೊಂಡಿದ್ದಾನೆ.
ಈ ನಾಗವರ್ಮನು ಎರಡನೇ ನಾಗವರ್ಮ, ಈತನ ಕಾವ್ಯಾವಲೋಕನ’ವು ಅಲಂಕಾರಶಾಸ್ತ್ರದ ಕುರಿತ ರಚಿತವಾದ ಕೃತಿ. ಆದರೆ, ಇದರಲ್ಲಿ ವ್ಯಾಕರಣವನ್ನು ಕುರಿತ ‘ಶಬ್ದಸ್ಮೃತಿ’ ಎಂಬ ಇಡೀ ಅಧ್ಯಾಯವನ್ನು ಅಳವಡಿಸಲಾಗಿದೆ. ಕವಿರಾಜಮಾರ್ಗದಲ್ಲಿ ಬರುವ ಕೆಲವು ಉಲ್ಲೇಖಗಳನ್ನು ಬಿಟ್ಟರೆ, ಇದೇ ಕನ್ನಡ ಭಾಷೆಯ ಮೊದಲ ವ್ಯಾಕರಣ. ಕಾವ್ಯಾವಲೋಕನದಲ್ಲಿ ಐದು ಅಧ್ಯಾಯಗಳಿವೆ. ಅವುಗಳು ಅನುಕ್ರಮವಾಗಿ ‘ಶಬ್ದಸ್ಮೃತಿ’, ‘ಕಾವ್ಯಮಲವ್ಯಾವೃತ್ತಿ’, ‘ಗುಣವಿವೇಕ’, ‘ರೀತಿಕ್ರಮರಸನಿರೂಪಣ’ ಮತ್ತು ‘ಕವಿಸಮಯ’ ಎಂಬ ತಲೆಬರೆಹಗಳನ್ನು ಪಡೆದಿದೆ. ವ್ಯಾಕರಣವನ್ನು ಕುರಿತ ಮೊದಲ ಅಧ್ಯಾಯವು ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಆಖ್ಯಾತಗಳೆಂಬ ಪರಿಕಲ್ಪನೆಗಳನ್ನು ಕನ್ನಡದ ಸಂದರ್ಭದಲ್ಲಿ ನಿರೂಪಿಸುತ್ತದೆ. ಇವು ಒಂದು ಭಾಷೆಗೆ ಅತ್ಯಗತ್ಯವಾದ ವ್ಯಾಕರಣಾಂಶಗಳು ಒಳಗೊಂಡಿವೆ. ನಾಗವರ್ಮನು ತನ್ನ ವಿವರಣೆಗಳಿಗೆ ಸರಿಯಾದ ಉದಾಹರಣೆಗಳನ್ನು, ಕನ್ನಡ ಕಾವ್ಯಗಳು ಮತ್ತು ಶಾಸ್ತ್ರಗ್ರಂಥಗಳಿಂದ ಆರಿಸಿ ಕೊಟ್ಟಿದ್ದಾನೆ. ಎರಡನೆಯ ಅಧ್ಯಾಯದಲ್ಲಿ, ಪದರಚನೆ ಮತ್ತು ವಾಕ್ಯರಚನೆಗಳಲ್ಲಿ ನುಸುಳಿಕೊಳ್ಳಬಹುದಾದ ದೋಷಗಳನ್ನು ಪ್ರತ್ಯೇಕ ಭಾಗಗಳಲ್ಲಿ ವಿವರಿಸಲಾಗಿದೆ. ಮೂರನೆಯ ಅಧಿಕರಣವು ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳನ್ನು ವಿವರವಾಗಿ ಹೇಳುತ್ತದೆ. ಅಲ್ಲಿಯೇ, ‘ಮಾರ್ಗ’ ಎಂಬ ವಿಷಯದ ಪ್ರಸ್ತಾಪವೂ ಬರುತ್ತದೆ. ಅತ್ಯಂತ ಪ್ರಸಿದ್ಧವಾದ "ರೀತಿ" ಮತ್ತು "ರಸ"ಗಳನ್ನು ನಾಲ್ಕನೆಯ ಅಧ್ಯಾಯದಲ್ಲಿ ನಿರೂಪಿಸಲಾಗಿದೆ. ಕವಿಸಮಯ ಎಂಬ ವಿಷಯವನ್ನು ಕುರಿತ ಮಾಹಿತಿಗಳನ್ನು ಕೊನೆಯ ಅಧ್ಯಾಯದಲ್ಲಿ ಕಾಣಬಹುದು. ಇಲ್ಲಿ ಕವಿಸಮಯದ ಪ್ರಭೇದಗಳಾದ ಅಸದಾಖ್ಯಾತಿ, ಸದಕೀರ್ತನ, ನಿಯಮಾರ್ಥ ಮತ್ತು ಐಕ್ಯ ಎಂಬ ನಾಲ್ಕು ಬಗೆಗಳನ್ನು ವಿವರವಾಗಿ ಪರಿಚಯಿಸಿದ್ದಾನೆ. ತನ್ನ ಪುಸ್ತಕವು, ಕವಿಗಳ ಕೈಗನ್ನಡಿಯೆಂದು ನಾಗವರ್ಮ ಹೇಳಿಕೊಂಡಿದ್ದಾನೆ. ಅದೇ ರೀತಿ ಕೇಶಿರಾಜನು ಸಹ ತನ್ನ "ಶಬ್ದಮಣಿದರ್ಪಣ"ದ 'ಸಂಧಿ ಪ್ರಕರಣ'ದ ಸೂತ್ರ 58 ರಲ್ಲಿ ಸಂಧಿಯ ಅಭಾವ ಸ್ಥಳದ ಅವಧಾರಣೆಗೆ ಇದೇ ಸಾಲುಗಳನ್ನು ಬಳಸಿಕೊಂಡಿರುವುದು ವ್ಯಾಕರಣದ ದೃಷ್ಟಿಯಿಂದ ಅತ್ಯಂತ ಮಹತ್ವದ ಶಾಸನ ಎನ್ನಿಸುತ್ತದೆ.
ಇದು ಶ್ರವಣಬೆಳಗೊಳದ ಕೂಗೆ ಬ್ರಹ್ಮದೇವರ ಕಂಬದ ಮೇಲಿರುವ ಶಾಸನದ ಸಾಲು.
95. ಕಾಳನೊ ರಾವಣನೋ ಶಿಶುಪಾಳನೊ ತಾನೆನಿಸಿ ನೆಗಳ್ದ ನರಗನ ತಲೆ
96. ತನ್ನಾಳಾಳ ಕಯ್ಗೆ ವನ್ದುದು ಹೇಳಾಸಾಧ್ಯದೊಳೆ ಗಂಗಚೂಡಾಮಣಿಯಾ
97. ನುಡಿದನೆ ಕಾವುದನೇ ಎರ್ದೆಗೆಡದಿರು ಜವನಿಟ್ಟ ರಕ್ಕೆ ನಿನಗೀವುದನೇಂನು
98. ಡಿದನೆ ಏ ಅದು ಕೆಯ್ಯದು ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ

No comments:

Post a Comment