Search This Blog

Monday 11 December 2017

ಯಥಾಪರಾಧ ದಂಡಾನಾಂ ಯಥಾ ಕಾಲ ಪ್ರಬೋಧಿನಾಮ್ - ದಾಟ -ಕಾಳಿದಾಸ -ಭಾರವಿ ಮತ್ತು ಚಾಲುಕ್ಯರ ಶಿಲ್ಪಿ ಕವಿ ರವಿಕೀರ್ತಿ.

ಅದು ಕ್ರಿ ಶ 4-5ನೇ ಶತಮಾನದ ಕಾಲ ಆಗಷ್ಟೆ ಬ್ರಾಹ್ಮಿಯಿಂದ ಟಿಸಿಲೊಡೆದು ಸಂಸ್ಕೃತ ಈ ನೆಲದಲ್ಲಿ ನೆಲೆಗೊಳ್ಳುತ್ತಿದ್ದ ಕಾಲ ಆಗ ಕದಂಬ ಶಾಂತಿವರ್ಮ ತಾಳಗುಂದದ ಪ್ರಣವೇಶ್ವರನ ಎದುರು ಒಂದು ಸ್ತಂಭಶಾಸನ ಬರೆಸುತ್ತಾನೆ ಶಾಸನ ಕವಿ ಕುಬ್ಜ ಅದೆಷ್ಟು ಕಾವ್ಯಾತ್ಮಕವಾಗಿ ಬರೆದ ಅಂದರೆ ಅಲಂಕಾರ ಮತ್ತು ಛಂದಸ್ಸನ್ನು ಬಹುವಾಗಿ ಬಳಸಿಕೊಂಡ. "ಕುಬ್ಜಸ್ವ ಕಾವ್ಯಮಿದಂ ಅಶ್ಮತಲೇ ಲಿಲೇಖ" ಎಂದು ಸ್ವತಃ ತಾನೇ ಬರೆದೆ ಎಂದು ಹೇಳಿಕೊಳ್ಳುತ್ತಾನೆ. ಆದರೆ ಎಲ್ಲಿಯೂ ಸಹ ಕುಬ್ಜ ಸಂಸ್ಕೃತದ ಬೇರಾವ ಕವಿಯನ್ನೂ ಹೊಗಳಲಿಲ್ಲ ಅಥವಾ ಅವರ ಕಾವ್ಯದ ತುಣುಕನ್ನು ಸೇರಿಸಲಿಲ್ಲ. ಆದರೆ ಆಮೇಲೆ ಬಂದ ಶಾಸನಕವಿಗಳು ಅಲ್ಲಲ್ಲಿ ಬೇರೆ ಬೇರೆ ಕವಿಗಳ ಉದ್ಘಾರ ಮಾಡಿಕೊಂಡಿದ್ದಾರೆ.
ಮಂಗಲೇಶನ ಮಹಾಕೂಟದ ಶಾಸನ : ಕದಂಬರ ಕಾಲದಲ್ಲಿ ತಾಳಗುಂದ ಸ್ತಂಭಶಾಸನವನ್ನು ಬರೆದ ಸಂಸ್ಕೃತ ಕವಿ ಕುಬ್ಜನ ನಂತರ ಅಷ್ಟೇ ಸಾಹಿತ್ಯಿಕ ಮೌಲ್ಯದ ಶಿಲಾಶಾಸನಗಳು ಬಂದದ್ದು ಬಹಳ ವಿರಳ. ಆದರೆ ಇಂತಹ ಒಬ್ಬ ಕವಿ ಬಾದಾಮಿ ಚಳುಕ್ಯರಿಗೆ ಲಭ್ಯವಾಗಿದ್ದು ಮಂಗಲೇಶನ ಮಹಾಕೂಟ ಸ್ತಂಭ ಶಾಸನದಲ್ಲಿ. ಸುಮಾರು 595 - 596 ನೇ ಇಸವಿಯಲ್ಲಿ ಮಂಗಲೇಶ ಒಂದು ಸ್ತಂಭ ಶಾಸನವನ್ನು ಹಾಕಿಸುತ್ತಾನೆ. ಬರೆದಾತ ದಾಟ ಎನ್ನುವ ಕವಿ. 18 ಸಾಲುಗಳ ಈ ಶಾಸನದಲ್ಲಿ 17 ಸಾಲುಗಳನ್ನು ಪ್ರೌಢ ಸಂಸ್ಕೃತದಲ್ಲಿ ಬರೆದು ಕೊನೆಯ ಸಾಲನ್ನು ಕನ್ನಡೀಕರಿಸಿದ್ದಾನೆ. ತನ್ನ ಹೆಸರನ್ನು ಬಿಂಬಿಸುವ ಸಾಲನ್ನು ಕನ್ನಡದಲ್ಲಿ ಬರೆದಿದ್ದಾನೆ. ಈ ಶಾಸನದ ಮಹತ್ವವನ್ನು ಗಮನಿಸುತ್ತಾ ಹೋದರೆ ಶಾಸನಕವಿಗೆ ಕಾಳಿದಾಸನ ಕಾವ್ಯ ಗೊತ್ತಿದ್ದಿರಬಹುದು ಆದರೆ ಕಾಳಿದಾಸನ ಹೆಸರು ಅಷ್ಟಾಗಿ ಪರಿಚಿತವಲ್ಲದಿರಬಹುದೇನೋ. ಮತ್ತು ಆ ಕಾವ್ಯದ ಸಾಲು ಬಳಸಿಕೊಂಡಿದ್ದರೂ ಸಹ ಅದು ರಘುವಂಶ ಕಾವ್ಯದ ಸಾಲು ಎಂದೂ ಸಹ ಗೊತ್ತಿದ್ದಂತೆ ತಿಳಿಯುತ್ತಿಲ್ಲ. ತನ್ನ ಶಾಸನದ ಮೊದಲ ಸಾಲಿನ ಉತ್ತರಾರ್ಧ ಮತ್ತು ಎರಡನೇ ಸಾಲಿನ ಪೂರ್ವಾರ್ಧವನ್ನು ರಘುವಂಶ ಕಾವ್ಯದ ಒಂದನೇ ಸರ್ಗದ ಆರನೇ ಶ್ಲೋಕದ ಮೊದಲ ಸಾಲಿನಿಂದತೆಗೆದುಕೊಂಡಿದ್ದಾನೆ.
"ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಮ್ | "(ಈ ಸಾಲು ತೆಗೆದುಕೊಂಡಿದ್ದಾನೆ.)
ಯಥಾಪರಾಧ ದಂಡಾನಾಂ ಯಥಾ ಕಾಲ ಪ್ರಬೋಧಿನಾಮ್ ||
ಆದರೆ ನನ್ನ ಅನಿಸಿಕೆಯಂತೆ ಕ್ರಿ. ಶ. 634 ರಲ್ಲಿ ಅಂದರೆ ಸುಮಾರು ಮೂವತ್ತು ವರ್ಷಗಳಷ್ಟು ಅಂತರದಲ್ಲಿ ಒಂದು ಶಿಲಾ ಫಲಕವನ್ನು ಐಹೊಳೆಯ ಮೇಗುಟಿ ಜಿನದೇಗುಲದಲ್ಲಿ ಬರೆಸಿತ್ತಾನೆ. ಈ ಶಾಸನ ಬರೆದ ಕವಿ ರವಿಕೀರ್ತಿ. ಈ ರವಿಕೀರ್ತಿ ಪ್ರಾಯಶಃ ದಾಟನ ಶಿಷ್ಯನಿರಬಹುದೇನೋ. ಕಾಳಿದಾಸನ ರಘುವಂಶದ ಶ್ಲೋಕದ ಉದಾಹರಣೆ ಕೊಟ್ಟು ಆರಂಭಿಸಿದ ಶಾಸನ ಮಹಾಕೂಟದಲ್ಲಿದ್ದರೆ, ಅಲ್ಲಿಂದ ಹೆಚ್ಚೇನೂ ದೂರವಿರದ ಮೇಗುಟಿಯಲ್ಲಿ ಪುನಃ ಕಾಳಿದಾಸ ಕಾಣಿಸಿಕೊಳ್ಳುತ್ತಾನೆ. ಬರೆದಾತ ರವಿಕೀರ್ತಿ.
ನಿಜಕ್ಕೂ ಒಬ್ಬ ಅಪರೂಪದ ಕವಿ ಬಾದಾಮಿ ಚಳುಕ್ಯರಿಗೆ ಲಭ್ಯವಾದದ್ದು ಚಳುಕ್ಯರ ಕಲಾ ಇತಿಹಾಸದ ಜೊತೆಗೆ ಸಾಹಿತ್ಯಿಕ ಮೆರುಗನ್ನೂ ಜಾಸ್ತಿ ಮಾಡಿತು. ರವಿಕೀರ್ತಿ. ಈತನು ಒಂದು ಜಿನಾಲಯವನ್ನು ಐಹೊಳೆಯಲ್ಲಿ ಕಟ್ಟಿಸಿ ಜಿನಾಲಯಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸ್ವತಃ ಬರೆದನು
ತಸ್ಯಾಂಬುಧಿತ್ರಯ ನಿವಾರಿತ ಶಸನಸ್ಯ ಸತ್ಯಾಶ್ರಯಸ್ಯ ಪರಮಾಪ್ತವತಾಪ್ರಸಾದಂ |
ಶೈಲಂ ಜಿನೇಂದ್ರ ಭವನ ಭುವನಂ ಮಹಿಮ್ನಾ ನಿರ್ಮಾಪಿತಮ್ಮತಿಮತಾ ರವಿಕೀರ್ತೇನೇದಮ್ ||
“ಪ್ರಶಸ್ತೇರ್ವಸತೇಶ್ಚಾಸ್ಯಾಃ ಜಿನಸ್ಯ ತ್ರಿಜಗದ್ಗುರೋಃ ಕರ್ತಾ ಕಾರಯಿತಾಚಾಪಿ ರವಿಕೀರ್ತಿಃ ಕೃತೀಸ್ವಯಮ್” ಎಂದು ತಾನೇ ಬರೆದೆ ಎಂದು ಹೇಳಿಕೊಳ್ಳುತ್ತಾನೆ.
ಸುಮಾರು 5’ ಅಗಲದ ಶಿಲಾಫಲಕದ ಮೇಲೆ ಹದಿನೆಂಟು ಸಾಲುಗಳಲ್ಲಿರುವ ಶಾಸನವು ಕ್ರಮವಾಗಿ ಔಪಷ್ಛಂದಸಿಕ, ಆರ್ಯ, ಆರ್ಯಗೀತಿ, ಉಪಜಾತಿ, ಇಂದ್ರವಜ್ರ, ರಥೋದ್ಧತಾ, ವಂಶಸ್ಥ, ದ್ರುತವಿಳಂಬಿತ, ಪ್ರಹರ್ಷಿಣೀ, ವಸಂತತಿಲಕ, ಮಾಲಿನೀ, ಹರಿಣೀ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ ಹೀಗೆ ಒಟ್ಟು ಹದಿನೇಳು ಛಂದಸ್ಸುಗಳ ಮೂವತ್ತೇಳು ಸಂಸ್ಕೃತ ಪದ್ಯಗಳನ್ನೊಳಗೊಂಡಿದೆ. ಭಾರತೀಯ ಶಾಸನಕವಿಗಳು ರಚಿಸಿದ ಶಿಲಾ ಪ್ರಶಸ್ತಿಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುವ ಪ್ರೌಢ ಕಾವ್ಯವಾಗಿದೆ. ಮುಂದೆ ರವಿಕೀರ್ತಿಯು ದೃಢ ವಿಶ್ವಸಿಗನಾಗಿ ತಾನು ಯಾರಿಗೂ ಕಡಿಮೆಯವನಲ್ಲ ಎನ್ನುವುದನ್ನು ತನ್ನ ಕಾವ್ಯದ ಮುಂದಿನ ಸಾಲಿನಲ್ಲಿ ಶ್ರುತ ಪಡಿಸುತ್ತಾನೆ
ಯೇನಾ ಯೋಜಿ ನವೇಶ್ಮ ಸ್ಥಿರಮರ್ಥವಿಧೌ ವಿವೇಕಿನಾ ಜಿನವೇಶ್ಮ |
ಸ ವಿಜಯತಾಂ ರವಿಕೀರ್ತಿಃ ಕವಿತಾಶ್ರಿತ ಕಾಳಿದಾಸ ಭಾರವಿಕೀರ್ತಿಃ ಎಂದು ಕಾಲಿದಾಸ ಮತ್ತು ಭಾರವಿಯೊಡನೆ ಕವಿ ರವಿಕೀರ್ತಿ ತನ್ನನ್ನು ಹೋಲಿಸಿಕೊಂಡಿದ್ದಾನೆ. ಅಲಂಕಾರ ಶಾಸ್ತ್ರವನ್ನು ಸಂಪೂರ್ಣವಾಗಿ ಬಳಸಿಕೊಂಡ ದಾಕ್ಷಿಣಾತ್ಯ ಕವಿ ಉತ್ಪ್ರೇಕ್ಷೆಗಳನ್ನು ಹೆಣೆಯಲು ತನ್ನೆಲ್ಲ ಕಾವ್ಯಶಕ್ತಿಯನ್ನು ಬಳಸಿಕೊಂಡಿರುವನು.
ಕಾಲಿದಾಸನರಘುವಂಶ ಛಾಯೆ ಪ್ರಶಸ್ತಿಯ ಉದ್ದಗಲಕ್ಕೆ ಪಸರಿಸಿದೆ. ಅಲ್ಲದೆ, ಮಹಾಕವಿಯಕುಮಾರಸಂಭವ’, ‘ಕಿರಾತಾರ್ಜುನೀಯ’, ಮತ್ತುಮಾಳವಿಕಾಗ್ನಿಮಿತ್ರ ಛಾಯೆಗಳೂ ಸಹ ಇಲ್ಲಿ ಅಲ್ಲಲ್ಲಿ ಸುಳಿದಾಡಿವೆ. ಪುಲಿಕೇಶಿಯ ದಿಗ್ವಿಜಯದ ವರ್ಣನೆಗೆ ರಘುವಿನ ದಿಗ್ವಿಜಯವು ಮಾದರಿಯಾದಂತಿದೆ. ಹೀಗಾಗಿ ರವಿಕೀರ್ತಿಯ ಅಚ್ಚುಮೆಚ್ಚಿನ ಕವಿ ಕಾಳಿದಾಸನಾಗಿದ್ದನೆಂಬುದರಲ್ಲಿ ಅನುಮಾನವಿಲ್ಲ.
ಚಳುಕ್ಯರ ಕಾಲದ ಶಾಸನಕವಿಗಳಲ್ಲಿ ಕಾಳಿದಾಸನನ್ನು ಬಳಸಿಕೊಂಡವರಲ್ಲಿ ಮಂಗಲೇಶನ ಮಹಾಕೂಟ ಶಿಲಾಶಾಸನಕಾರ ದಾಟ ಮೊದಲಿಗನೆನಿಸುವನು. ಇದಕ್ಕಿಂತ ಮುಂಚೆ ಕ್ರಿ ಶ ಸುಮಾರು 588 ರಲ್ಲಿ ದೇಶಾದ್ಯಂತ ಹಲವಾರು ಶಾಸನ ಕವಿಗಳು ಕಾಳಿದಾಸ ಸೆಳೆತಕ್ಕೆ ಒಳಗಾಗಿದ್ದರು. ಮಹಾನಾಮನ "ಬೋಧಗಯಾ" ಶಾಸನಕವಿ, ಸುಮಾರು 6ನೇ ಶತಮಾನದ ಮೌಖರಿಯ ಅನಂತವರ್ಮನ ಶಾಸನಕವಿ, ಇವರಲ್ಲದೇ ಸುಮಾರು ಏಳನೇ ಶತಮಾನದಲ್ಲಿ ಕಾಂಬೋಡಿಯಾದಲ್ಲಿನ ಶಾಸನ ಕವಿಯೊಬ್ಬ ರಘುವಂಶವನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ.

ಐಹೊಳೆಯಲ್ಲಿ ಸ್ವತಃ ಜಿನಮಂದಿರವನ್ನು ಕಟ್ಟಿಸಿ ಪ್ರಶಸ್ತಿಯನ್ನು ಸ್ವಹಸ್ತದಿಂದ ರವಿಕೀರ್ತಿ ಬರೆದ, ಆದರೆ ಕವಿ ಕುಬ್ಜನಂತೆ ಸ್ವತಃ ಶಿಲೆಯ ಮೇಲೆ ಕಂಡರಿಸಿದನೆನ್ನುವುದರ ಬಗ್ಗೆ ಸ್ವಲ್ಪ ಗೊಂದಲ ಮೂಡುತ್ತದೆ. ಈಗ ನಮಗೆ ಕಾಣ ಸಿಗದಿರುವ ಹತ್ತೊಂಬತ್ತನೇ ಸಾಲಿನಲ್ಲಿ ಬಗ್ಗೆ ವಿವರವಿದ್ದಿರಲೂ ಬಹುದು ಅದು ಪ್ರಾಕೃತಿಕ ನಷ್ಟವಾಗಿರಬಹುದು. ಬೇರಾವ ಲಿಪಿಕಾರನನ್ನು ಹೆಸರಿಸದಿರುವುದರಿಂದ ಕುಬ್ಜನಂತೆ ಪ್ರಶಸ್ತಿಯನ್ನು ರವಿಕೀರ್ತಿ ಸ್ವತಃ ಶಿಲೆಗಿಳಿಸಿದನೆನ್ನಬಹುದು.
ಮಹಾಕೂಟ ಸ್ಥಂಬ ಶಾಸನದ ಮೊದಲ ಮತ್ತು ಎರಡನೇ ಸಾಲು
ಮಹಾಕೂಟ ಸ್ಥಂಬ ಶಾಸನದಲ್ಲಿ ಕವಿ ದಾಟ ನ ಹೆಸರು


ಐಹೊಳೆಯ ರವಿಕೀರ್ತಿಯ ಶಾಸನ ಕಾಳಿದಾಸ ಮತ್ತು ಭಾರವಿಯ ಉಲ್ಲೇಖ


No comments:

Post a Comment