Search This Blog

Saturday 23 December 2017

ದಾಮೋದರಗುಪ್ತನ ಕುಟ್ಟಿನೀಮತ - ಕಾಮಶಾಸ್ತ್ರದ ಗ್ರಂಥ

ಸುಮಾರು 755 ರಿಂದ 787ರ ತನಕ ಕಾಶ್ಮೀರ ಪ್ರದೇಶವನ್ನು ಆಳುತ್ತಿದ್ದ ರಾಜ ಜಯಾದಿತ್ಯ. ಈತ ಕಾರ್ಕೋಟ ವಂಶದ ದೊರೆ. ಕಾಶ್ಮೀರ ರಾಜ್ಯದಲ್ಲಿ ಗೋನಂದ ಎನ್ನುವ ವಂಶದ ದೊರೆಗಳ ಆಡಳಿತ 627 ರಲ್ಲಿ ಕೊನೆಗೊಂಡ ಮೇಲೆ ಅಧಿಕಾರಕ್ಕೆ ಬಂದ ರಾಜಸಂತತಿ ಈ ಕಾರ್ಕೋಟ. ಈ ವಂಶದ ಸ್ಥಾಪಕ ದುರ್ಲಭವರ್ಧನ; ಗೋನಂದ ವಂಶದ ಕೊನೆಯ ದೊರೆ ಬಾಲಾದಿತ್ಯನ ಮಗಳನ್ನು ವಿವಾಹವಾಗಿ, ಗಂಡು ಸಂತತಿಯಿಲ್ಲದ ಬಾಲಾದಿತ್ಯನ ಉತ್ತರಾಧಿಕಾರಿಯಾಗಿ 627 ರಲ್ಲಿ ಸಿಂಹಾಸನವನ್ನೇರಿದ. ವಂಶ 855  ವರೆಗೂ ಕಾಶ್ಮೀರದಲ್ಲಿ ಆಳಿತು ಎಂದು ತಿಳಿದು ಬರುತ್ತದೆ. ದುರ್ಲಭವರ್ಧನ 36 ವರ್ಷ ಕಾಲ ರಾಜ್ಯಭಾರ ಮಾಡಿದ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳು ದೊರಕಿಲ್ಲ. ಈತನಿಗೆ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ) ಎಂಬ ಮೂವರು ಮಕ್ಕಳಿದ್ದರು ಎನ್ನುವುದು ತಿಳಿಯುತ್ತದೆ. ದುರ್ಲಭವರ್ಧನನ ನಂತರ 713 ರಲ್ಲಿ ಹಿರಿಯ ಮಗ ಚಂದ್ರಾಪೀಡ ಪಟ್ಟಕ್ಕೆ ಬಂದ. ಈತ ಚೀನದ ಚಕ್ರವರ್ತಿಯ ಆಸ್ಥಾನಕ್ಕೆ ತನ್ನ ದೂತನನ್ನು ಕಳಿಸಿಅರಬ್ ದೊರೆಗಳ ವಿರುದ್ಧ ನೆರವು ಕೋರಿದ. ಪ್ರಯತ್ನದಲ್ಲಿ ಸಫಲನಾಗದೆ ಹೋದರೂ ಸಹ ಅರಬರ ಆಕ್ರಮಣಗಳಿಂದ ತನ್ನ ದೇಹವನ್ನು ರಕ್ಷಿಸಿಕೊಂಡ. 720 ರಲ್ಲಿ ಚೀನದ ಚಕ್ರವರ್ತಿ ಚಂದ್ರಾಪೀಡನನ್ನು ರಾಜನೆಂದು ಗೌರವಿಸಿದನೆಂದು ಚೀನಾ ದೇಶದ ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಒಮ್ಮೆ ಚಂದ್ರಾಪೀಡನ ಅಧಿಕಾರಗಳು ಒಂದು ದೇವಸ್ಥಾನವನ್ನು ಕಟ್ಟಲು ಒಬ್ಬ ಮೋಚಿಯ ಮನೆ ಇದ್ದ ಸ್ಥಳವನ್ನು ಆರಿಸಿದರು. ಮೋಚಿ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ಆಗ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಮೋಚಿ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಸ್ಥಳವನ್ನು ಬಿಟ್ಟು ಕೊಟ್ಟ. ಘಟನೆ ರಾಜನ ನ್ಯಾಯಪರತೆಗೊಂದು ನಿದರ್ಶನ. ತನ್ನ ತಮ್ಮ ತಾರಾಪೀಡನ ಕುತಂತ್ರದಿಂದ ಚಂದ್ರಾಪೀಡ 722 ರಲ್ಲಿ ಕೊಲೆಯಾದ. ತಾರಾಪೀಡ ಅನಂತರ ಗದ್ದುಗೆಯನ್ನೇರಿದ. ಈತ ಕ್ರೂರಿ, ನಿರ್ದಯಿ, ಕೊಲೆಗಡುಕನಾಗಿ 4 ವರ್ಷ ಕಾಲ ರಾಜ್ಯಭಾರ ಮಾಡಿದ. ಅನೇಕರು ಈತನ ಶಿಕ್ಷೆಯನ್ನು ತಡೆಯಲಾರದೆ ಗುಡ್ಡ ಗಾಡಿಗೆ ಓಡಿಹೋದರು. ಇವನ ಅನಂತರ ಇವನ ತಮ್ಮ ಲಲಿತಾದಿತ್ಯ ಮುಕ್ತಾಪೀಡ 724 ರಲ್ಲಿ ಸಿಂಹಾಸನಕ್ಕೆ ಬಂದ. ಲಲಿತಾದಿತ್ಯ ಕಾರ್ಕೋಟಕ ರಾಜಸಂತತಿಯಲ್ಲೇ ಅಗ್ರಗಣ್ಯ. ಈತ ಇಡೀ ಪ್ರಪಂಚವನ್ನೇ ಜಯಿಸುವ ಗುರಿ ಹೊಂದಿದ್ದ. ಸದಾ ಯುದ್ಧನಿರತನಾಗಿದ್ದರೂ ಇವನ ಕಾಲವನ್ನು ಕಾಶ್ಮೀರ ಇತಿಹಾಸದ ಸುವರ್ಣಯುಗವೆಂದು ವರ್ಣಿಸಬಹುದು. ಲಲಿತಾದಿತ್ಯ ಕನೌಜಿನ ಯಶೋವರ್ಮನೊಡನೆ ಒಂದುಗೂಡಿ ಟಿಬೆಟನರನ್ನು ಸೋಲಿಸಿದುದಲ್ಲದೆ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ. ಅನಂತರ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿ, ಅವನು ಗೆದ್ದ ರಾಜ್ಯಗಳನ್ನು ವಶಪಡಿಸಿಕೊಂಡ ತರುವಾಯ ಬಿಹಾರ ಮತ್ತು ಬಂಗಾಳಗಳನ್ನು ಗೆದ್ದು ಒರಿಸ್ಸ ಪ್ರದೇಶದಲ್ಲಿ ಪೂರ್ವ ಸಮುದ್ರದವರೆಗೂ ಮುನ್ನುಗ್ಗಿದ. ದಕ್ಷಿಣ ಭಾರತದಲ್ಲಿ ರಾಷ್ಟ್ರಕೂಟ ರಾಜ್ಯದ ಮೇಲೆ ದಾಳಿ ಮಾಡಿದ. ಅನಂತರ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ. ದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ. ಲಲಿತಾದಿತ್ಯ ತುಖಾರಿ ಸ್ಥಾನವನ್ನೂ ಟಿಬೆಟಿಗೆ ಸೇರಿದ ಲಡಕ್ ಪ್ರಾಂತ್ಯವನ್ನೂ ವಶಪಡಿಸಿಕೊಂಡ. ಟಿಬೆಟನ್ನು ಸಂಪೂರ್ಣವಾಗಿ ಸೋಲಿಸಲು ಚೀನದೇಶದ ಸಹಾಯ ಕೋರಿದ. ಆದರೆ ಚೀನದ ರಾಜ ಲಲಿತಾದಿತ್ಯನನ್ನು ಕಾಶ್ಮೀರದ ದೊರೆ ಮತ್ತು ತನ್ನ ಗೆಳೆಯನೆಂದು ಗೌರವಿಸುವುದರ ಹೊರತು, ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ ದೇವಾಲಯಗಳನ್ನೂ ದೇವತಾಮೂರ್ತಿಗಳನ್ನೂ ನಿರ್ಮಿಸಿದ. ಈತನ ಹೆಸರು ಅಮರವಾಗಿ ಉಳಿಯುವಂತೆ ಮಾಡಿದ ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾದ ಕೆಲಸಗಳೆಂದರೆ ಮಾರ್ತಾಂಡದಲ್ಲಿ ಸೂರ್ಯದೇವನಿಗೆ ಕಟ್ಟಿಸಿದ ದೇವಸ್ಥಾನ ಎಂದು ತಿಳಿದು ಬರುತ್ತದೆ. ಈತ ಯಶೋವರ್ಮನನ್ನು ಸೋಲಿಸಿದ ಅನಂತರ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಆದರೂ ಕೆಲಬಾರಿ ಕ್ರೂರಿಯಾಗಿಯೂ ವಂಚಕನಾಗಿಯೂ ವರ್ತಿಸುತ್ತಿದ್ದನೆಂದು ಕಾಶ್ಮೀರದ ಚರಿತ್ರಕಾರ ಕಲ್ಹಣ ತಿಳಿಸಿದ್ದಾನೆ. 36 ವರ್ಷಗಳ ಆಳ್ವಿಕೆಯ ಅನಂತರ 760 ರಲಿ ಲಲಿತಾದಿತ್ಯ ಮರಣಿಸಿದ. ಲಲಿತಾದಿತ್ಯನ ಅನಂತರ ಆತನ ಹಿರಿಯ ಮಗ ಕುವಲಯಾಪೀಡ ಸ್ವಲ್ಪ ಕಾಲ ಅಧಿಕಾರದಲ್ಲಿದ್ದ. ತರುವಾಯ ಅವನ ತಮ್ಮ ವಜ್ರಾದಿತ್ಯ ಗದ್ದುಗೆಯನ್ನೇರಿದ. ಇವನ ಆಳಿಕೆಯಲ್ಲಿ ಸಿಂಧಿನ ಅರಬ್ಬಿ ಅಧಿಕಾರಿ ಹಿಷಾಮ್ ಬ್ನಂ ಆಮ್ರ್ ಅತ್ ಟಫ್ಲಿಬೀ (768-772) ಕಾಶ್ಮೀರದ ಮೇಲೆ ದಾಳಿ ಮಾಡಿ ಅನೇಕರನ್ನು ಸೆರೆಹಿಡಿದು ಗುಲಾಮರನ್ನಾಗಿ ಕೊಂಡೊಯ್ದ. ಕ್ರೂರಿಯೂ ನಿರ್ದಯನೂ ಅಶಕ್ತನೂ ಆದ ವಜ್ರಾದಿತ್ಯನ ಕಾಲದಲ್ಲಿ ಅಶಾಂತಿ ತಾಂಡವವಾಡುತ್ತಿತ್ತು. ಇವನ ಮಕ್ಕಳಲ್ಲಿ ಹಿರಿಯನಾದ ಪೃಥಿವ್ಯಾಪೀಡ ಅಧಿಕಾರಕ್ಕೆ ಬಂದಾಗ ಅವನ ಮಲತಮ್ಮ ಸಂಗ್ರಾಮಪೀಡ ದಂಗೆಯೆದ್ದು, ಸಿಂಹಾಸನವನ್ನು ವಶಮಾಡಿಕೊಂಡು 7 ದಿನಗಳ ಕಾಲ ರಾಜ್ಯವಾಳಿದ. ಅನಂತರ ಅವನ ತಮ್ಮ ಜಯಾಪೀಡ ವಿನಯಾದಿತ್ಯ ಸಿಂಹಾಸನವನ್ನೇರಿದ.
ಜಯಾಪೀಡ ತನ್ನ ಅಜ್ಜ ಲಲಿತಾದಿತ್ಯನಂತೆ ಶಕ್ತನಾದ. ಈತ ಪೂರ್ವದೇಶಗಳ ಮೇಲೆ ಯುದ್ಧ ಘೋಷಿಸಿ ಕಾಶ್ಮೀರವನ್ನು ಬಿಟ್ಟು ಹೊರಟ ಸಮಯದಲ್ಲಿ ಅವನ ಭಾವಮೈದುನ ಜಜ್ಜ ಅಧಿಕಾರವನ್ನು ಕಸಿದುಕೊಂಡ. ಪದಚ್ಯುತನಾದ ಜಯಾಪೀಡ ವೇಷಮರೆಸಿಕೊಂಡು ಅಲೆಯುತ್ತ ಪುಂಡ್ರವರ್ಧನ ದೊರೆ ಜಯಂತನ ಸೇವೆಯಲ್ಲಿದ್ದಾಗ ಅವನ ಮಗಳನ್ನು ಮದುವೆಯಾದ. ತನ್ನ ಮಾವನ ಪರವಾಗಿ ಗೌಡ ದೇಶದ ಐವರು ಪುಂಡ ನಾಯಕರನ್ನು ಸದೆಬಡಿದ. ಅನಂತರ ಪ್ರಯಾಗದಲ್ಲಿ ತನ್ನ ಅಳಿದುಳಿದ ಸೈನ್ಯವನ್ನು ಒಟ್ಟುಗೂಡಿಸಿ ಕಾನ್ಯಕುಬ್ಜವನ್ನು ಗೆದ್ದ. ಕಾಶ್ಮೀರವನ್ನು ತಲಪಿ, ಜಜ್ಜನೊಡನೆ ಹೋರಾಡಿ ಅವನನ್ನು ಕೊಂದು ಪುನಃ ತನ್ನ ರಾಜ್ಯವನ್ನು ವಶಪಡಿಸಿಕೊಂಡ. ಅನಂತರ ಪೂರ್ವಪ್ರಾಂತ್ಯದಲ್ಲಿ ಭೀಮಸೇನನೆಂಬ ರಾಜನನ್ನು ನೇಪಾಲದ ಅರಮುಡಿಯೆಂಬವನನ್ನೂ ಗೆದ್ದಂತೆ ತಿಳಿಯುತ್ತದೆ. ಇವನ ಆಸ್ಥಾನದಲ್ಲಿ ಕ್ಷೀರಸ್ವಾಮಿನ್, ಉದ್ಭಟ ಮತ್ತು ದಾಮೋದರ ಗುಪ್ತರಂಥ ವಿಖ್ಯಾತ ಪಂಡಿತರಿದ್ದರು. ಸು.30 ವರ್ಷಗಳ ಕಾಲ ಆಳಿದ. 
ಜಯಾದಿತ್ಯ ಅಥವಾ ಜಯಾಪೀಡ ಅತ್ಯಂತ ಚಾಣಾಕ್ಷ ಮತ್ತು ಬಲಶಾಲಿಯಾದ ರಾಜ. ಈತನ ರಾಜ್ಯದಲ್ಲಿದ್ದ ದಾಮೋದರಗುಪ್ತ ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಕೀರ್ತಿಗಳಿಸಿದ್ದ. ದಾಮೋದರ ಗುಪ್ತ ಬ್ರಾಹ್ಮಣನಾಗಿದ್ದ. ಎನ್ನುವುದಾಗಿ ಕಲ್ಲಣನ ರಾಜತರಂಗಿಣಿಯಿಂದ ತಿಳಿದು ಬರುತ್ತದೆ.

ಸ ದಾಮೋದರ ಗುಪ್ತಾಖ್ಯಂ ಕುಟ್ಟಿನೀಮತ ಕಾರಿಣಂ |
ಕವಿಂಕವಿ ಬಲಿರಿವ ಧುರ್ಯಂ ಧೀ ಸಚಿವಂ ವ್ಯದಾತ್ ||
ಮನೋರಥಶ್ಶಂಖದತ್ತಶ್ಚಟಕಸ್ಸಂಧಿಮಾಂಸ್ತಥಾ |
ಬಭೂವುಃ ಕವಯಸ್ತಸ್ಯ ವಾಮನಾದ್ಯಾಶ್ಚ ಪಂಡಿತಾಃ || ರಾಜತರಂಗಿಣೀ 4-488-96
ಬಲಿಯ ರಾಜ್ಯದಲ್ಲಿ ಶುಕ್ರಾಚಾರ್ಯನು ಹೇಗೆ ಮಂತ್ರಿ ಪದವಿಯನ್ನು ಹೊಂದಿದ್ದನೋ ಅದೇರೀತಿ ಜಯಾದಿತ್ಯನ ರಾಜ್ಯದಲ್ಲಿ ಪ್ರಧಾನ ಮಂತ್ರಿಯ ಸ್ಥಾನವನ್ನು ಪಡೆದಿದ್ದ. ಮತ್ತು ವಾಮನ, ಮನೋರಥ, ಶಂಖದತ್ತ, ಚಟಕ, ಸಂಧಿಮಂತನೇ ಮೊದಲಾದ ವಿದ್ವನ್ಮಂತ್ರಿಗಡಣವೇ ಇದ್ದಿತ್ತಂತೆ.
ಅದೇನೇ ಇರಲಿ ದಾಮೋದರಗುಪ್ತ ಖ್ಯಾತಿಗೆ ಬಂದದ್ದು ಅವನ ಕುಟ್ಟಿನೀಮತದಿಂದ. ಈ ಕುಟ್ಟಿನೀಮತ ಗ್ರಂಥವು ಈಗ ಸಂಪೂರ್ಣ ಲಭ್ಯವಿಲ್ಲದಿದ್ದರೂ ಆರ್ಯಾವೃತ್ತದಲ್ಲಿ ಬರೆಯಲ್ಪಟ್ಟ 927 ಶ್ಲೋಕಗಳು ಸಿಗುತ್ತಿವೆ. ಇವು ನೀತಿಕಥೆಗಳಂತಿರುವ ಉಪದೇಶಾತ್ಮಕ ಶ್ಲೋಕಗಳು. ಕುಟ್ಟಿನೀ ಮತವನ್ನು ಶಂಭಳೀಮತವೆಂದೂ ಕರೆಯುತ್ತಾರೆ. ಕುಟ್ಟಿನೀ ಶಂಭಳಿ ಸವೇ . . . ಎಂದು ಅಮರಕೋಶದಲ್ಲಿ ಪರ್ಯಾಯ ವಾಚಿಯಾಗಿ ಬಂದಿದೆ.
ಕುಟ್ಟಿನೀ ಅಥವಾ ತಲೆಹಿಡುಕಿಯಾದ ಕುತಂತ್ರಿಯಾದ ಹೆಂಗಸಿನ ಕುರಿತಾದದ್ದು. ವೇಶ್ಯೆಯರ ಕುರಿತಾದ ಶಬ್ದ. ಸೂಳೆಯರನ್ನು ವಿಟಪುರುಷರಿಗೆ ಹೊಂದಿಸಿಕೊಡುವವಳನ್ನು ಕುಟ್ಟಿನೀ ಎಂದು ಕರೆಯಲಾಗುತ್ತದೆ.
ವಿಟಸ್ಯ ಕುಟುಂಬಂ ಅರ್ಥಹರಣೇನ ಕುಟ್ಟಯತಿ - ನಾಶಯತೀ ಇತಿ "ಕಾಮುಕನಾದ ವ್ಯಕ್ತಿ, ಅಥವಾ ವಿಟನ ಕುಟುಂಬದ ಸಂಪತ್ತಿನ ಅಪಹರಣದಿಂದ ಕೆಡಿಸುವವಳು ಅನ್ನುವ ಅರ್ಥ ಬರುತ್ತದೆ.
ಶಂಬಳೀ ಮತವೆನ್ನುವುದಾಗಿಯೂ ಇದನ್ನು ಕರೆದಿರುವುದು "ಶಂ = ಶ್ರೇಯಃ ಭಾಲಯತಿ = ಹಿನಸ್ತಿ ಇತಿ ಶಂಭಳೀ - ಭಲ್ಲ ಭಲ್ಲ - ಪರಿಭಾಷಣ ಹಿಂಸಾದಾನೇಷು" ಎಂದರೆ ಸುಖ ಶಂತಿ ಸಮೃದ್ಧಿಯನ್ನು ಕೆಡಿಸುವವಳು ಎನ್ನುವ ಅರ್ಥವನ್ನು ಕೊಡುತ್ತದೆ.
ಕುಟ್ಟಿನೀಮತವು ವೇಶ್ಯೆಯರ ಧರ್ಮ ಮತ್ತು ನಡತೆಗಳನ್ನು ತಿಳಿಸುವುದಕ್ಕಿರುವ ಹೆಸರು. ವೇಶ್ಯೆಯರು ಮತ್ತು ವೇಶ್ಯಾ ಲಂಪಟರ ವಿಚಾರವನ್ನು ಚೆನ್ನಾಗಿ ತಿಳಿದಿದ್ದ ಕವಿ ನೀತಿ ನಿರೂಪಣೆಯಿಂದ ಈ ಗ್ರಂಥವನ್ನು ಬರೆದಿದ್ದಾನೆ. ವೇಶ್ಯೆಯರ ಚೇಷ್ಟೆ, ಕುಟ್ಟಿನಿಯರ ಚಾತುರ್ಯವನ್ನು ಮತ್ತು ಅವರಿಂದ ಮೋಸಕ್ಕೊಳಗಾಗುವ ಕಾಮುಕ ಜನರ ದುರವಸ್ಥೆಗಳನ್ನು ತೆರೆದಿಡುವ ಪ್ರಯತ್ನ ಈ ಗ್ರಂಥ ಮಾಡುತ್ತದೆ.
ವಾರಣಾಸಿಯ ಗಲ್ಲಿಯೊಂದರ ಉಪ್ಪರಿಗೆಯಲ್ಲಿ ವೇಶ್ಯೆಯೊಬ್ಬಳು ನಿಂತು ನೋಡುತ್ತಿರುವಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ ಗಾಯಕನೊಬ್ಬನು
"ಯೌವನ ಸೌಂದರ್ಯ ಮದಂ ದೂರೇಣಾಪಾಸ್ಯ ವಾರವನಿತಾಭಿಃ |
ಯತ್ನೇನ ವೇದಿತವ್ಯಾಃ ಕಾಮುಕ ಹೃದಯಾರ್ಜನೋಪಾಯಾಃ || ಎನ್ನುತ್ತಾನೆ.
ಈ ಶ್ಲೋಕವನ್ನು ಕೇಳಿದ ಆ ವಾರಾಂಗನೆ ಕೆಳಗಿಳಿದು ಬಂದು ಒಬ್ಬ ಕುಟ್ಟಿನಿಯ ಮನೆಗೆ ಬಂದು " ಕಾಮುಕರಾದ ಇಂದ್ರಿಯಾಸಕ್ತಕ್ತರಾದ ಜನರನ್ನು ಹೇಗೆ ವಶೀಕರಣದಿಂದ ವಶಪಡಿಸಿಕೊಳ್ಳಬೇಕು ಮತ್ತು ವೇಶ್ಯೆಯರ ಉಪಾಯಗಳ ಕುರಿತು ಹೇಳಿಕೊಡು ಎಂದಾಗ . ಕುಟ್ಟಿನಿಯು ತಾನು ಹೇಗೆ ವಶಪಡಿಸಿಕೊಳ್ಳುತ್ತೇನೆ ಮತ್ತು ಹೇಗೆ ಸಂಪತ್ತನ್ನು ಅಪಹರಿಸುತ್ತೇನೆ ಎಂದು ಹೇಳಿಕೊಡುತ್ತಾಳೆ.

ಅವಗಮ್ಯಾಭಿಪ್ರಾಯಂ ಸ್ವಾಮಿನ್ಯಾ ಪರಿಜನೋಪಿ ಯಂ ಪುರುಷಂ |
ಅಪಹಸತಿ ತಿರಸ್ಕಾರ್ಯಂ ತಸ್ಯ ನ ಮೂಲ್ಯಂ ವರಾಟಿಕಾಃ ಪಂಚ ||

ತವ ಹೃದಯೇ ಹೃದಯಮಿದಂ ವಿನ್ಯಸ್ತಂ ನ್ಯಾಸಪಾಲನಂ ಕಷ್ಟಂ |
ಯತ್ನಾತ್ತಥಾ ವಿಧೇಯಂ ಸ್ಥಾನ ಭ್ರಂಶೋ ಯಥಾ ನ ಸ್ಯಾತ್ ||
ಹೀಗೆ ವೇಶ್ಯೆಯರು ಹೇಗೆ ಇಂದ್ರಿಯ ಸುಖವನ್ನು ಜನರಿಗೆ ನೀಡಿ ಅವರಿಂದ ವಿತ್ತಾದಿಗಳನ್ನು ಅಪಹರಿಸುತ್ತಾರೆ ಮತ್ತು ಅವರ ಎಲ್ಲಾ ಚರ್ಯೆಗಳನ್ನು ವಿವರವಾಗಿ 900 ಕ್ಕೂ ಅಧಿಕ ಶ್ಲೋಕಗಳಿಂದ ನಿರೂಪಿಸಿದ್ದಾನೆ.

ಕಾಮಶಾಸ್ತ್ರದ ಬಹಳಷ್ಟು ವಿಷಯಗಳು ಆಧುನಿಕ ಅಭಿರುಚಿಗೆ ಅಶ್ಲೀಲವೆಂದು ತೋರಬಹುದು ಏಕೆಂದರೆ ಪ್ರಾಚೀನ ಭಾರತೀಯರು ಸ್ವಲ್ಪವೂ ಮುಚ್ಚು ಮರೆಯಿಲ್ಲದೆ ಗೋಪ್ಯಸಂಗತಿಗಳನ್ನೆಲ್ಲ ವರ್ಣನೆಮಾಡಿದ್ದಾರೆ. ಆದರೂ ವಾತ್ಸ್ಯಾಯನನೇ ಗ್ರಂಥವಾಕ್ಯದಲ್ಲಿ ತನ್ನ ಗ್ರಂಥದ ಉದ್ದೇಶ ಧರ್ಮವಿರೋಧವಲ್ಲವೆಂದೂ ಕಾಮಪ್ರಚೋದನೆಗೆ ತನ್ನ ಗ್ರಂಥ ಕಾರಕವಲ್ಲವೆಂದೂ ಸಾರಿಹೇಳಿದ್ದಾನೆ. ಕಾಮಶಾಸ್ತ್ರವನ್ನು ಶಾಸ್ತ್ರವೆಂದು ಕರೆದಿದ್ದರೂ ಅದೊಂದು ಕಲೆ ಎನ್ನುವುದು ಕುಟ್ಟಿನೀಮತದ ಅಭಿಪ್ರಾಯವಾಗಿರುವುದರಿಂದ ಅದನ್ನು ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಕಲಾ ಪ್ರಕಾರವಾಗಿ ತೆಗೆದುಕೊಂಡಿದ್ದಾನೆ.

No comments:

Post a Comment