Search This Blog

Wednesday 13 December 2017

ವರದಾ ತುಂಗ ತರಂಗ - ರವಿಕೀರ್ತಿಯ ವನವಾಸೀ - ಬನವಾಸಿ ವರ್ಣನೆ

ವೈಜಯಂತೀ ಪುರವೆಂದು ಕರೆಸಿಕೊಂಡ ಬನವಾಸಿ ಆಗಾಗ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತ ಬಂದಿದೆ ಆದರೆ ಬನವಾಸಿ ಹೆಸರೇ ಕನ್ನಡದ ಕಂಪನ್ನು ಸೂಸುವ ಹೆಸರು ಅನ್ನಿಸಿ ಬಿಡುತ್ತದೆ, ಬನವಾಸಿ ಅಂದಾಕ್ಷಣ ಕನ್ನಡದ ನೆನಪಾಗಿಯೇ ಆಗುತ್ತದೆ. ಅದಕ್ಕೆ ಕೇವಲ ಕದಂಬರು ಮಾತ್ರವೇ ಕಾರಣರು ಅಂತ ನಾನು ಭಾವಿಸುತ್ತಿಲ್ಲ. ಕದಂಬರು ಇದ್ದಲ್ಲೆಲ್ಲಾ ಬನವಾಸಿಯನ್ನು ನೆನಪಿಸಿಕೊಂಡಂದ್ದಂತೂ ಹೌದು. ದಕ್ಷಿಣದ ಭಾಷೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕದಂಬರು ಕನ್ನದದ ಜೊತೆಗೆ ಸಂಸ್ಕೃತವನ್ನು ಪೋಷಿಸಿಕೊಂಡು ಬಂದರು. ಬನವಾಸಿ ಕದಂಬರ ಕಾಲದ ನಂತರ ಹೊಗಳಿಸಿಕೊಂಡದ್ದು ಬಾದಾಮಿ ಚಾಳುಕ್ಯರ ಕಾಲದಲ್ಲಿ. ಬನವಾಸಿಯನ್ನು ಅದೆಷ್ಟು ಆಪ್ಯಾಯಮಾನವಾಗಿ ಕರೆದರು ಅಂದರೆ "ವರದಾ ತುಂಗ ತರಂಗ" ಎಂದು ಬಿಟ್ಟರು. ಚಲುಕ್ಯರ ಎರಡನೇ ಪೊಲೆಕೇಶಿ ಯ ಕುರಿತಾದ ಐಹೊಳೆಯ ಮೆಗುಟಿಯ ಶಾಸನದಿಂದ ಅಲ್ಲಿ ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. "ವರದಾ ತುಂಗ ತರಂಗ ವಿಲಸದ್ವಂಸಾವಳೀ ಮೇಖಲಾಂ ವನವಾಸೀ ಮವಮೃದ್ನತ ಸ್ಸುರಪುರ ಪ್ರಸ್ಪರ್ಧಿನೀಂ ಸಂಪದಾ ||" ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ.
ಪೌರಾಣಿಕ ಹಿನ್ನೆಲೆಯಲ್ಲಿಯೂ ದ್ವಾಪರದಲ್ಲಿ ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೆ ಕಳೆದರೆಂದೂ ಧರ್ಮ ರಾಜನ ಅಶ್ವಮೇಧ ಯಾಗದ ಸಂದರ್ಭದಲ್ಲಿ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಿಕಾ ಎಂದರೆ ಬಲವಾಸಿ ಅಥವಾ ಸಂಜಯಂತಿ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಪೌರಾಣಿಕ ಯುಗದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು-ಕೈಟಭರೆಂಬ ದೈತರನ್ನು ವಿಷ್ಣು ಕೊಂದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತೆಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ಉತ್ತರದಲ್ಲಿ ಉಚ್ಚ್ರಾಯದಲ್ಲಿದ್ದ ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಕಳಿಸಿದ ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದೂ ಮತ್ತು ಕ್ರಿ.ಪೂ. 1ನೆಯ ಶತಮಾನದಲ್ಲಿದ್ದ ಶ್ರೀಲಂಕೆಯ ರಾಜ ದುಟ್ಟಗಾಮಣಿ ಅನುರಾಧಪುರದಲ್ಲಿ ನಿರ್ಮಿಸಿದ ಸ್ತೂಪದ ಪ್ರತಿಷ್ಠಾಪನ ಮಹೋತ್ಸವದಲ್ಲಿ ಭಾಗವಹಿಸಲು ಬನವಾಸಿಯ ಮಹಾಥೇರ ಚಂದ್ರಗುಪ್ತ 80 000 ಭಿಕ್ಷುಗಳೊಂದಿಗೆ ಸಿಂಹಳಕ್ಕೆ ಹೋಗಿದ್ದನೆಂದೂ ಸಿಂಹಳದ ಮಹಾವಂಸ ಎನ್ನುವ ಗ್ರಂಥದಿಂದ ತಿಳಿದು ಬರುವುದು. ನಾಗಾರ್ಜುನ ಕೊಂಡದ ಒಂದು ಪ್ರಾಕೃತ ಬ್ರಾಹ್ಮೀ ಶಾಸನದಂತೆ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮ ಪ್ರಸಾಕ್ಕಾಗಿ ಬನವಾಸಿಗೆ ಬಂದಿದ್ದರು. ಕ್ರಿಶ 1ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ನಗರವನ್ನು 'ಬನೌಸಿ ಯೆಂದು ಕರೆದಿದ್ದಾನೆ. ಆದರೆ ಸಾತವಾಹನರ ನಂತರ ಬನವಾಸಿಗೆ ಸಂಬಂಧಿಸಿದ ಹೆಚ್ಚಿನ ಐತಿಹಾಸಿಕ ದಾಖಲೆಗಳು ದೊರಕುತ್ತವೆ. ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು. ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ತಿಳಿಸುತ್ತದೆ. ಅದೇನೇ ಇರಲಿ ಇಲ್ಲಿ ನಮ್ಮನ್ನು ಎರಡು ಶಾಸನಗಳು ಭೆರೆ ಬೇರೆ ಕಾಲ ಘಟ್ಟದಲ್ಲಿ ನಮ್ಮನ್ನು ಬಂಧಿಸಿ ಬಿಡುತ್ತವೆ.
ವರದಾ ತುಂಗ ತರಂಗ ವಿಲಸದ್ವಂಸಾವಳೀ ಮೇಖಲಾಂ

ವನವಾಸೀ ಮವಮೃದ್ನತ ಸ್ಸುರಪುರ ಪ್ರಸ್ಪರ್ಧಿನೀಂ ಸಂಪದಾ - ಇದು ರವಿಕೀರ್ತಿಯ ಶಾಸನದಲ್ಲಿ ೯ನೇ ಸಾಲಿನಲ್ಲಿ ಬರುವ ಶ್ಲೋಕ.


No comments:

Post a Comment