Search This Blog

Monday 4 December 2017

ಓಂಕಾರ ದಿಂದ ಲಿಪಿಯ ಉಗಮವೇ ??

ಶ್ರುತಿಗಳೆಂದರೆ ವೇದಗಳು ಮೌಖಿಕ ಪರಂಪರೆಯಲ್ಲಿ ಸಾಗಿ ಬಂದ ವೇದಗಳು, ಇವು ಬಾಯಿಯಿಂದ ಬಾಯಿಗೆ ಬಂದಂಥವುಗಳು. ಇವುಗಳು ಅಂದಿನಿಂದ ಇಂದಿನತನಕವೂ ಅದೇ ಮಾದರಿಯಲ್ಲಿ ಸಾಗಿ ಬಂದಿವೆ. ಹಾಗಾದರೆ ಲಿಪಿ ಹೇಗೆ ಉಗಮವಾಯಿತು.?
ಗಾಯತ್ರೇಣ ಪ್ರತಿಮಿಮೀತೇ ಅರ್ಕಮರ್ಕೇಣ ಸಾಮತ್ರೈಷ್ಟುಭೇನ ವಾಕಂ | ೧ - ೧೬೪-೪೭
ವಾಕೇನ ವಾಕಂ ದ್ವಿಪದಾ ಚತುಷ್ಪದಾ ಅಕ್ಷರೇಣ ಮಿಮತೇ ಸಪ್ತವಾಣೀಃ | ೧ - ೧೬೪-೪೮
ಇದು ಋಗ್ವೇದದಲ್ಲಿ ಬರುವ ಒಂದು ಋಕ್ಕು. ಏಳು ಛಂದಸ್ಸುಗಳು ಸಹ ಅಕ್ಷರರೂಪವನ್ನು ಹೊಂದುತ್ತವೆ. ಛಂದಸ್ಸುಗಳಲ್ಲಿ ಅಗ್ರಗಣ್ಯ ಗಾಯತ್ರೀ ಛಂದಸ್ಸಿಗೆ ಎಂಟು ಅಕ್ಷರಗಳು, (ತ್ರೈಷ್ಟುಭೇನ) ತ್ರಿಷ್ಟುಪ್ ಛಂದಸ್ಸಿಗೆ ಹನ್ನೊಂದು ಅಕ್ಷರಗಳು. ಜಗತೀ ಎನ್ನುವ ಛಂದಸ್ಸಿಗೆ ಹನ್ನೆರಡು ಅಕ್ಷರಗಳು. ಹಾಗೆಯೇ ಇಷ್ಟಿಷ್ಟು ಅಕ್ಷರಗಳಿಗೆ ಪಾದವೆಂದು. ಇಷ್ಟು ಪಾದಗಳಾದಲ್ಲಿ ಈ ಛಂದಸ್ಸಿನ ನಿರ್ಣಯ ಮಾಡಲಾಗುತ್ತದೆ. ಹೀಗೆ ಪಾದಗಳಿಗೆ ಛಂದಸ್ಸುಗಳಿಗೆ ಅಕ್ಷರಗಳೇ ಪ್ರಮಾಣ ಎಂದಾಯಿತು. ಹಾಗಾದರೆ ಅಕ್ಷರಗಳ, ಲಿಪಿಯ ಇತಿಹಾಸದ ಆರಂಭ ಯಾವಾಗಿನಿಂದ ಆರಂಭ ? ಋಗ್ವೇದದಲ್ಲಿ ಬರುವ ಅಷ್ಟಕರ್ಣಿಯ ಕಥೆಯಲ್ಲಿ ಹಸುಗಳನ್ನು ಗುರುತಿಸುವ ಸಲುವಾಗಿ ಗೋವಿನ ಕಿವಿಗೆ ಗುರುತು ಹಾಕುತ್ತಿದ್ದರು ಎನ್ನುವ ಉಲ್ಲೇಖ ಸಿಗುತ್ತದೆ. ಇದನ್ನು ಗಮನಿಸಿದರೆ ಈ ನೆಲದಲ್ಲಿ ಯಾವಾಗಲೋ ಲಿಪಿಯ ವಿಕಾಸ ಆಗಿರಲೇ ಬೇಕು. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಇಂದ್ರನು ಭಾಷೆಯೊಂದಕ್ಕೆ ವ್ಯಾಕರಣ ಬರೆದ ಎನ್ನುವ ವಿಚಾರ ಬರುತ್ತದೆ, ದೇವತೆಗಳೆಲ್ಲಾ ಸೇರಿ ಇಂದ್ರನನ್ನು ಭಾಷೆಯೊಂದಕ್ಕೆ ವ್ಯಾಕರಣವನ್ನು ಬರೆಯಲು ಕೇಳಿಕೊಂಡರಂತೆ. ಇಂದ್ರನು ಪದ, ಪ್ರತ್ಯಯ, ವಾಕ್ಯಗಳನ್ನು ಬಿಡಿಸಿ ತಿಳಿಸುತ್ತಾನಂತೆ. ಅದಕ್ಕಾಗಿಯೇ ಇಂದಿಗೂ ಸಹ ವೈಯ್ಯಾಕರಣಿಗಳು ಇಂದಿಗೂ ಇಂದ್ರನನ್ನು ಮೊದಲಿಗೆ ನೆನಪಿಸಿಕೊಳ್ಳುತ್ತಾರೆ. ಶತಪಥ ಬ್ರಾಹ್ಮಣ ಮತ್ತು ಪಂಚವಿಂಶ ಬ್ರಾಹ್ಮಣದಲ್ಲಿಯೂ ಸಹ ಬಂಗಾರದ ತೂಕದ ಬಗ್ಗೆ ತಿಳಿಸುತ್ತದೆ. ಬ್ರಾಹ್ಮಣಗಳ ತರುವಾಯ ಬಂದ ಗೋಪಥದಲ್ಲಿಯೂ ಸಹ ಓಂಕಾರದ ಉಲ್ಲೇಖ ಸಿಗುತ್ತದೆ. ಅಲ್ಲಿ ಓಂಕಾರದ ಧಾತು,
"ಓಂಕಾರಂ ಪೃಚ್ಚಾಮಃ ಕೋ ಧಾತುಃ | ಕಿಂ ಪ್ರಾತಿಪದಿಕಂ ಕಿಂ ನಾಮಾ ಖ್ಯಾತಂ | ಕಿಂ ಲಿಂಗಂ ಕಿಂ ವಚನಂ | ಕಾ ವಿಭಕ್ತಿಃ ಕಃ ಪ್ರತ್ಯಯಃ | ಕಃ ಸ್ವರಃ ಉಪಸರ್ಗೋ ನಿಪಾತಃ ಕಿಂ | ವೈ ವ್ಯಾಕರಣಂ ವಿಕಾರಃ | ಕೋ ವಿಕಾರಿ ಕತಿ ಮಾತ್ರಃ | ಕತಿವರ್ಣಃ ಕತ್ಯಕ್ಷರಃ ಕತಿಪದಃ ಕಸ್ಸಂಯೋಗಃ | ಕಿಂ ಸ್ಥಾನಾನು ಪ್ರಧಾನುಕರಣಂ ಕಿಮುಚ್ಚಾರಯಂತಿ | ಕಿಂ ಛಂದಃ ಕೋವರ್ಣಃ ಇತಿ ಪೂರ್ತೀ ಪ್ರಶ್ನಾಃ || ೧ : ೨೪ ||" ಇದು ವರ್ಣಮಾಲೆಯ ಸಂಪೂರ್ಣ ವಿವರಣೆ.

ಯಜುರ್ವೇದದಲ್ಲಿ ಕೃಷ್ಣ ಮತ್ತು ಶುಕ್ಲ ಪ್ರಬೇಧಗಳಿವೆ ಶುಕ್ಲ ಯಜುರ್ವೇದದಲ್ಲಿನ ವಾಜಸನೇಯ ಸಂಹಿತೆಯಲ್ಲಿ ಅಕ್ಷರ, ಲೇಖನ ಸಾಮಗ್ರಿಗಳ ಉಲ್ಲೇಖ ಸಿಗುತ್ತದೆ, ಐತರೇಯದಲ್ಲಿಯೂ ಸಹ ಅಕ್ಷರಗಳ ಬಗ್ಗೆ ಉಲ್ಲೇಖ ಸಿಗುತ್ತದೆ ವರ್ಣಗಳ ಕುರಿತಾದ ವಿವರಣೆ ಸಿಗುತ್ತದೆ. ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿಯೂ ಲಿಪಿಯ ಕುರಿತಾಗಿ ಹೇಳಿದ್ದಾನೆ. ಇನ್ನು ಪುರಾಣದ ಕಾಲದಲ್ಲಿ ಮಹಾಭಾರತವನ್ನು ಗಣ[ಪತಿಯು ಬರೆದ ಎನ್ನುವ ಮಾತಿದೆ, ಅಲ್ಲಿಗೆ ಲಿಪಿಯಂತೂ ಸಾರ್ವಕಾಲಿಕ ಅನ್ನಿಸುತ್ತದೆ. ಅದೇನೇ ಇರಲಿ ಅಕಾರ ಉ ಕಾರ ಮಕಾರದಿಂದ ಓಮಾಕರದ ಪ್ರಣವ ಹುಟ್ಟಿತಂತೆ . ಅಲ್ಲಿಗೆ ಲಿಪಿಯ ಇತಿಹಾಸದ ಆಳ ಬಹು ವಿಸ್ತಾರವಾಗಿದೆ.

No comments:

Post a Comment