Search This Blog

Monday 4 December 2017

ಗೌತಮೀಪುತ್ರ ಸಾತಕರ್ಣಿಯ ಕನಸಿನ ಕೂಸು ಬನವಾಸಿ. - ಸದ್ಯೋಜಾತ ಭಟ್ಟ.


ಈ ಲೇಖನವನ್ನು ಓದುತ್ತಿದ್ದರೆ ಈ ನಮ್ಮ ಭಾರತ ಎಂತಹ ರಾಜರುಗಳನ್ನು ಪಡೆದಿತ್ತು. ಎಂತಹ ಭವ್ಯ ಭಾರತ ನಿರ್ಮಾಣಗೊಂಡಿತ್ತು ಎನ್ನುವ ಭಾವ ತಳೆಯುತ್ತದೆ. ನನಗಂತೂ ಸಾತಕರ್ಣಿಗಳ ಬಗ್ಗೆ ಓದುವಾಗ ಹೆಮ್ಮೆ ಎನ್ನಿಸುತ್ತದೆ.
ಉತ್ತರದ ಮೌರ್ಯರ ಅನಂತರ ದಕ್ಷಿಣದ ಪ್ರದೇಶವನ್ನು ಆಳಿದ ರಾಜವಂಶ ಅಂದರೆ ಅದು ಸಾತವಾಹನ. ಸೀಮುಕನೆನ್ನುವಾತ ಈ ವಂಶದ ಮೂಲಪುರುಷ. ಈ ವಂಶದ ಅರಸರನ್ನು ದಕ್ಷಿಣಾಪಥೇಶ್ವರು ಎಂದು ಕರೆಯಲಾಗಿದೆ. ದಕ್ಷಿಣಾ ಪಥ ಎನ್ನುವ ಶಬ್ದಕ್ಕೆ ವಿಂಧ್ಯಪರ್ವತದಿಂದ ದಕ್ಷಿಣದಲ್ಲಿರುವ ಭೂಭಾಗವನ್ನು, ಎಂದರೆ ಸಮಗ್ರ ದಕ್ಷಿಣಭಾರತವನ್ನು ದಕ್ಷಿಣಾಪಥ ಎಂಬುದಾಗಿ ಕರೆಯಲಾಗಿದೆ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಇದು ವಿಂಧ್ಯಪರ್ವತದ ಕೆಳಗಿನ ಈಗಿನ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳನ್ನೊಳಗೊಂಡ ದಕ್ಷಿಣದ ಪ್ರದೇಶವೆಂಬುದು ಅನೇಕರ ಅಭಿಮತ.
ಸಾತವಾಹನರು ಯಾರು, ಸಾತವಾಹನ ಎಂದರೇನು ಎಂಬ ಬಗ್ಗೆ ಜಿಜ್ಞಾಸೆಯಿದೆ. ಸಾತವಾಹನ ಎಂಬ ಪದ ಹೆಚ್ಚಾಗಿ ಶಾಸನಗಳಲ್ಲಿ ಮಾತ್ರ ಕಂಡುಬಂದಿದೆ. ಸಾತ ಎನ್ನುವುದು ಮೊನಚಾದ, ತೆಳುವಾದ ಎಂದು ಅರ್ಥ ಕೊಡುತ್ತದೆ. ಇದಕ್ಕೆ ಚುರುಕಾದ ಎಂಬ ಅರ್ಥವೂ ಇದೆ. ವಾಹನ ಎಂಬ ಮಾತನ್ನು ರಥ ಅಥವಾ ಕುದುರೆಗೂ ಅನ್ವಯಿಸಬಹುದು. ಆಗ ಸಾತವಾಹನ ಎಂದರೆ ವೇಗವಾಗಿ ಓಡುವ ಕುದುರೆಯನ್ನೇರುವವ ಎಂದಾಗುತ್ತದೆ. ಸಾತಕಣ್ಣಿ ಎಂದು ಪ್ರಾಕೃತದಲ್ಲೂ ಸಾತಕರ್ಣಿಎಂದು ಸಂಸ್ಕೃತದಲ್ಲಿ ಇವರು ತಮ್ಮನ್ನು ಕರೆದುಕೊಂಡಿದ್ದಾರೆ. ಸಾತಕಣ್ಣಿ ಎಂದರೆ ಚುರುಕಾದ ಕಿವಿ ಹೊಂದಿರುವವನೆಂದಾಗುತ್ತದೆ. ಇವರನ್ನು ಕುರಿತು ನಮಗೆ ಪುರಾಣಗಳಲ್ಲಿ ಹೆಚ್ಚಿನ ಮಾಹಿತಿ ದೊರಕುತ್ತದೆಯಾದರೂ ಅಲ್ಲೆಲ್ಲೂ ಇವರನ್ನು ಈ ಹೆಸರಿನಿಂದ ಕರೆಯಲೇ ಇಲ್ಲ. ಮತ್ಸ್ಯ, ವಾಯು, ವಿಷ್ಣು ಮತ್ತು ಭಾಗವತ ಪುರಾಣಗಳಲ್ಲಿ, ಈ ಅರಸರ ವಿವರಗಳಿವೆ. ಆದರೆ ಅವುಗಳಲ್ಲಿ ಇವರನ್ನು ಆಂಧ್ರರೆಂದೋ, ಆಂಧ್ರಭೃತ್ಯರೆಂದೋ ಕರೆಯಲಾಗಿದೆ. ಆಂಧ್ರಭೃತ್ಯ ಎಂಬ ಮಾತಿಗೆ ಆಂಧ್ರರಿಗೆ ಭೃತ್ಯರಾಗಿದ್ದವರೆಂದೂ ಭೃತ್ಯರಾಗಿದ್ದ ಆಂಧ್ರರೆಂದೂ ಎರಡು ಅರ್ಥಗಳನ್ನು ಮಾಡಲಾಗಿದೆ.
ಸಾತವಾಹನರ ಮೂಲ ಪ್ರದೇಶ ಯಾವುದು ಎಂಬುದರ ಕುರಿತಾಗಿ ಸಹ ಹಲವಾರು ವಿರೋಧಾಭಿಪ್ರಾಯಗಳಿವೆ. ಇವರ ಪ್ರಾಚೀನ ಶಾಸನಗಳೆಲ್ಲ ಪಶ್ಚಿಮ ತೀರದಲ್ಲಿ, ಮಹಾರಾಷ್ಟ್ರದ ನಾಸಿಕ್, ನಾನಾಘಾಟ್, ಕಾರ್ಲೆ ಮುಂತಾದ ಸ್ಥಳಗಳಲ್ಲಿ ಲಭಸಿವೆ. ಕ್ರಿ.ಪೂ. 1ನೆಯ ಶತಮಾನಕ್ಕೆ ಸೇರಿದ ಒರಿಸ್ಸಾದ ಹಥಿಗುಂಫಾ ದಲ್ಲಿರುವ ಖಾರವೇಲನ ಶಾಸನದಲ್ಲಿ ತನ್ನ ರಾಜ್ಯದ ಪಶ್ಚಿಮದಲ್ಲಿ ರಾಜ್ಯವನ್ನಾಳುತ್ತಿದ್ದ ಸಾತಕರ್ಣಿಯನ್ನು ಲೆಕ್ಕಿಸದೆ ಆತ ದೊಡ್ಡ ಸೈನ್ಯವನ್ನು ಪಶ್ಚಿಮಾಭಿಮುಖವಾಗಿ ಕಳುಹಿಸಿದನೆಂದು ಹೇಳಿದೆ. ಇದನ್ನವಲಂಬಿಸಿ ಸಾತಕರ್ಣಿಯ ರಾಜ್ಯ ಕಲಿಂಗದೇಶದ ಪಶ್ಚಿಮಕ್ಕಿದ್ದಿತೇ ವಿನಃ, ದಕ್ಷಿಣದಲ್ಲಿರುವ ಆಂಧ್ರವಾಗಿರಲಿಲ್ಲ ಎನ್ನುವ ಅಭಿಪ್ರಾಯಗಳು ಇವೆ. ಆರಂಭದಲ್ಲಿ ಈ ಸಾತವಾಹನರು ಪಶ್ಚಿಮ ಭಾಗದಲ್ಲಿದ್ದು ಕ್ರಮೇಣ ಪೂರ್ವಭಾಗಕ್ಕೆ ಸರಿದರೆಂದೂ ಪುರಾಣಗಳು ತಮ್ಮ ಅಂತಿಮರೂಪವನ್ನು ತಾಳಿದ ಸು. 3ನೆಯ ಶತಮಾನದ ವೇಳೆಗೆ ಇವರು ಆಂಧ್ರದಲ್ಲಿ ನೆಲಸಿದ್ದರೆಂದೂ ಆದುದರಿಂದಲೇ ಇವರನ್ನು ಪುರಾಣಗಳಲ್ಲಿ ಆಂಧ್ರರೆಂದು ಹೆಸರಿಸಲಾಗಿದೆಯೆಂದೂ ಪಂಡಿತರುಗಳ ಅಭಿಪ್ರಾಯ. ಅಭಿಪ್ರಾಯವನ್ನುಅಲ್ಲಗಳೆದು ಕೃಷ್ಣಾ, ಗೋದಾವರೀ ನದಿಗಳ ನಡುವಣ ಆಂಧ್ರಪ್ರದೇಶದ ಭಾಗ ಇವರ ಮೂಲಸ್ಥಾನವೆಂದೂ ಕೃಷ್ಣಾನದೀತೀರದ ಶ್ರೀಕಾಕುಳಂ ಇವರ ರಾಜಧಾನಿಯಾಗಿತ್ತೆಂದೂ ಇವರು ಕ್ರಮೇಣ ಪಶ್ಚಿಮದಿಕ್ಕಿನ ಕಡೆ ತಮ್ಮ ಪ್ರಭಾವವನ್ನು ಬೆಳೆಸುತ್ತ ಹೋದರೆಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆದರೆ ಅದು ಅಷ್ಟು ಸಮಂಜಸವಾಗುತ್ತಿಲ್ಲ.
ಸಾತವಾಹನರ ಆಳ್ವಿಕೆಯ ಕಾಲ ಮತ್ತು ಈ ವಂಶಕ್ಕೆ ಸೇರಿದ ಅರಸರ ಸಂಖ್ಯೆ ಇತ್ಯಾದಿಗಳನ್ನು ಕುರಿತೂ ಬೇರೆ ಬೇರೆ ಅಭಿಪ್ರಾಯಗಳಿವೆ. ಪುರಾಣಗಳಲ್ಲಿಯೇ ಈ ಬಗೆಗೆ ವಿಭಿನ್ನ ಹೇಳಿಕೆಗಳಿವೆ. ಸುಮಾರಾಗಿ ಒಟ್ಟು 30 ಅರಸರು ಆಳಿದರೆಂದು ಹೇಳಿದ್ದರೂ ಇವರ ಆಳಿಕೆಯ ಕಾಲ 300 ವರ್ಷಗಳಿಂದ 460ರವರೆಗೂ ಹೋಗಿದೆ ಅಷ್ಟೆ. ಸಾತವಾಹನರನ್ನು ಕುರಿತಾಗಿರುವ ಉಲ್ಲೇಖಗಳನ್ನು ಗಮನಿಸಿದರೆ ಇನ್ನೂ ಕೆಲವು ವ್ಯತ್ಯಾಸಗಳು ಗೋಚರಿಸುತ್ತವೆ. ಮತ್ಸ್ಯಪುರಾಣದಲ್ಲಿ 25 ಅರಸರು ಆಳಿದರೆಂದು ಹೇಳಿ 30ಜನ ಅರಸರ ಕುರಿತಾದ ವಿವರಗಳಿವೆ. ವಾಯುಪುರಾಣವು 17 ಅರಸರು ಸು. 273 ವರ್ಷಗಳು ಮಾತ್ರ ಆಳಿದರೆಂದು ತಿಳಿಸುತ್ತದೆ. 300 ವರ್ಷಗಳು ಆಳಿದರೆಂದು ಅದರಲ್ಲೂ ಸಾಮಾನ್ಯ ಹೇಳಿಕೆ. ಭಾಗವತಪುರಾಣದಲ್ಲಿ 22 ಅರಸರನ್ನು ಕುರಿತು ಮಾತ್ರ ವಿವರಗಳು ಲಭಿಸಿವೆ. ಈ ಅರಸರಲ್ಲಿ ಅನೇಕ ಹೆಸರುಗಳು ಇತರ ಯಾವ ಆಧಾರಗಳಿಂದಲೂ ತಿಳಿದುಬರುವುದಿಲ್ಲ.
ಮಗಧರಾಜ್ಯವನ್ನು ಚಂದ್ರಗುಪ್ತಮೌರ್ಯ ರಾಜ್ಯಾಡಳಿತ ಮಾಡುತ್ತಿದ್ದುದು ಕ್ರಿ.ಪೂ. 324ರಲ್ಲಿ. ಬಳಿಕ ಶುಂಗವಂಶದ ಅರಸರು ಅಧಿಕಾರಕ್ಕೆ ಬಂದರು. ಅವರು 112 ವರ್ಷಗಳು ಅನಂತರ ಬಂದ ಕಣ್ವರು 45 ವರ್ಷಗಳು ಆಳಿದರೆಂದೂ ಸಾಮಾನ್ಯವಾಗಿ ತಿಳಿಯಲಾಗಿದೆ. ಹಾಗಾದರೆ, ಕಣ್ವಮನೆತನ ಕ್ರಿ.ಪೂ. 33ರಲ್ಲಿ ಕಣ್ಮರೆಯಾಯಿತು. ಇದಕ್ಕೆ ಕಾರಣ ಸೀಮುಕ ಇರಬಹುದು. ಈತನ ಆಳ್ವಿಕೆ ಆ ವರ್ಷದಿಂದ ಆರಂಭವಾಯಿತು. ಇದೊಂದು ಸಾಮಾನ್ಯ ಅಭಿಪ್ರಾಯ. ಆದರೆ ಕಣ್ವವಂಶದ ಸುಶರ್ಮನನ್ನು ಸೋಲಿಸಿದಾತ ಸೀಮುಕನಲ್ಲವೆಂದೂ ಸೀಮುಕ ಎಂಬಾತ ಸಾತವಾಹನರ ಅರಸರಲ್ಲಿ ಅನಂತರ ಬಂದಾತನೆಂದೂ ಮತ್ಸ್ಯಪುರಾಣದಲ್ಲಿ ಹೇಳಿದೆ, ಹಾಗಾದಲ್ಲಿ ಸಾತವಾಹನರು 460 ವರ್ಷಗಳ ಕಾಲ ಆಳಿದ್ದೂ ಸೀಮುಕ 271ರಲ್ಲಿ ಆಳಿಕೆಗೆ ಬಂದನೆಂದೂ ಕೆಲವರು ಕಣ್ವಮನೆತನದ ಸುಶರ್ಮನನ್ನು ಸೋಲಿಸಿದಾತ ಸಾತವಾಹನರ ಹದಿನೈದನೆಯ ಅರಸನಾದ ಮೊದಲನೆಯ ಪುಳುಮಾವಿ ಎಂದೂ ಕೆಲವರ ಅಭಿಮತವಿದೆ.
ಅಭಿಪ್ರಾಯಗಳೇನೇ ಇರಲಿ, ಸಾತವಾಹನರು ದಕ್ಷಿಣದಲ್ಲಿ ಮೌರ್ಯರ ತರುವಾಯ ಅವರ ಉತ್ತರಾಧಿಕಾರಿಗಳಾಗಿ ಆಳಿದ ಅರಸುಗಳೆಂಬುದು ಸತ್ಯವೆನ್ನಿಸುತ್ತದೆ. ಸೀಮುಕ, ಆತನ ಸೋದರ ಕೃಷ್ಣ, ಕೃಷ್ಣನ ಮಗ ಸಾತಕರ್ಣಿ-ಇವರು ಆರಂಭದ ಅರಸರು. ಇವರು ಕ್ರಮವಾಗಿ 23, 18 ಮತ್ತು 18 ವರ್ಷಗಳ ಕಾಲ ಆಳಿದರು. ಸಾತಕರ್ಣಿ ಒಂದು ರಾಜಸೂಯಯಾಗ, ಎರಡು ಅಶ್ವಮೇಧ ಹಾಗೂ ಇತರ ವೈದಿಕಯಾಗಗಳನ್ನು ಮಾಡಿದನೆಂದು ತಿಳಿದು ಬರುತ್ತದೆ. ರಠಿಕ ಮತ್ತು ಭೋಜಕ ವಂಶಗಳಿಗೆ ಸೇರಿದ ಈತನ ಸೇನಾನಿಗಳ ಸಹಾಯದಿಂದ ತನ್ನ ರಾಜ್ಯವನ್ನು ವಿಸ್ತರಿಸಿದ. ಅನಂತರ ಈ ಸೇನಾನಾಯಕರು ಪ್ರಾಂತಾಧಿಕಾರಿಗಳಾದರು. ಸಾತಕರ್ಣಿಯ ಪತ್ನಿ ನಾಗನಿಕಾ ಮಹಾರಠಿಕ ವಂಶದವಳು. ಸಾತಕರ್ಣಿಯ ಅನಂತರದ ಒಂದು ನೂರುವರ್ಷಗಳ ಕಾಲ ಸಾತವಾಹನರು ತೆರೆಯ ಮರೆಯಲ್ಲಿ ಇರಬೇಕಾಯಿತು. ಆಗ ಭಾರತವನ್ನು ಗ್ರೀಕರು, ಶಕರು ದಂಡೆತ್ತಿ ಬಂದು ಭಾರತದ ರಾಜಕೀಯದಲ್ಲಿ ಅಭದ್ರತೆ ಉಂಟುಮಾಡಿದ್ದರು. ಅದರ ಪರಿಣಾಮ ಸಾತವಾಹನರಿಗೂ ತಟ್ಟಿತ್ತು. ಆದರೆ ಸಾತವಾಹನರ ಗೌತಮೀಪುತ್ರ ಸಾತಕರ್ಣಿ ಪ್ರಬಲನಾಗಿ ಬಂದ. ಅವನು ಈ ಅರಸರ ಶಕ್ತಿಯನ್ನು ಪುನಶ್ಚೇತನಗೊಳಿಸಿದ. ಶಕರ ಅರಸನಾದ ಕ್ಷಹರಾತಕುಲದ ನಹಪಾಣನನ್ನು ಸೋಲಿಸಿ ಅಪರಾಂತ, ಅನೂಪ, ಸೌರಾಷ್ಟ್ರ, ಅಕರ, ಅವಂತಿ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡ. ಇದರಿಂದ ಇವನ ರಾಜ್ಯ ಕೊಂಕಣ, ಸೌರಾಷ್ಟ್ರ, ಮಾಳವ, ಬೀರಾರ್ ಮತ್ತು ಕೃಷ್ಣಾ ಕಣಿವೆ ಪ್ರದೇಶಗಳವರೆಗೂ ವಿಸ್ತರಿಸಿ, ಉತ್ತರ ಕರ್ನಾಟಕದ ಬಹುಭಾಗವೂ ಇವನ ವಶವಾಯಿತು. ಕ್ಷಹರಾತ ವಂಶವನ್ನು ನಿರ್ನಾಮಮಾಡಿದವನು ಎನ್ನುವುದಾಗಿ "ಕ್ಷಹರಾತವಂಶನಿರವಶೇಷಕರಃ", ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವಾಗಿ ಹೊಂದಿದವನು"ತ್ರಿ ಸಮುದ್ರ ತೋಯಪೀತವಾಹನ"ಎನ್ನುವುದಾಗಿಯೂ, ಸಾತವಾಹನರ ಯಶಸ್ಸನ್ನು ಪ್ರತಿಷ್ಠಾಪಿಸಿ ದವನು "ಸಾತವಾಹನ ಯಶಃಪ್ರತಿಷ್ಠಾಪನಕರಃ". ಇತ್ಯಾದಿ ಬಿರುದುಗಳನ್ನು ಗೌತಮೀಪುತ್ರ ಸಾತಕರ್ಣಿ ಹೊಂದಿದ್ದ. ಇದರಿಂದ ಸಾತವಾಹನರ ಯಶಸ್ಸು ಪುನಃ ಪ್ರತಿಷ್ಠಾಪಿತವಾಯಿತು. ಈ ಘಟನೆ ನಡೆದುದು ಸು. 124-25ರಲ್ಲಿ. ಗೌತಮೀಪುತ್ರನ ಆಳ್ವಿಕೆಯ ಕಾಲ ಸು. 106ರಿಂದ 130ರವರೆಗೆ. ನಾಸಿಕದಲ್ಲಿ ದೊರೆತ ಈತನ ಮಗ ವಾಶಿಷ್ಠೀಪುತ್ರ ಪುಳುಮಾವಿಯ ಶಾಸನದಲ್ಲಿ ಈತನನ್ನು ಮುಕ್ತಕಂಠದಿಂದ ಹೊಗಳಲಾಗಿದೆ. ಇಷ್ಟಾದರೂ ಈತನ ಅಂತ್ಯ ದಾರುಣ ರೀತಿಯಲ್ಲಾಯಿತು. ಮಹಾಕ್ಷತ್ರಪನೆನಿಸಿದ ಶಕರ ಕುಲದ ಕಾರ್ದಮಕ ವಂಶಕ್ಕೆ ಸೇರಿದ ಚಷ್ಟನನ ಮೊಮ್ಮಗ ರುದ್ರದಾಮ ಈತನನ್ನು ಕದನದಲ್ಲಿ ಸೋಲಿಸಿದ. ಅದರ ಪರಿಣಾಮವಾಗಿ ಈತನ ರಾಜ್ಯದ ಉತ್ತರದ ಹಲವು ಭಾಗಗಳು ಈತನ ವಶದಿಂದ ಬಿಟ್ಟುಹೋಯಿತು. ಗೌತಮೀಪುತ್ರನ ಮಗ ವಾಶಿಷ್ಠೀಪುತ್ರ (130-59) ರಾಜ್ಯವನ್ನು ಪೂರ್ವದಿಕ್ಕಿನಲ್ಲಿ ವಿಸ್ತರಿಸಿ ಕೃಷ್ಣಾನದಿಯ ಮುಖಜ ಭೂಮಿಗಳನ್ನು ಆಕ್ರಮಿಸಿದ. ಕರ್ನಾಟಕದ ಬಳ್ಳಾರಿ ಜಿಲ್ಲೆ ಸಹ ಆಗ ಈತನ ವಶವಾದಂತೆ ತೋರುತ್ತದೆ. ಇವನ ಅನಂತರ ಕ್ರಮವಾಗಿ ಶಿವಶ್ರೀ (159-66), ಶಿವಸ್ಕಂಧ (166-74) ಮತ್ತು ಯಜ್ಞಶ್ರೀ (174-203) ಸಾತಕರ್ಣಿಗಳು ಆಳಿದರು. ಈ ಮನೆತನದ ಕೊನೆಯ ಖ್ಯಾತ ಅರಸನಾದ ಯಜ್ಞಶ್ರಿ ಎನ್ನುವವನು ಶಕರನ್ನು ಸೋಲಿಸಿ ಉತ್ತರ ಮತ್ತು ಪಶ್ಚಿಮಭಾರತದ ಪ್ರದೇಶಗಳಿಂದ ಅವರನ್ನು ಹೊರಗಟ್ಟಿದ. ಈತನ ಬಳಿಕ ಸಾತವಾಹನರ ಬಲ ಕ್ರಮೇಣ ಕುಗ್ಗಿತು.
ಸಾತವಾಹನ ಕುಲಕ್ಕೆ ಸೇರಿದ ಕೆಲವು ಶಾಖೆಗಳವರು ಪೈಠಣ ಮತ್ತು ಕುಂತಲ ದೇಶ ಹಾಗೂ ಬನವಾಸಿ-ಇವುಗಳಿಂದ ಆಳುತ್ತಿದ್ದರು. ಕರ್ನಾಟಕದ ಸಾತವಾಹನರಲ್ಲಿ ಕುಂತಲ ಸಾತಕರ್ಣಿ ಮತ್ತು ಹಾಲ ಪ್ರಮುಖರು. ಪುರಾಣಗಳಲ್ಲಿ ಕುಂತಲ ಸಾತಕರ್ಣಿಯ ವಿಷಯವಾಗಿ ತಿಳಿದು ಬರುತ್ತದೆ. ವಾತ್ಸ್ಯಾಯನ ತನ್ನ ಕಾಮಸೂತ್ರದಲ್ಲಿ ಈ ಅರಸನ ಹೆಸರನ್ನು ಉಲ್ಲೇಖಿಸಿದ್ದಾನೆ. ರಾಜಶೇಖರ ತನ್ನ ಕಾವ್ಯ ಮೀಮಾಂಸೆಯಲ್ಲಿ ಕುಂತಲದ ಅರಸನೊಬ್ಬ ಸಾತವಾಹನನಾಗಿದ್ದನೆಂದಿದ್ದಾನೆ. ಹಾಲ ಎನ್ನುವ ರಾಜ ಪ್ರಾಕೃತಭಾಷೆಯ ಗಾಥಾಸತ್ತಸತಿ (ಗಾಥಾಸಪ್ತಶತಿ) ಎಂಬ ಕೃತಿಯನ್ನು ರಚಿಸಿದ್ದು ತಿಳಿಯುತ್ತದೆ. ಕುಬ್ಜ ಕವಿಯಿಂದ ಬರೆಯಲ್ಪಟ್ಟ ಶಾಂತಿವರ್ಮನ ತಾಳಗುಂದ ಶಾಸನದಲ್ಲಿ ಕದಂಬರಿಗೂ ಮೊದಲು ಸಾತಕರ್ಣಿ ಮತ್ತು ಇತರ ಅರಸರು ಅಲ್ಲಿನ ಪ್ರಣವೇಶ್ವರ ದೇವರನ್ನು ಅರ್ಚಿಸುತ್ತಿದ್ದರೆಂದು ಹೇಳಿದ್ದಾನೆ. ನಾಸಿಕ್ ಶಾಸನದಲ್ಲಿ ಗೌತಮೀಪುತ್ರ ಸಾತಕರ್ಣಿಯು ವೈಜಯಂತೀಪುರದಲ್ಲಿದ್ದಾಗ ಅಂದರೆ ಈಗಿನ ಬನವಾಸಿಯಿಂದ ಆಜ್ಞೆಯೊಂದನ್ನು ಹೊರಡಿಸಿದನೆಂದು ಹೇಳಿದೆ. ಇತ್ತೀಚೆಗೆ (1974) ಬನವಾಸಿಯಲ್ಲಿಯೇ ವಾಶಿಷ್ಠೀಪುತ್ರನ ಮಗ ಶಿವಶ್ರೀ ಪುಳುಮಾವಿಯ(ಸಿರಿಪುಳಿಮಾವಿ) ಮಹಾದೇವಿಯ (ಅರಸಿ ?) ಸ್ಮಾರಕಶಿಲೆಯ ಶಾಸನವೊಂದು ದೊರೆತಿದೆ.
ಬನವಾಸಿಯ ನಾಗ ಶಿಲ್ಪದ ಶಾಸನ.
ಬಳ್ಳಾರಿಯ ಸಮೀಪದ ಮ್ಯಾಕಡೋಣಿಯಲ್ಲಿ ಸು.3ನೆಯ ಶತಮಾನಕ್ಕೆ ಸೇರಿದ ಸಿರಿಪುಳುಮಾವಿ ಶಾಸನವೊಂದಿದೆ. ಇದರಲ್ಲಿ "ಸಾತಾವಾಹನಿಹಾರ" ಎಂಬ ಭೌಗೋಳಿಕ ಭಾಗವನ್ನು ಹೆಸರಿಸಿದೆ.

                  
ಮ್ಯಾಕಡೋಣಿಯಸಿರಿಪುಳುಮಾವಿ ಶಾಸನ.
ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ ದೊರೆತ ಪಲ್ಲವ ಶಿವಸ್ಕಂಧವರ್ಮನ ತಾಮ್ರಪಟ ಶಾಸನದಲ್ಲಿ ಆ ಸುತ್ತಲಿನ ಪ್ರದೇಶ, ಸಾತಾಹನಿರಟ್ಟ ಸಾತವಾಹನ ರಾಷ್ಟ್ರಕ್ಕೆ ಸೇರಿದುದೆಂದು ಹೇಳಿದೆ. ಇವುಗಳಿಂದ ಸಾತವಾಹನ ಕುಲದ ಅನೇಕ ಅರಸರು ಕರ್ನಾಟಕದಲ್ಲೂ ಆಳಿದರೆಂಬುದು ಸ್ಪಷ್ಟವಾಗುತ್ತವೆ. ಚುಟು ಮುಂತಾದ ಸಾತವಾಹನರ ಸಾಮಂತರ ಹಲವಾರು ನಾಣ್ಯಗಳು ಕರ್ನಾಟಕದ, ಚಿತ್ರದುರ್ಗ ಹಾಗೂ ಉತ್ತರಕನ್ನಡ ಜಿಲ್ಲೆ ಮತ್ತಿತರ ಕೆಲವು ಕಡೆಗಳಲ್ಲಿ ದೊರೆತಿವೆ.
ಹಿರೇಹಡಗಲಿಯಶಿವಸ್ಕಂಧವರ್ಮನ ತಾಮ್ರಪಟ ಶಾಸನದ ೨೭ನೇ ಸಾಲು
ಸಾತವಾಹನರ ಕಾಲದಲ್ಲಿ ವೈದಿಕಧರ್ಮ ಪ್ರಧಾನ ಧರ್ಮವಾಗಿದ್ದಿತು. ಅರಸರು ವೈದಿಕಯಜ್ಞಯಾಗಾದಿಗಳನ್ನು ಮಾಡುತ್ತಿದ್ದರು. ವರ್ಣಾಶ್ರಮ ಧರ್ಮಗಳ ಪಾಲನೆ ಅವರ ಕರ್ತವ್ಯವಾಗಿತ್ತು. ಗೌತಮೀಪುತ್ರ ಸಾತಕರ್ಣಿಯು ವರ್ಣಸಂಕರವನ್ನು ತಡೆಯಲು ಯತ್ನಿಸಿದನೆಂಬುದು ಶಾಸನಗಳಿಂದ ತಿಳಿತಿಳಿದು ಬರುತ್ತದೆ. ಈವೇಳೆಗೆ ಪುರಾಣಗಳು ತಮ್ಮ ಅಂತಿಮ ರೂಪವನ್ನು ತಾಳಿದ್ದು ಪೌರಾಣಿಕ ದೇವತೆಗಳೆನಿಸಿದ ಇಂದ್ರಾದಿದೇವತೆಗಳು, ಸಂಕರ್ಷಣ, ವಾಸುದೇವ, ಚಂದ್ರ, ಸೂರ್ಯ, ಯಮ, ವರುಣ, ಕುಬೇರ, ಮೊದಲಾದ ದೇವರನ್ನು ಪೂಜಿಸುವ ಪರಿಪಾಠ ಬೆಳೆದು ಬಂದಿತ್ತು, ವಿದೇಶಿಯರೆನಿಸಿದ ಶಕ, ಕುಷಾಣ ಮೊದಲಾದವರು ಸಹ ವೈದಿಕಮತದ ಪ್ರಭಾವಕ್ಕೊಳಗಾಗಿ ವೈದಿಕದೇವತೆಗಳೆನಿಸಿದ ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತಿದ್ದರು. ಗೋದಾನ ಭೂದಾನಗಳು, ಕೆರೆ ಕಟ್ಟಿಸುವುದು, ಬಾವಿಗಳನ್ನು ತೋಡುವುದು, ತೀರ್ಥಯಾತ್ರೆ ಮಾಡುವುದು ಪವಿತ್ರ ಕರ್ತವ್ಯಗಳೆನಿಸಿಕೊಂಡಿದ್ದವು.
ಈ ಕಾಲದಲ್ಲಿ ಜೈನ ಹಾಗೂ ಬೌದ್ಧಧರ್ಮಗಳು ಸಹ ಪ್ರಮುಖ ಧರ್ಮಗಳೆನಿಸಿದ್ದುವು. ಬೌದ್ಧಧರ್ಮ ದಕ್ಷಿಣದ ಪೂರ್ವತೀರ ಪ್ರದೇಶಗಳಲ್ಲಿ ಬಹುಮಟ್ಟಿಗೆ ವ್ಯಾಪಿಸಿತ್ತು. ಜಗ್ಗಯ್ಯಪೇಟೆ, ಅಮರಾವತಿ ಮತ್ತು ಭಟ್ಟಿಪ್ರೋಲುಗಳಲ್ಲಿ ದೊರೆತ ಸ್ತೂಪಗಳಲ್ಲಿ ಕ್ರಿ.ಪೂ. 2ನೆಯ ಶತಮಾನಕ್ಕೆ ಸೇರಿದ ಬ್ರಾಹ್ಮೀಲಿಪಿಯ ಪ್ರಾಕೃತ ಶಾಸನಗಳು ಲಭಿಸಿವೆ. ಅಶೋಕನ ಶಾಸನಗಳು ಉತ್ತರ ಕರ್ನಾಟಕದ ಹಲವಾರು ಕಡೆ ಲಭಿಸಿರುವುದನ್ನು ಗಮನಿಸಿ ಆ ಪ್ರದೇಶಗಳು ಬೌದ್ಧಧರ್ಮ ಪ್ರಭಾವಕ್ಕೊಳಪಟ್ಟಿದ್ದುವೆಂದು ಹೇಳಬಹುದು. ಬನವಾಸಿ ಒಂದು ಪ್ರಮುಖ ಬೌದ್ಧಕೇಂದ್ರವಾಗಿದ್ದಿತು. ಅಶೋಕನ ಧರ್ಮಪ್ರಸಾರಕ್ಕಾಗಿ ಕಳುಹಿಸಿದ ಭಿಕ್ಷುಗಳಲ್ಲಿ ಕೆಲವರು ಬನವಾಸಿಗೆ ಬಂದಿದ್ದರೆಂದು ತಿಳಿದು ಬರುತ್ತದೆ. ನಾಗಾರ್ಜುನಕೊಂಡದಲ್ಲಿ ದೊರೆತ ಬೌದ್ಧ ಶಾಸನಗಳಲ್ಲಿಯೂ ಬನವಾಸಿಯಲ್ಲಿ ನೆಲಸಿದ್ದ ಬೌದ್ಧಭಿಕ್ಷುಗಳ ಪ್ರಸ್ತಾಪವಿದೆ. ಬನವಾಸಿಯ ಗಜಪೃಷ್ಠಾಕಾರದ ಕಟ್ಟಡದ ಅವಶೇಷಗಳು ಲಭಿಸಿವೆಯಾದರೂ ಅದು ಬೌದ್ಧ ಧರ್ಮಕ್ಕೆ ಸಂಬಂಧಿಸಿದುದೆಂದು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ.ಗುಲ್ಬರ್ಗ ಜಿಲ್ಲೆಯ ಸನ್ನತಿ ಒಂದು ಬೌದ್ಧ ಕೇಂದ್ರವಾಗಿದ್ದಿತೆಂದು ತಿಳಿದಿದೆ. ಅಲ್ಲಿನ ಸ್ತೂಪದಲ್ಲಿ ಕ್ರಿ.ಪೂ. 1ನೆಯ ಶತಮಾನದ ಬ್ರಾಹ್ಮೀ ಲಿಪಿಯ ಶಾಸನಗಳು ಲಭಿಸಿವೆ.
ಸನ್ನತಿಯಲ್ಲಿನ ಸಿರಿಪುಲುಮಾವಿಯ ಉಲ್ಲೇಖ
ಸಾತವಾಹನರ ತಕ್ಕಷ್ಟು ದೊಡ್ಡದಾದ ಮತ್ತು ಐತಿಹಾಸಿಕವಾಗಿ ಬಹುಪ್ರಮುಖವಾದ ಶಾಸನಗಳು ನಾನಾಘಾಟ್, ನಾಸಿಕ್, ನಾಗಾರ್ಜುನಕೊಂಡ, ಜಗ್ಗಯ್ಯಪೇಟೆ ಮೊದಲಾದ ಕರ್ನಾಟಕದ ಹೊರಗಿನ ಸ್ಥಳಗಳಲ್ಲಿ ದೊರೆತಿದ್ದರೂ ಕರ್ನಾಟಕದಲ್ಲಿ ಅಂಥ ಶಾಸನಗಳಿಲ್ಲವೆಂದೇ ಹೇಳಬೇಕು. ಇಲ್ಲಿ ದೊರೆತಿರುವ ಈ ಕಾಲದ ಶಾಸನಗಳಲ್ಲಿ ದೊಡ್ಡದಾದುದೆಂದರೆ ಮಳವಳ್ಳಿಯ ಸ್ತಂಭಶಾಸನ. ಇದಲ್ಲದೆ ಬನವಾಸಿ, ಸನ್ನತಿ, ಬೆಳ್ವಾಡಗಿ, ಚುರುಸುಗುಂಡಿ, ಈ ಕಾಲಕ್ಕೆ ಸೇರಿರಬಹುದಾದ ಹಲವಾರು ಶಾಸನಗಳು ದೊರೆತಿವೆ. ಕ್ರಿ.ಪೂ.ಸು.1ನೆಯ ಶತಮಾನದಿಂದ ಕ್ರಿ.ಶ.ಸು.3ನೆಯ ಶತಮಾನದವರೆಗಿನ ಕಾಲಕ್ಕೆ ಸೇರಿದ ಈ ಶಾಸನಗಳು ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷೆಗಳಲ್ಲಿವೆ. ಬನವಾಸಿಯಲ್ಲಿ ದೊರೆತ ಒಂದು ಶಾಸನ ಸು.2ನೆಯ ಶತಮಾನದ ಮಧ್ಯಭಾಗದಲ್ಲಿ ಆಳುತ್ತಿದ್ದ ವಾಶಿಷ್ಠೀಪುತ್ರ ಶಿವಶ್ರೀ ಪುಳುಮಾವಿಯ(ಸಿರಿಪುಳುಮಾವಿ) ಳ್ವಿಕೆಗೆ ಸೇರಿದ್ದು, ಅದು ಆತನ ರಾಣಿಯ ನೆನಪಿಗಾಗಿ ಹಾಕಿಸಿದ ಶಾಸನವಾಗಿದೆ. ಆದರೆ ಆ ರಾಣಿಯ ಹೆಸರನ್ನು ತಿಳಿಸಿಲ್ಲ. ಮಳವಳ್ಳಿಯ ಸ್ತಂಭಶಾಸನ ಸಾತವಾಹನರ ಮಾಂಡಲಿಕನಾಗಿದ್ದ, ಚುಟುವಂಶಕ್ಕೆ ಸೇರಿದ ವಿಣ್ಹುಕಡ ಚುಟುಕುಲಾನಂದನ ಎರಡನೆಯ ಆಳ್ವಿಕೆಯ ವರ್ಷಕ್ಕೆ ಸೇರಿದ್ದು, ರಾಜನು ಮಳ್ಳಪಳ್ಳಿ ದೇವರಿಗೆ ಗ್ರಾಮವೊಂದನ್ನು ದತ್ತಿಯಾಗಿ ಬಿಟ್ಟುದನ್ನು ಈ ಶಾಸನ ತಿಳಿಸುತ್ತದೆ. ಇದೇ ರಾಜನ 12ನೆಯ ಆಳ್ವಿಕೆಯ ವರ್ಷಕ್ಕೆ ಸೇರಿದುದು ಬನವಾಸಿಯಲ್ಲಿರುವ ನಾಗರಕಲ್ಲಿನ ಶಾಸನ. ಮಹಾಭೋಜನೆಂಬೊಬ್ಬನ ಹೆಂಡತಿ ಶಿವಸ್ಕಂದ ನಾಗಶ್ರೀ ಕೆರೆ, ವಿಹಾರಗಳನ್ನು ಕಟ್ಟಿಸಿ ಈ ಶಾಸನವಿರುವ ನಾಗರಕಲ್ಲನ್ನು ಮಾಡಿಸಿದುದಾಗಿ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನಕಲ್ಲನ್ನು ಮಾಡಿದ ರೂವಾರಿ ಸಂಜಯಂತಿಯ, ಎಂದರೆ ಬನವಾಸಿಯ ಇಂದ್ರಮಯೂರಕನ ಶಿಷ್ಯ ನರ್ತಕ. ಸನ್ನತಿಯ ಒಂದು ತುಂಡುಶಾಸನದಲ್ಲಿ ವಾಶಿಷ್ಠೀಪುತ್ರ ಸಿರಿಸಾತ . . . ಎಂದಿದ್ದು ಅದು ವಾಶಿಷ್ಠೀಪುತ್ರ ಶ್ರೀ(ಸಿರಿ) ಸಾತಕರ್ಣಿಯನ್ನು ನಿರ್ದೇಶಿಸುವುದಾಗಿದೆ. ಉಳಿದಂತೆ ಅಲ್ಲಿನ ಹಲವಾರು ಶಾಸನಗಳು ದತ್ತಿಬಿಟ್ಟವರ ಇತರರ ಹೆಸರುಗಳನ್ನು ಸೂಚಿಸುತ್ತವೆ. ಬೆಳ್ವಾಡಿಗಿಯಲ್ಲಿರುವ ಶಾಸನವು ಆ ಕಲ್ಲಿನ ಮೇಲೆ ಎತ್ತಿನ ಗಾಡಿಯಲ್ಲಿರುವ ಮೂರ್ತಿಯನ್ನು ಕಲಕ ಎನ್ನುವವನ ಛಾಯಾಪ್ರತಿಮೆ ಎನ್ನುತ್ತದೆ.


No comments:

Post a Comment