Search This Blog

Wednesday 20 December 2017

ಬ್ರಾಹ್ಮೀ-ಪ್ರಾಕೃತವನ್ನು ಕಳಚಿಕೊಂಡು ಸಂಸ್ಕೃತದಲ್ಲಿ ನಲಿದಾಡಿ ಕನ್ನಡದಪ್ಪುಗೆ


ಕಣಜದಲ್ಲೊಂದು ಕಿರು ಬರಹ

ದಕ್ಷಿಣಕ್ಕೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಕೊಟ್ಟ ಹೆಗ್ಗಳಿಕೆ ಬನವಾಸಿ ಕದಂಬರಿಗೆ ಸಲ್ಲುತ್ತದೆ. ಸಾಹಿತ್ಯ, ಸಂಸ್ಕೃತಿ, ಮತ್ತು ಭಾಷೆಯ ಬಗ್ಗೆ ಅತ್ಯಂತ ಮುತುವರ್ಜಿ ವಹಿಸಿದ್ದ ಕದಂಬರು, ರಾಜ್ಯ ವಿಸ್ತರಣೆಗೆ ಅಷ್ಟೊಂದು ಆಸಕ್ತಿ ವಹಿಸಿದಂತೆ ಕಂಡು ಬರುವುದಿಲ್ಲ. ಆದರೆ ಆಗಷ್ಟೇ ಬ್ರಾಹ್ಮೀ ಮತ್ತು ಪ್ರಾಕೃತದಿಂದ ಆವರಿಸಿದ್ದ ದಕ್ಷಿಣದಲ್ಲಿ ಸಂಸ್ಕೃತ ಮತ್ತು ಕನ್ನಡವನ್ನು ಬೆಳೆಸಲು ಆರಂಭಿಸಿದರು. ಸ್ಥಳೀಯ ಲಿಪಿಕಾರರ ಕೊರತೆ ಅಥವಾ ಲಿಪಿಗೊತ್ತಿರದ ಶಿಲ್ಪಿಗಳಿದ್ದುದರಿಂದ ಇವರ ಕಾಲದಲ್ಲಿ ಪ್ರಾಯಶಃ ಮೊದ ಮೊದಲು ಉತ್ತರದ ಲಿಪಿಕಾರರನ್ನು ಕರೆಸಿಕೊಂಡಿರಬಹುದು. ಪಲ್ಲವ ಶಿವ ಸ್ಕಂದವರ್ಮನ ಕಾಲದಲಿ ಈಗಿನ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿಯಲ್ಲಿ ಒಂದು ತಾಮ್ರಪಟವನ್ನು ಬರೆಸುತ್ತಾನೆ. ಈ ತಾಮ್ರಪಟದ ಭಾಷೆ ಪ್ರಾಕೃತ ಆದರೆ ಇದರ ಲಿಪಿ ಬ್ರಾಹ್ಮಿಯಿಂದ ತುಸು ಬೇರ್ಪಟ್ಟ ಕನ್ನಡದಂತೆ ಕಾಣಿಸಿಕೊಳ್ಳುತ್ತದೆ. ಭಟ್ಟಶರ್ಮ ಎನ್ನುವ ಕೋಲಿವಾಲ ಪ್ರದೇಶದ ರಹಸ್ಯಾಧಿಕ ಭೋಜಕನು ಈ ತಾಮ್ರ ಪಟವನ್ನು ಬರೆದವನು. ಈತನ ಈ ಶಾಸನವೇ ದಕ್ಷಿಣದ ಭಾಷಾ ಬೆಳವಣಿಗೆಗೆ ಒಂದು ಪ್ರಮುಖ ಹೆಜ್ಜೆ ಅನ್ನಿಸಿಕೊಳ್ಳುತ್ತದೆ. ಆದರೆ ಇದಕ್ಕೂ ಮೊದಲೇ ಕನ್ನಡ ನಾಡಿನಲ್ಲಿ ಶಿಲ್ಪಿಗಳು ಇದ್ದ ಬಗ್ಗೆ ಹಲವು ದಾಖಲೆಗಳು ಸಿಗುತ್ತವೆ. ಹಾಗಂತ ಭಟ್ಟಶರ್ಮ ಹೊರಗಿನಿಂದ ಬಂದವನು ಎಂದು ಹೇಳಲು ಆಗುತ್ತಿಲ್ಲ ಅದೊಂದು ಊಹೆ ಅಷ್ಟೆ. ಆದರೆ ಈತನ ನಂತರ ನಮ್ಮ ನಾಡಿನಲ್ಲಿ ಸಂಸ್ಕೃತ ಶಾಸನಗಳು ಕನ್ನಡದ ಸ್ವತಂತ್ರ ಲಿಪಿಯನ್ನು ಬಳಕೆಗೆ ತಂದವು.
ಕನ್ನಡ ನೆಲದಲ್ಲಿ ಅತಿ ದೀರ್ಘಕಾಲ ಆಳಿದ ಮನೆತನಗಳಲ್ಲಿ ಕದಂಬರದು ಪ್ರಮುಖವಾಗುತ್ತದೆ. ಆದರೆ ಕದಂಬರೆಂದು ಕರೆದುಕೊಂಡವರೆಲ್ಲರೂ ಸಹ ಒಂದೇ ವಂಶಸ್ಥರಲ್ಲ. ಒಂದೇ ರಾಜಧಾನಿಯಿಂದಾಗಲೀ ಕೇಂದ್ರದಿಂದಾಗಲೀ ಆಡಳಿತ ನಡೆಸಲಿಲ್ಲ. ಆದರೆ ನಮಗೆ ಸಿಗುವ ದಾಖಲೆಗಳಲ್ಲಿ “ಬನವಾಸಿ” ಕದಂಬರು ಪ್ರಥಮರು. ನಾನಿಲ್ಲಿ ಇನ್ನೊಂದು ಪ್ರಸ್ಥಾಪ ಮಾಡಬೇಕು, ಹಿರೇಹಡಗಲಿಯ ಶಾಸನದಲ್ಲಿ ಹಿಂದೆಂದೂ ಕಾಣದ ಒಂದು ವಾಕ್ಯ ಶಾಸನದ ಅಂತ್ಯದಲ್ಲಿ ಕಾಣಸಿಗುತ್ತದೆ. ಕೋಲಿವಾಲದ ಭೋಜಕ ಭಟ್ಟ ಶರ್ಮನು “ಗೋಬ್ರಾಹ್ಮಣ ಲೇಖಕವಾಚಕ ಶ್ರೋತೃಭ್ಯಃ ಇತಿ” ಎಂದು ಶಾಸನವನ್ನು ಕೊನೆಗೊಳಿಸುತ್ತಾನೆ ಅಲ್ಲಿಗೆ ಆತ ಗೋವಿಗೆ, ಬಾಹ್ಮಣರಿಗೆ ಮತ್ತು ಬರೆದವನು ಓದಿದವನು ಮತ್ತು ಸ್ಮೃತಿ ಶೃತಿ ಜ್ಞಾನಿಗಳಿಗೆ ಸ್ವಸ್ತಿವಾಚನ ಮಾಡುತ್ತಾನೆ. ಇದು ಬ್ರಾಹ್ಮಣರ ಹೊಗಳಿಕೆ ಎನ್ನುವುದು ಕೆಲವರ ವಾದ ಇದ್ದರೂ ಸಹ ಇಲ್ಲಿ ನಾವು ಗಮನಿಸಬೇಕಾದ್ದು ಲಿಪಿಕಾರನದ್ದು. ಆದರೆ ಇದಕ್ಕೂ ತುಸು ಮೊದಲು ಮಳವಳ್ಳಿಯಲ್ಲಿ ಕದಂಬರ ಶಿವಸ್ಕಂದವರ್ಮನ ಕಲ್ಲೇಶ್ವರ ದೇವಾಲಯದ ಶಾಸನ ಇನ್ನೊಂದು ಮಹತ್ವ ಪಡೆಯುತ್ತದೆ. ಇದು ಕ್ರಿ. ಶ. ಸುಮಾರು 250ರಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಒಂದನ್ನು ಪ್ರಾಕೃತದಲ್ಲಿ ಬರೆಸುತ್ತಾನೆ. ಅದರಲ್ಲಿ ತಾನು ಒಂದು ಗ್ರಾಮವನ್ನು ದಾನ ಕೊಟ್ಟಿರುವುದನ್ನು ಉಲ್ಲೇಖಿಸುತ್ತಾನೆ. ಕ್ರಿ.ಶ.300ರಲ್ಲಿ ಶಿವಸ್ಕಂದವರ್ಮನು ಮಳಪಳ್ಳಿ ಎಂದು ಉಲ್ಲೇಖಿಸಿ ಶಾಸನವನ್ನು ಬರೆದವನು ವಿಶ್ವಕರ್ಮ ಎನ್ನುವ ಉಲ್ಲೇಖವನ್ನು ಕಾಣಿಸುತ್ತಾನೆ. “ಉಕ್ತಂ ಖಂಡೋ ವಿಶ್ವಕಮ್ಮಾ” ಎಂದು “ಹೇಳಿರುವುದನ್ನು ಕಂಡರಿಸಿದವನು ವಿಶ್ವಕರ್ಮ” ಎನ್ನುವುದಾಗಿ ಬರೆಯುತ್ತಾನೆ. ಕದಂಬರ ಕಾಲದ ವಿಶ್ವಕರ್ಮನ ಉಲ್ಲೇಖದ ಮೊದಲ ಕುರುಹು ಇದಾಗುತ್ತದೆ. ಈ ಮಳವಳ್ಳಿ ಶಾಸನದ ಕೊನೆಯಲ್ಲಿ ಕೌಶಿಕನ ಪುತ್ರ ಕೊಂಡಮಾನಕುಲದ ಲಿಪಿಕಾರ ನಾಗದತ್ತನ ಹೆಸರಿದೆ. ಈ ಲಿಪಿಕಾರನು ಶಾಸನದಲ್ಲಿ ವಿವರಿಸಿರುವ ದತ್ತಿಯನ್ನು ಅನುಭವಿಸತಕ್ಕವನಾಗಿರುತ್ತಾನೆ.
ಹೀಗೇ ಭಾಷಾ ಸಂಕ್ರಮಣದ ಜೊತೆಗೆ ಲಿಪಿಯ ಸಂಕ್ರಮಣವೂ ಕದಂಬರ ಕಾಲದಲ್ಲಿಯೇ ನಡೆಯುತ್ತದೆ. ಆದುದರಿಂದಲೇ ಕದಂಬರು ನಮಗೆ ಕನ್ನಡದ ಪ್ರಥಮ ರಾಜಮನೆತನದವರಾದರು. ಬ್ರಾಹ್ಮೀ-ಪ್ರಾಕೃತವನ್ನು ಕಳಚಿಕೊಂಡು ಬಂದ ಕದಂಬರು ಮುಂದೆ ಸಂಸ್ಕೃತವನ್ನು ಮೊದಲಿಗೆ ಆಯ್ಕೆ ಮಾಡಿಕೊಂಡರು, ಸಂಸ್ಕೃತದಲ್ಲಿಯೇ ಛಂದೋಬದ್ಧವಾದ ರಚನೆಗಳಿಗೂ ಕದಂಬರು ಕಾರಣರಾದರು. ಕದಂಬರು ಸಂಸ್ಕೃತವನ್ನೇ ಆಯ್ದುಕೊಳ್ಳಲು ಪ್ರಮುಖ ಕಾರಣವಾಗಿದ್ದುದು ಸ್ವತಃ ಆಳ್ವಿಕೆ ನಡೆಸುತ್ತಿದ್ದ ಅರಸರ ಒಲವು. ಸ್ವತಃ ಕಂದಂಬ ರಾಜರುಗಳು ವೇದಾದಿಗಳಲ್ಲಿ ಮತ್ತು ಧಾರ್ಮಿಕ ವಿಷಯಗಳಲ್ಲಿ ಅವರಿಗಿದ್ದ ಆಸಕ್ತಿ ಪ್ರಮುಖ ಕಾರಣ ಎನ್ನುವುದು ಕದಂಬರ ಶಾಸನಗಳಿಂದಲೇ ತಿಳಿದು ಬರುತ್ತದೆ. ತಾಳಗುಂದ ಸ್ತಂಬ ಶಾಸನ ಮತ್ತು ಗುಡ್ನಾಪುರದ ಶಾಸನಗಳಿಂದ ಕದಂಬರ ಧಾರ್ಮಿಕ ಪ್ರಜ್ಞೆ ಸ್ಪುಟಗೊಳ್ಳುತ್ತದೆ. ಕದಂಬರ ಆಳ್ವಿಕೆ ಕೊನೆಗೊಂಡ ಕೆಲವು ಸಮಯದ ನಂತರ ಬೇಲೂರು, ಬಂಕಾಪುರ, ಹಾನಗಲ್, ಗೋವಾ, ಬಯಲ್ನಾಡು, ಉಚ್ಚಂಗಿ, ನಾಗರಖಂಡ, ಕಳಿಂಗದಿಂದ ಕದಂಬರ ಹೆಸರಿನವರು ಆಳಿದರು. ಆದರೆ ಇಲ್ಲಿ ನಾನು ಸುಮಾರು ಮೂರು-ನಾಲ್ಕನೇ ಶತಮಾನದಿಂದ ಆರನೇ ಶತಮಾನದವರೆಗೆ ಆಳಿದ ಬನವಾಸಿ ಕದಂಬರ ವಿಚಾರವನ್ನು ಮಾತ್ರ ತೆಗೆದುಕೊಂಡಿದ್ದೆ. ಅವರನ್ನಿಲ್ಲಿ ಪ್ರಾಚೀನ ಅಥವಾ ಬನವಾಸಿ ಕದಂಬರೆಂದು ಗುರುತಿಸಿಕೊಳ್ಳಬಹುದು.
ಬನವಾಸಿ ಕದಂಬರು ಮೊದಲು ಆಯ್ಕೆ ಮಾಡಿಕೊಂಡದ್ದು ಬೌದ್ಧಧರ್ಮ. ಆದರೆ ವೈದಿಕ ಧರ್ಮವು ಅವರನ್ನು ಸೆಳೆದಿದ್ದರಿಂದ ಬೌದ್ಧ ದರ್ಮವನ್ನು ಸ್ವಲ್ಪ ಮಟ್ಟಿಗೆ ತ್ಯಜಿಸಿದರು, ಆದರೆ ಕದಂಬರು ಬೌದ್ಧಧರ್ಮದಿಂದ ದೂರ ಸರಿಯಲಿಲ್ಲ ಎನ್ನುವುದಕ್ಕೆ ರವಿವರ್ಮನು ದಾವಣಗೆರೆಯಲ್ಲಿ ಹಾಕಿಸಿದ ಸಿದ್ಧಾಯತನ ತಾಮ್ರಪಟ ಮತ್ತು
ಜಯತ್ಯಮಿತ ಗುಣಬೃದ್ಧಬುದ್ಧಸ್ಸತ್ವ ಸಮಾಶ್ರಯಃ|
ಶುದ್ಧೋದನ ಕುಲೋದ್ಭೂತಃ ಪದ್ಮಪತ್ರ ನಿಭೇಕ್ಷಣಃ|| ಎನ್ನುವ ಬುದ್ಧನ ಸ್ತುತಿಯಿಂದಲೇ ಪ್ರಾರಂಭವಾಗುವ ಸು. ಐದು- ಆರನೇ ಶತಮಾನದ ಹೊನ್ನಾವರ ತಾಮ್ರಪಟಗಳು ಇವಕ್ಕೆ ಪುಷ್ಟಿ ನೀಡುತ್ತದೆ. ಇವರು ಯಾವುದೇ ಧರ್ಮದ ಅಂಧಾಭಿಮಾನಿಗಳಾಗಿರಲಿಲ್ಲವೆಂಬುದನ್ನು ಸುಮಾರು ಐವತ್ತು ದಾಖಲೆಗಳು ಸ್ಪಷ್ಟಪಡಿಸುವವು. ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರೂ ಸಹ ಕದಂಬ ಮೃಗೇಶವರ್ಮ, ರವಿವರ್ಮ, ಹರಿವರ್ಮ, ಕೃಷ್ಣವರ್ಮ ಮತ್ತು ವಿಷ್ಣುವರ್ಮರು ಅಷ್ಟೇ ಆಸ್ಥೆಯಿಂದ ಜೈನಧರ್ಮವನ್ನೂ ಅವರು ಪೋಷಿಸಿದ್ದಕ್ಕೆ ಅವರು ಕೊಡಮಾಡಿದ ಜಿನದತ್ತಿಗಳು ಉದಾಹರಣೆಗಳಾಗಿವೆ. ರವಿವರ್ಮ ಬುದ್ಧನನ್ನು, ಮೃಗೇಶವರ್ಮನು ಗ್ರಾಮದೇವತೆಯನ್ನು ಪ್ರಾರ್ಥಿಸಿ ಆರಾಧಿಸಿದರು. ಅಲ್ಲದೆ ಮಹಾದೇವ, ವಿಷ್ಣು ಜ್ಯೋತಿರ್ಮಯ ಮತ್ತು ಕಾಮದೇವರಿಗೆ ದೇವಾಲಯಗಳನ್ನು ಕಟ್ಟಿಸಿ, ಜಿನನ ಮತ್ತು ಕಾಮನ ಹಬ್ಬಗಳನ್ನು ವರ್ಷವರ್ಷವೂ ಇವರು ಸಡಗರದಿಂದ ಆಚರಿಸಿದರು ಎಂದು ಗುಡ್ನಾಪುರ ಶಾಸನದಿಂದ ತಿಳಿದು ಬರುತ್ತದೆ. ಇವರ ಶಾಸನಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಇವರು ವಿದ್ಯಾಸಕ್ತರೂ ಅಲ್ಲದೇ ಭಾಷಾಭಿಮಾನಿಗಳೂ ಸಾಹಿತ್ಯಾಭಿಮಾನಿಗಳು ಆಗಿದ್ದು ಕಂಡುಬರುತ್ತದೆ.
ಬನವಾಸಿ ಕದಂಬರು ಆಡಳಿತಾತ್ಮಕವಾಗಿ ಮಹತ್ವಾಕಾಂಕ್ಷೆಯವರಾಗಿರಲಿಲ್ಲ. ಸಾತವಾಹನರ ಆಳ್ವಿಕೆಯ ನಂತರ ಆಡಳಿತ ನಡೆಸಿದ ಪ್ರಾಂತೀಯ(ಸ್ಥಳೀಯ) ಅರಸರಲ್ಲಿವರು ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ, ಬಾದಾಮಿ ಚಾಳುಕ್ಯರಂತಾಗಲೀ ಅಥವಾ ತಲಕಾಡಿನ ಗಂಗರಂತಾಗಲೀ ಇವರು ರಾಜ್ಯವನ್ನು ವಿಸ್ತರಿಸಲಿಲ್ಲ. ರಾಜಕೀಯ ಇತಿಹಾಸದಲ್ಲಿ ಇವರ ಸ್ಥಾನ ಗೌಣವೆನಿಸಿದರೂ ಕನ್ನಡ ಲಿಪಿ ಮತ್ತು ಭಾಷಾ ಇತಿಹಾಸದಲ್ಲಿ ಅದು ಗುರುತರವಾಗಿದೆ.
ಕದಂಬರ ಕಾಲದಲ್ಲಿ ಸುಮಾರು 500 ವರ್ಷಗಳಿಗಿಂತಲೂ ಹೆಚ್ಚುಕಾಲ ಪ್ರಚಲಿತವಿದ್ದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷೆಯ ಸಂವಹನ ಅಂತ್ಯಗೊಳ್ಳುವುದನ್ನು ನಾವು ಗಮನಿಸಬಹುದು. ದೀರ್ಘಕಾಲ ಪ್ರಚಲಿತವಿದ್ದ ಮಾಧ್ಯಮವೊಂದು ಕ್ರಮೇಣ ನಶಿಸುತ್ತಾ ಬ್ರಾಹ್ಮೀ ಸ್ಥಾನವನ್ನು ಆರಂಭಕಾಲದ ಕನ್ನಡಲಿಪಿ ಪಡೆದುಕೊಂಡರೆ ಸಂಸ್ಕೃತವು ಭಾಷಾ ವ್ಯವಹಾರವನ್ನು ಪಡೆದುಕೊಂಡಿತು, ಮತ್ತು ದಕ್ಷಿಣ ಭಾರತದ ಸಾಹಿತ್ಯವೇ ಮೊದಲಾದ ವ್ಯವಹಾರ ಭಾಷೆಯಾಗಿಯೂ ಸಂಸ್ಕೃತ ಭದ್ರಗೊಂಡಿತು. ಕನ್ನಡಭಾಷೆ ಮತ್ತು ಕನ್ನಡ ಲಿಪಿ ಸಂಸ್ಕೃತಜೊತೆ ಸೇರಿಕೊಂಡು ಆಡುಭಾಷೆಯಾಗಿ ಸಂವಹನ ಕಾರ್ಯವನ್ನು ನಿರ್ವಹಿಸುತ್ತದೆ. ಮಾಧ್ಯಮದ ದೃಷ್ಟಿಯಿಂದ ಇತಿಹಾಸದಲ್ಲಿ ಇದೊಂದು ದೊಡ್ಡ ಸಂಕ್ರಮಣ.
ಸುಮಾರು 4 ರಿಂದ ಆರನೇ ಶತಮಾನದ ಮಧ್ಯದಲ್ಲಿ ದಕ್ಷಿಣ ಭಾರತದ ಪ್ರಮುಖ ಕೇಂದ್ರಗಳು ಭಾಷೆಯ ವ್ಯವಹಾರದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದವು. ಭಾಷಾ ಮಾಧ್ಯಮದ ಮೂಲಕ ವ್ಯವಹರಿಸುತ್ತಿದ್ದ ದಕ್ಷಿಣ ಭಾರತದ ರಾಜಮನೆತನಗಳನ್ನು ಹೀಗೆ ಅವಲೋಕಿಸಬಹುದು. ಮೊದಲನೆಯದಾಗಿ ದಕ್ಷಿಣ ಭಾರತದ ಈಶಾನ್ಯ ಭಾಗದಲ್ಲಿ ಅಂದರೆ ಈಗಿನ ಆಂಧ್ರಪ್ರದೇಶದಲ್ಲಿ ಆಳುತ್ತಿದ್ದ ಇಕ್ಷ್ವಾಕು, ಆನಂದ, ಬೃಹತ್ಫಲಾಯನ, ಸಾಲಂಕಾಯನ ಮತ್ತು ವಿಷ್ಣುಕುಂಡಿಗಳು ಒಂದು ಸತರದಲ್ಲಿ ಬಂದರೆ ಎರಡನೆಯದಾಗಿ ದಕ್ಷಿಣ ಭಾರತದ ನೈಋತ್ಯ ಪ್ರದೇಶ ಅಂದರೆ ಈಗಿನ ಕರ್ನಾಟಕ ಪ್ರದೇಶದಲ್ಲಿ ಆಳುತ್ತಿದ್ದ ಕದಂಬ, ಗಂಗ ಮತ್ತು ಪುನ್ನಾಟರು. ಇವರುಗಳಲ್ಲದೇ ಆರಂಭಕಾಲದ ಪಲ್ಲವರು. ಇವೆರಡು ಘಟಕಗಳನ್ನು ದಕ್ಷಿಣದ ಕಡೆಯಿಂದ ಬೆಸೆದರೆ, ವಾಕಾಟಕರು ಉತ್ತರಕಡೆಯಿಂದ ಬೆಸೆದಿದ್ದರು.
ಮೂರು-ನಾಲ್ಕನೇ ಶತಮಾನದಲ್ಲಿ ಹೆಚ್ಚಿನವರೆಲ್ಲರೂ ಬೌದ್ಧಧರ್ಮದ ಕಡೆ ವಾಲಿದ್ದರು, ಬ್ರಾಹ್ಮೀಲಿಪಿಯನ್ನು ಬಳಸಿ, ಪ್ರಾಕೃತಭಾಷೆಯಲ್ಲಿ ಶಿಲಾಶಾಸನಗಳನ್ನು ಹಾಕಿಸಿದರು. ಆದರೆ ಕೆಲವೇ ಸಮಯದಲ್ಲಿ ಈ ಧರ್ಮದಿಂದ ದೂರ ಸರಿದು, ಹಿಂದೂ ಧರ್ಮವನ್ನು ಆಚರಿಸತೊಡಗಿ, ತಮ್ಮ ವ್ಯವಹಾರ ಮಾಧ್ಯಮವನ್ನೂ ಸಂಸ್ಕೃತಭಾಷೆಗೆ ಬದಲಿಸಿಕೊಂಡರು. ಪ್ರಾಕೃತಭಾಷೆಗೆ ಮಾಧ್ಯಮವಾದ ಬ್ರಾಹ್ಮೀಲಿಪಿಯನ್ನು ಸುಮಾರು ಒಂದು ಶತಮಾನದ ಕಾಲ ಮುಂದುವರಿಸಿ ನಾಲ್ಕನೇ ಶತಮಾನದಲ್ಲಿ ಕದಂಬರ ಕಾಲದಲ್ಲಿ ಬ್ರಾಹ್ಮಿಯನ್ನು ಬಿಟ್ಟು ಆ ಲಿಪಿಯಿಂದ ಸ್ವತಂತ್ರವಾಗುತ್ತಿದ್ದ ಸ್ಥಳೀಯ ಕನ್ನಡ ಲಿಪಿಯನ್ನು ಇವರು ಬಳಸತೊಡಗಿದರು. ಇದೇ ಸಮಯದಲ್ಲಿ ಅಶೋಕನ ಕಾಲದಿಂದ ಮುಂದುವರಿದುಕೊಂಡು ಬಂದಿದ್ದ ಶಿಲಾಶಾಸನಗಳ ಅಂತ್ಯ
ಬೌದ್ಧಧರ್ಮದ ಮತ್ತು ಪ್ರಾಕೃತಭಾಷೆಯ ಅಧಿಪತ್ಯವನ್ನು ದಕ್ಷಿಣದ ನೆಲದಲ್ಲಿ ಅಧಿಕೃತವಾಗಿ ಮತ್ತು ಪರಿಣಾಮಕಾರಿಯಾಗಿ ಕೊನೆಗೊಳಿಸಿದವರಲ್ಲಿ ಮೊದಲಿಗರೆಂದರೆ ನಾಗಾರ್ಜುನಕೊಂಡದ ಇಕ್ಷ್ವಾಕರು. ಮೂರನೇ ಶತಮಾನದ ಹೆಚ್ಚಿನ ಸಮಯ ಬೌದ್ಧಧರ್ಮಕ್ಕೆ ಬದ್ಧರಾಗಿದ್ದ ಇವರು ಕ್ರಿ.ಶ. ಸು. 274-297ರಲ್ಲಿದ್ದ ವಾಸಿಷ್ಠೀಪುತ್ರ ಎಹೂಹಲನ ಕಾಲದಲ್ಲಿ ಒಮ್ಮೆಲೇ ಹಿಂದೂ ಧರ್ಮದೆಡೆ ವಾಲಿ, ಮೂವತ್ತು ವರ್ಷಗಳಲ್ಲಿ ನಾಲ್ಕು ‘ದೇವಕುಳ’ಗಳನ್ನು ನಿರ್ಮಿಸಿ, ಮೊದಲ ಬಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದರು. ಆಗ ಇವರು ಬಳಸಿದ್ದು ಕೊನೆಯ ಹಂತದ ಬ್ರಾಹ್ಮೀಲಿಪಿಯನ್ನು. ಬಹುಶಃ ಇದರಿಂದ ಪ್ರೇರಣೆ ಪಡೆದ ‘ಸಮ್ಯಕ್ ಸಂಬುದ್ಧಸ್ಯ ಪಾದಾನುದ್ಯಾತ’ ಎಂದು ಕರೆದುಕೊಂಡ ಆನಂದವಂಶದ ಮೊದಲ ಅರಸನು ಗೋಸಹಸ್ರ ಮತ್ತು ಹಿರಣ್ಯಗರ್ಭ ದಾನಗಳನ್ನಾಚರಿಸಿ ಹದಿನಾಲ್ಕು ಬ್ರಾಹ್ಮಣರಿಗೆ ಗ್ರಾಮ ದತ್ತಿ ಕೊಟ್ಟು, ಪ್ರಾಕೃತ ಮಿಶ್ರಿತ ಸಂಸ್ಕೃತದಲ್ಲಿ ಮತ್ತು ಕೊನೆಯ ಹಂತದ ಬ್ರಾಹ್ಮೀಲಿಪಿ ಬಳಸಿ, ತಾಮ್ರಪಟ ಬರೆಸಿದನು. ಇದೇ ಕಾಲದ ಬೃಹತ್ಫ್ಲಾಯನರು ‘ಬ್ರಹ್ಮದೇಯ’ವನ್ನು ನಿರ್ಮಿಸಿ, ಕೆಲವು ಬ್ರಾಹ್ಮಣ ಕುಟುಂಬಗಳನ್ನು ಪಂತೂರಿನಲ್ಲಿ ನೆಲೆಗೊಳಿಸಿದರು.
ಆಮೇಲೆ ಸು. ಐದನೇ ಶತಮಾನದಲ್ಲಿ ಆಳಲಾರಂಭಿಸಿದ ವಿಷ್ಣುಕುಂಡಿಗಳು ಆರಂಭದಲ್ಲಿ ಬುದ್ಧನ ನಿಷ್ಠಾವಂತ ಅನುಯಾಯಿಗಳಾಗಿ ದೊಡ್ಡ ದೊಡ್ಡ ಪ್ರಮಾಣದ ವಿಹಾರಗಳನ್ನೂ ಚೈತ್ಯಾಲಯಗಳನ್ನು ನಿರ್ಮಿಸಿ, ಧಾರಾಳವಾಗಿ ದತ್ತಿ ಕೊಟ್ಟವರು, ಇದೇ ಶತಮಾನದ ಕೊನೆಯಾರ್ಧ ಭಾಗದಲ್ಲಿ ಹಿಂದೂಧರ್ಮಾನುಯಾಯಿಗಳಾಗಿ, ವೈದಿಕ ಬ್ರಾಹ್ಮಣರನ್ನು ನೆಲೆಗೊಳಿಸಲು, ಬ್ರಹ್ಮದೇಯ ಮತ್ತು ದೇವಾಲಯಗಳನ್ನು ಸ್ಥಾಪಿಸಲು ಹೆಚ್ಚಿನ ಒಲವು ತೋರಿದರು. ಬೌದ್ಧಧರ್ಮದ ತಾಮ್ರಪಟಗಳನ್ನು ಇವರು ಬರೆಸಿದ್ದು ಪ್ರಾಕೃತದಲ್ಲಲ್ಲ, ಸಂಸ್ಕೃತದಲ್ಲಿ. ಅಲ್ಲದೆ ಆಮೇಲಿನ ಬ್ರಾಹ್ಮೀಲಿಪಿಯನ್ನೂ ಕೈಬಿಟ್ಟು ಸ್ಥಳೀಯ ಕನ್ನಡ ಲಿಪಿಯನ್ನು ಇವರು ಬಳಸತೊಡಗಿದರು. ಕರ್ನಾಟಕದ ಮೊದಲು ಕಾಣಿಸಿಕೊಳ್ಳಲಾಯಿತೆನ್ನುವ ಸ್ಥಳೀಯ ಲಿಪಿಯು ಕೆಲವೇ ದಶಕಗಳಲ್ಲಿ ದಕ್ಷಿಣದ ಎಲ್ಲಾ ಕಡೆ ವ್ಯಾಪಿಸಿತು ಎಂದು ಭಾವಿಸುತ್ತೇನೆ.
ಕರ್ನಾಟಕದಲ್ಲಿಯೂ ಇದೇ ರೀತಿಯಲ್ಲಾದ ಬದಲಾವಣೆಗಳನ್ನು ಕಾಣುವೆವು. ಕದಂಬರು ತಮ್ಮ ಆಡಳಿತದ ಆರಂಭದಲ್ಲಿ ಪ್ರಾಕೃತಭಾಷೆ ಮತ್ತು ಬ್ರಾಹ್ಮೀಲಿಪಿಯನ್ನು ಮಳವಳ್ಳಿಯಲ್ಲಿ ಬಳಸಿಕೊಂಡರು, ಆಮೇಲಿನ ಶಾಸನವನ್ನು ಪ್ರಾಕೃತಮಿಶ್ರಿತ ಸಂಸ್ಕೃತವನ್ನು ಉಪಯೋಗಿಸಿ ಚಂದ್ರವಳ್ಳಿಯಲ್ಲಿ ಬರೆಸಿದರು, ಸಂಸ್ಕೃತದೊಡನೆ ಕನ್ನಡ ಶಬ್ದಗಳನ್ನು ಧಾರಾಳವಾಗಿ ಸೇರಿಸಿಕೊಂಡು ಬರೆಸಿದ್ದನ್ನು ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ ಕಾಣಬಹುದು, ಮತ್ತು ಪ್ರಬುದ್ಧ ಸಂಸ್ಕೃತ ಕಾವ್ಯ ಭಾಷೆಯಲ್ಲಿ ಛಂದೋಬದ್ಧವಾಗಿ ಬರೆಸಿದ್ದನ್ನು ತಾಳಗುಂದ ಪ್ರಣವೇಶ್ವರ ದೇವಾಲಯದ ಸತಂಬ ಶಾಸನದಲ್ಲಿ ಕಾಣುವೆವು. ಆರಂಭಕಾಲದ ಕನ್ನಡಲಿಪಿಯನ್ನು ಬಳಕೆಗೆ ತಂದು ಬ್ರಾಹ್ಮೀಲಿಪಿಯ ಅಧಿಪತ್ಯವನ್ನು ದಕ್ಷಿಣದಲ್ಲಿ ಕೊನೆಗೊಳಿಸಿದವರಲ್ಲಿ ಕದಂಬರು ಪ್ರಥಮರು ಅನ್ನಿಸುತ್ತದೆ. ಆಂಧ್ರದ ವಿಷ್ಣುಕುಂಡಿಗಳು ಕದಂಬರಿಂದಲೇ ಪ್ರಭಾವಿತರಾಗಿ ಪೂರ್ಣಪ್ರಮಾಣದ ಸಂಸ್ಕೃತ ದಾಖಲೆಗಳನ್ನು ಸ್ಥಳೀಯ ಲಿಪಿಯಲ್ಲಿ ಬೆರೆಸಿದರೋ ಸ್ವತಂತ್ರವಾಗಿ ಇದನ್ನು ಸಾಧಿಸಿಕೊಂಡರೋ ತಿಳಿಯದು, ಆದರೆ ಅವರಿಗಿಂತ ಸುಮಾರು ಒಂದು ಶತಮಾನ ಮುಂಚೆ ಈ ಲಿಪಿಯನ್ನು ಕದಂಬರು ಬಳಕೆಗೆ ತಂದದ್ದು ಮಾತ್ರ ನಿಜ.
ಕದಂಬರು ಬರೆಸಿದ ಹಾಗೂ ಈಗ ಉಪಲಬ್ದವಿರುವ ಸುಮಾರು 50 ಶಾಸನಗಳಲ್ಲಿ 24ಶಾಸನಗಳು ಬ್ರಹ್ಮಸ್ವಂಗೆ ಸೇರಿವೆ, 16ಶಾಸನಗಳು ದೇವಸ್ವಂಗೆ, ಮತ್ತು ಕೇವಲ 2 ಮಾತ್ರ ಕೆರೆಕಟ್ಟೆ ನಿರ್ಮಾಣಕ್ಕೆ, ಉಳಿದ ಮೂರು ಅನಿಶ್ಚಿತ ಕಾರ್ಯಕ್ಕೆ ಸಂಬಂಧಿಸಿವೆ.
ದೇವಾಲಯಗಳ ನಿರ್ವಹಣೆಯನ್ನು ಪ್ರತಿನಿಧಿಸುವ ದೇವಸ್ವಂ ಹೊಂದಿರುವ ಕದಂಬರ ಸುಮಾರು 16 ಶಾಸನಗಳಿದ್ದರೂ ಕದಂಬರ ವಾಸ್ತುಶೈಲಿಯನ್ನು ಹೇಳುವ ದೇವಾಲಯಗಳು ಈಗ ಎಲ್ಲಿಯೂ ಕಾಣಸಿಗುವುದಿಲ್ಲ. ಆದರೆ ಭಗ್ನಗೊಂಡಿರುವ ಅಥವಾ ತನ್ನ ಮೂಲಸ್ವರೂಪವನ್ನು ಗುರುತಿಸಲಾಗದಷ್ಟು ಬದಲಾಯಿಸಿಕೊಂಡು ನವೀಕರಣಕ್ಕೊಳಗಾಗಿರುವ, ಸುಮಾರು ದೇವಾಲಯಗಳು ಮಳವಳ್ಳಿ, ತಾಳಗುಂದ, ಬನವಾಸಿ, ಚಂದ್ರವಳ್ಳಿ, ಹಲಸಿ, ಗೋವಾದ ಅರ್ವಾಳಂನಲ್ಲಿವೆ. ಇವುಗಳಲ್ಲಿ ಗೋವಾದ ಅರ್ವಾಳಂ ತನ್ನ ಮೂಲಸ್ವರೂಪವನ್ನು ಬಹುಮಟ್ಟಿಗೆ ಉಳಿಸಿಕೊಂಡಿರುವ ಗುಹಾಲಯ. ಕದಂಬರ ಶಾಸನಗಳನ್ನು ಬರೆದ ಸುಮಾರು ಹನ್ನೆರಡು ಜನ ಲಿಪಿಕಾರರ ಹೆಸರು ಗೊತ್ತಿದ್ದರೂ ದೇವಾಲಯಗಳನ್ನು ಕಟ್ಟಿದ ಒಬ್ಬ ವಾಸ್ತುಶಿಲ್ಪಿಯ ಹೆಸರೂ ತಿಳಿದು ಬರುತ್ತಿಲ್ಲ. ಕದಂಬರ ಕಾಲವು ಪ್ರಧಾನವಾಗಿ ಲಿಪಿಕಾರರದ್ದಾಗಿತ್ತೇ ವಿನಃ ವಾಸ್ತುಶಿಲ್ಪಿಗಳದ್ದಾಗಿರಲಿಲ್ಲವೆನ್ನಬಹುದು.
ಕದಂಬರು ಸಂಸ್ಕೃತ ಭಾಷಾ ಪ್ರೇಮಿಗಳಾಗಿದ್ದರೆಂಬುದಕ್ಕೆ ಅವರು ಬರೆಸಿರುವ ಹೆಚ್ಚಿನ ಶಾಸನಗಳು ಅದರಲ್ಲೂ ವಿಶೇಷವಾಗಿ ತಾಮ್ರಪಟಗಳು ಸಂಸ್ಕೃತಕ್ಕೆ ಸೇರಿವೆ. ಆದರೆ ಕೆಳಗುಂದಿಯ ವೀರಗಲ್ಲು, ತಮಟಕಲ್ಲು, ಮತ್ತು ಪುರ್ದುಕಾನ್ ದಾನಶಾಸನ ಪೂರ್ಣಪ್ರಮಾಣದಲ್ಲಿ ಕನ್ನಡ ಶಾಸನಗಳು. ಹಲ್ಮಿಡಿಯಲ್ಲಿ ಕನ್ನಡ ಪ್ರವೇಶಿಸುವುದಕ್ಕಿಂತ 50 ವರ್ಷ ಮುಂಚೆಯೇ ತಾಳಗುಂದದಲ್ಲಿ ಸಿಂಹಕಟಾಂಜನ ಶಾಸನವೊಂದನ್ನು ಬರೆಸಲಾಗಿತ್ತೆಂದು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಈ ಅಭಿಮತ ಕನ್ನಡ ಶಿಲಾ ಶಾಸನಗಳ ಇತಿಹಾಸವನ್ನು ಅರ್ಧ ಶತಮಾನದಷ್ಟು ಪ್ರಾಚೀನತೆಗೆ ಸರಿಸುತ್ತದೆ.
ಕದಂಬರ ಕಾಲದಲ್ಲಾದ ಮಹತ್ವದ ಇನ್ನೊಂದು ಬದಲಾವಣೆ ಎಂದರೆ, ಶಿಲಾಶಾಸನಗಳ ಅಧಿಪತ್ಯ ಕೊನೆಗೊಂಡು ತಾಮ್ರಪಟಗಳು ಅಧಿಕಗೊಂಡದ್ದು. ಲೇಖನಮಾಧ್ಯಮವು ಬದಲಾದುದಕ್ಕಾಗಿ ಇದು ಅಷ್ಟೊಂದು ಮಹತ್ವವೆನಿಸಲಿಲ್ಲ, ವಿಶಿಷ್ಠ ಬಗೆಯ ಧಾರ್ಮಿಕ ಸಂಸ್ಕೃತಿಯನ್ನೂ ಆರ್ಥಿಕ ವ್ಯವಸ್ಥೆಯನ್ನೂ ತಂದುದಕ್ಕೆ ಈ ಪಟ್ಟ ಸಿಕ್ಕಿತು. ಶಿವಸ್ಕಂಧವರ್ಮ ಪಲ್ಲವನ ಹಿರೇಹಡಗಲಿ ಶಾಸನವು ಕರ್ನಾಟಕದಲ್ಲಿ ಬರೆಸಿದ ಮೊದಲ ತಾಮ್ರಪಟವೆಂಬುದನ್ನು ನಾವು ಮರೆಯುವಂತಿಲ್ಲ. ಪ್ರಾಕೃತ ಭಾಷೆಯಲ್ಲಿ ಬರೆದು ಬ್ರಾಹ್ಮಣದತ್ತಿಯನ್ನು(ಬ್ರಹ್ಮಾದಾಯ) ದಾಖಲಿಸಿರುವ ಈ ತಾಮ್ರಪಟದಲ್ಲಿ ಅಗ್ನಿಶರ್ಮ ಪ್ರಮುಖನನ್ನು ಮೊದಲ್ಗೊಂಡು ಇಪ್ಪತ್ತು ಬ್ರಾಹ್ಮಣರಿಗೆ ವ್ರಿತ್ತಿಗಳನ್ನು ಹಂಚಿದ ವಿವರವಿದೆ. ಇಲ್ಲಿಂದ ಪ್ರಾರಂಭವಾಗುವ ಬ್ರಾಹ್ಮಣ ಕೊಡುಗೆಗಳು ಕದಂಬರ ಕಾಲದಲ್ಲಿ ಗಮನಾರ್ಹ ಏಳಿಗೆಯನ್ನು ಕಂಡಿತು, ಭಾಷೆ ಮತ್ತು ಲಿಪಿ ಸಂವಹನ ಮಾಧ್ಯಮದಲ್ಲಿ ಹೊಸ ಅಲೆಯನ್ನೆಬ್ಬಿಸಿದವು.
ತಾಮ್ರಪಟಗಳು ಶಿಲಾಶಾಸನಗಳಂತೆ ಬಹಿರಂಗ ದಾಖಲೆಗಳಾಗಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಪ್ರಮುಖ ಕಾರಣ, ಸಂಬಂಧಪಟ್ಟ ಫಲಾನುಭವಿ ಮತ್ತು ಅವನ ಸಮುದಾಯ ಬಿಟ್ಟು, ಬೇರೆಯವರಿಗೆ ಇವು ಮುಕ್ತವಾಗಿರಲಿಲ್ಲ. ಈ ದೃಷ್ಟಿಯಲ್ಲಿ ತಾಮ್ರಪಟಗಳು ಒಂದು ಬಗೆಯಲ್ಲಿ ವೈಯಕ್ತಿಕ ಪಟ್ಟವನ್ನು ಸ್ವೀಕರಿಸಿತು, ಹೆಚ್ಚಿನವು ಕೆಲವಷ್ಟು ರಹಸ್ಯ ಒಡಂಬಡಿಕೆಗಳಂತೆ ಕಾಣಿಸಿಕೊಳ್ಳುತ್ತವೆ. ಶಿಲಾಶಾಸನಗಳು ಧಾರ್ಮಿಕ ಸಂಸ್ಥೆಗಳು ಪಡೆದುಕೊಂಡ ದಾನ, ದತ್ತಿ ದಾಖಲೆಗಳಾಗಿರುವುದರಿಂದ ಇವುಗಳಲ್ಲಿ ವ್ಯಕ್ತಿಗಳಿಗೆ ವಯಕ್ತಿಕವಾಗಿ ಯಾವುದೇ ವಿಶೇಷ ಲಾಭವಿರಲಿಲ್ಲ. ಕೆಲವು ಧಾರ್ಮಿಕ ವ್ಯವಹಾರಗಳಲ್ಲಿ ವ್ಯಕ್ತಿಗಳ ಹೆಸರು ಬಂದರೂ ಅವರನ್ನು ಶಿಲಾ ಶಾಸನಗಳಲ್ಲಿ ಗುರುತಿಸಿರುವುದು ಧರ್ಮಸಂಸ್ಥೆಯ ಪ್ರತಿನಿಧಿಗಳನ್ನಾಗಿ ಮಾತ್ರ. ಹೀಗೆ ಕನ್ನಡವನ್ನು ಲಿಪಿ ಮಾಧ್ಯಮ ಮತ್ತು ಭಾಷಾ ಸಂವಹನ ಮಾಧ್ಯಮವಾಗಿ ಮೊತ್ತ ಮೊದಲಿಗೆ ನಮಗೆ ಕೊಟ್ಟವರು ಕದಂಬರು.

No comments:

Post a Comment