Search This Blog

Monday 25 December 2017

ನೀಲಮತಪುರಾಣ - ಕಲ್ಹಣನ ರಾಜತರಂಗಿಣೀ - ಕಾಶ್ಮೀರ

ಕ್ರಿ. ಶ 1089-1101 ಅವಧಿಯಲ್ಲಿ ಕಾಶ್ಮೀರದ ಪ್ರದೇಶವನ್ನು ಹರ್ಷದೇವ ಎನ್ನುವ ರಾಜ ಆಳುತ್ತಿದ್ದ, ಈತನ ಮಂತ್ರಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದವನ ಹೆಸರು ಚಂಪಕ ಎಂದು. ಈ ಚಂಪಕನ ಮಗನೇ ಕಲ್ಹಣ. ಹೌದು ಭಾರತದ ಇತಿಹಾಸದಲ್ಲಿ ಒಂದು ಅದ್ಭುತ ಕೃತಿಯನ್ನು ಕೊಟ್ಟ ಕವಿ. ರಾಜಾಶ್ರಾಯದಲ್ಲಿ ಬೆಳೆದ ಮತ್ತು ಅದೇ ವಾತಾವರಣದಲ್ಲಿ ವಿದ್ಯಾರ್ಜನೆ ಮಾಡಿದ ಕಾರಣದಿಂದ ಈತ ರಾಜಕೀಯ ಪರಿಸ್ಥಿತಿಯನ್ನು ಚೆನ್ನಾಗಿಯೇ ತಿಳಿದುಕೊಂಡು ರಾಜತರಂಗಿಣಿಯಂತಹ ಐತಿಹಾಸಿಕ ಕಾವ್ಯರಚನೆ ಈತನಿಗೆ ಸಾಧ್ಯವಾಯಿತು.
ಕಾಶ್ಮೀರದಲ್ಲಿದ್ದ ಶಿಲಾ ಶಾಸನಗಳು, ತಾಮ್ರ ಪಟಗಳು, ದಾನ ಪತ್ರಗಳು, ತಾಳೆಯೋಲೆಗಳು ಮುಂತಾದವನ್ನು ಬಹು ಶ್ರಮದಿಂದ ಶೇಖರಿಸಿ, ಪ್ರಾಚೀನ ರಾಜಾವಳೀಕಥೆಗಳು, ಪುರಾಗಳು ಮುಂತಾದವನ್ನು ಸಂಗ್ರಹಿಸಿ, ನೀಲಮತ, ಸುವ್ರತ, ಕ್ಷೇಮೇಂದ್ರ, ಹಾಲರಾಜ, ಪದ್ಮಮಿಹಿರ, ಮುಂತಾದವರ ಕೃತಿಗಳನ್ನೆಲ್ಲ ಆಮೂಲಾಗ್ರವಾಗಿ ಪರಿಶೀಲಿಸಿದ ನಂತರ ಪುಯಾವುದೇ ದೋಷ ಕಾಣಿಸದಂತೆ ನಿಷ್ಪಕ್ಷಪಾತ ದೃಷ್ಟಿಯಿಂದ ರಾಜರ ವ್ಯಕ್ತಿತ್ವ ಹಾಗೂ ಕೃತಿಗಳನ್ನು ತೂಗಿ ನೋಡಿದುದಾಗಿ ರಾಕತರಂಗಿಣಿಯ ಕುರಿತಾಗಿ ಹೇಳಿದ್ದಾನೆ. ಪುರಾಣಕಾಲದಿಂದ ತನ್ನ ಜೀವಿತಕಾಲದ ವರೆಗಿನ ಕಾಶ್ಮೀರದ ಸಮಗ್ರ ಇತಿಹಾಸವನ್ನು ಬರೆಯುವುದು ಕಲ್ಹಣನ ಗುರಿಯಾಗಿತ್ತು; ಮೊದಲ ಭಾಗದಲ್ಲಿ ಗೋನಂದ, ಕರ್ಕೋಟ, ಉತ್ಪಲ, ಲೋಹರ, ಮುಂತಾದ ರಾಜವಂಶಗಳ ಚರಿತ್ರೆ ಬರುತ್ತದೆ. ಈ ಭಾಗದಲ್ಲಿ ಪೌರಾಣಿಕಾಂಶಗಳೇ ಹೆಚ್ಚು; ಖಚಿತವಾದ ಕಾಲದೇಶಾದಿ ವಿವರಗಳು ಕಡಿಮೆ. ಆದರೆ ತನ್ನ ಕಾಲದ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಕಲ್ಹಣನ ನಿರೂಪಣೆ ಐತಿಹಾಸಿಕ ದೃಷ್ಟಿಯಿಂದ ಹೆಚ್ಚು ಖಚಿತಗೊಳ್ಳುತ್ತದೆ.
ಕಲ್ಹಣನ ಬಗ್ಗೆ ತಿಳಿಯ ಬೇಕಿದ್ದರೆ ಕಾಶ್ಮೀರವನ್ನು ಸ್ವಲ್ಪ ಮೆಲುಕುಹಾಕಲೇ ಬೇಕು.
ಕಾಶ್ಮೀರಾಃ ಪಾರ್ವತೀ ತತ್ರ ರಾಜಾಜ್ಞೇಯೋ ಹರಾಂಶಜಃ |
ನಾವಜ್ಞೇಯಃ ಸ ದುಷ್ಟೋಪಿ ವಿದುಷಾ ಭೂತಿಮಿಚ್ಛತಾ || 1 : 27 ||
ಕಾಶ್ಮೀರ ಎನ್ನುವುದು ಸಾಕ್ಷಾತ್ ಪಾರ್ವತಿಯೇ ಎಂದು ಈ ಶ್ಲೋಕ ಹೇಳುತ್ತದೆ.
ಪ್ರಾಚೀನ ಕಾಲದಲ್ಲಿ, ಈಗಿನ ಜಮ್ಮು ಕಾಶ್ಮೀರದ ಭೂಗಭಾಗವೆಲ್ಲ ನೀರಿನಿಂದ ತುಂಬಿ ಕೊಂಡಿತ್ತು. ಒಂದು ದೊಡ್ದ ಸರೋವರದಂತೆ ಕಾಣಿಸುತ್ತಿತ್ತು. ಅದು ಅತಿ ದೊಡ್ಡ ಸರೋವರ. ಆ ಸರೋವರದ ಹೆಸರು ಸತೀಸರಸ್ ಅಥವಾ ಸತಿಸರ ಎಂದು ಕರೆಯಲಾಗುತ್ತಿತ್ತು. ಅದೊಂದು ನಿರ್ಜನ ಪ್ರದೇಶ. ರಾಕ್ಷಸರೂ ಹಾಗೂ ಪಿಶಾಚಿಗಳು ಇದ್ದರು. ಅವರೆಲ್ಲರ ಮುಖಂಡ ಜಲಧರ ಎನ್ನುವವನು. ಆತನಿಗೆ ಜಲದೇವ ಎನ್ನುವ ಇನ್ನೊಂದು ಹೆಸರೂ ಇತ್ತು. ರಾಕ್ಷಸರು ಸರೋವರದ ಸಮೀಪ ಬರಲೂ ಯಾರನ್ನೂ ಬಿಡುತ್ತಿರಲಿಲ್ಲ, ದಡದ ಮೇಲೆ ನೆಲಸಲೂ ಬಿಡುತ್ತಿರಲಿಲ್ಲ. ಪ್ರಶಾಂತವಾದ ಈ ಸ್ಥಳವು ತಪಸ್ಸಿಗೆ ಒಳ್ಳೆಯ ಪ್ರದೇಶವೆಂದು ತಪೋನಿರತ ಸಾಧುಗಳು ಬಂದರೆ ಅಂತವರಿಗೆ ಜಲಧರನೂ ಅವನ ಕಡೆಯವರೂ ಹಿಂಸೆಕೊಟ್ಟು ಓಡಿಸುತ್ತಿದ್ದರು. ತಪಸ್ವಿಗಳೆಲ್ಲಾ ಸೇರಿ ಬ್ರಹ್ಮಸ್ಥಾನದಲ್ಲಿದ್ದ ಕಶ್ಯಪನಲ್ಲಿ ದೂರಿಕೊಳ್ಳುತ್ತಾರೆ. ಶ್ಯಪ ಋಷಿ ಈ ಸರೋವರದ ಕಡೆ ಬರುತ್ತಾನೆ.) ಕಶ್ಯಪನ ಮೂಲ ಉದ್ದೇಶ ಇವರನ್ನೆಲ್ಲಾ ಅಲ್ಲಿಂದ ಹೊಡೆದೋಡಿಸುವುದಾಗಿತ್ತು. ಅಲ್ಲಿ ಕಶ್ಯ್ಪ ಮಹರ್ಷಿ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ, ಅವನನ್ನು ಅನುಗ್ರಹಿಸಲು ಒಂದು ಹಕ್ಕಿಯ ವೇಷಧರಿಸಿ 'ಶಾರಿಕಾ" ದೇವತೆ ಬಂದಳಂತೆ. ಆ ಹಕ್ಕಿಯು ತನ್ನ ಕೊಕ್ಕಿನಲ್ಲಿ ಒಂದು ಚಿಕ್ಕ ಕಲ್ಲನ್ನು ಕಚ್ಚಿಕೊಂಡು ಬಂದು ಸರೋವರದೊಳಗೆ ಹಾಕಿತು. ಆ ಕಲ್ಲೇ ದೊಡ್ಡ ಪರ್ವತವಾಗಿ ಬೆಳೆದು, ಆ ಪರ್ವತದ ಕೆಳಗೆ ಸಿಕ್ಕಿ ಜಲಧರ ಮತ್ತು ಅವನ ಸಂಗಡಿಗ ರಾಕ್ಷಸರೆಲ್ಲ ಸತ್ತುಹೋದರು. ದನ್ನೇ ಈಗ ಹರಿಪರ್ವತ ಅಥವಾ ಹರಿ-ಪರ್ಬತ್ ಎಂದು ಕರೆಯುತ್ತಾರೆ. ಈ ಸರೋವರದ ನೀರನ್ನೆಲ್ಲ ಶ್ಯಪ ಮುನಿ ಬಾರಾಮುಲಾದ ಮೂಲಕ ಹೊರಹಾಕಿ ಜನವಸತಿಗೆ ಯೋಗ್ಯವಾದ ನೆಲವನ್ನಾಗಿ ಸರೋವರವನ್ನು ಮಾಡಿದ ಜಾಗಕ್ಕೆ 'ಕಾಶ್ಯಪಮಾರ್' ಎಂದು ಹೆಸರಾಯಿತು. ಕಾಲಾಂತರದಲ್ಲಿ ಅದು ಕಾಶ್ಯಪಾರ್ ಎಂದು ಆಯಿತು. ಕೊನೆಗೆ ಇಂದು ಅದು ಕಾಶ್ಮೀರ ಎಂಬ ಹೆಸರನ್ನು ತಾಳಿತು. ಈ ಕಥೆ ಒಂದು ಕಲ್ಪಿತ ದಂತಕಥೆ ಆಗಿರಲೂ ಬಹುದು. ಧ್ಯಾನಾಸಕ್ತ ಬುದ್ಧಿವಂತ ಜನರೇ ಮುಂದೆ ಇಂದಿಗೂ ಕಾಶ್ಮೀರಿ ಪಂಡಿತರು ಎಂದೇ ಪ್ರಖ್ಯಾತಿಗೆ ಬಂದದ್ದು. ಈ ಕಾಶ್ಮೀರದಲ್ಲಿ ಕಶ್ಯಪನ ಮಗ ನೀಲನಾಗನ ಕಥೆಯೂ ಹೆಚ್ಚು ಪ್ರಚಲಿತವಾಗಿದೆ. ಇಲ್ಲಿನ ಜನ ನೀಲಮತ ಪುರಾಣ ಎನ್ನುವ ಗ್ರಂಥಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.
ಸುಮಾರು 1453 ಶ್ಲೋಕಗಳನ್ನು ಹೊಂದಿದ ಈ ಗ್ರಂಥದ 210 ರಿಂದ 222ನೇ ಶ್ಲೋಕದಲ್ಲಿ ಕಾಶ್ಮೀರದ ಕುರಿತು ಅದೊಂದು ದೋಣಿಯಾಕಾರದ ಪ್ರದೇಶವೆಂದು ಸರೋವರದ ಕಲ್ಪನೆಯನ್ನೇ ಕೊಡುತ್ತದೆ. ಇದೇ ನೀಲಮತ ಪುರಾಣವೇ ಮುಂದೆ ಕಲ್ಹಣನಿಗೆ ರಾಜತರಂಗಿಣಿಯನ್ನು210 ಬರೆಯಲು ಪ್ರೇರಣೆ ನೀಡುತ್ತದೆ.
ನೀಲಮತದಲ್ಲಿ :
ನಾಬಂಧನಮಥಾಸಾಧ್ಯ ಸ್ಥಿತ್ವಾ ತೇ ಸುರಸತ್ತಮಾಃ |
ವಿಚಾರನಿರತಾಸ್ತಸ್ಥುಃ ಕಿಂಕಾರ್ಯಮಿತಿ ಚಿಂತಯಾ || 213

ದೇವಾನುಯಾತ್ರಾನಿನದಂ ಶ್ರುತ್ವಾ ದೈತ್ಯಃ ಸುದುರ್ಮತಿಃ |
ಜಲೇ ತ್ವವಧ್ಯಮಾತ್ಮಾನಂ ವಿದಿತ್ವಾ ನ ಬಹಿರ್ಯಯೌ || 214

ತನ್ಮಧ್ಯ ಶಿಖರೇ ರುದ್ರೋ ದಕ್ಷಿಣೇ ಶಿಖರೇ ಹರಿಃ |
ಉತ್ತರೇ ಶಿಖರೇ ಬ್ರಹ್ಮಾ ತೇಷಾಮನುಸುರಾಸುರಾಃ || 216 ಹೀಗೇ ಮುಂದುವರೆದು ಎಲ್ಲಾ ದೇವತೆಗಳ ವಾಸಸ್ಥಾನವಾದ ಭುವಿಗಿಳಿದ ಸ್ವರ್ಗ ಎಂದು ಬಣ್ಣಿಸಲಾಗಿದೆ.

ವಿದಾರಿತೇ ಪರ್ವತರಾಜರಾಜೇ ವಿನಿರ್ಯಯೌ ತಜ್ಜಲಮಾಶುವೇಗಾತ್ |
ವೇಗೇನ ಶಬ್ದೇನ ಚ ಸರ್ವಭೂತಾನ್ ಸಂತ್ರಾಸಮಾನಂ ಕುಟಿಲೈಸ್ತರಂಗೈಃ || 221
ಹಿಮಾಚಲಾಭೈರ್ಗಗನಂ ಸ್ಪೃಷದ್ಭಿಃ ಸಂಪ್ಲಾವಮಾನಂ ಗಿರಿಮಸ್ತಕಾನಿ |
ಸಂಕ್ಷೀಯಮಾನೇ ಸರಸಸ್ತು ತೋಯೇ ಚಕಾರ ಮಾಯಾಂ ಸ ಜಲೋದ್ಭವಾಖ್ಯಃ || 222 ಇದೇ ರೀತಿ ನೀಲಮತವು ಕಾಶ್ಮೀರದ ಕುರಿತಾಗಿ ವರ್ಣಿಸುತ್ತಾ ಸಾಗುತ್ತದೆ. ಅದನ್ನೇ ರಾಜತರಂಗಿಣಿ ಪುನರುಚ್ಚರಿಸುತ್ತದೆ.
ನೀಲಮತದ 40 ರಿಂದ 46ನೇ ಶ್ಲೋಕದವರೆಗೆ ಸತೀದೇಶ ಎನ್ನುವುದಾಗಿಯೂ ಸತೀ ಸರೋವರ ಎನ್ನುವುದಾಗಿಯೂ ಹೇಳಲ್ಪಟ್ಟಿದೆ. ನೀಲಮತವು ಕಾಶ್ಮೀರದ ಮೂಲ ನಿವಾಸಿಗಳೆಂದು ಬಣ್ಣಿಸಿದೆ.
ಮತ್ಸ್ಯ ರೂಪಧರೋ ವಿಷ್ಣುಃ ಶೃಂಗೇ ಕೃತ್ವಾಪಕರ್ಷತಿ ಎನ್ನುವ 61ನೇ ಶ್ಲೋಕದಿಂದ 71ನೇ ಶ್ಲೋಕದವರೆಗೆ ಈ ಸತೀ ದೇಶದಲ್ಲಿ ವಾಸಿಸಲು ಗರುಡನಿಂದ ನಿಮಗೆ ಅಂದರೆ ನಾಗರಿಗೆ ಯಾವುದೇ ತೊಂದರೆಯೂ ಆಗಲಾರದು ಎಂದು ಮಹಾವಿಷ್ಣುವೇ ಸೂಚಿಸುತ್ತಾನೆ. ಕಶ್ಯಪನ ಮಗನಾದ ನೀಲನು ತಾವು ಮಾನವರು ತಾವು ನಾಗರೊಂದಿಗೆ ಇರಬಹುದು ಆದರೆ ಪಿಶಾಚರೊಂದಿಗೆ ಇರಲು ಅಸಾಧ್ಯವೆಂದು ಶ್ಲೋಕ 223 ರಿಂದ ಹೇಳಿದಾಗ ಸಹನೆಯಿಂದ ಇರಿ ಮುಂದೆ ನಾಗರನ್ನು ಶೃದ್ಧಾ ಭಕ್ತಿಗಳಿಂದ ಎಲ್ಲರೂ ಪೂಜಿಸುತ್ತಾರೆ ಎನ್ನುತ್ತಾನೆ. ಕಶ್ಯಪನಿಂದ ಕಾಶ್ಮೀರ ಎಂದಾದರೂ. ಸಂಸ್ಕೃತದಲ್ಲಿ ಕ ಎನ್ನುವುದಕ್ಕೂ ನೀರು ಎನ್ನುವ ಅರ್ಥವಿದೆ. ಕಾಶ್ಮೀರ ಎನ್ನುವುದು ಸರೋವರದ ನಾಡು ಒಂದೆಡೆ ಹಿಮಾಲಯ ಕಾಣಿಸುತ್ತದೆ ಹೀಗೆ ಅತ್ಯದ್ಭುತ ರಮಣೀಯ ಸ್ವರ್ಗ ಅದು.
ಇವಿಷ್ಟು ನೀಲಮತದಲ್ಲಿನ ಉದಾಹರಣೆಯಾದರೆ ಇನ್ನು ಮೂಲತಃ ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣ ತನ್ನ 'ರಾಜತರಂಗಿಣಿ"ಯಲ್ಲಿ ಕಾಶ್ಮೀರವನ್ನು ಸ್ವಲ್ಪ ಬೇರೆ ರೀತಿಯಲ್ಲಿ ವರ್ಣಿಸಿದ್ದಾನೆ. ಕಲ್ಹಣನು ಹೇಳುವಂತೆ
ಪುರಾ ಸತೀಸರಃ ಕಲ್ಪಾರಂಭಾ ಪ್ರಭೃತಿ ಭೂರಭೂತ್ |
ಕುಕ್ಷೌ ಹಿಮಾದ್ರೇ ರಣೇಭಿಃ ಪೂರ್ಣೇ ಮನ್ವಂತರಾಣಿ ಷಟ್ ||25||
ಮನ್ವಂತರದ ಆರಂಭದಲ್ಲಿ ಮೊದಲ ಆರು 'ಮನು"ಗಳ ಕಾಲದಲ್ಲಿ ಹಿಮಾಲಯದ ಗರ್ಭದಲ್ಲಿದ್ದ ಈ ನೆಲವೆಲ್ಲ ಜಲಾವೃತವಾಗಿತ್ತು ಮತ್ತು ಎಲ್ಲವೂ ಸತಿಯ ಸರೋವರವೇ"ಸತೀಸರಸ್" ಆಗಿತ್ತು.
ಅಥ ವೈವಸ್ವತೀಯೇಸ್ಮಿನ್ ಪ್ರಾಪ್ತೇ ಮನ್ವಂತರೇ ಸುರಾನ್ |
ದ್ರುಹಿಣೋಪೇಂದ್ರರುದ್ರಾದಿನವತಾರ್ಯ ಪ್ರಜಾ ಸ್ರಜಾ || 26
ಆಮೇಲೆ, ಈಗ ಪ್ರಸ್ತುತದಲ್ಲಿ ನಡೆಯುತ್ತಿರುವ ಏಳನೆಯ ವೈವಸ್ವತ ಮನ್ವಂತರ ಆರಂಭವಾದಾಗ ದ್ರುಹಿಣ, ಉಪೇಂದ್ರ ಮತ್ತು ರುದ್ರಾದಿ ದೇವತೆಗಳು ಇಲ್ಲಿ ಅವತರಿಸಲು ಪ್ರಜಾಪ್ರತಿಯಾದ ಕಶ್ಯಪನು ಕಾರಣನಾದನು.
ಕಶ್ಯಪೇನ ತದನ್ತಃಸ್ಥಂ ಘಾತಯಿತ್ವಾ ಜಲೋದ್ಭವಂ |
ನಿರ್ಮಮೇ ತತ್ಸರೋ ಭೂಮೌ ಕಶ್ಮೀರಾ ಇತಿ ಮಂಡಲಮ್ || 27
ಈ ಸರೋವರದಲ್ಲಿ ಇದ್ದ 'ಜಲೋದ್ಭವ"ನೆಂಬ ರಾಕ್ಷಸನನ್ನು ಕಶ್ಯಪನು ಹೊಡೆದೋಡಿಸಿದನು. ಅಲ್ಲಿ 'ಶ್ಮೀರಾ" ಎಂಬ ಭೂಮಿಯನ್ನು ನಿರ್ಮಿಸಿದನು. ಇದು ಕ  ಕಲ್ಹಣ ತನ್ನ ರಾಜ ತರಂಗಿಣಿಯಲ್ಲಿ ಬರೆದಿರುವುದು.
ಉದ್ದದ್ವೈತಸ್ತನಿಃಷ್ಯಂತಃ ದಂಡಕುಂಡಾತಪತ್ರಿಣಾ |
ಯತ್ಸರ್ವನಾಗಾಧೀಶೇನ ನೀಲೇನ ಪರಿಪಾಲ್ಯತೇ || 28

ಈ ಕಾಶ್ಮೀರಿ ನೆಲ ಜಲ ನಾಗ ಎಲ್ಲದರ ದೊರೆ ನೀಲನಿಂದ ಪರಿಪಾಲಿಸಲ್ಪಡುವ ಪ್ರದೇಶ. ಈ ನೀಲಕುಂಡ ಒಂದು ವೃತ್ತಾಕಾರದ ಮಹಾ ಸರೋವರವಿದ್ದಂತೆ, ನೀಲನ ರಾಜಲಾಂಛನ ಬೆಳ್ಗೊಡೆ, ವಿತಸ್ತಾ ನದಿಯೆಂದರೆ ಆ ರಾಜಲಾಂಛನದ ದಂಡ. ಎನ್ನುವುದಾಗಿ ರಾಜತರಂಗಿಣಿಯಲ್ಲಿ ಹೇಳಲ್ಪಟ್ಟಿದೆ.  ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ ಸಂಸ್ಕೃತದಲ್ಲಿ ಬರೆಯಲ್ಪಟ್ಟ ರಾಜತರಂಗಿಣಿ, ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ  ರಾಜರ, ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ಈ ಕೃತಿಯು ಸಾಮಾನ್ಯವಾಗಿ ಕಾಶ್ಮೀರದ ಪರಂಪರೆಯನ್ನು ದಾಖಲಿಸುತ್ತದೆ, ಆದರೆ ರಾಜತರಂಗಿಣಿಯ 120 ಪದ್ಯಗಳು ರಾಜ ಅನಂತದೇವನ ಪುತ್ರ ರಾಜ ಕಲಶನ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ದುರಾಡಳಿತವನ್ನು ವಿವರಿಸುತ್ತವೆ. ಮುಂಚಿನ ಪುಸ್ತಕಗಳು ತಮ್ಮ ಕಾಲಗಣನೆಯಲ್ಲಿ ನಿಖರವಾಗಿಲ್ಲವಾದರೂ, ಅವು ಮುಂಚಿನ ಕಾಶ್ಮೀರ ಮತ್ತು ಭಾರತೀಯ ಉಪಖಂಡದ ವಾಯವ್ಯ ಭಾಗಗಳಲ್ಲಿನ ಅದರ ನೆರೆರಾಜ್ಯಗಳ ಬಗ್ಗೆ ಮಾಹಿತಿಯ ಒಂದು ಅಮೂಲ್ಯ ಮೂಲವನ್ನು ಒದಗಿಸುತ್ತವೆ, ಮತ್ತು ನಂತರದ ಇತಿಹಾಸಕಾರರು ಹಾಗು ಜನಾಂಗ ವರ್ಣನಕಾರರಿಂದ ವ್ಯಾಪಕವಾಗಿ ಉಲ್ಲೇಖಿಸಲಾಗುತ್ತವೆ. ರಾಜತರಂಗಿಣಿಯು ಭಾರತದ ಮೊದಲ ಇತಿಹಾಸ ಗ್ರಂಥ ಮತ್ತು ಈತನೇ ಮೊದಲ ಇತಿಹಾಸಕಾರ ಎಂದೆನಿಸಿದರೂ ಸಹ ರಾಜತರಂಗಿಣಿಯಲ್ಲಿ ಬರುವ ಅನೇಕ ವಿಷಯಗಳು ರಂಜನೆಗಾಗಿಯೇ ತುರುಕಲ್ಪ ಕಲ್ಪಿತಗಳು ಎನ್ನಿಸುತ್ತವೆ. ಅದೇನೇ ಇರಲಿ ಈತನ ರಾಜತರಂಗಿಣಿಯಿಂದ ಈತನಿಗಿಂತ ಹಿಂದೆ ಆಗಿ ಹೋದ ಸಾಹಿತ್ಯಕೃತಿಗಳು, ಕಲೆ, ಕಲಾ ಪ್ರಕಾರಗಳೂ ಅಲ್ಲದೇ ಇನ್ನೂ ಅನೇಕ ವಿಷಯಗಳಂತೂ ಸಿಗುತ್ತವೆ.

No comments:

Post a Comment