Search This Blog

Wednesday 27 December 2017

ಮೆಗಸ್ತನೀಸ್ ನ ಇಂಡಿಕವೂ | ನಮಗದು ಸಕಲ ವೇದದ ಸಾರ

ಹತ್ತು ಸಾವಿರ ವರ್ಷಗಳಿಗೂ ಹಿಂದೆ ಅಮೇರಿಕನ್ನರು ಕಣ್ಣುಬಿಡುವ ಮೊದಲೇ, ಯುರೋಪಿಯನ್ನರು ಹುಟ್ಟುವ ಮೊದಲೇ, ಪ್ರಪಂಚದ ಹೆಚ್ಚಿನಕಡೆ ಬಟ್ಟೆಹಾಕದೇ ತಿರುಗುತ್ತಿದ್ದ ಕಾಲದಲ್ಲಿ ನಮ್ಮ ಕಣ್ಣು ಕೋರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಮಾಡಿ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು.
ಇಲ್ಲಿಯ ತನಕ ನಾವು ಹೌದೆಂದು ತಲೆಯಾಡಿಸಿಕೊಂಡು ನಂಬಿಕೊಂಡುಬಂದಿರುವುದು ಏನೆಂದರೆ ಕ್ರಿ.ಪೂ 327 ಸುಮಾರಿಗೆ ಅಂದರೆ ಮೌರ್ಯರ ಕಾಲದಲ್ಲಿ ಅಲೆಗ್ಸಾಂಡರ್ ನಮ್ಮ ದೇಶದ ಮೇಲೆ ದಂಡಯಾತ್ರೆ ನಡೆಸುತನಕವೂ ನಮ್ಮ ದೇಶಕ್ಕೆ ಇದು ನಮ್ಮ ಇತಿಹಾಸ ಎಂದು ತಿಳಿಯಬಹುದಾದ ಇತಿಹಾಸ ಇರಲೇ ಇಲ್ಲ. ಗ್ರೀಕ್ ವೀರ ತನ್ನ ಜೊತೆ ಕರೆತಂದ ಕೆಲ ಮೇಧಾವಿಗಳು ಎಂದು ಹಣೆಪಟ್ಟಿ ಕಟ್ಟಿಕೊಂಡವರು ಬರೆದಿಟ್ಟ ಪ್ರಾಚೀನ  ದಾಖಲೆಗಳಿಂದಲೇ ಭಾರತದ ಇತಿಹಾಸ ಆರಂಭವಾಗುವುದು. ಇವನ ಕಾಲದ ನಂತರ ಅಂದರೆ ಅದೇ ಸುಮಾರು ಕ್ರಿ.ಪೂ ೪ನೇ ಶತಮಾನದಲ್ಲಿ ಮೆಗಸ್ತನೀಸ್ ಎನ್ನುವ ಗ್ರೀಕ್ ಇತಿಹಾಸಕಾರ ಬರೆದ ಇಂಡಿಕಾಭಾರತದ ಇತಿಹಾಸದ ಕುರಿತಾಗಿರುವ ಮೊತ್ತಮೊದಲ ಅಧಿಕೃತ ದಾಖಲೆಯೆಂದು ನಮ್ಮ ಕೆಲವು ಇತಿಹಾಸಕಾರಿಂದ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟಿದೆ. ಸುಮಾರು ಒಂದುವರೆ ಸಾವಿರ ವರ್ಷಗಳಷ್ಟು ಹಿಂದೆಯೇ ಹೆಸರೊಂದನ್ನುಉಳಿಸಿಕೊಂಡು ಮತ್ತೆಲ್ಲ ನಾಮಾವಶೇಷಗೊಂಡಿರುವ ಕೃತಿಯೇ ನಮ್ಮ ಈಗಿನ ಇತಿಹಾಸಕಾರರಿಗೆಲ್ಲ ಇತಿಹಾಸವನ್ನು ನಿರ್ಧರಿಸಲಿರುವ ಏಕೈಕ ಚಾರಿತ್ರಿಕ ಆಧಾರ. ಸೆಲ್ಯುಕಸ್ ೧ ನಿಕಾಟೋರ್ನ ರಾಯಭಾರಿಯಾಗಿ ಚಂದ್ರಗುಪ್ತ ಮೌರ್ಯನ ರಾಜಧಾನಿಯಾದ ಪಾಟಲೀಪುತ್ರದಲ್ಲಿದ್ದುಕೊಂಡು ಮೆಗಸ್ತನೀಸನು ಇಂಡಿಕಾ ರಚಿಸಿದ. ಇದು ತತ್ಕಾಲೀನ ಭಾರತದ ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದೊಡ್ದಮಟ್ತದಲ್ಲಿ ಪರಿಣಾಮಕಾರಿ ಬೆಳಕು ಬೀರುತ್ತದೆಂದು ನಾವು ಓದಿದ ಪಠ್ಯಪುಸ್ತಕಗಳಲ್ಲೆಲ್ಲ ಪುಂಖಾನುಪುಂಖವಾಗಿ ಊದುತ್ತಾರೆ. ನಮ್ಮ ಪುರಾಣೇತಿಹಾಸಗಳಲ್ಲಿ ಸೂಚ್ಯವಾಗಿ ನಿಖರವಾಗಿ ದಿನ, ತಾರೀಖು, ಸಂವತ್ಸರಗಳು ಮಾತ್ರವಲ್ಲದೇ ನಕ್ಷತ್ರಗಳ ಚಲನೆ, ಅವುಗಳ ಸ್ಥಾನವನ್ನೂ ಸೇರಿದಂತೆ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನೂ ಬರೆದಿಟ್ಟಿರುವಾಗ ಅವ್ಯಾವವೂ ನಮಗೆ ಸರಿಯೆನಿಸುವುದೇ ಇಲ್ಲ.
ಕಲಿಯುಗ ಪ್ರಾರಂಭವಾಗಿದ್ದು ಮಹಾಭಾರತ ಯುದ್ಧ ನಡೆದ 36ನೇ ವರ್ಷವಾದ ಕ್ರಿ.ಪೂ 3102ರಲ್ಲೆಂದು ವೈಜ್ಞಾನಿಕವಾಗಿಯೇ ಹೇಳಲ್ಪಟ್ಟಿದೆ ಮತ್ತು ಸಾಬೀತಾಗಿದೆ. ಕಲಿಯುಗದ ಆರಂಭ ಪ್ರಮಾದಿ ಸಂವತ್ಸರದ ಯುಗಾದಿಯಂದು, ದಿನ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳು ದಾಖಲಿಸಿದ ಸತ್ಯಕ್ಕೆ ಖಗೋಳಶಾಸ್ತ್ರಜ್ಞರೆಲ್ಲ ಒಪ್ಪಿ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಮಹಾಭಾರತ ಯುದ್ದದಿಂದ ಆರಂಭಿಸಿ ಬೇರೆ ಬೇರೆ ರಾಜರ ಆಳ್ವಿಕೆಯ ಕ್ರಮಗಳನ್ನು ಭಾಗವತಪುರಾಣ, ಮತ್ಸ್ಯ, ವಾಯು, ಬ್ರಹ್ಮಾಂಡ, ಭವಿಷ್ಯತ್ ಮತ್ತು ವಿಷ್ಣುಪುರಾಣಗಳಿಂದ ತಿಳಿದು ಬರುತ್ತದೆ. ಇವುಗಳಲ್ಲದೇ ಪ್ರಾಚೀನ ಖಗೋಲ ಶಾಸ್ತ್ರಜ್ಞರಾದ ವೃದ್ಧಗರ್ಗ, ಹಾಗೂ ಸು.6ನೆಯ ಶತಮಾನದಲ್ಲಿದ್ದ ಭಾರತದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಹಾಗೂ ಖಗೋಳ ವಿಜ್ಞಾನಿ ವರಾಹ ಮಿಹಿರನ ಬೃಹತ್ಸಂಹಿತೆ, ಶತಪಥ ಬ್ರಾಹ್ಮಣ, ಕಲ್ಹಣನ ರಾಜತರಂಗಿಣಿ, ನೇಪಾಳರಾಜವಂಶಾವಳೀ, ಭಾಸ್ಕರಾಚಾರ್ಯರ ಸಿದ್ಧಾಂತ ಶಿರೋಮಣಿ, ಅದರ ಮೇಲಿನ ರಚಿತವಾದಂತಹ ಟಿಕಾಗ್ರಂಥ ಕೃಷ್ಣ ಮಿಶ್ರನ ಜ್ಯೋತಿಷ್ಯ ಫಲರತ್ನಮಾಲ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ, ಕಲಿಯುಗ ರಾಜ ವೃತ್ತಾಂತಗಳವರೆಗೆ ಲೆಕ್ಕವಿಲ್ಲದಷ್ಟು ಪೌರಾಣಿಕ, ಐತಿಹಾಸಿಕ ಕೃತಿಗಳು ಖಚಿತವಾಗಿಯೇ ವಿವರಿಸಿವೆ. ನಮಗೆ ಇವಾವುವೂ ಕಾಣಿಸುವುದೇ ಇಲ್ಲ ಅದೇನೇ ಇರಲಿ ಈಗ ಮಹಾಭಾರತವನ್ನು ಸ್ವಲ್ಪ ನೋಡೋಣ.
ಉತ್ತರೆಗೆ ಪರೀಕ್ಷಿತನು ಜನಿಸುವ ದಿನ ಸಪ್ತರ್ಷಿ ಮಂಡಲವು ಮಘಾ ನಕ್ಷತ್ರವನ್ನು ಪ್ರವೇಶಿಸಿತೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಸಪ್ತರ್ಷಿ ಮಂಡಲವು ನೂರು ವರ್ಷಕ್ಕೆ ಒಂದೊಂದೆ ನಕ್ಷತ್ರವಾಗಿ ಹಿಂದೆ ಸರಿಯುತ್ತ 2700 ವರ್ಷಗಳಿಗೆ ಮತ್ತೆ ಪುನಃ ಅದೇ ಸ್ಥಾನಕ್ಕೆ ಬಂದುನಿಲ್ಲುತ್ತದೆ. ಇದು ಪಕ್ಕಾ ಖಗೋಳ ಜ್ಯೋತಿಷ್ಯವನ್ನಾಧರಿಸಿದ ವೈಜ್ಞಾನಿಕ ಲೆಕ್ಕಾಚಾರ. ಇದನ್ನೇ ಮತ್ಸ್ಯ ಪುರಾಣದಲ್ಲಿ ಹೀಗೆ ಹೇಳಲಾಗಿದೆ.
ಮತ್ಸ್ಯಪುರಾಣ: ಅಧ್ಯಾಯ 271.
ಇತ್ಯೇವಂ ಮಾನವೋ ವಂಶಃ ಪ್ರಾಗೇವ ಸಮುದಾಹೃತಃ |
ಅತ ಊರ್ಧ್ವಂ ಪ್ರವಕ್ಷ್ಯಾಮಿ ಮಾಗಧಾ ಯೇಬೃಹಧೃಥಾಃ ||17
ಪೂರ್ವೇಣ ಯೇ ಜರಾಸಂಧಾತ್ಸಹದೇವಾನ್ವಯೇ ನೃಪಾಃ |
ಅತೀತಾ ವರ್ತಮಾನಾಶ್ಚ ಭವಿಷ್ಯಾಂಶ್ಚ ನಿಬೋಧತ || 18
ಸಂಗ್ರಾಮೇ ಭಾರತೇ ವೃತ್ತೇ ಸಹದೇವೇ ನಿಪಾತಿತೇ |
ಸೋಮಾಧಿಸ್ತಸ್ಯ ದಾಯಾದೋ ರಾಜಾಭೂತ್ಸ ಗಿರಿವ್ರಜೇ ||19
ಬೃಹಧೃಥ ವಂಶದ ಮಗಧ ರಾಜರ ಬಗ್ಗೆ ಹೀಗಿದೆ. ಭಾರತ ಯುದ್ಧದಲ್ಲಿ ಜರಾಸಂಧನ ಮಗ ಸಹದೇವ ಮಡಿದನು. ಅವನ ಮಗ ಸೋಮಧಿಯು ಗಿರಿವ್ರಜದಲ್ಲಿ ರಾಜನಾಗಿ ಐವತ್ತೆ೦ಟು ವರ್ಷ ರಾಜ್ಯಭಾರ ಮಾಡಿದನು.
ಇನ್ನು ಮುಂದು ವರಿದು ಮತ್ಸ್ಯಪುರಾಣ: ಅಧ್ಯಾಯ 273ನೇ ಅಧ್ಯಾಯದಲ್ಲಿ ....
ಮಹಾಪದ್ಮಾಭಿಷೇಕಾತ್ತು ಯಾವಜ್ಜನ್ಮ ಪರೀಕ್ಷಿತಃ |
ಏವಂ ವರ್ಷ ಸಹಸ್ರಂತು ಜ್ಞೇಯಂ ಪಂಚಾಶದುತ್ತರಮ್ ||36
ಪರೀಕ್ಷಿತನ ಹುಟ್ಟಿನಿಂದ ನಂತರ ಮಹಾಪದ್ಮನ ಪಟ್ಟಾಭಿಷೇಕದವರೆಗೆ ಸಾವಿರದ ಐದುನೂರು ವರ್ಷಗಳಾದವು.
ಪೌಲೋಮಾಸ್ತು ತಥಾಂssಧ್ರಾಸ್ತು ಮಹಾಪದ್ಮಾಂತರೇಪುನಃ |
ಅನಂತರಂ ಶತಾನ್ಯಷ್ಟೌ ಷಟ್ತ್ರಿಂಶತ್ತು ಸಮಾಸ್ತಥಾ ||37
ತಾವತ್ಕಾಲಾಂತರಂ ಭಾವ್ಯಮಾಂಧ್ರಾಂತಾದಾಪರೀಕ್ಷಿತಃ |
ಭವಿಷ್ಯೇ ತೇ ಪ್ರಸಂಖ್ಯಾತಾಃ ಪುರಾಣಜ್ಞೈಃ ಶ್ರುತರ್ಷಿಭಿಃ ||38
ಸಪ್ತರ್ಷಯಸ್ತದಾ ಪ್ರಾಂಶುಃ ಪ್ರದೀಪ್ತೇನಾಗ್ನಿನಾ ಸಮಾಃ |
ಸಪ್ತವಿಂಶತಿ ಭಾವ್ಯಾನಾಮಾಂಧ್ರಾಣಾಂತು ಯದಾ ಪುನಃ || 39
ಮಹಾಪದ್ಮನಂದನಿಂದ ಆಂಧ್ರ ಪುಲೋಮನ ನಡುವಿನ ಅವಧಿ 836 ವರ್ಷಗಳು. ಅಂದರೆ ಪರೀಕ್ಷಿದ್ರಾಜನ ಕಾಲದಿಂದ ಆಂಧ್ರರ ಪತನದವರೆಗೆ ಒಂದುಸಾವಿರದ ಎಂಟುನೂರ ಎಂಭತ್ತಾರು ವರ್ಷಗಳು ಕಳೆದಂತಾಗುವವು. ಪರೀಕ್ಷಿತನ ಜನನದಿಂದ ಆಂಧ್ರರಾಜರ ಕಾಲದವರೆಗೆ ಹೀಗೇ 2700 ವರ್ಷಗಳಲ್ಲಿ ಅಗ್ನಿನಕ್ಷತ್ರದಲ್ಲಿದ್ದ ಸಪ್ತರ್ಷಿ ಮಂಡಲದ ಒಂದು ಸುತ್ತು ಪೂರ್ಣಗೊಂಡಿತು. ಮಹಾಭಾರತ ನಡೆಯುವುದಕ್ಕಿಂಥ 571 ವರ್ಷಗಳ ಮೊದಲು ಅಂದರೆ ಕ್ರಿ.ಪೂ 3709ರಲ್ಲಿ ಕುರುವಂಶದ ಬೃಹದ್ರಥನಿಂದ ರಾಜಗೃಹ ಅಥವಾ ಗಿರಿವ್ರಜವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಗಧ ಸಾಮ್ರಾಜ್ಯ ಅಥವಾ ಬೃಹದ್ರಥ ರಾಜವಂಶ ಸ್ಥಾಪಿಸಲ್ಪಟ್ಟಿತು.
ಬೃಹದೃಥ ವಂಶದ ಹತ್ತನೇ ತಲೆಮಾರು ಅಂದರೆ ಮಹಾಭಾರತದ ಸಂದರ್ಭದಲ್ಲಿ ಭೀಮನಿಂದ ಕೊಲ್ಲಲ್ಪಟ್ಟ ಮಗಧದ ದೊರೆ ಜರಾಸಂಧ. ಜರಾಸಂಧನ ಮಗ ಸಹದೇವ. ಸಹದೇವನ ನಂತರ ವಂಶದ 22 ರಾಜರು ಒಟ್ಟೂ 1006 ವರ್ಷಗಳ ಕಾಲ ಅಂದರೆ ಕ್ರಿ.ಪೂ 2132ರವರೆಗೆ ಮಗಧವನ್ನಾಳಿದರು. ಬೃಹದ್ರಥ ವಂಶದ ಕೊನೆಯ ದೊರೆ ರಿಪುಂಜಯನನ್ನು ಹತ್ಯೆಗೈದು ಅವನ ಮಂತ್ರಿಯಾಗಿದ್ದ ಶುನಕ ತನ್ನ ಮಗ ಪ್ರದ್ಯೋತನನನ್ನು ಪಟ್ಟಕ್ಕೇರಿಸಿದ. ಕ್ರಿ.ಪೂ 2132ರಿಂದ ಕ್ರಿ.ಪೂ 1994ರವರೆಗೆ 138 ವರ್ಷಗಳ ಐದು ತಲೆಮಾರುಗಳ ಕಾಲ ಮಗಧವನ್ನಾಳಿದವರು ಪ್ರದ್ಯೋತನ ರಾಜವಂಶದವರು. ಪ್ರದ್ಯೋತನ ವಂಶದವರ ನಂತರ ಕ್ರಿ.ಪೂ 1994ರಿಂದ 1634ರವರೆಗೆ 360 ವರ್ಷಗಳ ಕಾಲ ಮಗಧವು ಶಿಶುನಾಗ ವಂಶದ ಹತ್ತು ರಾಜರುಗಳಿಂದ ಆಳಲ್ಪಟ್ಟಿತು. ಸಾಮ್ರಾಜ್ಯವನ್ನು ಸ್ಥಾಪಿಸಿದವನು ಶಿಶುನಾಗ. ಇವನ ಮಗ ಕಾಕವರ್ಣ. ಶಿಶುನಾಗರ 4,5,6ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಕಾಲದಲ್ಲಿಯೇ ಬುದ್ಧನು ಬದುಕಿದ್ದನು.

ಮಹಾಭಾರತ ಯುದ್ಧ ನಡೆದ ಸುಮಾರು 1500 ವರ್ಷಗಳು ಗತಿಸಿದ್ದವು ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ನಂದರಿಂದ ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವರಾಜನ ಸಹಾಯದಿಂದ ಚಾಣಕ್ಯ ಕೊಲ್ಲಿಸಿದ ಮತ್ತು ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ.  316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ವಂಶಗಳು ಮಗಧವನ್ನಾಳಿದವು. ಆಂಧ್ರವಂಶದ ಕೊನೆಯ ರಾಜ ಚಂದ್ರಶ್ರೀ ಅಥವಾ ಚಂದ್ರಮಸು ಆಳ್ವಿಕೆಯಲ್ಲೇ ಕ್ರಿ.ಪೂ 327 ರಲ್ಲಿಯೇ ಅಲೆಕ್ಸಾಂಡರ್ ನ ದಂಡಯಾತ್ರೆ ನಡೆದದ್ದು. ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದು ಕರೆದಿದ್ದಾರೆ. ಮೊದಲನೇ ಚಂದ್ರಗುಪ್ತನು ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ತನ್ನ ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದನು. ಆಂಧ್ರಭೃತ್ಯರೇ ಭಾರತೀಯ ಇತಿಹಾಸದ ಸ್ವರ್ಣಯುಗದ ನಿರ್ಮಾತೃರೆನಿಸಿಕೊಂಡ ಗುಪ್ತರು. ವಿಷ್ಣುಪುರಾಣದಲ್ಲಿ ಆಂಧ್ರಭೃತ್ಯಾಸ್ಸಪ್ತಃಎಂದೂ, ಮತ್ಸ್ಯ ಪುರಾಣದಲ್ಲಿ ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿಎಂದು ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಗುಪ್ತರ ಚಂದ್ರಗುಪ್ತನ ಕಾಲದಲ್ಲಿ ಗ್ರೀಕ್ ರಾಜ ಸೆಲ್ಯುಕಸ್ ನ ರಾಯಭಾರಿಯಾಗಿ ಭಾರತಕ್ಕೆ ಮೆಗಸ್ತನೀಸ್ ಬಂದನು. ಚಂದ್ರಗುಪ್ತನ ಮಗನೇ ಇತಿಹಾಸ ಕಂಡ ಅಪ್ರತಿಮ ದಂಡನಾಯಕನೆಂದು ಹೊಗಳಲ್ಪಟ್ಟ ಸಮುದ್ರಗುಪ್ತ. ರಾಜರ ವಂಶಕ್ರಮವನ್ನು ಹಿಂದೂ ಪುರಾಣಗಳು ಮಾತ್ರವಲ್ಲದೇ, ಪ್ರಾಚೀನ ಬೌದ್ಧ ಸಾಹಿತ್ಯಗಳು, ಎಲಿಯಂ ಜೋನ್ಸಿನಂಥ ಮಹಾನ್ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಮಾಣಗ್ರಂಥಗಳಿದ್ದರೂ ಸಹ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯನನ್ನು ಕ್ರಿ.ಪೂ 327ಕ್ಕೆ ನಮ್ಮ ಇತಿಹಾಸಕಾರರು ತಂದು ನಿಲ್ಲಿಸಿದರು!! ಇದು ಮೆಗಾಸ್ತನೀಸ್ ನ ಕೊಡುಗೆ. ಈ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರ್ನ ಸಮಕಾಲೀನನ್ನಾಗಿಸಿ ಭಾರತದ ಚರಿತ್ರೆಯ ಸಾವಿರದೈನೂರು ವರ್ಷಗಳನ್ನೇ ಬ್ರಿಟೀಷರು ಇಲ್ಲವಾಗಿಸಿದರು. ಪರಮ ನೀಚ ಬ್ರಿಟಿಷರು ಮಾಡಿಟ್ಟುಹೋದ ತಪ್ಪು ಕಾಲನಿರ್ಣಯಗಳನ್ನೇ ಸರಿಯೆಂದುಕೊಂಡು ಅವರು ಹೋದ ನಂತರವೂ ನಾವು ಒಪ್ಪಿ ಅಪ್ಪಿಕೊಂಡು ಕುಣಿದಾಡುತ್ತಿದ್ದೇವೆ. ಹಾಗೆಂದು ಬ್ರಿಟೀಷರು ಸುಮ್ಮನೆ ಊಹಿಸಿ ಕಾಲಗಣನೆ ಮಾಡಲಿಲ್ಲ. ಅವರಿಗಿದ್ದ ಆಧಾರ ಗ್ರೀಕ್ ಲೇಖಕರು ಉಲ್ಲೇಖಿಸಿದ ಸ್ಯಾಂಡ್ರೋಕಾಟಸ್’(Sandracottus) ಎಂಬ ಹೆಸರು. ಮೆಗಸ್ತನೀಸ್ ಮಾತ್ರವಲ್ಲದೇ ಡಿಯೋಡೊರಸ್, ಕರ್ಟಿಯಸ್ ನಂಥ ಗ್ರೀಕ್ ಲೇಖಕರೇ ಕ್ಸಂಡ್ರಮಸ್ನನ್ನು ಕೊಂದು ಸ್ಯಾಂಡ್ರೋಕಾಟಸ್ ಪಟ್ಟಕ್ಕೇರಿದನೆಂದೂ, ಆತನ ನಂತರ ಅವನ ಮಗ ಸ್ಯಾಂಡ್ರೋಸಿಪ್ಟಸ್ರಾಜ್ಯವಾಳಿದನೆಂದೂ ಹೇಳಿದ್ದಾರೆ. ಚಂದ್ರಗುಪ್ತ ಮೌರ್ಯ ಧನನಂದನನ್ನು ಕೊಂದು ಸಿಂಹಾಸನಕ್ಕೇರಿದ, ಅವನ ನಂತರ ಆಳಿದವನು ಚಂದ್ರಗುಪ್ತನ ಮಗ ಬಿಂದುಸಾರ. ಚಂದ್ರಗುಪ್ತನು ಚಂದ್ರಮಸುವನ್ನು ಕೊಂದು ಗುಪ್ತ ವಂಶವನ್ನು ಸ್ಥಾಪಿಸಿದ್ದು. ಅವನ ನಂತರ ಅವನ ಮಗ ಸಮುದ್ರಗುಪ್ತ ರಾಜನಾದ. ಇದನ್ನೇ ಕ್ಸಂಡ್ರಮಸ್ಮತ್ತು ಸ್ಯಾಂಡ್ರೋಸಿಪ್ಟಸ್ಹೆಸರುಗಳು ಧನನಂದ ಮತ್ತು ಬಿಂದುಸಾರನ ಗ್ರೀಕ್ ಅಪಭೃಂಶದ ಹೆಸರುಗಳಾಗಿರಬೇಕು ಅಥವಾ ಚಂದ್ರಮಸ್ ಮತ್ತು ಸಮುದ್ರಗುಪ್ತರದ್ದೋ ಇರಬೇಕು ಸ್ಯಾಂಡ್ರೋಕಾಟಸ್ ಕಾಲದ ಭಾರತೀಯ ರಾಜರಲ್ಲೇ ಶ್ರೇಷ್ಟನೆಂದೂ, ಕುಲೀನ ಮನೆತನದವನೆಂದೂ, ದೊಡ್ಡ ಸೈನ್ಯದೊಂದಿಗೆ ಇಡೀ ಭಾರತವನ್ನೇ ಗೆದ್ದನೆಂದೂ ಗ್ರೀಕ್ ಇತಿಹಾಸಕಾರ ರಾಯಭಾರಿಗಳ ಮಾತು. ಚಾಣಕ್ಯನ ಬೆಂಬಲದಿಂದ ಶೂದ್ರ ಸ್ತ್ರೀಯ ಮಗನಾದ ಚಂದ್ರಗುಪ್ತ ಮೌರ್ಯ ಕೋಸಲ, ವಿದೇಹದಂಥ ಅಕ್ಕಪಕ್ಕದ ರಾಜರ ಸಹಾಯದಿಂದ ಅಧಿಕಾರವುಳಿಸಿಕೊಂಡಿದ್ದನ್ನು ಬಿಟ್ಟರೆ ಅವನು ಅಂಥಹ ಶ್ರೇಷ್ಟ ರಾಜ ಅಲ್ಲ. ಆದರೆ ಮೊದಲನೇ ಚಂದ್ರಗುಪ್ತ ಹಾಗಲ್ಲ. ಸೂರ್ಯವಂಶಕ್ಕೆ ಸೇರಿದ ಇವನಿಗೆ ವಿಜಯಾದಿತ್ಯನೆಂಬ ಬಿರುದಿತ್ತು. ಇವನ ಮಗ ಸಮುದ್ರಗುಪ್ತನು ಅಶೋಕಾದಿತ್ಯನೆಂದೂ, ಮೊಮ್ಮಗ ಎರಡನೇ ಚಂದ್ರಗುಪ್ತನು ವಿಕ್ರಮಾದಿತ್ಯನೆಂದೂ ಬಿರುದಾಂಕಿತರಾಗಿದ್ದರು. ತನ್ನ ಗುಪ್ತಚರರಿಂದ ಚಂದ್ರಗುಪ್ತನ ಸೈನ್ಯಬಲವನ್ನು ತಿಳಿದುಕೊಂಡ ಮಹಾಶೂರ ವೀರ ಗ್ರೀಕ್ ರಾಜನಿಗೆ ಕೈಕಾಲು ನಡುಕ ಶುರುವಾಗಿ ಗಂಗೆಯನ್ನು ದಾಟದೇ ತನ್ನ ದಂಡಯಾತ್ರೆಯನ್ನು ಬಿಟ್ಟು ಓಡಿಹೋದನಂತೆ. ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲದ ಅಂತರವನ್ನು ಹೊಂದಿರುವ ಇಬ್ಬರು ಚಂದ್ರಗುಪ್ತರಿಗೆ ಎಲ್ಲಿಂದೆಲ್ಲಿಯ ಸಂಬಂಧವೋ ತಿಳಿಯುತ್ತಿಲ್ಲ. ಅಶೋಕನ ಕಥೆಯೂ ಅಷ್ಟೇ. ಇತಿಹಾಸದಲ್ಲಿ ಮೂವರು ಅಶೋಕರ ಉಲ್ಲೇಖವಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಕಾಶ್ಮೀರವನ್ನಾಳಿ ತದನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಗೋನಂದ ವಂಶದ ಧರ್ಮಾಶೋಕ ಮೊದಲಿನವನು. ಈತ ಕಾಶ್ಮೀರವನ್ನಾಳಿದ ನಲವತ್ತೆಂಟನೇ ಅರಸು. ಇವನ ಮರಿಮೊಮ್ಮಗನೇ ಕನಿಷ್ಕ ಚಕ್ರವರ್ತಿ. ಎರಡನೇಯವನು ಇದೇ ಕಾಲದಲ್ಲಿದ್ದ ಅಶೋಕವರ್ಧನನೆಂದು ಹೆಸರಾಗಿದ್ದ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಮೂರನೇಯವನು ನಾವು ಹೆಬ್ಬಂಡೆ ಶಸನಗಳನ್ನು ಬರೆಸಿದ ಅಂದುಕೊಳ್ಳುವ ಮಹಾಶೋಕನೆಂದು ಹೆಸರಾಗಿದ್ದ ಸಮುದ್ರಗುಪ್ತ. ಎಷ್ಟೋ ಶತಮಾನಗಳ ನಂತರ ಬಂದ ದೀಪವಂಶ ಎನ್ನುವ ಗ್ರಂಥ ಮತ್ತು ಅಶೋಕವದನದಂಥವುಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ ಸುಮಾರಿಗೆ ಇಡೀ ಭರತಖಂಡವನ್ನು ಏಕಚಕ್ರಾಧಿಪತ್ಯದಡಿ ತಂದು ಆಳಿದ ಸಮುದ್ರಗುಪ್ತನ ಕುರಿತಾದವೇ. ಇವನ ಜೀವನಚರಿತ್ರೆಯನ್ನು ಬರೆದ ಹರಿಸೇನ, ಕಲಿಯುಗ ರಾಜ ವೃತ್ತಾಂತ, ಕಲ್ಹಣನ ರಾಜತರಂಗಿಣಿಗಳೆಲ್ಲ ಅಶೋಕನನ್ನೇ ಹಾಡಿ ಹೊಗಳಿವೆ. ಬೌದ್ಧರ ಮಂಜುಷ್ರೀಮೂಲಕಲ್ಪದಲ್ಲಿರುವ ಹೆಸರು ಇದೇ ಸಮುದ್ರಗುಪ್ತನದ್ದೇ. ಈಗ ಅಶೋಕನ ಹೆಸರಲ್ಲಿ ಸಿಕ್ಕಿರುವ ಶಾಸನಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ್ದು. ಇದನ್ನು ನಂಬುವುದು ಬಿಡುವುದು ಆಮೇಲಿನ ಮಾತು ಆದರೆ ಆ ಕಾಲದಲ್ಲಿ ಸಮುದ್ರಗುಪ್ತನನ್ನು ಹೊರತುಪಡಿಸಿದರೆ ಅಶೋಕನೆಂಬ ಹೆಸರಿನ ಮತ್ತೊಬ್ಬ ರಾಜ ಭಾರತದಲ್ಲೇ ಇರಲಿಲ್ಲವೆಂಬುದು ಐತಿಹಾಸಿಕ ಸತ್ಯ. ಒಂದೇ ಹೆಸರಿನವರು ಎನ್ನುವ ಒಂದೇ ಕಾರಣಕ್ಕೆ ಯಾರ್ಯಾರನ್ನೋ ಎಲ್ಲೆಲ್ಲಿಗೋ ತಂದು ಏನೇನೋ ಬಿಡಿಸಲಾಗದ ಗೋಜಲು ಗೋಜಲಾಗಿಸಿದ ಕೀರ್ತಿಯೆಲ್ಲ ಮ್ಯಾಕ್ಸ್ ಮುಲ್ಲರ್, ವಿ..ಸ್ಮಿತ್, ಜೇಮ್ಸ್ ಪ್ರಿನ್ಸೆಪ್ ನಂಥವರು ಬ್ರಿಟಿಷ್ ಇತಿಹಾಸಕಾರರಿಗೆ ಸಲ್ಲಬೇಕು. ಹತ್ತಾರು ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಹುಟ್ಟುವ ಮೊದಲೇ, ಅಮೇರಿಕನ್ನರು ಕಣ್ಣುಬಿಡುವ ಮೊದಲೇ ಪ್ರಪಂಚದ ಹೆಚ್ಚಿನಕಡೆ ಬಟ್ಟೆಹಾಕದೇ ತಿರುಗುತ್ತಿದ್ದ ಕಾಲದಲ್ಲಿ ನಮ್ಮ ಕಣ್ಣು ಕೋರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಮಾಡಿ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು. ಅಂಥ ವೇದಕಾಲವನ್ನು ಎಳೆದು ಮೂರು ಸಾವಿರ ವರ್ಷದ ಹಿಂದೆ ತಂದುನಿಲ್ಲಿಸಿದ್ದಲ್ಲದೇ, ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದ ಕಾಲವನ್ನು ಮೂರು ಸಾವಿರ ವರ್ಷಗಳೀಚೆ ತಂದು, ಕ್ರಿ.ಪೂ 1800ರಲ್ಲಿ ಬದುಕಿದ್ದ ಬುದ್ಧನನ್ನು ಕ್ರಿ.ಪೂ 5ನೇ ಶತಮಾನದಲ್ಲಿ ಮತ್ತೊಮ್ಮೆ ಹುಟ್ಟಿಸಿ, ಕ್ರಿ.ಪೂ 1500ರಲ್ಲೇ ಸತ್ತು ಸ್ವರ್ಗ ಸೇರಿದ್ದ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರಿನ ಸಮಕಾಲೀನನನ್ನಾಗಿಸಿದ ತಥಾಕಥಿತ ಅಂದಿನ ಇತಿಹಾಸಕಾರರು ಮತ್ತು ಇಂದಿನ ಪ್ರಗತಿ ಪರರಿಗೆ ನಾವು ಶಹಬ್ಬಾಸ್ ಅನ್ನಲೇ ಬೇಕು. ಜಗತ್ತಿ ಯಾವ ದೇಶದ ಯಾವ ಮೂಲೆಗಾದರೂ ಹೋಗಿ ಹೇಳಿ ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಹಳೆಯದು, ನಿಮ್ಮ ಹಿರಿಯರು ಪ್ರಪಂಚ ಕಾಣದ ವೈಭವದಲ್ಲಿ ಶ್ರೇಷ್ಟ ನಾಗರಿಕತೆಯೊಂದನ್ನು ನಡೆಸಿದರುಎಂದು. ಖುಷಿಯಿಂದ ಕುಣಿದಾಡುತ್ತಾರೆ. ಅದೇ ಮಾತನ್ನು ನಮ್ಮವರಿಗೆ ಹೇಳಿದರೆ. ನಮಗಿನ್ನೂ ನಮ್ಮ ಪೂರ್ವಜರು ಎಲ್ಲಿಂದಲೋ ಬಂದು ದಾಳಿಮಾಡಿದವರು, ನಮ್ಮದು ದಟ್ಟ ದರಿದ್ರ ಅನಾಗರೀಕ ದೇಶ, ನಾವು ಸಂಸ್ಕೃತಿ ಕಲಿತಿದ್ದೇ ಬ್ರಿಟಿಷರಿಂದ ಎನ್ನುತ್ತೇವೆ ಆರ್ಯ ದ್ರಾವಿಡ ಎನ್ನುವ ಕಚ್ಚಾಟದಲ್ಲೇ ಸಾಯುತ್ತೇವೆ.

No comments:

Post a Comment