Search This Blog

Friday 15 December 2017

ಸಾಧುಪ್ರಿಯನಸಾಧುಜನ ವರ್ಜಿತನ್ - ಉದ್ಯಾವರದ ಶಾಸನ.

ಕನ್ನಡ ಸಾರಸ್ವತಲೋಕದಲ್ಲಿ ಒಂದು ಪ್ರಮುಖ ಶಾಸನವಾಗಿ ಗುರುತಿಸಿಕೊಂಡದ್ದು ಸುಮಾರು 8 ನೇ ಶತಮಾನದಲ್ಲಿ ಖಂಡರಿಸಲಾದ ಕಪ್ಪೆ ಅರಭಟ್ಟನ ಶಾಸನ. ಶಾಸನ ಇತಿಹಾಸದಲ್ಲಿಯೆ ದೊಡ್ದ ಮೈಲಿಗಲ್ಲನ್ನು ಸ್ಥಾಪಿಸಿತು. ಸಾಹಿತ್ಯದ ಅನೇಕ ಅಂಶಗಳನ್ನು ತನ್ನಲ್ಲಿ ಹೊದ್ದು ಮೈದಳೆದ ಈ ಶಾಸನ ಯಾರ ಕುರಿತಾಗಿ ಬರೆಯಲಾಗಿದೆ. ಮತ್ತು ಇದರಲ್ಲಿ ರೋದನ ಮತ್ತು ಕಿಚ್ಚು ಯಾಕಾಗಿ ಅನ್ನುವುದೂ ಸಹ ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅನೇಕರು ಅನೇಕ ವಿಧವಾಗಿ ವಿಶ್ಲೇಶಿಸಿದರೂ ಸಹ ಒಮ್ಮತದ ಅಭಿಪ್ರಾಯ ಬಹಳ ಕಡಿಮೆಯೇ ಸರಿ. ಒಂದು ಕಡೆ ತಾನು ಒಳ್ಳೆಯ ಜನರಿಗೆ ಒಳ್ಳೆಯವನಾಗಿಯೂ ದುರ್ಜನರಿಗೆ ಕೆಟ್ಟವನಾಗಿದ್ದೇನೆ ಅಂತ ಹೇಳಿಕೊಳ್ಳುತ್ತಾನೆ. ಇನ್ನೊಂದೆಡೆ ದಿನವೂ ಅವಮಾನದಿಂದ ಬದುಕುವುದಕ್ಕಿಂತ ಸಾಯುವುದೇ ಲೇಸು ಅನ್ನುತ್ತಾನೆ. ಇನ್ನೊಂದೆಡೆ ನಾನು ಬಲಿಷ್ಟನಾದ ಕಲಿ ಶೂರ ಎನ್ನುತ್ತಾನೆ. ಹೀಗೆ ವರ್ಣಿಸಿಕೊಂಡಿದ್ದರೂ ಇಡೀ ಶಾಸನ ಕನ್ನಡ ಭಾಷೆಗೆ ತ್ರಿಪದಿ ಛಂದಸ್ಸಿನ ರೇಖೆ ಹಾಕಿ ಕೊಟ್ಟದ್ದಂತೂ ನಿಜ. ಇದಕ್ಕೆ ಸಮಾನಾದ ಸಮಕಾಲೀನ ಶಾಸನವೆಂದು ಗುರುತಿಸಿಕೊಳ್ಳಬಹುದಾದದ್ದು ಉಡುಪಿ ಜಿಲ್ಲೆಯ ಉದ್ಯಾವರದ ಶಾಸನ. ಅಳುಪ ರಾಜ ವಂಶಸ್ಥನಾದ ಪಾಂಡ್ಯನ ಮಗ ದೇವು ಎನ್ನುವವನ ಕಾಲದ್ದು. ಬಾದಾಮಿ ಚಳುಕ್ಯರ ಎರಡನೇ ಪೊಲೆಕೇಶಿಯ ಕಪ್ಪೆ ಅರಭಟ್ಟನ ಶಾಸನದ ಕೆಲವು ಶಬ್ದಮಾಧುರ್ಯವನ್ನು ಹೊತ್ತಿರುವ ಶಾಸನ . ಹೇಳಿರುವ ವಿಧಾನ ಬೇರೆ ಆದರೂ ಅರ್ಥ ಮಾತ್ರ ಅದನ್ನೇ ಧ್ವನಿಸುತ್ತದೆ. ಕಪ್ಪೆ ಅರಭಟ್ಟನ ಶಾಸನ ಕಡೆದ ಶಿಲ್ಪಿಯೋ ಅಥವಾ ಕಪ್ಪೆ ಅರಭಟ್ಟನ ಶಾಸನದ ಸಾಹಿತ್ಯವನ್ನು ರಚಿಸಿದ ಕವಿಯ ಅನುಕರಣೆಯನ್ನು ಮಾಡಲಿಕ್ಕಾಗಿ ಅದನ್ನೇ ಧ್ವನಿಸುವ ನುಡಿಗಟ್ಟನ್ನು ಹಾಕಲಾಗಿದೆಯೋ ತಿಳಿಯದು. ಅದೇನೇ ಇರಲಿ ಕರಾವಳಿಯ ಜನರಿಗೆ ಸ್ವಲ್ಪ ಮಟ್ಟಿಗೆ ಸಾಹಿತ್ಯದ ರುಚಿಯನ್ನಂತೂ ಉಣ ಬಡಿಸಿದೆ. ಕಪ್ಪೆ ಅರಭಟ್ಟನ ಶಸನದ ಮೊದಲೆರಡು ಸಾಲಿನಲ್ಲಿ ಬರುವ "ಶಿಷ್ಟಜನ ಪ್ರಿಯನ್ ಕಷ್ಟಜನ ವರ್ಜಿತನ್" ಎನ್ನುವುದೇ ಉದ್ಯಾವರ ಶಾಸನದಲ್ಲಿ "ಸಾಧುಪ್ರಿಯನಸಾಧುಜನ ವರ್ಜಿತನ್" ಎಂದು ಉಲ್ಲೇಖವಾಗಿದೆ.
ಕಪ್ಪೆ ಅರಭಟ್ಟನ ಶಾಸನ ಎನ್ನುವುದು ಶಾಸನ ಪ್ರಬೇಧದಲ್ಲಿ ದ್ವಿಭಾಷಾ ಶಾಸನ ಹತ್ತು ಸಾಲುಗಳ ಈ ಶಾಸನದಲ್ಲಿ ಮೂರು ಮತ್ತು ನಾಲ್ಕನೇ ಸಾಲಿನ ಒಂದು ಪದ್ಯ ಸಂಸ್ಕೃತದಲ್ಲಿದ್ದರೆ, ಉಳಿದ ನಾಲ್ಕು ಪದ್ಯಗಳು ಕನ್ನಡದಲ್ಲಿವೆ. ಕನ್ನಡ ಪಠ್ಯದಲ್ಲಿ ಹತ್ತು ಸಂಸ್ಕೃತ ಪದಗಳು, ಕನ್ನಡ ಪ್ರತ್ಯಯಾಂತದ ಹತ್ತು ಪದಗಳು, ಸಂಸ್ಕೃತ ಪಠ್ಯದಲ್ಲಿ ಸುಮಾರು ೩೦ ಕನ್ನಡ ಪದಗಳಿವೆ. ಏಳು ಮತ್ತು ಒಂಬತ್ತನೇ ಸಾಲುಗಳಲ್ಲಿ ಒಂದೂ ಸಂಸ್ಕೃತ ಪದವಿಲ್ಲ. ಇವೆಲ್ಲವೂ ಕೂಡಿ ಇದನ್ನೊಂದು ಮಿಶ್ರಭಾಷಾ ಶಾಸನ ಎಂದು ಪರಿಗಣಿಸಬಹುದು. ಮಾತ್ರವಲ್ಲ, ನಾಲ್ಕು ಕನ್ನಡ ಪದ್ಯಗಳ ಮಧ್ಯ ಒಂದು ಸಂಸ್ಕೃತ ಪದ್ಯವನ್ನಿರಿಸಿ ಇದನ್ನು ಸಂಸ್ಕೃತ ಮತ್ತು ಕನ್ನಡದ ಉಭಯ ಭಾಷಾ ಶಾಸನವನ್ನಾಗಿಸಿವೆ. ಆದರೆ ಉಳಿದ ಸಾಂಪ್ರಾದಾಯಿಕ ಉಭಯಭಾಷಾ ಶಾಸನಗಳಿಗಿಂತ ಇದು ಭಿನ್ನವಾಗಿದೆ, ಏಕೆಂದರೆ ಇಲ್ಲಿ ಶಾಸನದ ಪೂರ್ವಾರ್ಧ ಮತ್ತು ಉತ್ತರಾರ್ಧವನ್ನು ಭಾಷೆ ನಿರ್ಧರಿಸಿಲ್ಲ.
ಕಪ್ಪೆ ಅರಭಟ್ಟನ ಶಾಸನ ಪಾಠ
1. ಕಪ್ಪೆ ಅರಭಟ್ಟನ್ ಶಿಷ್ಟಜನ ಪ್ರಿಯನ್
2. ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್
3. ವರನ್ತೇಜಸ್ವಿನೋ ಮೃತ್ತ್ಯುರ್ನತು ಮಾನಾವಖಣ್ಡನಮ್
4. ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ ದಿನೇ ದಿನೇ
5. ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯ್ಯಂ ಬಾಧಿಪ್ಪ
6. ಕಲಿಗೆ ಕಲಿಯುಗ ವಿಪರೀತನ್ಮಾಧವನೀತನ್ಪೆಱನಲ್ಲನ್
7. ಒಳಿತ್ತ ಕೆಯ್ವೊರಾರ್ಪ್ಪೊಲ್ಲದುಮದಱನ್ತೆ ಬಲ್ಲಿತ್ತು ಕಲಿಗೆ
8. ವಿಪರೀತಾ ಪುರಾಕೃತಮಿಲ್ಲಿ ಸನ್ಧಿಕ್ಕುಮದು ಬಂದುಮ್
9. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆನ್ದು ಬಿಟ್ಟವೋಲ್ಕಲಿಗೆ ವಿ
10. [ಪ]ರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಮ್
ಕಲಿಯುಗ ವಿಪರೀತನು ಎಂದು ಖ್ಯಾತನಾದ ಕಪ್ಪೆ ಅರಭಟ್ಟನು ಒಳ್ಳೆಯ ಜನರಿಗೆ ಬೇಕಾದವನು, ಕೆಟ್ಟ ಜನರಿಗೆ ಬೇಡವಾದವನು, ತೇಜಸ್ವಿಯಾದವನಿಗೆ (ತನಗೆ) ಸಾಯುವುದು ಲೇಸು, ಆದರೆ ಮಾನಭಂಗವಲ್ಲ(ಮಾನಭಂಗಕ್ಕಿಂತ ಸಾವು ಲೇಸು); ಸಾವಿನ ದುಃಖ ಆ ಕ್ಷಣದ್ದು. ಮಾನಭಂಗದ ದುಃಖ ಪ್ರತಿದಿನದ್ದು ಎಂದು ಆತ ತಿಳಿದಿದ್ದ, ಸಜ್ಜನನಾದ ಸಾಧುವಾದವನ ವಿಷಯದಲ್ಲಿ ತಾನೂ ಸಾಧುವಾದವನು. ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳವನ ವಿಷಯದಲ್ಲಿ ತಾನೂ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನುಳ್ಳವನು ಅಥವಾ ದೊಡ್ಡವರ ನಡುವೆ ತಾನೂ ದೊಡ್ದವ. ತೊಂದರೆ ಕೊಡಬಲ್ಲ ಶೂರನಿಗೆ, ಕಲಿಯುಗ ವಿಪರೀತನೆನಿಸಿದ ಕಪ್ಪೆ ಅರಭಟ್ಟ ಸಾಕ್ಷಾತ್ ವಿಷ್ಣು, ಬೇರೆಯಲ್ಲ. ಈತನ ಹಾಗೆ ಒಳ್ಳೆಯದನ್ನು ಮಾಡುವವರು ಯಾರು? ಹಾಗೆಯೇ ಕೆಟ್ಟದ್ದು ಏನುಂಟು, ಅದಕ್ಕೆ ತಕ್ಕ ಫಲ ಈತನ ಕೈಯಲ್ಲಿ ಅವರಿಗೆ ಸಿಕ್ಕುತ್ತದೆ. ನಮಗೆ ಇದರಿಂದ ಕೆಡುಕೇನು? - ಎಂದು ಕಟ್ಟಿಹಾಕಿದ ಸಿಂಹವನ್ನು ಕಟ್ಟು ಕಳಚಿ ಬಿಟ್ಟ ಹಾಗೆ, ಕಲಿಯುಗ ವಿಪರೀತನಿಗೆ ಎದುರುಬಿದ್ದು ಆತನ ಶತ್ರುಗಳು ತಮ್ಮ ಅವಿವೇಕದಿಂದ ಹಾಳಾದರು, ಸತ್ತರು. ಇದು ಶಾಸನದ ಸಾಮಾನ್ಯ ಅರ್ಥ.

No comments:

Post a Comment