Search This Blog

Tuesday 5 December 2017

ಪುರುಷೋತ್ತಮ ಪುರಿಯ ದಿವ್ಯ ಜ್ಯೋತಿ.

ಸುಮಾರು ಹನ್ನೊಂದನೇ ಶತಮಾನದ ನಂತರದಲ್ಲಿ ಪ್ರಚಲಿತಕ್ಕೆ ಬಂದ ಕಥೆ ಇದು ಅನ್ನಿಸುತ್ತದೆ. ಇಂತಹದ್ದೇ ಅನೇಕ ಕಥೆಗಳಿವೆ ಅವುಗಳಲ್ಲಿ ಒಂದನ್ನು ಆಯ್ದುಕೊಂಡಿದ್ದೇನೆ. ಮೂಲ ಇದು ನನ್ನದಲ್ಲ ಇದನ್ನು ಬಹಳ ಹಿಂದೆ ಶ್ರೀಯುತ ವಿ ಆರ್ ಭಟ್ಟರು ಕೂಡ ಬರೆದಿದ್ದರು. ನಾನಿದನ್ನು ಜರ್ನಲ್ ಒಂದರಲ್ಲಿರುವುದನ್ನು ಕನ್ನಡೀಕರಿಸಿಕೊಂಡಿದ್ದೇನೆ. ಇಲ್ಲಿ ಬರುವ ಇಂದ್ರದ್ಯುಮ್ನ ಗಜೇಂದ್ರ ಮೋಕ್ಷ ಕಥೆಯಲ್ಲೂ ಬರುತ್ತಾನೆ ಅನ್ನಿಸುತ್ತದೆ. ವಿದ್ಯಾಪತಿ ಎನ್ನುವವ ಒಬ್ಬ ಕವಿಯೂ ಇದ್ದ. ಆದರೆ ಅದೇ ಕಥೆ ಇದಿರಬಹುದೋ ಏನೋ ಗೊತ್ತಿಲ್ಲ ನೀವೇ ಓದಿ ತೀರ್ಮಾನಿಸಿಕೊಳ್ಳಿ.
ಅವಂತೀ ಪ್ರದೇಶವನ್ನು ಇಂದ್ರದ್ಯುಮ್ನನೆನ್ನುವ ದೈವಭಕ್ತ ರಾಜನೊಬ್ಬ ಆಳುತ್ತಿದ್ದ. ಪ್ರಜಾರಾಧಕನಾದ ಆತನಿಗೆ ಅವನ ದೇಶದಲ್ಲಿ ಹಾದುಹೋಗುತ್ತಿದ್ದ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿ ಹೋಗುತ್ತಿದ್ದ ಜನರ ಮೂಲಕ ಪುರುಷೋತ್ತಮ ಕ್ಷೇತ್ರದಲ್ಲಿ ತ್ರಿಲೋಕೀನಾಥನ ಸಾಕ್ಷಾತ್ ದರ್ಶನವಾಗುವುದೆನ್ನುವ ವಿಷಯ ತಿಳಿದುಬರುತ್ತದೆ. ಪುರುಷೋತ್ತಮ ಕ್ಷೇತ್ರದ ಬಗ್ಗೆ ಎಲ್ಲರೂ ಹೇಳುತ್ತಾರೆ ಆದರೆ ಅದು ಯಾವ ಕ್ಷೇತ್ರದಲ್ಲಿದೆ ಎನ್ನುವ ಬಗ್ಗೆ ಯಾರೂ ಹೇಳುವವರೇ ಇಲ್ಲವಾಗಿದ್ದರು. ಹೀಗಾಗಿ ಪುರುಷೋತ್ತಮ ಕ್ಷೇತ್ರ ಕೇವಲ ಕಲ್ಪನೆಯಂತಾಗಿತ್ತು. ಇಂದ್ರದ್ಯುಮ್ನನಿಗೆ ಆ ಕ್ಷೇತ್ರವನ್ನು ಸ್ವತಃ ನೋಡಿ ತಿಳಿಯುವ ಮನಸ್ಸಾಯ್ತು. ವಿದ್ಯಾಪತಿ ಎನ್ನುವವನನ್ನು ಕರೆದು ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುವಂತೇ ಕೇಳಿಕೊಂಡ.
ಒಂದು ಶುಭಮುಹೂರ್ತಲ್ಲಿ ವಿದ್ಯಾಪತಿ ಪುರುಷೋತ್ತಮ ಕ್ಷೇತ್ರವನ್ನು ಹುಡುಕುತ್ತಾ ಹೊರಟ. ನೂರಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ ನಂತರ ವಿದ್ಯಾಪತಿ ಭುವನೇಶ್ವರಕ್ಕೆ ತಲುಪಿದ. ಅಲ್ಲಿಯ ನೀಲಾದ್ರಿ ಪರ್ವತದಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿದ್ದಾನೆಂದು ಅವನಿಗೆ ಅಲ್ಲಿನವರು ತಿಳಿಸಿದರು. ವಿದ್ಯಾಪತಿ ಅಲ್ಲಿನ ದುರ್ಗಮ ಅರಣ್ಯವನ್ನು ದಾಟಿ ನೀಲಾದ್ರಿ ಪರ್ವತವನ್ನು ತಲುಪಿದಾ, ಅಲ್ಲಿನ ಪ್ರಾಚೀನ ಮೂಲನಿವಾಸಿಗಳಾದ ಸಬರ್ ಜನಾಂಗದ ರಾಜನಿಗೆ ತ್ರಿಲೋಕೀನಾಥನ ಸ್ಥಾನ ಗೊತ್ತೆಂಬ ವಿಚಾರ ಗೊತ್ತಾಗುತ್ತದೆ. ಒಮ್ಮೆ ಸಬರ್ಜನಾಂಗದ ರಾಜ ಸಮುದ್ರದಲ್ಲಿ ತನ್ನ ನೌಕೆಗಳೊಂದಿಗೆ ಹೋಗುತ್ತಿದ್ದಾಗ, ಅಕಸ್ಮಾತ್ ಸಮುದ್ರದಲ್ಲಿ ಒಂದು ಜ್ಯೋತಿಯ ದರ್ಶನವಾಯಿತು. ದೊಡ್ದ ದೊಡ್ದ ಅಲೆಗಳ ನಡುವೆಯೂ ಆ ಜ್ಯೋತಿ ಅಲುಗಾಡದೇ ಮಿನುಗುತ್ತಿತ್ತು. ಜ್ಯೋತಿ ಕಂಡ ಕಡೆಗೆ ಸಾಗಿದ ಸಬರ್ ರಾಜ ತದೇಕಚಿತ್ತದಿಂದ ಜ್ಯೋತಿಯೆದುರು ನಿಂತುಬಿಟ್ಟ. ಸಾಕ್ಷಾತ್ ಈಶ್ವರನನ್ನೇ ಕಂಡ ಹಾಗಾಯಿತು ಆತನಿಗೆ. ಇದಾದ ಬಳಿಕ ಪ್ರತಿದಿನವೂ ರಾಜ ಸಮುದ್ರದೆಡೆಗೆ ತೆರಳುತ್ತಿದ್ದ, ಜ್ಯೋತಿ ನಿತ್ಯವೂ ಕಾಣಿಸುತ್ತಿತ್ತು. ಪ್ರತಿ ದಿನವೂ ರಾಜ ಸಮುದ್ರಕ್ಕೆ ಹೋಗುವುದನ್ನು ಗಮನಿಸಿದ ರಾಜ ಪರಿವಾರ ಆ ದಿವ್ಯ ಜ್ಯೋತಿಯನ್ನು ಊರಿನಲ್ಲೇ ಸ್ಥಾಪಿಸಿಬಿಡಿ ಎಂದು ಸಲಹೆ ಇತ್ತರು. ಸಲಹೆಯೇನೋ ಒಳ್ಳೆಯದೆನ್ನಿಸಿತು ರಾಜನಿಗೆ. ಆದರೆ ಸಾಕ್ಷಾತ್ ಈಶ್ವರನ ಪರಂಜ್ಯೋತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯಲ್ಲವೆಂದು ಭಾವಿಸಿದ. ಜ್ಯೋತಿಯನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸ್ಥಾಪಿಸಬೇಕೆಂದೂ ಅದರ ಮಾಹಿತಿಯನ್ನು ಸಹ ಗೌಪ್ಯವಾಗಿಟ್ಟು ಸ್ವತಃ ರಾಜ ಮಾತ್ರ ಅದನ್ನು ಪೂಜಿಸಬೇಕೆಂದೂ ನಿರ್ಧರಿಸಲಾಯ್ತು. 
ಕೊನೆಗೆ ಕಾಡಿನ ಮಧ್ಯದ ಗುಹೆಯೊಂದರಲ್ಲಿ ರಾಜ ಜ್ಯೋತಿಯನ್ನು ಸ್ಥಾಪಿಸಿದ. ದಿನಾಲೂ ಗುಟ್ಟಾಗಿ ಅಲ್ಲಿಗೆ ಹೋಗಿ ಪೂಜಿಸಿ ಬರುತ್ತಿದ್ದ. ಜ್ಯೋತಿ ಅಲ್ಲಿಗೆ ಸೇರಿದ ಕೆಲವೇ ದಿನಗಳಲ್ಲಿ ಸಬರ್ ಪ್ರದೇಶ ಪೂರ್ತಿ ಬದಲಾಯ್ತು. ಎಲ್ಲ ಕಡೆಯಲ್ಲಿಯೂ ಸುಖ ಸಮೃದ್ಧಿ ನೆಲೆಸತೊಡಗಿತು. ಇದೆಲ್ಲವೂ ಆ ಜ್ಯೋತಿಯ ಮಹಿಮೆಯೆಂದು ಅಲ್ಲಿನ ಜನ ಹೇಳತೊಡಗಿದರು. ಜ್ಯೋತಿ ಇರುವ ಜಾಗದ ರಹಸ್ಯ ಬಹಿರಂಗಗೊಳ್ಳಬಾರದೆಂದು ಸ್ವತಃ ತಾವೂ ಆ ಜಾಗವನ್ನು ನೋಡದಿರಲು ನಿರ್ಧರಿಸಿದರು. ಪುರುಷೋತ್ತಮ ಕ್ಷೇತ್ರಇದೇ ಎಂದು ವಿದ್ಯಾಪತಿಗೆ ಖಚಿತವಾಯ್ತು. ದಿವ್ಯಜ್ಯೋತಿಯ ದರ್ಶನ ಪಡೆಯುವುದು ಮಾತ್ರವೇ ಬಾಕಿ ಉಳಿಯಿತು. ಆತ ಸಬರ್ ರಾಜನನ್ನು ಭೇಟಿ ಆದ, ಅಲ್ಲಿ ಆತ ಜ್ಯೋತಿಯನ್ನು ತೋರಿಸುವಂತೆ ಸಬರ್ ರಾಜನೊಡನೆ ಹಲವು ಬಾರಿ ವಿನಂತಿಸಿದ. ಆದರೆ ರಾಜ ಪ್ರತೀ ಸಲವೂ ತಪ್ಪಿಸಿಕೊಳ್ಳುತ್ತಿದ್ದ. ವಿದ್ಯಾಪತಿ ಸಬರ್ ರಾಜನ ಅತಿಥಿ ಗೃಹದಲ್ಲೇ ತಂಗಿದ್ದ. ಒಂದು ವರ್ಷ ಪರ್ಯಂತ ರಾಜನಲ್ಲಿ ಬಿಟ್ಟೂ ಬಿಡದೇ, ಜ್ಯೋತಿಯನ್ನು ತೋರಿಸುವಂತೇ ವಿನಂತಿಸುತ್ತಿದ್ದರೂ, ಏನಾದರೂ ನೆಪವೊಡ್ಡಿ ರಾಜ ತಪ್ಪಿಸಿಕೊಳ್ಳುತ್ತಿದ್ದ. ಸಬರ್ ರಾಜನಿಗೆ ಲಲಿತೆಯೆಂಬ ಒಬ್ಬಳು ಮಗಳಿದ್ದಳು. ಅತಿಥಿ ಬ್ರಾಹ್ಮಣನ ಸತ್ಕಾರದಲ್ಲಿ ಯಾವುದೇ ಕೊರತೆ ಉಂಟಾಗದಂತೆ ರಾಜ ಮಗಳಿಗೆ ಮೊದಲೇ ಹೇಳಿದ್ದ. ಲಲಿತೆ ಆ ಪ್ರಕಾರ, ಅತಿಥಿಯ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಳು. ದೈನಿಕ ಜಪ-ತಪಗಳ ನಂತರ ವಿದ್ಯಾಪತಿ ನಗರಕ್ಕೆ ಸಂಚಾರ ಹೊರಡುತ್ತಿದ್ದ. ವಿದ್ಯಾಪತಿ ಕುಶಲಶಿಲ್ಪಿಯಾಗಿದ್ದು, ಮೂರ್ತಿ ಮಾಡಲುಬೇಕಾದ ಎಲ್ಲಾ ಸಾಮಗ್ರಿಗಳನ್ನು ತರಿಸಿಕೊಂಡು ಅತಿಥಿಗೃಹದಲ್ಲೇ ಕಲ್ಲಿನ ಮೂರ್ತಿಯೊಂದನ್ನು ನಿರ್ಮಿಸತೊಡಗಿದ. ಒಂದು ದಿನ ಲಲಿತೆಯನ್ನು ಅಲ್ಲಿಗೆ ಬರಹೇಳಿ, ಮೂರ್ತಿಯಮೇಲಿನ ಪರದೆಯನ್ನು ಏರಿಸುವಂತೇ ಸೂಚಿಸಿದ. ಪರದೆ ಸರಿಯುತ್ತಲೇ, ಎದುರಿಗೆ ಕೈಯ್ಯಲ್ಲಿ ಲೆಕ್ಕಣಿಕೆ ಹಿಡಿದು ಕಾಗದ ಬರೆಯುತ್ತಿರುವ ತನ್ನದೇ ಮೂರ್ತಿಯನ್ನು ಕಂಡು ದಂಗಾದಳು! "ನಾನು ಪತ್ರಬರೆಯುವುದನ್ನು ಯಾವಾಗ ನೋಡಿದಿರಿ? ಈ ಮೂರ್ತಿಯನ್ನು ಯಾವಾಗ ತಯಾರಿಸಿದಿರಿ ? ನೀವು ಗುಟ್ಟಾಗಿ ನನ್ನ ಕೋಣೆಗೆ ಬರುತ್ತಿದ್ದಿರಾ?" ಎಂದು ಕೇಳಿದಳು. ಅದು ತನ್ನ ಕಲ್ಪನೆಯ ಪರಿಣಾಮವೆಂದೂ, ನೋಡಿದಂದಿನಿಂದ ತನ್ನಲ್ಲಿ ಲಲಿತೆಯೇ ತುಂಬಿಕೊಂಡು ಎಲ್ಲೆಲ್ಲೂ ಅವಳೇ ಕಾಣುತ್ತಾಳೆಂದೂ, ತಾನು ಲಲಿತೆಯನ್ನು ಹಾರ್ದಿಕವಾಗಿ ಪ್ರೀತಿಸುತ್ತೇನೆಂದೂ ತಿಳಿಸಿದ. ವಿದ್ಯಾಪತಿ ಅವಳಿಗೆ ಪ್ರೀತಿಯ ಆಮಿಷವೊಡ್ಡಿ ಜ್ಯೋತಿಯ ದರ್ಶನ ಪಡೆಯುವ ಮಸಲತ್ತು ನಡೆಸಿದ್ದ; ವಾಸ್ತವವಾಗಿ ಅವನಿಗೆ ಅವಳಮೇಲೆ ಪ್ರೀತಿಯೇನೋ ಇರಲಿಲ್ಲ. ಆದರೆ ಲಲಿತೆ ವಿದ್ಯಾಪತಿಯನ್ನು ಬಹಳವಾಗಿ ಮೆಚ್ಚಿದ್ದಳು; ಪ್ರೀತಿಸುತ್ತಿದ್ದಳು. ವಿದ್ಯಾಪತಿಗೆ ಬರೆದ ಪ್ರೇಮಪತ್ರವನ್ನು ನಾಚಿಕೆಯಿಂದ ಕೊಟ್ಟಿರಲಿಲ್ಲ; ಈಗ ಆ ಪತ್ರವನ್ನು ಅವಳು ವಿದ್ಯಾಪತಿಗೆ ಕೊಟ್ಟಳು. ಪತ್ರದ ಪ್ರತೀ ಪದವೂ ಪ್ರೀತಿಯ ಮೇರುವನ್ನು ತೋರುತ್ತಿತ್ತು, ಆದರೆ ವಿದ್ಯಾಪತಿಗೆ ದಿವ್ಯ ಜ್ಯೋತಿಯ ದರ್ಶನ ಪಡೆಯುವ ಉಪಾಯಗಳ ಬಗ್ಗೆ ಮಾತ್ರ ಮನಸ್ಸು ಮುಂದಾಗಿತ್ತು. ಪ್ರೀತಿಯ ಬಲೆಯಲ್ಲಿ ತನ್ನ ಕೆಲಸ ಪೂರ್ಣವಾಗುವುದೆಂದು ಆತ ನಂಬಿದ. ವಿದ್ಯಾಪತಿಯ ಸೂಚನೆಯಂತೇ, ಅವನಿಗೆ ಜ್ಯೋತಿಯ ದರ್ಶನ ಮಾಡಿಸಬೇಕೆಂದು ಲಲಿತೆ ದಿನಾಲೂ ತಂದೆಯನ್ನು ಒತ್ತಾಯಿಸತೊಡಗಿದಳು. ಆದರೆ ರಾಜ ತನ್ನ ನಿರ್ಧಾರದಿಂದ ಕದಲಲಿಲ್ಲ. ವಿದ್ಯಾಪತಿಯ ಒತ್ತಾಯವೂ ಹೆಚ್ಚುತ್ತ ಹೋಯ್ತು. ಕಟ್ಟಕಡೆಗೆ ಲಲಿತೆ ಸಿಟ್ಟಿನಿಂದ "ನಾಳೆ ನೀವು ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸದೇ ಹೋದ ಪಕ್ಷದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ" ಎಂದಳು. ಸಬರ್ ರಾಜನಿಗೆ ಬೇರಾವುದೇ ದಾರಿ ಉಳಿಯಲಿಲ್ಲ; ಮಗಳೆಂದರೆ ಅವನಿಗೆ ಸರ್ವಸ್ವ. ಹೆಂಡತಿ ಸತ್ತ ಬಳಿಕ ಮಗಳಿಗಾಗಿಯೇ ಆತ ಬದುಕಿದ್ದ. ಅವಳ ಬಾಯಿಂದ ಇಂಥಾ ಕಠೋರ ವಚನವನ್ನು ಕೇಳಿ ರಾಜ ನಿರುಪಾಯನಾಗಿ, ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸಲು ಒಪ್ಪಿಕೊಂಡ. ಆದರೆ ಜ್ಯೋತಿಯಿರುವ ಜಾಗದವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ಹೋಗಬೇಕೆಂದು ಷರತ್ತುವೊಡ್ಡಿದ. ವಿದ್ಯಾಪತಿಗೆ ಈ ವಿಷಯ ಹೇಳಿ ಲಲಿತೆ ಮುಗುಳುನಕ್ಕು ಅವನ ಕೈಲಿ ಒಂದು ಮುಷ್ಠಿ ಸಾಸಿವೆ ಬೀಜಗಳನ್ನಿಡುತ್ತಾ ದಾರಿಯುದ್ದಕ್ಕೂ ಅವುಗಳನ್ನು ಚೆಲ್ಲುತ್ತಾ ಹೋಗಲು ತಿಳಿಸಿದಳು. ಗುಹೆಗೆ ತಲುಪುತ್ತಲೇ ಸಬರ್ ರಾಜ ವಿದ್ಯಾಪತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಡಿಸಿದ. ಪರಬ್ರಹ್ಮ ಪರಮೇಶ್ವರ ಸ್ವರೂಪಿಯಾದ ಆ ಜ್ಯೋತಿಯನ್ನು ಕಂಡು ವಿದ್ಯಾಪತಿ ಭಾವಾವಿಷ್ಟನಾದ. ರಾಜನಿಗೆ ಶಾಸ್ತ್ರಗಳ ಜ್ಞಾನವಿರಲಿಲ್ಲ; ಆದರೆ ವಿದ್ಯಾಪತಿಗೆ ಅವು ತಿಳಿದಿದ್ದವು. ದಿವ್ಯದೇಹಧಾರಿಯಾದ ಪರಮಪಿತ ಪರಮೇಶ್ವರ ಸಾಕ್ಷಾತ್ ಎದುರುನಿಂತ ಹಾಗನ್ನಿಸಿತು-ವಿದ್ಯಾಪತಿಗೆ; ಒಂದಷ್ಟೂ ಅಲುಗಾಡದೇ ಭಗವಂತನನ್ನು ಆತ ಸ್ತುತಿಸತೊಡಗಿದ. ಎಷ್ಟೋ ತಾಸುಗಳ ಬಳಿಕ ಸಬರ್ ರಾಜ ವಿದ್ಯಾಪತಿಯನ್ನು ಅಲ್ಲಾಡಿಸಿದ. ನಂತರ ಇಬ್ಬರೂ ಅರಮನೆಗೆ ಮರಳಿದರು. ಈ ವಿಷಯವನ್ನು ಬೇರ್ರಾರಿಗೂ ಹೇಳುವುದಿಲ್ಲವೆಂದು ಪ್ರತಿಜ್ಞೆಮಾಡುವಂತೇ ಸಬರ್ ರಾಜ ವಿದ್ಯಾಪತಿಯನ್ನು ಒತ್ತಾಯಿಸುತ್ತಿದ್ದ. ಆದರೆ ವಿದ್ಯಾಪತಿ ವಿಷಯಾಂತರ ಮಾಡುತ್ತಾ ನುಣುಚಿಕೊಂಡ. ಅವನ ಉದ್ದೇಶ ಈಡೇರಿತ್ತು. ತಾನಿನ್ನು ಊರಿಗೆ ಹೊರಡುವೆನೆಂದ. ತಡೆಯಲು ಲಲಿತೆ ಅದೆಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳಿಗೆ ಸುಳ್ಳು ಭರವಸೆ ಇತ್ತು ಆತ ಹೊರಟೇಹೋದ. ಇಂದ್ರದ್ಯುಮ್ನ ರಾಜನಿಗೆ ಪುರುಷೋತ್ತಮ ಕ್ಷೇತ್ರದ ದಿವ್ಯಜ್ಯೋತಿಯ ಕತೆ ಹೇಳಿದಾಗ ಅವನ ಕಂಗಳಿಂದ ಶ್ರದ್ಧೆಯ ಕಣ್ಣೀರು ಉಕ್ಕಿಬಂತು. ತನ್ನ ಸೈನ್ಯದೊಂದಿಗೆ ಆ ಸ್ಥಾನಕ್ಕೆ ಆತ ಹೊರಟುನಿಂತೇಬಿಟ್ಟ. ನೀಲಾದ್ರಿ ಪರ್ವತ ಅತಿ ಫಲವತ್ತಾದ ಪ್ರದೇಶ. ಅಲ್ಲಲ್ಲಿ ಹಣ್ಣಿನ ಮರಗಳು ಕಾಣಿಸುತ್ತಿದ್ದವು. ಬೇಸಾಯ ಪ್ರಾಕೃತಿಕ ರೂಪದಲ್ಲೇ ನಡೆಯುತ್ತಿತ್ತು. ವಿದ್ಯಾಪತಿ ಚೆಲ್ಲಿದ್ದ ಸಾಸಿವೆ ಬೀಜಗಳಿಂದ ಗಿಡಗಳು ಹುಟ್ಟಿಬಂದಿದ್ದವು. ದಾರಿ ಸುಲಭವಾಗಿ ತಿಳಿಯುತ್ತಿತ್ತು. ರಾಜ ಇಂದ್ರದ್ಯುಮ್ನ ಅಲೌಕಿಕ ಪರಮಜ್ಯೋತಿಯ ದಿವ್ಯದರ್ಶನ ಪಡೆಯಲು ಕಾತುರನಾಗಿದ್ದ. ಅತ್ಯುತ್ಸಾಹದಲ್ಲಿ ಧಾವಿಸುವ ಭರದಲ್ಲಿ ಸಬರ್ ರಾಜನಿಗೆ ಸಂದೇಶ ಕಳಿಸುವ ಪರಂಪರೆಯನ್ನೂ ಆತ ಮರೆತುಬಿಟ್ಟಿದ್ದ. ರಾಜ ವಿದ್ಯಾಪತಿಯೊಂದಿಗೆ ವೇಗವಾಗಿ ಮುಂದೆಸಾಗಿದ. ಎಲ್ಲವೂ ಮೊದಲಿನಂತೆಯೇ ಇದ್ದವು. ಅಕ್ಕಪಕ್ಕದ ಕಲ್ಲುಗಳೂ ವಿದ್ಯಾಪತಿ ಕೆಲದಿನಗಳ ಹಿಂದೆ ಕುಳಿತು ಧ್ಯಾನಿಸಿದ್ದ ಜಾಗವೂ ಹಾಗೆಯೇ ಇದ್ದವು. ಆತ ಆಚಮನಕ್ಕಾಗಿ ಬಳಸಿ ಮತ್ತೆ ತೊಳೆದಿರಿಸಿದ ತಾಮ್ರದ ಪುಟ್ಟಪಾತ್ರೆಯೂ ಹಾಗೇ ಅಲ್ಲೇ ಇತ್ತು. ಆದರೆ ಅಲ್ಲಿ ಆ ದಿವ್ಯಜ್ಯೋತಿಮಾತ್ರ ಇರಲಿಲ್ಲ. ಅದು ಅಲ್ಲಿಂದ ಅಂತರ್ಧಾನವಾಗಿತ್ತು. ಇಂದ್ರದ್ಯುಮ್ನ ನಿರಾಶನಾದ. ವಿದ್ಯಾಪತಿ ಚಿಂತಾಮಗ್ನನಾದ, ಅವನು ಲಲಿತೆಯನ್ನು ವಂಚಿಸಿದ್ದೂ ಅಲ್ಲದೇ ಸಬರ್ ರಾಜನಿಗೂ ವಿಶ್ವಾಸಘಾತಕ ಕೃತ್ಯ ಅಮಾಡಿದ್ದ; ಯಾವುದೇ ಸ್ವಾರ್ಥವಿಲ್ಲದೇ ಕೇವಲ ತನ್ನ ರಾಜ್ಯದ ರಾಜನ ಸಲುವಾಗಿಯೇ ಹಾಗೆ ಮಾಡಿದ್ದರೂ ಜನ್ಮಾಂತರಗಳಲ್ಲಾದರೂ ಅದರ ಪಾಪವನ್ನು ಅನುಭವಿಸಬೇಕಾಗುತ್ತದೆ ಎಂಬುದು ಆತನಿಗೆ ಸ್ಪಷ್ಟವಾಗಿತ್ತು; ಆತ ಪದ್ಮಾಸನದಲ್ಲಿ ಕುಳಿತು ಈಶ್ವರನ ಕ್ಷಮೆಯಾಚಿಸಿದ. ಕಾಣದ ಆ ದಿವ್ಯ ಜ್ಯೋತಿಯನ್ನು ರಾಜಾ ಇಂದ್ರದ್ಯುಮ್ನ ಕನಸಿನ ರೂಪದಲ್ಲಿ ಕಂಡ. ಕನಸಿನಲ್ಲಿ ಜಗನ್ನಾಥಸ್ವಾಮಿ ಕಾಣಿಸಿಕೊಂಡು ಸೂಚಿಸಿದಂತೇ  ರಾಜಾ ಇಂದ್ರದ್ಯುಮ್ನ ಮುಂದೆ, ಪುರಿಯಲ್ಲಿ ಜಗನ್ನಾಥ ಮಂದಿರವನ್ನು ನಿರ್ಮಿಸಿ ಅದರಲ್ಲಿ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ.    


ಪುರುಷೋತ್ತಮ ಪುರಿಯ ಶಾಸನ ೧೨ನೇ ಶತಮಾನ.

ನಿರತಿಶಯ ನಿರಂತಾನಂದಚಿತ್ತಸ್ವರೂಪಃ ಪ್ರಬಲ ವಿಮಲಸತ್ವ ಸ್ವೀಕೃತವ್ಯಕ್ತ ಶಕ್ತಿಃ |
ಪರಮ ರಮಣಮಂಗಂ ಮಂಗಲಾನಾಂ ನಿಧಾನಂ ದಧದಧರಿತ ಸೇವ್ಯಃ ಸೇವ್ಯತಾಂ ಶಾಙ್ರ್ಗಪಾಣಿಃ ||



No comments:

Post a Comment