Search This Blog

Saturday 16 December 2017

ವಿಶಾಖದತ್ತನ "ನವನಂದರು ಮತ್ತು ಚಂದ್ರಗುಪ್ತ ಮೌರ್ಯ"

ಕುಸುಮಪುರ ಅನ್ನುವುದನ್ನು ಪಾಟಲೀಪುತ್ರ ಎಂದು ಕರೆಯುತ್ತಿದ್ದರು. ಚಂದ್ರವಂಶದ ಸರ್ವಾರ್ಥಸಿದ್ಧಿ ಎನ್ನುವವನಿಗೆ ಇಬ್ಬರು ಪತ್ನಿಯರು, ಸುನಂದಾ ಎನ್ನುವವಳು ಮೊದಲ ಹೆಂಡತಿ. ಇನ್ನೊಬ್ಬಳು ಕ್ಷತ್ರಿಯ ಕುಲಕ್ಕಿಂತ ಕೆಳಗಿನ ಜಾತಿಯಲ್ಲಿ ಜನಿಸಿದ ಮುರಾ ಎನ್ನುವವಳು. ಸರ್ವಾರ್ಥಸಿದ್ಧಿಯ ರಾಜ್ಯಕ್ಕೆ ಪ್ರಧಾನಿಯಾಗಿದ್ದವನು ಅಮಾತ್ಯ ರಾಕ್ಷಸ ಎನ್ನುವವನು. ಇವರನ್ನೆಲ್ಲಾ ಒಳಗೊಂಡ ರಾಜ್ಯವನ್ನು ಅತ್ಯಂತ ಸುಭಿಕ್ಷದಿಂದ ಆಡಳಿತ ನಡೆಸಿಕೊಂಡು ಹೋಗುತ್ತಿದ್ದನು. ಒಂದು ದಿನ ರಾಜನ ಭೇಟಿಗಾಗಿ ಮುನಿಯೊಬ್ಬ ಬರುತ್ತಾನೆ. ಅವನನ್ನು ಸತ್ಕರಿಸಿ, ಅದರಿಂದ ಸಂತೋಷಗೊಂಡ ಮುನಿಯು ಮಂತ್ರಜಲವನ್ನು ಸರ್ವಾರ್ಥಸಿದ್ಧಿಗೆ ಕೊಡುತ್ತಾನೆ. ಆ ಜಲವನ್ನು ತನ್ನ ಮಡದಿಯರ ತಲೆಯಮೇಲೆ ಪ್ರೋಕ್ಷಿಸಿದಾಗ ಸುನಂದೆಯ ತಲೆಯಮೇಲೆ 9 ಬಿಂದುಗಳಷ್ಟು ಬಿದ್ದರೆ ಮುರಾ ಅನ್ನುವವಳ ತಲೆಯ ಮೇಲೆ ಒಂದೇ ಹನಿ ಬೀಳುತ್ತದೆ. ಇದರ ಫಲರೂಪವಾಗು ಸುನಂದಾ ಅನ್ನುವವಳಿಗೆ ಒಂಭತ್ತು ಜನ ಮಕ್ಕಳ ಜನನವಾಯಿತು. ಇವರನ್ನೇ ಮುಂದೆ "ನವನಂದರು" ಎಂದು ಕರೆಯಲಾಯಿತು. ಮುರಾ ಎನ್ನುವವಳಲ್ಲಿ ಒಬ್ಬ ಮಗ ಜನಿಸಿದ ಅವನನ್ನು ಮಾರ್ಯ ಎನ್ನಲಾಯಿತು. ಮುಂದೆ ಸರ್ವಾರ್ಥಸಿದ್ಧಿಯು ತನ್ನ ಹಿರಿಯ ಮಡದಿಯ ಮೊದಲ ಮಗ ನಂದನನ್ನು ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿದನು. ಸೇನಾಧಿಪತ್ಯವನ್ನು ಮೌರ್ಯನಿಗೆ ವಹಿಸಿದನು. ಮುಂದೆ ಮೌರ್ಯನಿಗೆ ನೂರು ಮಂದಿ ಮಕ್ಕಳು ಜನಿಸಿದರು. ಈ ನೂರು ಮಂದಿಯಲ್ಲಿ ಕೊನೆಯವನೇ ಚಂದ್ರಗುಪ್ತನೆನ್ನುವವನು. ಈಗ ನವನಂದರಿಗೆ ಸಹಿಸಲು ಅಸಾಧ್ಯವಾಯ್ತು. ಅವರು ಕಪಟದಿಂದ ಈ ನೂರು ಮಂದಿಯನ್ನು ಕಾರಾಗೃಹದಲ್ಲಿರಿಸಿ ಅವರಿಗೆ ಅನ್ನಾಹಾರ ನೀಡದೆ ಸಾಯುವಂತೆ ಮಾಡಿದರು, ಆದರೆ ಕೊನೆಯವನಾದ ಚಂದ್ರಗುಪ್ತ ಮಾತ್ರ ಬದುಕುಳಿದ. ಕೊನೆಗೆ ಚಂದ್ರಗುಪ್ತನಿಗೆ ಅನ್ನಸತ್ರ(ಭೋಜನದ ವ್ಯವಸ್ಥಾಪಕ)ದ ಅಧಿಕಾರ ಕೊಟ್ಟರು. ಚಂದ್ರಗುಪ್ತನಿಗೆ ನವನಂದರ ಕುಟಿಲತೆ ಸದಾಜಾಗ್ರತವಾಗಿತ್ತು. ಇವನು ಅನ್ನ ಸತ್ರದ ಎದುರಿಗೆ ಇರುವಾಗ ಒಬ್ಬ ಬ್ರಾಹ್ಮಣ ಅನ್ನ ಸತ್ರದ ಕಡೆಗೆ ಬರುವುದನ್ನು ಕಾಣುತ್ತಾನೆ. ಆತನಿಗೆ ಬರುವಾಗ ಒಂದು ಹುಲ್ಲಿನ ಕಡ್ದಿಯೊಂದು ಈತ ಬರಲು ಅಡ್ಡಿಪಡಿಸುತ್ತದೆ. ಆಗ ಅದನ್ನು ಬುಡ ಸಹಿತ ಕಿತ್ತುಹಾಕಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿ ಈತನೇ ತನ್ನ ವೈರಿ ನಂದವಂಶದವರನ್ನು ನಾಶಪಡಿಸಲು ಸಮರ್ಥನೆಂದು ಭಾವಿಸಿ ಅವನಿಗೆ ವಂದಿಸಿ ಅವನನ್ನು ಗೌರವದಿಂದ ಆದರಿಸಿ ತನ್ನ ವೃತ್ತಾಂತವನ್ನೆಲ್ಲಾ ಹೇಳುತ್ತಾನೆ. ಬ್ರಾಹ್ಮಣ ಅನ್ನಸತ್ರದ ಒಳಗೆ ಹೋಗುತ್ತಾನೆ ಅಲ್ಲಿ ಆಸನವನ್ನು ಸ್ವೀಕರಿಸುತ್ತಾನೆ. ಅದೇ ಸಮಯದಲ್ಲಿ ಮೃಗಬೇಟೆಗೆ ಹೋಗಿದ್ದ ರಾಜ ಬರುತ್ತಾನೆ. ರಾಜನ ಪ್ರವೇಶವಾದರೂ ಈ ಬ್ರಾಹ್ಮಣ ಲಕ್ಷ್ಯವನ್ನೇ ಕೊಡುವುದಿಲ್ಲ. ಈ ಬ್ರಾಹ್ಮಣ ಅಲಕ್ಷ್ಯ ಮಾಡಿದ್ದರಿಂದ ಕೋಪಗೊಂಡ ರಾಜ. ಈ ಬ್ರಾಹ್ಮಣನ ಶಿಖೆಯನ್ನು ಹಿಡಿದೆಳೆದು ಹೊರಹಾಕುತ್ತಾನೆ. ಆಗ ಕ್ರುದ್ಧನಾದ ಬ್ರಾಹ್ಮಣ ಅಲ್ಲಿಯೇ ಶಪಥಮಾಡಿ ನಿಮ್ಮನ್ನು ಕೊಲ್ಲದೇ ನನ್ನ ಮುಡಿಗಂಟನ್ನು ಕಟ್ಟುವುದಿಲ್ಲವೆಂದು ಹೇಳಿ ಹೊರಟು ಹೋಗುತ್ತಾನೆ. ಈತನೇ ಚಾಣಕ್ಯ!!
ಹೀಗೆ ಹೊರಟುಹೋಗುವಾಗ ಅವನ ಜೊತೆ ಚಂದ್ರಗುಪ್ತನು ತೆರಳುತ್ತಾನೆ. ಮುಂದೆ ಇಂದುಶರ್ಮನೆನ್ನುವವನನ್ನು ಬೌದ್ಧ ಭಿಕ್ಷುವಿನ ವೇಷ ಹಾಕಿಸಿ ಅಮಾತ್ಯರಾಕ್ಷಸನ ಬಳಿ ಕಳುಹಿಸಿ ಅವನನ್ನು ಮೋಸಗೊಳಿಸುತ್ತಾನೆ. ಮೂಮ್ದೆ ಚಂದ್ರಗುಪ್ತನ ಜೊತೆಗೆ ರಾಜಾ ಪರ್ವತೇಶ್ವರ ನನ್ನು ಸಂಧಿಸಿ ಅವನು ನಂದರ ರಾಜ್ಯದಮೇಲೆ ದಂಡೆತ್ತಿ ಬಂದರೆ ಅರ್ಧ ರಾಜ್ಯವನ್ನು ಕೊಡಿಸುವುದಾಗಿ ಪ್ರೇರೇಪಿಸುತ್ತಾನೆ. ಅಮಾತ್ಯರಾಕ್ಷಸನು ಯುದ್ಧ ನಡೆದರೆ ಜಯಾಪಜಯದ ಬಗ್ಗೆ ಚಿಂತಿತನಾಗಿ ಹೇಗಾದ್ರೂ ಮಾಡಿ ಚಂದ್ರಗುಪ್ತನನ್ನು ಕೊಲ್ಲಲು ಯೋಚಿಸುತ್ತಾನೆ. ಆದರೆ ಚಾಣಕ್ಯ ಯುದ್ಧ ನಡೆದರೆ ಪ್ರಾಣಹಾನಿ ಮತ್ತು ಆರ್ಥಿಕ ನಷ್ಟ ಸಂಭವಿಸುತ್ತದೆ ಎಂದು ಆಲೋಚಿಸಿ ತನ್ನ ಉಪಾಯದಿಂದ ನಂದರನ್ನು ಕೊಲ್ಲಿಸಿದ. ಆದರೆ ಅಮಾತ್ಯ ರಾಕ್ಷಸ ಹೇಗಾದರೂ ಮಾಡಿ ಚಂದ್ರಗುಪ್ತನಿಗೆ ರಾಜ್ಯ ಸಿಗಬಾರದೆಂದು ಆಲೋಚಿಸುತ್ತಿರುವಾಗಲೇ ಪಟ್ಟಣವನ್ನು ಮುತ್ತಿದ ಸೇನೆಯನ್ನು ನೋಡಿದ ಅಮಾತ್ಯ ರಾಕ್ಷಸ ಉಪಾಯದಿಂದ ಸರ್ವಾರ್ಥಸಿದ್ಧಿಯನ್ನು ಗುಹೆಯ ಮೂಲಕ ಬೇರೆಡೆ ಸ್ಥಳಾಂತರಿಸಿ ಚಂದ್ರಗುಪ್ತನಲ್ಲಿ ಮೈತ್ರಿಯನ್ನು ನಟಿಸಿ ಅವನಿಗೆ ರಾಜ್ಯ ಒಪ್ಪಿಸುತ್ತಾನೆ. ಹೀಗೇ ಚಂದ್ರಗುಪ್ತನಲ್ಲಿ ತನ್ನ ಮಿತ್ರತ್ವದ ನಾಟಕವಾಡುತ್ತಾ ವಿಷಕನ್ಯೆಯನ್ನು ಬಳಸಿ ಚಂದ್ರಗುಪ್ತನನ್ನು ಕೊಲ್ಲುವ ಸಂಚನ್ನು ವಿಷ್ಣುಗುಪ್ತ ಎನ್ನುವವನು ತಿಳಿದು ಆ ವಿಷಕನ್ಯೆಯನ್ನು ಪರ್ವತೇಶ್ವರ ರಾಜನಿಗೆ ಒಪ್ಪಿಸಿ ಪರ್ವತೇಶ್ವರನನ್ನು ಕೊಲ್ಲಿಸುತ್ತಾನೆ.(ಈ ಸಮಯದಲ್ಲಿ ನಂದ ರಾಜ್ಯ ಪರ್ವತೇಶ್ವರನ ವಶದಲ್ಲಿತ್ತು) ಇದರಿಂದ ಪರ್ವತೇಶ್ವರನ ಮಗ ಮಲಯಕೇತು ಅನ್ನುವವನಿಗೆ ಭಯ ಆಗುವಂತೆ ಮಾಡಿ ಅವನನ್ನು ಓಡಿಸಿದಾಗ ನಂದರಾಜ್ಯ ಅನಾಥವಾದಾಗ ಆ ರಾಜ್ಯವನ್ನು ಚಂದ್ರಗುಪ್ತನಿಗೆ ಸೇರುವಂತೆ ಚಾಣಕ್ಯ ಮಾಡಿದ. ಇವೆಲ್ಲವೂ ಆದಮೇಲೆ ಸರ್ವಾರ್ಥ ಸಿದ್ಧಿಯನ್ನು ಹುಡುಕಿಸಿ ಆತನನ್ನು ಕೊಲ್ಲಿಸುತ್ತಾನೆ ಅಲ್ಲಿಗೆ ನಂದವಂಶ ಸಂಪೂರ್ಣ ನಾಶವಾಗುತ್ತದೆ. ಈಗ ಅಮಾತ್ಯರಾಕ್ಷಸನಿಗೆ ದುಖವಾಗುತ್ತದೆ ಮತ್ತು ಸಿಟ್ಟುಗೊಳ್ಳುತ್ತಾನೆ ಹೇಗಾದರೂ ಮಾಡಿ ಚಂದ್ರಗುಪ್ತನನ್ನು ಕೊಲ್ಲಿಸಬೇಕು ಈ ರಾಜ್ಯ ವಿರೋಧಿಗಳ ಪಾಲಾದರೂ ಚಿಂತೆ ಇಲ್ಲ ಎಂದು ನೇರವಾಗಿ ಸರ್ವಾರ್ಥಸಿದ್ಧಿಯ ಮಗ ಮಲಯಕೇತುವಿನಲ್ಲಿಗೆ ಹೋಗಿ ನಿನ್ನ ತಂದೆಯ ಸಾವು ಚಂದ್ರಗುಪ್ತನಿಂದಾಗಿದೆ ಅದಕ್ಕಾಗಿ ಈಗ ಹೇಗಾದರೂ ಮಾಡಿ ಚಂದ್ರಗುಪ್ತನನ್ನು ಕೊಲ್ಲು ಎನ್ನುತ್ತಾನೆ. ಮಲಯಕೇತುವಿಗೂ ಸಿಟ್ಟುಗೊಂಡು ತನ್ನ ರಾಜ್ಯಕ್ಕೆ ಅಮಾತ್ಯರಾಕ್ಷಸನನ್ನೇ ಮುಖ್ಯಮಂತ್ರಿಯಾಗಿ ನೇಮಿಸಿಕೊಳ್ಳುತ್ತಾನೆ. ಅಮಾತ್ಯ ರಾಕ್ಷಸ ಈಗ ಮಲಯಕೇತುವನ್ನು ದರ್ವಿಯಾಗಿಟ್ಟುಕೊಂಡು ಯಜ್ಞವೊಂದನ್ನು ಮಾಡಿ ಯಜ್ಞ ಪಶುವನ್ನಾಗಿ ಚಂದ್ರಗುಪ್ತನನ್ನು ವಧಿಸಿ ನಂದವಂಶದ ಪಿತೃಗಳಿಗೆ ಸದ್ಗತಿಯನ್ನು ಕೊಡಿಸುವ ಹುನ್ನಾರದಲ್ಲಿರುತ್ತಾನೆ. ಇದಕ್ಕಾಗಿ ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ. ಇದು ಪೂರ್ವ ಭಾಗದ ಕಥೆಯ ಹಂದರ. ಇದು ಕೇವಲ ನಾಟಕದ ಪೂರ್ವ ಪೀಟಿಕೆ ಅನ್ನಬಹುದು.
ನಾಟಕ ಮತ್ತು ನಾಟಕಕಾರನ ಕುರಿತು :
ಅತ್ರ ನಾಟಕೇ ವೀರೋರಸಃ ಅತಿಗಹನ ಕೌಟಿಲ್ಯ ನೀತಿ ರೂಪೋದ್ಭುತ ರಸಃ ಪ್ರಬಲಮಂಗಂ, ಅನ್ಯೇ ಶೃಂಗಾರಕರುಣಾದಯೋ ಯಥಾಯಥಂ ದೃಷ್ಟವ್ಯಾಃ
ಈ ನಾಟಕದಲ್ಲಿ ವೀರರಸವು ಪ್ರಧಾನವಾಗಿ ಕೌಟಿಲ್ಯನ ನೀತಿ ರೂಪದೆಸೆಯಿಂದ ಅದ್ಭುತ ರಸವು ತೋರಿ ವಿಚಾರಕ್ಕೆ ತಕ್ಕಂತೆ ಅಲ್ಲಲ್ಲಿ ಕರುಣಾ ಮತ್ತು ಶೃಂಗಾರರಸವು ಕಾಣಿಸಿಕೊಳ್ಳುತ್ತವೆ.
ಮುದ್ರಾರಾಕ್ಷಸ ಇದು ವಿಶಾಖದತ್ತನೆನ್ನುವ ಸಂಸ್ಕೃತ ನಾಟಕಕಾರನ ನಾಟಕ. ಕಾಲವನ್ನು ಇನ್ನೂ ಸರಿಯಾಗಿ ನಿರ್ಧರಿಸಲಾಗಿಲ್ಲ. ಈತನ ಮುದ್ರಾ ರಾಕ್ಷಸದಲ್ಲಿ ಮಲಯಕೇತು ಎನ್ನುವ ಒಂದು ಪಾತ್ರವನ್ನು ಮ್ಲೇಚ್ಚನೆಂದು ಕರೆದಿರುವುದುಮತ್ತು ಈತನ ತಂದೆ ಪರ್ವತೇಶ್ವರನ ಹೆಸರೂ ಸಹ ಮೇಚ್ಚ ಹೆಸರುಗಳಿಂದ ಗುರುತಿಸಿಕೊಂಡಿಲ್ಲವಾದ್ದರಿಂದ, ಮತ್ತು ಈ ನಾಟಕದ ಎರಡನೇ ಅಂಕದಲ್ಲಿ ಯವನ, ಕಿರಾತ, ಕಾಂಭೋಜ, ಪಾರಸೀಕ, ಬಾಹ್ಲೀಕಾದಿ ಪದಗಳು ಮತ್ತು ಐದನೇ ಅಂಕದ ಖಾಸ, ಮಗಧ, ಗಾಂಧಾರ, ಚೀಣ, ಹೂಣ, ಕಾಲೂತ, ಮ್ಲೇಚ್ಚ ಈ ಪದಗಳ ಅರ್ತಹವನ್ನು ಗಮನಿಸಬೇಕಾಗುತ್ತದೆ. ಪ್ರಾಯಶಃ ಇಲ್ಲಿ ಅವರೆಲ್ಲರೂ ತಮ್ಮ ತಮ್ಮ ಗುಣ ಪರಂಪರೆಯಿಂದ ಹಾಗೆ ಹೇಳಲ್ಪಟ್ಟಿರಬಹುದು. ಆದರೂ ಇಲ್ಲಿ ಬರುವ ಕೆಲವರು ಪ್ರಾದೇಶಿಕವಾಗಿ ಅನ್ಯ ದೇಶಿಕರೂ ಇರಬಹುದು.
ಮ್ಲೇಚ್ಛ ಶಬ್ದಕ್ಕೆ ಅಮರಕೋಶದಲ್ಲಿ "ಭೇದಾಃ ಕಿರಾತ ಶಬರ ಪುಳಿಂದಾ ಮ್ಲೇಚ್ಛ ಜಾತಯಃ" ಹೇಳಲಾಗಿದೆ.
ಗೋಮಾಂಸ ಭಕ್ಷಕೋ ಯಸ್ತು ಲೋಕ ಬಾಹ್ಯಂಚ ಭಾಷತೇ |
ಸರ್ವಾಚಾರ ವಿಹೀನೋ ಸೌ ಮ್ಲೇಚ್ಛ ಇತ್ಯಭಿಧೀಯತೇ || ಗೀತ ಬಾಲಪ್ರಬೋಧಿಕಾ, ದ್ವಿತೀಯಕಾಂಡ, ಆಚಾರ ವಿಚಾರ ಹೀನರಾದ ಗೋಮಾಂಸ ಭಕ್ಷಕರಾಗಿರುವವರು ಮ್ಲೇಚ್ಛರು ಎನ್ನಿಸಿಕೊಳ್ಳುತ್ತಾರೆ.
ನಂದ ವಂಶದ ನಾಶದ ಜೊತೆಗೆ ಚಂದ್ರಗುಪ್ತ ಮೌರ್ಯನ ಏಳಿಗೆಗೆ ಅಮಾತ್ಯ ರಾಕ್ಷಸನ ಒಂದು ಉಂಗುರವೇ ಕಾರಣವಾಗುವುದಕ್ಕಾಗಿ ಈ ನಾಟಕವನ್ನು ಮುದ್ರಾ ರಾಕ್ಷಸ ಎನ್ನುವುದಾಗಿ ಹೆಸರಿಸಿದ್ದಾನೆ, ಚಾರಿತ್ರಿಕ ಕಥೆಯನ್ನು ಒಳಗೊಂಡ ಕಥೆಯಲ್ಲಿ ಮೂರು ನಾಟಜ್ಕಗಳು ಹೊರಹೊಮ್ಮುತ್ತವೆ, ಕಾಳಿದಾಸನ ಮಾಲವಿಕಾಗ್ನಿಮಿತ್ರ, ಶೂದ್ರಕನ ಮೃಚ್ಚಕಟಿಕ, ಮತ್ತು ವಿಶಾಖದತ್ತನ ಮುದ್ರಾರಾಕ್ಷಸ ದೊರಕುತ್ತದೆ. ಇವುಗಳಲ್ಲಿ ಮುದ್ರಾರಾಕ್ಷಸ ಮತ್ತು ಮೃಚ್ಛಕಟಿಕವು ನಾಟಕಕ್ಕೆ ಬೇಕಾಗುವ ವೇಷ ಭಾಷಾಲಂಕಾರಗಳಿರದ ಇದ್ದದ್ದನ್ನು ಇದ್ದಹಾಗೆ ಬರೆಯಲ್ಪಟ್ಟದ್ದು ಎಂದು ಪರಿಗಣಿಸಲಾಗಿದೆ.
ಚಾಣಕ್ಯನ ನಂದವಂಶೋದ್ಧರಣ ಕೃತಿಯಲ್ಲಿ ಬರುವ ಮತ್ತು ಚಂದ್ರಗುಪ್ತಾಭಿಷೇಕವೇ ವಿಷ್ಣುಪುರಾಣದಲ್ಲಿ ಹೀಗೆ ಬರುತ್ತದೆ.
ನವ ಚೈತಾನ್ನಂದಾನ್ ಕೌಟಿಲ್ಯೋ ಬ್ರಾಹ್ಮಣಸ್ಸಮುದ್ಧರಿಷ್ಯತಿ |
ಕೌಟಿಲ್ಯಂ ಏವ ಚಂದ್ರಗುಪ್ತಂ ರಾಜ್ಯೇಭಿಷೇಕ್ಷ್ಯತಿ || ಎಂದು ಹೇಳಿರುವುದು ಮುದ್ರಾ ರಾಕ್ಷಸ ಕಥೆಗೆ ಪೂರಕವಾಗುತ್ತ ಸಾಗುತ್ತದೆ.
ಬೃಹತ್ಕಥೆಯಲ್ಲಿ ಚಾಣಕ್ಯನನ್ನು ಕುರಿತಾಗಿ :
ಚಾಣಕ್ಯನಾಮ್ನಾ ತೇನಾಥ ಶಕಟಾರ ಗೃಹೇ ರಹಃ |
ಕೃತ್ಯಾಂ ವಿಧಾಯ ಸಪ್ತಾಹಾತ್ಸಪುತ್ರೋ ನಿಹತೋ ನೃಪಃ ||

ಚಂದ್ರಗುಪ್ತನ ಏಳಿಗೆಗೆ ಚಾಣಕ್ಯನೇ ಕಾರಣ ಎಂದು
ಯೋಗಾನಂದೇ ಯಶಃ ಶೇಷೇ ಪೂರ್ವ ನಂದ ಸುತಸ್ತತಃ |
ಚಂದ್ರಗುಪ್ತಃ ಕೃತೋ ರಾಜ್ಯೇ ಚಾಣಕ್ಯೇನ ಮಹೌಜಸಾ || ಎಂದೂ ಉಲ್ಲೇಖಿಸಲಾಗಿದೆ.
ಮುದ್ರಾರಾಕ್ಷಸದಲ್ಲಿ ಸ್ತ್ರೀ ಪಾತ್ರ ಬರುವುದು ನಾಟಕದ ಕೊನೆಯ ಅಂಕದಲ್ಲಿ ಚಂದನದಾಸನ ಹೆಂಡತಿ ಮತ್ತು ಅವಳ ಮಗನ ವಿಚಾರಬಿಟ್ಟರೆ ಮತ್ತೆಲ್ಲೂ ಇಲ್ಲ. ವಿಷಕನ್ಯೆಯ ಪ್ರಸ್ತಾವವಾಗುವುದು ಸಹ ಅತ್ಯಂತ ಮನೋಜ್ಞ.

 

No comments:

Post a Comment